ಪದ್ಯ ೬೯: ಪಾಂಡುವು ತನ್ನ ಮಕ್ಕಳಿಗೆ ಯಾವ ಸಂಸ್ಕಾರಗಳನ್ನು ಮಾಡಿಸಿದನು?

ಯಾದವರ ಸುಕ್ಷೇಮ ಕುಶಲವ
ನಾದರಿಸಿ ಬಳಿಕಾದ ಪರಮಾ
ಹ್ಲಾದದಲಿ ಕಶ್ಯಪನೊಳಾಲೋಚಿಸಿ ಮಹೀಪಾಲ
ವೈದಿಕೋಕ್ತಿಯ ಚೌಲವುಪನಯ
ನಾದಿ ಸಕಲಕ್ರಿಯೆಗಳನು ಗಾ
ರ್ಗ್ಯಾದಿ ಋಷಿಗಳನುಜ್ಞೆಯಲಿ ಮಾಡಿಸಿದನನಿಬರಿಗೆ (ಆದಿ ಪರ್ವ, ೪ ಸಂಧಿ, ೬೯ ಪದ್ಯ)

ತಾತ್ಪರ್ಯ:
ಯಾದವರು ಕ್ಷೇಮದಿದಂದಾರೆ, ಕುಶಲರಾಗಿದ್ದಾರೆ ಎಂದು ಕೇಳಿ ಪಾಂಡುವಿಗೆ ಮಹದಾನಂದವಾಯಿತು. ಬಳಿಕ ಕಶ್ಯಪ ಮುನಿಗಳೊಂದಿಗೆ ಆಲೋಚಿಸಿ, ಗಾರ್ಗ್ಯ ಮತ್ತು ಇತರರ ಮುನಿಗಳ ಅಪ್ಪಣೆಯಂತೆ ವೈದಿಕ ಸಂಸ್ಕಾರಗಳನ್ನು ತನ್ನ ಮಕ್ಕಳಿಗೆ ಮಾಡಿಸಿದನು.

ಅರ್ಥ:
ಕ್ಷೇಮ: ನೆಮ್ಮದಿ; ಕುಶಲ: ಸೌಖ್ಯ; ಆದರ: ಗೌರವ; ಬಳಿಕ: ನಂತರ; ಆಹ್ಲಾದ: ಸಂತೋಷ, ಆನಂದ; ಆಲೋಚನೆ: ವಿಚಾರ ವಿನಿಮಯ; ಮಹೀಪಾಲ: ರಾಜ; ವೈದಿಕ: ವೇದಕ್ಕೆ ಅನುಗುಣವಾಗಿ; ಉಕ್ತಿ: ಮಾತು, ನುಡಿ; ಚೌಲ: ಹುಟ್ಟು ಕೂದಲನ್ನು ತೆಗೆಸುವುದು; ಉಪನಯನ: ಮುಂಜಿ, ಬ್ರಹ್ಮೋಪದೇಶ; ಸಕಲ: ಎಲ್ಲಾ; ಕ್ರಿಯೆ: ಕಾರ್ಯ; ಋಷಿ: ಮುನಿ; ಅನುಜ್ಞೆ: ಒಪ್ಪಿಗೆ, ಅಪ್ಪಣೆ; ಅನಿಬರು: ಅಷ್ಟುಜನ;

ಪದವಿಂಗಡಣೆ:
ಯಾದವರ +ಸುಕ್ಷೇಮ +ಕುಶಲವನ್
ಆದರಿಸಿ +ಬಳಿಕಾದ +ಪರಮಾ
ಹ್ಲಾದದಲಿ +ಕಶ್ಯಪನೊಳ್+ಆಲೋಚಿಸಿ +ಮಹೀಪಾಲ
ವೈದಿಕೋಕ್ತಿಯ+ ಚೌಲ+ಉಪನಯ
ನಾದಿ +ಸಕಲ+ಕ್ರಿಯೆಗಳನು +ಗಾ
ರ್ಗ್ಯಾದಿ +ಋಷಿಗಳ್+ಅನುಜ್ಞೆಯಲಿ +ಮಾಡಿಸಿದನ್+ಅನಿಬರಿಗೆ

ಅಚ್ಚರಿ:
(೧) ಕ್ಷೇಮ, ಕುಶಲ – ಸಾಮ್ಯಾರ್ಥ ಪದ
(೨) ಸಂಸ್ಕಾರಗಳು – ಚೌಲ, ಉಪನಯನ

ಪದ್ಯ ೬: ಶೌನಕಾದಿ ಮುನಿಗಳಿಗೆ ಸೂತನು ಯಾವ ಕಥೆಯನ್ನು ಹೇಳಿದನು?

ಹೇಳು ಸಾಕೆಲೆ ಸೂತ ದುರಿತ
ವ್ಯಾಳ ವಿಷಜಾಂಗುಳಿಕವನು ನೀ
ಕೇಳಿದಂದದೊಳಂದು ಜನಮೇಜಯನ ಯಾಗದಲಿ
ಮೌಳಿಗಳಲಾನುವೆವು ನಿನ್ನಯ
ಹೇಳಿಕೆಯನೆನೆ ನಿಖಿಳ ಮುನಿಗಳ
ನೋಲಗಿಸುವೆನು ನಿಮ್ಮನುಜ್ಞೆಯಲೆಂದು ಕೈಮುಗಿದ (ಆದಿ ಪರ್ವ, ೨ ಸಂಧಿ, ೬ ಪದ್ಯ)

ತಾತ್ಪರ್ಯ:
ಸೂತನೆ, ಕರ್ಮಗಳಲ್ಲಿ ಇರಬಹುದಾದ ಪಾಪವೆಂಬ ಸರ್ಪವಿಷಕ್ಕೆ ಚಿಕಿತ್ಸೆಯಂತಿರುವ ಮಹಾಭಾರವನ್ನು ಜನಮೇಜಯನ ಯಾಗದಲ್ಲಿ ನೀನು ಕೇಳಿದಂತೆಯೇ ನಮಗೆ ಹೇಳು. ನಿನ್ನ ಮಾತುಗಳನ್ನು ನಾವು ತಲೆಯ ಮೇಲೆ ಹೊತ್ತುಕೊಳ್ಳುತ್ತೇವೆ ಎಂದು ಶೌನಕಾದಿಗಳು ಹೇಳಲು ಸೂತನು ಅವರಿಗೆ ವಂದಿಸಿ ನಿಮ್ಮ ಅಪ್ಪಣೆಯಂತೆ ನಿಮ್ಮ ಸೇವೆಯನ್ನು ಮಾಡುತ್ತೇನೆ ಎಂದು ಹೇಳಿದನು.

ಅರ್ಥ:
ಹೇಳು: ತಿಳಿಸು; ಸೂತ: ಪುರಾಣಗಳನ್ನು ಬೋಧಿಸಿದ ಒಬ್ಬ ಋಷಿಯ ಹೆಸರು; ದುರಿತ: ಪಾಪ, ಪಾತಕ; ವ್ಯಾಳ: ಹಾವು; ವಿಷ: ಗರಳ; ಯಾಗ: ಕ್ರತು; ಮೌಳಿ: ತಲೆ; ನಿಖಿಳ: ಎಲ್ಲಾ; ಮುನಿ: ಋಷಿ; ಅನುಜ್ಞೆ: ಒಪ್ಪಿಗೆ; ಕೈಮುಗಿ: ನಮಸ್ಕರಿಸು; ಓಲಗಿಸು: ಸೇವೆ ಮಾಡು; ಗುಳಿಕ: ಔಷಧಿ;

ಪದವಿಂಗಡಣೆ:
ಹೇಳು +ಸಾಕ್+ಎಲೆ +ಸೂತ +ದುರಿತ
ವ್ಯಾಳ +ವಿಷಜಾಂಗುಳಿಕವನು+ ನೀ
ಕೇಳಿದಂದದೊಳ್+ಅಂದು +ಜನಮೇಜಯನ+ ಯಾಗದಲಿ
ಮೌಳಿಗಳಲ್+ಆನುವೆವು +ನಿನ್ನಯ
ಹೇಳಿಕೆಯನ್+ಎನೆ +ನಿಖಿಳ +ಮುನಿಗಳನ್
ಓಲಗಿಸುವೆನು +ನಿಮ್ಮ್+ಅನುಜ್ಞೆಯಲೆಂದು +ಕೈಮುಗಿದ

ಅಚ್ಚರಿ:
(೧) ರೂಪಕದ ಪ್ರಯೋಗ – ದುರಿತವ್ಯಾಳ ವಿಷಜಾಂಗುಳಿಕವನು