ಪದ್ಯ ೩೨: ಉಡುಗೊರೆಗಳನ್ನು ಯಾರಿಗೆ ಕಳಿಸಿದ್ದರು?

ಕಳುಹಿದುಡುಗೊರೆ ಜೀಯ ನಿಮ್ಮಡಿ
ಗಳಿಗೆ ರಾಣೀವಾಸ ವರ್ಗಕೆ
ಬಲಗೆ ವಸುದೇವರಿಗೆ ದೇವಕಿಯುಗ್ರಸೇನರಿಗೆ
ಕುಲಗುರುಗಳಕ್ರೂರನುದ್ಧವ
ಬಲುಭುಜನು ಕೃತವರ್ಮ ಸಾತ್ಯಕಿ
ಲಲಿತ ಸಾಂಬಕುಮಾರ ಕಂದರ್ಪಾನಿರುದ್ಧರಿಗೆ (ವಿರಾಟ ಪರ್ವ, ೧೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಪಾಂಡವರು ಉಡುಗೊರೆಗಳನ್ನು ಕೃಷ್ಣನ ಎಲ್ಲಾ ಪರಿಜನರಿಗೆ ಕಳಿಸಿದ್ದರು. ಒಡೆಯಾ ಪಾಂಡವರು ನಿಮ್ಮ ಪಾದಗಳಿಗೆ, ರಾಣೀವಾಸದವರಿಗೆ, ಬಲರಾಮ, ವಸುದೇವ, ದೇವಕಿ, ಉಗ್ರಸೇನ, ಕುಲಗುರುಗಳಾದ ಅಕ್ರೂರ ಉದ್ಧವರಿಗೆ, ಕೃತವರ್ಮ, ಸಾತ್ಯಕಿ, ಸಾಂಬ, ಪ್ರದ್ಯುಮ್ನ, ಅನಿರುದ್ಧರಿಗೆ ಈ ಉಡುಗೊರೆಗಳನ್ನು ಕಳಿಸಿದ್ದಾರೆ ಎಂದು ದೂತರು ಹೇಳಿದರು.

ಅರ್ಥ:
ಕಳುಹು: ಕೊಡು; ಉಡುಗೊರೆ: ಕಾಣಿಕೆ, ಬಳುವಳಿ; ಜೀಯ: ಒಡೆಯ; ನಿಮ್ಮಡಿ: ನಿಮ್ಮ ಪಾದ; ರಾಣಿ: ಅರಸಿ; ವರ್ಗ: ಗುಂಪು; ಬಲ: ಬಲರಾಮ; ಕುಲ: ವಂಶ; ಗುರು: ಆಚಾರ್ಯ; ಬಲುಭುಜ: ಮಹಾಪರಾಕ್ರಮ; ಲಲಿತ: ಸುಂದರವಾದ; ಕುಮಾರ: ಮಗ; ಕಂದರ್ಪ: ಮನ್ಮಥ, ಕಾಮ;

ಪದವಿಂಗಡಣೆ:
ಕಳುಹಿದ್+ಉಡುಗೊರೆ +ಜೀಯ +ನಿಮ್ಮಡಿ
ಗಳಿಗೆ+ ರಾಣೀವಾಸ +ವರ್ಗಕೆ
ಬಲಗೆ +ವಸುದೇವರಿಗೆ+ ದೇವಕಿ+ಉಗ್ರಸೇನರಿಗೆ
ಕುಲಗುರುಗಳ್+ಅಕ್ರೂರನುದ್ಧವ
ಬಲುಭುಜನು +ಕೃತವರ್ಮ +ಸಾತ್ಯಕಿ
ಲಲಿತ +ಸಾಂಬ+ಕುಮಾರ+ ಕಂದರ್ಪ+ಅನಿರುದ್ಧರಿಗೆ

ಅಚ್ಚರಿ:
(೧) ಕೃಷ್ಣನ ಪರಿವಾರದ ಪರಿಚಯ – ಬಲರಾಮ, ವಸುದೇವ, ದೇವಕಿ, ಉಗ್ರಸೇನ, ಅಕ್ರೂರ ಉದ್ಧವ, ಕೃತವರ್ಮ, ಸಾತ್ಯಕಿ, ಸಾಂಬ, ಪ್ರದ್ಯುಮ್ನ, ಅನಿರುದ್ಧ

ಪದ್ಯ ೬೨: ಸಭೆಗೆ ಬಂದಿದ್ದ ಯಾವ ಯದುರಾಜರನ್ನು ಧೃಷ್ಟದ್ಯುಮ್ಯ ದ್ರೌಪದಿಗೆ ಪರಿಚಯಿಸಿದನು?

ಹಿರಿಯನೀ ಕೃಷ್ಣಂಗೆ ನೀಲಾಂ
ಬರನು ನೋಡಾದೊಡೆ ಮುರಾರಿಯ
ಹಿರಿಯ ಮಗನನು ಲೋಕಮೂರರ ಬಂದಿಕಾರನನು
ಹರನ ಕಣ್ಣಿಗೆ ಬಗೆಯನೆಂಬೀ
ಬಿರುದು ಮನ್ಮಥನೀತನೀತನ
ವರ ತನುಜನನಿರುದ್ಧನಿದು ಯದುರಾಜಕುಲವೆಂದ (ಆದಿ ಪರ್ವ, ೧೩ ಸಂಧಿ, ೬೨ ಪದ್ಯ)

ತಾತ್ಪರ್ಯ:
ದ್ರೌಪದಿಯು ಕೃಷ್ಣನ ಮೇಲೆ ಆಕೆಗೆ ಗುರುವಿನ ಭಾವನೆ ಬಂದಿಹುದು ಎಂದು ಹೇಳಲು, ಅಲ್ಲಿ ನೆರೆದಿದ್ದ ಕೃಷ್ಣನ ಅಣ್ಣ ಬಲರಾಮನನ್ನು ಪರಿಚಯಿಸಿದನು. ಅಲ್ಲೇ ಇದ್ದ ಮೂರುಲೋಕಗಳನ್ನು ಬಂದಿಸಿರುವ, ವಿಷ್ಣುವಿನ ಹಿರಿಯ ಮಗ, ಶಿವನ ಹಣೆಕಣ್ಣಿಗೂ ಹೆದರದವನು ಎಂದು ಬಿರುದುಳ್ಳ ಇವನು ಮನ್ಮಥನು, ಅವನ ಮಗನಾದ ಅನಿರುದ್ಧನನ್ನು ನೋಡು, ಇವರೆಲ್ಲರು ಯಾದವರಾಜರು ಎಂದು ವಿವರಿಸಿದನು.

ಅರ್ಥ:
ಹಿರಿಯ: ದೊಡ್ಡವ; ಕೃಷ್ಣ: ವಾಸುದೇವ; ನೀಲಾಂಬರ: ಬಲರಾಮ; ನೋಡು: ವೀಕ್ಷಿಸು; ಮುರಾರಿ: ಕೃಷ್ಣ; ಮಗ: ತನುಜ; ಲೋಕ: ಜಗತ್ತು; ಬಂದಿ: ಸೆರೆ, ಬಂಧಿಸು; ಹರ: ಶಿವ; ಕಣ್ಣು: ನಯನ; ಬಗೆ:ಆಸೆ, ಬಯಕೆ, ತಿಳಿ; ಬಿರುದು: ಪ್ರಶಸ್ತಿ,ಪ್ರಖ್ಯಾತಿ; ಮನ್ಮಥ: ಕಾಮ; ವರ: ಶ್ರೇಷ್ಠ; ತನುಜ: ಮಗ; ಕುಲ: ವಂಶ;

ಪದವಿಂಗಡಣೆ:
ಹಿರಿಯನ್+ಈ+ ಕೃಷ್ಣಂಗೆ +ನೀಲಾಂ
ಬರನು +ನೋಡ್+ಆದೊಡೆ +ಮುರಾರಿಯ
ಹಿರಿಯ +ಮಗನನು +ಲೋಕಮೂರರ+ ಬಂದಿಕಾರನನು
ಹರನ+ ಕಣ್ಣಿಗೆ+ ಬಗೆಯನೆಂಬ+ಈ
ಬಿರುದು +ಮನ್ಮಥನ್+ಈತನ್+ಈತನ
ವರ+ ತನುಜ+ಅನಿರುದ್ಧನ್+ಇದು +ಯದುರಾಜ+ಕುಲವೆಂದ

ಅಚ್ಚರಿ:
(೧) ೧, ೩ ಸಾಲಿನ ಮೊದಲ ಪದ “ಹಿರಿಯ”
(೨) ಮನ್ಮಥನ ಬಿರುದುಗಳು: ಮುರಾರಿಯ ಹಿರಿಯ ಮಗ, ಲೋಕಮೂರರ ಬಂದಿಕಾರನು, ಹರನ ಕಣ್ಣಿಗೆ ಬಗೆಯದವನು
(೩) ಈತನೀತನ – ಪದ ಬಳಕೆ
(೪) ಮಗ, ತನುಜ – ಸಮಾನಾರ್ಥಕ ಪದ