ಪದ್ಯ ೨೩: ಧೃಷ್ಟದ್ಯುಮ್ನನು ಕೋಪದಿಂದ ಏನು ಹೇಳಿದನು?

ಅವನ ಗುರುತನವೇನು ವಿಪ್ರಾ
ಧಮನಲಾ ಶಸ್ತ್ರೋಪಜೀವನ
ನಿವನು ಋಷಿಯೇ ದ್ರೋಣವಧೆಯನ್ಯಾಯವೇ ತನಗೆ
ಇವನು ತಮ್ಮಯ್ಯನನು ನೆರೆ ಪರಿ
ಭವಿಸನೇ ಚಿಕ್ಕಂದು ನಿಮಗೇ
ಕಿವನನಿರಿದರೆ ಖಾತಿಯೆಂದನು ದ್ರುಪದಸುತ ಮುಳಿದು (ದ್ರೋಣ ಪರ್ವ, ೧೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ಕೋಪದಿಂದ ಉತ್ತರಿಸುತ್ತಾ, ದ್ರೋಣನ ಗುರುತನವಾದರೂ ಎಂತಹುದು? ಅವನೇನು ಬ್ರಾಹ್ಮಣೋತ್ತಮನೇ? ಶಸ್ತ್ರವಿದ್ಯೆಯಿಂದ ಜೀವಿಸುವ ಇವನು ಬ್ರಾಹ್ಮಣರಲ್ಲಿಯೇ ಅಧಮನು, ಇವನೇನು ಋಷಿಯೇ? ಈ ದ್ರೋಣನನ್ನು ಕಡಿದದ್ದು ಅನ್ಯಾಯವಲ್ಲ. ಚಿಕ್ಕಂದಿನಲ್ಲಿ ಇವನು ನನ್ನ ತಂದೆಯನ್ನು ಅಪಮಾನಿಸಲಿಲ್ಲವೇ? ನಾನಿವನನ್ನು ಇರಿದರೆ ನೀವೇಕೆ ಸಿಟ್ಟಾಗಬೇಕು ಎಂದನು.

ಅರ್ಥ:
ಗುರು: ಆಚಾರ್ಯ; ವಿಪ್ರ: ಬ್ರಾಹ್ಮಣ; ಅಧಮ: ಕೀಳು; ಶಸ್ತ್ರ: ಆಯುಧ; ಉಪಜೀವನ: ಪರಾವಲಂಬಿ ಜೀವನ; ಋಷಿ: ಮುನಿ, ಯೋಗಿ; ವಧೆ: ಸಾವು; ಅನ್ಯಾಯ: ಸಮ್ಮತವಲ್ಲದ; ಅಯ್ಯ: ತಂದೆ; ನೆರೆ: ಗುಂಪು; ಪರಿಭವ: ತಿರಸ್ಕಾರ, ಸೋಲು; ಚಿಕ್ಕಂದು: ಸಣ್ಣ ವಯಸ್ಸು; ಇರಿ: ಚುಚ್ಚು; ಖಾತಿ: ಕೋಪ; ಸುತ: ಮಗ; ಮುಳಿ: ಸಿಟ್ಟು, ಕೋಪ;

ಪದವಿಂಗಡಣೆ:
ಅವನ +ಗುರುತನವೇನು +ವಿಪ್ರ
ಅಧಮನಲಾ +ಶಸ್ತ್ರ+ಉಪಜೀವನನ್
ಇವನು +ಋಷಿಯೇ +ದ್ರೋಣವಧೆ+ಅನ್ಯಾಯವೇ +ತನಗೆ
ಇವನು +ತಮ್ಮ್+ಅಯ್ಯನನು +ನೆರೆ +ಪರಿ
ಭವಿಸನೇ +ಚಿಕ್ಕಂದು +ನಿಮಗೇಕ್
ಇವನನ್+ಇರಿದರೆ +ಖಾತಿಯೆಂದನು +ದ್ರುಪದ+ಸುತ +ಮುಳಿದು

ಅಚ್ಚರಿ:
(೧) ದ್ರೋಣರನ್ನು ಬಯ್ಯುವ ಪರಿ – ವಿಪ್ರಾಧಮನಲಾ ಶಸ್ತ್ರೋಪಜೀವನನಿವನು ಋಷಿಯೇ

ಪದ್ಯ ೪೨: ಅಭಿಮನ್ಯುವು ಯಾವ ಪ್ರಮಾಣವನ್ನು ಮಾಡಿದನು?

ಎಲವೊ ಕೌರವ ಕೊಬ್ಬಿ ನರಿ ಹೆ
ಬ್ಬುಲಿಯ ಕೂಸನು ಬೇಡುವಂದದಿ
ಆಳವನರಿಯದೆ ಅಧಮ ರಥಿಕರ ಕೂಡೆ ತೊಡಕುವರೆ
ಮಲೆತು ನೀನೆನ್ನೊಡನೆ ರಣದಲಿ
ಹಳಚಿ ನೀ ತಲೆವೆರಸಿ ಮರಳಿದ
ಡಿಳುಹುವೆನು ಕೈದುವನು ಶರಸನ್ಯಾಸ ನನಗೆಂದ (ದ್ರೋಣ ಪರ್ವ, ೫ ಸಂಧಿ, ೪೨ ಪದ್ಯ)

ತಾತ್ಪರ್ಯ:
ಎಲವೋ ದುಶ್ಯಾಸನ, ನರಿಯು ಕೊಬ್ಬಿ ಹೆಬ್ಬುಲಿಯ ಮರಿಯನ್ನು ಆಹಾರವಾಗಿ ಕೇಳಿದಂತೆ, ಯೋಗ್ಯತೆಯನ್ನರಿಯದೆ ಅಧಮರೊಡನೆ ಯುದ್ಧಕ್ಕೆ ಹೋಗಬಹುದೇ? ನನ್ನೊಡನೆ ಯುದ್ಧಮಾಡಿದ ನೀನು ನಿನ್ನ ತಲೆಯನ್ನು ಉಳಿಸಿಕೊಂಡು ಹಿಂದಿರುಗಿದರೆ, ನಾನು ಇಲ್ಲಿಯೇ ಆಯುಧಗಳನ್ನು ಕೆಳಗಿಟ್ಟು ಶಸ್ತ್ರತ್ಯಾಗ ಮಾಡಿ ಶಸ್ತ್ರಸನ್ಯಾಸವನ್ನು ಸ್ವೀಕರಿಸುತ್ತೇನೆ ಎಂದು ಪ್ರಮಾಣ ಮಾಡಿದನು.

ಅರ್ಥ:
ಕೊಬ್ಬು: ಸೊಕ್ಕು, ಅಹಂಕಾರಪಡು; ಹೆಬ್ಬುಲಿ: ದೊಡ್ಡದಾದ ಹುಲಿ; ಕೂಸು: ಮಗು; ಬೇಡು: ಕೇಳು; ಆಳ: ಗಾಢತೆ; ಅರಿ: ತಿಳಿ; ಅಧಮ: ಮೂಢ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಕೂಡೆ: ಜೊತೆ; ತೊಡಕು: ಸಿಕ್ಕು, ಗೋಜು; ಮಲೆತ: ಗರ್ವಿಸಿದ; ರಣ: ಯುದ್ಧ; ಹಳಚು: ತಾಗು, ಬಡಿ; ತಲೆ: ಶಿರ; ತಲೆವೆರಸು: ತಲೆಯನ್ನು ಉಳಿಸಿಕೊಳ್ಳೂ; ಮರಳು: ಹಿಂದಿರುಗು; ಇಳುಹು: ಕೆಳಕ್ಕೆ ಬಾ; ಕೈದು: ಶಸ್ತ್ರ; ಶರ: ಬಾಣ; ಸನ್ಯಾಸ: ಎಲ್ಲವನ್ನು ತೊರೆದು;

ಪದವಿಂಗಡಣೆ:
ಎಲವೊ +ಕೌರವ +ಕೊಬ್ಬಿ +ನರಿ +ಹೆ
ಬ್ಬುಲಿಯ +ಕೂಸನು +ಬೇಡುವಂದದಿ
ಆಳವನ್+ಅರಿಯದೆ +ಅಧಮ +ರಥಿಕರ +ಕೂಡೆ +ತೊಡಕುವರೆ
ಮಲೆತು +ನೀನ್+ಎನ್ನೊಡನೆ +ರಣದಲಿ
ಹಳಚಿ +ನೀ +ತಲೆವೆರಸಿ+ ಮರಳಿದಡ್
ಇಳುಹುವೆನು +ಕೈದುವನು +ಶರ+ಸನ್ಯಾಸ +ನನಗೆಂದ

ಅಚ್ಚರಿ:
(೧) ನೀ ತಲೆವೆರಸಿ ಮರಳಿದಡಿಳುಹುವೆನು ಕೈದುವನು ಶರಸನ್ಯಾಸ ನನಗೆಂದ
(೨) ಉಪಮಾನದ ಪ್ರಯೋಗ – ಕೊಬ್ಬಿ ನರಿ ಹೆಬ್ಬುಲಿಯ ಕೂಸನು ಬೇಡುವಂದದಿ

ಪದ್ಯ ೨೫: ಪಾಂಡವ ನಾಯಕರೇಕೆ ಅನುಚಿತವನ್ನು ಚಿಂತಿಸಿದರು?

ಬಲವ ನಿಲಿಸಲು ನೂಕದನಿಲಜ
ನಳುಕಿದನು ಸಹದೇವ ಹಿಂದಣಿ
ಗೊಲೆದ ಧೃಷ್ಟದ್ಯುಮ್ನ ನಕುಲರು ನೆನೆದರನುಚಿತವ
ಕಲಿ ಘಟೋತ್ಕಚನಧಮ ಧರ್ಮವ
ಬಳಸಿದನು ಪಾಂಚಾಲ ಮತ್ಸ್ಯರು
ಹಲರು ನಡೆದುದೆ ಮಾರ್ಗವೆಂದೇ ಮುರುಹಿದರು ಮುಖವ (ಭೀಷ್ಮ ಪರ್ವ, ೯ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸೈನ್ಯವನ್ನು ನಿಲ್ಲಿಸಲು ಸಾಧ್ಯವಾಗದೆ ಭೀಮನು ಅಳುಕಿದನು, ಸಹದೇವನು ಹಿಂದಕ್ಕೆ ಹೋದನು. ಧೃಷ್ಟದ್ಯುಮ್ನ ನಕುಲರು ಯುದ್ಧದಲ್ಲಿ ಪಲಾಯನವನ್ನು ಚಿಂತಿಸಿದರು. ವೀರನಾದ ಘಟೋತ್ಕಚನು ನೀಚರ ಧರ್ಮವಾದ ಬೆನ್ನು ತೋರಿಸಿ ಓಡುವುದನ್ನು ಬಳಸಿದನು. ಹಲವರು ನಡೆದುದೇ ಮಾರ್ಗವೆಂದು ಪಾಂಚಾಲರೂ ಮತ್ಸ್ಯರೂ ಮುಖದಿರುವಿದರು.

ಅರ್ಥ:
ಬಲ: ಸೈನ್ಯ; ನಿಲಿಸು: ತಡೆ; ನೂಕು: ತಳ್ಳು; ಅನಿಲಜ: ವಾಯುಪುತ್ರ (ಭೀಮ); ಅಳುಕು: ಹೆದರು, ಅಂಜು; ಹಿಂದಣಿ: ಹಿಂದೆ; ಒಲೆದು: ತೂಗಾಡು; ನೆನೆ: ಜ್ಞಾಪಿಸು; ಅನುಚಿತ: ಸರಿಯಲ್ಲದ; ಕಲಿ: ಶೂರ; ಅಧಮ: ಕೀಳು, ನೀಚ; ಬಳಸು: ಉಪಯೋಗಿಸು; ಹಲರು: ಬಹಳ, ಹಲವಾರು; ನಡೆ: ಚಲಿಸು; ಮಾರ್ಗ: ದಾರಿ; ಮುರುಹು: ತಿರುಗಿಸು; ಮುಖ: ಆನನ;

ಪದವಿಂಗಡಣೆ:
ಬಲವ+ ನಿಲಿಸಲು +ನೂಕದ್+ಅನಿಲಜನ್
ಅಳುಕಿದನು +ಸಹದೇವ +ಹಿಂದಣಿಗ್
ಒಲೆದ +ಧೃಷ್ಟದ್ಯುಮ್ನ +ನಕುಲರು +ನೆನೆದರ್+ಅನುಚಿತವ
ಕಲಿ+ ಘಟೋತ್ಕಚನ್+ಅಧಮ +ಧರ್ಮವ
ಬಳಸಿದನು +ಪಾಂಚಾಲ +ಮತ್ಸ್ಯರು
ಹಲರು+ ನಡೆದುದೆ+ ಮಾರ್ಗವೆಂದೇ+ ಮುರುಹಿದರು +ಮುಖವ

ಅಚ್ಚರಿ:
(೧) ಪಲಾಯನ, ಬೆನ್ನು ತೋರು ಎಂದು ಹೇಳುವ ಪರಿ – ನೆನೆದರನುಚಿತವ, ಅಧಮ ಧರ್ಮವ ಬಳಸಿದನು

ಪದ್ಯ ೭೨: ಕೃಷ್ಣನ ಸ್ಥಾನ ಎಂತಹುದು?

ನೊರಜು ತಾನೆತ್ತಲು ಮಹತ್ವದ
ಗಿರಿಯದೆತ್ತಲು ಮಿಂಚುಬುಳುವಿನ
ಕಿರಣವೆತ್ತಲು ಹೊಳಹಿದೆತ್ತಲು ಕೋಟಿಸೂರಿಯರ
ನರಮೃಗಾಧಮನೆತ್ತಲುನ್ನತ
ಪರಮತತ್ವವಿದೆತ್ತಲಕಟಾ
ಮರುಳು ನನ್ನವಗುಣವಾದಾವುದ ಕಡೆಗೆ ಹಲುಬುವೆನು (ಭೀಷ್ಮ ಪರ್ವ, ೩ ಸಂಧಿ, ೭೨ ಪದ್ಯ)

ತಾತ್ಪರ್ಯ:
ನಾನೋ ಸಣ್ಣ ಕೀಟ, ಕೃಷ್ಣನೋ ಮೇರು ಪರ್ವತ, ನಾನೋ ಮಿಂಚುಹುಳ, ಕೃಷ್ಣನೋ ಕೋಟಿ ಸೂರ್ಯರ ಪ್ರಕಾಶವುಳ್ಳವನು. ನರಮೃಗಾಧಮನಾದ ನಾನೆಲ್ಲಿ, ಪರಮತತ್ವವಾದ ಅವನೆಲ್ಲಿ? ಹುಚ್ಚನಾದ ನನ್ನ ಅವಗುಣವನ್ನು ಹೇಗೆ ಹಳಿದುಕೊಳ್ಳಲಿ, ಏನೆಂದು ಬೇಡಲಿ ಎಂದು ಅರ್ಜುನನು ದುಃಖಿಸಿದನು.

ಅರ್ಥ:
ನೊರಜು: ಸಣ್ಣ ಕೀಟ; ಮಹತ್ವ: ಮುಖ್ಯವಾದ; ಗಿರಿ: ಬೆಟ್ಟ; ಮಿಂಚುಬುಳು: ಮಿಂಚುಹುಳ; ಕಿರಣ: ಪ್ರಕಾಶ; ಹೊಳಹು: ಕಾಂತಿ; ಸೂರಿಯರು: ಸೂರ್ಯ, ರವಿ; ನರ: ಮನುಷ್ಯ; ಮೃಗ: ಪ್ರಾಣಿ; ಅಧಮ: ಕೀಳು; ಉನ್ನತ: ಎತ್ತರದ; ಪರಮ: ಶ್ರೇಷ್ಠ; ತತ್ವ: ಸಿದ್ಧಾಂತ; ಅಕಟ: ಅಯ್ಯೋ; ಮರುಳು: ಮೂಢ; ಅವಗುಣ: ದುರ್ಗುಣ, ದೋಷ; ಕಡೆಗೆ: ಕೊನೆಗೆ; ಹಲುಬು: ಬೇಡಿಕೋ, ದುಃಖಪಡು;

ಪದವಿಂಗಡಣೆ:
ನೊರಜು +ತಾನೆತ್ತಲು +ಮಹತ್ವದ
ಗಿರಿಯದೆತ್ತಲು +ಮಿಂಚುಬುಳುವಿನ
ಕಿರಣವೆತ್ತಲು +ಹೊಳಹಿದೆತ್ತಲು +ಕೋಟಿಸೂರಿಯರ
ನರ+ಮೃಗ+ಅಧಮನ್+ಎತ್ತಲ್+ಉನ್ನತ
ಪರಮತತ್ವವಿದ್+ಎತ್ತಲ್+ಅಕಟಾ
ಮರುಳು+ ನನ್ನ್+ಅವಗುಣವ್+ಅದಾವುದ +ಕಡೆಗೆ +ಹಲುಬುವೆನು

ಅಚ್ಚರಿ:
(೧) ಉಪಮಾನಗಳ ಬಳಕೆ – ನೊರಜು ತಾನೆತ್ತಲು ಮಹತ್ವದ ಗಿರಿಯದೆತ್ತಲು ಮಿಂಚುಬುಳುವಿನ
ಕಿರಣವೆತ್ತಲು ಹೊಳಹಿದೆತ್ತಲು ಕೋಟಿಸೂರಿಯರ

ಪದ್ಯ ೬೨: ಶಿಶುಪಾಲನನ್ನು ಜಡಾತ್ಮನೆಂದು ಭೀಷ್ಮರು ಏಕೆ ಕರೆದರು?

ಇಂಗಿತಲರಿವುದು ಮಹಾತ್ಮರಿ
ಗಂಗವಿದು ಮಧ್ಯಮರು ಕರ್ಣಪ
ಥಂಗಳಲಿ ಗೋಚರಿಸಲರಿವುದು ಲೋಕವೃತ್ತಿಯಿದು
ಕಂಗಳಲಿ ಕಂಡರಿವರಧಮರು
ಕಂಗಳಲಿ ಕಿವಿಗಳಲಿ ಮೇಣ್ ಹರಿ
ಯಿಂಗಿತವನರಿಯದ ಜಡಾತ್ಮನು ಚೈದ್ಯನೃಪನೆಂದ (ಸಭಾ ಪರ್ವ, ೧೦ ಸಂಧಿ, ೬೨ ಪದ್ಯ)

ತಾತ್ಪರ್ಯ:
ಉತ್ತಮರಾದವರು ಆಶಯವನ್ನು ತಿಳಿದೇ ಕಾರ್ಯಪ್ರವೃತ್ತರಾಗುತ್ತಾರೆ, ಮಧ್ಯಮರು ಕೇಳಿ ತಿಳಿಯುತ್ತಾರೆ, ಅಧಮರು ಕಣ್ಣಿನಲ್ಲಿ ನೋಡಿ ತಿಳಿಯುತ್ತಾರೆ. ಈ ಶಿಶುಪಾಲನಾದರೋ ಕಣ್ಣಿನಿಂದ ನೋಡಿ, ಕಿವಿಯಿಂದ ಕೇಳಿ ಶ್ರೀಕೃಷ್ಣನ ಇಂಗಿತವನ್ನು ಅರಿಯದ ಜಡಾತ್ಮ ಎಂದು ಭೀಷ್ಮರು ಶಿಶುಪಾಲನನ್ನು ನಿಂದಿಸಿದರು.

ಅರ್ಥ:
ಇಂಗಿತ: ಆಶಯ, ಅಭಿಪ್ರಾಯ; ಅರಿ: ತಿಳಿ; ಮಹಾತ್ಮ: ಶ್ರೇಷ್ಠ; ಮಧ್ಯಮ: ತಾಮಸ ಜೀವಿ, ಸಾಧಾರಣವಾದ; ಕರ್ಣ: ಕಿವಿ; ಪಥ: ದಾರಿ; ಗೋಚರಿಸು: ತೋರು; ಲೋಕ: ಜಗತ್ತು; ವೃತ್ತಿ: ಸ್ಥಿತಿ, ನಡವಳಿಕೆ; ಕಂಗಳು: ನೇತ್ರ; ಕಂಡು: ನೋಡಿ; ಅರಿ: ತಿಳಿ; ಅಧಮ: ಕೀಳು, ನೀಚ; ಕಿವಿ: ಕರ್ಣ; ಮೇಣ್: ಅಥವ; ಹರಿ: ವಿಷ್ಣು; ಜಡ: ಅಚೇತನವಾದುದು, ಚಟುವಟಿಕೆಯಿಲ್ಲದ; ಚೈದ್ಯ: ಶಿಶುಪಾಲ; ನೃಪ: ರಾಜ;

ಪದವಿಂಗಡಣೆ:
ಇಂಗಿತಲ್+ಅರಿವುದು +ಮಹಾತ್ಮರಿಗ್
ಅಂಗವಿದು+ ಮಧ್ಯಮರು +ಕರ್ಣಪ
ಥಂಗಳಲಿ +ಗೋಚರಿಸಲ್+ಅರಿವುದು +ಲೋಕ+ವೃತ್ತಿಯಿದು
ಕಂಗಳಲಿ +ಕಂಡ್+ಅರಿವರ್+ಅಧಮರು
ಕಂಗಳಲಿ +ಕಿವಿಗಳಲಿ +ಮೇಣ್ +ಹರಿ
ಯಿಂಗಿತವನ್+ಅರಿಯದ +ಜಡಾತ್ಮನು +ಚೈದ್ಯ+ನೃಪನೆಂದ

ಅಚ್ಚರಿ:
(೧) ಉತ್ತಮ, ಮಧ್ಯಮ ಮತ್ತು ಅಧಮರ ಗುಣವಿಶೇಷಗಳನ್ನು ತಿಳಿಸುವ ಪದ್ಯ
(೨) ಪಥಂಗಳಲಿ, ಕಂಗಳಲಿ, ಕಿವಿಗಳಲಿ – ಪ್ರಾಸಪದಗಳ ಪ್ರಯೋಗ

ಪದ್ಯ ೧೨೬: ಉತ್ತಮ ಅಧಮನೆಂದು ಹೇಗೆ ನಿರ್ಧರಿಸಬೇಕು?

ಜಾತರೂಪದ ಲೇಸು ಹೊಲ್ಲೆಹ
ವೀತಿಹೋತ್ರನ ದೇಹಕಾರಣ
ಭೂತವಾಗಿಹುದವಗೆ ಸದಸತ್ತುಗಳ ಭೇದವನು
ನೀತಿ ಮುಖದಿಂದರಿವುದುತ್ತಮ
ನೀತ ಮಧ್ಯಮನೀತ ಕನಿಯಸ
ನೀತನೆಂಬುದನರಸ ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೧೨೬ ಪದ್ಯ)

ತಾತ್ಪರ್ಯ:
ಬಂಗಾರದ ಗುಣವನ್ನು ಅಗ್ನಿಯಲ್ಲಿಟ್ಟು ಪರೀಕ್ಷೆಮಾಡಿ ತಿಳಿದುಕೊಳ್ಳುವಂತೆ, ಸತ್ಯ ಅಸತ್ಯಗಳೆಂಬ ಭೇದವನ್ನು ಅವರವರ ನೀತಿಯನ್ನು ಗಮನಿಸಿ ಇವನು ಉತ್ತಮ, ಈತ ಮಧ್ಯಮ ಮತ್ತು ಈತ ಅಧಮನೆಂದು ನಿರ್ಧರಿಸಬೇಕು.

ಅರ್ಥ:
ಜಾತ:ಹುಟ್ಟಿದುದು; ರೂಪ:ಆಕಾರ, ಜಾತರೂಪ: ಬಂಗಾರ; ಸ್ವಭಾವ; ಲೇಸು: ಒಳಿತು; ಹೊಲ್ಲೆಹ: ದೋಷ; ವೀತಿಹೋತ್ರ: ಅಗ್ನಿ; ದೇಹ: ತನು; ಕಾರಣ: ನಿಮಿತ್ತ; ಭೂತ:ಹಿಂದೆ ಆದುದು, ಪರಮಾತ್ಮ; ಸದಸತ್ತು: ಸತ್ಯ ಮತ್ತು ಅಸತ್ಯ; ಭೇದ: ಬಿರುಕು; ನೀತಿ: ಮಾರ್ಗ ದರ್ಶನ, ಒಳ್ಳೆಯ ನಡತೆ; ಮುಖ: ಆನನ; ಅರಿವು: ತಿಳಿ; ಉತ್ತಮ: ಶ್ರೇಷ್ಠ; ಮಧ್ಯಮ: ಸಾಧಾರಣವಾದುದು; ಕನಿಯ: ಕೆಳಮಟ್ಟದ; ಅರಸ: ರಾಜ; ಚಿತ್ತೈಸು: ಗಮನವಿಡು;

ಪದವಿಂಗಡಣೆ:
ಜಾತರೂಪದ +ಲೇಸು +ಹೊಲ್ಲೆಹ
ವೀತಿಹೋತ್ರನ+ ದೇಹಕಾರಣ
ಭೂತವಾಗಿಹುದ್+ಅವಗೆ +ಸತ್+ಅಸತ್ತುಗಳ+ ಭೇದವನು
ನೀತಿ+ ಮುಖದಿಂದ್+ಅರಿವುದ್+ಉತ್ತಮನ್
ಈತ +ಮಧ್ಯಮನ್+ಈತ +ಕನಿಯಸನ್
ಈತನ್+ಎಂಬುದನ್+ಅರಸ +ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಉಪಮಾನದ ಪ್ರಯೋಗ – ಜಾತರೂಪದ ಲೇಸು ಹೊಲ್ಲೆಹ ವೀತಿಹೋತ್ರನ ದೇಹಕಾರಣ ಭೂತವಾಗಿಹುದವಗೆ ಸದಸತ್ತುಗಳ ಭೇದವನು
(೨) ಸದಸತ್ತು – ಸತ್ಯ ಮತ್ತು ಸುಳ್ಳನ್ನು ಒಂದೇ ಪದದಲ್ಲಿ ಮೂಡಿಸಿರುವುದು
(೩) ಉತ್ತಮ, ಮಧ್ಯಮ, ಅಧಮ – ಮನುಷ್ಯನ ಸ್ಥರಗಳನ್ನು ಹೇಳಿರುವುದು
(೪) ಜಾತ, ಭೂತ, ವೀತಿ, ನೀತಿ – ಪ್ರಾಸ ಪದಗಳು

ಪದ್ಯ ೫೩: ಅಧಮ ರಾಜರ ವಿನಾಶಕ್ಕೆ ಯಾವೆಂಟು ಕಾರಣಗಳು?

ಬುಧರೊಳಗೆ ಹಗೆಗೊಳುವ ಬುಧರನು
ನಿಧನವೈದಿಪ ಬುಧರನೇಳಿಪ
ಬುಧರ ಜರೆದೊಡೆ ನಲಿವ ಬುಧರನು ಹೊಗಳುವರ ಹಳಿವ
ಬುಧರನಧಮರ ಮಾಳ್ಪ ಬುಧರಂ
ವಿಧಿಗೊಳಿಪ ಬುಧರೆನಲು ಕನಲುವ
ನಧಮ ಭೂಪರಿಗೆಂಟು ಗುಣವು ವಿನಾಶಕರವೆಂದ (ಉದ್ಯೋಗ ಪರ್ವ, ೩ ಸಂಧಿ, ೫೩ ಪದ್ಯ)

ತಾತ್ಪರ್ಯ:
ಅಧಮ ರಾಜನ ವಿನಾಶಕ್ಕೆ ಈ ಎಂಟು ಗುಣಗಳನ್ನು ವಿದುರ ಇಲ್ಲಿ ಹೇಳುತ್ತಾರೆ. ಈ ಪದ್ಯದಲ್ಲಿ ವಿದ್ವಾಂಸರನ್ನು ರಾಜ್ಯದಲ್ಲಿ ಹೇಗೆ ನಡೆಸಿಕೊಳ್ಳಬೇಕೆಂದು ನಾವು ಅರ್ಥೈಸಬಹುದು. ಪಂಡಿತರನ್ನು ದ್ವೇಷಿಸುವುದು, ವಿದ್ವಾಂಸರನ್ನು ಕೊನೆಗೊಳಿಸುವುದು, ಬುಧರನ್ನು ಅಪಹಾಸ್ಯ ಮಾದುವುದು, ಜ್ಞಾನಿಗಳನ್ನು ಬೈದಾಗ ಸಂತೋಷಪಡುವುದು, ಅವರನ್ನು ಹೊಗಳುವವರನ್ನು ನಿಂದಿಸುವುದು, ಜ್ಞಾನಿಗಳನ್ನು ಅಧಮರೆಂದು ಪರಿಗಣಿಸುವುದು, ಅವರ ಮೇಲೆ ನಿಯಂತ್ರಣ ಸಾಧಿಸಲು ಆಜ್ಞೆಯನ್ನು ಮಾಡುವುದು, ತಿಳಿದವರೆಂದರೆ ಕೋಪಗೊಳ್ಳುವುದು, ಈ ಎಂಟು ಗುಣಗಳು ರಾಜನಲ್ಲಿ ವ್ಯಕ್ತವಾದರೆ ಆವನು ವಿನಾಶದ ಹಾದಿಯಲ್ಲಿದ್ದಾನೆ ಎಂದು ತಿಳಿಯಬಹುದು.

ಅರ್ಥ:
ಬುಧ: ಪಂಡಿತ, ವಿದ್ವಾಂಸ; ಹಗೆ: ದ್ವೇಷ, ವೈರತ್ವ; ನಿಧನ: ಕೊನೆಗೊಳ್ಳು, ಸಾವು; ಐದು: ಹೊಂದು; ಏಳು:ಜೀವವನ್ನು ಪಡೆ; ಜರಿ: ನಿಂದಿಸು; ನಲಿ: ಸಂತೋಷ ಪಡು; ಹೊಗಳು: ಗೌರವಿಸು; ಹಳಿ: ನಿಂದಿಸು, ದೂಷಿಸು; ಅಧಮ: ಕೀಳು; ಮಾಳ್ಪ: ಮಾಡು; ವಿಧಿ:ಆಜ್ಞೆ, ಆದೇಶ; ಎನಲು: ಹೇಳುತ್ತಲೆ; ಕನಲು:ಸಿಟ್ಟಿಗೇಳು; ಅಧಮ: ಕೀಳುದರ್ಜೆಯ; ಭೂಪ: ರಾಜ; ಗುಣ: ನಡತೆ, ಸ್ವಭಾವ; ವಿನಾಶ: ಅಂತ್ಯ;

ಪದವಿಂಗಡಣೆ:
ಬುಧರೊಳಗೆ+ ಹಗೆಗೊಳುವ +ಬುಧರನು
ನಿಧನವೈದಿಪ+ ಬುಧರನ್+ಏಳಿಪ
ಬುಧರ+ ಜರೆದೊಡೆ +ನಲಿವ +ಬುಧರನು+ ಹೊಗಳುವರ+ ಹಳಿವ
ಬುಧರನ್+ಅಧಮರ+ ಮಾಳ್ಪ +ಬುಧರಂ
ವಿಧಿಗೊಳಿಪ+ ಬುಧರೆನಲು +ಕನಲುವನ್
ಅಧಮ +ಭೂಪರಿಗೆಂಟು +ಗುಣವು +ವಿನಾಶಕರವೆಂದ

ಅಚ್ಚರಿ:
(೧) ಬುಧ – ೮ ಬಾರಿ ಪ್ರಯೋಗ
(೨) ೮ ಗುಣಗಳನ್ನು ವಿವರಿಸುವ ಪದ್ಯ, ಹಗೆ, ನಿಧನ, ಏಳು, ಜರೆ, ಹಳಿ, ಅಧಮ, ವಿಧಿ, ಕನಲು

ಪದ್ಯ ೨೭: ಯಾವ ಮೂವರು ಸ್ವತಂತ್ರರಲ್ಲ?

ಪಿತನಿರಲು ದಾತಾರನಿರೆ ನಿಜ
ಪತಿಯಿರಲು ಸುತ ದಾಸ ಸತಿಯೀ
ತ್ರಿತಯರುಂ ಸ್ವಾತಂತ್ರ್ಯದವರಲ್ಲಾವ ಕಾಲದಲಿ
ಕ್ಷಿತಿಯೊಳುತ್ತಮ ಮಧ್ಯಮಾಧಮ
ಗತಿಯ ಪುರುಷತ್ರಯವನವರಿಂ
ಗಿತವನವರಾಯತವನರಿವೈ ಭೂಪ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ತಂದೆಯಿದ್ದರೆ ಮಗ, ಕೊಡುವವನಿದ್ದರೆ (ಒಡೆಯ) ದಾಸ, ಪತಿಯಿದ್ದರೆ ಸತಿ, ಈ ರೀತಿಯಾಗಿ, ಮಗ, ಸೇವಕ, ಹೆಂಡತಿ ಈ ಮೂವರು ಯಾವಕಾಲದಲ್ಲೂ ಸ್ವತಂತ್ರ್ಯರಲ್ಲ. ಭೂಮಿಯಲ್ಲಿ ಉತ್ತಮ, ಮಧ್ಯಮ, ಅಧಮ ಮನುಷ್ಯರ ಮನಸ್ಸಿನ ಇಂಗಿತ ಅವರ ಪ್ರಭಾವ, ಅವರ ವ್ಯಾಪ್ತಿಯನ್ನು ನೀನು ತಿಳಿಯೆಯಾ ಎಂದು ವಿದುರ ಧೃತರಾಷ್ಟ್ರನನ್ನು ಕೇಳಿದ.

ಅರ್ಥ:
ಪಿತ: ತಂದೆ; ದಾತಾರ: ಕಾಪಾಡುವವ, ದಾನಿ; ನಿಜ: ಸತ್ಯ, ನೈಜ; ಪತಿ: ಗಂಡ; ಸುತ: ಮಗ; ದಾಸ: ಸೇವಕ, ಸತಿ: ಪತ್ನಿ; ತ್ರಿ: ಮೂರು; ಸ್ವಾತಂತ್ರ್ಯ: ಬಿಡುಗಡೆ; ಕಾಲ: ಸಮಯ; ಕ್ಷಿತಿ: ಭೂಮಿ; ಉತ್ತಮ: ಶ್ರೇಷ್ಠ; ಮಧ್ಯಮ: ಸಾಧಾರಣವಾದ; ಅಧಮ: ಕೀಳು; ಗತಿ: ಇರುವ ಸ್ಥಿತಿ; ಪುರುಷ:ಮನುಷ್ಯ, ಮಾನವ, ನರ, ವಿವೇಕ; ತ್ರಯ: ಮೂರು; ಇಂಗಿತ: ಆಶಯ, ಅಭಿಪ್ರಾಯ; ಆಯತ: ಉಚಿತವಾದ ಕ್ರಮ, ವಿಶಾಲವಾದ;ಅರಿ: ತಿಳಿ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಪಿತನಿರಲು +ದಾತಾರನಿರೆ+ ನಿಜ
ಪತಿಯಿರಲು +ಸುತ +ದಾಸ +ಸತಿ+ಯೀ
ತ್ರಿತಯರುಂ +ಸ್ವಾತಂತ್ರ್ಯದವರಲ್+ಆವ +ಕಾಲದಲಿ
ಕ್ಷಿತಿಯೊಳ್+ಉತ್ತಮ +ಮಧ್ಯಮ+ಅಧಮ
ಗತಿಯ +ಪುರುಷ+ತ್ರಯವನ್+ಅವರ್+ಇಂ
ಗಿತವನ್+ಅವರ್+ಆಯತವನ್+ಅರಿವೈ+ ಭೂಪ +ಕೇಳೆಂದ

ಅಚ್ಚರಿ:
(೧) ಸುತ, ದಾಸ, ಸತಿ ಯರು ಸ್ವತಂತ್ರ್ಯರಲ್ಲ ಎಂದು ತಿಳಿಸುವ ಪದ್ಯ
(೨) ಉತ್ತಮ, ಮಧ್ಯಮ, ಅಧಮ ರೀತಿಯ ಪುರುಷರ ವರ್ಗವನ್ನು ಹೇಳುವ ಪದ್ಯ
(೩) ತ್ರಿತಯ, ತ್ರಯ – ಮೂರನ್ನು ಸೂಚಿಸುವ ಪದ
(೨) ಅವರ ಇಂಗಿತ ಅವರ ಆಯತ – ಅವರ್ ಪದದ ಬಳಕೆ

ಪದ್ಯ ೨೦: ಯಾರೊಂದಿಗೆ ಯುದ್ದಮಾಡಬೇಕೆಂದು ಉತ್ತರನು ಪ್ರಶ್ನಿಸಿದನು?

ಆರೊಡನೆ ಕಾದುವೆನು ಕೆಲಬರು
ಹಾರುವರು ಕೆಲರಂತಕನ ನೆರೆ
ಯೂರವನು ಕೆಲರಧಮಕುಲದಲಿ ಜನಿಸಿ ಬಂದವರು
ವೀರರೆಂಬುವರಿವರು ಮೇಲಿ
ನ್ನಾರ ಹೆಸರುಂಟವರೊಳೆಂದು ಕು
ಮಾರ ನೆಣಗೊಬ್ಬಿನಲಿ ನುಡಿದನು ಹೆಂಗಳಿದಿರಿನಲಿ (ವಿರಾಟ ಪರ್ವ, ೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ತನ್ನ ಸಾಮರ್ಥ್ಯವನ್ನು ಕೊಚ್ಚಿಕೊಳ್ಳುತ್ತಾ ಉತ್ತರನು, ನಾನು ಯಾರ ಜೊತೆ ಯುದ್ಧ ಮಾಡಲಿ, ಕೆಲವರು ಬ್ರಾಹ್ಮಣರು, ಕೆಲವರು ಮುದುಕರು, ಕೆಲವರು ಹೀನಕುಲದಲ್ಲಿ ಹುಟ್ಟಿದವರು, ಅವರಲ್ಲಿ ವೀರರೆಂಬುವರು ಇವರೇ, ಇವರನ್ನು ಬಿಟ್ಟು ಇನ್ನಾರು ವೀರರಿದ್ದಾರೆ ಕೌರವರಲ್ಲಿ? ಎಂದು ಹೆಂಗಸರ ಮುಂದೆ ತನ್ನ ಗರ್ವವನ್ನು ಪ್ರದರ್ಶಿಸಿದನು.

ಅರ್ಥ:
ಕಾದು: ಕಾಳಗ, ಯುದ್ಧ; ಕೆಲಬರು: ಕೆಲವರು; ಹಾರುವ: ಬ್ರಾಹ್ಮಣ; ಅಂತಕ: ಯಮ; ನೆರೆ: ಪಕ್ಕ; ಅಧಮ: ನೀಚ; ಕುಲ: ವಂಶ; ಜನಿಸು: ಹುಟ್ಟು; ವೀರ: ಶೌರ್ಯ; ಹೆಸರು: ನಾಮಧೇಯ; ಕುಮಾರ: ಪುತ್ರ; ಕೊಬ್ಬು: ಗರ್ವ; ನುಡಿ: ಹೇಳು; ಹೆಂಗಳು: ಸ್ತ್ರೀ;

ಪದವಿಂಗಡಣೆ:
ಆರೊಡನೆ +ಕಾದುವೆನು +ಕೆಲಬರು
ಹಾರುವರು +ಕೆಲರ್+ಅಂತಕನ+ ನೆರೆ
ಯೂರವನು +ಕೆಲರ್+ಅಧಮ+ಕುಲದಲಿ +ಜನಿಸಿ +ಬಂದವರು
ವೀರರ್+ಎಂಬುವರ್+ಇವರು+ ಮೇಲಿ
ನ್ನಾರ +ಹೆಸರುಂಟ್+ಅವರೊಳ್+ಎಂದು +ಕು
ಮಾರ +ನೆಣ+ಕೊಬ್ಬಿನಲಿ +ನುಡಿದನು +ಹೆಂಗಳಿದಿರಿನಲಿ

ಅಚರಿ:
(೧) ಮುದುಕರು ಎಂದು ಹೇಳಲು ಬಳಸಿದ ಪದ – ಅಂತಕನ ನೆರೆಯೂರಿನವರು
(೨) ಕೆಲರ್ – ೨, ೩ ಸಾಲಿನ ೨ನೇ ಪದ

ಪದ್ಯ ೧೯: ಭೀಷ್ಮನನ್ನು ಶಿಶುಪಾಲನು ಮೂರ್ಖನೆಂದು ಏಕೆ ಜರಿದನು?

ಸಕಲ ಶಾಸ್ತ್ರಶ್ರವಣ ವೇದ
ಪ್ರಕರ ಧರ್ಮವಿಚಾರ ಪೌರಾ
ಣಿಕ ಕಥಾಪ್ರಾಗಲ್ಭವಿನಿಕರ ಸಾರಸಂಗತಿಯ
ಅಕಟನೀರಲಿ ನೆರಹಿ ಪಶುಪಾ
ಲಕನ ಪೂಜಾ ಸಾಧನಾರ್ಥ
ಪ್ರಕಟನಾದೈ ಭೀಷ್ಮ ಮೂರ್ಖಾಧಮನು ನೀನೆಂದ (ಸಭಾ ಪರ್ವ, ೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಶಾಸ್ತ್ರವನ್ನು ಕೇಳುವ, ವೇದಧರ್ಮ ವಿಚಾರ, ಪುರಾಣಕಥೆಗಳ ಶ್ರವಣ ಇವೆಲವನ್ನೂ ಮಾದಿ, ಇವುಗಳ ಸಾರವನ್ನು ನೀರಿನಲ್ಲಿ ಕದಡಿದೆ. ದನಕಾಯುವವನ ಪೂಜೆಗೆಂದೇ ನೀನು ಮೀಸಲಾದೆ. ಎಲವೋ ಭೀಷ್ಮ ನೀನು ಮೂರ್ಖ ಮತ್ತು ಅಧಮ ಎಂದು ಶಿಶುಪಾಲನು ನಿಂದಿಸಿದನು.

ಅರ್ಥ:
ಸಕಲ: ಎಲ್ಲಾ; ಶಾಸ್ತ್ರ: ಧಾರ್ಮಿಕ ವಿಷಯದ ಬಗೆಗೆ ಬರೆದ ಪ್ರಮಾಣ ಗ್ರಂಥ; ಶ್ರವಣ: ಕೇಳುವುದು; ವೇದ: ಜ್ಞಾನ; ಪ್ರಕರ: ಗುಂಪು; ಧರ್ಮ: ಧಾರಣ ಮಾಡಿದುದು, ನಿಯಮ; ವಿಚಾರ: ವಿಮರ್ಶೆ; ಪೌರಾಣಿಕ: ಪುರಾಣಗಳಿಗೆ ಸಂಬಂಧಿಸಿದುದು; ಕಥೆ: ವೃತ್ತಾಂತ; ಸಂಗತಿ: ಸಮಾಚಾರ; ಅಕಟ: ಅಯ್ಯೋ; ನೀರು: ಜಲ; ನೆರಹು: ಕದಡು ; ಪಶು: ಮೃಗ; ಪೂಜ: ಆರಾಧನೆ; ಸಾಧನ: ಗುರಿಮುಟ್ಟುವ ಪ್ರಯತ್ನ; ಪ್ರಕಟ:ತೋರಿಸು; ಮೂರ್ಖ: ದಡ್ಡ; ಅಧಮ: ನೀಚ; ನಿಕರ: ಬುಂಪು;

ಪದವಿಂಗಡಣೆ:
ಸಕಲ +ಶಾಸ್ತ್ರ+ಶ್ರವಣ +ವೇದ
ಪ್ರಕರ+ ಧರ್ಮ+ವಿಚಾರ +ಪೌರಾ
ಣಿಕ +ಕಥಾಪ್ರಾಗಲ್ಭವಿನಿಕರ +ಸಾರಸಂಗತಿಯ
ಅಕಟ+ನೀರಲಿ +ನೆರಹಿ+ ಪಶುಪಾ
ಲಕನ +ಪೂಜಾ +ಸಾಧನಾರ್ಥ
ಪ್ರಕಟನಾದೈ +ಭೀಷ್ಮ +ಮೂರ್ಖ+ಅಧಮನು+ ನೀನೆಂದ

ಅಚ್ಚರಿ:
(೧) ಪ್ರಕಟ, ಪ್ರಕರ – ೨, ೬ ಸಾಲಿನ ಮೊದಲ ಪದ “ಪ್ರಕ”