ಪದ್ಯ ೧೫: ಬ್ರಾಹ್ಮಣರನ್ನು ಯಾರು ಕೊಂದರು?

ವಿತತ ಸತ್ಯದ ವಿಷಯಭೇದ
ಸ್ಥಿತಿಯನರಿಯದ ಮುನಿಪ ವನಚರ
ತತಿಗೆ ಭೂಸುರಜನದ ಮಾರ್ಗವನರುಹಿದನು ಬಳಿಕ
ಅತಿ ದುರಾತ್ಮಕರವದಿರನಿಬರು
ಕ್ಷಿತಿಸುರರ ಕೊಂದಮಳ ಭೂಪ
ಪ್ರತತಿಯನು ಕೊಂಡೊಯ್ದರೆಲೆ ಕೌಂತೇಯ ಕೇಳೆಂದ (ಕರ್ಣ ಪರ್ವ, ೧೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಆ ಕೌಶಿಕ ಮುನಿಯು ಸತ್ಯದ ಸೂಕ್ಷ್ಮವನ್ನರಿಯದೆ ಮುನಿಯು ಬ್ರಾಹ್ಮಣರು ಹೋದ ಮಾರ್ಗವನ್ನು ತೋರಿಸಿದನು. ಆ ದುರಾತ್ಮರು ಬ್ರಾಹ್ಮಣರನ್ನು ಕೊಂದು ಅವರ ಆಭರಣಗಳನ್ನು ತೆಗೆದುಕೊಂಡು ಹೋದರು.

ಅರ್ಥ:
ವಿತತ: ಹರಡಿಕೊಂಡಿರುವ, ವಿಸ್ತಾರವಾದ; ಸತ್ಯ: ದಿಟ; ವಿಷಯ: ಇಂದ್ರಿಯ ಗೋಚರವಾಗುವ ಶಬ್ದ; ಭೇದ: ವ್ಯತ್ಯಾಸ; ಸ್ಥಿತಿ: ರೀತಿ; ಅರಿ: ತಿಳಿ; ಮುನಿ: ಋಷಿ; ವನಚರ: ಬೇಟೆಗಾರ; ತತಿ: ಗುಂಪು; ಭೂಸುರ: ಬ್ರಾಹ್ಮಣ; ಮಾರ್ಗ: ದಾರಿ; ಅರುಹು: ತಿಳಿಸು, ಹೇಳು; ಬಳಿಕ: ನಂತರ; ಅತಿ: ಬಹಳ; ದುರಾತ್ಮ: ದುಷ್ಟ; ಅನಿಬರು: ಅಷ್ಟು ಜನ; ಕ್ಷಿತಿಸುರ: ಬ್ರಾಹ್ಮಣ; ಕೊಂದು: ಸಾಯಿಸು; ಅಮಳ: ಪರಿಶುದ್ಧ; ಭೂಪ: ರಾಜ; ಪ್ರತತಿ: ಗುಂಪು; ಕೊಂಡು: ತೆಗೆದು; ಒಯ್ದು: ಹೋಗು; ಕೇಳು: ಆಲಿಸು; ಕೌಂತೇಯ: ಅರ್ಜುನ;

ಪದವಿಂಗಡಣೆ:
ವಿತತ +ಸತ್ಯದ +ವಿಷಯ+ಭೇದ
ಸ್ಥಿತಿಯನ್+ಅರಿಯದ +ಮುನಿಪ +ವನಚರ
ತತಿಗೆ+ ಭೂಸುರ+ಜನದ +ಮಾರ್ಗವನ್+ಅರುಹಿದನು +ಬಳಿಕ
ಅತಿ +ದುರಾತ್ಮಕರವದಿರ್+ಅನಿಬರು
ಕ್ಷಿತಿಸುರರ+ ಕೊಂದ್+ಅಮಳ +ಭೂಪ
ಪ್ರತತಿಯನು +ಕೊಂಡೊಯ್ದರ್+ಎಲೆ +ಕೌಂತೇಯ +ಕೇಳೆಂದ

ಅಚ್ಚರಿ:
(೧) ತತಿ, ಅತಿ, ಕ್ಷಿತಿ, ಪ್ರತತಿ, ಸ್ಥಿತಿ – ಪ್ರಾಸ ಪದಗಳು
(೨) ಭೂಸುರ, ಕ್ಷಿತಿಸುರ – ಸಮನಾರ್ಥಕ ಪದ
(೩) ಕ ಕಾರದ ತ್ರಿವಳಿ ಪದ – ಕೊಂಡೊಯ್ದರೆಲೆ ಕೌಂತೇಯ ಕೇಳೆಂದ

ಪದ್ಯ ೪೨: ಕೌರವನ ಆಸ್ಥಾನ ಹೇಗೆ ಕಾಣಿಸಿತು?

ಅತಿಮುದದಿ ತನು ಸೊಕ್ಕಿದೈರಾ
ವತವ ಕಿವಿವಿಡಿದೆಳೆವ ದಿಗ್ಗಜ
ತತಿಯನಮಳಾಂಕುಶದಲಂಜಿಸಿ ಕೆಲಬಲಕೆ ಬಿಡುವ
ನುತ ಗಜಾರೋಹಕರು ಕುರುಭೂ
ಪತಿಯ ಹೊರೆಯಲಿ ಮೆರೆದರಮರಾ
ವತಿಯ ರಾಯನ ಸಭೆಯೊಲೆಸೆದುದು ಕೌರವಾಸ್ಥಾನ (ಉದ್ಯೋಗ ಪರ್ವ, ೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ಸೊಕ್ಕಿದ ದೇಹದಿಂದ ಕೂಡಿದ, ಅತಿ ಸಂತಸದಿಂದ ಲೀಲಾಜಾಲವಾಗಿ ಆನೆಗಳ ಕಿವಿಹಿಡಿದು ಎಳೆದು ಅಂಕುಶದಿಂದ ಅಂಜಿಸಿ ಅಕ್ಕಪಕ್ಕಕ್ಕೆ ಬಿಡುವ ಪಳಿಗಿದ ಶ್ರೇಷ್ಠ ಮಾವುತರು ದುರ್ಯೋಧನನ ಆಜ್ಞೆಯಲ್ಲಿ ಮೆರೆಯಲು ನೋಡುವವರಿಗೆ ಇಂದ್ರನ ಸಭೆಯೇ ಧರೆಗೆ ಕೌರವನ ಆಸ್ಥಾನವಾಗಿದಿಯೇ ಎಂದು ತೋರುತ್ತಿತ್ತು.

ಅರ್ಥ:
ಅತಿ: ತುಂಬ; ಮುದ: ಸಂತೋಷ; ತನು: ದೇಹ; ಸೊಕ್ಕು: ಅಮಲು, ಮದ; ಐರಾವತ: ಇಂದ್ರನ ಆನೆ; ಕಿವಿ: ಶ್ರವಣಸಾಧನವಾದ ಅವಯವ; ಎಳೆ: ಜಗ್ಗು; ದಿಗ್ಗಜ: ಅತಿಶ್ರೇಷ್ಠ;
ಭೂಭಾಗವನ್ನು ಹೊತ್ತಿರುವ ಎಂಟು ದಿಕ್ಕಿನ ಆನೆಗಳು; ತತಿ: ಗುಂಪು; ಅಮಳ: ನಿರ್ಮಲ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ಅಂಜಿಸು: ಹೆದರಿಸು; ಕೆಲಬಲ: ಅಕ್ಕಪಕ್ಕ; ಬಿಡು: ತೊರೆ, ತ್ಯಜಿಸು; ನುತ: ಶ್ರೇಷ್ಠವಾದ; ಗಜ: ಆನೆ, ಕರಿ; ಆರೋಹಕ: ಹತ್ತುವವ; ಗಜಾರೋಹಕ: ಮಾವುತ; ಭೂಪತಿ: ರಾಜ; ಹೊರೆ: ಭಾರ; ಮೆರೆ: ಪ್ರಕಾಶಿಸು; ಅಮರಾವತಿ: ಇಂದ್ರನ ನಗರ; ರಾಯ: ರಾಜ; ಸಭೆ: ದರ್ಬಾರು; ಎಸೆ: ಶೋಭಿಸು; ಆಸ್ಥಾನ: ದರಬಾರು;

ಪದವಿಂಗಡಣೆ:
ಅತಿಮುದದಿ +ತನು +ಸೊಕ್ಕಿದ್+ಐರಾ
ವತವ +ಕಿವಿವಿಡಿದ್+ಎಳೆವ +ದಿಗ್ಗಜ
ತತಿಯನ್+ಅಮಳ+ಅಂಕುಶದಲ್+ಅಂಜಿಸಿ +ಕೆಲಬಲಕೆ +ಬಿಡುವ
ನುತ +ಗಜ+ಆರೋಹಕರು+ ಕುರುಭೂ
ಪತಿಯ +ಹೊರೆಯಲಿ +ಮೆರೆದರ್+ಅಮರಾ
ವತಿಯ +ರಾಯನ +ಸಭೆಯೊಲ್+ಎಸೆದುದು +ಕೌರವಾಸ್ಥಾನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕುರುಭೂಪತಿಯ ಹೊರೆಯಲಿ ಮೆರೆದರಮರಾವತಿಯ ರಾಯನ ಸಭೆಯೊಲೆಸೆದುದು ಕೌರವಾಸ್ಥಾನ
(೨) ‘ಅ’ ಕಾರದ ಪದ ಬಳಕೆ – ಅಮಳ, ಅಂಕುಶ, ಅಂಜಿಸಿ, ಅಮರಾವತಿ, ಅತಿ

ಪದ್ಯ ೨೭: ದುರ್ಯೋಧನನ ಸಲಹೆಗೆ ಭೀಷ್ಮರ ವಿಚಾರವೇನು?

ಮತವಹುದು ತಪ್ಪಲ್ಲ ಪಾಂಡವ
ಗತಿಯನರಿವೊಡೆ ಮಾರ್ಗವಿದು ಸ
ಮ್ಮತವು ನಿರ್ಮಳ ನೀತಿಕಾರರ ಮನಕೆ ಮತವಹುದು
ಅತಿ ಗಳಿತವಾಯ್ತವಧಿ ದಿವಸ
ಸ್ಥಿತಿಯೊಳೈದಾರಾಗೆ ಬಳಿಕೀ
ಕ್ಷಿತಿಗೆ ಪಾಂಡವರುತ್ತರಾಯಿಗಳೆಂದನಾ ಭೀಷ್ಮ (ವಿರಾಟ ಪರ್ವ, ೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತಿಗೆ ಭೀಷ್ಮರು, “ವಿರಾಟನ ಗೋವುಗಳನ್ನು ಹಿಡಿದು ಪಾಂಡವರನ್ನು ಕಂಡು ಹಿಡಿಯುವ ಉಪಾಯವು ನೀತಿ ಸಮ್ಮತವಾಗಿದೆ, ಆದರೆ ಈಗಾಗಲೇ ಬಹಳ ಅವಧಿ ಮುಗಿದಿದೆ, ಇನ್ನೇನು ೫-೬ ದಿನಗಳಲ್ಲಿ ಇವರ ಅಜ್ಞಾತವಾಸದ ಕಾಲವು ಮುಗಿಯುತ್ತದೆ ಆನಂತರ ಪಾಂಡವರು ತಮ್ಮ ರಾಜ್ಯಕ್ಕೆ ಅಧಿಕಾರಿಗಳಾಗಿ ಬಿಡುತ್ತಾರೆ”, ಎಂದರು.

ಅರ್ಥ:
ಮತ: ಅಭಿಪ್ರಾಯ ;ತಪ್ಪಲ್ಲ: ಸರಿಯಾದುದು; ಅಹುದು: ಒಪ್ಪಿಗೆ, ಸರಿ; ಗತಿ:ಇರುವ ಸ್ಥಿತಿ; ಅರಿ: ತಿಳಿ; ಮಾರ್ಗ: ದಾರಿ; ಸಮ್ಮತ: ಒಪ್ಪು; ನಿರ್ಮಳ: ಶುಭ್ರ; ನೀತಿ: ನ್ಯಾಯ; ಮನ: ಮನಸ್ಸು, ಚಿತ್ತ; ಅತಿ: ಬಹಳ; ಗಳಿತ: ಬಿದ್ದು ಹೋದುದು ; ಅವಧಿ: ಕಾಲ; ದಿವಸ: ದಿನ, ವಾರ; ಸ್ಥಿತಿ: ; ಬಳಿಕ: ನಂತರ; ಕ್ಷಿತಿ: ಭೂಮಿ; ಉತ್ತರಾಯಿ: ಜವಾಬುದಾರಿ;

ಪದವಿಂಗಡಣೆ:
ಮತವಹುದು +ತಪ್ಪಲ್ಲ +ಪಾಂಡವ
ಗತಿಯನ್+ಅರಿವೊಡೆ +ಮಾರ್ಗವಿದು +ಸ
ಮ್ಮತವು +ನಿರ್ಮಳ +ನೀತಿಕಾರರ +ಮನಕೆ +ಮತವಹುದು
ಅತಿ +ಗಳಿತವಾಯ್ತ್+ಅವಧಿ +ದಿವಸ
ಸ್ಥಿತಿಯೊಳ್+ಐದ್+ಆರ್+ಆಗೆ +ಬಳಿಕ+ಈ
ಕ್ಷಿತಿಗೆ +ಪಾಂಡವರ್+ಉತ್ತರಾಯಿಗಳೆಂದನಾ +ಭೀಷ್ಮ

ಅಚ್ಚರಿ:
(೧) ಮತ, ಸಮ್ಮತ; ಗತಿ, ಅತಿ, ಸ್ಥಿತಿ, ಕ್ಷಿತಿ – ಪ್ರಾಸ ಪದಗಳು
(೨) ಜೋಡಿ ಪದಗಳು ‘ನ’, ‘ಮ’ – ನಿರ್ಮಳ ನೀತಿಕಾರರ ಮನಕೆ ಮತವಹುದು

ಪದ್ಯ ೬೫: ರಾಜನ ಮಾನವು ಯಾರಿಂದ ಹೋಗುತ್ತದೆ?

ಸತಿಯರೊಲುಮೆಯ ವಿಟರುಗಳನಾ
ಸತಿಯರ ಸ್ಥಿತಿಗತಿಗೆ ತಾನೆಂ
ದತಿಶಯೋಕ್ತಿಯ ನುಡಿವವರನರಮನೆಯ ಕಾಹಿಂಗೆ
ಪತಿಕರಿಸಿದರೆ ಜಗವರಿಯಲಾ
ಕ್ಷಿತಿಪರಭಿಮಾನವು ಮುಹೂರ್ತಕೆ
ಗತವಹುದು ನೀನರಿದಿಹೈ ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೬೫ ಪದ್ಯ)

ತಾತ್ಪರ್ಯ:
ಹೆಂಡತಿಯರ ಮೇಲೆ ಮೋಹವಿಟ್ಟುಕೊಂಡು, ಆ ಸ್ತ್ರಿಯರನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕಾಗಿ ಕಾಮುಕರನ್ನು ಅವರ ಯೋಗಕ್ಷೇಮವನ್ನು ನೋಡಿಕೊಳ್ಳಲು ಅರಮನೆಯ ಕಾವಲಿಗೆ ನೇಮಿಸಿದರೆ, ಅಂತಹ ರಾಜನ ಮಾನವು ಒಂದು ಮುಹೂರ್ತದಲ್ಲಿ ಇಲ್ಲದಂತಾಗುತ್ತದೆ, ಇದು ನೀನು ತಿಳಿದಿರುವೆಯ ಎಂದು ನಾರದರು ಕೇಳಿದರು.

ಅರ್ಥ:
ಸತಿ: ಗರತಿ, ಹೆಂಡತಿ; ಒಲುಮೆ: ಪ್ರೀತಿ; ವಿಟ: ಕಾಮುಕ, ವಿಷಯಾಸಕ್ತ; ಸ್ಥಿತಿಗತಿ: ದೆಸೆ, ಅವಸ್ಥೆ; ಅತಿಶಯೋಕ್ತಿ: ರೂಢಿಗಿಂತ ಹೆಚ್ಚಾಗಿ ಹೇಳುವುದು; ನುಡಿ: ಮಾತು; ಅರಮನೆ: ರಾಜರ ವಾಸಸ್ಥಾನ; ಕಾಹಿಂಗೆ: ಕಾವಲು; ಪತಿಕರಿಸು:ಅಂಗೀಕರಿಸು; ಜಗ: ಜಗತ್ತು; ಅರಿ: ತಿಳಿ; ಕ್ಷಿತಿ: ಭೂಮಿ; ಅಭಿಮಾನ:ಹೆಮ್ಮೆ, ಆತ್ಮಗೌರವ; ಗತ: ಹಿಂದೆ; ಭೂಪಾಲ: ರಾಜ; ಮುಹೂರ್ತ: ಸಮಯ

ಪದವಿಂಗಡಣೆ:
ಸತಿಯರ್+ಒಲುಮೆಯ +ವಿಟರುಗಳನ್+ಆ
ಸತಿಯರ +ಸ್ಥಿತಿಗತಿಗೆ +ತಾನ್+
ಎಂದತಿಶಯೋಕ್ತಿಯ +ನುಡಿವವರನ್+ಅರಮನೆಯ +ಕಾಹಿಂಗೆ
ಪತಿಕರಿಸಿದರೆ +ಜಗವ್+ಅರಿಯಲಾ
ಕ್ಷಿತಿಪರ್+ಅಭಿಮಾನವು +ಮುಹೂರ್ತಕೆ
ಗತವಹುದು+ ನೀನ್+ಅರಿದಿಹೈ +ಭೂಪಾಲ +ಕೇಳೆಂದ

ಅಚ್ಚರಿ:
(೧) ಸತಿ, ಅತಿ, ಕ್ಷಿತಿ, ಪತಿ – ಪ್ರಾಸ ಪದಗಳು