ಪದ್ಯ ೧೪: ವ್ಯಾಸರು ಗಾಂಧಾರಿಗೆ ಏನೆಂದು ಹೇಳಿದರು?

ತಾಯೆ ಹದುಳಿಸು ದೇವಲೋಕದ
ಲಾಯದಲಿ ಸಲಿಸಾ ಕುಮಾರರ
ನಾಯುಷದ ಲಿಪಿ ಹಣೆಯಲೊರಸಿದಡಾರ ವಶವಿದಕೆ
ರಾಯನಲಿ ಸೊಸೆಯರಿಗೆ ಮಿಕ್ಕಬು
ಜಾಯತಾಕ್ಷಿಯರಿಗೆ ವಿಶೋಕದ
ಬಾಯಿನವ ಕೊಡಿಸೆಂದನಾ ಮುನಿ ಸುಬಲನಂದನೆಗೆ (ಗದಾ ಪರ್ವ, ೧೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ವ್ಯಾಸರು ಗಾಂಧಾರಿಯನ್ನುದ್ದೇಶಿಸಿ, ತಾಯಿ, ಹಣೆಯ ಮೇಲೆ ಬರೆದ ಆಯುಷ್ಯದ ಲಿಪಿ ಅಳಿಸಿ ಹೊದರೆ ಯಾರು ಮಾಡುವುದೇನು? ಸಮಾಧಾನದಿಮ್ದ ನಿನ್ನ ಮಕ್ಕಳ ಪಿತೃ ಕಾರ್ಯವನ್ನು, ಅವರನ್ನು ದೇವಲೋಕಕ್ಕೆ ಹೋಗಲು ಏನು ಮಾಡಿಸಬೇಕೋ ಅದನ್ನು ಮಾಡಿಸು. ನಿನ್ನ ಸೊಸೆಯರ ಶೋಕವನ್ನು ಸಮಾಧಾನ ಪಡಿಸಿದರೆ ಅದು ಅವರಿಗೆ ಬಾಗಿನ ಎಂದು ಹೇಳಿದನು.

ಅರ್ಥ:
ತಾಯೆ: ಮಾತೆ; ಹದುಳಿಸು: ಸಮಾಧಾನಗೊಳ್ಳು, ನೆಮ್ಮದಿಗೊಳ್ಳು; ದೇವಲೋಕ: ಸ್ವರ್ಗ; ಲಾಯ: ಅಶ್ವಶಾಲೆ; ಸಲಿಸು: ದೊರಕಿಸಿ ಕೊಡು, ಪೂರೈಸು; ಕುಮಾರ: ಮಕ್ಕಳು; ಆಯುಷ: ಜೀವಿತಾವಧಿ; ಲಿಪಿ: ಬರಹ; ಹಣೆ: ಲಲಾಟ; ಒರಸು: ಅಳಿಸು; ವಶ: ಅಧೀನ, ಅಂಕೆ; ರಾಯ: ರಾಜ; ಸೊಸೆ: ಮಗನ ಹೆಂಡತಿ; ಮಿಕ್ಕ: ಉಳಿದ; ಅಬುಜಾಯತಾಕ್ಷಿ: ಕಮಲದಂತ ಕಣ್ಣುಳ್ಳವಳು (ಹೆಣ್ಣು); ವಿಶೋಕ: ದುಃಖ; ಬಾಯಿನ: ಬಾಗಿನ, ಉಡುಗೊರೆ; ಕೊಡು: ನೀದು; ಮುನಿ: ಋಷಿ; ನಂದನೆ: ಮಗಳು;

ಪದವಿಂಗಡಣೆ:
ತಾಯೆ +ಹದುಳಿಸು +ದೇವಲೋಕದ
ಲಾಯದಲಿ +ಸಲಿಸ್+ಆ +ಕುಮಾರರನ್
ಆಯುಷದ +ಲಿಪಿ +ಹಣೆಯಲ್+ಒರಸಿದಡ್+ಆರ+ ವಶವಿದಕೆ
ರಾಯನಲಿ+ ಸೊಸೆಯರಿಗೆ +ಮಿಕ್ಕ್+ಅಬು
ಜಾಯತಾಕ್ಷಿಯರಿಗೆ+ ವಿಶೋಕದ
ಬಾಯಿನವ +ಕೊಡಿಸೆಂದನಾ +ಮುನಿ +ಸುಬಲ+ನಂದನೆಗೆ

ಅಚ್ಚರಿ:
(೧) ಗಾಂಧಾರಿಯನ್ನು ತಾಯೆ, ಸುಬಲನಂದನೆ ಎಂದು ಕರೆದಿರುವುದು
(೨) ಸ್ವರ್ಗವೆಂದು ಹೇಳಲು – ದೇವಲೋಕದ ಲಾಯ ಪದದ ಬಳಕೆ
(೩) ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳುವ ಪರಿ – ಕುಮಾರರ ನಾಯುಷದ ಲಿಪಿ ಹಣೆಯಲೊರಸಿದಡಾರ ವಶವಿದಕೆ

ಪದ್ಯ ೧೦೪: ಊರ್ವಶಿಯು ತನ್ನ ಚಿತ್ತದಲ್ಲಿ ಯಾರ ಚಿತ್ರವನ್ನು ಬಿಡಿಸಿದಳು?

ರಾಯನಟ್ಟಿದ ನೇಮಗಡ ಕಮ
ನೀಯವಲ್ಲಾ ನಿನ್ನ ನುಡಿ ರಮ
ಣೀಯತರವಿದು ನಿನ್ನ ರಚನೆ ಮಹಾನುಭಾವನಲೆ
ಆಯಿತಿದು ನೀ ಹೋಗೆನುತಲಬು
ಜಾಯತಾಕ್ಷಿ ಮಹೋತ್ಸವದಿ ನಾ
ರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ (ಅರಣ್ಯ ಪರ್ವ, ೮ ಸಂಧಿ, ೧೦೪ ಪದ್ಯ)

ತಾತ್ಪರ್ಯ:
ಚಿತ್ರಸೇನನ ಮಾತಿಗೆ ಊರ್ವಶಿಯು, ಇದು ದೇವೇಂದ್ರನ ಆಜ್ಞೆಯಲ್ಲವೇ? ನಿನ್ನ ಮಾತು ಅತೀವ ಮಧುರವಾಗಿದೆ, ನೀನು ರಚಿಸಿರುವ ಈ ಸಂಯೋಗವು ಅತ್ಯಂತ ಮನೋಹರವಾದುದು, ಇದು ಹೆಚ್ಚಿನ ಅನುಭಾವವಾಯಿತು, ನೀನು ಇನ್ನು ತೆರಳು ಎಂದು ಹೇಳಿ ತನ್ನ ಚಿತ್ತಪಟದಲ್ಲಿ ಅರ್ಜುನನ ಚಿತ್ರವನ್ನು ಬಿಡಿಸಿದಳು.

ಅರ್ಥ:
ರಾಯ: ರಾಜ; ಅಟ್ಟು: ಕಳಿಸು; ನೇಮ: ನಿಯಮ, ಆಜ್ಞೆ; ಗಡ: ಅಲ್ಲವೆ; ಕಮನೀಯ: ಮನೋಹರ, ಸುಂದರ; ನುಡಿ: ಮಾತು; ರಮಣೀಯ: ಸುಂದರವಾದ, ಚೆಲುವಾದ; ರಚನೆ: ನಿರ್ಮಾಣ; ಮಹಾ: ದೊಡ್ಡ, ಶ್ರೇಷ್ಠ; ಅನುಭಾವ: ಅತೀಂದ್ರಿಯವಾದ ಅನುಭವ, ಸಾಕ್ಷಾತ್ಕಾರ; ಹೋಗು: ತೆರಳು; ಅಬುಜಾಯತಾಕ್ಷಿ: ಕಮಲದಂತ ಕಣ್ಣಿರುವ; ಅಕ್ಷಿ: ಕಣ್ಣು; ಅಬುಜ: ಕಮಲ; ಆಯತ: ಅಗಲ; ಮಹೋತ್ಸವ: ಸಮಾರಂಭ; ನಾರಾಯಣ: ವಿಷ್ಣು; ಮೈದುನ: ತಂಗಿಯ ಗಂಡ; ಬರೆ: ಲಿಖಿಸು; ಚಿತ್ತ: ಮನಸ್ಸು; ಭಿತ್ತಿ: ಮುರಿ, ಸೀಳು;

ಪದವಿಂಗಡಣೆ:
ರಾಯನ್+ಅಟ್ಟಿದ +ನೇಮ+ಗಡ +ಕಮ
ನೀಯವಲ್ಲಾ +ನಿನ್ನ +ನುಡಿ +ರಮ
ಣೀಯತರವಿದು +ನಿನ್ನ +ರಚನೆ +ಮಹಾನುಭಾವನಲೆ
ಆಯಿತಿದು+ ನೀ ಹೋಗ್+ಎನುತಲ್ +ಅಬುಜ
ಆಯತಾಕ್ಷಿ+ ಮಹೋತ್ಸವದಿ+ ನಾ
ರಾಯಣನ +ಮೈದುನನ+ ಬರೆದಳು +ಚಿತ್ತ+ಭಿತ್ತಿಯಲಿ

ಅಚ್ಚರಿ:
(೧) ಅರ್ಜುನನನ್ನು ನಾರಾಯಣನ ಮೈದುನ ಎಂದು ಕರೆದಿರುವುದು
(೨) ಅರ್ಜುನನಿಗೆ ಮನಸ್ಸನ್ನು ನೀಡಿದಳು ಎಂದು ಹೇಳುವ ಪರಿ – ಅಬುಜಾಯತಾಕ್ಷಿ ಮಹೋತ್ಸವದಿ ನಾರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ
(೩) ರಮಣೀಯ, ಕಮನೀಯ – ಪ್ರಾಸ ಪದಗಳು

ಪದ್ಯ ೫೮: ಪ್ರಾತಿಕಾಮಿಕನು ದುರ್ಯೋಧನನ ಬಳಿ ಬಂದು ಏನು ಹೇಳಿದ?

ಜೀಯ ದೇವಿಯರೆಂದ ಮಾತಿದು
ರಾಯ ಮುನ್ನವೆ ತನ್ನ ಸೋತಬು
ಜಾಯತಾಕ್ಷಿಯ ಬಳಿಕ ಸೋತರೆ ಧರ್ಮಸೂಕ್ಷ್ಮದಲಿ
ರಾಯ ಸಭೆಯಲಿ ಹಿರಿಯರರಿದಿದ
ರಾಯತನವನರುಹಿದರೆ ಬಹೆನೆಂ
ದಾ ಯುವತಿ ಬಿನ್ನಹವ ಮಾಡಿದಳೆಂದು ಕೈಮುಗಿದ (ಸಭಾ ಪರ್ವ, ೧೫ ಸಂಧಿ, ೫೮ ಪದ್ಯ)

ತಾತ್ಪರ್ಯ:
ಪ್ರಾತಿಕಾಮಿಕನು ದುರ್ಯೋಧನನಿಗೆ ನಮಸ್ಕರಿಸುತ್ತಾ, ಒಡೆಯಾ ದ್ರೌಪದೀ ದೇವಿಯು ಈ ರೀತಿಯಾಗಿ ನಿಮ್ಮ ಬಳಿ ಕೇಳಲು ಹೇಳಿದಳು, ಧರ್ಮರಾಯನು ತನ್ನನ್ನು ಮೊದಲು ಸೋತು ಆಮೇಲೆ ನನ್ನನ್ನು ಸೋಲುವುದು ಸರಿಯಾದ ಕ್ರಮವೇ? ರಾಜ ಸಭೆಯಲ್ಲಿರುವ ಹಿರಿಯರು ಈ ಧರ್ಮಸೂಕ್ಷ್ಮವನ್ನು ಪರಿಶೀಲಿಸಿ ಹೇಳಿದರೆ ನಾನು ಬರುತ್ತೇನೆ ಎಂದು ದ್ರೌಪದಿಯು ಹೇಳಿರುವಳೆಂದು ತಿಳಿಸಿದನು.

ಅರ್ಥ:
ಜೀಯ: ಒಡೆಯ; ದೇವಿ: ಸ್ತ್ರೀ; ಮಾತು: ವಾಣಿ, ನುಡಿ; ರಾಯ: ರಾಜ; ಮುನ್ನ: ಮೊದಲು; ಸೋಲು: ಪರಾಭವ; ಅಬುಜಾಯತಾಕ್ಷಿ: ಕಮಲದಂತ ಕಣ್ಣುಳ್ಳವ (ದ್ರೌಪದಿ); ಬಳಿಕ: ನಂತರ; ಧರ್ಮ: ಧಾರಣೆ ಮಾಡಿದುದು, ನಿಯಮ; ಸೂಕ್ಷ್ಮ: ನಿರ್ದಿಷ್ಟವಾದ; ಸಭೆ: ಓಲಗ; ಹಿರಿಯರು: ತಿಳಿದವರು, ದೊಡ್ಡವರು; ಆಯತ: ಉಚಿತವಾದ ಕ್ರಮ; ಅರುಹು: ತಿಳಿಸು; ಬಹೆ: ಬರುವೆ; ಯುವತಿ: ಹೆಣ್ಣು; ಬಿನ್ನಹ: ಮನವಿ; ಕೈಮುಗಿದ: ನಮಸ್ಕರಿಸು;

ಪದವಿಂಗಡಣೆ:
ಜೀಯ +ದೇವಿಯರೆಂದ+ ಮಾತಿದು
ರಾಯ +ಮುನ್ನವೆ +ತನ್ನ +ಸೋತ್+ಅಬು
ಜಾಯತಾಕ್ಷಿಯ +ಬಳಿಕ+ ಸೋತರೆ+ ಧರ್ಮಸೂಕ್ಷ್ಮದಲಿ
ರಾಯ+ ಸಭೆಯಲಿ +ಹಿರಿಯರರ್+ಇದರ್
ಆಯತನವನ್+ಅರುಹಿದರೆ +ಬಹೆನೆಂದ್
ಆ+ ಯುವತಿ+ ಬಿನ್ನಹವ+ ಮಾಡಿದಳೆಂದು +ಕೈಮುಗಿದ

ಅಚ್ಚರಿ:
(೧) ರಾಯ, ಜೀಯ – ಸಾಮ್ಯಾರ್ಥ ಪದ
(೨) ಯುವತಿ, ಅಬುಜಾಯತಾಕ್ಷಿ, ದೇವಿ – ದ್ರೌಪದಿಯನ್ನು ಕರೆದ ಬಗೆ