ಪದ್ಯ ೩೦: ಬ್ರಹ್ಮನೇಕೆ ನಡುಗಿದನು?

ನಳಿನಪತ್ರೋದಕದವೊಲು ಮಾ
ರೊಲೆದುದಬುಜಭವಾಂಡವಂಬುಧಿ
ಯಿಳಿದು ಗುಲ್ಫದ್ವಯಸವಾದುದು ಕಮಠನೆದೆಯೊಡೆಯೆ
ನೆಲನನಿದೆ ಹಿಂದಿಕ್ಕಿಕೊಂಬ
ಗ್ಗಳೆಯರಾರೋ ಶಿವಶಿವಾ ಜಗ
ದಳಿವು ಜೋಡಿಸಿತೆನುತ ನಡುಗಿದನಬುಜಭವನಂದು (ಭೀಷ್ಮ ಪರ್ವ, ೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕಮಲದೆಲೆಯ ಮೇಲಿನ ನೀರಿನಂತೆ ಬ್ರಹ್ಮಾಂಡವು ಅತ್ತಿತ್ತ ಕಂಪಿಸಿತು. ಹಿಮ್ಮಡಿಯ ಗಂಟಿನಷ್ಟೆತ್ತರಕ್ಕೆ ಸಮುದ್ರವು ಕೆಳಗಿಳಿಯಿತು. ಚತುರ್ಮುಖ ಬ್ರಹ್ಮನು ನಾನು ಸೃಷ್ಟಿಸಿದ ಈ ಲೋಕವನ್ನು ಹಿಂದಿಟ್ಟುಕೊಂಡು ರಕ್ಷಿಸಬಲ್ಲ ವೀರರಾರಿದ್ದಾರೆ ಶಿವಶಿವಾ ಈ ಲೋಕಕ್ಕೆ ಕೊನೆಗಾಲ ಬಮ್ತು ಎಂದು ಭಯದಿಂದ ನಡುಗಿದನು.

ಅರ್ಥ:
ನಳಿನಪತ್ರ: ಕಮಲದೆಲೆ; ಉದಕ: ನೀರು; ಮಾರು: ಅಡ್ಡಿಮಾಡು; ಅಬುಜಭವಾಂಡ: ಬ್ರಹ್ಮಾಂಡ, ಜಗತ್ತು; ಅಂಬುಧಿ: ಸಾಗರ; ಗುಲ್ಫದ್ವಯ: ಎರಡು ಮಂಡಿಗಳು, ಮೀನಖಂಡ; ಕಮಠ: ಕೂರ್ಮ; ಎದೆ: ಹೃದಯ; ಒಡೆ: ಸೀಳು; ನೆಲ: ಭೂಮಿ; ಹಿಂದಿಕ್ಕು: ಹಿಂದೆ ತಳ್ಳು; ಅಗ್ಗಳೆ: ಶ್ರೇಷ್ಠ; ಜಗ: ಪ್ರಪಂಚ; ಅಳಿವು: ನಾಶ; ಜೋಡಿಸು: ಕೂಡಿಸು; ನಡುಗು: ಅದುರು, ಕಂಪಿಸು; ಅಬುಜಭವ: ಬ್ರಹ್ಮ; ಅಬುಜ: ಕಮಲ; ಭವ: ಹುಟ್ಟು;

ಪದವಿಂಗಡಣೆ:
ನಳಿನಪತ್ರ+ಉದಕದವೊಲು +ಮಾ
ರೊಲೆದುದ್+ಅಬುಜಭವಾಂಡವ್+ಅಂಬುಧಿ
ಇಳಿದು+ ಗುಲ್ಫದ್ವಯಸವ್+ಆದುದು +ಕಮಠನ್+ಎದೆಯೊಡೆಯೆ
ನೆಲನನಿದೆ+ ಹಿಂದಿಕ್ಕಿಕೊಂಬ್
ಅಗ್ಗಳೆಯರ್+ಆರೋ +ಶಿವಶಿವಾ+ ಜಗ
ದಳಿವು +ಜೋಡಿಸಿತೆನುತ +ನಡುಗಿದನ್+ಅಬುಜಭವನ್+ಅಂದು

ಅಚ್ಚರಿ:
(೧) ಉಪಮಾನದ ಪ್ರಯೋಗ – ನಳಿನಪತ್ರೋದಕದವೊಲು ಮಾರೊಲೆದುದಬುಜಭವಾಂಡವಂಬುಧಿ
ಯಿಳಿದು ಗುಲ್ಫದ್ವಯಸವಾದುದು
(೨) ಅಬುಜಭವಾಂಡ, ಅಬುಜಭವ – ಪದಗಳ ಬಳಕೆ

ಪದ್ಯ ೩೪: ಭೂಮಿಗೆ ಅಧಿಪತಿಯಾರು?

ಆರಜೋಗುಣಕಬುಜಭವನ ವಿ
ಕಾರಿ ತನ್ನ ಶರೀರದರ್ಧವ
ನಾರಿಯನು ಮಾಡಿದನು ಶತರೂಪಾಭಿಧಾನದಲಿ
ಸೇರಿಸಿದನರ್ಧದಲಿ ಮನುವನು
ದಾರ ಚರಿತನು ಸಕಲ ಧರ್ಮದ
ಸಾರವನು ವಿಸ್ತರಿಸಿದನು ಮನು ಭುವನ ವಿಭುವಾಗಿ (ಅರಣ್ಯ ಪರ್ವ, ೧೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ರಜೋಗುಣದ ಬ್ರಹ್ಮನು ತನ್ನ ಶರೀರದ ಅರ್ಧದಿಂದ ಶತರೂಪೆಯನ್ನು ಸೃಷ್ಟಿಸಿದನು. ಇನ್ನರ್ಧದಿಂದ ಮನುವನ್ನು ಸೃಷ್ಟಿಸಿದನು. ಮನುವು ಭೂಮಿಗೆ ಅಧಿಪತಿಯಾಗಿ ಧರ್ಮವನ್ನು ವಿಸ್ತರಿಸಿದನು.

ಅರ್ಥ:
ರಜಸ್ಸು: ಮೂರು ಗುಣಗಳಲ್ಲಿ ಒಂದು; ಗುಣ: ನಡತೆ, ಸ್ವಭಾವ; ಅಬುಜಭವ: ಬ್ರಹ್ಮ; ವಿಕಾರ: ಬದಲಾವಣೆ, ಮಾರ್ಪಾಟು; ಶರೀರ: ದೇಹ; ಅರ್ಧ: ಒಂದರ ಎರಡನೇ ಭಾಗ; ನಾರಿ: ಹೆಣ್ಣು; ಶತ: ನೂರು; ರೂಪ: ಆಕಾರ; ಅಭಿಧಾನ: ಹೆಸರು; ಸೇರಿಸು: ಜೋಡಿಸು; ಮನು:ಮನುಷ್ಯ ಕುಲದ ಮೂಲಪುರುಷ; ಉದಾರ: ತ್ಯಾಗ ಬುದ್ಧಿಯುಳ್ಳವನು; ಚರಿತ: ನಡೆದುದು; ಸಕಲ: ಎಲ್ಲಾ; ಧರ್ಮ: ಧಾರಣೆ ಮಾಡಿದುದು; ಸಾರ: ರಸ; ವಿಸ್ತರ: ಹಬ್ಬುಗೆ, ವಿಸ್ತಾರ; ಭುವನ: ಲೋಕ, ಜಗತ್ತು; ವಿಭು:ಒಡೆಯ, ಅರಸು;

ಪದವಿಂಗಡಣೆ:
ಆ+ರಜೋಗುಣಕ್+ಅಬುಜಭವನ+ ವಿ
ಕಾರಿ +ತನ್ನ +ಶರೀರ್+ಅರ್ಧವ
ನಾರಿಯನು +ಮಾಡಿದನು +ಶತರೂಪ+ಅಭಿಧಾನದಲಿ
ಸೇರಿಸಿದನ್+ಅರ್ಧದಲಿ +ಮನುವನ್
ಉದಾರ +ಚರಿತನು +ಸಕಲ +ಧರ್ಮದ
ಸಾರವನು +ವಿಸ್ತರಿಸಿದನು+ ಮನು +ಭುವನ +ವಿಭುವಾಗಿ

ಅಚ್ಚರಿ:
(೧) ಮನುವಿನ ಕಾರ್ಯ – ಸೇರಿಸಿದನರ್ಧದಲಿ ಮನುವನುದಾರ ಚರಿತನು ಸಕಲ ಧರ್ಮದ ಸಾರವನು ವಿಸ್ತರಿಸಿದನು ಮನು ಭುವನ ವಿಭುವಾಗಿ

ಪದ್ಯ ೧೬: ಶಿವನ ಸ್ವರೂಪವು ಹೇಗಿತ್ತು?

ಕೊರಳ ಕಪ್ಪಿನ ಚಾರು ಚಂದ್ರಾ
ಭರಣ ಮೂರ್ಧದ ಭಾಳನಯನದ
ಭರಿತ ಪರಿಮಳದಂಗವಟ್ಟದ ಜಡಿದ ಕೆಂಜಡೆಯ
ಕರಗಿ ಕಾಸಿದವಿದ್ಯೆಯನು ಬೇ
ರಿರಿಸಿ ಶುದ್ಧ ಬ್ರಹ್ಮವನು ಕಂ
ಡರಿಸಿದಂತಿರಲೆಸೆವ ಶಿವನನು ಕಂಡನುಬುಜಭವ (ಕರ್ಣ ಪರ್ವ, ೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಬ್ರಹ್ಮನಾದಿಯಾಗಿ ಎಲ್ಲಾ ದೇವತೆಗಳು ಶಿವನ ಬಳಿಗೆ ಬಂದರು. ಹಾಲಹಲ ವಿಷವನ್ನು ಕುಡಿದಿದ್ದರಿಂದ ಕಪ್ಪಾಗಿದ್ದ ಕಂಠವನ್ನುಳವನೂ, ಚಂದ್ರನನ್ನೇ ಆಭರಣವನ್ನಾಗಿಸಿದವನೂ, ಹಣೆಗಣ್ಣನೂ, ಪರಿಮಳಭರಿತ ದೇಹನೂ, ಕೆಂಜೆಡೆಯುಳ್ಳವನೂ, ಅವಿದ್ಯೆಯನ್ನು ಕಾಯಿಸಿ ಬೇರೆ ಕಡೆಗಿಟ್ಟು ಶುದ್ಧ ಬ್ರಹ್ಮವನ್ನೇ ಕಡೆದು ಮಾಡಿದ ಮೂರ್ತಿಯೂ ಆದ ಶಿವನನ್ನು ಬ್ರಹ್ಮನು ನೋಡಿದನು.

ಅರ್ಥ:
ಕೊರಳು: ಕತ್ತು; ಕಪ್ಪು: ಕರಿ; ಚಾರು: ಸುಂದರ; ಚಂದ್ರ: ಇಂದು, ಶಶಿ; ಆಭರಣ: ಒಡವೆ; ಮೂರ್ಧ: ತಲೆಯ ಮುಂಭಾಗ, ಮುಂದಲೆ; ಭಾಳ: ಹಣೆ; ನಯನ: ಕಣ್ಣು; ಭರಿತ: ತುಂಬಿದ; ಪರಿಮಳ: ಸುಗಂಧ; ಅಂಗವಟ್ಟ: ಶರೀರ, ಮೈಕಟ್ಟು; ಜಡಿ: ಹರಡು, ಝಳಪಿಸು; ಕೆಂಜಡೆ: ಕೆಂಪಾದ ಕೂದಲು; ಕರಗು: ನೀರಾಗಿಸು; ಅವಿದ್ಯೆ: ಅಜ್ಞಾನ; ಬೇರೆ: ಅಂತರ; ಶುದ್ಧ: ನಿರ್ಮಲ; ಬ್ರಹ್ಮ: ಪರಮಾತ್ಮ, ಪರತತ್ತ್ವ; ಕಂಡು: ನೋಡಿ; ಎಸೆ: ತೋರುವ; ಶಿವ: ಶಂಕರ; ಕಂಡು: ನೋಡು; ಅಬುಜಭವ: ಬ್ರಹ್ಮ;

ಪದವಿಂಗಡಣೆ:
ಕೊರಳ+ ಕಪ್ಪಿನ+ ಚಾರು +ಚಂದ್ರಾ
ಭರಣ +ಮೂರ್ಧದ +ಭಾಳನಯನದ
ಭರಿತ+ ಪರಿಮಳದಂಗವಟ್ಟದ +ಜಡಿದ +ಕೆಂಜಡೆಯ
ಕರಗಿ+ ಕಾಸಿದ+ವಿದ್ಯೆಯನು +ಬೇ
ರಿರಿಸಿ +ಶುದ್ಧ +ಬ್ರಹ್ಮವನು +ಕಂಡ್
ಅರಿಸಿದಂತಿರಲ್+ಎಸೆವ +ಶಿವನನು +ಕಂಡನ್+ಅಬುಜಭವ

ಅಚ್ಚರಿ:
(೧) ಜೋಡಿ ಪದಗಳು: ಕೊರಳ ಕಪ್ಪಿನ; ಚಾರು ಚಂದ್ರಾಭರಣ; ಜಡಿದ ಕೆಂಜೆಡೆ; ಕರಗಿ ಕಾಸಿದ

ಪದ್ಯ ೨೮: ಸುಂದೋಪಸುಂದರನು ಸಂಹರಿಸಲು ಯಾರು ಸೃಷ್ಠಿಯಾದರು?

ಬಳಿಕಸಂಖ್ಯಾತದ ಸುರೋರಗ
ಲಲನೆಯರಲಿ ತಿಲಾಂಶಮಾತ್ರದ
ಚಲುವಿಕೆಯನೇ ತೆಗೆದು ನಿರ್ಮಿಸಿದನು ವರಾಂಗನೆಯ
ಬೆಳಗಿತಾಕೆಯ ಹೆಸರು ದಿವಿಜಾ
ವಳಿಯೊಳೈದೆ ತಿಲೋತ್ತಮಾಹ್ವಯ
ದಳಿಕುಲಾಳಕಿಗಬುಜಭವ ನೇಮಿಸಿದನೀಹದನ (ಆದಿ ಪರ್ವ, ೧೮ ಸಂಧಿ, ೨೮ ಪದ್ಯ)

ತಾತ್ಪರ್ಯ:
ದೇವತೆಗಳೆಲ್ಲರೂ ಬ್ರಹ್ಮನಲ್ಲಿ ಮೊರೆಹೋಗಲು ಬ್ರಹ್ಮನು ಹೆಣ್ಣಿನಿಂದ ಇವರ ನಾಶಸಾಧ್ಯವೆಂದು ತಿಳಿದು, ಆ ನಂತರ ಹಲವಾರು ದೇವತಾಕನ್ಯೆಯರ ಹಾಗು ನಾಗಕನ್ಯೆಯರ ಸೌಂದರ್ಯದ ಎಳ್ಳುಕಾಳಿನಷ್ಟು ಸೌಂದರ್ಯವನ್ನು
ತೆಗೆದು ಮಹಾಸುಂದರಿಯನ್ನು ನಿರ್ಮಿಸಿದನು. ದೇವತೆಗಳಲ್ಲಿ ಅವಳು ತಿಲೋತ್ತಮೆಯೆಂದು ಕರೆಸಿಕೊಂಡಳು. ಬ್ರಹ್ಮನು ಅವಳಿಗೆ ಸುಂದೋಪಸುಂದರರ ವಂಶವನ್ನು ನಾಶಮಾಡಲು ಆದೇಶಿಸಿದನು.

ಅರ್ಥ:
ಬಳಿಕ: ನಂತರ; ಅಸಂಖ್ಯಾತ: ತುಂಬ, ಹಲವಾರು; ಸುರ: ದೇವತೆಗಳು; ಉರಗ: ಪಾತಾಳಲೋಕದವರು (ನಾಗರು); ಲಲನೆ: ಹೆಣ್ಣು; ತಿಲ: ಎಳ್ಳು; ಅಂಶ: ಭಾಗ; ಚಲುವಿಕೆ: ಸುಂದರತೆ; ತೆಗೆದು: ಹೊರತರು; ನಿರ್ಮಿಸು: ತಯಾರು ಮಾಡು; ವರ: ಶ್ರೇಷ್ಠ; ಅಂಗನೆ: ಹುಡುಗಿ,ಸ್ತ್ರೀ; ಬೆಳಗು: ಹೊಳೆ; ಹೆಸರು: ನಾಮ; ದಿವಿಜ: ದೇವತೆ: ಆವಳಿ: ಗುಂಪು;ಅಹ್ವಯ: ಕರೆಯುವಿಕೆ; ಅಳಿ: ನಾಶ; ಕುಲ:ವಂಶ;ಅಬುಜಭವ: ಬ್ರಹ್ಮ; ನೇಮಿಸು: ಅಪ್ಪಣೆ ಮಾಡು; ಹದ: ರೀತಿ; ಐದೆ: ವಿಶೇಷವಾಗಿ

ಪದವಿಂಗಡಣೆ:
ಬಳಿಕ್+ಅಸಂಖ್ಯಾತದ+ ಸುರ+ಉರಗ
ಲಲನೆಯರಲಿ +ತಿಲ+ಅಂಶ+ಮಾತ್ರದ
ಚಲುವಿಕೆಯನೇ +ತೆಗೆದು +ನಿರ್ಮಿಸಿದನು +ವರಾಂಗನೆಯ
ಬೆಳಗಿತ್+ಆಕೆಯ +ಹೆಸರು +ದಿವಿಜಾ
ವಳಿಯೊಳ್+ಐದೆ+ ತಿಲೋತ್ತಮ+ಅಹ್ವಯದ್
ಅಳಿ+ಕುಲಾಳಕಿಗ್+ಅಬುಜಭವ+ ನೇಮಿಸಿದನ್+ಈ+ಹದನ

ಅಚ್ಚರಿ:
(೧)ದೇವತೆ ಮತ್ತು ನಾಗರು ಜೊತೆಯಾಗಿ ಸೇರಿಸಿದ ಪದ – ಸುರೋರಗ,
(೨) ಲಲನೆ, ಅಂಗನೆ – ಸಮನಾರ್ಥಕ ಪದ

ಪದ್ಯ ೫೧: ಶಿವನು ನಾರಾಯಣಿಗೆ ಹೇಗೆ ಇದು ವಿಧಿ ಸಮ್ಮತ ಎಂದು ವಿವರಿಸಿದನು?

ಶ್ರುತಿಗಳೆಂಬುದುಯೆಮ್ಮ ನುಡಿ ಸಂ
ಸೃತಿಗಳೆಮ್ಮಯ ಚೇಷ್ಟೆ ಧರ್ಮದ
ಗತಿ ವಿಚಾರಿಸಲೆಮ್ಮ ನೇಮವು ವಿಹಿತ ವಿಧಿಯೆಂದು
ಕ್ರತುಗಳೀ ಮನ್ವಾದಿಗಳು ಸುರ
ತತಿಗಳಬುಜಭವಾದಿ ದೇವ
ಪ್ರತತಿಯೆನ್ನಾಜ್ಞೆಯೊಳೆನುತಲಾ ಸತಿಗೆ ಶಿವ ನುಡಿದ (ಆದಿ ಪರ್ವ, ೧೬ ಸಂಧಿ, ೫೧ ಪದ್ಯ)

ತಾತ್ಪರ್ಯ:
ಭಯಭೀತಳಾದ ನಾರಾಯಣಿಗೆ ಶಿವನು ಅಭಯವನ್ನು ನೀಡುತ್ತಾ, ನನ್ನ ವಾಕ್ಯಗಳೆ ವೇದಗಳು, ಸಂಸಾರ ಚಕ್ರವು ನನ್ನ ಲೀಲೆ, ನಾನು ಸರಿಯಾದುದೆಂದು ವಿಧಿಸಿದುದೇ ಧರ್ಮದ ಆಚರಣೆ, ಯಜ್ಞಗಳು, ಮನುಗಳು, ದೇವತೆಗಳು, ಬ್ರಹ್ಮಾದಿಯಾಗಿ ಸಕಲ ದೇವವೃಂದವು ನನ್ನ ಆಜ್ಞೆಯೇ ಮೂಲ ಎಂದು ಶಿವನು ನಾರಾಯಣಿಗೆ ತಿಳಿಸಿದನು.

ಅರ್ಥ:
ಶ್ರುತಿ: ವೇದ; ನುಡಿ: ಮಾತು; ಸಂಸೃತಿ:ಸಂಸಾರ; ಚೇಷ್ಟೆ: ಲೀಲೆ; ಧರ್ಮ: ಧಾರಣವಾದ, ಒಳ್ಲೆಯ ನಡೆ; ಗತಿ: ವೇಗ; ವಿಚಾರ: ವಿಮರ್ಶೆ; ನೇಮ: ನಿಯಮ; ವಿಹಿತ: ಔಚಿತ್ಯಪೂರ್ಣ;ವಿಧಿ: ಆದೇಶ, ಆಜ್ಞೆ; ಕ್ರತು:ಯಾಗ, ಯಜ್ಞ; ಮನು: ಮಂತ್ರ; ಮನುಷ್ಯಕುಲದ ಮೂಲಪುರುಷ; ಸುರ: ದೇವತೆಗಳು; ತತಿ: ಗುಂಪು; ಅಬುಜಭವ: ಬ್ರಹ್ಮ; ಅಬುಜ: ಕಮಲ;ಆದಿ: ಮುಂತಾದ; ದೇವ: ಸುರರು; ಪ್ರತತಿ: ಗುಂಪು; ಆಜ್ಞೆ: ಆದೇಶ; ಸತಿ: ಗರತಿ, ಹೆಣ್ಣು;

ಪದವಿಂಗಡಣೆ:
ಶ್ರುತಿಗಳ್+ಎಂಬುದು+ಯೆಮ್ಮ +ನುಡಿ+ ಸಂ
ಸೃತಿಗಳ್+ಎಮ್ಮಯ+ ಚೇಷ್ಟೆ +ಧರ್ಮದ
ಗತಿ+ ವಿಚಾರಿಸಲ್+ಎಮ್ಮ +ನೇಮವು +ವಿಹಿತ+ ವಿಧಿಯೆಂದು
ಕ್ರತುಗಳ್+ಈ+ ಮನ್ವಾದಿಗಳು+ ಸುರ
ತತಿಗಳ್+ಅಬುಜಭವ+ಆದಿ+ ದೇವ
ಪ್ರತತಿ+ಯೆನ್+ಆಜ್ಞೆಯೊಳ್+ಎನುತಲಾ +ಸತಿಗೆ +ಶಿವ +ನುಡಿದ

ಅಚ್ಚರಿ:
(೧) ತತಿ, ಪ್ರತತಿ – ಸಮನಾರ್ಥಕ ಪದ (ಗುಂಪು), ೫, ೬ ಸಾಲಿನ ಮೊದಲ ಪದ
(೨) ಎಮ್ಮ – ಮೊದಲ ೩ ಸಾಲಿನಲ್ಲು ಬರುವ ಪದ
(೩) ಬ್ರಹ್ಮನನ್ನು ಅಬುಜಭವ ಎಂದು ವರ್ಣಿಸಿರುವುದು
(೪) ಸುರ, ದೇವ – ಸಮನಾರ್ಥಕ ಪದ, ೪,೫ ಸಾಲಿನ ಕೊನೆಯ ಪದಗಳು