ಪದ್ಯ ೧೯: ಅರ್ಜುನನು ಊರ್ವಶಿಯನ್ನು ಹೇಗೆ ನೋಡಿದನು?

ಏನು ಬಿಜಯಂಗೈದಿರಿತ್ತಲು
ಮಾನನಿಧಿ ಕುಳ್ಳಿರಿ ಸುರೇಂದ್ರನ
ಮಾನಿನಿಯರಭಿವಂದನೀಯರು ನಾವ್ ಕೃತಾರ್ಥರಲ
ಏನುಬೆಸಸೆನಗೇನು ಹದ ನಿಮ
ಗಾನು ಮಗನುಪಚಾರವೇಕೆ ಮ
ನೋನುರಾಗದಲರುಹಿಯೆಂದನು ಪಾರ್ಥನೂರ್ವಶಿಗೆ (ಅರಣ್ಯ ಪರ್ವ, ೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಊರ್ವಶಿಯನ್ನು ಕಂಡ ಅರ್ಜುನನು ಆಕೆಯ ಬಳಿ ಬಂದು, ಏನು ನೀವು ಇತ್ತ ದಯಮಾಡಿಸಿದಿರಿ, ಮಹಾಮಾನನಿಧಿಯಾದವರು ನೀವು, ದಯೆಯಿಟ್ಟು ಆಸೀನರಾಗಿರಿ, ನೀವು ಇಂದ್ರನ ಮಹಿಳೆ, ನಮಸ್ಕಾರಕ್ಕೆ ಯೋಗ್ಯರಾದವರು, ನಿಮ್ಮ ಅಪ್ಪಣೆಯನ್ನು ನೀಡಿರಿ, ಏನು ಹೇಳಲು ಬಂದಿರಿ, ನಾನು ನಿಮಗೆ ಮಗ, ಉಪಚಾರದ ಮಾತುಗಳನ್ನು ಬಳಸದೆ ಸಂತೋಷದಿಂದ ಹೇಳಿರಿ ಎಂದು ಅರ್ಜುನನು ಹೇಳಿದನು.

ಅರ್ಥ:
ಬಿಜಯಂಗೈ: ದಯಮಾಡಿಸಿದಿರಿ, ಬಂದಿರಿ; ಮಾನ: ಗೌರವ, ಮರ್ಯಾದೆ; ನಿಧಿ: ನಿಕ್ಷೇಪ, ಸಮುದ್ರ; ಮಾನನಿಧಿ: ಶ್ರೇಷ್ಠವಾದವ; ಕುಳ್ಳಿರಿ: ಆಸೀನರಾಗಿರಿ; ಸುರೇಂದ್ರ: ಇಂದ್ರ; ಸುರ: ದೇವತೆ; ಇಂದ್ರ: ಒಡೆಯ; ಮಾನಿನಿ: ಹೆಣ್ಣು; ಅಭಿವಂದನೆ: ಗೌರವದಿಂದ ಮಾಡುವ ನಮಸ್ಕಾರ; ಕೃತಾರ್ಥ: ಧನ್ಯ; ಬೆಸಸು: ಆಜ್ಞಾಪಿಸು; ಹದ: ರೀತಿ, ಸರಿಯಾದ ಸ್ಥಿತಿ; ಮಗ: ಸುತ; ಉಪಚಾರ: ಸತ್ಕಾರ; ಮನ: ಮನಸ್ಸು; ಅನುರಾಗ: ಪ್ರೀತಿ; ಅರುಹು: ತಿಳಿಸು, ಹೇಳು;

ಪದವಿಂಗಡಣೆ:
ಏನು +ಬಿಜಯಂಗೈದಿರ್+ಇತ್ತಲು
ಮಾನನಿಧಿ+ ಕುಳ್ಳಿರಿ +ಸುರೇಂದ್ರನ
ಮಾನಿನಿಯರ್+ಅಭಿವಂದನೀಯರು +ನಾವ್+ ಕೃತಾರ್ಥರಲ
ಏನು+ಬೆಸಸ್+ಎನಗೇನು +ಹದ +ನಿಮಗ್
ಆನು+ ಮಗನ್+ಉಪಚಾರವೇಕೆ+ ಮ
ನೋನುರಾಗದಲ್+ಅರುಹಿ+ಎಂದನು +ಪಾರ್ಥನ್+ಊರ್ವಶಿಗೆ

ಅಚ್ಚರಿ:
(೧) ಮಾನನಿಧಿ, ಮಾನಿನಿ – ಪದಗಳ ಬಳಕೆ