ಪದ್ಯ ೩೨: ದ್ರೋಣನನ್ನು ಧರ್ಮಜನು ಏನು ಕೇಳಿದನು?

ಎವಗೆ ದೈವವು ನೀನು ಗುರು ನೀ
ನೆವಗೆ ತಾತನು ನೀನು ಮಹದಾ
ಹವದೊಳಗೆ ಪತಿಕರಿಸಿ ರಕ್ಷಿಸಲೊಡೆಯ ನೀನೆಮಗೆ
ಅವನಿಯಭಿಲಾಷೆಯಲಿ ತೆತ್ತುದು
ಬವರವೆಮಗಿನ್ನೇನು ಗತಿ ಕೌ
ರವ ಜಯೋಪಾಯಕ್ಕೆ ಹದನೇನೆಂದು ನೃಪ ನುಡಿದ (ಭೀಷ್ಮ ಪರ್ವ, ೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ಧರ್ಮಜನು ಆಚಾರ್ಯ ದ್ರೋಣರಿಗೆ ವಂದಿಸಿ, ನೀವೇ ನಮಗೆ ದೈವಸ್ವರೂಪರು, ನಮಗೆ ಆಚಾರ್ಯರು, ತಂದೆಯೂ ಸಹ ನೀವೆ, ಈ ಯುದ್ಧದಲ್ಲಿ ನಮ್ಮನ್ನು ರಕ್ಷಿಸ್ವುಅ ಒಡೆಯನೂ ನೀನೆ, ಭೂಮಿಯ ಮೇಲಿನ ಆಶೆಯಿಂದ ಈ ಯುದ್ಧವು ಘಟಿಸಿದೆ, ಕೌರವನನ್ನು ಜಯಿಸುವ ಬಗೆಯೇನು, ಎಂದು ದ್ರೋಣನನ್ನು ಕೇಳಿದನು.

ಅರ್ಥ:
ದೈವ: ಭಗವಂತ; ಗುರು: ಆಚಾರ್ಯ; ತಾತ: ತಂದೆ; ಆಹವ: ಯುದ್ಧ; ಪತಿಕರಿಸು: ಅನುಗ್ರಹಿಸು; ರಕ್ಷಿಸು: ಕಾಪಾಡು; ಒಡೆಯ: ದೊರೆ; ಅವನಿ: ಭೂಮಿ; ಅಭಿಲಾಷೆ: ಇಚ್ಛೆ; ತೆತ್ತು: ಒಡ್ದು; ಬವರ: ಯುದ್ಧ; ಗತಿ: ಅವಸ್ಥೆ; ಜಯ: ಗೆಲುವು; ಹದ: ಸ್ಥಿತಿ; ನೃಪ: ರಾಜ; ನುಡಿ: ಮಾತಾಡು;

ಪದವಿಂಗಡಣೆ:
ಎವಗೆ +ದೈವವು +ನೀನು +ಗುರು+ ನೀನ್
ಎವಗೆ +ತಾತನು +ನೀನು +ಮಹದ್
ಆಹವದೊಳಗೆ+ ಪತಿಕರಿಸಿ+ ರಕ್ಷಿಸಲ್+ಒಡೆಯ +ನೀನೆಮಗೆ
ಅವನಿ+ಅಭಿಲಾಷೆಯಲಿ +ತೆತ್ತುದು
ಬವರವ್+ಎಮಗಿನ್ನೇನು +ಗತಿ+ ಕೌ
ರವ+ ಜಯೋಪಾಯಕ್ಕೆ +ಹದನೇನೆಂದು +ನೃಪ +ನುಡಿದ

ಅಚ್ಚರಿ:
(೧) ಆಹವ, ಬವರ – ಸಮನಾರ್ಥಕ ಪದಗಳು

ಪದ್ಯ ೧೦೨: ಊರ್ವಶಿಯು ತನ್ನ ಉತ್ತರವನ್ನು ಹೇಗೆ ನೀಡಿದಳು?

ಕೇಳುತವೆ ರೋಮಾಂಚ ಲಜ್ಜೆಯ
ಜೋಳಿಯೆದ್ದುದು ಝೋಂಪಿಸಿತು ಪುಳ
ಕಾಳಿ ಭಯವನು ಪಂಟಿಸಿದುದನುರಾಗದಭಿಮಾನ
ಮೇಲೆ ಮೇಲಭಿಲಾಷೆ ಧೈರ್ಯವ
ಚಾಳವಿಸಿ ಪರಿತೋಷ ಪೂರಣ
ದೇಳು ಮುಳುಗಾಯ್ತುತ್ತರಕೆ ನಸುಬಾಗಿದಳು ಶಿರವ (ಅರಣ್ಯ ಪರ್ವ, ೮ ಸಂಧಿ, ೧೦೨ ಪದ್ಯ)

ತಾತ್ಪರ್ಯ:
ಚಿತ್ರಸೇನನ ಮಾತನ್ನು ಕೇಳಿ ಊರ್ವಶಿಯು ರೋಮಾಂಚನಗೊಂಡಳು. ರೋಮಾಂಚನ ದೊಂದಿಗೆ ಲಜ್ಜೆಯು ಆಕೆಯನ್ನು ಆವರಿಸಿತು. ಮೈನವಿರೆದ್ದಿತು. ಭಯವನ್ನು ಅನುರಾಗವು ಮುಚ್ಚಿ ಹಾಕಿತು. ಅರ್ಜುನನ ಮೇಲಿನ ಅಭಿಲಾಷೆಯು ಧೈರ್ಯವನ್ನು ಹೆಚ್ಚಿಸಿತು. ಅತಿಶಯವಾದ ಸಂತೋಷದಲ್ಲಿ ಊರ್ವಶಿಯು ಮುಳುಗಿ ಎದ್ದಳು. ಚಿತ್ರಸೇನನಿಗೆ ಉತ್ತರವಾಗಿ ತಲೆಯನ್ನು ಸ್ವಲ್ಪ ಬಾಗಿಸಿದಳು.

ಅರ್ಥ:
ಕೇಳು: ಆಲಿಸು; ರೋಮಾಂಚನ: ಪುಳುಕಗೊಳ್ಳು; ಲಜ್ಜೆ: ನಾಚಿಕೆ; ಜೋಳಿ:ಗುಂಪು; ಝೋಂಪಿಸು: ಬೆಚ್ಚಿಬೀಳು; ಪುಳಕ: ಮೈನವಿರೇಳುವಿಕೆ; ಭಯ: ಭೀತಿ; ಪಂಟಿಸು: ಮುಚ್ಚು; ಅನುರಾಗ: ಪ್ರೀತಿ; ಅಭಿಮಾನ: ಹೆಮ್ಮೆ, ಅಹಂಕಾರ; ಮೇಲೆ: ಅನಂತರ; ಅಭಿಲಾಷೆ: ಆಸೆ, ಬಯಕೆ; ಧೈರ್ಯ: ಎದೆಗಾರಿಕೆ, ಕೆಚ್ಚು; ಚಾಳನ: ಚಲನೆ; ಪರಿತೋಷ: ಸಂತುಷ್ಟಿ, ಆನಂದ; ಪೂರಣ: ತುಂಬುವುದು; ಮುಳುಗು: ತೋಯು; ಉತ್ತರ: ಏರಿಕೆ; ನಸು: ಸ್ವಲ್ಪ; ಬಾಗು: ಬಗ್ಗು, ಮಣಿ; ಶಿರ: ತಲೆ;

ಪದವಿಂಗಡಣೆ:
ಕೇಳುತವೆ +ರೋಮಾಂಚ +ಲಜ್ಜೆಯ
ಜೋಳಿಯೆದ್ದುದು +ಝೋಂಪಿಸಿತು +ಪುಳ
ಕಾಳಿ +ಭಯವನು +ಪಂಟಿಸಿದುದ್+ಅನುರಾಗದ್+ಅಭಿಮಾನ
ಮೇಲೆ+ ಮೇಲ್+ಅಭಿಲಾಷೆ +ಧೈರ್ಯವ
ಚಾಳವಿಸಿ +ಪರಿತೋಷ +ಪೂರಣದ್
ಏಳು+ ಮುಳುಗಾಯ್ತ್+ಉತ್ತರಕೆ+ ನಸುಬಾಗಿದಳು +ಶಿರವ

ಅಚ್ಚರಿ:
(೧) ಊರ್ವಶಿಯ ಉತ್ತರ – ಮೇಲೆ ಮೇಲಭಿಲಾಷೆ ಧೈರ್ಯವಚಾಳವಿಸಿ ಪರಿತೋಷ ಪೂರಣ
ದೇಳು ಮುಳುಗಾಯ್ತುತ್ತರಕೆ ನಸುಬಾಗಿದಳು ಶಿರವ

ಪದ್ಯ ೧೧೨: ಅರ್ಜುನನು ಏನೆಂದು ಚಿಂತಿಸಿದನು?

ಹರನ ಕೃಪೆಯಂ ಪಡೆವುದರಿದಾ
ದರಿಸುವರೆ ಶಸ್ತ್ರಾಭಿಲಾಷೆಯ
ಮರುಳತನದಲಿ ವ್ಯರ್ಥನಾದೆನಲಾ ಮಹಾದೇವ
ಧರೆಯು ಕಾಮಿತವೆಂದು ಸುಖವನು
ಮರೆದೆನಕಟಕಟಾ ದುರಾಗ್ರಹ
ಪರಿವೃತಂಗೆ ಸುಬುದ್ಧಿಯೇಕಹುದೆಂದನಾ ಪಾರ್ಥ (ಅರಣ್ಯ ಪರ್ವ, ೭ ಸಂಧಿ, ೧೧೨ ಪದ್ಯ)

ತಾತ್ಪರ್ಯ:
ಶಿವನ ಕೃಪೆಯನ್ನು ಪಡೆಯುವುದು ಬಹು ಕಷ್ಟ ಸಾಧ್ಯವಾದುದು ಅವನು ಕೃಪೆ ಮಾಡಿ ನಿನಗೇನು ಬೇಕೆಂದು ಕೇಳಿದಾಗ ಅಸ್ತ್ರವನ್ನು ವರವಾಗಿ ಕೇಳಿ ಹುಚ್ಚುತನದಿಮ್ದ ಅವಕಾಶವನ್ನು ವ್ಯರ್ಥಮಾಡಿಕೊಂಡೆ. ಭೂಮಿಯ ಆಶೆಯಿಂದ ಆನಂದವನ್ನು ಮರೆತೆ. ದುರಾಗ್ರಹ ಪೀಡಿತರಿಗೆ ಸುಬುದ್ಧಿಯೆಲ್ಲಿಂದ ಬಂದೀತು ಎಂದು ಅರ್ಜುನನು ಚಿಂತಿಸಿದನು.

ಅರ್ಥ:
ಹರ: ಶಿವ; ಕೃಪೆ: ದಯೆ; ಪಡೆ: ಗಳಿಸು; ಆದರಿಸು: ಉಪಚಾರಮಾಡು; ಶಸ್ತ್ರ: ಅಸ್ತ್ರ, ಆಯುಧ; ಅಭಿಲಾಷೆ: ಆಸೆ, ಬಯಕೆ; ಮರುಳತನ: ತಿಳಿಗೇಡಿ; ವ್ಯರ್ಥ: ನಿರುಪಯುಕ್ತತೆ; ಧರೆ: ಭೂಮಿ; ಕಾಮಿತ: ಬಯಸಿದ, ಅಪೇಕ್ಷಿಸಿದ; ಸುಖ: ಸಂತೋಷ, ನಲಿವು; ಮರೆ: ನೆನಪಿನಿಂದ ದೂರ ಮಾಡು; ಅಕಟಕಟಾ: ಅಯ್ಯೋ; ದುರಾಗ್ರಹ: ಹಟಮಾರಿತನ; ಪರಿವೃತ: ಆವರಿಸಿದ, ಸುತ್ತುವರಿದ; ಸುಬುದ್ಧಿ: ಒಳ್ಳೆಯ ಬುದ್ಧಿ;

ಪದವಿಂಗಡಣೆ:
ಹರನ +ಕೃಪೆಯಂ +ಪಡೆವುದರಿದ್+
ಆದರಿಸುವರೆ +ಶಸ್ತ್ರ+ಅಭಿಲಾಷೆಯ
ಮರುಳತನದಲಿ+ ವ್ಯರ್ಥನ್+ಆದೆನಲಾ +ಮಹಾದೇವ
ಧರೆಯು +ಕಾಮಿತವೆಂದು +ಸುಖವನು
ಮರೆದೆನ್+ಅಕಟಕಟಾ +ದುರಾಗ್ರಹ
ಪರಿವೃತಂಗೆ +ಸುಬುದ್ಧಿ+ಏಕಹುದ್+ಎಂದನಾ +ಪಾರ್ಥ

ಅಚ್ಚರಿ:
(೧) ಅರ್ಜುನನ ಮನಸ್ಸಿನ ತಳಮಳ – ಶಸ್ತ್ರಾಭಿಲಾಷೆಯ ಮರುಳತನದಲಿ ವ್ಯರ್ಥನಾದೆನಲಾ ಮಹಾದೇವ, ಧರೆಯು ಕಾಮಿತವೆಂದು ಸುಖವನು ಮರೆದೆನಕಟಕಟಾ

ಪದ್ಯ ೯: ವೈಶಂಪಾಯನರು ಜನಮೇಜಯನ ಪ್ರಶ್ನೆಯನ್ನು ಹೇಗೆ ಉತ್ತರಿಸಿದರು?

ಅರಸ ಕೇಳೈ ರಾಜಸಾಂತಃ
ಕರಣವದು ಕಾಮ್ಯೈಕ ಸಿದ್ಧಿ
ಸ್ಫುರಣೆಗೋಸುಗ ತಪವಲೇ ರಾಜ್ಯಾಭಿಲಾಷೆಯಲಿ
ಹರಚರಣ ನಿಕ್ಷಿಪ್ತ ಚೇತಃ
ಸ್ಫುರಣೆ ತತ್ಪರಿಯಂತ ಉಕ್ಕಿತು
ಪರಮವಸ್ತು ನಿಜಸ್ವಭಾವಕೆ ಚಿತ್ರವೇನೆಂದ (ಅರಣ್ಯ ಪರ್ವ, ೬ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಅರ್ಜುನನದು ರಾಜಸ ಗುಣವಿರುವ ಅಂತಃಕರಣ. ರಾಜ್ಯದ ಅಭಿಲಾಷೆಯಿಂದ ಶಸ್ತ್ರಾಸ್ತ್ರಗಳನ್ನು ಬಯಸಿ, ಆ ಕಾಮನೆಯ ಸಿದ್ಧಿಗಾಗಿ ಅವನು ಶಿವನನ್ನು ಏಕನಿಷ್ಠೆಯಿಂದ ಭಜಿಸಿದನು. ಅವನ ಅರಿವು, ಶಿವನಲ್ಲಿಟ್ಟಿರುವವರೆಗೆ ಅದ್ವೈತವಾಗಿತ್ತು. ಇದು ಆತ್ಮನ ಲೀಲೆ. ಇದರಲ್ಲಿ ಆಶ್ಚರ್ಯವೇನು ಇಲ್ಲ ಎಂದು ಉತ್ತರಿಸಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ರಾಜಸ: ರಜೋಗುಣದಿಂದ ಕೂಡಿದವನು; ಅಂತಃಕರಣ: ಮನಸ್ಸು; ಕಾಮ್ಯ:ಇಷ್ಟಾರ್ಥ, ಮನೋರಥ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಸ್ಫುರಣ: ನಡುಗುವುದು; ಓಸುಗ: ಆದ್ದರಿಂದ; ತಪ: ತಪಸ್ಸು; ಅಭಿಲಾಷೆ: ಆಸೆ, ಬಯಕೆ; ರಾಜ್ಯ: ರಾಷ್ಟ್ರ; ಹರ: ಶಿವ; ಚರಣ: ಪಾದ; ನಿಕ್ಷಿಪ್ತ: ಅಡಗಿರುವ; ಚೇತ: ಮನಸ್ಸು; ಪರಿಯಂತ: ವರೆಗೆ, ತನಕ; ಉಕ್ಕು: ಹೆಚ್ಚಾಗು; ಪರಮ: ಪರಮಾತ್ಮ, ಶ್ರೇಷ್ಠ; ಸ್ವಭಾವ: ಹುಟ್ಟುಗುಣ, ಸಹಜಗುಣ; ಚಿತ್ರ: ಆಶ್ಚರ್ಯ;

ಪದವಿಂಗಡಣೆ:
ಅರಸ +ಕೇಳೈ +ರಾಜಸ+ಅಂತಃ
ಕರಣವದು +ಕಾಮ್ಯೈಕ +ಸಿದ್ಧಿ
ಸ್ಫುರಣೆಗ್+ಓಸುಗ+ ತಪವಲೇ+ ರಾಜ್ಯ+ಅಭಿಲಾಷೆಯಲಿ
ಹರಚರಣ +ನಿಕ್ಷಿಪ್ತ +ಚೇತಃ
ಸ್ಫುರಣೆ +ತತ್ಪರಿಯಂತ +ಉಕ್ಕಿತು
ಪರಮವಸ್ತು +ನಿಜಸ್ವಭಾವಕೆ+ ಚಿತ್ರವೇನೆಂದ

ಅಚ್ಚರಿ:
(೧) ಸ್ಫುರಣೆ – ೩, ೫ ಸಾಲಿನ ಮೊದಲ ಪದ
(೨) ಕರಣ, ಚರಣ – ಪ್ರಾಸ ಪದಗಳು

ಪದ್ಯ ೨೩: ಧೃತರಾಷ್ಟ್ರನು ಯಾವ ಪ್ರಶ್ನೆಗಳನ್ನು ಕೇಳಿದನು?

ಏನು ಶಕುನಿ ಮಗಂಗೆ ದುಗುಡವ
ದೇನು ಕಾರಣವಾರ ದೆಸೆಯಿಂ
ದೇನಸಾಧ್ಯವದೇನು ಭಯ ಮೇಣಾವುದಭಿಲಾಷೆ
ಏನುವನು ವಂಚಿಸದೆ ಹೇಳೆ
ನ್ನಾನೆಗೇಕೈ ಮರುಕವೆನೆ ನಿಜ
ಸೂನುವನು ನೀ ಕರೆಸಿ ಬೆಸಗೊಳ್ಳೆಂದನಾ ಶಕುನಿ (ಸಭಾ ಪರ್ವ, ೧೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಮಗನು ದುಃಖದಲ್ಲಿರುವನೆಂದು ತಿಳಿದು ಧೃತರಾಷ್ಟ್ರನು, ಶಕುನಿ ನನ್ನ ಮಗನಿಗೆ ಏನು ದುಃಖ, ಅದಕ್ಕೇನು ಕಾರಣ? ಯಾರ ದೆಸೆಯಿಂದ ಹೀಗಾಯಿತು? ಅವನು ಏನನ್ನು ಬಯಸುತ್ತಾನೆ, ಅದಾಗದಿರಲು ಏನು ಕಾರಣ? ಅವನಿಗೊದಗಿರುವ ಭಯವೇನು? ಇದೆಲ್ಲವನ್ನೂ ಬಿಚ್ಚಿ ಹೇಳು. ನನ್ನಾನೆಗೆ ಯಾವ ಅಳಲು ಬಂದಿದೆ? ಎನ್ನಲು ಶಕುನಿಯು ನೀನೇ ಕರೆಸಿಕೇಳು ಎಂದನು.

ಅರ್ಥ:
ಮಗ: ಪುತ್ರ; ದುಗುಡ: ದುಃಖ; ಕಾರಣ: ಉದ್ದೇಶ, ಆದುದರಿಂದ; ದೆಸೆ: ದಿಕ್ಕು, ಅವಸ್ಥೆ, ಸ್ಥಿತಿ; ಅಸಾಧ್ಯ: ಶಕ್ಯವಲ್ಲದುದು; ಭಯ: ಅಂಜಿಕೆ; ಮೇಣ್: ಮತ್ತು, ಹಾಗೂ; ಅಭಿಲಾಷೆ: ಆಸೆ, ಬಯಕೆ; ವಂಚಿಸು: ಮೋಸ; ಆನೆ: ಮಗನನ್ನು ಕರೆಯುವ ಪರಿ; ಮರುಕ: ಬೇಗುದಿ, ಅಳಲು; ಸೂನು: ಪುತ್ರ; ಕರೆಸು: ಬರೆಮಾಡು; ಬೆಸಸು: ಆಜ್ಞಾಪಿಸು, ಹೇಳು;

ಪದವಿಂಗಡಣೆ:
ಏನು+ ಶಕುನಿ+ ಮಗಂಗೆ +ದುಗುಡವದ್
ಏನು +ಕಾರಣವ್+ಆರ+ ದೆಸೆಯಿಂದ್
ಏನ್+ಅಸಾಧ್ಯವ್+ಅದೇನು +ಭಯ+ ಮೇಣ್+ ಅವುದ್+ಅಭಿಲಾಷೆ
ಏನುವನು +ವಂಚಿಸದೆ +ಹೇಳ್
ಎನ್ನಾನೆಗ್+ಏಕೈ +ಮರುಕವ್+ಎನೆ+ ನಿಜ
ಸೂನುವನು +ನೀ +ಕರೆಸಿ+ ಬೆಸಗೊಳ್ಳೆಂದನಾ+ ಶಕುನಿ

ಅಚ್ಚರಿ:
(೧) ಏನು – ೧-೫ ಸಾಲಿನ ಮೊದಲ ಪದ
(೨) ಮಗ, ಎನ್ನಾನೆ – ದುರ್ಯೋಧನನ್ನು ಕರೆಯುವ ಪರಿ