ಪದ್ಯ ೩೬: ಪಾಂಡವರ ಮೇಲೆ ಕೌರವರ ಆಕ್ರಮಣ ಹೇಗಿತ್ತು?

ಮತ್ತೆ ಹೊಕ್ಕುದು ಭಟರಮಮ ದಿಗು
ಭಿತ್ತಿ ಬಿರಿಯಲು ಮೊರೆವ ಭೇರಿಯ
ಕಿತ್ತು ನೆಲ ಹೊಡೆಮರಳೆ ಮೊಳಗುವ ಪಟಹ ಡಿಂಡಿಮದ
ಹತ್ತು ಸಾವಿರ ನೃಪರು ರಿಪುಗಳ
ಮುತ್ತಿದರು ಮುಸುಕಿದರು ಮೆಯ್ಯಲಿ
ಮೆತ್ತಿದರು ಮೊನೆಗಣೆಗಳನು ಪಾಂಡವರ ಬಲದೊಳಗೆ (ದ್ರೋಣ ಪರ್ವ, ೧೫ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೌರವ ಭಟರು ಮತ್ತೆ ನುಗ್ಗಿದರು. ಭೇರಿಯ ಬಡಿತಕ್ಕೆ ದಿಕ್ಪಟಗಳು ಬಿರಿದವು. ನೆಲ ಮಗ್ಗುಲಾಗಿ ಬೀಳುವಂತೆ ಡಿಂಡಿಮ ಪಟಹಗಳನ್ನು ಬಡಿದರು. ಹತ್ತು ಸಾವಿರ ರಾಜರು ಮುತ್ತಿ ಬಾಣಗಳಿಂದ ಪಾಂಡವರ ಸೈನ್ಯದ ಯೋಧರ ಮೈಗಳನ್ನು ಮೆತ್ತಿದರು.

ಅರ್ಥ:
ಹೊಕ್ಕು: ಸೇರು; ಭಟ: ಸೈನಿಕ; ದಿಗು: ದಿಕ್ಕು; ಭಿತ್ತಿ: ಗೋಡೆ; ಬಿರಿ: ಬಿರುಕು, ಸೀಳು; ಮೊರೆ: ಧ್ವನಿ ಮಾಡು, ಝೇಂಕರಿಸು; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ; ಕಿತ್ತು: ಕಳಚು; ನೆಲ: ಭೂಮಿ; ಹೊಡೆಮರಳು: ಹಿಂದಕ್ಕೆ ತಿರುಗಿಸು; ಮೊಳಗು: ಧ್ವನಿ, ಸದ್ದು; ಪಟಹ: ನಗಾರಿ; ಡಿಂಡಿಮ: ಒಂದು ಬಗೆಯ ಚರ್ಮವಾದ್ಯ; ಸಾವಿರ: ಸಹಸ್ರ; ನೃಪ: ರಾಜ; ರಿಪು: ವೈರಿ; ಮುತ್ತು: ಆವರಿಸು; ಮುಸುಕು: ಹೊದಿಕೆ; ಯೋನಿ; ಮೆಯ್ಯಲಿ: ತನುವಿನಲ್ಲಿ; ಮೆತ್ತು: ಬಳಿ, ಲೇಪಿಸು; ಮೊನೆ: ತುದಿ, ಕೊನೆ; ಕಣೆ: ಬಾಣ; ಬಲ: ಸೈನ್ಯ;

ಪದವಿಂಗಡಣೆ:
ಮತ್ತೆ +ಹೊಕ್ಕುದು +ಭಟರ್+ಅಮಮ +ದಿಗು
ಭಿತ್ತಿ+ ಬಿರಿಯಲು +ಮೊರೆವ +ಭೇರಿಯ
ಕಿತ್ತು +ನೆಲ +ಹೊಡೆಮರಳೆ+ ಮೊಳಗುವ +ಪಟಹ +ಡಿಂಡಿಮದ
ಹತ್ತು +ಸಾವಿರ +ನೃಪರು +ರಿಪುಗಳ
ಮುತ್ತಿದರು +ಮುಸುಕಿದರು +ಮೆಯ್ಯಲಿ
ಮೆತ್ತಿದರು +ಮೊನೆಗಣೆಗಳನು +ಪಾಂಡವರ +ಬಲದೊಳಗೆ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮುತ್ತಿದರು ಮುಸುಕಿದರು ಮೆಯ್ಯಲಿ ಮೆತ್ತಿದರು ಮೊನೆಗಣೆಗಳನು

ಪದ್ಯ ೩: ಅಭಿಮನ್ಯುವಿನ ಮಕ್ಕಳಾಟ ಹೇಗಿತ್ತು?

ಮಿಕ್ಕು ನೂಕುವ ಕುದುರೆಕಾರರು
ತೆಕ್ಕೆಗೆಡೆದರು ಸಂದಣಿಸಿ ಕೈ
ಯಿಕ್ಕಿದಾನೆಯನೇನನೆಂಬೆನು ಕಾಣೆನಳವಿಯಲಿ
ಹೊಕ್ಕು ಹರಿಸುವ ರಥ ಪದಾತಿಯ
ನೊಕ್ಕಲಿಕ್ಕಿದನಮಮ ಮಗುವಿನ
ಮಕ್ಕಳಾಟಿಕೆ ಮಾರಿಯಾಯಿತು ವೈರಿರಾಯರಿಗೆ (ದ್ರೋಣ ಪರ್ವ, ೫ ಸಂಧಿ, ೩ ಪದ್ಯ)

ತಾತ್ಪರ್ಯ:
ದಾಳಿಯಿಟ್ಟ ರಾವುತರು ತೆಕ್ಕೆ ತೆಕ್ಕೆಯಾಗಿ ಸತ್ತುಬಿದ್ದರು. ಯುದ್ಧಕ್ಕೆ ಬಂದ ಆನೆಗಳು ಕಾಣಿಸಲೇ ಇಲ್ಲ. ವೇಗವಾಗಿ ಬಂದ ರಥಗಳನ್ನು ಹೊಡೆದೋಡಿಸಿದನು. ಬಾಲಕ ಅಭಿಮನ್ಯುವಿನ ಮಕ್ಕಳಾಟ ಶತ್ರುರಾಜರಿಗೆ ಮಾರಿಯಾಯಿತು.

ಅರ್ಥ:
ಮಿಕ್ಕು: ಉಳಿದ; ನೂಕು: ತಳ್ಳು; ಕುದುರೆ: ಅಶ್ವ; ಕುದುರೆಕಾರ: ರಾವುತ; ತೆಕ್ಕೆ: ಸುತ್ತಿಕೊಂಡಿರುವಿಕೆ; ಕೆಡೆ: ಬೀಳು, ಕುಸಿ; ಸಂದಣಿಸು: ಗುಂಪುಗೂಡು; ಆನೆ: ಗಜ; ಕಾಣು: ತೋರು; ಅಳವಿ: ಯುದ್ಧ; ಹೊಕ್ಕು: ಸೇರು; ಹರಿಸು: ಚಲಿಸು; ರಥ: ಬಂಡಿ; ಪದಾತಿ: ಕಾಲಾಳು; ಒಕ್ಕಲಿಕ್ಕು: ಬಡಿ, ಹೊಡೆ; ಅಮಮ: ಆಶ್ಚರ್ಯ ಸೂಚಕ ಪದ; ಮಗು: ಚಿಕ್ಕವ, ಕುಮಾರ; ಮಕ್ಕಳಾಟಿಕೆ: ಮಕ್ಕಳು ಆಟವಾಡುವ ವಸ್ತು; ಮಾರಿ: ಕ್ಷುದ್ರದೇವತೆ; ವೈರಿ: ಶತ್ರು; ರಾಯ: ರಾಜ;

ಪದವಿಂಗಡಣೆ:
ಮಿಕ್ಕು +ನೂಕುವ +ಕುದುರೆಕಾರರು
ತೆಕ್ಕೆ+ಕೆಡೆದರು +ಸಂದಣಿಸಿ+ ಕೈ
ಯಿಕ್ಕಿದ್+ಆನೆಯನೇನನ್+ಎಂಬೆನು +ಕಾಣೆನ್+ಅಳವಿಯಲಿ
ಹೊಕ್ಕು +ಹರಿಸುವ +ರಥ +ಪದಾತಿಯನ್
ಒಕ್ಕಲಿಕ್ಕಿದನ್+ಅಮಮ +ಮಗುವಿನ
ಮಕ್ಕಳಾಟಿಕೆ +ಮಾರಿಯಾಯಿತು +ವೈರಿ+ರಾಯರಿಗೆ

ಅಚ್ಚರಿ:
(೧) ಅಭಿಮನ್ಯುವಿನ ಸಾಹಸ – ಮಗುವಿನ ಮಕ್ಕಳಾಟಿಕೆ ಮಾರಿಯಾಯಿತು ವೈರಿರಾಯರಿಗೆ

ಪದ್ಯ ೩೭: ಕೌರವ ಸೈನ್ಯವು ಹೇಗೆ ಮುನ್ನುಗ್ಗಿತು?

ಸೆಳೆವ ಸಿಂಧವ ಕವಿವ ಹೀಲಿಯ
ವಳಯ ತೋಮರ ಚಮರ ಡೊಂಕಣಿ
ಗಳ ವಿಡಾಯಿಯಲಮಮ ಕೆತ್ತುದು ಗಗನವಳ್ಳಿರಿಯೆ
ಸುಳಿಯಲನಿಲಂಗಿಲ್ಲ ಪಥ ಕೈ
ಹೊಳಕಬಾರದು ರವಿಗೆ ನೆಲನೀ
ದಳವನಾನುವಡರಿದೆನಲು ಜೋಡಿಸಿತು ಕುರುಸೇನೆ (ವಿರಾಟ ಪರ್ವ, ೫ ಸಂಧಿ, ೩೭ ಪದ್ಯ)

ತಾತ್ಪರ್ಯ:
ಹಾರಾಡುವ ಬಾವುಟಗಳು, ನವಿಲುಗರಿಗಳ ಆಕೃತಿ, ತೋಮರ, ಡೊಂಕಣಿ ಮೊದಲಾದ ಆಯುಧಗಳು, ಚಾಮರ್ಗಳು ಇವುಗಳು ಒತ್ತಾಗಿರಲು ಗಾಳಿಗೆ ಹೋಗಲು ಜಾವಗಿಲ್ಲದಂತಾಯಿತು. ಸೂರ್ಯನ ಬೆಳಕು ಭೂಮಿಯನ್ನು ಮುಟ್ಟಲಿಲ್ಲ. ಇದಕ್ಕೆದುರಾರು ಎಂಬಂತಹ ಸೈನ್ಯ ಮುಂದುವರೆಯಿತು.

ಅರ್ಥ:
ಸೆಳೆ:ಎಳೆತ,ಆಕರ್ಷಿಸು; ಸಿಂಧವ: ಬಾವುಟ; ಹೀಲಿ: ನವಿಲುಗರಿ;ವಳಯ: ಸುತ್ತುವರೆದ; ಕವಿ: ದಾಳಿಮಾಡು, ದಟ್ಟವಾಗು; ತೋಮರ: ಈಟಿಯಂತಹ ಒಂದು ಬಗೆಯ ಆಯುಧ; ಚಮರ: ಚಾಮರ; ಡೊಂಕಣಿ: ಈಟಿ; ವಿಡಾಯಿ:ಶಕ್ತಿ, ತೋರಿಕೆ; ಅಮಮ: ಅಬ್ಬಬ್ಬ; ಕೆತ್ತು: ನಡುಕ, ಸ್ಪಂದನ; ಗಗನ: ಆಗಸ; ಅಳ್ಳಿರಿ: ನಡುಗಿಸು, ಚುಚ್ಚು; ಸುಳಿ:ಜಲಾವರ್ತ ; ಪಥ: ದಾರಿ; ಹೊಳಕು: ಕಾಣಿಸಿಕೊಳ್ಳು; ರವಿ: ಭಾನು; ನೆಲ: ಭೂಮಿ; ದಳ: ಸೈನ್ಯ; ಜೋಡಿಸು: ಕೂಡಿಸು;ಆನಿಲ: ಗಾಳಿ

ಪದವಿಂಗಡಣೆ:
ಸೆಳೆವ +ಸಿಂಧವ +ಕವಿವ +ಹೀಲಿಯ
ವಳಯ +ತೋಮರ +ಚಮರ +ಡೊಂಕಣಿ
ಗಳ +ವಿಡಾಯಿಯಲ್+ಅಮಮ +ಕೆತ್ತುದು +ಗಗನವ್+ಅಳ್ಳಿರಿಯೆ
ಸುಳಿಯಲ್+ಅನಿಲಂಗ್+ಇಲ್ಲ+ ಪಥ+ ಕೈ
ಹೊಳಕಬಾರದು +ರವಿಗೆ+ ನೆಲನ್+ಈ
ದಳವನ್+ಆನುವಡರಿದ್+ಎನಲು +ಜೋಡಿಸಿತು +ಕುರುಸೇನೆ

ಅಚ್ಚರಿ:
(೧) ಆಶ್ಚರ್ಯವನ್ನು ಸೂಚಿಸುವ ಪದ – ಅಮಮ
(೨) ಸೈನ್ಯದ ಗಾತ್ರ ಮತ್ತು ದಟ್ಟತೆಯನ್ನು ವಿವರಿಸಲು – ಗಾಳಿಯೂ ತೂರಲು ಜಾಗವಿಲ್ಲ ಎಂದು ಹೇಳಲು – ಸುಳಿಯಲನಿಲಂಗಿಲ್ಲ ಪಥ, ಕೈ ಹೊಳಕಬಾರದು ರವಿಗೆ ನೆಲ;