ಪದ್ಯ ೪೩: ಅರ್ಜುನನು ಕೃಷ್ಣನಲ್ಲಿ ಏನೆಂದು ಬೇಡಿದನು?

ದೇವ ಬೆಸಸಿನ್ನನಿಲಸೂನು ಸ
ಜೀವನಹಿತನಿಬರ್ಹಣ ಪ್ರ
ಸ್ತಾವವನು ಕರುಣಿಸುವುದಾತನ ಧರ್ಮವಿಕೃತಿಗ
ನೀವು ಕಂಡಿರೆ ನಾಭಿ ಜಂಘೆಗೆ
ಡಾವರಿಸಿದನು ಹಲವು ಬಾರಿ ಜ
ಯಾವಲಂಬನವೆಂತು ಕೃಪೆಮಾಡೆಂದನಾ ಪಾರ್ಥ (ಗದಾ ಪರ್ವ,೭ ಸಂಧಿ, ೪೩ ಪದ್ಯ)

ತಾತ್ಪರ್ಯ:
ಅರ್ಜುನನು ಕೃಷ್ಣನ ಬಳಿಗೆ ಹೋಗಿ, ಭೀಮನು ಜೀವಿಸಿದ್ದಾನೆ, ಶತ್ರುವು ಹಲವು ಬಾರಿ ಅವನ ನಾಭಿ ಮತ್ತು ಜಂಘೆಗೂ ಹೊಡೆದಿದ್ದಾನೆ. ಶತ್ರುವಿನ ವಧೆ ಹೇಗಾಗಬೇಕೆಂದು ದಯವಿಟ್ಟು ತಿಳಿಸು ಎಂದು ಅರ್ಜುನನು ಬೇಡಿದನು.

ಅರ್ಥ:
ದೇವ: ಭಗವಂತ; ಬೆಸಸು: ಹೇಳು; ಅನಿಲಸೂನು: ಭೀಮ; ಸಜೀವ: ಪ್ರಾಣವಿರುವ; ಅಹಿತ: ವೈರಿ; ಪ್ರಸ್ತಾವ: ವಿಚಾರ ಹೇಳುವುದು; ಕರುಣಿಸು: ದಯೆ ತೋರು; ಧರ್ಮ: ಧಾರಣೆ ಮಾಡಿದುದು; ವಿಕೃತಿ: ಬದಲಾವಣೆ, ವ್ಯತ್ಯಾಸ, ಕುರೂಪ; ಕಂಡು: ನೋಡು; ನಾಭಿ: ಹೊಕ್ಕಳು; ಜಂಘೆ: ತೊಡೆ; ಡಾವರಿಸು: ಹೊಡೆ; ಹಲವು: ಬಹಳ; ಬಾರಿ: ಸಾರ್ತಿ; ಜಯ: ಗೆಲುವು; ಅವಲಂಬನ: ಆಶ್ರಯ, ಆಸರೆ; ಕೃಪೆ: ದಯೆ;

ಪದವಿಂಗಡಣೆ:
ದೇವ +ಬೆಸಸಿನ್ನ್+ಅನಿಲಸೂನು +ಸ
ಜೀವನ್+ಅಹಿತನಿಬರ್ಹಣ+ ಪ್ರ
ಸ್ತಾವವನು +ಕರುಣಿಸುವುದ್+ಆತನ +ಧರ್ಮ+ವಿಕೃತಿಗ
ನೀವು +ಕಂಡಿರೆ +ನಾಭಿ +ಜಂಘೆಗೆ
ಡಾವರಿಸಿದನು +ಹಲವು +ಬಾರಿ +ಜಯ
ಅವಲಂಬನವೆಂತು +ಕೃಪೆಮಾಡೆಂದನಾ +ಪಾರ್ಥ

ಅಚ್ಚರಿ:
(೧) ಕರುಣಿಸು, ಕೃಪಮಾಡು – ಸಾಮ್ಯಾರ್ಥ ಪದಗಳು

ಪದ್ಯ ೩೧: ಅಶ್ವತ್ಥಾಮನೇಕೆ ಪಕ್ಕಕ್ಕೆ ಸರಿದನು?

ಧನು ಮುರಿಯೆ ದಿಟ್ಟಾಯತನವೀ
ತನಲಿ ಸಾಕಿನ್ನೆನುತ ಗುರುನಂ
ದನನು ಮುರಿದನು ಹೊಗರು ಮೋರೆಯ ಹೊತ್ತ ದುಗುಡದಲಿ
ಅನಿಲಸೂನುವ ಹಳಚಿದರು ಮು
ಮ್ಮೊನೆಯ ಬೋಳೆಯ ಮೈಯ ಕೊಳು ಕೊಡೆ
ಯೆನಗೆ ತನಗಂಬಗ್ಗಳಿಕೆಗಳ ಮೆರೆದರಿಚ್ಛೆಯಲಿ (ಕರ್ಣ ಪರ್ವ, ೧೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ತನ್ನ ಬಿಲ್ಲು ಮುರಿಯಲು, ಅರ್ಜುನನೊಡನೆ ಯುದ್ಧ ಬೇಡವೆಂದು ತೀರ್ಮಾನಿಸಿ ದುಃಖತಪ್ತನಾಗಿ ಪಕ್ಕಕ್ಕೆ ಸರಿದನು. ಇತ್ತ ಕೌರವ ಯೋಧರು ನಾ ಮುಂದು ತಾ ಮುಂದು ಎನ್ನುತ್ತಾ ಭೀಮನೊಡನೆ ಯುದ್ಧ ಮಾಡುತ್ತಿದ್ದರು.

ಅರ್ಥ:
ಧನು: ಬಿಲ್ಲು, ಧನಸ್ಸು; ಮುರಿ: ಸೀಳು; ದಿಟ್ಟ: ಧೈರ್ಯಶಾಲಿ, ಸಾಹಸಿ; ಆಯತನ: ನೆಲೆ; ಸಾಕು: ನಿಲ್ಲಿಸು; ನಂದನ: ಮಗ; ಮುರಿ: ಸೀಳು; ಹೊಗರು: ಮಂಕು; ಮೊರೆ: ಮುಖ; ಹೊತ್ತು: ತೋರು; ದುಗುಡ: ದುಃಖ; ಅನಿಲಸೂನು: ವಾಯುಪುತ್ರ (ಭೀಮ); ಹಳಚು:ತಾಗು, ಬಡಿ, ಆಕ್ರಮಿಸು; ಮುಮ್ಮೊನೆ: ಮುಂದಿರುವ; ಬೋಳೆ:ಒಂದು ಬಗೆಯ ಹರಿತವಾದ ಬಾಣ; ಮೈಯ: ತನು; ಕೊಳು: ಯುದ್ಧ; ಕೊಡೆ: ನೀಡು; ಅಗ್ಗಳಿಕೆ: ಶ್ರೇಷ್ಠ; ಮೆರೆ: ಹೊಳೆ, ಪ್ರಕಾಶಿಸು; ಇಚ್ಛೆ: ಆಸೆ;

ಪದವಿಂಗಡಣೆ:
ಧನು +ಮುರಿಯೆ +ದಿಟ್ಟ+ಆಯತನವ್
ಈತನಲಿ +ಸಾಕಿನ್ನ್+ಎನುತ +ಗುರುನಂ
ದನನು +ಮುರಿದನು +ಹೊಗರು +ಮೋರೆಯ +ಹೊತ್ತ +ದುಗುಡದಲಿ
ಅನಿಲಸೂನುವ+ ಹಳಚಿದರು+ ಮು
ಮ್ಮೊನೆಯ+ ಬೋಳೆಯ +ಮೈಯ +ಕೊಳು +ಕೊಡೆ
ಎನಗೆ+ ತನಗ್+ಎಂಬ್+ಅಗ್ಗಳಿಕೆಗಳ+ ಮೆರೆದರ್+ಇಚ್ಛೆಯಲಿ