ಪದ್ಯ ೨೪: ಅಶ್ವತ್ಥಾಮನು ಧೃತರಾಷ್ಟ್ರನಿಗೆ ಏನು ಹೇಳಿದ?

ಪತಿಕರಿಸಿದನು ನಮ್ಮನಹಿತ
ಸ್ಥಿತಿಯನೆಲ್ಲವ ತಿಳಿದನಮರಾ
ವತಿಯ ಸತಿಯರ ಸೋಂಕಿನಲಿ ಸೇರಿದನು ನಿಮಿಷದಲಿ
ಕ್ಷಿತಿಪನಂತ್ಯದೊಳಲ್ಲಿ ಶಸ್ತ್ರ
ಚ್ಯುತಿಯಮಾಡಿ ವಿರಾಗದಲಿ ವನ
ಗತಿಕರಾವೈತಂದೆವೆಂದರು ಗುರುಸುತಾದಿಗಳು (ಗದಾ ಪರ್ವ, ೧೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನೇ ಮೊದಲಾದವರು, ನಾವು ಶತ್ರು ಸಂಹಾರ ಮಾಡಿದುದನ್ನು ಕೇಳಿ ಅರಸನು ನಮ್ಮನ್ನು ಮನ್ನಿಸಿ ಸ್ವರ್ಗಸ್ಥನಾದನು. ದೊರೆಯು ಮರಣ ಹೊಂದಲು, ನಾವು ಶಸ್ತ್ರ ತ್ಯಾಗ ಮಾಡಿ, ವೈರಾಗ್ಯವನ್ನು ತಳೆದು ಕಾಡಿನಲ್ಲಿ ಅಲೆಯುತ್ತಾ ಬಂದೆವು ಎಂದರು.

ಅರ್ಥ:
ಪತಿಕರಿಸು: ಅನುಗ್ರಹಿಸು; ಅಹಿತ: ವೈರಿ, ಶತ್ರು; ಸ್ಥಿತಿ:ಇರವು, ಅಸ್ತಿತ್ವ; ತಿಳಿ: ಅರಿ; ಅಮರಾವತಿ: ಸ್ವರ್ಗ; ಸತಿ: ಹೆಣ್ಣು; ಸೋಂಕು: ಮುಟ್ಟುವಿಕೆ, ಸ್ಪರ್ಶ; ಸೇರು: ಜೊತೆಗೂಡು; ನಿಮಿಷ: ಕ್ಷಣಮಾತ್ರ; ಕ್ಷಿತಿಪ: ರಾಜ; ಅಂತ್ಯ: ಕೊನೆ; ಶಸ್ತ್ರ: ಆಯುಧ; ಚ್ಯುತಿ: ಜಾರುವುದು; ವಿರಾಗ: ವಿರಕ್ತಿ, ವೈರಾಗ್ಯ; ವನ: ಕಾಡು; ಗತಿ: ಗಮನ, ಸಂಚಾರ; ಐತಂದೆ: ಬಂದು ಸೇರು; ಗುರುಸುತ: ಅಶ್ವತ್ಥಾಮ; ಸುತ: ಮಗ; ಆದಿ: ಮುಂತಾದ;

ಪದವಿಂಗಡಣೆ:
ಪತಿಕರಿಸಿದನು +ನಮ್ಮನ್+ಅಹಿತ
ಸ್ಥಿತಿಯನ್+ಎಲ್ಲವ +ತಿಳಿದನ್+ಅಮರಾ
ವತಿಯ +ಸತಿಯರ +ಸೋಂಕಿನಲಿ +ಸೇರಿದನು +ನಿಮಿಷದಲಿ
ಕ್ಷಿತಿಪನ್+ಅಂತ್ಯದೊಳ್+ಅಲ್ಲಿ+ ಶಸ್ತ್ರ
ಚ್ಯುತಿಯಮಾಡಿ +ವಿರಾಗದಲಿ +ವನ
ಗತಿಕರಾವ್+ಐತಂದೆವ್+ಎಂದರು +ಗುರುಸುತಾದಿಗಳು

ಅಚ್ಚರಿ:
(೧) ಅಪ್ಸರೆ ಎಂದು ಹೇಳುವ ಪರಿ – ಅಮರಾವತಿಯ ಸತಿ
(೨) ಮರಣ ಹೊಂದಿದನು ಎಂದು ಹೇಳುವ ಪರಿ – ಕ್ಷಿತಿಪನಂತ್ಯ

ಪದ್ಯ ೪: ಭೀಮನು ಸೈನಿಕರನ್ನು ಎಲ್ಲಿಗೆ ಕಳಿಸಿದನು?

ಅಳಿದುದೆರಡರ ಚೂಣಿ ದೊರೆಗಳ
ಬಲಕೆ ಹೇಳಿಕೆಯಾಯ್ತು ಘನ ಸಂ
ಕುಲ ಸುವಿಗ್ರಹ ಸಾಧನರು ಕೈಮಾಡಿ ಕಡಿವಡೆಯೆ
ದಲವುಳಿಸಿದನು ಭೀಮ ಕೌರವ
ದಳವ ತರುಬಿದನಡ್ಡಬಿದ್ದರಿ
ಬಲದ ಸುಭಟರಿಗಿತ್ತನಮರಾವತಿಯ ಸಂಪದವ (ಭೀಷ್ಮ ಪರ್ವ, ೬ ಸಂಧಿ, ೪ ಪದ್ಯ)

ತಾತ್ಪರ್ಯ:
ಎರಡು ಕಡೆಯ ಮುಂದಿನ ಸೈನ್ಯಗಳು ನಾಶವಾದವು. ದೊರೆಗಳ ಯುದ್ಧಕ್ಕೆ ಆರಂಭವಾಯಿತು. ಸಂಗ್ರಾಮ ಸಾಧಕರು, ಘೋರ ಯುದ್ಧದಲ್ಲಿ ಮಡಿದರು. ಭೀಮನು ಕೌರವ ಬಲವನ್ನು ತಡೆದು, ಎದುರು ಬಂದವರನ್ನೆಲ್ಲರನ್ನೂ ಅಮರಾವತಿಯ ಭೋಗವನ್ನನುಭವಿಸಿರೆಂದು ಕಳಸಿಕೊಟ್ಟನು.

ಅರ್ಥ:
ಅಳಿ: ನಾಶ; ಚೂಣಿ: ಮುಂದಿನ ಸಾಲು, ಮುಂಭಾಗ; ದೊರೆ: ರಾಜ; ಬಲ: ಸೈನ್ಯ; ಹೇಳು: ತಿಳಿಸು; ಘನ: ಶ್ರೇಷ್ಠ; ಸಂಕುಲ: ಗುಂಪು; ವಿಗ್ರಹ: ಯುದ್ಧ; ಸಾಧನ: ಗುರಿಮುಟ್ಟುವ ಪ್ರಯತ್ನ; ಕಡಿವಡೆ: ತುಂಡಾಗು; ದಳ: ಸೈನ್ಯ; ಉಳಿ: ಅವಿತುಕೊ, ಹೊರತಾಗು; ತರುಬು: ತಡೆ, ನಿಲ್ಲಿಸು; ಅರಿ: ವೈರಿ; ಬಲ: ಸೈನ್ಯ; ಸುಭಟ: ಪರಾಕ್ರಮಿ; ಅಮರಾವತಿ: ಸ್ವರ್ಗ; ಸಂಪದ: ಐಶ್ವರ್ಯ, ಸಂಪತ್ತು;

ಪದವಿಂಗಡಣೆ:
ಅಳಿದುದ್+ಎರಡರ +ಚೂಣಿ +ದೊರೆಗಳ
ಬಲಕೆ+ ಹೇಳಿಕೆಯಾಯ್ತು +ಘನ+ ಸಂ
ಕುಲ+ ಸುವಿಗ್ರಹ+ ಸಾಧನರು +ಕೈಮಾಡಿ +ಕಡಿವಡೆಯೆ
ದಳವುಳಿಸಿದನು +ಭೀಮ +ಕೌರವ
ದಳವ +ತರುಬಿದನ್+ಅಡ್ಡಬಿದ್ದ್+ಅರಿ
ಬಲದ +ಸುಭಟರಿಗ್+ಇತ್ತನ್+ಅಮರಾವತಿಯ +ಸಂಪದವ

ಅಚ್ಚರಿ:
(೧) ಸೈನಿಕರನ್ನು ಸಾಯಿಸಿದನು ಎಂದು ಹೇಳುವ ಪರಿ – ಭೀಮ ಕೌರವ ದಳವ ತರುಬಿದನಡ್ಡಬಿದ್ದರಿ
ಬಲದ ಸುಭಟರಿಗಿತ್ತನಮರಾವತಿಯ ಸಂಪದವ

ಪದ್ಯ ೨೧: ಅಪ್ಸರೆಯರ ಬೀದಿಯು ಯಾರಿಂದ ತುಂಬಿತು?

ಮುಡುಹುಗಳೊಳೊಡೆಹೊಯ್ವ ಕಾಲಲಿ
ಮಿಡಿಯ ಮೆಟ್ಟುವ ತಂಬುಲವ ತೆಗೆ
ದಿಡುವ ಕರೆಕರೆದೊರೆಯನುರ್ಚುವ ನಾಯ ಹೆಸರಿಡುವ
ತೊಡರುಗಟ್ಟುವ ಬೈವ ಭಟ್ಟರ
ಬಿಡುವ ಕಾದುವ ವೀರ ಭಟರಿಂ
ದಿಡಿದುದಮರಾವತಿಯ ಸೊಂಪಿನ ಸೂಳೆಗೇರಿಗಳು (ಭೀಷ್ಮ ಪರ್ವ, ೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭುಜಾಗ್ರವನ್ನು ಸಜ್ಜುಮಾದಿ ಶತ್ರುಗಳನ್ನು ಬಡಿಯುವ, ಕಾಲಿಂದ ಕೆಳಗೆ ಬಿದ್ದವರನ್ನು ಮೆಟ್ಟುವ ಮತ್ತೆ ಮತ್ತೆ ಆಯಾಸ ಪರಿಹಾರಕ್ಕಾಗಿ ತಾಂಬೂಲವನ್ನು ಹಾಕಿಕೊಳ್ಳುವ, ಶತ್ರುಗಳನ್ನು ಕರೆಕರೆದು ಒರೆಯಿಂದ ಕತ್ತಿಯನ್ನೆಳೆಯುವ, ಅವರಿಗೆ ತಮ್ಮ ನಾಯಿಯ ಹೆಸರಿಡುವ, ತೊಡರು ಕೊಡುವ, ಬೈಯುವ ವೀರಭಟರಿಂದ ಅಮರಾವತಿಯ ಅಪ್ಸರೆಯರ ಬೀದಿಗಳು ತುಂಬಿದವು.

ಅರ್ಥ:
ಮುಡುಹು: ಹೆಗಲು, ಭುಜಾಗ್ರ; ಒಡೆ: ಚೂರುಮಾದು; ಕಾಲು: ಪಾದ; ಮಿಡಿಯ: ತವಕಿಸು, ಹಾರು; ಮೆಟ್ಟು: ತುಳಿ; ತಂಬುಲ: ವೀಳೆಯ, ಅಡಿಕೆ; ತೆಗೆ: ಹೊರತರು; ಕರೆ: ಬರೆಮಾದು; ಉರ್ಚು: ಹೊರಕ್ಕೆ ತೆಗೆ; ನಾಯ: ನಾಯಿ, ಶ್ವಾನ; ಹೆಸರು: ನಾಮ; ತೊಡರು: ಸರಪಳಿ, ಸಂಕೋಲೆ; ಬೈವ: ಜರಿಯುವ; ಭಟ್ಟ: ಸೈನಿಕ; ಬಿಡು: ತೊರೆ; ಕಾದು: ಹೋರಾಡು; ವೀರ: ಶೂರ; ಭಟ: ಸೈನಿಕ; ಅಮರಾವತಿ: ಸ್ವರ್ಗ; ಸೊಂಪು: ಸೊಗಸು, ಚೆಲುವು; ಸೂಳೆ: ವೇಶ್ಯೆ; ಕೇರಿ: ಬೀದಿ;

ಪದವಿಂಗಡಣೆ:
ಮುಡುಹುಗಳೊಳ್+ಒಡೆಹೊಯ್ವ+ ಕಾಲಲಿ
ಮಿಡಿಯ +ಮೆಟ್ಟುವ +ತಂಬುಲವ +ತೆಗೆ
ದಿಡುವ +ಕರೆಕರೆದ್+ಒರೆಯನ್+ಉರ್ಚುವ +ನಾಯ +ಹೆಸರಿಡುವ
ತೊಡರು+ಕಟ್ಟುವ +ಬೈವ +ಭಟ್ಟರ
ಬಿಡುವ +ಕಾದುವ +ವೀರ +ಭಟರಿಂದ್
ಇಡಿದುದ್+ಅಮರಾವತಿಯ +ಸೊಂಪಿನ +ಸೂಳೆ+ಕೇರಿಗಳು

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೈವ ಭಟ್ಟರ ಬಿಡುವ

ಪದ್ಯ ೩೦: ಪಾಶುಪತದ ಮಹಿಮೆ ಎಂತಹುದು?

ಪಾಶುಪತಶರ ಭುವನದೂರ್ಧ್ವ
ಶ್ವಾಸವತಿ ಕೋವಿದವಲೇ ಚಿ
ತ್ತೈಸಿ ಬಲ್ಲಿರಿ ನಿಮ್ಮಡಿಗಳಾಮ್ನಾಯ ವೀಧಿಯಲಿ
ಆ ಶರವಲೇ ಸೇರಿತೆನಗೆ ಮ
ಹೇಶನಿಂದಲ್ಲಿಂದ ಬಳಿಕ ಸು
ರೇಶನತಿ ಮನ್ನಿಸಿದನಮರಾವತಿಯೊಳೊಲವಿನಲಿ (ಅರಣ್ಯ ಪರ್ವ, ೧೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಪಾಶುಪತಾಸ್ತ್ರವು ಲೋಕವನ್ನೇ ನಾಶ ಮಾಡಬಲ್ಲ ಶಕ್ತಿಯುಳ್ಳದ್ದೆಮ್ದು ನೀವು ಶಾಸ್ತ್ರಗಳಲ್ಲಿ ಕೇಳಿರುವಿರಿ, ಅದು ನನಗೆ ವಶವಾಯಿತು. ಅಲ್ಲಿಂದ ಅಮರಾವತಿಗೆ ಹೋದಾಗ ದೇವೇಂದ್ರನು ನನ್ನನ್ನು ಪ್ರೀತಿಯಿಮ್ದ ಮನ್ನಿಸಿದನು ಎಂದು ಅರ್ಜುನನು ಹೇಳಿದನು.

ಅರ್ಥ:
ಶರ: ಬಾಣ; ಭುವನ: ಭೂಮಿ; ಊರ್ಧ್ವ: ಮೇಲ್ಭಾಗ; ಊರ್ಧ್ವಶ್ವಾಸ: ಮೇಲುಸಿರು; ಅತಿ: ಬಹಳ; ಕೋವಿದ: ತಿಳಿದವ; ಚಿತ್ತೈಸು: ಗಮನವಿಟ್ಟು ಕೇಳು; ಬಲ್ಲಿರಿ: ತಿಳಿದಿರಿ; ಆಮ್ನಾಯ: ವೇದ, ವಂಶ; ವೀಧಿ: ಮಾರ್ಗ; ಸೇರು: ಕೂಡು; ಮಹೇಶ: ಶಿವ; ಬಳಿಕ: ನಂತರ; ಸುರೇಶ: ಇಂದ್ರ; ಮನ್ನಿಸು: ಗೌರವಿಸು; ಅಮರಾವತಿ: ಸ್ವರ್ಗ ಲೋಕ; ಒಲವು: ಪ್ರೀತಿ;

ಪದವಿಂಗಡಣೆ:
ಪಾಶುಪತ+ಶರ+ ಭುವನದ್+ಊರ್ಧ್ವ
ಶ್ವಾಸವತಿ +ಕೋವಿದವಲೇ +ಚಿ
ತ್ತೈಸಿ +ಬಲ್ಲಿರಿ +ನಿಮ್ಮಡಿಗಳ್+ಆಮ್ನಾಯ +ವೀಧಿಯಲಿ
ಆ +ಶರವಲೇ +ಸೇರಿತೆನಗೆ+ ಮ
ಹೇಶನಿಂದ್+ಅಲ್ಲಿಂದ +ಬಳಿಕ +ಸು
ರೇಶನ್+ಅತಿ +ಮನ್ನಿಸಿದನ್+ಅಮರಾವತಿಯೊಳ್+ಒಲವಿನಲಿ

ಅಚ್ಚರಿ:
(೧) ಪಾಶುಪತದ ಹಿರಿಮೆ – ಪಾಶುಪತಶರ ಭುವನದೂರ್ಧ್ವಶ್ವಾಸವತಿ ಕೋವಿದವಲೇ ಚಿ
ತ್ತೈಸಿ ಬಲ್ಲಿರಿ ನಿಮ್ಮಡಿಗಳಾಮ್ನಾಯ ವೀಧಿಯಲಿ

ಪದ್ಯ ೮೨: ಅರ್ಜುನನು ಅಮರಾವತಿಯನ್ನು ಹೇಗೆ ಪ್ರವೇಶಿಸಿದನು?

ಹೊಕ್ಕನಮರಾವತಿಯನರ್ಜುನ
ಎಕ್ಕತುಳದಲುಪಾರ್ಜಿಸಿದಪು
ಣ್ಯಕ್ಕೆ ಸರಿಯೇ ನಳನಹುಷ ಭರತಾದಿ ಭೂಮಿಪರು
ಉಕ್ಕಿದವು ಪರಿಮಳದ ತೇಜದ
ತೆಕ್ಕೆಗಳು ಲಾವಣ್ಯ ಲಹರಿಯ
ಸೊಕ್ಕುಗಳ ಸುರಸೂಳೆಗೇರಿಗಳೊಳಗೆ ನಡೆ ತಂದ (ಅರಣ್ಯ ಪರ್ವ, ೮ ಸಂಧಿ, ೮೨ ಪದ್ಯ)

ತಾತ್ಪರ್ಯ:
ಅರ್ಜುನನು ಅಮರಾವತಿಯನ್ನು ಪ್ರವೇಶಿಸಿದನು. ತನ್ನ ಪರಾಕ್ರಮದಿಮ್ದ ಅವನು ಗಳಿಸಿದ ಪುಣ್ಯಕ್ಕೆ ಸರಿ ಸಮಾನವಾದುದು ಇಲ್ಲ. ನಳ ನಹುಷ ಭರತನೇ ಮೊದಲಾದವರ ಪುಣ್ಯವು ಇವನ ಪುಣ್ಯಕ್ಕೆ ಸಮವಲ್ಲ. ಅರ್ಜುನನು ಅಮರಾವತಿಯ ಸೂಳೆಕೇರಿಗಳಲ್ಲಿ ರಥದಲ್ಲಿ ಚಲಿಸಿದನು, ಅಲ್ಲಿ ಸುಗಂಧ, ಸೌಂದರ್ಯ ತೇಜದ ತೆಕ್ಕೆಗಳು ಲಾವಣ್ಯದ ತೆರೆಗಳು ಕೊಬ್ಬಿ ಕಂಗೊಳಿಸುತ್ತಿದ್ದವು.

ಅರ್ಥ:
ಹೊಕ್ಕು: ಸೇರು; ಎಕ್ಕತುಳ: ಪರಾಕ್ರಮ; ಆರ್ಜಿಸು: ಸಂಪಾದಿಸು; ಪುಣ್ಯ: ಸದಾಚಾರ; ಸರಿ: ಸಮಾನವಾದ; ಭೂಮಿಪ: ರಾಜ; ಉಕ್ಕು: ಸುರಿ; ಪರಿಮಳ: ಸುಗಂಧ; ತೇಜ: ಕಾಂತಿ; ತೆಕ್ಕೆ: ಗುಂಪು; ಲಾವಣ್ಯ: ಚೆಲುವು, ಸೌಂದರ್ಯ; ಲಹರಿ: ರಭಸ, ಆವೇಗ; ಸೊಕ್ಕು:ಅಮಲು, ಮದ; ಸುರ: ದೇವತೆ; ಸೂಳೆ: ವೇಶ್ಯೆ; ಕೇರಿ: ಬೀದಿ, ಓಣಿ; ನಡೆ: ಚಲಿಸು, ಹೋಗು;

ಪದವಿಂಗಡಣೆ:
ಹೊಕ್ಕನ್+ಅಮರಾವತಿಯನ್+ಅರ್ಜುನ
ಎಕ್ಕತುಳದಲು+ಪಾರ್ಜಿಸಿದ+ಪು
ಣ್ಯಕ್ಕೆ +ಸರಿಯೇ +ನಳ+ನಹುಷ+ ಭರತಾದಿ+ ಭೂಮಿಪರು
ಉಕ್ಕಿದವು+ ಪರಿಮಳದ +ತೇಜದ
ತೆಕ್ಕೆಗಳು +ಲಾವಣ್ಯ +ಲಹರಿಯ
ಸೊಕ್ಕುಗಳ+ ಸುರಸೂಳೆ+ಕೇರಿಗಳ್+ಒಳಗೆ +ನಡೆ ತಂದ

ಅಚ್ಚರಿ:
(೧) ಲಾವಣ್ಯ ಲಹರಿ, ಸೋಕ್ಕುಗಳ ಸುರಸೂಳೆಕೇರಿ; ಭರತಾದಿ ಭೂಮಿಪರು; ತೇಜದ ತೆಕ್ಕೆಗಳು – ಜೋಡಿ ಅಕ್ಷರದ ಪದಗಳು

ಪದ್ಯ ೮೧: ಇಂದ್ರನ ಆಲಯ ಹೇಗಿದೆ?

ಹೊಳೆವುತಿದೆ ದೂರದಲಿ ರಜತಾ
ಚಲವ ಕಂಡಂದದಲಿ ಕೆಲದಲಿ
ಬಲವಿರೋಧಿಯ ಪಟ್ಟದಾನೆ ಸುರೆಂದ್ರ ನಂದನನೆ
ನಿಳಯವದೆ ನಸುದೂರದಲಿ ಥಳ
ಥಳಿಸುವಮಳ ಮಣಿ ಪ್ರಭಾಪರಿ
ವಳಯ ರಶ್ಮಿ ನಿಬದ್ಧವಮರಾವತಿಯ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೮೧ ಪದ್ಯ)

ತಾತ್ಪರ್ಯ:
ದೂರದಲ್ಲಿ ಬೆಳ್ಳಿಯ ಬೆಟ್ಟವೋ ಎಂಬಂತೆ ಇಂದ್ರನ ಪಟ್ಟದಾನೆ ಐರಾವತವು ಕಾಣಿಸುತ್ತಿದೆ. ಸ್ವಲ್ಪವೇ ದೂರದಲ್ಲಿ ಅತಿ ಶ್ರೇಷ್ಠವಾದ ದೋಷವಿಲ್ಲದ ಮಣಿ ರಶ್ಮಿಗಳಿಂದ ಕೂಡಿದ ದೇವೇಂದ್ರನ ಮನೆಯಿದೆ. ಅದೋ ಹೊಳೆಯುವ ಅಮರಾವತಿಯನ್ನು ನೋಡು ಎಂದು ಮಾತಲಿಯು ಅರ್ಜುನನಿಗೆ ಹೇಳಿದನು.

ಅರ್ಥ:
ಹೊಳೆ: ಪ್ರಕಾಶಿಸು; ದೂರ: ಬಹಳ ಅಂತರ; ರಜತ: ಬೆಳ್ಳಿ; ಅಚಲ: ಬೆಟ್ಟ; ಕಂಡು: ನೋಡು; ಅಂದ: ಚೆಲುವು; ಕೆಲ: ಕೊಂಚ, ಸ್ವಲ್ಪ, ಮಗ್ಗಲು; ಬಲ: ರಾಕ್ಷಸನ ಹೆಸರು; ವಿರೋಧಿ: ವೈರಿ; ಬಲವಿರೋಧಿ: ಇಂದ್ರ; ಆನೆ: ಗಜ; ಸುರೇಂದ್ರ: ಇಂದ್ರ; ನಂದನ: ಮಗ; ನಿಳಯ: ಮನೆ; ನಸು: ಸ್ವಲ್ಪ; ಥಳಥಳಿಸು: ಹೊಳೆ, ಪ್ರಕಾಶಿಸು; ಅಮಳ: ನಿರ್ಮಲ; ಮಣಿ: ಬೆಲೆಬಾಳುವ ರತ್ನ; ಪ್ರಭೆ: ಕಾಂತಿ; ವಳಯ: ಆವರಣ; ರಶ್ಮಿ: ಕಾಂತಿ; ನಿಬದ್ಧ: ಕಟ್ಟಲ್ಪಟ್ಟ; ನೋಡು: ವೀಕ್ಷಿಸು;

ಪದವಿಂಗಡಣೆ:
ಹೊಳೆವುತಿದೆ +ದೂರದಲಿ +ರಜತಾ
ಚಲವ +ಕಂಡಂದದಲಿ +ಕೆಲದಲಿ
ಬಲವಿರೋಧಿಯ +ಪಟ್ಟದಾನೆ +ಸುರೆಂದ್ರ+ ನಂದನನೆ
ನಿಳಯವ್+ಅದೆ+ ನಸು+ದೂರದಲಿ +ಥಳ
ಥಳಿಸುವ್+ಅಮಳ +ಮಣಿ +ಪ್ರಭಾಪರಿ
ವಳಯ +ರಶ್ಮಿ+ ನಿಬದ್ಧವ್+ಅಮರಾವತಿಯ +ನೋಡೆಂದ

ಅಚ್ಚರಿ:
(೧) ಇಂದ್ರನನ್ನು ಬಲವಿರೋಧಿ, ಸುರೇಂದ್ರ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ರಜತಾಚಲವ ಕಂಡಂದದಲಿ ಕೆಲದಲಿ ಬಲವಿರೋಧಿಯ ಪಟ್ಟದಾನೆ

ಪದ್ಯ ೧೬: ಅರ್ಜುನನು ಮಾತಲಿಗೆ ಏನು ಹೇಳಿದನು?

ಬಲ್ಲರಾರದನಶ್ವಮೇಧದ
ಮಲ್ಲರನು ಕೃತರಾಜಸೂಯರು
ಬಲ್ಲರೇ ಕಡೆಬೀಡ ಕೋಟಿಯ ಗುಡಿಯ ಬೊಡ್ಡಿಯರ
ಎಲ್ಲಿಯಮರಾವತಿ ನರಾಧಮ
ರೆಲ್ಲಿ ನಾವೀಶ್ವರನ ಕರುಣದ
ಭುಲ್ಲವಣೆಯಲಿ ಭಾಗ್ಯನೆಂದನು ನಗುತ ಕಲಿಪಾರ್ಥ (ಅರಣ್ಯ ಪರ್ವ, ೮ ಸಂಧಿ, ೧೬ ಪದ್ಯ)

ತಾತ್ಪರ್ಯ:
ಮಾತಲಿಯ ಮಾತಿಗೆ ಅರ್ಜುನನು, ಅಮರಾವತಿಯ ವಾಸದ ಪೂರ್ಣ ಸಂತೋಷ ವೈಭವಗಳನ್ನು ಯಾರು ಬಲ್ಲರು? ಅಶ್ವಮೇಧ, ರಾಜಸೂಯ ಯಾಗಗಳನ್ನು ಮಾಡಿದ ವೀರರು ಅಮರಾವತಿಯ ಕಡೆಯ ಬೀಡುಗಳಲ್ಲಿ ದೊರಕುವ ಅಪ್ಸರೆಯರನ್ನು ಮಾತ್ರ ಕಾಣಬಹುದು, ಆದರೆ ಪರಮೇಶ್ವರನು ನನ್ನ ಮೇಲೆ ತೋರಿಸಿದ ಕೃಪೆಯ ದೆಸೆಯಿಮ್ದ ನನಗೆ ಅಮರಾವತಿಯ ಅರಮನೆಯ ವಾಸಲಭಿಸಿತು. ಈ ಭಾಗ್ಯವು ಶಂಕರನ ಕರುಣೆ ಎಂದು ನಗುತ್ತಾ ಹೇಳಿದನು.

ಅರ್ಥ:
ಬಲ್ಲರು: ತಿಳಿದವರು; ಅಶ್ವಮೇಧ: ಕುದುರೆಯನ್ನು ಬಲಿಕೊಡುವ ಒಂದು ಯಾಗ; ಮಲ್ಲ: ಜಟ್ಟಿ ; ಕೃತ: ಮಾಡು; ರಾಜಸೂಯ: ಚಕ್ರವರ್ತಿಯು ಮಾಡುವ ಒಂದು ಬಗೆಯ ಯಾಗ; ಬಲ್ಲರು: ತಿಳಿದ; ಕಡೆ: ಕೊನೆ; ಬೀಡು: ಮನೆ, ಗೃಹ; ಕೋಟೆ: ಊರಿನ ರಕ್ಷಣೆಗಾಗಿ ಕಟ್ಟಿದ ಗೋಡೆ; ಗುಡಿ: ಆಲಯ; ಬೊಡ್ಡಿ: ಸೂಳೆ, ವೇಶ್ಯೆ, ಅಪ್ಸರೆ; ನರ: ಮನುಷ್ಯ; ಅಧಮ: ಕೀಳು, ನೀಚ; ಈಶ್ವರ: ಶಂಕರ; ಕರುಣೆ: ದಯೆ; ಭುಲ್ಲವಣೆ: ಹರ್ಷ; ಭಾಗ್ಯ: ಅದೃಷ್ಟ, ಸುದೈವ; ನಗು: ಸಂತಸ; ಕಲಿ: ಶೂರ;

ಪದವಿಂಗಡಣೆ:
ಬಲ್ಲರಾರ್+ಅದನ್+ಅಶ್ವಮೇಧದ
ಮಲ್ಲರನು+ ಕೃತ+ರಾಜಸೂಯರು
ಬಲ್ಲರೇ +ಕಡೆ+ಬೀಡ+ ಕೋಟಿಯ+ ಗುಡಿಯ +ಬೊಡ್ಡಿಯರ
ಎಲ್ಲಿ+ಅಮರಾವತಿ+ ನರ+ಅಧಮ
ರೆಲ್ಲಿ +ನಾವ್+ಈಶ್ವರನ+ ಕರುಣದ
ಭುಲ್ಲವಣೆಯಲಿ +ಭಾಗ್ಯನೆಂದನು+ ನಗುತ+ ಕಲಿಪಾರ್ಥ

ಅಚ್ಚರಿ:
(೧) ಹೋಲಿಕೆ ಮಾಡುವ ಪರಿ – ಎಲ್ಲಿಯಮರಾವತಿ ನರಾಧಮರೆಲ್ಲಿ
(೨) ಯಾಗಗಳ ಹೆಸರು – ಅಶ್ವಮೇಧ, ರಾಜಸೂಯ
(೩) ಅಮರಾವತಿಯಲ್ಲಿ ಅಪ್ಸರೆಯರು ಕಾಣುವ ಸ್ಥಳ – ಕಡೆಬೀಡ ಕೋಟಿಯ ಗುಡಿಯ ಬೊಡ್ಡಿಯರ

ಪದ್ಯ ೪೨: ಕೌರವನ ಆಸ್ಥಾನ ಹೇಗೆ ಕಾಣಿಸಿತು?

ಅತಿಮುದದಿ ತನು ಸೊಕ್ಕಿದೈರಾ
ವತವ ಕಿವಿವಿಡಿದೆಳೆವ ದಿಗ್ಗಜ
ತತಿಯನಮಳಾಂಕುಶದಲಂಜಿಸಿ ಕೆಲಬಲಕೆ ಬಿಡುವ
ನುತ ಗಜಾರೋಹಕರು ಕುರುಭೂ
ಪತಿಯ ಹೊರೆಯಲಿ ಮೆರೆದರಮರಾ
ವತಿಯ ರಾಯನ ಸಭೆಯೊಲೆಸೆದುದು ಕೌರವಾಸ್ಥಾನ (ಉದ್ಯೋಗ ಪರ್ವ, ೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ಸೊಕ್ಕಿದ ದೇಹದಿಂದ ಕೂಡಿದ, ಅತಿ ಸಂತಸದಿಂದ ಲೀಲಾಜಾಲವಾಗಿ ಆನೆಗಳ ಕಿವಿಹಿಡಿದು ಎಳೆದು ಅಂಕುಶದಿಂದ ಅಂಜಿಸಿ ಅಕ್ಕಪಕ್ಕಕ್ಕೆ ಬಿಡುವ ಪಳಿಗಿದ ಶ್ರೇಷ್ಠ ಮಾವುತರು ದುರ್ಯೋಧನನ ಆಜ್ಞೆಯಲ್ಲಿ ಮೆರೆಯಲು ನೋಡುವವರಿಗೆ ಇಂದ್ರನ ಸಭೆಯೇ ಧರೆಗೆ ಕೌರವನ ಆಸ್ಥಾನವಾಗಿದಿಯೇ ಎಂದು ತೋರುತ್ತಿತ್ತು.

ಅರ್ಥ:
ಅತಿ: ತುಂಬ; ಮುದ: ಸಂತೋಷ; ತನು: ದೇಹ; ಸೊಕ್ಕು: ಅಮಲು, ಮದ; ಐರಾವತ: ಇಂದ್ರನ ಆನೆ; ಕಿವಿ: ಶ್ರವಣಸಾಧನವಾದ ಅವಯವ; ಎಳೆ: ಜಗ್ಗು; ದಿಗ್ಗಜ: ಅತಿಶ್ರೇಷ್ಠ;
ಭೂಭಾಗವನ್ನು ಹೊತ್ತಿರುವ ಎಂಟು ದಿಕ್ಕಿನ ಆನೆಗಳು; ತತಿ: ಗುಂಪು; ಅಮಳ: ನಿರ್ಮಲ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ಅಂಜಿಸು: ಹೆದರಿಸು; ಕೆಲಬಲ: ಅಕ್ಕಪಕ್ಕ; ಬಿಡು: ತೊರೆ, ತ್ಯಜಿಸು; ನುತ: ಶ್ರೇಷ್ಠವಾದ; ಗಜ: ಆನೆ, ಕರಿ; ಆರೋಹಕ: ಹತ್ತುವವ; ಗಜಾರೋಹಕ: ಮಾವುತ; ಭೂಪತಿ: ರಾಜ; ಹೊರೆ: ಭಾರ; ಮೆರೆ: ಪ್ರಕಾಶಿಸು; ಅಮರಾವತಿ: ಇಂದ್ರನ ನಗರ; ರಾಯ: ರಾಜ; ಸಭೆ: ದರ್ಬಾರು; ಎಸೆ: ಶೋಭಿಸು; ಆಸ್ಥಾನ: ದರಬಾರು;

ಪದವಿಂಗಡಣೆ:
ಅತಿಮುದದಿ +ತನು +ಸೊಕ್ಕಿದ್+ಐರಾ
ವತವ +ಕಿವಿವಿಡಿದ್+ಎಳೆವ +ದಿಗ್ಗಜ
ತತಿಯನ್+ಅಮಳ+ಅಂಕುಶದಲ್+ಅಂಜಿಸಿ +ಕೆಲಬಲಕೆ +ಬಿಡುವ
ನುತ +ಗಜ+ಆರೋಹಕರು+ ಕುರುಭೂ
ಪತಿಯ +ಹೊರೆಯಲಿ +ಮೆರೆದರ್+ಅಮರಾ
ವತಿಯ +ರಾಯನ +ಸಭೆಯೊಲ್+ಎಸೆದುದು +ಕೌರವಾಸ್ಥಾನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕುರುಭೂಪತಿಯ ಹೊರೆಯಲಿ ಮೆರೆದರಮರಾವತಿಯ ರಾಯನ ಸಭೆಯೊಲೆಸೆದುದು ಕೌರವಾಸ್ಥಾನ
(೨) ‘ಅ’ ಕಾರದ ಪದ ಬಳಕೆ – ಅಮಳ, ಅಂಕುಶ, ಅಂಜಿಸಿ, ಅಮರಾವತಿ, ಅತಿ

ಪದ್ಯ ೨: ದೂತರು ದುರ್ಯೋಧನನಿಗೆ ಏನು ಬಿನ್ನವಿಸಿದರು?

ವಿತಳದಲಿ ಹೊಕ್ಕಿರಲಿಯಮರಾ
ವತಿಯೊಳಗೆ ಮೇಣಿರಲಿ ನಮ್ಮೀ
ಕ್ಷಿತಿಯೊಳಗೆ ಸುಳುಹಿಲ್ಲ ನೃಪ ಕುಂತೀಕುಮಾರಕರ
ಮತಿಯ ಹಬ್ಬುಗೆಯಿಂದ ನಾನಾ
ಗತಿಯೊಳಗೆ ಹೊಕ್ಕರಸಿದೆವು ಕುರು
ಪತಿಯೆ ಕೇಳ್ ನಿರ್ನಾಮವಾದರು ನಿನ್ನ ವೈರಿಗಳು (ವಿರಾಟ ಪರ್ವ, ೫ ಸಂಧಿ, ೨ ಪದ್ಯ)

ತಾತ್ಪರ್ಯ:
ದೂತರು ಬಂದು ಕುರುಪತಿಯಾದ ದುರ್ಯೋಧನನಲ್ಲಿ ಹೀಗೆ ಬಿನ್ನವಿಸಿದರು: ರಾಜ, ಪಾಂಡುಪುತ್ರರು ಪಾತಾಳದಲ್ಲೋ ಇಲ್ಲವೆ ಸ್ವರ್ಗದಲ್ಲೋ ಇದ್ದಾರು, ಆದರೆ ಈ ಭೂಮಿಯಲ್ಲಿ ಮಾತ್ರ ಇಲ್ಲ. ನಮ್ಮೆಲ್ಲ ಬುದ್ಧಿಯನ್ನು ಉಪಯೋಗಿಸಿ ನಾನಾ ರೀತಿಯಿಂದ ಒಳಹೊಕ್ಕು ಹುಡುಕಿದೆವು. ಈ ಭೂಮಿಯ ಮೇಲೆ ಪಾಂಡವರ ಸುಳಿವಿಲ್ಲ. ನಿಮ್ಮ ವೈರಿಗಳು ನಿರ್ನಾಮವಾಗಿದ್ದಾರೆ, ಎಂದು ದೂತರು ತಿಳಿಸಿದರು

ಅರ್ಥ:
ವಿತಳ: ಪಾತಾಳ; ಹೊಕ್ಕು: ಸೇರು; ಅಮರಾವತಿ: ಸ್ವರ್ಗ; ಮೇಣ್: ಅಥವ, ಹಾಗು; ಕ್ಷಿತಿ: ಭೂಮಿ; ಸುಳುಹು: ಕುರುಹು; ನೃಪ: ರಾಜ; ಕುಮಾರ: ಮಕ್ಕಳ; ಮತಿ: ಬುದ್ಧಿ; ಹಬ್ಬುಗೆ:ಹರಡುವಿಕೆ, ವ್ಯಾಪಿಸು; ನಾನಾ: ಹಲವಾರು; ಗತಿ: ಯುಕ್ತಿ, ಪದ್ಧತಿ; ಒಳಗೆ: ಅಂತರಾಳ; ಹೊಕ್ಕು: ಸೇರು; ಅರಸು: ಹುಡುಕು; ಕುರುಪತಿ: ಕುರುರಾಜ; ಕೇಳ್: ಆಲಿಸು; ನಿರ್ನಾಮ: ನಾಶ; ವೈರಿ: ಶತ್ರು;

ಪದವಿಂಗಡಣೆ:
ವಿತಳದಲಿ +ಹೊಕ್ಕಿರಲಿ+ ಅಮರಾ
ವತಿಯೊಳಗೆ+ ಮೇಣ್+ಇರಲಿ+ ನಮ್ಮೀ
ಕ್ಷಿತಿಯೊಳಗೆ +ಸುಳುಹಿಲ್ಲ+ ನೃಪ +ಕುಂತೀ+ಕುಮಾರಕರ
ಮತಿಯ +ಹಬ್ಬುಗೆಯಿಂದ +ನಾನಾ
ಗತಿಯೊಳಗೆ +ಹೊಕ್ಕ್+ಅರಸಿದೆವು +ಕುರು
ಪತಿಯೆ +ಕೇಳ್+ ನಿರ್ನಾಮವಾದರು+ ನಿನ್ನ+ ವೈರಿಗಳು

ಅಚ್ಚರಿ:
(೧) ಅಮರಾವತಿ, ಕುರುಪತಿ – ಪ್ರಾಸಪದಗಳ ಬಳಕೆ
(೨) ದುರ್ಯೋಧನನನ್ನು – ನೃಪ, ಕುರುಪತಿ ಎಂದು ಎರಡು ರೀತಿ ಸಂಭೋದನೆ

ಪದ್ಯ ೧೪: ಇಂದ್ರಪ್ರಸ್ಥ ನಗರದ ಹಿರೆಮೆ ಹೇಗಿತ್ತು?

ಅತಿಶಯವನೇನೆಂಬೆನಮರಾ
ವತಿಯ ಭೋಗಾವತಿಯ ಮಧ್ಯ
ಸ್ಥಿತದ ನಾಯಕರತುನದಂತಿರೆ ಮೆರೆದುದಾ ನಗರ
ಸತತವೀಪರಿ ವಿಭವವೀಜನ
ವಿತತಿಗಳ ಸನ್ಮಾರ್ಗದಲಿ ಸಂ
ಗತಿಗಳೀ ವಿಸ್ತಾರವೀಪರಿ ಭೂಪ ಕೇಳೆಂದ (ಆದಿ ಪರ್ವ, ೧೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ಇದು ಹೆಚ್ಚುಗಾರಿಕೆ ಎಂದಾದರು ತಿಳಿಯಬಹುದು, ಮೇಲಿರುವ ಅಮರಾವತಿ ಮತ್ತು ಪಾತಾಳದಲ್ಲಿರುವ ಭೋಗಾವತಿ ನಗರಗಳ ಮಧ್ಯೆ ಈ ಇಂದ್ರಪ್ರಸ್ಥನಗರವು ನಗರಗಳಲ್ಲಿ ನಾಯಕರಂತೆ ಮೆರೆಯಿತು. ಅಲ್ಲಿಯ ವೈಭವ ಜನಸಂದಣಿ ಸನ್ಮಾರ್ಗದಲ್ಲಿ ನಡೆಯುವ ಜನರ ವರ್ತನೆ ಇಂದ್ರಪ್ರಸ್ಥವನ್ನು ಅತ್ಯಂತ ಶ್ರೇಷ್ಠ ನಗರವನ್ನಾಗಿ ಮಾಡಿತು.

ಅರ್ಥ:
ಅತಿಶಯ:ಹೆಚ್ಚುಗಾರಿಕೆ; ಅಮರಾವತಿ: ಇಂದ್ರನ ನಗರಿ; ಭೋಗಾವತಿ:ಪಾತಾಳದ ನಗರ; ಮಧ್ಯ: ನಡುಭಾಗ; ಸ್ಥಿತ: ಇರುವ; ನಾಯಕ: ಮುಖಂಡ; ರತುನ: ರತ್ನ; ಮೆರೆದುದು: ಪ್ರಕಾಶಿಸು, ಪ್ರಖ್ಯಾತ; ನಗರ: ಊರು; ಸತತ: ಯಾವಾಗಲು; ವಿಭವ: ಸಿರಿ, ಸಂಪತ್ತು; ಜನ: ಮನುಷ್ಯರು, ಪ್ರಜೆ; ವಿತತ:ವಿಸ್ತಾರವಾದ; ಸನ್ಮಾರ್ಗ: ಒಳ್ಳೆಯ ದಾರಿ; ಸಂಗತಿ:ಗೆಳೆತನ, ಜೊತೆ; ವಿಸ್ತಾರ: ಹರಡಿರುವ; ಭೂಪ: ರಾಜ;

ಪದವಿಂಗಡಣೆ:
ಅತಿಶಯವನೇನ+ಎಂಬೆನ್+ಅಮರಾ
ವತಿಯ +ಭೋಗಾವತಿಯ +ಮಧ್ಯ
ಸ್ಥಿತದ +ನಾಯಕ+ರತುನದಂತಿರೆ+ ಮೆರೆದುದಾ +ನಗರ
ಸತತವ್+ಈ+ಪರಿ+ ವಿಭವವ್+ಈ+ಜನ
ವಿತತಿಗಳ+ ಸನ್ಮಾರ್ಗದಲಿ +ಸಂ
ಗತಿಗಳ್+ಈ+ವಿಸ್ತಾರವ್+ ಈ+ಪರಿ+ ಭೂಪ +ಕೇಳೆಂದ

ಅಚ್ಚರಿ:
(೧) ಈ ಕಾರದಿಂದ ಪದಗಳ ಜೋಡಣೆ: ಸತತವೀಪರಿ ವಿಭವವೀಜನ ವಿತತಿಗಳ ಸನ್ಮಾರ್ಗದಲಿ ಸಂಗತಿಗಳೀ ವಿಸ್ತಾರವೀಪರಿ
(೨) “ವ” ಕಾರದ ಪದಗಳು: ವಿಭವ, ವಿತತಿ, ವಿಸ್ತಾರ
(೩) ಅಮರಾವತಿಯ ಹಿರಿಮೆಯನ್ನು ವಿವಿರಿಸುವ ಪರಿ: ಅಮರಾವತಿಯ ಭೋಗಾವತಿಯ ಮಧ್ಯ
ಸ್ಥಿತದ ನಾಯಕರತುನದಂತಿರೆ ಮೆರೆದುದಾ ನಗರ