ಪದ್ಯ ೪: ಅರ್ಜುನ ಅಶ್ವತ್ಥಾಮರ ಯುದ್ಧವು ಹೇಗಿತ್ತು?

ಕೆಣಕಿದಡೆ ಗುರುಸುತನನಡಹಾ
ಯ್ದಣೆದನಂಬಿನಲರ್ಜುನನ ಮಾ
ರ್ಗಣಮಹಾರಣ್ಯದಲಿ ನಡೆದುದು ಕಡಿತ ಗುರುಸುತನ
ರಣವಿಶಾರದರಹಿರಲೇ ನೀ
ವಣಕವೇತಕೆ ರಾಜಗುರುಗಳು
ಸೆಣಸುವರೆ ಸೈರಿಸಿರೆ ನೀವೆನುತೆಚ್ಚನಾ ಪಾರ್ಥ (ಶಲ್ಯ ಪರ್ವ, ೩ ಸಂಧಿ, ೪ ಪದ್ಯ)

ತಾತ್ಪರ್ಯ:
ಅರ್ಜುನನು ಅಶ್ವತ್ಥಾಮನನ್ನು ಅಡ್ಡಗಟ್ಟಿ ಬಾಣಗಳಿಂದ ತಿವಿದನು. ಅರ್ಜುನನ ಬಾಣಗಳ ಮಹಾರಣ್ಯವನ್ನು ಅಶ್ವತ್ಥಾಮನು ಕಡಿದನು. ಅರ್ಜುನನು ನೀವು ರಾಜಗುರುಗಳು, ಯುದ್ಧ ವಿಶಾರದರು, ಯುದ್ಧ ಮಾಡುವಿರಾದರೆ ಈ ಹೊಡೆತವನ್ನು ಸೈರಿಸಿರಿ ಎಂದು ಬಾಣ ಪ್ರಯೋಗ ಮಾಡಿದನು.

ಅರ್ಥ:
ಕೆಣಕು: ರೇಗಿಸು; ಸುತ: ಮಗ; ಗುರು: ಆಚಾರ್ಯ; ಅಡಹಾಯ್ದು: ಅಡ್ಡ ಬಂದು, ಮಧ್ಯ ಪ್ರವೇಶಿಸು; ಅಂಬು: ಬಾಣ; ಮಾರ್ಗನ: ಬಾಣ; ಅರಣ್ಯ: ಕಾಡು; ನಡೆ: ಚಲಿಸು; ಕಡಿ: ಸೀಳು; ರಣ: ಯುದ್ಧ; ವಿಶಾರದ: ಪ್ರವೀಣ; ಅಣಕ: ಸೋಗು; ರಾಜ: ನೃಪ; ಸೆಣಸು: ಹೋರಾಡು; ಸೈರಿಸು: ತಾಳು; ಎಚ್ಚು: ಬಾಣ ಪ್ರಯೋಗ ಮಾಡು; ಅಣೆ: ತಿವಿ, ಹೊಡೆ;

ಪದವಿಂಗಡಣೆ:
ಕೆಣಕಿದಡೆ +ಗುರುಸುತನನ್+ಅಡಹಾಯ್ದ್
ಅಣೆದನ್+ಅಂಬಿನಲ್+ಅರ್ಜುನನ +ಮಾ
ರ್ಗಣ+ಮಹಾರಣ್ಯದಲಿ+ ನಡೆದುದು +ಕಡಿತ +ಗುರುಸುತನ
ರಣವಿಶಾರದರ್+ಅಹಿರಲೇ +ನೀವ್
ಅಣಕವೇತಕೆ +ರಾಜಗುರುಗಳು
ಸೆಣಸುವರೆ +ಸೈರಿಸಿರೆ +ನೀವೆನುತ್+ಎಚ್ಚನಾ +ಪಾರ್ಥ

ಅಚ್ಚರಿ:
(೧) ಅಂಬು, ಮಾರ್ಗಣ – ಸಮಾನಾರ್ಥಕ ಪದ
(೨) ರೂಪಕದ ಪ್ರಯೋಗ – ಅರ್ಜುನನ ಮಾರ್ಗಣಮಹಾರಣ್ಯದಲಿ ನಡೆದುದು
(೩) ಅಶ್ವತ್ಥಾಮನನ್ನು ಹೊಗಳುವ ಪರಿ – ರಣವಿಶಾರದ

ಪದ್ಯ ೨೮: ಅಭಿಮನ್ಯುವಿನ ಬಗ್ಗೆ ಶ್ರೀಕೃಷ್ಣನು ಏನು ಹೇಳಿದನು?

ಗುಣಕೆ ಹುರುಡೇ ನಿನ್ನ ಮಗನೀ
ರಣವ ಬಗೆವನೆ ಸೂರ್ಯನಾರೋ
ಗಣೆಗೆ ಸೊಡರೇ ಸಾಕಿದೇತಕೆ ಬಯಲ ಭಂಡತನ
ಕೆಣಕು ನಡೆ ಸಮಸಪ್ತಕರನೀ
ಬಣಗುಗಳ ಕೊಂಬನ್ ಕುಮಾರಕ
ನಣಕವಲ್ಲೆಂದಸುರರಿಪು ತಿರುಹಿದನು ನಿಜರಥವ (ದ್ರೋಣ ಪರ್ವ, ೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಗುಣಕ್ಕೆ ಮತ್ಸರವೇ? ಅಭಿಮನ್ಯುವಿಗೆ ಈ ಯುದ್ಧವು ಒಂದು ಲೆಕ್ಕಕ್ಕಿದೆಯೇ? ಸೂರ್ಯನು ಊಟಮಾದುವಾಗ ದೀಪವನ್ನು ಹಚ್ಚಿಕೊಳ್ಳುವವನೇ? ಈ ನಾಚಿಕೆಗೇಡಿನ ಬುದ್ಧಿಯನ್ನು ಬಿಡು. ಸಮಸಪ್ತಕರೊಡನೆ ಯುದ್ಧಕ್ಕೆ ಹೋಗೋಣ, ಅಣಕದ ಮಾತಾಡುತ್ತಿಲ್ಲ. ಈ ಕ್ಷುಲ್ಲಕರನ್ನು ಅಭಿಮನ್ಯುವು ಲೆಕ್ಕಿಸುವುದಿಲ್ಲ ಎಂದು ಶ್ರೀಕೃಷ್ಣನು ಹೇಳಿದನು.

ಅರ್ಥ:
ಗುಣ: ನಡತೆ, ಸ್ವಭಾವ; ಹುರುಡು: ಪೈಪೋಟಿ, ಸ್ಪರ್ಧೆ; ಮಗ: ಪುತ್ರ; ರಣ: ಯುದ್ಧ; ಬಗೆ: ತಿಳಿ; ಸೂರ್ಯ: ರವಿ; ಆರೋಗಣೆ: ಊಟ, ಭೋಜನ; ಸೊಡರು: ದೀಪ; ಸಾಕು: ಕೊನೆ, ಅಂತ್ಯ; ಬಯಲ: ವ್ಯರ್ಥವಾದುದು; ಭಂಡ: ನಾಚಿಕೆ, ಲಜ್ಜೆ; ಕೆಣಕು: ಕೆರಳಿಸು; ನಡೆ: ಚಲಿಸು; ಸಮಸಪ್ತಕ: ಪ್ರತಿಜ್ಞೆ ಮಾಡಿ ಹೋರಾಡುವವರು; ಬಣ: ಗುಂಪು; ಕೊಂಬು: ಸಾಯಿಸು; ಕುಮಾರ: ಪುತ್ರ; ಅಣಕ: ಕುಚೋದ್ಯ; ಅಸುರರಿಪು: ಕೃಷ್ಣ; ತಿರುಹು: ತಿರುಗಿಸು; ರಥ: ಬಂಡಿ;

ಪದವಿಂಗಡಣೆ:
ಗುಣಕೆ +ಹುರುಡೇ +ನಿನ್ನ +ಮಗನ್+ಈ
ರಣವ +ಬಗೆವನೆ+ ಸೂರ್ಯನ್+ಆರೋ
ಗಣೆಗೆ +ಸೊಡರೇ +ಸಾಕಿದ್+ಏತಕೆ +ಬಯಲ +ಭಂಡತನ
ಕೆಣಕು +ನಡೆ +ಸಮಸಪ್ತಕರನ್+ಈ+
ಬಣಗುಗಳ+ ಕೊಂಬನೆ+ ಕುಮಾರಕನ್
ಅಣಕವಲ್ಲೆಂದ್+ಅಸುರರಿಪು+ ತಿರುಹಿದನು+ ನಿಜರಥವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸೂರ್ಯನಾರೋಗಣೆಗೆ ಸೊಡರೇ

ಪದ್ಯ ೧೦೦: ಊರ್ವಶಿಯು ದೂತನಿಗೆ ಏನೆಂದು ಹೇಳಿದಳು?

ಅಣಕವಲ್ಲಿದು ರಾಯನಟ್ಟಿದ
ಮಣಿಹವೋ ನಿಜಕಾರ್ಯಗತಿಗಳ
ಕುಣಿಕೆಯೋ ಕರ್ತವ್ಯವಾವುದು ನಿಮಗೆ ನಮ್ಮಲ್ಲಿ
ಗುಣಭರಿತ ಹೇಳೆನಲು ನಸುನಗೆ
ಕುಣಿಯೆ ಮುಖದಲಿ ಮಾನಿನಿಗೆ ವೆಂ
ಟಣಿಸಿ ಲಜ್ಜಾಭರದಿ ನುಡಿದನು ದೂತನೀ ಮಾತ (ಅರಣ್ಯ ಪರ್ವ, ೮ ಸಂಧಿ, ೧೦೦ ಪದ್ಯ)

ತಾತ್ಪರ್ಯ:
ಊರ್ವಶಿಯು ಚಿತ್ರಸೇನನಿಗೆ, ನೀನು ಇಲ್ಲಿಗೆ ಬಂದಿರುವುದೇನು ಹುಡುಗಾಟವಲ್ಲ ತಾನೆ? ರಾಜನು ಹೇಳಿದ ಕರ್ತವ್ಯಕ್ಕಾಗಿ ಇಲ್ಲಿಗೆ ಬಂದೆಯೋ, ನಿನ್ನದೇನಾದರೂ ಕೆಲಸವಿದೆಯೋ? ನೀವು ಯಾವ ಕಾರ್ಯಕ್ಕಾಗಿ ಬಂದಿರಿ ಎಂದು ಕೇಳಲು, ಚಿತ್ರಸೇನನು ನಾಚಿಕೆಗೊಂಡು ನಸುನಗುತ್ತಾ ನಮಸ್ಕರಿಸುತ್ತಾ ಹೀಗೆ ಹೇಳಿದನು.

ಅರ್ಥ:
ಅಣಕ: ಕುಚೋದ್ಯ; ರಾಯ: ರಾಜ; ಅಟ್ಟು: ಕಳುಹಿಸು; ಮಣಿಹ: ಉದ್ಯೋಗ; ಕಾರ್ಯ: ಕೆಲಸ; ಗತಿ: ಸಂಚಾರ; ಕುಣಿಕೆ: ಜೀರುಗುಣಿಕೆ; ಕರ್ತವ್ಯ: ಕೆಲಸ; ಗುಣ: ನಡತೆ; ಭರಿತ: ತುಂಬಿದ; ಹೇಳು: ತಿಳಿಸು; ನಸುನಗೆ: ಹಸನ್ಮುಖ; ಕುಣಿ: ನರ್ತಿಸು; ಮುಖ: ಆನನ; ಮಾನಿನಿ: ಹೆಂಗಸು, ಸ್ತ್ರೀ; ವೆಂಟಣಿಸು: ನಮಸ್ಕರಿಸು; ಲಜ್ಜೆ: ನಾಚಿಕೆ, ಸಂಕೋಚ; ನುಡಿ: ಮಾತಾಡು; ದೂತ: ಸೇವಕ; ಮಾತು: ವಾಣಿ;

ಪದವಿಂಗಡಣೆ:
ಅಣಕವಲ್ಲಿದು +ರಾಯನ್+ಅಟ್ಟಿದ
ಮಣಿಹವೋ +ನಿಜಕಾರ್ಯಗತಿಗಳ
ಕುಣಿಕೆಯೋ +ಕರ್ತವ್ಯವ್+ಆವುದು+ ನಿಮಗೆ+ ನಮ್ಮಲ್ಲಿ
ಗುಣಭರಿತ+ ಹೇಳೆನಲು+ ನಸುನಗೆ
ಕುಣಿಯೆ+ ಮುಖದಲಿ +ಮಾನಿನಿಗೆ +ವೆಂ
ಟಣಿಸಿ+ ಲಜ್ಜಾಭರದಿ+ ನುಡಿದನು+ ದೂತನ್+ಈ+ ಮಾತ

ಅಚ್ಚರಿ:
(೧) ನಕ್ಕನು ಎಂದು ಹೇಳಲು – ನಸುನಗೆ ಕುಣಿಯೆ ಮುಖದಲಿ

ಪದ್ಯ ೯: ಕೌರವರು ಏಕೆ ಹರುಷಿಸಿದರು?

ಹಣುಗಿದರು ಭೀಮಾದಿಗಳು ಕ
ಟ್ಟೊಣಗಿಲಾದವು ಭಟರ ಮೋರೆಗ
ಳೆಣಿಸುತಿರ್ದರು ಜಪವನರ್ಜುನ ಕೃಷ್ಣರೆಂಬವರು
ಸೆಣಸುವನು ಗಡ ಕೌರವನೊಳಿ
ನ್ನುಣಲಿ ಧರೆಯನು ಧರ್ಮಸುತನೆಂ
ದಣಕವಾಡಿತು ನಿನ್ನ ದುಷ್ಪರಿವಾರ ಹರುಷದಲಿ (ಕರ್ಣ ಪರ್ವ, ೨೫ ಸಂಧಿ, ೯ ಪದ್ಯ)

ತಾತ್ಪರ್ಯ:
ಭೀಮನೇ ಮೊದಲಾದ ಪಾಂಡವ ವೀರರು ಹೊಂಚು ಹಾಕಿದರು. ಯೋಧರ ಮೋರೆಗಳು ಬಡವಾದವು. ಕೃಷ್ಣ ಅರ್ಜುನರ ನಾಮಸ್ಮರಣೆಮಾಡಲಾರಂಭಿಸಿದರು. ಎಲೈ ರಾಜ ಧೃತರಾಷ್ಟ್ರ ನಿನ್ನ ದುಷ್ಟಪರಿವಾರವು ಧರ್ಮರಾಯನಿಗೆ, ಇವನು ಕೌರವನೊಡನೆ ಯುದ್ಧಕ್ಕಿಳಿದನೋ, ಇನ್ನು ರಾಜ್ಯವನ್ನನುಭವಿಸಲಿ ಎಂದು ಅಣಕಿಸಿದರು.

ಅರ್ಥ:
ಹಣುಗು: ಹಿಂಜರಿ, ಹೊಂಚು; ಆದಿ: ಮುಂತಾದ; ಒಣಗು: ಬತ್ತಿದ, ಸತ್ತ್ವವಿಲ್ಲದ; ಭಟ: ಸೈನಿಕ; ಮೋರೆ: ಮುಖ; ಎಣಿಸು: ಗಣನೆ ಮಾಡು; ಜಪ: ನಾಮಸ್ಮರಣೆ; ಸೆಣಸು: ಯುದ್ಧಮಾದು; ಗಡ: ಅಲ್ಲವೆ; ತ್ವರಿತವಾಗಿ; ಉಣು: ಊಟಮಾಡು; ಧರೆ: ಭೂಮಿ; ಸುತ: ಮಗ; ಧರ್ಮ: ಯಮ; ಅಣಕ: ಹಂಗಿಸು; ಪರಿವಾರ: ಸುತ್ತಲಿನವರು, ಪರಿಜನ; ದುಷ್ಪರಿವಾರ: ದುಷ್ಟಪರಿಜನ; ಹರುಷ: ಸಂತೋಷ;

ಪದವಿಂಗಡಣೆ:
ಹಣುಗಿದರು +ಭೀಮಾದಿಗಳು +ಕಟ್
ಒಣಗಿಲಾದವು+ ಭಟರ+ ಮೋರೆಗಳ್
ಎಣಿಸುತಿರ್ದರು +ಜಪವನ್+ಅರ್ಜುನ +ಕೃಷ್ಣರ್+ಎಂಬವರು
ಸೆಣಸುವನು+ ಗಡ+ ಕೌರವನೊಳ್
ಇನ್ನುಣಲಿ +ಧರೆಯನು +ಧರ್ಮಸುತನೆಂದ್
ಅಣಕವಾಡಿತು +ನಿನ್ನ+ ದುಷ್ಪರಿವಾರ +ಹರುಷದಲಿ

ಅಚ್ಚರಿ:
(೧) ಪಾಂಡವರ ಸ್ಥಿತಿಯನ್ನು ವರ್ಣಿಸುವ ಪದಗಳು – ಹಣುಗು, ಕಟ್ಟೊಣಗು, ಜಪ
(೨) ಸಂಜಯನು ಧೃತರಾಷ್ಟ್ರನಿಗೆ ತನ್ನದು ದುಷ್ಟಪರಿವಾರ ಎಂದು ಹೇಳುತ್ತಿರುವುದು
(೩) ಎಣಿಸು, ಸೆಣಸು – ಪ್ರಾಸ ಪದ