ಪದ್ಯ ೪೯:ಪ್ರಜಂಘನಿಗೆ ಇಂದ್ರನು ಏನು ಹೇಳಿದನು?

ಬಂದು ಖಚರನು ದಿವಿಜರಾಯಂ
ಗಂದು ಮೈಯಿಕ್ಕಿದನು ಭಯದಲಿ
ನಿಂದು ಕರಗಳ ಮುಗಿದು ಬೆಸನೇನೆನಲು ನಸುನಗುತ
ಅಂಧಕಾಸುರ ಮಡಿಯೆ ದಿವಿಜರಿ
ಗಂದಿನಿಂ ಭಯವಿಲ್ಲ ಕುಂತೀ
ನಂದನನ ಭಯವಾಯ್ತು ಕರೆಸಿದೆನೆಂದನಮರೇಂದ್ರ (ಆದಿ ಪರ್ವ, ೨೧ ಸಂಧಿ, ೪೯ ಪದ್ಯ)

ತಾತ್ಪರ್ಯ:
ಪ್ರಜಂಘನು ಇಂದ್ರನ ಮುಂದೆ ಬಂದು ನಮಸ್ಕರಿಸಿ ಭಯದಿಂದ ನಿಂತು ಇಂದ್ರನಿಗೆ ಏನೆಂದು ಕೇಳಲು, ಇಂದ್ರನ್ನು ಚುಚ್ಚುವ ರೀತಿಯಲ್ಲಿ ನಮಗೆ ಹಿಂದೆ ಅಂಧಕಾಸುರನು ಭಯವನ್ನು ಹುಟ್ಟಿಸಿದ್ದನು ಅವನ ಸಾವಿನ ನಂತರ ನಮಗಾವುದೇ ಭಯವಿರಲಿಲ್ಲ, ಈಗ ಅರ್ಜುನನ ದೆಸೆಯಿಂದ ನಮಗೆ ಮತ್ತೆ ಭಯವುಂಟಾಗಲು ನಿನ್ನನ್ನು ಕರೆಸಿದೆನು ಎಂದನು.

ಅರ್ಥ:
ಖಚರ: ಗಂಧರ್ವ; ದಿವಿಜರಾಯ: ಇಂದ್ರ; ದಿವಿಜ: ದೇವತೆ; ರಾಯ: ರಾಜ; ಮೈಯಿಕ್ಕು: ನಮಸ್ಕರಿಸು; ಭಯ: ಹೆದರು; ಕರ: ಕೈ; ಮುಗಿದು: ನಮಸ್ಕರಿಸು; ಬೆಸಸು: ಹೇಳು; ನಗುತ: ಸಂತೋಷ, ಹರ್ಷ; ಅಸುರ: ದಾನವ, ರಾಕ್ಷಸ; ಮಡಿ: ಸಾವು; ನಂದನ: ಮಗ; ಕರೆಸು: ಬರೆಮಾಡು;

ಪದವಿಂಗಡಣೆ:
ಬಂದು+ ಖಚರನು +ದಿವಿಜ+ರಾಯಂಗ್
ಅಂದು +ಮೈಯಿಕ್ಕಿದನು+ ಭಯದಲಿ
ನಿಂದು +ಕರಗಳ+ ಮುಗಿದು +ಬೆಸನೇನ್+ಎನಲು +ನಸುನಗುತ
ಅಂಧಕಾಸುರ +ಮಡಿಯೆ +ದಿವಿಜರಿಗ್
ಅಂದಿನಿಂ +ಭಯವಿಲ್ಲ+ ಕುಂತೀ
ನಂದನನ +ಭಯವಾಯ್ತು +ಕರೆಸಿದೆನ್+ಎಂದನ್+ಅಮರೇಂದ್ರ

ಅಚ್ಚರಿ:
(೧) ದಿವಿಜರಾಯ, ಅಮರೇಂದ್ರ – ಇಂದ್ರ, ೧, ೬ ಸಾಲಿನ ಕೊನೆಯ ಪದಗಳು
(೨) ಪ್ರಜಂಘನು ಇಂದ್ರನ ಮುಂದೆ ನಿಂತ ಪರಿ – ಮೈಯಿಕ್ಕಿದನು ಭಯದಲಿ ನಿಂದು ಕರಗಳ ಮುಗಿದು
(೩) ಭಯ – ೫,೬ ಸಾಲಿನ ೨ನೇ ಪದ