ಪದ್ಯ ೩೩: ವ್ಯಾಸರು ಧೃತರಾಷ್ಟ್ರನಿಗೆ ಯಾವ ಸಲಹೆಯನ್ನು ನೀಡಿದರು?

ಲೇಸನಾಡಿದೆ ಮಗನೆ ಧರ್ಮದ
ಮೀಸಲಲ್ಲಾ ಮತಿ ಬಳಿ
ಕೈಸಲೇಯೆನುತವರು ಬಂದರು ಭೂಪತಿಯ ಹೊರೆಗೆ
ಆ ಸುಯೋಧನ ನಿನ್ನ ಮಗನ
ಲ್ಲೀ ಸಮಂಜಸ ಧರ್ಮಜನ ಹಿಡಿ
ದೀಸುವುದು ಭವಜಲನಿಧಿಯನೆಂದಮಳಮುನಿ ನುಡಿದ (ಗದಾ ಪರ್ವ, ೧೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ವ್ಯಾಸರು ಮಾತನಾಡುತ್ತಾ, ಮಗೂ, ಧರ್ಮಜ, ನಿನ್ನ ಮತಿಯು ಧರ್ಮಕ್ಕೆ ಮೀಸಲಾದುದಲ್ಲವೇ! ಅದಕ್ಕೆ ಇಂತಹ ಒಳ್ಳೆಯ ಮಾತನ್ನಾಡಿದೆ ಎಂದನು. ಅವರು ಧೃತರಾಷ್ಟ್ರನ ಬಳಿಗೆ ಬಂದರು. ವ್ಯಾಸರು, ಧೃತರಾಷ್ಟ್ರ, ದುರ್ಯೋಧನನು ನಿನ್ನ ಮಗನಲ್ಲವೆಂದು ಭಾವಿಸು, ಧರ್ಮಜನನ್ನು ಸ್ವೀಕರಿಸಿ ಸಂಸಾರ ಸಮುದ್ರವನ್ನು ಈಜು ಎಂದು ಉಪದೇಶಿಸಿದನು.

ಅರ್ಥ:
ಲೇಸು: ಒಳಿತು; ಮಗ: ಪುತ್ರ; ಧರ್ಮ: ಧಾರಣೆ ಮಾಡಿದುದು; ಮೀಸಲು: ಮುಡಿಪು, ಪ್ರತ್ಯೇಕ; ಮತಿ: ಬುದ್ಧಿ; ಬಳಿಕ: ನಂತರ; ಐಸಲೇ: ಅಲ್ಲವೇ; ಬಂದು: ಆಗಮಿಸು; ಭೂಪತಿ: ರಾಜ; ಹೊರೆ: ಆಶ್ರಯ, ಹತ್ತಿರ; ಸಮಂಜಸ: ಯೋಗ್ಯವಾದುದು; ಹಿಡಿ: ಧರಿಸು; ಈಸು: ಬಾಳು; ಪೂರೈಸು; ಭವ: ಸಂಸಾರ; ಜಲನಿಧಿ: ಸಾಗರ; ಅಮಳ: ನಿರ್ಮಲ, ಪರಿಶುದ್ಧ; ಮುನಿ: ಋಷಿ; ನುಡಿ: ಮಾತಾಡು;

ಪದವಿಂಗಡಣೆ:
ಲೇಸನಾಡಿದೆ +ಮಗನೆ +ಧರ್ಮದ
ಮೀಸಲಲ್ಲಾ +ಮತಿ +ಬಳಿಕ್
ಐಸಲೇ+ ಎನುರ್+ಅವರು +ಬಂದರು +ಭೂಪತಿಯ +ಹೊರೆಗೆ
ಆ +ಸುಯೋಧನ +ನಿನ್ನ +ಮಗನ
ಲ್ಲೀ+ ಸಮಂಜಸ +ಧರ್ಮಜನ +ಹಿಡಿದ್
ಈಸುವುದು +ಭವಜಲನಿಧಿಯನ್+ಎಂದ್+ಅಮಳ+ಮುನಿ+ ನುಡಿದ

ಅಚ್ಚರಿ:
(೧) ವ್ಯಾಸರ ಸಲಹೆ – ಧರ್ಮಜನ ಹಿಡಿದೀಸುವುದು ಭವಜಲನಿಧಿಯನೆಂದಮಳಮುನಿ ನುಡಿದ
(೨) ಧರ್ಮಜನನ್ನು ಹೊಗಳಿದ ಪರಿ – ಲೇಸನಾಡಿದೆ ಮಗನೆ ಧರ್ಮದ ಮೀಸಲಲ್ಲಾ ಮತಿ

ಪದ್ಯ ೭೦: ದ್ರೋಣನು ಯಾವುದನ್ನು ಅರಿತನು?

ತನ್ನೊಳಿತರವನಿತರದೊಳು ನೆರೆ
ತನ್ನನೀಕ್ಷಿಸಿ ತಾನು ತನ್ನಿಂ
ದನ್ಯವೆರಡರೊಳೈಕ್ಯವೆಂಬುಪಚರಿತ ಭಾವವನು
ತನ್ನೊಳಗೆ ಹುಸಿಯೆಂದು ನಿತ್ಯನ
ನನ್ಯನಮಳಜ್ಞಾನರೂಪವೆ
ತನ್ನ ನಿಜವೆಂದರಿದು ತಾನಾಗಿರ್ದನಾ ದ್ರೋಣ (ದ್ರೋಣ ಪರ್ವ, ೧೮ ಸಂಧಿ, ೭೦ ಪದ್ಯ)

ತಾತ್ಪರ್ಯ:
ತನ್ನಲ್ಲಿ ಉಳಿದೆಲ್ಲವನ್ನೂ, ಉಳಿದೆಲ್ಲಕ್ಕೂ ಆತ್ಮನಾದ ತನ್ನ ಜೀವಾತ್ಮವನ್ನು ನೋಡಿ ತಾನು, ತನ್ನಿಂದ ಬೇರಾದುದೊಂದಾದ ಪರಮಾತ್ಮ, ಇವರೆಡಕ್ಕೂ (ಜೀವಾತ್ಮ, ಪರಮಾತ್ಮ) ಐಕ್ಯವೆಂಬ ಉಪಚಾರದ ಭಾವವನ್ನು ಅಲ್ಲಗಳೆದನು. ನಿತ್ಯನೂ ತನ್ನನ್ನು ಬಿಟ್ಟು ಅನ್ಯವೆಂಬುದಿಲ್ಲ, ಜ್ಞಾನವೇ ತಾನು ಎಂದು ಅರಿತು ಅನುಭವಿಸಿ ತಾನೇ ಆಗಿದ್ದನು.

ಅರ್ಥ:
ಇತರ: ಬೇರೆಯವ; ನೆರೆ: ಪಕ್ಕ, ಪಾರ್ಶ್ವ, ಸೇರು; ಈಕ್ಷಿಸು: ನೋಡು; ಅನ್ಯ: ಬೇರೆಯವ; ಐಕ್ಯ: ಸೇರು; ಉಪಚರಿತ: ಉಪಚಾರ ಮಾಡಲ್ಪಟ್ಟ; ಭಾವ: ಭಾವನೆ; ಹುಸಿ: ಸುಳ್ಳು; ನಿತ್ಯ: ಯಾವಾಗಲು; ಅಮಳ: ನಿರ್ಮಲ; ಜ್ಞಾನ: ಅರಿವು; ರೂಪ: ಆಕಾರ; ನಿಜ: ದಿಟ; ಅರಿ: ತಿಳಿ;

ಪದವಿಂಗಡಣೆ:
ತನ್ನೊಳ್+ಇತರವನ್+ಇತರದೊಳು +ನೆರೆ
ತನ್ನನ್+ಈಕ್ಷಿಸಿ +ತಾನು +ತನ್ನಿಂದ್
ಅನ್ಯವ್+ಎರಡರೊಳ್+ಐಕ್ಯವೆಂಬ್+ಉಪಚರಿತ +ಭಾವವನು
ತನ್ನೊಳಗೆ +ಹುಸಿಯೆಂದು +ನಿತ್ಯನನ್
ಅನ್ಯನ್+ಅಮಳ+ಜ್ಞಾನ+ರೂಪವೆ
ತನ್ನ +ನಿಜವೆಂದ್+ಅರಿದು +ತಾನಾಗಿರ್ದನಾ +ದ್ರೋಣ

ಅಚ್ಚರಿ:
(೧) ತನ್ನ, ತನ್ನೊಳು, ತನ್ನಿಂದ, ತಾನು, ತಾನಾಗಿರ್ದ – ಪದಗಳ ಬಳಕೆ

ಪದ್ಯ ೧೯: ಶಿವನು ಯಾರ ಮಧ್ಯದಲ್ಲಿ ನೆಲಸಿದ್ದ?

ಇದ್ದುದಗಣಿತ ರುದ್ರ ಕೋಟಿಗ
ಳಿದ್ದುದನುಪಮ ವಿಷ್ಣು ಕೋಟಗ
ಳಿದ್ದುದಂಬುಜಭವ ಸುರೇಂದ್ರಾದಿಗಳು ಶತಕೋಟಿ
ಇದ್ದುದಮಳಾಮ್ನಾಯ ಕೋಟಿಗ
ಳಿದ್ದುದಗಣಿತ ಮಂತ್ರಮಧ್ಯದೊ
ಳಿದ್ದ ನಿರ್ಮಳ ಖಂಡಪರಶುವ ಕಂಡನಬುಜಭವ (ಕರ್ಣ ಪರ್ವ, ೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಲೆಕ್ಕವಿಲ್ಲದಷ್ಟು ಕೋಟಿ ರುದ್ರರು, ವಿಷ್ಣುಗಳು ಅಲ್ಲಿದ್ದರು. ನೂರು ಕೋಟಿ ಬ್ರಹ್ಮ ಇಂದ್ರರು ಇದ್ದರು. ಕೋಟಿ ವೇದಗಳೂ ಲೆಕ್ಕವಿಲ್ಲದಷ್ಟು ಮಂತ್ರಗಳೂ ಇದ್ದವು. ಮಧ್ಯದಲ್ಲಿ ಶಿವನಿದ್ದನು.

ಅರ್ಥ:
ಅಗಣಿತ: ಎಣಿಕೆಗೆ ಮೀರಿದವನು; ರುದ್ರ: ಭಯಂಕರವಾದ, ಭೀಕರವಾದ; ಕೋಟಿ: ಲೆಕ್ಕವಿಲ್ಲದಷ್ಟು; ಅನುಪಮ: ಉತ್ಕೃಷ್ಟವಾದುದು; ಅಂಬುಜ: ಕಮಲ; ಅಂಬುಜಭವ: ಬ್ರಹ್ಮ; ಸುರೆಂದ್ರ: ಇಂದ್ರ; ಸುರ: ದೇವತೆ; ಆದಿ: ಮುಂತಾದ; ಶತ: ನೂರು; ಅಮಳ: ನಿರ್ಮಲ; ಆಮ್ನಾಯ: ವೇದ, ಶೃತಿ; ಮಂತ್ರ: ದೇವತಾಸ್ತುತಿ; ಖಂಡಪರಶು: ಶಿವ; ಅಬುಜಭವ: ಬ್ರಹ್ಮ;

ಪದವಿಂಗಡಣೆ:
ಇದ್ದುದ್+ಅಗಣಿತ +ರುದ್ರ +ಕೋಟಿಗಳ್
ಇದ್ದುದ್+ಅನುಪಮ +ವಿಷ್ಣು +ಕೋಟಗಳ್
ಇದ್ದುದ್+ಅಂಬುಜಭವ+ ಸುರೇಂದ್ರಾದಿಗಳು +ಶತಕೋಟಿ
ಇದ್ದುದ್+ಅಮಳ+ಆಮ್ನಾಯ +ಕೋಟಿಗಳ್
ಇದ್ದುದ್+ಅಗಣಿತ+ ಮಂತ್ರ+ಮಧ್ಯದೊಳ್
ಇದ್ದ +ನಿರ್ಮಳ +ಖಂಡಪರಶುವ+ ಕಂಡನ್+ಅಬುಜಭವ

ಅಚ್ಚರಿ:
(೧) ಇದ್ದು – ಪ್ರತಿ ಸಾಲಿನ ಮೊದಲ ಪದ
(೨) ಅ ಕಾರದ ಪದಗಳು – ಅಗಣಿತ, ಅನುಪಮ, ಅಮಳ, ಅಗಣಿತ, ಅಂಬುಜಭವ
(೩) ಕೋಟಿ – ೪ ಸಾಲಿನ ಕೊನೆಯ ಪದ

ಪದ್ಯ ೪೨: ಕೌರವನ ಆಸ್ಥಾನ ಹೇಗೆ ಕಾಣಿಸಿತು?

ಅತಿಮುದದಿ ತನು ಸೊಕ್ಕಿದೈರಾ
ವತವ ಕಿವಿವಿಡಿದೆಳೆವ ದಿಗ್ಗಜ
ತತಿಯನಮಳಾಂಕುಶದಲಂಜಿಸಿ ಕೆಲಬಲಕೆ ಬಿಡುವ
ನುತ ಗಜಾರೋಹಕರು ಕುರುಭೂ
ಪತಿಯ ಹೊರೆಯಲಿ ಮೆರೆದರಮರಾ
ವತಿಯ ರಾಯನ ಸಭೆಯೊಲೆಸೆದುದು ಕೌರವಾಸ್ಥಾನ (ಉದ್ಯೋಗ ಪರ್ವ, ೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ಸೊಕ್ಕಿದ ದೇಹದಿಂದ ಕೂಡಿದ, ಅತಿ ಸಂತಸದಿಂದ ಲೀಲಾಜಾಲವಾಗಿ ಆನೆಗಳ ಕಿವಿಹಿಡಿದು ಎಳೆದು ಅಂಕುಶದಿಂದ ಅಂಜಿಸಿ ಅಕ್ಕಪಕ್ಕಕ್ಕೆ ಬಿಡುವ ಪಳಿಗಿದ ಶ್ರೇಷ್ಠ ಮಾವುತರು ದುರ್ಯೋಧನನ ಆಜ್ಞೆಯಲ್ಲಿ ಮೆರೆಯಲು ನೋಡುವವರಿಗೆ ಇಂದ್ರನ ಸಭೆಯೇ ಧರೆಗೆ ಕೌರವನ ಆಸ್ಥಾನವಾಗಿದಿಯೇ ಎಂದು ತೋರುತ್ತಿತ್ತು.

ಅರ್ಥ:
ಅತಿ: ತುಂಬ; ಮುದ: ಸಂತೋಷ; ತನು: ದೇಹ; ಸೊಕ್ಕು: ಅಮಲು, ಮದ; ಐರಾವತ: ಇಂದ್ರನ ಆನೆ; ಕಿವಿ: ಶ್ರವಣಸಾಧನವಾದ ಅವಯವ; ಎಳೆ: ಜಗ್ಗು; ದಿಗ್ಗಜ: ಅತಿಶ್ರೇಷ್ಠ;
ಭೂಭಾಗವನ್ನು ಹೊತ್ತಿರುವ ಎಂಟು ದಿಕ್ಕಿನ ಆನೆಗಳು; ತತಿ: ಗುಂಪು; ಅಮಳ: ನಿರ್ಮಲ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ಅಂಜಿಸು: ಹೆದರಿಸು; ಕೆಲಬಲ: ಅಕ್ಕಪಕ್ಕ; ಬಿಡು: ತೊರೆ, ತ್ಯಜಿಸು; ನುತ: ಶ್ರೇಷ್ಠವಾದ; ಗಜ: ಆನೆ, ಕರಿ; ಆರೋಹಕ: ಹತ್ತುವವ; ಗಜಾರೋಹಕ: ಮಾವುತ; ಭೂಪತಿ: ರಾಜ; ಹೊರೆ: ಭಾರ; ಮೆರೆ: ಪ್ರಕಾಶಿಸು; ಅಮರಾವತಿ: ಇಂದ್ರನ ನಗರ; ರಾಯ: ರಾಜ; ಸಭೆ: ದರ್ಬಾರು; ಎಸೆ: ಶೋಭಿಸು; ಆಸ್ಥಾನ: ದರಬಾರು;

ಪದವಿಂಗಡಣೆ:
ಅತಿಮುದದಿ +ತನು +ಸೊಕ್ಕಿದ್+ಐರಾ
ವತವ +ಕಿವಿವಿಡಿದ್+ಎಳೆವ +ದಿಗ್ಗಜ
ತತಿಯನ್+ಅಮಳ+ಅಂಕುಶದಲ್+ಅಂಜಿಸಿ +ಕೆಲಬಲಕೆ +ಬಿಡುವ
ನುತ +ಗಜ+ಆರೋಹಕರು+ ಕುರುಭೂ
ಪತಿಯ +ಹೊರೆಯಲಿ +ಮೆರೆದರ್+ಅಮರಾ
ವತಿಯ +ರಾಯನ +ಸಭೆಯೊಲ್+ಎಸೆದುದು +ಕೌರವಾಸ್ಥಾನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕುರುಭೂಪತಿಯ ಹೊರೆಯಲಿ ಮೆರೆದರಮರಾವತಿಯ ರಾಯನ ಸಭೆಯೊಲೆಸೆದುದು ಕೌರವಾಸ್ಥಾನ
(೨) ‘ಅ’ ಕಾರದ ಪದ ಬಳಕೆ – ಅಮಳ, ಅಂಕುಶ, ಅಂಜಿಸಿ, ಅಮರಾವತಿ, ಅತಿ