ಪದ್ಯ ೪೮: ವ್ಯಾಸರು ಗಾಂಧಾರಿಯನ್ನು ಹೇಗೆ ಸಮಾಧಾನ ಪಡಿಸಿದರು?

ಮುನಿಯದಿರು ಗಾಂಧಾರಿ ದಿಟ ನಿ
ನ್ನನುಜನಿಕ್ಕಿದ ಸಾರಿ ನಿನ್ನಯ
ತನುಜರನು ನಿನ್ನಖಿಳಮಿತ್ರಜ್ಞಾತಿ ಬಾಂಧವರ
ಮನುಜಪತಿಗಳನಂತವನು ರಿಪು
ಜನಪ ಶರವಹ್ನಿಯಲಿ ಬೇಳಿದು
ದಿನಿತು ಶೋಕೋದ್ರೇಕ ನಿನಗೇಕೆಂದನಾ ಮುನಿಪ (ಗದಾ ಪರ್ವ, ೧೧ ಸಂಧಿ, ೪೮ ಪದ್ಯ)

ತಾತ್ಪರ್ಯ:
ವೇದವ್ಯಾಸರು ಗಾಂಧಾರಿಯನ್ನು ಸಮಾಧಾನ ಪಡಿಸುತ್ತಾ, ನನ್ನ ಮಾತುಗಳನ್ನು ಕೇಳಿ ಕೋಪಗೊಳ್ಳಬೇಡ. ನಿನ್ನ ತಮ್ಮನು ಹಾಕಿದ ದಾಳವು ನಿನ್ನ ಮಕ್ಕಳು, ಮಿತ್ರರು, ಜ್ಞಾತಿಗಳು ಬಾಂಧವರು ಲೋಕದ ಸಮಸ್ತ ರಾಜರು ಎಲ್ಲರನ್ನೂ ಶತ್ರುಗಳ ಬಾಣಾಗ್ನಿಗೆ ಬಲಿಕೊಟ್ಟಿತು. ಇಷ್ಟೊಂದು ಶೋಕ ಉದ್ರೇಕಗಳು ನಿನಗೇಕೆ ಎಂದು ಸಂತೈಸಿದರು.

ಅರ್ಥ:
ಮುನಿ: ಕೋಪ; ದಿಟ: ನಿಜ; ಅನುಜ: ತಮ್ಮ; ಇಕ್ಕು: ಇಡು; ಸಾರಿ: ದಾಳ; ತನುಜ: ಮಕ್ಕಳು; ಅಖಿಳ: ಎಲ್ಲಾ; ಮಿತ್ರ: ಸ್ನೇಹಿತ; ಜ್ಞಾತಿ: ತಂದೆಯ ಕಡೆಯ ಬಂಧು, ದಾಯಾದಿ; ಬಾಂಧವ: ಪರಿವಾರದ ಜನ; ಮನುಜ: ನರ, ಮನುಷ್ಯ; ಮನುಜಪತಿ: ರಾಜ; ರಿಪು: ವೈರಿ; ಜನಪ: ರಾಜ; ಶರ: ಬಾಣ; ವಹ್ನಿ: ಅಗ್ನಿ, ಬಂಕಿ; ಬೇಳುವೆ: ಯಜ್ಞ; ಶೋಕ: ದುಃಖ; ಉದ್ರೇಕ: ಉದ್ವೇಗ, ಆವೇಗ, ತಳಮಳ; ಮುನಿಪ: ಋಷಿ; ಅನಂತ: ಕೊನೆಯಿಲ್ಲದ;

ಪದವಿಂಗಡಣೆ:
ಮುನಿಯದಿರು +ಗಾಂಧಾರಿ +ದಿಟ +ನಿನ್ನ್
ಅನುಜನ್+ಇಕ್ಕಿದ +ಸಾರಿ +ನಿನ್ನಯ
ತನುಜರನು +ನಿನ್ನ್+ಅಖಿಳ+ಮಿತ್ರ+ಜ್ಞಾತಿ +ಬಾಂಧವರ
ಮನುಜಪತಿಗಳ್+ಅನಂತವನು +ರಿಪು
ಜನಪ +ಶರವಹ್ನಿಯಲಿ +ಬೇಳಿದುದ್
ಇನಿತು +ಶೋಕ+ಉದ್ರೇಕ +ನಿನಗೇಕ್+ಎಂದನಾ +ಮುನಿಪ

ಅಚ್ಚರಿ:
(೧) ಮುನಿ, ಮುನಿಪ – ಪದ್ಯದ ಮೊದಲ ಹಾಗು ಕೊನೆಯ ಪದ
(೨) ಅನುಜ, ತನುಜ, ಮನುಜ, ಪ್ರಾಸ ಪದ
(೩) ಮನುಜಪತಿ, ಜನಪ – ಸಮಾನಾರ್ಥಕ ಪದ

ಪದ್ಯ ೬೧: ಆತ್ಮದ ಸ್ವರೂಪವೇನು?

ಏಕನಾತ್ಮನನಂತನಚಲನ
ಶೋಕನದ್ವಯನಮಲನಭವನ
ಲೋಕನಿಸ್ಪೃಹನಮಿತನಕ್ರಿಯನಹತನಭ್ರಮನು
ಲೋಕಗತಿ ಮಾಯಾವಿಲಾಸ ವಿ
ವೇಕಿಗಳಿಗಿದು ಬಯಲು ಫಲುಗುಣ
ಸಾಕು ಗರ್ವವ ಬೀಳುಕೊಡು ಸೆಳೆ ಶರವ ಹಿಡಿ ಧನುವ (ಭೀಷ್ಮ ಪರ್ವ, ೩ ಸಂಧಿ, ೬೧ ಪದ್ಯ)

ತಾತ್ಪರ್ಯ:
ಆತ್ಮನು ಒಬ್ಬನೇ, ಅವನಿಗೆ ಆದಿ ಅಂತ್ಯಗಳಿಲ್ಲ. ಅವನು ಚಲಿಸುವವನಲ್ಲ, ಅವನಿಗೆ ಶೋಕವಿಲ್ಲ, ಹುಟ್ಟಿಲ್ಲ, ಅವನು ತನಗೆ ಎರಡನೆಯದಿಲ್ಲದವನು, ಅಲೋಕನು, ಏನನ್ನೂ ಬಯಸುವವನಲ್ಲ, ಅವನಿಗೆ ಎಲ್ಲೆಯಿಲ್ಲ, ಅವನು ಸಾಯುವವನಲ್ಲ್, ಭ್ರಮೆಯಿಲ್ಲದವನು, ಲೋಕದ ಚಲನೆ ಮಾಯೆಯ ವಿಲಾಸ, ವಿವೇಕಿಗಳಿಗೆ ಇದು ಬಯಲು, ಅರ್ಜುನ ಇನ್ನು ಸಾಕು, ಗರ್ವವನ್ನು ತೊರೆದು ಧನುಸ್ಸನ್ನು ಹಿಡಿದು ಬಾಣಗಳನ್ನು ಹೂಡು ಎಂದು ಕೃಷ್ಣನು ಹೇಳಿದನು.

ಅರ್ಥ:
ಏಕ: ಒಂದು; ಆತ್ಮ: ಜೀವ, ಉಸಿರು; ಅನಂತ: ಕೊನೆಯಿಲ್ಲದ; ಅಚಲ:ಸ್ಥಿರ; ಅಶೋಕ: ದುಃಖರಹಿತನಾದವನು; ಅದ್ವಯ: ಎರಡಿಲ್ಲದಿರುವ ಸ್ಥಿತಿ; ಅಮಲ: ನಿರ್ಮಲವಾದ; ಅಭವ: ಹುಟ್ಟಿಲ್ಲದುದು; ಅಲೋಕ: ಎಲೆಯಿಲ್ಲದ ಸ್ಥಿತಿ; ನಿಸ್ಪೃಹ: ಆಸೆಯಿಲ್ಲದವ; ಅಮಿತ:ಅಳತೆಗೆ ಮೀರಿದ; ಕ್ರಿಯ: ಚಲಿಸುವ; ಅಹತ: ಸಾಯುವವನಲ್ಲ; ಅಭ್ರಮ: ಭ್ರಮೆಯಿಲ್ಲದವನು; ಲೋಕ: ಜಗತ್ತು; ಗತಿ: ಚಲನೆ; ಮಾಯ: ಇಂದ್ರಜಾಲ; ವಿಲಾಸ: ಕ್ರೀಡೆ, ವಿಹಾರ; ವಿವೇಕ: ಯುಕ್ತಾಯುಕ್ತ ವಿಚಾರ; ಬಯಲು: ಗೋಚರಿಸುವುದು; ಸಾಕು: ನಿಲ್ಲು; ಗರ್ವ: ಅಹಂಕಾರ; ಬೀಳುಕೊಡು: ತೊರೆ; ಸೆಳೆ: ವಶಪಡಿಸಿಕೊಳ್ಳು; ಶರ: ಬಾಣ; ಹಿಡಿ: ಗ್ರಹಿಸು; ಧನು: ಬಿಲ್ಲು;

ಪದವಿಂಗಡಣೆ:
ಏಕನ್+ಆತ್ಮನ್+ಅನಂತನ್+ಅಚಲನ್
ಅಶೋಕನ್+ಅದ್ವಯನ್+ಅಮಲನ್+ಅಭವನ್
ಅಲೋಕ+ ನಿಸ್ಪೃಹನ್+ಅಮಿತನ್+ಅಕ್ರಿಯನ್+ಅಹತನ್+ಅಭ್ರಮನು
ಲೋಕಗತಿ +ಮಾಯಾ+ವಿಲಾಸ +ವಿ
ವೇಕಿಗಳಿಗಿದು +ಬಯಲು +ಫಲುಗುಣ
ಸಾಕು +ಗರ್ವವ +ಬೀಳುಕೊಡು +ಸೆಳೆ +ಶರವ +ಹಿಡಿ +ಧನುವ

ಅಚ್ಚರಿ:
(೧) ಆತ್ಮನ ಲಕ್ಷಣ – ಏಕನ್, ಅನಂತ, ಅಚಲನ್, ಅಲೋಕ, ಅಶೋಕನ್, ಅದ್ವಯನ್, ಅಮಲನ್, ಅಭವನ್, ಅಮಿತನ್, ಅಕ್ರಿಯನ್, ಅಹತನ, ಅಭ್ರಮನ್
(೨) ೧-೩ ಸಾಲು ಒಂದೇ ಪದವಾಗಿ ರಚನೆಯಾಗಿರುವುದು

ಪದ್ಯ ೨೧: ಭೀಷ್ಮರು ದುರ್ಯೋಧನನಿಗೆ ಯಾವ ವಿಚಾರವನ್ನು ಹೇಳಿದರು?

ಜಗದಗುರುವಲ್ಲಾ ಮುರಾಂತಕ
ನಗಣಿತೋಪನು ಮಹಿಮನಲ್ಲಾ
ಸಗುಣ ನಿರ್ಗುಣನಾ ಮಹಾತ್ಮನನಂತ ರೂಪವನು
ವಿಗಡಿಸಲು ಜಯವಹುದೆ ಜಾಣರ
ಬಗೆಗೆ ಬಹುದೇ ನಿನ್ನ ಮತವೆಲೆ
ಮಗನೆ ಮರುಳಾದೈ ಮದಾಂಧರ ಮಾತುಗಳ ಕೇಳಿ (ಭೀಷ್ಮ ಪರ್ವ, ೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭೀಷ್ಮ ದುರ್ಯೋಧನನನ್ನು ಉದ್ದೇಶಿಸು, ಮಗು ದುರ್ಯೋಧನ, ಶ್ರೀಕೃಷ್ಣನು ಜಗತ್ತಿಗೆ ಗುರುವಲ್ಲವೇ? ಅವನ ಮಹಿಮೆಯನ್ನು ಎಣಿಸಬಹುದೇ? ಅದಕ್ಕೆ ಹೋಲಿಕೆಯಾದರೂ ಇದೆಯೇ? ಅವನು ಸಗುಣನೂ ಹೌದು ನಿರ್ಗುಣನೂ ಹೌದು, ಅವನ ರೂಪವು ಅನಂತ, ಅವನನ್ನೆದುರಿಸಿದರೆ ಗೆಲ್ಲಬಹುದೇ ತಿಳಿದವರು ಮೆಚ್ಚುವರೇ? ನಿನ್ನ ಈ ಹವಣಿಕೆಯನ್ನು ಅವರು ಅನುಮೋದಿಸುವರೇ? ಮದಾಂಧರ ಮಾತುಗಳನ್ನು ಕೇಳಿ ನಿನ್ನ ಬುದ್ಧಿಗೆ ಹುಚ್ಚು ಹಿಡಿದಿದೆ ಎಂದು ದುರ್ಯೋಧನನಿಗೆ ಬುದ್ಧಿವಾದ ಹೇಳಿದರು.

ಅರ್ಥ:
ಜಗ: ಜಗತ್ತು; ಗುರು: ಆಚಾರ್ಯ; ಮುರಾಂತಕ: ಕೃಷ್ಣ; ಅಗಣಿತ: ಲೆಕ್ಕವಿಲ್ಲದಷ್ಟು; ಓಪ: ಸಂರಕ್ಷಿಸುವವ, ಪ್ರಿಯ; ಮಹಿಮ: ಹಿರಿಮೆ ಯುಳ್ಳವನು; ಸಗುಣ: ಯೋಗ್ಯಗುಣಗಳಿಂದ ಕೂಡಿದ; ನಿರ್ಗುಣ: ಗುಣವಿಲ್ಲದ; ಮಹಾತ್ಮ: ಶ್ರೇಷ್ಠ; ಅನಂತ: ಕೊನೆಯಿಲ್ಲದ; ರೂಪ: ಆಕಾರ; ವಿಗಡ: ಶೌರ್ಯ, ಸಾಹಸ; ಜಯ: ಗೆಲುವು; ಜಾಣ: ಬುದ್ಧಿವಂತ; ಬಗೆ: ಆಲೋಚನೆ; ಮತ: ವಿಚಾರ; ಮಗ: ಸುತ; ಮರುಳು: ಬುದ್ಧಿಭ್ರಮೆ, ಹುಚ್ಚು; ಮದಾಂಧ: ಮದದಿಂದ ಕುರುಡಾದ; ಮಾತು: ವಾಣಿ; ಕೇಳು: ಆಲಿಸು;

ಪದವಿಂಗಡಣೆ:
ಜಗದ+ಗುರುವಲ್ಲಾ+ ಮುರಾಂತಕನ್
ಅಗಣಿತ+ಒಪನು +ಮಹಿಮನಲ್ಲಾ
ಸಗುಣ+ ನಿರ್ಗುಣನ್+ಆ+ ಮಹಾತ್ಮನ್+ಅನಂತ +ರೂಪವನು
ವಿಗಡಿಸಲು +ಜಯವಹುದೆ +ಜಾಣರ
ಬಗೆಗೆ +ಬಹುದೇ +ನಿನ್ನ +ಮತವ್+ಎಲೆ
ಮಗನೆ+ ಮರುಳಾದೈ +ಮದಾಂಧರ +ಮಾತುಗಳ+ ಕೇಳಿ

ಅಚ್ಚರಿ:
(೧) ಕೃಷ್ಣನ ಗುಣಗಾನ – ಜಗದಗುರುವಲ್ಲಾ ಮುರಾಂತಕನಗಣಿತೋಪನು ಮಹಿಮನಲ್ಲಾ ಸಗುಣ ನಿರ್ಗುಣನಾ ಮಹಾತ್ಮನನಂತ ರೂಪವನು
(೨) ಮ ಕಾರದ ಸಾಲು ಪದ – ಮಗನೆ ಮರುಳಾದೈ ಮದಾಂಧರ ಮಾತುಗಳ ಕೇಳಿ