ಪದ್ಯ ೨೯: ವಂಧಿ ಮಾಗಧರು ಭೀಮನನ್ನು ಹೇಗೆ ಹೊಗಳಿದರು?

ಭಾಪು ಮಝರೇ ಭೀಮ ಕೌರವ
ಭೂಪವಿಲಯಕೃತಾಂತ ಕುರುಕುಲ
ದೀಪಚಂಡಸಮೀರ ಕುರುನೃಪತಿಮಿರಮಾರ್ತಾಂಡ
ಕೋಪನಪ್ರತಿಪಕ್ಷಕುಲನಿ
ರ್ವಾಪಣೈಕಸಮರ್ಥ ಎನುತಭಿ
ರೂಪನನು ಹೊಗಳಿದರು ವಂದಿಗಳಬುಧಿ ಘೋಷದಲಿ (ಗದಾ ಪರ್ವ, ೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಮಾ, ಭಲೇ, ಭೇಷ್, ಕೌರವ ರಾಜರಿಗೆ ಕಾಲಯಮ! ಕೌರವ ಕುಲದೀಪಕ್ಕೆ ಚಂಡಮಾರುತ!, ಕೌರವರೆಂಬ ಕತ್ತಲೆಗೆ ಸೂರ್ಯ!, ಅತಿಕೋಪದ ವೈರಿ ಕುಲವನ್ನು ನಾಶಮಾಡಲು ಸಮರ್ಥನಾದವನೇ ಎಂದು ವಂದಿ ಮಾಗಧರು ಭೀಮನನ್ನು ಹೊಗಳಿದರು.

ಅರ್ಥ:
ಭಾಪು: ಭಲೇ; ಮಝರೇ: ಭೇಷ್; ಭೂಪ: ರಾಜ; ವಿಲಯ: ನಾಶ, ಪ್ರಳಯ; ಕೃತಾಂತ: ಯಮ; ದೀಪ: ದೀವಿಗೆ, ಜೊಡರು; ಚಂಡಸಮೀರ: ಚಂಡಮಾರುತ; ನೃಪತಿ: ರಾಜ; ತಿಮಿರ: ಕತ್ತಲು, ಅಂಧಕಾರ; ಮಾರ್ತಾಂಡ: ಸೂರ್ಯ; ಕೋಪ: ಮುಳಿ, ಕುಪಿತ; ಪ್ರತಿಪಕ್ಷ: ಎದುರಾಳಿ; ಕುಲ: ವಂಶ; ನಿರ್ವಾಪಣ: ನಾಶಮಾಡಲು; ಸಮರ್ಥ: ಯೋಗ್ಯ; ಅಭಿರೂಪ: ಅನುರೂಪವಾದ; ಹೊಗಳು: ಪ್ರಶಂಶಿಸು; ವಂದಿ: ಹೊಗಳುಭಟ್ಟ; ಅಬುಧಿ: ಸಾಗರ; ಘೋಷ: ಕೂಗು;

ಪದವಿಂಗಡಣೆ:
ಭಾಪು +ಮಝರೇ +ಭೀಮ +ಕೌರವ
ಭೂಪ+ವಿಲಯ+ಕೃತಾಂತ +ಕುರುಕುಲ
ದೀಪ+ಚಂಡಸಮೀರ +ಕುರುನೃಪ+ತಿಮಿರ+ಮಾರ್ತಾಂಡ
ಕೋಪನ+ಪ್ರತಿಪಕ್ಷಕುಲ+ನಿ
ರ್ವಾಪಣೈಕ+ಸಮರ್ಥ+ ಎನುತ್+ಅಭಿ
ರೂಪನನು +ಹೊಗಳಿದರು +ವಂದಿಗಳ್+ಅಬುಧಿ +ಘೋಷದಲಿ

ಅಚ್ಚರಿ:
(೧) ಭೀಮನನ್ನು ಹೊಗಳುವ ಪರಿ – ಕೌರವ ಭೂಪವಿಲಯಕೃತಾಂತ; ಕುರುಕುಲ ದೀಪ ಚಂಡಸಮೀರ; ಕುರುನೃಪತಿಮಿರಮಾರ್ತಾಂಡ

ಪದ್ಯ ೧೩: ಎರಡು ಸೈನ್ಯವು ಹೇಗೆ ಹೋರಾಡಿದರು?

ಆಯತಿಕೆಯಲಿ ಬಂದು ಪಾಂಡವ
ರಾಯದಳ ಮೋಹರಿಸಿ ನೀಮ್ದುದು
ರಾಯರಿಬ್ಬರ ಬೀಸುಗೈಗಳ ಸನ್ನೆ ಸಮವಾಗೆ
ತಾಯಿಮಳಲನು ತರುಬಿದಬುಧಿಯ
ದಾಯಿಗರು ತಾವಿವರೆನಲು ಬಿಡೆ
ನೋಯಬೆರಸಿದುದುಭಯಬಲ ಬಲುಖತಿಯ ಬಿಂಕದಲಿ (ಶಲ್ಯ ಪರ್ವ, ೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ಪಾಂಡವರ ಸೇನೆಯು ಸನ್ನದ್ಧವಾಗಿ ಬಂದು ನಿಂತಿತು. ರಾಜರಿಬ್ಬರೂ ಕೈಬೀಸಿ ಯುದ್ಧಾರಂಭಕ್ಕೆ ಏಕಕಾಲದಲ್ಲಿ ಅನುಮತಿಕೊಟ್ಟರು. ಸಮುದ್ರದೊಳಗಿರುವ ಮರಳು ಮೇಲೆದ್ದು ಅಲ್ಲೋಲ ಕಲ್ಲೋಲವಾದ ಸಮುದ್ರಗಳಿಗೆ ಇವರು ದಾಯಾದಿಗಳೆನ್ನುವಂತೆ ಮಹಾಕೋಪದಿಂದ ಒಬ್ಬರೊಡನೊಬ್ಬರು ಹೋರಾಡಿದರು.

ಅರ್ಥ:
ಆಯತಿ: ವಿಸ್ತಾರ; ಬಂದು: ಆಗಮಿಸು; ರಾಯ: ರಾಜ; ದಳ: ಸೈನ್ಯ; ಮೋಹರ: ಯುದ್ಧ; ನಿಂದು: ನಿಲ್ಲು; ಬೀಸು: ಅಲ್ಲಾಡಿಸು; ಕೈ: ಹಸ್ತ; ಸನ್ನೆ: ಗುರುತು; ಸಮ: ಸರಿಸಮಾನವಾದುದು; ತಾಯಿಮಳಲು: ಸಮುದ್ರದಡಿಯಲ್ಲಿರುವ ಮರಳು; ತರುಬು: ತಡೆ, ನಿಲ್ಲಿಸು; ಅಬುಧಿ: ಸಾಗರ; ದಾಯಿಗ: ದಾಯಾದಿ; ನೋಯ: ನೋವು; ಬೆರಸು: ಕಲಿಸು; ಉಭಯ: ಎರದು; ಬಲು: ಬಹಳ; ಖತಿ: ಕೋಪ; ಬಿಂಕ: ಗರ್ವ, ಜಂಬ, ಠೀವಿ;

ಪದವಿಂಗಡಣೆ:
ಆಯತಿಕೆಯಲಿ +ಬಂದು +ಪಾಂಡವ
ರಾಯದಳ +ಮೋಹರಿಸಿ+ ನಿಂದುದು
ರಾಯರಿಬ್ಬರ +ಬೀಸುಗೈಗಳ +ಸನ್ನೆ+ ಸಮವಾಗೆ
ತಾಯಿಮಳಲನು +ತರುಬಿದ್+ಅಬುಧಿಯ
ದಾಯಿಗರು+ ತಾವಿವರೆನಲು +ಬಿಡೆ
ನೋಯ+ಬೆರಸಿದುದ್+ಉಭಯಬಲ+ ಬಲು+ಖತಿಯ +ಬಿಂಕದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ತಾಯಿಮಳಲನು ತರುಬಿದಬುಧಿಯ ದಾಯಿಗರು ತಾವಿವರೆನಲು

ಪದ್ಯ ೩: ಸೈನಿಕರು ಹೇಗೆ ಘಟೋತ್ಕಚನನ್ನು ಆವರಿಸಿದರು?

ಎಡಬಲದಿ ಹಿಂದಿದಿರಿನಲಿ ಕೆಲ
ಕಡೆಯ ದಿಕ್ಕಿನೊಳೌಕಿದರು ಬಲು
ಗಡಲ ಕಡೆಹದ ಹಿರಿಯನಬುಧಿಯ ತೆರೆಗಲೊದೆವಂತೆ
ಕೊಡಹಿದರೆ ಕಟ್ಟಿರುಹೆಗಳು ಬೆಂ
ಬಿಡದೆ ಭುಜಗನನಳಿಸುವವೋ
ಲಡಸಿ ತಲೆಯೊತ್ತಿದರು ಬೀಳುವ ಹೆಣನನೊಡಮೆಟ್ಟಿ (ದ್ರೋಣ ಪರ್ವ, ೧೬ ಸಂಧಿ, ೩ ಪದ್ಯ)

ತಾತ್ಪರ್ಯ:
ಎಡಬಲ ಹಿಂದೆ ಮುಂದೆ ಉಳಿದ ದಿಕ್ಕುಗಲಲ್ಲಿ ನುಗ್ಗಿ ಮಂದರಪರ್ವತವನ್ನು ಸಮುದ್ರದ ತೆರೆಗಳು ಅಪ್ಪಳಿಸುವಮ್ತೆ ಸೈನಿಕರು ನುಗ್ಗಿದರು. ಅವರನ್ನು ದೂರಕ್ಕೆ ದಬ್ಬಿದರೆ, ಕಟ್ಟಿರುವೆಗಳು ಹಾವನ್ನು ಮುತ್ತಿಕೊಂಡಂತೆ ಬಿದ್ದ ಹೆಣಗಲನ್ನು ತುಳಿದು ಘಟೋತ್ಕಚನ ಮೇಲೆ ಹಾಯ್ದರು.

ಅರ್ಥ:
ಎಡಬಲ: ಅಕ್ಕಪಕ್ಕ; ಹಿಂದೆ: ಹಿಂಭಾಗ; ಇದಿರು: ಎದುರು; ದಿಕ್ಕು: ದಿಶ; ಔಕು: ಒತ್ತು; ಬಲು: ಬಹಳ; ಕಡಲ: ಸಾಗರ; ಗಿರಿ: ಬೆಟ್ಟ; ಅಬುಧಿ: ಸಾಗರ; ತೆರೆ: ಅಲೆ, ತರಂಗ; ಒದೆ: ತುಳಿ, ಮೆಟ್ಟು; ಕೊಡಹು: ಬೆನ್ನುಬಿಡು; ಭುಜ: ಬಾಹು; ಅಳಿಸು: ನಾಶ; ಅಡಸು: ಆಕ್ರಮಿಸು, ಮುತ್ತು; ತಲೆ: ಶಿರ; ಬೀಳು: ಬಾಗು; ಹೆಣ: ಜೀವವಿಲ್ಲದ ಶರೀರ; ಇರುಹೆ: ಇರುವೆ;

ಪದವಿಂಗಡಣೆ:
ಎಡಬಲದಿ +ಹಿಂದ್+ಇದಿರಿನಲಿ +ಕೆಲ
ಕಡೆಯ +ದಿಕ್ಕಿನೊಳ್+ಔಕಿದರು +ಬಲು
ಕಡಲ+ ಕಡೆಹದ +ಹಿರಿಯನ್+ಅಬುಧಿಯ +ತೆರೆಗಳ್+ಒದೆವಂತೆ
ಕೊಡಹಿದರೆ+ ಕಟ್ಟಿರುಹೆಗಳು +ಬೆಂ
ಬಿಡದೆ +ಭುಜಗನನ್+ಅಳಿಸುವವೋಲ್
ಅಡಸಿ +ತಲೆಯೊತ್ತಿದರು +ಬೀಳುವ +ಹೆಣನ್+ಒಡಮೆಟ್ಟಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಲುಗಡಲ ಕಡೆಹದ ಹಿರಿಯನಬುಧಿಯ ತೆರೆಗಲೊದೆವಂತೆ; ಕಟ್ಟಿರುಹೆಗಳು ಬೆಂಬಿಡದೆ ಭುಜಗನನಳಿಸುವವೋಲ್

ಪದ್ಯ ೨೮: ಕುಂತಿ ಕರ್ಣರ ಸಮಾಗಮ ಹೇಗಿತ್ತು?

ಬರಲು ತಾಯ್ಗಿದಿರಾಗಿ ರವಿಸುತ
ನಿರದೆ ಬಂದನು ದಂಡದಂತಿರೆ
ಚರಣದೊಳು ಮೈಯಿಕ್ಕಲಾತನ ನೊಸಲ ನೆಗಹಿದಳು
ಬರಸೆಳೆದು ಬಿಗಿಯಪ್ಪಿದಳು ನೀ
ರುರವಣಿಸಿದುದು ನಯನದೊಳು ಸೆರೆ
ಕೊರಳಿಗೌಕಿದುದಳಲಿನಬುಧಿಯೊಳಿದ್ದಳಾ ಕುಂತಿ (ಉದ್ಯೋಗ ಪರ್ವ, ೧೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಜಪವನ್ನು ಮುಗಿಸಿ ಬರುತ್ತಿರಲು ತನ್ನೆದುರಿಗೆ ಕುಂತಿಯನ್ನು ಕಾಣಲು ಆಕೆಯ ಎದುರಿಗೆ ಬಂದು ದಂಡದಂತೆ ಕಾಲ ಮೇಲೆ ಬಿದ್ದು ನಮಸ್ಕರಿಸಿದನು. ಕುಂತಿಯು ತನ್ನ ದುಃಖವನ್ನು ತಾಳಲಾರದೆ ಅವನ ಹಣೆಯನ್ನು ಹಿಡಿದು, ಬರಸೆಳೆದು ಪುತ್ರವಾತ್ಸಲ್ಯದಿಂದ ಗಟ್ಟಿಯಾಗಿ ಅಪ್ಪಿಕೊಂಡಳು. ಅವಳ ಕಂಠ ಗದ್ಗತಿತವಾಗಿತ್ತು ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿದು ಶೋಕಸಾಗರದಲ್ಲಿ ಮುಳುಗಿದಳು.

ಅರ್ಥ:
ಬರಲು: ಆಗಮಿಸು; ತಾಯಿ: ಮಾತೆ; ರವಿಸುತ: ಕರ್ಣ; ರವಿ: ಸೂರ್ಯ, ಭಾನು; ಸುತ: ಮಗ; ಇದಿರು: ಎದುರು, ಮುಂದೆ; ಬಂದನು: ಆಗಮಿಸು; ದಂಡ: ಕೋಲು; ಚರಣ: ಪಾದ; ಮೈಯಿಕ್ಕು: ನಮಸ್ಕರಿಸು; ನೊಸಲು: ಹಣೆ; ನೆಗಳು: ಕೈಗೊಳ್ಳು; ನೆಗಹು: ಮೇಲೆತ್ತು; ಸೆಳೆ: ಹತ್ತಿರ ಕರೆದುಕೋ; ಬಿಗಿ: ಗಟ್ಟಿ; ಅಪ್ಪಿ: ಆಲಿಂಗನ, ತಬ್ಬಿಕೊ; ನೀರು: ಜಲ; ಉರವಣಿಸು: ಆತುರಿಸು; ನಯನ: ಕಣ್ಣು; ಸೆರೆ: ಒಂದು ಕೈಯ ಬೊಗಸೆ; ಕೊರಳು: ಕತ್ತು; ಔಕು: ಒತ್ತು; ಅಳಲು:ಶೋಕ; ಅಬುಧಿ: ಸಮುದ್ರ;

ಪದವಿಂಗಡಣೆ:
ಬರಲು +ತಾಯ್ಗಿ+ಇದಿರಾಗಿ+ ರವಿಸುತನ್
ಇರದೆ+ ಬಂದನು +ದಂಡ+ದಂತಿರೆ
ಚರಣದೊಳು +ಮೈಯಿಕ್ಕಲ್+ಆತನ +ನೊಸಲ +ನೆಗಹಿದಳು
ಬರಸೆಳೆದು+ ಬಿಗಿಯಪ್ಪಿದಳು +ನೀರ್
ಉರವಣಿಸಿದುದು +ನಯನದೊಳು +ಸೆರೆ
ಕೊರಳಿಗ್+ಔಕಿದುದ್+ಅಳಲಿನ್+ಅಬುಧಿಯೊಳ್+ಇದ್ದಳಾ +ಕುಂತಿ

ಅಚ್ಚರಿ:
(೧) ಕಣ್ಣಲ್ಲಿ ನೀರು ತುಂಬಿತು ಎಂದು ಹೇಳಲು – ನೀರುರವಣಿಸಿದುದು ನಯನದೊಳು
(೨) ದುಃಖದಲ್ಲಿದ್ದಳು ಎಂದು ಹೇಳಲು – ಸೆರೆ ಕೊರಳಿಗೌಕಿದುದಳಲಿನಬುಧಿಯೊಳಿದ್ದಳಾ ಕುಂತಿ
(೩) ನಮಸ್ಕರಿಸಿದನು ಎಂದು ಹೇಳಲು – ಚರಣದೊಳು ಮೈಯಿಕ್ಕಲ್