ಪದ್ಯ ೨೧: ಮಕ್ಕಳು ಕುಂತಿಯ ಸ್ಥಿತೆಗೆ ಹೇಗೆ ಸ್ಪಂದಿಸಿದರು?

ಅನುಜರೆಲ್ಲರ ಕೂಡಿ ಶಮನನ
ತನುಜ ಬಂದನು ಮನೆಗೆ ಮಾತೆಗೆ
ವಿನಯದಿಂದೆರಗಿದನು ದುಗುಡವೆ ಶಿವ ಮಹಾದೇವ
ಅನಿಲಸುತ ನಾವ್ ಹಸಿದೆವೇಳೇ
ಳೆನಲು ಮಾದ್ರೀಸುತರು ತಮ್ಮಯ
ಜನನಿಯಿರವನು ಕಂಡು ಮರುಗಿದರರಸ ಕೇಳೆಂದ (ಆದಿ ಪರ್ವ, ೨೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು (ಶಮನ ಸುತ) ತನ್ನ ತಮ್ಮಂದಿರ ಜೊತೆ ಮನೆಗೆ ಹಿಂದಿರುಗಿ, ತಾಯಿಗೆ ನಮಸ್ಕರಿಸಿದನು, ಆಕೆಯ ಸ್ಥಿತಿಯನ್ನು ಕಂಡು, ನೀವು ದುಃಖಿತರಾಗಿದ್ದೀರೆ ಶಿವ ಶಿವ ಎಂದು ಕೇಳಲು, ಭೀಮನು ತಮಗೆ ತುಂಬ ಹಸಿವಾಗಿದೆ ಏನಾದರು ಬಡಿಸಿ ಎಂದು ಕೇಳಿದನು, ಮಾದ್ರಿಸುತರು ತಾಯಿಯ ದುಃಖಸ್ಥಿತಿಯನ್ನು ಕಂಡು ಮರುಗಿದರು.

ಅರ್ಥ:
ಅನುಜ: ತಮ್ಮಂದಿರು; ಕೂಡಿ: ಜೊತೆ; ಶಮನ:ಯಮ; ತನುಜ: ಪುತ್ರ; ಬಂದನು: ಆಗಮಿಸು; ಮನೆ: ಗೃಹ; ಮಾತೆ: ತಾಯಿ; ವಿನಯ: ಸೌಜನ್ಯ; ಎರಗು: ನಮಸ್ಕರಿಸು; ದುಗುಡ: ದುಃಖ; ಅನಿಲಸುತ: ಭೀಮ; ಹಸಿವು: ಅತಿಯಾಗಿ ಬಯಸು; ಸುತ: ಮಗ; ಜನನಿ: ಮಾತೆ; ಇರವು: ಸ್ಥಿತಿ; ಮರುಗು: ಕನಿಕರಿಸು; ಅರಸ: ರಾಜ;

ಪದವಿಂಗಡಣೆ:
ಅನುಜರೆಲ್ಲರ +ಕೂಡಿ +ಶಮನನ
ತನುಜ+ ಬಂದನು +ಮನೆಗೆ+ ಮಾತೆಗೆ
ವಿನಯದಿಂದ್+ಎರಗಿದನು+ ದುಗುಡವೆ +ಶಿವ +ಮಹಾದೇವ
ಅನಿಲಸುತ +ನಾವ್ +ಹಸಿದೆವ್+ಏಳ್
ಎನಲು+ ಮಾದ್ರೀ+ಸುತರು +ತಮ್ಮಯ
ಜನನಿ+ಯಿರವನು +ಕಂಡು +ಮರುಗಿದರ್+ಅರಸ +ಕೇಳೆಂದ

ಅಚ್ಚರಿ:
(೧) ಅನುಜ, ತನುಜ – ಪ್ರಾಸ ಪದ
(೨) ತನುಜ, ಸುತ – ಸಮನಾರ್ಥಕ ಪದ, ಶಮನನತನುಜ, ಅನಿಲಸುತ, ಮಾದ್ರೀಸುತ
(೩) ಮಾತೆ, ಜನನಿ – ಸಮನಾರ್ಥಕ ಪದ
(೪) ದುಃಖದ ತೀವ್ರತೆಯನ್ನು ವರ್ಣಿಸಲು – ಶಿವ ಮಹಾದೇವ