ಪದ್ಯ ೧೧೬: ಕೃಷ್ಣನು ಭೀಮನಿಗೆ ಏನು ಹೇಳಿದನು?

ಎಲೆಲೆ ಪವನಜ ಮಾಗಧೇಶ್ವರ
ನಳವನರಿದಾ ನಿನ್ನ ತಂದೆಯ
ಬಲುಹಕೊಂಡೀ ರಿಪುವ ಮುರಿ ನೆನೆನೆನೆ ಸಮೀರಣನ
ಬಲುಮುಗಿಲ ಬಿರುಗಾಳಿಯೊಡ್ಡಿನೊ
ಳಳುಕದೇ ಫಡ ಬೇಗಮಾಡೆನೆ
ಕಲಿ ವೃಕೋದರನನಿಲರೂಪಧ್ಯಾನ ಪರನಾದ (ಸಭಾ ಪರ್ವ, ೨ ಸಂಧಿ, ಪದ್ಯ ೧೧೬)

ತಾತ್ಪರ್ಯ:
ಕೃಷ್ಣನು ಜರಾಸಂಧನ ಬಲವು ಜಾರುವುದನ್ನು ಅರಿತು, ಭೀಮನಿಗೆ “ಎಲೈ ಭೀಮನೆ, ಜರಾಸಂಧನ ರೀತಿಯನ್ನು ತಿಳಿದುಕೊಂಡೆಯಾ? ನಿನ್ನ ತಂದೆಯಾದ ವಾಯುದೇವನನ್ನು ಆಹ್ವಾನಿಸಿ ಅವನ ಬಲವನ್ನು ತಂದುಕೊಂಡು ಶತ್ರುಸಂಹಾರ ಮಾಡು, ಮೋಡಗಳು ಎಷ್ಟು ದಟ್ಟವಾಗಿದ್ದರೂ ಗಾಳಿಯ ಹೊಡೆತಕ್ಕೆ ಚದುರಿ ಹೋಗುವುದಿಲ್ಲವೇ? ಹೆದರದೆ ಬೇಗ ನಾನು ಹೇಳಿದಂತೆ ಮಾಡು, ವಾಯುದೇವರನ್ನು ನೆನೆ” ಎಂದು ಕೃಷ್ಣನು ಹೇಳಲು ಭೀಮನು ವಾಯುದೇವರನ್ನು ಧ್ಯಾನಿಸಿದನು.

ಅರ್ಥ:
ಪವನ: ಗಾಳಿ, ವಾಯು; ಪವನಜ; ಭೀಮ; ಈಶ್ವರ: ಪ್ರಭು, ಒಡೆಯ; ಅರಿ: ತಿಳಿ; ತಂದೆ: ಪಿತ; ಬಲುಹ: ಬಲ; ರಿಪು: ವೈರಿ; ಕೊಂಡು: ತೆಗೆದುಕೊಳ್ಳು; ಮುರಿ: ನಾಶ; ಸಮೀರಣ:ವಾಯುದೇವರು; ನೆನೆ: ಜ್ಞಾಪಿಸಿಕೊ; ಮುಗಿಲು: ಆಗಸ; ಬಿರುಗಾಳಿ: ಜೋರಾದ ಗಾಳಿ; ಅಳುಕು: ಭಯ; ಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಬೇಗ:
ತ್ವರೆ; ಶೀಗ್ರ; ಕಲಿ: ಶೂರ; ವೃಕೋದರ: ಭೀಮ; ಉದರ: ಹೊಟ್ಟೆ; ಅನಿಲ: ಗಾಳಿ; ರೂಪ: ಆಕಾರ; ಪರ: ಕಡೆ, ಪಕ್ಷ;

ಪದವಿಂಗಡಣೆ:
ಎಲೆಲೆ +ಪವನಜ +ಮಾಗಧೇಶ್ವರನ್
ಅಳವನ್+ಅರಿದ್+ಆ+ ನಿನ್ನ+ ತಂದೆಯ
ಬಲುಹ+ಕೊಂಡ್+ಈ+ ರಿಪುವ +ಮುರಿ +ನೆನೆನೆನೆ +ಸಮೀರಣನ
ಬಲುಮುಗಿಲ +ಬಿರುಗಾಳಿಯೊಡ್ಡಿನೊಳ್
ಅಳುಕದೇ +ಫಡ +ಬೇಗಮಾಡ್+ಎನೆ
ಕಲಿ +ವೃಕೋದರನ್+ಅನಿಲರೂಪಧ್ಯಾನ +ಪರನಾದ

ಅಚ್ಚರಿ:
(೧) ಆಡು ಭಾಷೆಯ ಪ್ರಯೋಗ: ಎಲೆಲೆ, ನೆನೆನೆನೆ
(೨) ಪವನ, ಸಮೀರಣ, ಅನಿಲರೂಪ – ವಾಯುದೇವನ ಸಮನಾರ್ಥಕ ಪದಗಳ ಬಳಕೆ