ಪದ್ಯ ೬: ಸೈರಂಧ್ರಿಯು ಯಾರ ಮನೆಗೆ ಬಂದಳು?

ಸುರಪ ಶಿಖಿ ಯಮ ನಿರುತಿ ವರುಣಾ
ದ್ಯರಿಗೆ ವಂದಿಸಿ ಕಣ್ಣೆವೆಯ ಬಗಿ
ದರಘಳಿಗೆ ನಿಂದಬುಜಮಿತ್ರನ ಭಜಿಸಿ ಕಣ್ದೆರೆಯೆ
ಮುರಿವ ದೈತ್ಯನ ಕಾಹಕೊಟ್ಟನು
ತರಣಿ ತರುಣಿಗೆ ಮಂದಮಂದೋ
ತ್ತರದ ಗಮನದಲಬಲೆ ಬಂದಳು ಕೀಚಕನ ಮನೆಗೆ (ವಿರಾಟ ಪರ್ವ, ೩ ಸಂಧಿ, ೬ ಪದ್ಯ)

ತಾತ್ಪರ್ಯ:
ಕೀಚಕನ ಮನೆಗೆ ಹೋಗಲೇ ಬೇಕಾದ ಸ್ಥಿತಿ ಬಂದೊದಗಿದ ಸೈರಂಧ್ರಿಯು, ಇಂದ್ರ, ಅಗ್ನಿ, ಯಮ, ನಿರುತಿ, ವಾಯು ಮುಂತಾದ ದಿಕ್ಪಾಲಕರನ್ನು ಸ್ಮರಿಸಿದಳು, ಅರ್ಧಗಳಿಗೆ ನಿಂತು ಕಣ್ಮುಚ್ಚಿ ಸೂರ್ಯನನ್ನು ಪ್ರಾರ್ಥಿಸಿ ಕಣ್ದೆರೆದಳು. ಯಾರನ್ನು ಬೇಕಿದ್ದರೂ ಸೋಲಿಸಬಲ್ಲ ರಾಕ್ಷಸನೊಬ್ಬನನ್ನು ಸೂರ್ಯನು ದ್ರೌಪದಿಗೆ ಕಾವಲಾಗಿ ಕೊಟ್ಟನು ಎಂದು ತಿಳಿದು ಮೆಲ್ಲ ಮೆಲ್ಲನೆ ನಡೆಯುತ್ತಾ ಸೈರಂಧ್ರಿಯು ಕೀಚಕನ ಮನೆಗೆ ಬಂದಳು.

ಅರ್ಥ:
ಸುರಪ: ಇಂದ್ರ; ಶಿಖಿ: ಅಗ್ನಿ; ನಿರುತಿ: ನೈಋತ್ಯದಿಕ್ಕಿನ ಒಡೆಯ; ವರುಣ: ನೀರಿನ ಅಧಿದೇವತೆ, ಪಶ್ಚಿಮ ದಿಕ್ಕಿನ ಒಡೆಯ; ಆದಿ: ಮುಂತಾದ; ವಂದಿಸು: ನಮಸ್ಕರಿಸು; ಕಣ್ಣೆವೆ: ಕಣ್ಣಿನ ರೆಪ್ಪೆ; ಬಿಗಿ: ಬಂಧಿಸು; ಘಳಿಗೆ: ಸಮಯ; ಅಬುಜಮಿತ್ರ: ಕಮಲದ ಸಖ (ಸೂರ್ಯ); ಭಜಿಸು: ಪ್ರಾರ್ಥಿಸು; ಕಣ್ಣು: ನಯನ; ತೆರೆ: ಬಿಚ್ಚು; ಮುರಿ: ಸೀಳು; ದೈತ್ಯ: ರಾಕ್ಷಸ; ಕಾಹು: ರಕ್ಷಿಸು; ತರಣಿ: ಸೂರ್ಯ; ತರುಣಿ: ಹೆಣ್ಣು; ಮಂದ: ಮೆಲ್ಲನೆ; ಗಮನ: ಚಲನೆ; ಅಬಲೆ: ಹೆಣ್ಣು; ಬಂದಳು: ಆಗಮಿಸು; ಮನೆ: ಆಲಯ;

ಪದವಿಂಗಡಣೆ:
ಸುರಪ +ಶಿಖಿ+ ಯಮ +ನಿರುತಿ +ವರುಣಾ
ದ್ಯರಿಗೆ+ ವಂದಿಸಿ +ಕಣ್ಣೆವೆಯ +ಬಗಿದ್
ಅರಘಳಿಗೆ+ ನಿಂದ್+ಅಬುಜಮಿತ್ರನ+ ಭಜಿಸಿ +ಕಣ್ದೆರೆಯೆ
ಮುರಿವ+ ದೈತ್ಯನ +ಕಾಹಕೊಟ್ಟನು
ತರಣಿ+ ತರುಣಿಗೆ+ ಮಂದ+ಮಂದ
ಉತ್ತರದ +ಗಮನದಲ್+ಅಬಲೆ +ಬಂದಳು +ಕೀಚಕನ+ ಮನೆಗೆ

ಅಚ್ಚರಿ:
(೧) ಯಾರು ರಕ್ಷಣೆ ನೀಡಿದರು – ಮುರಿವ ದೈತ್ಯನ ಕಾಹಕೊಟ್ಟನು ತರಣಿ ತರುಣಿಗೆ
(೨) ಅಬುಜಮಿತ್ರ, ತರಣಿ – ಸಮನಾರ್ಥಕ ಪದ