ಪದ್ಯ ೩೮: ಕೌರವನನ್ನು ಅಮರಗಣ ಹೇಗೆ ಹೊಗಳಿತು?

ಮೇಲೆ ಕಳವಳವಾಯ್ತು ದಿಕ್ಕಿನ
ಮೂಲೆ ಬಿರಿಯೆ ಪಿಶಾಚರಾಕ್ಷಸ
ಜಾಲ ವಿದ್ಯಾಧರ ಮಹೋರಗ ಯಕ್ಷ ಕಿನ್ನರರು
ಆಳು ನೀನಹೆ ನಳ ನಹುಷ ಭೂ
ಪಾಲಕುಲದಲಭಂಗನಾದೆ ಕ
ರಾಳಭುಜಬಲ ನೀನೆನುತ ಕೊಂಡಾಡಿತಮರಗಣಾ (ಗದಾ ಪರ್ವ, ೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ಆಕಾಶದಲ್ಲಿ ಮಹಾಕೋಲಾಹಲವಾಯಿತು. ಪಿಶಾಚರು, ರಾಕ್ಷಸರು, ವಿದ್ಯಾಧರರು, ಉರಗರು, ಯಕ್ಷಕಿನ್ನನರು, ವೀರನೆಂದರೆ ನೀನೇ, ನಲ ನಹುಷದ ವಂಶದಲ್ಲಿ ಹುಟ್ಟಿ ವಿಜಯಿಯಾದೆ. ಕೌರವ, ನೀನು ಕರಾಳ ಬಾಹುಬಲವನ್ನುಳ್ಳವನು ಎಂದು ಕೂಗಿದರು.

ಅರ್ಥ:
ಕಳವಳ: ಗೊಂದಲ; ದಿಕ್ಕು: ದಿಶೆ; ಮೂಲೆ: ಕೊನೆ; ಬಿರಿ: ಹೊಡೆ, ಸೀಳು; ಪಿಶಾಚ: ದೆವ್ವ; ರಾಕ್ಷಸ: ಅಸುರ; ಜಾಲ: ಬಲೆ, ಸಮೂಹ; ಉರಗ: ಹಾವು; ಆಳು: ಪರಾಕ್ರಮಿ, ಶೂರ; ಭೂಪಾಲಕ: ರಾಜ; ಕುಲ: ವಂಶ; ಭಂಗ: ಸೋಲು, ಮುರಿ; ಅಭಂಗ: ಜಯಶಾಲಿ; ಕರಾಳ: ದುಷ್ಟ; ಭುಜಬಲ: ಪರಾಕ್ರಮಿ; ಕೊಂಡಾಡು: ಹೊಗಳು; ಅಮರಗಣ: ದೇವತೆಗಳ ಗುಂಪು;

ಪದವಿಂಗಡಣೆ:
ಮೇಲೆ +ಕಳವಳವಾಯ್ತು +ದಿಕ್ಕಿನ
ಮೂಲೆ +ಬಿರಿಯೆ +ಪಿಶಾಚ+ರಾಕ್ಷಸ
ಜಾಲ +ವಿದ್ಯಾಧರ +ಮಹ+ಉರಗ +ಯಕ್ಷ+ ಕಿನ್ನರರು
ಆಳು +ನೀನಹೆ +ನಳ+ ನಹುಷ +ಭೂ
ಪಾಲ+ಕುಲದಲ್+ಅಭಂಗನಾದೆ +ಕ
ರಾಳ+ಭುಜಬಲ +ನೀನೆನುತ +ಕೊಂಡಾಡಿತ್+ಅಮರಗಣಾ

ಅಚ್ಚರಿ:
(೧) ದುರ್ಯೋಧನನನ್ನು ಹೊಗಳುವ ಪರಿ – ಭೂಪಾಲಕುಲದಲಭಂಗನಾದೆ ಕರಾಳಭುಜಬಲ ನೀನೆನುತ ಕೊಂಡಾಡಿತಮರಗಣಾ

ಪದ್ಯ ೨೦: ಭೀಷ್ಮರು ಯಾರನ್ನು ಅಪ್ಸರೆಯರ ಬಳಿ ಕಳುಹಿಸಿದನು?

ಅಂಗವಿಸಿ ಮರಿಹುಲ್ಲೆ ಖುರದಲಿ
ಸಿಂಗವನು ಹೊಯ್ವಂತೆ ನೃಪರು
ತ್ತುಂಗ ಸಹಸಿಯ ಮೇಲೆ ಕೈಮಾಡಿದರು ಖಡ್ಗದಲಿ
ಅಂಗವಣೆಯನು ಹೊಗಳುತಾ ದಿವಿ
ಜಾಂಗನಾ ಕಾಮುಕರ ಮಾಡಿಯ
ಭಂಗ ಭೀಷ್ಮನು ಮೆರೆದನುನ್ನತ ಬಾಹುವಿಕ್ರಮವ (ಭೀಷ್ಮ ಪರ್ವ, ೯ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜಿಂಕೆಯ ಮರಿಗಳು ತಮ್ಮ ಗೊರಸಿನಿಂದ ಸಿಂಹವನ್ನು ಹೊಡೆವಂತೆ ರಾಜರು ಪ್ರೌಢ ಪ್ರತಾಪಿಯಾದ ಭೀಷ್ಮನನ್ನು ಖಡ್ಗದಿಮ್ದ ಹೊಡೆಯಲು ಬಂದರು. ಅವರ ಸಾಹಸವನ್ನು ಹೊಗಳುತ್ತಾ ಭೀಷ್ಮನು ಅವರು ಅಪ್ಸರ ಸ್ತ್ರೀಯರನ್ನು ಕಾಮಿಸುವಂತೆ ಮಾಡಿದನು.

ಅರ್ಥ:
ಅಂಗವಿಸು: ಬಯಸು, ಸ್ವೀಕರಿಸು; ಮರಿಹುಲ್ಲೆ: ಜಿಂಕೆಮರಿ; ಖುರ: ಕುದುರೆ ದನಕರುಗಳ ಕಾಲಿನ ಗೊರಸು, ಕೊಳಗು; ಸಿಂಗ: ಸಿಂಹ, ಕೇಸರಿ; ಹೊಯ್ವ: ಹೊಡೆಯುವ; ನೃಪ: ರಾಜ; ಉತ್ತುಂಗ: ಉನ್ನತವಾದ; ಸಹಸಿ: ಪರಾಕ್ರಮಿ; ಕೈಮಾಡು: ಹೋರಾಡು; ಖಡ್ಗ: ಕತ್ತಿ; ಅಂಗವಣೆ: ಬಯಕೆ, ಉದ್ದೇಶ; ಹೊಗು: ತೆರಳು; ದಿವಿಜಾಂಗನೆ: ಅಪ್ಸರೆ; ಕಾಮುಕ: ಕಾಮಾಸಕ್ತನಾದವನು, ಲಂಪಟ; ಭಂಗ: ತುಂಡು, ಚೂರು; ಅಭಂಗ: ಸೋಲಿಲ್ಲದ; ಮೆರೆ: ಹೊಳೆ, ಪ್ರಕಾಶಿಸು; ಉನ್ನತ: ಹೆಚ್ಚು; ಬಾಹು: ಭುಜ; ವಿಕ್ರಮ: ಪರಾಕ್ರಮ;

ಪದವಿಂಗಡಣೆ:
ಅಂಗವಿಸಿ +ಮರಿಹುಲ್ಲೆ +ಖುರದಲಿ
ಸಿಂಗವನು +ಹೊಯ್ವಂತೆ +ನೃಪರ್
ಉತ್ತುಂಗ +ಸಹಸಿಯ +ಮೇಲೆ +ಕೈಮಾಡಿದರು +ಖಡ್ಗದಲಿ
ಅಂಗವಣೆಯನು +ಹೊಗಳುತಾ +ದಿವಿ
ಜಾಂಗನಾ +ಕಾಮುಕರ+ ಮಾಡಿ+
ಅಭಂಗ +ಭೀಷ್ಮನು +ಮೆರೆದನ್+ಉನ್ನತ +ಬಾಹುವಿಕ್ರಮವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಂಗವಿಸಿ ಮರಿಹುಲ್ಲೆ ಖುರದಲಿ ಸಿಂಗವನು ಹೊಯ್ವಂತೆ
(೨) ಸಾಯಿಸಿದನು ಎಂದು ಹೇಳಲು – ದಿವಿಜಾಂಗನಾ ಕಾಮುಕರ ಮಾಡಿಯಭಂಗ ಭೀಷ್ಮನು ಮೆರೆದನುನ್ನತ ಬಾಹುವಿಕ್ರಮವ