ಪದ್ಯ ೧೨: ಸಾತ್ಯಕಿಯು ಯುದ್ಧವನ್ನು ಹೇಗೆ ನಡೆಸಿದನು?

ಕಡಿದನನಿಬರ ಕೈಯ ಕೋಲ್ಗಳ
ನಡಗುದರಿದನನೇಕಭೂಪರ
ಗಡಣವನು ಘಾಡಿಸಿದನಂಬಿನ ಸೈಯನುರವಣಿಸಿ
ಕಡಗಿ ಸಾತ್ಯಕಿಯೊಡನೆ ಬವರವ
ಹಿಡಿದ ಭಟರಮರರ ವಿಮಾನವ
ನಡರುತಿದ್ದರು ಕೊಂದನತಿಬಳನಹಿತಮೋಹರವ (ದ್ರೋಣ ಪರ್ವ, ೧೧ ಸಂಧಿ, ೧೨ ಪದ್ಯ
)

ತಾತ್ಪರ್ಯ:
ಅವರೆಲ್ಲರೂ ಹಿಡಿದ ಬಾಣಗಳನ್ನು ಸಾತ್ಯಕಿಯು ತುಂಡುಮಾಡಿದನು. ಅನೇಕ ರಾಜರ ಮೇಲೆ ಬಾಣಗಳನ್ನು ಬಿಟ್ಟು ಮಾಂಸಖಂಡವನ್ನು ಹೊರಗೆಡಹಿದನು. ಸಾತ್ಯಕಿಯೊಡನೆ ಯುದ್ಧಕ್ಕಿಳಿದ ಅನೇಕ ರಾಜರು ದೇವತೆಗಳ ವಿಮಾನವನ್ನೇರಿ ಸ್ವರ್ಗಕ್ಕೆ ಹೋದರು.

ಅರ್ಥ:
ಕಡಿ: ಸೀಳು; ಅನಿಬರ: ಅಷ್ಟುಜನ; ಕೈ: ಹಸ್ತ; ಕೋಲು: ಬಾಣ; ಅಡಗು: ಅವಿತುಕೊಳ್ಳು; ಅನೇಕ: ಬಹಳ; ಭೂಪ: ರಾಜ; ಗಡಣ: ಗುಂಪು; ಘಾಡಿಸು: ವ್ಯಾಪಿಸು; ಅಂಬು: ಬಾಣ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಬವರ: ಯುದ್ಧ; ಹಿಡಿ: ಗ್ರಹಿಸು; ಭಟ: ಸೈನಿಕ; ಅಮರ: ದೇವ; ವಿಮಾನ: ವಾಯು ಮಾರ್ಗದಲ್ಲಿ ಸಂಚರಿಸುವ ವಾಹನ; ಅಡರು: ಮೇಲಕ್ಕೆ ಹತ್ತು; ಕೊಂದು: ಕೊಲ್ಲು, ಸಾಯಿಸು; ಅಹಿತ: ವೈರಿ; ಮೋಹರ: ಯುದ್ಧ;

ಪದವಿಂಗಡಣೆ:
ಕಡಿದನ್+ಅನಿಬರ +ಕೈಯ +ಕೋಲ್ಗಳನ್
ಅಡಗುದರ್+ಇದನ್+ಅನೇಕ+ಭೂಪರ
ಗಡಣವನು +ಘಾಡಿಸಿದನ್+ಅಂಬಿನ +ಸರಿಯನ್+ಉರವಣಿಸಿ
ಕಡಗಿ +ಸಾತ್ಯಕಿಯೊಡನೆ +ಬವರವ
ಹಿಡಿದ +ಭಟರ್+ಅಮರರ +ವಿಮಾನವನ್
ಅಡರುತಿದ್ದರು +ಕೊಂದನ್+ಅತಿಬಳನ್+ಅಹಿತ+ಮೋಹರವ

ಅಚ್ಚರಿ:
(೧) ಸತ್ತರು ಎಂದು ಹೇಳಲು – ಅಮರರ ವಿಮಾನವನಡರುತಿದ್ದರು

ಪದ್ಯ ೨೯: ಭೀಷ್ಮನು ದುರ್ಯೋಧನನಿಗೆ ಏನು ಹೇಳಿದನು?

ತಂದೆ ಕಂಡೈ ಕೌರವೇಶ ಪು
ರಂದರಾತ್ಮ ಜನತಿಬಳವ ನೀ
ನಿಂದೆ ಕಾಣಲುಬೇಹುದೈ ಹಲವಂಗದಲಿ ನರನ
ಹಿಂದೆ ಬಲ್ಲರು ದ್ರೋಣ ಕೃಪ ಗುರು
ನಂದನಾದಿಗಳೆಲ್ಲ ಕೇಳೈ
ಮಂದಮತಿತನ ಬೇಡವಿನ್ನು ಕೃಪಾಳುವಾಗೆಂದ (ಭೀಷ್ಮ ಪರ್ವ, ೧೦ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಷ್ಮನು ಅಪ್ಪಾ, ದುರ್ಯೋಧನ, ಅರ್ಜುನನ ಅತಿಶಯ ಬಲವನ್ನು ಈಗ ನೋಡಿದೆಯಲ್ಲಾ, ಹೀಗೆಯೇ ಅವನ ಹಲವು ಗುಣಗಳನ್ನು ಈಗಲೇ ಗುರುತಿಸು. ದ್ರೋಣ, ಕೃಪ, ಅಶ್ವತ್ಥಾಮರು ಬಲು ಹಿಮ್ದಿನಿಂದಲೂ ಅವನ್ನು ಗುರುತಿಸಿದ್ದಾರೆ. ಇನ್ನು ನಿನ್ನ ಮಮ್ದ ಮತಿಯನ್ನು ಬಿಟ್ಟು ಕೃಪಾಳುವಾಗು ಎಂದನು.

ಅರ್ಥ:
ತಂದೆ: ಅಪ್ಪ, ಪಿತ; ಕಂಡು: ನೋಡು; ಪುರಂದರ: ಇಂದ್ರ; ಆತ್ಮಜ: ಮಗ; ಅತಿಬಳವ: ಅತಿಶಯ ಶಕ್ತಿ; ನಿಂದು: ನಿಲ್ಲು; ಕಾಣು: ತೋರು; ಹಲವಂಗ: ಬಹಳ ರೀತಿ; ನರ: ಅರ್ಜುನ; ಹಿಂದೆ: ಪುರಾತನ; ಬಲ್ಲರು: ತಿಳಿದವರು; ನಂದನ: ಮಕ್ಕಳು; ಆದಿ: ಹಲವಾರು; ಕೇಳು: ತಿಳಿಸು; ಮಂದಮತಿ: ದಡ್ಡ; ಬೇಡ: ಸಲ್ಲದು; ಕೃಪಾಳು: ದಯೆ;

ಪದವಿಂಗಡಣೆ:
ತಂದೆ +ಕಂಡೈ +ಕೌರವೇಶ+ ಪು
ರಂದರ+ಆತ್ಮಜನ್+ಅತಿಬಳವ +ನೀನ್
ಇಂದೆ+ ಕಾಣಲುಬೇಹುದೈ +ಹಲವಂಗದಲಿ +ನರನ
ಹಿಂದೆ +ಬಲ್ಲರು +ದ್ರೋಣ +ಕೃಪ +ಗುರು
ನಂದನ+ಆದಿಗಳೆಲ್ಲ+ ಕೇಳೈ
ಮಂದಮತಿತನ +ಬೇಡವಿನ್ನು +ಕೃಪಾಳುವಾಗೆಂದ

ಅಚ್ಚರಿ:
(೧) ಅರ್ಜುನನನ್ನು ಪುರಂದರಾತ್ಮಜ ಎಂದು ಕರೆದಿರುವುದು
(೨) ದುರ್ಯೋಧನನನ್ನು ಮಂದಮತಿ ಎಂದು ಬಯ್ದಪರಿ

ಪದ್ಯ ೪೦: ಸುಭಟರ ಕಣ್ಣಾಲಿಗಳೇಕೆ ಕೆಂಪಾದವು?

ಸಾಲ ಮಕುಟದ ಮಾಣಿಕದ ಮಣಿ
ಮಾಲಿಕೆಯ ರಶ್ಮಿಗಳು ಸೂರ್ಯನ
ಸೋಲಿಸಲು ಸಮರವನು ಹೊಕ್ಕರು ಕುರುಹಿನತಿಬಳರು
ಕೋಲ ತೆಗಹಿನ ಕಿವಿಗಡಿಯ ಕ
ಣ್ಣಾಲಿಗಳ ಕೆಂಪುಗಳ ಹೊಗರು ಛ
ಡಾಳಿಸಲು ಬಲುಖತಿಯ ಸುಭಟರು ಹಳಚಿತರ್ಜುನನ (ಭೀಷ್ಮ ಪರ್ವ, ೮ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕೌರವ ವೀರರ ಕಿರೀಟಗಳ ಮಾಣಿಕ್ಯ ರಶ್ಮಿಗಳು, ಸೂರ್ಯನ ತೇಜಸ್ಸನ್ನು ಮೀರಿಸಲು ಪ್ರಸಿದ್ಧರಾದ ವೀರರು ಯುದ್ಧಕ್ಕೆ ಬಂದರು. ಬಾಣಗಳನ್ನು ತೆಗೆಯಲೆಂದು ಆರು ಕಿವಿಯ ಪಕ್ಕದಲ್ಲಿ ಬತ್ತಳಿಕೆಯನ್ನು ನೋಡುತ್ತಿರಲು, ಅವರ ಕಣ್ಣಾಲಿಗಳ ಕೆಂಪು ಹೆಚ್ಚಾಗುತ್ತಿತ್ತು.

ಅರ್ಥ:
ಸಾಲ: ಎರವು; ಮಕುಟ: ಕಿರೀಟ; ಮಾಣಿಕ್ಯ: ಕೆಂಪು ಹರಳು; ಮಣಿ: ರತ್ನ; ಮಾಲಿಕೆ: ಹಾರ; ರಶ್ಮಿ: ಕಿರಣ; ಸೂರ್ಯ: ರವಿ; ಸೋಲು: ಪರಾಭವ; ಸಮರ: ಯುದ್ಧ; ಹೊಕ್ಕು: ಸೇರು; ಅತಿಬಲ: ಪರಾಕ್ರಮಿ; ಕೋಲ: ಬಾಣ; ತೆಗಹು: ತೆರವು, ಬಿಡುವು; ಕಿವಿ: ಕರ್ಣ; ಕಣ್ಣಾಲಿ: ಕಣ್ಣುಗುಡ್ಡೆ; ಕೆಂಪು: ರಕ್ತವರ್ಣ; ಹೊಗರು: ಕಾಂತಿ, ಪ್ರಕಾಶ; ಛಡಾಳಿಸು: ಹೆಚ್ಚಾಗು; ಬಲು: ತುಂಬ; ಖತಿ: ಕೋಪ; ಸುಭಟ: ಸೈನಿಕ, ಶೂರ;

ಪದವಿಂಗಡಣೆ:
ಸಾಲ +ಮಕುಟದ +ಮಾಣಿಕದ +ಮಣಿ
ಮಾಲಿಕೆಯ +ರಶ್ಮಿಗಳು +ಸೂರ್ಯನ
ಸೋಲಿಸಲು +ಸಮರವನು +ಹೊಕ್ಕರು +ಕುರುಹಿನ್+ಅತಿಬಳರು
ಕೋಲ +ತೆಗಹಿನ +ಕಿವಿಗಡಿಯ +ಕ
ಣ್ಣಾಲಿಗಳ +ಕೆಂಪುಗಳ+ ಹೊಗರು+ ಛ
ಡಾಳಿಸಲು +ಬಲು+ಖತಿಯ +ಸುಭಟರು +ಹಳಚಿತ್+ಅರ್ಜುನನ

ಅಚ್ಚರಿ:
(೧) ಮ, ಕ, ಸ ಕಾರದ ಸಾಲು ಪದ – ಮಕುಟದ ಮಾಣಿಕದ ಮಣಿ ಮಾಲಿಕೆಯ, ಕಿವಿಗಡಿಯ ಕಣ್ಣಾಲಿಗಳ ಕೆಂಪುಗಳ, ಸೂರ್ಯನ ಸೋಲಿಸಲು ಸಮರವನು
(೨) ಉಪಮಾನ ಪ್ರಯೋಗ – ಸಾಲ ಮಕುಟದ ಮಾಣಿಕದ ಮಣಿ ಮಾಲಿಕೆಯ ರಶ್ಮಿಗಳು ಸೂರ್ಯನ
ಸೋಲಿಸಲು ಸಮರವನು ಹೊಕ್ಕರು

ಪದ್ಯ ೨೬: ಭೀಷ್ಮರು ಯಾವ ಚಿಂತನೆಯಲ್ಲಿ ಮುಳುಗಿದರು?

ಖಳನ ಕಳುಹಿದನತಿಬಳನು ತ
ನ್ನೊಳಗೆ ನೆನೆದನು ಪಾಂಡುನಂದನ
ರುಳಿವು ತನ್ನದು ಮೀರಿ ಕಾದುವೊಡಸುರರಿಪುವಿಹನು
ಅಳುಕಿ ಕಾದುವಡಿತ್ತಾ ಹಾವಿನ
ಹಳವಿಗೆಯ ಕಡುಮೂರ್ಖನಿಗೆ ಬೆಂ
ಬಲವ ಕಾಣೆನು ತನಗೆ ಹದನೇನೆನುತ ಚಿಂತಿಸಿದ (ಭೀಷ್ಮ ಪರ್ವ, ೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ದುರ್ಯೋಧನನನ್ನು ಕಳಿಸಿದ ಬಳಿಕ ಭೀಷ್ಮನು ಪಾಂಡವರ ಉಳಿವು ನನ್ನ ಅಧೀನ. ಅವರನ್ನು ಸಂಹರಿಸಲೆಂದು ಮಹಾ ಪ್ರಯತ್ನವನ್ನು ಮಾಡೋಣವೆಂದರೆ ಅವರನ್ನುಳಿಸಲು ಶ್ರೀಕೃಷ್ಣನಿದ್ದಾನೆ. ಅವನಿಗೆ ಹೆದರಿ ನನ್ನ ಶಕ್ತಿಗಿಂತ ಕಡಿಮೆಯಾಗಿ ಯುದ್ಧಮಾಡೋಣವೆಂದರೆ ದುರ್ಯೋಧನನನ್ನು (ಸರ್ಪಧ್ವಜ) ಬೆಂಬಲಿಸುವರು ಇಲ್ಲದಂತಾಗುತ್ತದೆ. ಈಗ ನಾನೇನು ಮಾಡಬೇಕೆಂದು ಭೀಷ್ಮರು ಚಿಂತಿಸಿದರು.

ಅರ್ಥ:
ಖಳ: ದುಷ್ಟ; ಕಳುಹಿಸು: ಬೀಳ್ಕೊಡು; ಅತಿ: ಬಹಳ; ಬಲ: ಪರಾಕ್ರಮಿ; ನೆನೆ: ಮನನ ಮಾಡು; ನಂದನ: ಮಗ; ಉಳಿವು: ಜೀವಿಸು; ಮೀರಿ: ದಾಟು, ಹಾದುಹೋಗು; ಕಾದು: ಹೋರಾಡು; ಅಸುರರಿಪು: ಕೃಷ್ಣ; ಅಳುಕು: ಹೆದರು; ಹಾವು: ಉರಗ; ಹಳವಿಗೆ: ಬಾವುಟ; ಕದು: ಬಹಳ; ಮೂರ್ಖ: ತಿಳಿಗೇಡಿ, ಅವಿವೇಕಿ; ಬೆಂಬಲ: ಸಹಾಯ, ಆಸರೆ; ಕಾಣು: ತೋರು; ಹದ: ಸ್ಥಿತಿ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಖಳನ +ಕಳುಹಿದನ್+ಅತಿಬಳನು +ತ
ನ್ನೊಳಗೆ +ನೆನೆದನು +ಪಾಂಡುನಂದನರ್
ಉಳಿವು +ತನ್ನದು +ಮೀರಿ +ಕಾದುವೊಡ್+ಅಸುರರಿಪುವಿಹನು
ಅಳುಕಿ +ಕಾದುವಡ್+ಇತ್ತಾ+ ಹಾವಿನ
ಹಳವಿಗೆಯ +ಕಡುಮೂರ್ಖನಿಗೆ+ ಬೆಂ
ಬಲವ +ಕಾಣೆನು +ತನಗೆ+ ಹದನೇನೆನುತ +ಚಿಂತಿಸಿದ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ – ಹಾವಿನಹಳವಿಗೆಯ ಕಡುಮೂರ್ಖ, ಖಳ