ಪದ್ಯ ೩೫: ಧರ್ಮಜನ ಮೇಲೆ ದುರ್ಯೋಧನನು ಹೇಗೆ ದಾಳಿ ಮಾಡಿದನು?

ಧರಣಿಪನ ಥಟ್ಟಣೆಗೆ ನಿಲ್ಲದೆ
ತೆರಳಿದನು ಸಹದೇವನಾತನ
ಹಿರಿಯನಡ್ಡೈಸಿದಡೆ ಕೊಟ್ಟನು ಬೋಳೆಯಂಬಿನಲಿ
ಶರಹತಿಗೆ ಸೆಡೆದಾ ನಕುಲ ಪೈ
ಸರಿಸಿದನು ನುರಾನೆಯಲಿ ಡಾ
ವರಿಸಿದನು ಧರ್ಮಜನ ದಳದಲಿ ಧೀರ ಕುರುರಾಯ (ಗದಾ ಪರ್ವ, ೨ ಸಂಧಿ, ೩೫ ಪದ್ಯ)

ತಾತ್ಪರ್ಯ:
ದುರ್ಯೋಧನನ ಜೋರಿನ ಹೊಡೆತವನ್ನು ತಡೆಯಲಾದರೆ ಸಹದೇವನು ಹಿಂದಿರುಗಿದನು. ನಕುಲನು ಬರಲು ಕೌರವನು ಬೋಳೆಯಂಬಿನಿಂದ ಹೊಡೆದನು. ನಕುಲನು ಸಹ ಇದನ್ನು ತಡೆಯಲಾರದೆ ಜಾರಿದನು. ಧೀರ ಕೌರವನು ನೂರಾನೆಗಳ ಸೈನ್ಯದೊಂದಿಗೆ ಧರ್ಮಜನ ದಳದ ಮೇಲೆ ದಾಳಿಮಾಡಿದನು.

ಅರ್ಥ:
ಧರಣಿಪ: ರಾಜ; ಥಟ್ಟಣೆ: ಗುಂಪು; ನಿಲ್ಲು: ತಡೆ; ತೆರಳು: ಹಿಂದಿರುಗು; ಹಿರಿಯ: ದೊಡ್ಡ; ಅಡ್ಡೈಸು: ಅಡ್ಡ ಹಾಕು; ಕೊಡು: ನೀಡು; ಅಂಬು: ಬಾಣ; ಶರ: ಬಾಣ; ಹತಿ: ಪೆಟ್ಟು, ಹೊಡೆತ; ಸೆಡೆ: ಗರ್ವಿಸು; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಆನೆ: ಗಜ; ಡಾವರಿಸು: ಸುತ್ತು, ತಿರುಗಾಡು; ದಳ: ಸೈನ್ಯ; ಧೀರ: ಶೂರ;

ಪದವಿಂಗಡಣೆ:
ಧರಣಿಪನ +ಥಟ್ಟಣೆಗೆ +ನಿಲ್ಲದೆ
ತೆರಳಿದನು +ಸಹದೇವನ್+ಆತನ
ಹಿರಿಯನ್+ಅಡ್ಡೈಸಿದಡೆ +ಕೊಟ್ಟನು +ಬೋಳೆ+ಅಂಬಿನಲಿ
ಶರಹತಿಗೆ +ಸೆಡೆದ್+ಆ+ ನಕುಲ+ ಪೈ
ಸರಿಸಿದನು +ನುರಾನೆಯಲಿ +ಡಾ
ವರಿಸಿದನು+ ಧರ್ಮಜನ +ದಳದಲಿ+ ಧೀರ+ ಕುರುರಾಯ

ಅಚ್ಚರಿ:
(೧) ಪೈಸರಿಸಿದನು, ಡಾವರಿಸಿದನು, ತೆರಳಿದನು – ಪ್ರಾಸ ಪದಗಳು

ಪದ್ಯ ೯: ದ್ರೋಣನು ಏನೆಂದು ಶಪಥ ಮಾಡಿದನು?

ನಾಳೆ ಫಲುಗುಣ ತಪ್ಪಿದರೆ ಭೂ
ಪಾಲಕನ ಕಟ್ಟುವೆನು ರಣದಲಿ
ಶೂಲಿಯಡ್ಡೈಸಿದರೆ ಹಿಡಿವೆನು ಚಿಂತೆ ಬೇಡಿದಕೆ
ಕೇಳು ಪದ್ಮವ್ಯೂಹದಲಿ ಹೊ
ಕ್ಕಾಳು ಮರಳಿದಡಸ್ತ್ರವಿದ್ಯಾ
ಭಾಳಲೋಚನನೆಂಬ ಬಿರುದನು ಬಿಟ್ಟೆ ನಾನೆಂದ (ದ್ರೋಣ ಪರ್ವ, ೪ ಸಂಧಿ, ೯ ಪದ್ಯ
)

ತಾತ್ಪರ್ಯ:
ನಾಳೆ ಅರ್ಜುನನು ತಡೆಯದಿದ್ದರೆ ಶಿವನೇ ಬಂದು ಎದುರಿಸಿದರೂ ಶತ್ರುರಾಜನನ್ನು ಸೆರೆ ಹಿಡಿಯುತ್ತೇನೆ. ನನ್ನ ಪ್ರತಿಜ್ಞೆಯನ್ನು ಕೇಳು, ಪದ್ಮವ್ಯೂಹವನ್ನು ರಚಿಸುತ್ತೇನೆ. ಅದನ್ನು ಹೊಕ್ಕ ವೀರನು ಬದುಕಿ ಹಿಂದಿರುಗಿದರೆ ಅಸ್ತ್ರವಿದ್ಯಾಭಾಳಲೋಚನ ಎಂಬ ಬಿರುದನ್ನು ತ್ಯಜಿಸುತ್ತೇನೆ ಎಂದು ದ್ರೋಣನು ಶಪಥ ಮಾಡಿದನು.

ಅರ್ಥ:
ನಾಳೆ: ಮುಂದಿನ ದೈನ; ಫಲುಗುಣ: ಅರ್ಜುನ; ತಪ್ಪಿದರೆ: ಸಿಕ್ಕದಿದ್ದರೆ; ಭೂಪಾಲಕ: ರಾಜ; ಕಟ್ಟು: ಬಂಧಿಸು; ರಣ: ಯುದ್ಧ; ಶೂಲಿ: ಶಿವ; ಅಡ್ಡೈಸು: ಎದುರು; ಹಿಡಿ: ಬಂಧಿಸು; ಚಿಂತೆ: ಯೋಚನೆ; ಬೇಡ: ತ್ಯಜಿಸು; ಕೇಳು: ಆಲಿಸು; ಹೊಕ್ಕು: ಸೇರು; ಆಳು: ಸೈನಿಕ; ಮರಳು: ಹಿಂದಿರುಗು; ಅಸ್ತ್ರ: ಶಸ್ತ್ರ; ಭಾಳಲೋಚನ: ಶಿವ; ಬಿರುದು: ಗೌರವ ಸೂಚಕ ಪದ; ಬಿಟ್ಟೆ: ತ್ಯಜಿಸು;

ಪದವಿಂಗಡಣೆ:
ನಾಳೆ +ಫಲುಗುಣ +ತಪ್ಪಿದರೆ+ ಭೂ
ಪಾಲಕನ +ಕಟ್ಟುವೆನು +ರಣದಲಿ
ಶೂಲಿ+ಅಡ್ಡೈಸಿದರೆ +ಹಿಡಿವೆನು +ಚಿಂತೆ +ಬೇಡಿದಕೆ
ಕೇಳು+ ಪದ್ಮವ್ಯೂಹದಲಿ +ಹೊಕ್ಕ್
ಆಳು +ಮರಳಿದಡ್+ಅಸ್ತ್ರವಿದ್ಯಾ
ಭಾಳಲೋಚನನೆಂಬ +ಬಿರುದನು +ಬಿಟ್ಟೆ +ನಾನೆಂದ

ಅಚ್ಚರಿ:
(೧) ದ್ರೋಣನ ಬಳಿಯಿದ್ದ ಬಿರುದು – ಅಸ್ತ್ರವಿದ್ಯಾಭಾಳಲೋಚನ
(೨) ಶೂಲಿ, ಭಾಳಲೋಚನ – ಸಮಾನಾರ್ಥಕ ಪದಗಳು

ಪದ್ಯ ೩೩: ಭೀಮನು ಸುಪ್ರತೀಕವನ್ನು ಹೇಗೆ ಕೆರಳಿಸಿದನು?

ಬಿನುಗುಗಳ ತೆಗೆ ಭೀಮಸೇನನ
ಮೊನೆಗೆ ಬಿಡು ಬಿಡು ಗಜವನೆಮ್ದು
ಬ್ಬಿನಲಿ ತಿರುಹಿದನಾನೆಯನು ಪವನಜನ ಸಮ್ಮುಖಕೆ
ಧನುವ ಬಿಸುಟನು ಗದೆಯ ತುಡುಕಿದ
ನನುವರದೊಳಡ್ಡೈಸಿ ದಂತಿಯ
ಕನಲಿಸಿದನೊಳಹೊಕ್ಕು ಹೊಯ್ದನು ಸಿಂಹನಾದದಲಿ (ದ್ರೋಣ ಪರ್ವ, ೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ಜೊಳ್ಳುಗಳ ಸುದ್ದಿಬೇಡ, ಭೀಮನ ಸಮ್ಮುಖಕ್ಕೆ ಆನೆಯನ್ನು ಬಿಡು ಎಂದು ಮಾವುತನಿಗೆ ಭಗದತ್ತನು ಹೇಳಿ, ಭೀಮನೆದುರಿಗೆ ಬಂದು ನಿಂತನು. ಭೀಮನು ಬಿಲ್ಲನ್ನು ಎಸೆದು ಗದೆಯನ್ನು ಹಿಡಿದು, ಸುಪ್ರತೀಕವನ್ನು ತಡೆದು ಒಳಹೊಕ್ಕು ಸಿಂಹಗರ್ಜನೆಯನ್ನು ಮಾಡಿ ಅದನ್ನು ಕೆರಳಿಸಿದನು.

ಅರ್ಥ:
ಬಿನುಗು: ಅಲ್ಪವ್ಯಕ್ತಿ; ತೆಗೆ: ಹೊರತರು; ಮೊನೆ: ತುದಿ, ಕೊನೆ; ಬಿಡು: ತ್ಯಜಿಸು; ಗಜ: ಆನೆ; ಉಬ್ಬು: ಹೆಚ್ಚು; ತಿರುಹು: ತಿರುಗಿಸು; ಆನೆ: ಗಜ; ಪವನಜ: ಭಿಮ; ಸಮ್ಮುಖ: ಎದುರು; ಧನು: ಬಿಲ್ಲು, ಧನುಸ್ಸು; ಬಿಸುಟು: ಹೊರಹಾಕು; ಗದೆ: ಮುದ್ಗರ; ತುಡುಕು: ಹೋರಾಡು, ಸೆಣಸು; ಅನುವರ: ಯುದ್ಧ; ಅಡ್ಡೈಸು: ಅಡ್ಡಬಂದು; ದಂತಿ: ಆನೆ; ಕನಲು: ಸಿಟ್ಟಿಗೇಳು; ಹೊಕ್ಕು: ಸೇರು; ಹೊಯ್ದ: ಹೊಡೆ; ಸಿಂಹ: ಕೇಸರಿ; ನಾದ: ಶಬ್ದ;

ಪದವಿಂಗಡಣೆ:
ಬಿನುಗುಗಳ +ತೆಗೆ +ಭೀಮಸೇನನ
ಮೊನೆಗೆ +ಬಿಡು +ಬಿಡು +ಗಜವನೆಂದ್
ಉಬ್ಬಿನಲಿ +ತಿರುಹಿದನ್+ಆನೆಯನು +ಪವನಜನ +ಸಮ್ಮುಖಕೆ
ಧನುವ +ಬಿಸುಟನು +ಗದೆಯ +ತುಡುಕಿದನ್
ಅನುವರದೊಳ್+ಅಡ್ಡೈಸಿ +ದಂತಿಯ
ಕನಲಿಸಿದನ್+ಒಳಹೊಕ್ಕು +ಹೊಯ್ದನು +ಸಿಂಹ+ನಾದದಲಿ

ಅಚ್ಚರಿ:
(೧) ಭೀಮನು ಸುಪ್ರತೀಕವನ್ನು ಎದುರಿಸಿದ ಪರಿ – ಅನುವರದೊಳಡ್ಡೈಸಿ ದಂತಿಯ ಕನಲಿಸಿದನೊಳಹೊಕ್ಕು ಹೊಯ್ದನು ಸಿಂಹನಾದದಲಿ

ಪದ್ಯ ೨೦: ದ್ರೌಪದಿಯನ್ನು ಆಶ್ರಮದಿಂದ ಏಕೆ ಹೊರತಂದನು?

ರಾಣಿವಾಸವಲಾ ಯುಧಿಷ್ಠಿರ
ನಾಣೆ ಬಿಡು ಬಿಡುಯೆನುತ ಸುಜನ
ಶ್ರೇಣಿಯಡ್ಡೈಸಿದರೆ ಬೀಸಿದನವನು ಖಂಡೆಯವ
ರಾಣಿ ನಡೆನಡೆ ನಮಗೆ ಪಾಂಡವ
ರಾಣೆಯಿಟ್ಟರು ಮುನಿಗಳಿಲ್ಲಿರ
ಲಾಣೆ ತಪ್ಪುವುದೆನುತ ಹೊರವಂಡಿಸಿದನಾಶ್ರಮವ (ಅರಣ್ಯ ಪರ್ವ, ೨೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಅಲ್ಲಿದ್ದ ಸಜ್ಜನರು, ಇವಳು ಯುಧಿಷ್ಠಿರನ ರಾಣಿ, ಯುಧಿಷ್ಠಿರನಾಣೆ ಅವಳನ್ನು ಬಿಡು ಬಿಡು, ಎಂದು ಅವನನ್ನು ಅಡ್ಡಗಟ್ಟಿದರು. ಅವನು ಕತ್ತಿಯನ್ನು ಬೀಸಿ, ಅವರನ್ನು ತೊಲಗಿಸಿ, ರಾಣೀ, ಮುನಿಗಳು ಪಾಂಡವರಾಣೆಯಿಟ್ಟಿದ್ದಾರೆ, ಇಲ್ಲಿದ್ದರೆ ಈ ಆಣೆ ತಪ್ಪುತ್ತದೆ ಎಂದು ಅವಳನ್ನು ಹೊರಕ್ಕೆಳೆದೊಯ್ದನು.

ಅರ್ಥ:
ರಾಣಿ: ಅರಸಿ; ಆಣೆ: ಪ್ರಮಾಣ; ಬಿಡು: ತೊರೆ; ಸುಜನ: ಒಳ್ಳೆಯ ಜನ; ಶ್ರೇಣಿ: ಸಾಲು, ಗುಂಪು; ಅಡ್ಡೈಸು: ಅಡ್ಡಗಟ್ಟು; ಬೀಸು: ಒಗೆ, ಎಸೆ; ಖಂಡೆಯ: ಕತ್ತಿ; ನಡೆ: ಚಲಿಸು; ತಪ್ಪು: ಸುಳ್ಳಾಗು; ಹೊರ: ಹೊರಗೆ; ಆಶ್ರಮ: ಕುಟೀರ;

ಪದವಿಂಗಡಣೆ:
ರಾಣಿವಾಸವಲಾ +ಯುಧಿಷ್ಠಿರನ್
ಆಣೆ +ಬಿಡು +ಬಿಡು+ಎನುತ +ಸುಜನ
ಶ್ರೇಣಿ+ಅಡ್ಡೈಸಿದರೆ+ ಬೀಸಿದನ್+ಅವನು +ಖಂಡೆಯವ
ರಾಣಿ +ನಡೆನಡೆ +ನಮಗೆ +ಪಾಂಡವರ್
ಆಣೆ+ಇಟ್ಟರು +ಮುನಿಗಳ್+ಇಲ್ಲಿರಲ್
ಆಣೆ+ ತಪ್ಪುವುದ್+ಎನುತ +ಹೊರವಂಡಿಸಿದನ್+ಆಶ್ರಮವ

ಅಚ್ಚರಿ:
(೧) ರಾಣಿ, ಶ್ರೇಣಿ – ಪ್ರಾಸ ಪದಗಳು

ಪದ್ಯ ೭೫: ಕಾಲಾಳುವಿನ ಲಕ್ಷಣವೇನು?

ಬೇಸರದೆ ಕಾಳೋರಗನನ
ಡ್ಡೈಸಿ ಕಟ್ಟಿರುವೆಗಳು ಮಿಗೆವೇ
ಡೈಸಿ ಕಡಿದರೆಯಟ್ಟುವಂದದಲಹಿತ ಬಲದೊಳಗೆ
ಓಸರಿಸದೊಳಹೊಕ್ಕು ಸಮರ ವಿ
ಳಾಸವನು ನೆರೆ ಮೆರೆದು ಕೇಶಾ
ಕೇಶಿಯಲಿ ಹಿಡಿದಿರಿವವನೆ ಕಾಲಾಳು ಕೇಳೆಂದ (ಸಭಾ ಪರ್ವ, ೧ ಸಂಧಿ, ೭೫ ಪದ್ಯ)

ತಾತ್ಪರ್ಯ:
ಚಿಕ್ಕದಾದ ಇರುವೆಗಳ ಗುಂಪು ಬಲಿಷ್ಠವಾದ ಕರಿನಾಗರವನ್ನು ಅಡ್ಡನಿಲ್ಲಿಸಿ ಮುತ್ತಿ ಬೇಸರದೆ ಕಡಿದು ಓಡಿಸುವಂತೆ, ಹಿಂಜರಿಯದೆ ಶತ್ರುಸೈನ್ಯದೊಳಕ್ಕೆ ನುಗ್ಗಿ, ಶತ್ರು ಸೈನಿಕರನ್ನು ಕೂದಲು ಹಿಡಿದು ಎಳೆದುಕೊಂಡು ಇರುದುಕೊಲ್ಲುವವನೇ ಕಾಲಾಳು ಎಂದು ನಾರದರ ಯುಧಿಷ್ಠಿರನಿಗೆ ತಿಳಿಸಿದರು.

ಅರ್ಥ:
ಬೇಸರ: ಆಸಕ್ತಿಯಿಲ್ಲದಿರುವಿಕೆ; ಕಾಳ: ಕಪ್ಪು; ಉರಗ: ಹಾವು; ಅಡ್ಡೈಸಿ: ತಡೆ; ಇರುವೆ: ಚೀಮೆ, ಪಿಪೀಲಿಕೆ; ಕಟ್ಟಿ: ರಚಿಸಿ; ಮಿಗೆ: ಹೆಚ್ಚು; ವೇಡೈಸಿ: ಸುತ್ತುವರಿ, ಮುತ್ತು; ಕಡಿ: ತುಂಡು, ಹೋಳು; ಅಟ್ಟು:ಓಡಿಸು; ಅಹಿತ:ಶತ್ರು; ಬಲ:ಶಕ್ತಿ, ಸಾಮರ್ಥ್ಯ; ಓಸರಿಸು: ಹಿಂಜರಿ; ಒಳ: ಒಳಗೆ, ಆಂತರ್ಯ; ಹೊಕ್ಕು: ಹೋಗಿ; ಸಮರ: ಯುದ್ಧ; ವಿಳಾಸ: ಸೌಂದರ್ಯ; ನೆರೆ:ಸಮೀಪ, ಹತ್ತಿರ; ಮೆರೆ:ಪ್ರಕಾಶಿಸು; ಕೇಶ: ಕೂದಲು; ಕೇಶಾಕೇಶಿ: ಕೂದಲು ಹಿಡಿದು ಹೋರಾಡು; ಹಿಡಿ:ಬಂಧನ; ಇರಿ:ಚುಚ್ಚು, ಕೊಲ್ಲು; ಕಾಲಾಳು: ಸೈನಿಕ;

ಪದವಿಂಗಡಣೆ:
ಬೇಸರದೆ+ ಕಾಳ+ಉರಗನನ್
ಅಡ್ಡೈಸಿ +ಕಟ್ಟಿರುವೆಗಳು +ಮಿಗೆ+
ವೇಡೈಸಿ +ಕಡಿದರೆ+ಯಟ್ಟು+ವಂದದಲ್+ಅಹಿತ +ಬಲದೊಳಗೆ
ಓಸರಿಸದ್+ಒಳಹೊಕ್ಕು +ಸಮರ+ ವಿ
ಳಾಸವನು +ನೆರೆ +ಮೆರೆದು +ಕೇಶಾ
ಕೇಶಿಯಲಿ+ ಹಿಡಿದ್+ಇರಿವವನೆ +ಕಾಲಾಳು +ಕೇಳೆಂದ

ಅಚ್ಚರಿ:
(೧) ಕಾಲಾಳುವಿನ ಶಕ್ತಿಯನ್ನು ಇರುವೆಯ ಪ್ರಾಭಲ್ಯಕ್ಕೆ ಹೋಲಿಸಿ ಹೇಳಿರುವುದು
(೨) ಅಡ್ಡೈಸಿ, ಕಟ್ಟಿ, ವೇಡೈಸಿ, ಕಡಿ ಅಟ್ಟು – ಇರುವೆಗಳು ನಾಗರಹಾವನ್ನು ಓಡಿಸುವಾಗ ಬಳಸಿರುವ ಪದಗಳು
(೩) ಬೇಸರ, ಓಸರ – ಪದಗಳ ಬಳಕೆ (ಇರುವೆ, ಕಾಲಾಳು)