ಪದ್ಯ ೨೯: ಧರ್ಮಜನಿಗೆ ಯಾವಗ ಜ್ಞಾನಕಲಿಸುವೆನೆಂದು ಭೀಷ್ಮರು ಹೇಳಿದರು?

ಮಾನನಿಧಿ ಕೇಳ್ ಕೌರವಂಗಾ
ಧೀನವೆನ್ನಯ ತನು ವಿಧಾತ್ರಾ
ಧೀನವೆನ್ನಯ ಜೀವವದು ಕಾರಣದಿನಾಹವಕೆ
ನೀನು ಚಂತಿಸಬೇಡ ನನ್ನವ
ಸಾನಕಾಲಕೆ ಮತ್ತೆ ಬರಲು ನಿ
ದಾನವನು ನೆರೆ ಬುದ್ಧಿಗಲಿಸುವೆನೀಗ ಮರಳೆಂದ (ಭೀಷ್ಮ ಪರ್ವ, ೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಷ್ಮನು ಎಲೈ ಮಾನನಿಧಿಯಾದ ಧರ್ಮಜನೇ, ಅನ್ನದ ಹಂಗಿನಿಂದ ಈ ದೇಹವು ದುರ್ಯೋಧನನಿಗೆ ಅಧೀನ. ಆದರೆ ನನ್ನ ಜೀವನವು ಬ್ರಹ್ಮನ ಬರಹಕ್ಕಧೀನ. ಆದುದರಿಂದ ನೀನು ಚಿಮ್ತಿಸಬೇಡ, ನನ್ನ ಮರಣಕಾಲಕ್ಕೆ ನನ್ನ ಬಳಿ ಬಂದೆ, ನಾನು ನಿನಗೆ ಬುದ್ಧಿ ಕಲಿಸುತ್ತೇನೆ ಎಂದು ಧರ್ಮಜನಿಗೆ ಹೇಳಿದನು.

ಅರ್ಥ:
ಮಾನನಿಧಿ: ಮಾನವನ್ನೇ ಐಶ್ವರ್ಯವಾಗಿಕೊಂಡಿರುವವ; ಮಾನ: ಮರ್ಯಾದೆ, ಗೌರವ; ನಿಧಿ: ಐಶ್ವರ್ಯ; ಕೇಳು: ಆಲಿಸು; ಅಧೀನ: ಕೈಕೆಳಗಿರುವ; ತನು: ದೇಹ; ವಿಧಾತ್ರ: ಬ್ರಹ್ಮ; ಅಧೀನ: ವಶ; ಜೀವ: ಪ್ರಾಣ; ಕಾರಣ: ನಿಮಿತ್ತ, ಹೇತು; ಆಹವ: ಯುದ್ಧ; ಚಿಂತಿಸು: ಯೋಚನೆ; ಅವಸಾನ: ಅಂತ್ಯ; ಬರಲು: ಆಗಮಿಸು; ನಿದಾನ: ಸಾವಕಾಶ; ನೆರೆ: ಸಮೀಪ, ಹತ್ತಿರ; ಬುದ್ಧಿ: ತಿಳಿವು, ಅರಿವು; ಕಲಿಸು: ಹೇಳು; ಮರಳು: ತೆರಳು, ಹಿಂದಿರುಗು;

ಪದವಿಂಗಡಣೆ:
ಮಾನನಿಧಿ+ ಕೇಳ್ +ಕೌರವಂಗ್
ಅಧೀನವ್+ಎನ್ನಯ +ತನು +ವಿಧಾತ್ರ
ಅಧೀನವ್+ಎನ್ನಯ +ಜೀವವ್+ಅದು+ ಕಾರಣದಿನ್+ಆಹವಕೆ
ನೀನು +ಚಂತಿಸಬೇಡ +ನನ್
ಅವಸಾನಕಾಲಕೆ+ ಮತ್ತೆ+ ಬರಲು+ ನಿ
ದಾನವನು +ನೆರೆ +ಬುದ್ಧಿ+ಕಲಿಸುವೆನ್+ಈಗ+ ಮರಳೆಂದ

ಅಚ್ಚರಿ:
(೧)ಆಧೀನ ಪದದ ಬಳಕೆ – ೨,೩ ಸಾಲಿನ ಮೊದಲ ಪದ

ಪದ್ಯ ೪೬: ಅರ್ಜುನನು ಶಬರನನ್ನು ಏನೆಂದು ಎಚ್ಚರಿಸಿದನು?

ಕಾಣಬಹುದೋ ಶಬರ ನಿನ್ನೀ
ಪ್ರಾಣವೆನ್ನಾಧೀನವರಿಯಾ
ಸ್ಥಾಣುವಿನ ಬಲುಹುಂಟು ಹಿಂಡುವೆನಿನ್ನು ನಿನ್ನಸುವ
ಗೋಣ ಮುರಿವೆನು ಮಿಸುಕಿದರೆ ಶಿವ
ನಾಣೆ ಬಾ ಸುಮ್ಮುಖಕೆ ಹಾಣಾ
ಹಾಣಿಗಿನ್ನನುವಾಗೆನುತಲೆವೆಯಿಕ್ಕದೀಕ್ಷಿಸಿದ (ಅರಣ್ಯ ಪರ್ವ, ೭ ಸಂಧಿ, ೪೬ ಪದ್ಯ)

ತಾತ್ಪರ್ಯ:
ಶಬರಾ, ನಿನ್ನ ಪ್ರಾಣವು ಈಗ ನನಗೆ ಅಧೀನವಾಗಿದೆ, ಇದನ್ನು ನೀನು ತಿಳಿದಿರುವೆಯಾ? ನನಗೆ ಶಿವನ ಕೃಪೆಯ ಶಕ್ತಿಯು ಬಂದಿದೆ. ಇನ್ನು ನಿನ್ನ ಪ್ರಾಣವನ್ನು ಹಿಂಡುತ್ತೇನೆ. ಸ್ವಲ್ಪ ಮಿಸುಕಿದರೆ ನಿನ್ನ ಕತ್ತನ್ನೇ ಶಿವನಾಣೆ ಮುರಿದುಬಿಡುತ್ತೇನೆ ಹಾಣಾಹಣಿಗೆ ಇನ್ನು ನೀನು ಸಿದ್ಧನಿರು ಎಂದು ವೀರಾಲಾಪವನ್ನು ಮಾಡುತ್ತಾ ಅರ್ಜುನನು ಕಿರಾತನನ್ನು ಕಣ್ಣುರೆಪ್ಪೆ ಮುಚ್ಚದೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದನು.

ಅರ್ಥ:
ಕಾಣು: ತೋರು; ಶಬರ: ಬೇಡ; ಪ್ರಾಣ: ಜೀವ; ಅಧೀನ: ವಶ; ಅರಿ: ತಿಳಿ; ಸ್ಥಾಣು: ಶಿವ; ಬಲುಹು: ಶಕ್ತಿ; ಹಿಂಡು: ಹಿಸುಕು, ಅಮುಕು; ಅಸು: ಪ್ರಾಣ; ಗೋಣು: ಕುತ್ತಿಗೆ, ಗಳ; ಮುರಿ: ಸೀಳು; ಮಿಸುಕು: ಅಲ್ಲಾಟ; ಆಣೆ: ಪ್ರಮಾಣ; ಸಮ್ಮುಖ: ಎದುರು; ಹಾಣಾಹಾಣಿ: ಒಬ್ಬನು ತನ್ನ ಹಣೆಯಿಂದ ಇನ್ನೊಬ್ಬನ ಹಣೆಗೆ ಹೊಡೆದು ಮಾಡುವ ಯುದ್ಧ; ಅನುವಾಗು: ಸಿದ್ಧವಾಗು; ಎವೆ: ಕಣ್ಣುರೆಪ್ಪೆ; ಇಕ್ಕು:ಮುಚ್ಚು, ಹರಡು; ಈಕ್ಷಿಸು: ನೋಡು;

ಪದವಿಂಗಡಣೆ:
ಕಾಣಬಹುದೋ +ಶಬರ +ನಿನ್ನೀ
ಪ್ರಾಣವ್+ಎನ್ನ+ಅಧೀನವ್+ಅರಿಯಾ
ಸ್ಥಾಣುವಿನ +ಬಲುಹುಂಟು +ಹಿಂಡುವೆನ್+ಇನ್ನು +ನಿನ್+ಅಸುವ
ಗೋಣ +ಮುರಿವೆನು +ಮಿಸುಕಿದರೆ +ಶಿವ
ನಾಣೆ +ಬಾ+ ಸುಮ್ಮುಖಕೆ+ ಹಾಣಾ
ಹಾಣಿಗಿನ್+ಅನುವಾಗ್+ಎನುತಲ್+ಎವೆಯಿಕ್ಕದ್+ಈಕ್ಷಿಸಿದ

ಅಚ್ಚರಿ:
(೧) ಅರ್ಜುನನು ಶಬರನನ್ನು ನೋಡುವ ಪರಿ – ಬಾ ಸುಮ್ಮುಖಕೆ ಹಾಣಾಹಾಣಿಗಿನ್ನನುವಾಗೆನುತಲೆವೆಯಿಕ್ಕದೀಕ್ಷಿಸಿದ