ಪದ್ಯ ೫೮: ದುರ್ಯೋಧನನು ಅಶ್ವತ್ಥಾಮನಿಗೆ ಏನು ಹೇಳಿದ?

ಅನಿಮಿಷರು ಗಂಧರ್ವ ಯಕ್ಷರು
ಮುನಿದು ಮಾಡುವುದೇನು ಮಾಯದ
ಮನುಜರಿಗೆ ತಾ ಸಾಧ್ಯವಹನೇ ತನ್ನನರಿಯಿರಲಾ
ವಿನುತ ಸಲಿಲಸ್ತಂಭವಿದ್ಯೆಯೊ
ಳೆನಗಿರವು ಪಾತಾಳದಲಿ ಯಮ
ತನುಜನೇಗುವ ರೂಹುದೋರದೆ ಹೋಗಿ ನೀವೆಂದ (ಗದಾ ಪರ್ವ, ೪ ಸಂಧಿ, ೫೮ ಪದ್ಯ)

ತಾತ್ಪರ್ಯ:
ದುರ್ಯೋಧನನು ನುಡಿಯುತ್ತಾ, ದೇವತೆಗಳು, ಗಂಧರ್ವರು, ಯಕ್ಷರು ನನ್ನ ಮೇಲೆ ಮುನಿದು ಏನು ಮಾಡಬಲ್ಲರು? ಈ ಮನುಷ್ಯರ ಮೋಸಕ್ಕೆ ನಾನು ಸಿಲುಕುವವನೇ? ನನ್ನನ್ನು ನೀವು ಅರಿತಿಲ್ಲ. ಜಲಸ್ತಂಭ ವಿದ್ಯೆಯನ್ನವಲಂಬಿಸಿ ನಾನು ಪಾತಾಳಾದಲ್ಲಿರುತ್ತೇನೆ. ಈ ಯುಧಿಷ್ಠಿರನು ಏನು ಮಾಡಿಯಾನು? ನೀವು ಮಾತ್ರ ಅವರಿಗೆ ಕಾಣಿಸಿಕೊಳ್ಳದಂತೆ ದೂರಕ್ಕೆ ಹೋಗಿರಿ.

ಅರ್ಥ:
ಅನಿಮಿಷ: ದೇವತೆ; ಗಂಧರ್ವ: ಒಂದು ದೇವಜಾತಿ; ಯಕ್ಷ:ದೇವತೆಗಳಲ್ಲಿ ಒಂದು ವರ್ಗ; ಮುನಿ: ಋಷಿ; ಮಾಯ:ಗಾರುಡಿ; ಮನುಜ: ನರ; ಸಾಧ್ಯ: ಸಾಧಿಸಬಹುದಾದುದು; ಅರಿ: ತಿಳಿ; ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ಸಲಿಲ: ನೀರು; ಸ್ತಂಭ: ಸ್ಥಿರವಾಗಿರುವಿಕೆ; ವಿದ್ಯೆ: ಜ್ಞಾನ; ಪಾತಾಳ: ಅಧೋ ಲೋಕ; ಯಮ: ಜವ; ತನುಜ: ಮಗ; ರೂಹು: ರೂಪ; ಹೋಗು: ತೆರಳು;

ಪದವಿಂಗಡಣೆ:
ಅನಿಮಿಷರು+ ಗಂಧರ್ವ +ಯಕ್ಷರು
ಮುನಿದು +ಮಾಡುವುದೇನು +ಮಾಯದ
ಮನುಜರಿಗೆ+ ತಾ +ಸಾಧ್ಯವಹನೇ+ ತನ್ನನ್+ಅರಿಯಿರಲಾ
ವಿನುತ +ಸಲಿಲ+ಸ್ತಂಭ+ವಿದ್ಯೆಯೊಳ್
ಎನಗ್+ಇರವು +ಪಾತಾಳದಲಿ+ ಯಮ
ತನುಜನ್+ಏಗುವ +ರೂಹು+ತೋರದೆ+ ಹೋಗಿ +ನೀವೆಂದ

ಅಚ್ಚರಿ:
(೧) ಮ ಕಾರದ ಸಾಲು ಪದ – ಮುನಿದು ಮಾಡುವುದೇನು ಮಾಯದ ಮನುಜರಿಗೆ

ಪದ್ಯ ೨೯: ಯುದ್ಧರಂಗದ ಧೂಳಿನಬ್ಬರ ಹೇಗಿತ್ತು?

ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲಸಹಿತ ಯುಧಿಷ್ಠಿರಾದಿಗ
ಳಾಳಮೇಳಾಪದಲಿ ಹೊಕ್ಕರು ಕಾಳೆಗದ ಕಳನ
ಸಾಲರಿದು ನಿಜಸೇನೆಯನು ಪಾಂ
ಚಾಲಸುತ ಮೋಹರಿಸಿದನು ಕೆಂ
ಧೂಳಿ ಮಾಣಿಸಿತನಿಮಿಷತ್ವವನಮರ ಸಂತತಿಯ (ದ್ರೋಣ ಪರ್ವ, ೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ಸಂಜಯನು ವಿವರಿಸುತ್ತಾ, ರಾಜ ಧೃತರಾಷ್ಟ್ರನೇ ಕೇಳು, ಪಾಂಡವರು ಶ್ರೀಕೃಷ್ಣನೊಡನೆ ಮಾತನಾಡುತ್ತಾ ಯುದ್ಧರಂಗವನ್ನು ಹೊಕ್ಕರು. ಧೃಷ್ಟದ್ಯುಮ್ನನು ಸೈನ್ಯವನ್ನು ವ್ಯೂಹಾಕಾರವಾಗಿ ನಿಲ್ಲಿಸಿದನು. ಕೆಂಧೂಳು ಮೇಲೆದ್ದು ರೆಪ್ಪೆಯಿಲ್ಲದ ದೇವತೆಗಳು ಕಣ್ಣುಮುಚ್ಚಿಕೊಳ್ಳುವ ಹಾಗಾಯಿತು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಸಿರಿಲೋಲ: ಲಕ್ಷ್ಮೀಲೋಲ, ಕೃಷ್ಣ; ಆದಿ: ಮುಂತಾದ; ಹೊಕ್ಕು: ಸೇರು; ಕಾಳೆಗ: ಯುದ್ಧ; ಕಳ: ರಣರಂಗ; ಅರಿ: ತಿಳಿ; ಸೇನೆ: ಸೈನ್ಯ; ಸುತ: ಮಗ; ಮೋಹರ: ಸೈನ್ಯ, ದಂಡು, ಯುದ್ಧ; ಕೆಂಧೂಳಿ: ಕೆಂಪಾದ ಧೂಳು; ಮಾಣಿಸು: ನಿಲ್ಲುವಂತೆ ಮಾಡು; ಅನಿಮಿಷ: ದೇವತೆ, ಕಣ್ಣು ಮಿಟುಕಿಸದ; ಅಮರ: ದೇವತೆ; ಸಂತತಿ: ವಂಶ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ+ಅವನಿಪ+ ಸಿರಿ
ಲೋಲಸಹಿತ+ ಯುಧಿಷ್ಠಿರ್+ಆದಿಗಳ್
ಅಳಮೇಳಾಪದಲಿ+ ಹೊಕ್ಕರು +ಕಾಳೆಗದ +ಕಳನ
ಸಾಲರಿದು +ನಿಜಸೇನೆಯನು +ಪಾಂ
ಚಾಲಸುತ +ಮೋಹರಿಸಿದನು +ಕೆಂ
ಧೂಳಿ +ಮಾಣಿಸಿತ್+ಅನಿಮಿಷತ್ವವನ್+ಅಮರ +ಸಂತತಿಯ

ಅಚ್ಚರಿ:
(೧) ಯುದ್ಧರಂಗದ ರಭಸವನ್ನು ವಿವರಿಸುವ ಪರಿ – ಕೆಂಧೂಳಿ ಮಾಣಿಸಿತನಿಮಿಷತ್ವವನಮರ ಸಂತತಿಯ
(೨) ಕೃಷ್ಣನನ್ನು ಸಿರಿಲೋಲ ಎಂದು ಕರೆದಿರುವುದು

ಪದ್ಯ ೭: ಕೆಂಧೂಳಿಯು ಹೇಗೆ ಕಂಡಿತು?

ಹರಿಗೆ ಕೆಂಪಿನ ಝಗೆ ಸುರಾಂಗನೆ
ಯರಿಗೆ ಸುಭಟವ್ರಜಕೆ ಕುಂಟಣಿ
ವರ ದಿಗಂಗನೆಯರಿಗೆ ಬೈತಲೆಗೆಸೆವ ಸಿಂಧೂರ
ಸುರಪನನಿಮಿಷತನಕೆ ರಿಪುವೆನ
ಲುರವಣಿಸಿ ಕೆಂದೂಳಿ ನಭಕು
ಪ್ಪರಿಸೆ ಹೊಯ್ದಾಡಿದರುಭಯ ಚತುರಂಗಬಲ ಹಳಚಿ (ಭೀಷ್ಮ ಪರ್ವ, ೪ ಸಂಧಿ, ೭ ಪದ್ಯ)

ತಾತ್ಪರ್ಯ:
ಯೋಧರು ಮುತ್ತಿಗೆ ಹಾಕುವಾಗ ಮೇಲೆದ್ದ ಕೆಂಪಾದ ಹೊಳಪು, ಅಪ್ಸರೆಯರಿಗೆ, ಯೋಧರಿಗೆ, ಕುಂಟಣಿಯರಿಗೆ, ದಿಕ್ಪಾಲಕಿಯರ ಬೈತಲೆಯ ಕೆಂಪುಬೊಟ್ಟು, ರೆಪ್ಪೆಯಿಲ್ಲದ ಇಂದ್ರನ ಕಣ್ಣಿಗೆ ಶತ್ರು ಎಂಬಂತೆ, ಎರಡೂ ದಳಗಳ ಚತುರಂಗ ಸೈನ್ಯವು ಹೋರಾಡುವಾಗ ಕೆಂಧೂಳಿಯೆದ್ದಿತು.

ಅರ್ಥ:
ಹರಿ: ವಿಷ್ಣು, ದಾಳಿ ಮಾಡು, ಮುತ್ತಿಗೆ ಹಾಕು; ಕೆಂಪು: ರಕ್ತವರ್ಣ; ಝಗೆ: ಹೊಳಪು, ಪ್ರಕಾಶ; ಸುರಾಂಗನೆ: ಅಪ್ಸರೆ; ಸುಭಟ: ಸೈನಿಕರು; ಕುಂಟಣಿ: ತಲೆಹಿಡುಕಿ, ಮಧ್ಯಸ್ಥೆ; ವರ: ಶ್ರೇಷ್ಠ; ದಿಗಂಗನೆ: ದಿಕ್ಪಾಲಕಿ; ಬೈತಲೆ: ಬಾಚಿದ ತಲೆಯನ್ನು ವಿಭಾಗಿಸುವ ಗೆರೆಯಂಥ ಭಾಗ; ಎಸೆ: ತೋರು; ಸಿಂಧೂರ: ಹಣೆಗೆ ಹಚ್ಚುವ ಕೆಂಪು ವಸ್ತು; ಸುರಪ: ಇಂದ್ರ; ಅನಿಮಿಷ:ರೆಪ್ಪೆಯಿಲ್ಲದ; ರಿಪು: ವೈರಿ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಕೆಂಧೂಳಿ: ಕೆಂಪಾದ ಧೂಳು; ನಭ: ಆಗಸ; ಉಪ್ಪರಿಸು: ಹಾರು; ಹೊಯ್ದಾಡು: ಹೋರಾಡು; ಉಭಯ: ಎರಡು; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ಹಳಚು: ತಾಗು, ಬಡಿ;

ಪದವಿಂಗಡಣೆ:
ಹರಿಗೆ +ಕೆಂಪಿನ +ಝಗೆ +ಸುರಾಂಗನೆ
ಯರಿಗೆ +ಸುಭಟವ್ರಜಕೆ+ ಕುಂಟಣಿ
ವರ+ ದಿಗಂಗನೆಯರಿಗೆ+ ಬೈತಲೆಗ್+ಎಸೆವ +ಸಿಂಧೂರ
ಸುರಪನ್+ಅನಿಮಿಷತನಕೆ+ ರಿಪುವೆನಲ್
ಉರವಣಿಸಿ +ಕೆಂದೂಳಿ +ನಭಕ್
ಉಪ್ಪರಿಸೆ +ಹೊಯ್ದಾಡಿದರ್+ಉಭಯ +ಚತುರಂಗಬಲ+ ಹಳಚಿ

ಅಚ್ಚರಿ:
(೧) ಇಂದ್ರನಿಗೆ ಧೂಳು ಶತ್ರು ಎಂದು ಹೇಳುವ ಪರಿ – ಸುರಪನನಿಮಿಷತನಕೆ ರಿಪುವೆನಲುರವಣಿಸಿ ಕೆಂದೂಳಿ
(೨) ಸುರಾಂಗನೆ, ದಿಗಂಗನೆ – ಪದಗಳ ಬಳಕೆ

ಪದ್ಯ ೮: ಕೃಪಾಚಾರ್ಯರು ದುರ್ಯೋಧನನಿಗೆ ಏನು ಹೇಳಿದರು?

ಎನಲು ಭುಗಿಲೆಂದನು ಕೃಪಾಚಾ
ರ್ಯನು ಸುಯೋಧನ ಕೇಳು ರಾಧಾ
ತನಯನಿವ ಬೊಗುಳಿದೊಡೆ ನಿಶ್ಚಯವೆಂದು ನಂಬದಿರು
ಅನುವರದೊಳರ್ಜುನನ ಗೆಲುವೊಡೆ
ಯೆನಗೆ ನಿನಗೀತಂಗೆ ಕಲಬರಿ
ಗನಿಮಿಷರಿಗಳವಲ್ಲ ಬಲ್ಲೈ ಪಾರ್ಥನದಟುಗಳ (ವಿರಾಟ ಪರ್ವ, ೮ ಸಂಧಿ, ೮ ಪದ್ಯ)

ತಾತ್ಪರ್ಯ:
ಕರ್ಣನ ಮಾತನ್ನು ಕೇಳಿದ ಕೃಪಾಚಾರ್ಯರು, ಎಲೈ ಸುಯೋಧನ, ಕರ್ಣನು ಬೊಗಳುವುದನ್ನು ನಿಜವೆಂದು ನಂಬಬೇಡ. ಯುದ್ಧದಲ್ಲಿ ಅರ್ಜುನನನ್ನು ಗೆಲ್ಲಲು ನನಗೆ, ನಿನಗೆ, ಕರ್ಣನಿಗೆ ಇತರರಿಗೆ ಅಷ್ಟೆ ಅಲ್ಲ ದೇವತೆಗಳಿಗೂ ಸಾಧ್ಯವಿಲ್ಲ. ಅರ್ಜುನನ ಪರಾಕ್ರಮದ ಕಾರ್ಯಗಳು ನಿನಗೂ ಗೊತ್ತು ಎಂದು ಹೇಳಿದನು.

ಅರ್ಥ:
ಭುಗಿಲ್: ಶಬ್ದವನ್ನು ಸೂಚಿಸುವ ಪದ, ಒಮ್ಮೆಲೆ; ಕೇಳು: ಆಲಿಸು; ತನಯ: ಮಗ; ಬೊಗಳು: ಹೇಳು; ನಿಶ್ಚಯ: ನಿರ್ಧಾರ; ನಂಬು: ವಿಶ್ವಾಸವಿಡು; ಆನು: ಎದುರಿಸು; ಅನಿಮಿಷ: ದೇವತೆ; ಬಲ್ಲೈ: ತಿಳಿ; ಅದಟು: ಪರಾಕ್ರಮ, ಶೌರ್ಯ;

ಪದವಿಂಗಡಣೆ:
ಎನಲು+ ಭುಗಿಲೆಂದನು +ಕೃಪಾಚಾ
ರ್ಯನು +ಸುಯೋಧನ+ ಕೇಳು +ರಾಧಾ
ತನಯನ್+ಇವ +ಬೊಗುಳಿದೊಡೆ +ನಿಶ್ಚಯವೆಂದು +ನಂಬದಿರು
ಅನುವರದೊಳ್+ಅರ್ಜುನನ +ಗೆಲುವೊಡೆ
ಯೆನಗೆ+ ನಿನಗ್+ಈತಂಗೆ +ಕಲಬರಿಗ್
ಅನಿಮಿಷರಿಗ್+ಅಳವಲ್ಲ +ಬಲ್ಲೈ +ಪಾರ್ಥನ್+ಅದಟುಗಳ

ಅಚ್ಚರಿ:
(೧) ಕರ್ಣನನನ್ನು ಬಯ್ಯುವ ಪರಿ – ರಾಧಾತನಯನಿವ ಬೊಗುಳಿದೊಡೆ ನಿಶ್ಚಯವೆಂದು ನಂಬದಿರು

ಪದ್ಯ ೮೩: ಕೀಚಕನು ತನ್ನ ಸೌಂದರ್ಯದ ಬಗ್ಗೆ ಏನು ಹೇಳಿದನು?

ವನಜ ಮುಖಿ ವೀಳೆಯವನನುಲೇ
ಪನವ ಮಲ್ಲಿಗೆಯರಳ ತೊಡಿಗೆಯ
ನನುಪಮಾಂಬರವಿವೆ ಮನೋಹರವಹರೆ ಚಿತ್ತೈಸು
ನಿನಗೆ ಪಾಸಟಿಯಾನುಯೆನ್ನವೊ
ಲನಿಮಿಷರೊಳಾರುಂಟು ಚೆಲುವರು
ಮನುಜರೆನ್ನನು ಹೋಲುವರೆ ಸೈರಂಧ್ರಿ ಕೇಳೆಂದ (ವಿರಾಟ ಪರ್ವ, ೩ ಸಂಧಿ, ೮೩ ಪದ್ಯ)

ತಾತ್ಪರ್ಯ:
ಕಮಲಮುಖಿ ಸೈರಂಧ್ರಿ, ತಾಂಬೂಲ, ಅನುಲೇಪನ, ಮಲ್ಲಿಗೆಯ ಹೂಗಳು ಹೋಲಿಕೆಯೇ ಇಲ್ಲದ ಉತ್ತಮ ವಸ್ತ್ರಗಳು ಎಲ್ಲವನ್ನೂ ತಂದಿದ್ದೇನೆ, ನಿನಗೆ ಸರಿಯೆಂದರೆ ನಾನೇ, ದೇವತೆಗಳಲ್ಲೂ ನನ್ನಂತಹ ಚೆಲುವರಿಲ್ಲ ಎಂದ ಮೇಲೆ ಮನುಷ್ಯರು ನನ್ನನ್ನು ಹೋಲುವರೇ ಎಂದು ಕೀಚಕನು ಕೇಳಿದನು.

ಅರ್ಥ:
ವನಜ: ಕಮಲ; ವನಜಮುಖಿ: ಕಮಲದಂತ ಮುಖವುಳ್ಳವಳು; ವೀಳೆಯ: ತಾಂಬೂಲ; ಅನುಲೇಪ: ಲೇಪನದ್ರವ್ಯ, ಬಳಿಯುವಿಕೆ; ಅರಳು: ಹೂವು; ತೊಡಿಗೆ: ಆಭರಣ; ಅನುಪಮ: ಉತ್ಕೃಷ್ಟವಾದುದು; ಅಂಬರ: ಆಗಸ; ಮನೋಹರ: ಸುಂದರವಾದುದು; ಚಿತ್ತೈಸು: ಗಮನವಿಟ್ಟು ಕೇಳು; ಪಾಸಟಿ: ಸಮಾನ, ಹೋಲಿಕೆ; ಅನಿಮಿಷ: ದೇವತೆ; ಚೆಲುವು: ಅಂದ; ಮನುಜ: ಮಾನವ; ಹೋಲು: ಸದೃಶವಾಗು; ಕೇಳು: ಆಲಿಸು;

ಪದವಿಂಗಡಣೆ:
ವನಜಮುಖಿ +ವೀಳೆಯವನ್+ಅನುಲೇ
ಪನವ+ ಮಲ್ಲಿಗೆ+ಅರಳ +ತೊಡಿಗೆಯನ್
ಅನುಪಮ+ಅಂಬರವಿವೆ +ಮನೋಹರವಹರೆ +ಚಿತ್ತೈಸು
ನಿನಗೆ +ಪಾಸಟಿ+ಆನು+ಎನ್ನವೊಲ್
ಅನಿಮಿಷರೊಳ್+ಆರುಂಟು +ಚೆಲುವರು
ಮನುಜರ್+ಎನ್ನನು+ ಹೋಲುವರೆ+ ಸೈರಂಧ್ರಿ +ಕೇಳೆಂದ

ಅಚ್ಚರಿ:
(೧) ಕೀಚಕನ ಸೌಂದರ್ಯದ ವರ್ಣನೆ – ಎನ್ನವೊಲನಿಮಿಷರೊಳಾರುಂಟು ಚೆಲುವರು ಮನುಜರೆನ್ನನು ಹೋಲುವರೆ

ಪದ್ಯ ೨೨: ಪಾಂಡವರು ಯಾರನ್ನು ಸಂಹರಿಸಿ ಅರಣ್ಯವನ್ನು ಸಂಹರಿಸಿದರು?

ಜನಪ ಕೇಳ್ಕಿಮ್ಮೀರನೆಂಬವ
ನನಿಮಿಷರಿಗುಬ್ಬಸದ ಖಳನಾ
ತನ ವಿಭಾಡಿಸಿ ಹೊಕ್ಕರವರಾರಣ್ಯ ಮಂದಿರವ
ದನುಜನೇ ಕಿಮ್ಮೀರನಾತನ
ನನಿಲಜನೊ ಫಲುಗುಣನೊ ಕೊಂದಾ
ತನು ಯುಧಿಷ್ಠಿರನೋ ಸವಿಸ್ತರವಾಗಿ ಹೇಳೆಂದ (ಅರಣ್ಯ ಪರ್ವ, ೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ರಾಜ ಕೇಳು, ದೇವತೆಗಳಿಗೆ ಅಜೇಯನಾದ ಕಿಮ್ಮೀರನೆನ್ನುವ ರಾಕ್ಷಸನನ್ನು ಸಂಹರಿಸಿ ಅವರು ಅರಣ್ಯ ಪ್ರವೇಶ ಮಾಡಿದರು. ವಿದುರನ ಮಾತನ್ನು ಕೇಳಿ ಧೃತರಾಷ್ಟ್ರನು, ಕಿಮ್ಮೀರನೆಂಬುವನು ರಾಕ್ಷಸನೇ? ಅವನನ್ನು ಯಾರು ಸಂಹಾರ ಮಾಡಿದರು? ಅರ್ಜುನನೋ, ಭೀಮನೋ, ಯುಧಿಷ್ಠಿರನೋ?

ಅರ್ಥ:
ಜನಪ: ರಾಜ; ಕೇಳು: ಆಲಿಸು; ಅನಿಮಿಷ: ದೇವತೆ; ಉಬ್ಬಸ: ಮೇಲುಸಿರು; ಖಳ: ದುಷ್ಟ; ವಿಭಾಡಿಸು: ನಾಶಮಾಡು; ಹೊಕ್ಕು: ಸೇರು; ಅರಣ್ಯ: ಕಾನನ, ಕಾಡು; ಮಂದಿರ: ಆಲಯ; ದನುಜ: ರಾಕ್ಷಸ; ಅನಿಲಜ: ವಾಯುಪುತ್ರ (ಭೀಮ); ಕೊಂದು: ಸಾಯಿಸು; ಸವಿಸ್ತರ: ವಿವರವಾಗಿ;

ಪದವಿಂಗಡಣೆ:
ಜನಪ +ಕೇಳ್+ಕಿಮ್ಮೀರನ್+ಎಂಬವನ್
ಅನಿಮಿಷರಿಗ್+ಉಬ್ಬಸದ +ಖಳನ್
ಆತನ+ ವಿಭಾಡಿಸಿ+ ಹೊಕ್ಕರ್+ಅವರ್+ಅರಣ್ಯ +ಮಂದಿರವ
ದನುಜನೇ +ಕಿಮ್ಮೀರನ್+ಆತನನ್
ಅನಿಲಜನೊ +ಫಲುಗುಣನೊ +ಕೊಂದಾ
ತನು +ಯುಧಿಷ್ಠಿರನೋ +ಸವಿಸ್ತರವಾಗಿ+ ಹೇಳೆಂದ

ಅಚ್ಚರಿ:
(೧) ಪಾಂಡವರು ಅರಣ್ಯವನ್ನು ಸೇರಿದ ಪರಿ – ಕೇಳ್ಕಿಮ್ಮೀರನೆಂಬವನನಿಮಿಷರಿಗುಬ್ಬಸದ ಖಳನಾ
ತನ ವಿಭಾಡಿಸಿ ಹೊಕ್ಕರವರಾರಣ್ಯ ಮಂದಿರವ

ಪದ್ಯ ೧೦: ತಾರಕಾಸುರನ ಮಕ್ಕಳು ದೇವತೆಗಳನ್ನು ಹೇಗೆ ವಶಪಡಿಸಿಕೊಂಡರು?

ಕನಕದಲಿ ರಜತದಲಿ ಬಲುಗ
ಬ್ಬುನದಲೊಂದೊಂದಕ್ಕೆ ಶತ ಯೋ
ಜನದ ತೆರಹುಗಳೆಡೆಗೆ ಹಬ್ಬಿಸುವಮಳ ತೋರಣದ
ವಿನುತ ನಗರಿಗಳಾದುವಲ್ಲಿಯ
ದನುಜರೆರೆಗಳ ಹಾಯ್ಕಿ ಗಾಣದ
ಲನಿಮಿಷರ ನೀಡಾಡಿಕೊಂಡರು ದುರ್ಗವನು ಸುರರ (ಕರ್ಣ ಪರ್ವ, ೬ ಸಂಧಿ, ೧೦ ಪದ್ಯ)

ತಾತ್ಪರ್ಯ:
ಚಿನ್ನ, ಬೆಳ್ಳಿ, ಕಬ್ಬಿಣಗಳಿಂದ ಮೂರು ನಗರವನ್ನು ನಿರ್ಮಿಸಿದರು. ಒಂದೊಂದಕ್ಕೂ ನೂರು ಯೋಜನಗಳ ಅಂತರವಿತ್ತು. ಹೆಬ್ಬಾಗಿಲುಗಳಿಗೆ ತೋರಣಗಳಿಂದ ಅಲಂಕೃತವಾಗಿತ್ತು. ಈ ಮೂರು ಉರುಗಳಲ್ಲಿ ತಾರಕಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿಗಳು ನೆಲಸಿದರು. ಗಾಣವನ್ನು ಹಾಕಿ ಅದರ ತುದಿಗೆ ಎರೆ ಹುಳುಗಳನ್ನು ಸಿಕ್ಕಿಸಿ ಮೀನುಗಳನ್ನೆಳೆಯುವಂತೆ ದೇವತೆಗಳ ನಗರಗಳನ್ನು ಸ್ವಾಧೀನ ಪಡಿಸಿಕೊಂಡರು.

ಅರ್ಥ:
ಕನಕ: ಸುವರ್ಣ, ಚಿನ್ನ; ರಜತ: ಬೆಳ್ಳಿ; ಕಬ್ಬುನ: ಕಬ್ಬಿಣ; ಶತ: ನೂರು; ಯೋಜನ: ಅಳತೆಯ ಪ್ರಮಾಣ; ತೆರಹು: ಬರಿದು, ಖಾಲಿ; ಹಬ್ಬಿಸು: ಹರಡು; ಅಮಳ: ನಿರ್ಮಲ; ತೋರಣ: ಹೆಬ್ಬಾಗಿಲು; ವಿನುತ: ಸ್ತುತಿಗೊಂಡ; ನಗರ: ಊರು; ದನುಜ: ರಾಕ್ಷಸ; ಎರೆ: ಮೀನು, ಹಕ್ಕಿ ಗಳಿಗೆ ಹಾಕುವ ಆಹಾರ; ಹಾಯ್ಕು: ಹಾಕು, ನೀಡು; ಗಾಣ: ಗಾಳ, ಬಲೆಯ ಕೊಕ್ಕು; ಅನಿಮಿಷ:ದೇವತೆ, ಮೀನು; ನೀಡು: ಕೊಡು; ಆಡಾಡಿ: ಆಡಿಕೊಂಡ; ದುರ್ಗ: ಊರು, ಕೋಟೆ; ಸುರ: ದೇವತೆ;

ಪದವಿಂಗಡಣೆ:
ಕನಕದಲಿ +ರಜತದಲಿ +ಬಲು
ಕಬ್ಬುನದಲ್+ಒಂದೊಂದಕ್ಕೆ +ಶತ +ಯೋ
ಜನದ +ತೆರಹುಗಳ್+ಎಡೆಗೆ+ ಹಬ್ಬಿಸುವ್+ಅಮಳ +ತೋರಣದ
ವಿನುತ+ ನಗರಿಗಳಾದುವ್+ಅಲ್ಲಿಯ
ದನುಜರ್+ಎರೆಗಳ +ಹಾಯ್ಕಿ +ಗಾಣದಲ್
ಅನಿಮಿಷರ+ ನೀಡಾಡಿ+ಕೊಂಡರು +ದುರ್ಗವನು +ಸುರರ

ಅಚ್ಚರಿ:
(೧) ಉಪಮಾನದ ಪ್ರಯೋಗ – ದನುಜರೆರೆಗಳ ಹಾಯ್ಕಿ ಗಾಣದಲನಿಮಿಷರ ನೀಡಾಡಿಕೊಂಡರು ದುರ್ಗವನು ಸುರರ
(೨) ಕನಕ, ರಜತ, ಕಬ್ಬಿಣ – ನಗರಗಳನ್ನು ಕಟ್ಟಲು ಬಳಸಿದ ಲೋಹಗಳು

ಪದ್ಯ ೪: ರಾಕ್ಷಸರ ಗುರಿ ಯಾವುದು?

ಎನಿತನೊಲಿದಡೆ ಏನಹುದು ದು
ರ್ಜನರು ಪುರುಷಾರ್ಥಿಗಳೆ ಹಾವಿಂ
ಗನಿಲನೇ ಆಹಾರವಾದಡೆ ಬಿಟ್ಟುದೇ ವಿಷವ
ದನುಜರದ್ಭುತ ತಪವ ಮಾಡಿದ
ರನಿಮಿಷಾವಳಿ ಬೇಂಟೆಯಾಡಲು
ನೆನೆದು ಬಿನ್ನೈಸಿದರು ಕಮಲಭವಂಗೆ ನಿಜಮತವ (ಕರ್ಣ ಪರ್ವ, ೬ ಸಂಧಿ, ೪ ಪದ್ಯ)

ತಾತ್ಪರ್ಯ:
ಎಷ್ಟು ಒಲಿದರೆ, ಪ್ರೀತಿತೋರಿದರೆ ಏನು ಪ್ರಯೋಜನ, ದುರ್ಜನರು ಪುರುಷಾರ್ಥಗಳನ್ನು ಬಯಸುವವರೇ? ಬ್ರಹ್ಮನು ಅವರಿಗೆ ಎಷ್ಟು ಒಲಿದು ಏನು ಪ್ರಯೋಜನ, ಹಾವಿಗೆ ಗಾಳಿಯೇ ಆಹಾರವಾದರೂ ವಿಷವನ್ನು ಬಿಡುತ್ತದೆಯೇ? ಹಾಗೆಯೇ ಈ ರಾಕ್ಷಸರ ತಪಸ್ಸು. ದೇವತೆಗಳ ಬೇಟೆಯಾಡುವುದೇ ಅವರ ಗುರಿ. ಅದಕ್ಕನುಸಾರವಾಗಿ ಅವರು ಬ್ರಹ್ಮನನ್ನು ಪ್ರಾರ್ಥಿಸಿದರು.

ಅರ್ಥ:
ಎನಿತು: ಎಷ್ಟು; ಒಲಿ: ಪ್ರೀತಿ; ದುರ್ಜನ: ದುಷ್ಟ; ಪುರುಷಾರ್ಥ:ಪರಮಧ್ಯೇಯಗಳು; ಹಾವು: ಉರಗ;ಅನಿಲ: ವಾಯು; ಆಹಾರ: ಊಟ; ಬಿಟ್ಟು: ಬಿಡು, ತೊರೆ; ವಿಷ: ನಂಜು; ದನುಜ: ರಾಕ್ಷಸ; ಅದ್ಭುತ: ವಿಸ್ಮಯವನ್ನುಂಟು ಮಾಡುವ; ತಪ: ತಪಸ್ಸು; ಅನಿಮಿಷ: ದೇವತೆ; ಆವಳಿ: ಗುಂಪು; ಬೇಂಟೆ: ಬೇಟೆ, ಸಾಯಿಸುವ ಆಟ; ನೆನೆ: ಜ್ಞಾಪಿಸು; ಬಿನ್ನೈಸು: ಕೇಳು; ಕಮಲಭವ:
ಕಮಲದಲ್ಲಿ ಹುಟ್ಟಿದವ(ಬಹ್ಮ) ನಿಜ: ದಿಟ; ಮತ: ವಿಚಾರ;

ಪದವಿಂಗಡಣೆ:
ಎನಿತನ್+ಒಲಿದಡೆ +ಏನಹುದು +ದು
ರ್ಜನರು +ಪುರುಷಾರ್ಥಿಗಳೆ+ ಹಾವಿಂಗ್
ಅನಿಲನೇ +ಆಹಾರವಾದಡೆ +ಬಿಟ್ಟುದೇ +ವಿಷವ
ದನುಜರ್+ಅದ್ಭುತ +ತಪವ +ಮಾಡಿದರ್
ಅನಿಮಿಷಾವಳಿ+ ಬೇಂಟೆ+ಯಾಡಲು
ನೆನೆದು +ಬಿನ್ನೈಸಿದರು+ ಕಮಲಭವಂಗೆ +ನಿಜಮತವ

ಅಚ್ಚರಿ:
(೧) ಬ್ರಹ್ಮನನ್ನು ಕಮಲಭವ, ದೇವತೆಗಳನ್ನು ಅನಿಮಿಷ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ಹಾವಿಂಗನಿಲನೇ ಆಹಾರವಾದಡೆ ಬಿಟ್ಟುದೇ ವಿಷವ