ಪದ್ಯ ೧೮: ಕೀಚಕನು ದ್ರೌಪದಿಗೆ ಏನು ಹೇಳಿದನು?

ಖಳನ ಮನದಿಂಗಿತವನಾಗಳೆ
ತಿಳಿದು ಕಾಮಿನಿ ಬೆದರಿದಳು ಕಳ
ವಳಿಗ ಸೋತನು ಕೆಟ್ಟೆನೆಂದಳು ತನ್ನ ಮನದೊಳಗೆ
ತೊಲಗಿ ಹಿಂದಡಿಯಿಡಲು ಕೀಚಕ
ನಳುಕದೈತಂದಬುಜವದನೆಯ
ಬಳಿಗೆ ಬಂದನು ನುಡಿಸಲಾಗದೆ ತರಳೆ ನೀನೆಂದ (ವಿರಾಟ ಪರ್ವ, ೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕೀಚಕನ ಮನಸ್ಸಿನ ಇಂಗಿತವನ್ನು ದ್ರೌಪದಿ ತಿಳಿದಳು. ಇವನು ಕಾಮದ ಕಳವಳಕ್ಕೆ ಗುರಿಯಾಗಿದ್ದಾನೆ, ನಾನು ಕೆಟ್ಟೆ ಎಂದು ಯೋಚಿಸಿ, ಹಿಂದಕ್ಕೆ ಹೆಜ್ಜೆಯಿಟ್ಟಳು, ಅವನು ಹೆದರದೆ ಅವಳ ಬಳಿಗೆ ಬಂದು, ತರಳೆ ನನ್ನನ್ನು ಮಾತನಾಡಿಸಬಾರದೇ ಎಂದು ಕೇಳಿದನು.

ಅರ್ಥ:
ಖಳ: ದುಷ್ಟ; ಮನ: ಮನಸ್ಸು; ಇಂಗಿತ: ಆಶಯ, ಅಭಿಪ್ರಾಯ; ತಿಳಿ: ಅರಿ; ಕಾಮಿನಿ: ಹೆಣ್ಣು; ಬೆದರು: ಹೆದರು; ಕಳವಳ: ಗೊಂದಲ; ಸೋತು: ಪರಾಭವ; ಕೆಟ್ಟೆ: ನಾಶ, ಕೆಡು; ಮನ: ಮನಸ್ಸು; ತೊಲಗು: ದೂರ ಸರಿ; ಹಿಂದಡಿ: ಹಿಮ್ಮೆಟ್ಟು; ಅಳುಕು: ಹೆದರು; ಐತಂದು: ಬಂದು ಸೇರು; ಅಬುಜವದನೆ: ಕಮಲದಂತಹ ಮುಖ; ಬಳಿ: ಹತ್ತಿರ; ನುಡಿಸು: ಮಾತನಾಡು; ತರಳೆ: ಹೆಣ್ಣು;

ಪದವಿಂಗಡಣೆ:
ಖಳನ+ ಮನದ್+ಇಂಗಿತವನ್+ಆಗಳೆ
ತಿಳಿದು +ಕಾಮಿನಿ +ಬೆದರಿದಳು+ ಕಳ
ವಳಿಗ +ಸೋತನು +ಕೆಟ್ಟೆನೆಂದಳು +ತನ್ನ +ಮನದೊಳಗೆ
ತೊಲಗಿ +ಹಿಂದಡಿಯಿಡಲು+ ಕೀಚಕನ್
ಅಳುಕದ್+ಐತಂದ್+ಅಬುಜವದನೆಯ
ಬಳಿಗೆ +ಬಂದನು +ನುಡಿಸಲಾಗದೆ+ ತರಳೆ +ನೀನೆಂದ

ಅಚ್ಚರಿ:
(೧) ಕಾಮಿನಿ, ಅಬುಜವದನೆ, ತರಳೆ – ದ್ರೌಪದಿಯನ್ನು ಕರೆದ ಪರಿ

ಪದ್ಯ ೬: ಭೀಮನು ದ್ರೌಪದಿಗೆ ಏನು ಹೇಳಿದನು?

ಹಿರಿದು ಸೊಗಸಾಯ್ತೆನಗಪೂರ್ವದ
ಪರಿಮಳದ ಕೇಳಿಯಲಿ ನೀನಾ
ಸರಸಿಜವ ತಂದಿತ್ತು ತನ್ನ ಮನೋಗತ ವ್ಯಥೆಯ
ಪರಿಹರಿಪುದೆನಲಬುಜವದನೆಯ
ಕುರುಳನಗುರಲಿ ತಿದ್ದಿದನು ತ
ತ್ಸರಸಿಜವ ತಹೆನೆನುತ ಕೊಂಡನು ನಿಜ ಗದಾಯುಧವ (ಅರಣ್ಯ ಪರ್ವ, ೧೧ ಸಂಧಿ, ೬ ಪದ್ಯ)

ತಾತ್ಪರ್ಯ:
ದ್ರೌಪದಿಯು ಭೀಮನ ಬಳಿ ಬಂದು, ಈ ಪುಷ್ಪದ ಅಪೂರ್ವ ಪರಿಮಳವು ನನಗೆ ಬಹಳ ಇಷ್ಟವಾಗಿದೆ. ಅದನ್ನು ತಂದು ಕೊಟ್ಟು ನನ್ನ ಮನಸ್ಸಿನ ಇಚ್ಛೆಯನ್ನು ಪೂರೈಸಲೆಂದು ಕೇಳಲು, ಭೀಮನು ಪ್ರೀತಿಯಿಂದ ತನ್ನು ಉಗುರಿನಿಂದ ಆಕೆಯ ಮುಂಗುರುಳನ್ನು ಸರಿಪಡಿಸಿ, ಆ ಪದ್ಮವನ್ನು ತರುವೆನೆಂದು ಹೇಳಿ ತನ್ನ ಗದೆಯನ್ನು ತೆಗೆದುಕೊಂಡು ಹೊರಟನು.

ಅರ್ಥ:
ಹಿರಿದು: ದೊಡ್ಡದು, ಶ್ರೇಷ್ಠ; ಸೊಗಸು: ಚೆಲುವು; ಪೂರ್ವ: ಮೂಡಣ; ಪರಿಮಳ: ಸುಗಂಧ; ಕೇಳಿ:ವಿನೋದ; ಸರಸಿಜ: ಕಮಲ; ತಂದು: ಪಡೆದು; ಮನೋಗತ: ಮನಸ್ಸಿನಲ್ಲಿರುವ, ಅಭಿಪ್ರಾಯ; ವ್ಯಥೆ: ಯಾತನೆ; ಪರಿಹರಿಸು: ನಿವಾರಿಸು; ಅಬುಜ: ಕಮಲ; ವದನ: ಮುಖ; ಕುರುಳ: ಮುಂಗುರುಳು; ಉಗುರು: ನಖ; ತಿದ್ದು: ಸರಿಪಡಿಸು; ಸರಸಿಜ: ಕಮಲ; ತಹೆ: ತರುವೆ; ಕೊಂಡು: ತೆಗೆದುಕೊ; ಗಧೆ: ಮುದ್ಗರ;

ಪದವಿಂಗಡಣೆ:
ಹಿರಿದು +ಸೊಗಸಾಯ್ತ್+ಎನಗ್+ಪೂರ್ವದ
ಪರಿಮಳದ+ ಕೇಳಿಯಲಿ +ನೀನ್ +ಆ
ಸರಸಿಜವ +ತಂದಿತ್ತು +ತನ್ನ +ಮನೋಗತ+ ವ್ಯಥೆಯ
ಪರಿಹರಿಪುದ್+ಎನಲ್+ಅಬುಜವದನೆಯ
ಕುರುಳನ್+ಉಗುರಲಿ +ತಿದ್ದಿದನು +ತತ್
ಸರಸಿಜವ +ತಹೆನೆನುತ +ಕೊಂಡನು +ನಿಜ +ಗದಾಯುಧವ

ಅಚ್ಚರಿ:
(೧) ಭೀಮನ ಪ್ರೀತಿಯನ್ನು ತೋರುವ ಪರಿ – ಅಬುಜವದನೆಯ ಕುರುಳನಗುರಲಿ ತಿದ್ದಿದನು
(೨) ಸರಸಿಜ, ಅಬುಜ – ಸಮನಾರ್ಥಕ ಪದ

ಪದ್ಯ ೮೩: ಭೀಮನು ದ್ರೌಪದಿಯನ್ನು ಹೇಗೆ ಸಿಂಗರಿಸಿದನು?

ಖಳನ ತೆಳುದೊಗಲುಗಿದು ವಾಸ
ಚ್ಛಲವ ಸಲಿಸಿದನವನ ಜಠರದೊ
ಳೊಳಗರುಳನುಗಿದಬುಜವದನೆಯ ಮುಡಿಗೆ ಮುಡಿಸಿದನು
ತಳುಕಿದನು ಖಳನುರದ ರಕ್ತದ
ತಿಳಕವನು ರಚಿಸಿದನು ಹರುಷದೊ
ಳುಲಿದು ಚೀಚಕವೈರಿ ನೋಡಿದನೊಲಿದು ನಿಜಸತಿಯ (ಕರ್ಣ ಪರ್ವ, ೧೯ ಸಂಧಿ, ೮೩ ಪದ್ಯ)

ತಾತ್ಪರ್ಯ:
ಭೀಮನು ದುಶ್ಯಾಸನನ ತೆಳು ಚರ್ಮವನ್ನು ಸುಲಿದು ಅವಳ ಬಟ್ಟೆಗೆ ಅಂಟಿಸಿದನು. ಹೊಟ್ಟೆಯೊಳಗಿನಿಂದ ಕರುಳನ್ನು ಕಿತ್ತು ಅವಳ ಮುಡಿಗೆ ಮುಡಿಸಿದನು. ಖಳನ ಎದೆಯ ರಕ್ತವನ್ನು ಸೆಳೆದು ಅವಳಿಗೆ ತಿಲಕವನ್ನಿಟ್ಟನು. ಹರ್ಷೋದ್ಗಾರ ಮಾಡುತ್ತಾ ಭೀಮನು ತನ್ನ ಪತ್ನಿಯನ್ನು ಪ್ರೀತಿಯಿಂದ ನೋಡಿದನು.

ಅರ್ಥ:
ಖಳ: ದುಷ್ಟ; ತೆಳು:ಸಣ್ಣ, ಮೆದು; ತೊಗಲು: ಚರ್ಮ; ವಾಸಚ್ಛಲ: ಬಟ್ಟೆಯ ವ್ಯಾಜ, ನೆಪ; ಸಲಿಸು: ದೊರಕಿಸಿ ಕೊಡು; ಜಠರ: ಹೊಟ್ಟೆ; ಒಳ: ಆಂತರ್ಯದ; ಕರುಳು: ಪಚನಾಂಗ; ಉಗಿ: ಹೊರಕ್ಕೆ ತೆಗೆ; ಅಬುಜವದನೆ: ಕಮಲ ಮುಖಿ; ಮುಡಿ: ಶಿರ, ತಲೆ; ಮುಡಿಸು: ತೊಡಿಸು; ತಳುಕು: ಚಲಿಸು, ಅಲ್ಲಾಡು; ಉರ: ಎದೆ, ವಕ್ಷಸ್ಥಳ; ರಕ್ತ: ನೆತ್ತರು; ತಿಳಕ: ಹಣೆಯಲ್ಲಿಡುವ ಬೊಟ್ಟು; ರಚಿಸು: ನಿರ್ಮಿಸು, ಕಟ್ಟು; ಹರುಷ: ಸಂತೋಷ; ಉಲಿ: ಧ್ವನಿಮಾಡು; ಕೀಚಕವೈರಿ: ಭೀಮ; ಒಲಿ: ಸಮ್ಮತಿಸು, ಬಯಸು; ಸತಿ: ಹೆಂಡತಿ;

ಪದವಿಂಗಡಣೆ:
ಖಳನ +ತೆಳು+ ತೊಗಲುಗಿದು+ ವಾಸ
ಚ್ಛಲವ+ ಸಲಿಸಿದನ್+ಅವನ +ಜಠರದೊಳ್
ಒಳ+ಕರುಳನ್+ಉಗಿದ್+ಅಬುಜವದನೆಯ +ಮುಡಿಗೆ +ಮುಡಿಸಿದನು
ತಳುಕಿದನು +ಖಳನುರದ+ ರಕ್ತದ
ತಿಳಕವನು+ ರಚಿಸಿದನು +ಹರುಷದೊಳ್
ಉಲಿದು+ ಕೀಚಕವೈರಿ+ ನೋಡಿದನ್+ಒಲಿದು +ನಿಜ+ಸತಿಯ

ಅಚ್ಚರಿ:
(೧) ದ್ರೌಪದಿಯನ್ನು ಸಿಂಗರಿಸುವ ಪರಿ – ಖಳನುರದ ರಕ್ತದತಿಳಕವನು ರಚಿಸಿದನು; ಜಠರದೊ
ಳೊಳಗರುಳನುಗಿದಬುಜವದನೆಯ ಮುಡಿಗೆ ಮುಡಿಸಿದನು