ಪದ್ಯ ೭೮: ದ್ರೌಪದಿಯು ಸಂತಸಗೊಂಡು ಯಾರ ಮನೆಗೆ ಬಂದಳು?

ಖಳ ಹಸಾದವ ಹಾಯ್ಕಿ ತನ್ನಯ
ನಿಳಯಕೈದಿದನಬುಜಬಾಂಧವ
ನಿಳಿದನಸ್ತಾಚಲದ ತಪ್ಪಲ ತಾವರೆಯ ಬನಕೆ
ನಳಿನಮುಖಿ ನಲವೇರಿ ಕಗ್ಗ
ತ್ತಲೆಯ ಹಬ್ಬುಗೆಯೊಳಗೆ ಕಂಗಳ
ಬೆಳಗು ಬಟ್ಟೆಯ ತೋರೆ ಬಂದಳು ಬಾಣಸಿನ ಮನೆಗೆ (ವಿರಾಟ ಪರ್ವ, ೩ ಸಂಧಿ, ೭೮ ಪದ್ಯ)

ತಾತ್ಪರ್ಯ:
ದ್ರೌಪದಿಯು ಕೀಚಕನನ್ನು ನಾಟ್ಯಮಂದಿರಕ್ಕೆ ಬರಲು ಹೇಳಲು, ಆತ ಇದು ಮಹಾಪ್ರಸಾದವೆಂದು ಭಾವಿಸಿ ಆಕೆಗೆ ಕೈಮುಗಿದು ತನ್ನ ಮನೆಗೆ ಹೋದನು. ಸೂರ್ಯನು ಮುಳುಗಿದನು, ದ್ರೌಪದಿಯು ಸಂತೋಷಭರಿತಳಾಗಿ, ಕಗ್ಗತ್ತಲೆಯಲ್ಲಿ ತನ್ನ ಕಣ್ಣ ಬೆಳಕಿನ ಸಹಾಯದಿಂದ ಅಡುಗೆಯ ಮನೆಗೆ ಬಂದಳು.

ಅರ್ಥ:
ಖಳ: ದುಷ್ಟ; ಹಸಾದ: ಪ್ರಸಾದ, ಅನುಗ್ರಹ; ಹಾಯ್ಕಿ: ಬೀಸು, ತೆಗೆ; ನಿಳಯ: ಮನೆ; ಐದು: ಬಂದು ಸೇರು; ಅಬುಜ: ಕಮಲ; ಬಾಂಧವ: ಸಂಬಂಧಿಕ; ಅಬುಜಬಾಂಧವ: ಸೂರ್ಯ, ರವಿ; ಇಳಿ: ಕೆಳಕ್ಕೆ ಹೋಗು; ಅಸ್ತಾಚಲ: ಪಡುವಣದ ಬೆಟ್ಟ; ತಪ್ಪಲು: ಬೆಟ್ಟದ ತಳಭಾಗ; ತಾವರೆ: ಕಮಲ; ಬನ: ಕಡು; ನಳಿನಮುಖಿ: ಕಮಲದಂತ ಮುಖವುಳ್ಳವಳು (ದ್ರೌಪದಿ); ನಲ: ನಲಿವು, ಸಂತೋಷ; ಏರು: ಹೆಚ್ಚಾಗು; ಕಗ್ಗತ್ತಲೆ: ಗಾಡಾಂಧಕಾರ; ಹಬ್ಬುಗೆ: ಹರಡು; ಕಂಗಳು: ಕಣ್ಣು, ನಯನ; ಬೆಳಗು: ಪ್ರಕಾಶ; ಬಟ್ಟೆ: ಹಾದಿ, ಮಾರ್ಗ; ತೋರು: ಗೋಚರಿಸು; ಬಂದು: ಆಗಮಿಸು; ಬಾಣಸಿಗ: ಅಡುಗೆಯವ; ಮನೆ: ಆಲಯ;

ಪದವಿಂಗಡಣೆ:
ಖಳ +ಹಸಾದವ +ಹಾಯ್ಕಿ +ತನ್ನಯ
ನಿಳಯಕ್+ಐದಿದನ್+ಅಬುಜಬಾಂಧವನ್
ಇಳಿದನ್+ಅಸ್ತಾಚಲದ+ ತಪ್ಪಲ +ತಾವರೆಯ +ಬನಕೆ
ನಳಿನಮುಖಿ +ನಲವೇರಿ+ ಕಗ್ಗ
ತ್ತಲೆಯ+ ಹಬ್ಬುಗೆಯೊಳಗೆ+ ಕಂಗಳ
ಬೆಳಗು +ಬಟ್ಟೆಯ +ತೋರೆ +ಬಂದಳು +ಬಾಣಸಿನ +ಮನೆಗೆ

ಅಚ್ಚರಿ:
(೧) ಸೂರ್ಯಾಸ್ತವಾಯಿತು ಎಂದು ಹೇಳಲು – ಅಬುಜಬಾಂಧವನಿಳಿದನಸ್ತಾಚಲದ ತಪ್ಪಲ ತಾವರೆಯ ಬನಕೆ
(೨) ದ್ರೌಪದಿಯ ಕಣ್ಣಿನ ಪ್ರಕಾಶ – ಕಗ್ಗತ್ತಲೆಯ ಹಬ್ಬುಗೆಯೊಳಗೆ ಕಂಗಳ ಬೆಳಗು ಬಟ್ಟೆಯ ತೋರೆ