ಪದ್ಯ ೮೧: ಭೀಷ್ಮ ದ್ರೋಣರು ವಿದುರನಿಗೆ ಏನು ಹೇಳಿದರು?

ಅರುಹಿದನು ಭೀಷ್ಮಂಗೆ ಗುರು ಕೃಪ
ರರಿದರಿನ್ನಪಮೃತ್ಯವೇನೆಂ
ದರಿಯದಿನ್ನುತ್ಸಾಹ ಶಕ್ತಿಗೆ ಮನವ ಮಾಡಿತಲ
ಹರಿದುದೇ ಕುರುವಂಶ ಲತೆ ಹೊ
ಕ್ಕಿರಿದನೇ ಧೃತರಾಷ್ಟ್ರ ನೀ ಬೇ
ಸರದಿರವರನು ಕರೆದು ತಾ ಹೋಗೆಂದರವರಂದು (ಸಭಾ ಪರ್ವ, ೧೩ ಸಂಧಿ, ೮೧ ಪದ್ಯ)

ತಾತ್ಪರ್ಯ:
ವಿದುರನು ಧೃತರಾಷ್ಟ್ರನು ಹೇಳಿದ ವಿಚಾರವನ್ನು ಭೀಷ್ಮ, ದ್ರೋಣ, ಕೃಪಾಚಾರ್ಯರಿಗೆ ತಿಳಿಸಿದನು. ಅವರೆಲ್ಲರು ಅಕಾಲದ ಮರಣವನ್ನು ತಿಳಿಯದೆ ಉತ್ಸಾಹಶಕ್ತಿಗೆ ಮನಸ್ಸು ಮಾಡಿತೇ? ಕೌರವ ವಂಶದ ಬಳ್ಳಿ ಹರಿದು ಹೋಯಿತೇ? ಧೃತರಾಷ್ಟ್ರನೇ ವಂಶಲತೆಯನ್ನು ಕತ್ತರಿಸಿದನೇ? ಎಂದು ನೋವಿನಿಂದ ಹೇಳುತ್ತಾ ವಿದುರನಿಗೆ ಬೇಸರಗೊಳ್ಳಬೇಡ, ಪಾಂಡವರನ್ನು ಕರೆದು ತಾ ಎಂದು ಹೇಳಿದರು.

ಅರ್ಥ:
ಅರುಹು: ತಿಳಿವಳಿಕೆ; ಅರಿ: ತಿಳಿ; ಅಪಮೃತ್ಯು: ಅಕಾಲ ಮರಣ; ಉತ್ಸಾಹ: ಶಕ್ತಿ, ಬಲ; ಶಕ್ತಿ: ಬಲ; ಮನ: ಮನಸ್ಸು; ಹರಿ: ಸೀಳೂ; ವಂಶ: ಕುಲ; ಲತೆ: ಬಳ್ಳಿ; ಹೊಕ್ಕು: ಸೇರು; ಬೇಸರ: ದುಃಖ; ಕರೆ: ಬರೆಮಾಡು; ಹೋಗು: ತೆರಳು;

ಪದವಿಂಗಡಣೆ:
ಅರುಹಿದನು+ ಭೀಷ್ಮಂಗೆ +ಗುರು +ಕೃಪರ್
ಅರಿದರ್+ಇನ್+ಅಪಮೃತ್ಯವೇನೆಂದ್
ಅರಿಯದ್+ಇನ್+ಉತ್ಸಾಹ +ಶಕ್ತಿಗೆ+ ಮನವ +ಮಾಡಿತಲ
ಹರಿದುದೇ+ ಕುರುವಂಶ +ಲತೆ +ಹೊಕ್
ಇರಿದನೇ +ಧೃತರಾಷ್ಟ್ರ +ನೀ +ಬೇ
ಸರದಿರ್+ಅವರನು +ಕರೆದು +ತಾ +ಹೋಗ್+ಎಂದರ್+ಅವರ್+ಅಂದು

ಅಚ್ಚರಿ:
(೧) ಭೀಷ್ಮರ ನೋವಿನ ನುಡಿ – ಹರಿದುದೇ ಕುರುವಂಶ ಲತೆ ಹೊಕ್ಕಿರಿದನೇ ಧೃತರಾಷ್ಟ್ರ
(೨) ಅರಿ, ಹರಿ, ಇರಿ – ಪ್ರಾಸ ಪದಗಳ ಬಳಕೆ