ಪದ್ಯ ೬೭: ದ್ರೊಣರು ಶಸ್ತ್ರತ್ಯಾಗವೇಕೆ ಮಾಡಿದರು?

ಕೇಳಿದನು ಕಡುನೊಂದನಡಿಗಡಿ
ಗಾಲಿ ನೀರೇರಿದವು ಕೈಯಲಿ
ಕೋಲು ಬಿಲು ಸಡಲಿದವು ಸಾಕೀ ದೇಹವೇಕೆನುತ
ಮೇಲು ದುಗುಡದ ಮೊಗದಲವನೀ
ಪಾಲ ಕರ್ಣ ಕೃಪಾದಿ ಭಟರಿಗೆ
ಹೇಳಿದನು ಮಗನಳಿದನಸ್ತ್ರತ್ಯಾಗ ತನಗೆಂದು (ದ್ರೋಣ ಪರ್ವ, ೧೮ ಸಂಧಿ, ೬೭ ಪದ್ಯ)

ತಾತ್ಪರ್ಯ:
ಭೀಮನ ಮಾತುಗಳನ್ನು ಕೇಳಿ ದ್ರೋಣನು ಬಹಳವಾಗಿ ದುಃಖಿತನಾದನು. ಕ್ಷಣ ಕ್ಷಣಕ್ಕೂ ಕಣ್ಣು ನೀರು ಬಂದವು. ಕೈಯಲ್ಲಿದ್ದ ಬಿಲ್ಲು ಬಾಣಗಳ ಹಿಡಿತ ಸಡಲಿತು. ಹೆಚ್ಚಿದ ದುಃಖದಿಂದ ಮುಖವು ಬಾಡಲು ಸುಯೋಧನ ಕರ್ಣ ಕೃಪ ಮೊದಲಾದ ವೀರರಿಗೆ ನನ್ನ ಮಗನು ಸತ್ತನು, ನಾನು ಶಸ್ತ್ರತ್ಯಾಗ ಮಾಡುತ್ತೇನೆ ಎಂದನು.

ಅರ್ಥ:
ಕೇಳು: ಆಲಿಸು; ಕಡುನೊಂದು: ಬಹಳ ವ್ಯಥೆಪಟ್ಟು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗು; ಆಲಿ: ಕಣ್ಣು; ನೀರು: ಜಲ; ಕೈ: ಹಸ್ತ; ಕೋಲು: ಬಾಣ; ಬಿಲು: ಚಾಪ; ಸಡಲು: ಕಳಚು; ಸಾಕು: ನಿಲ್ಲು, ತಡೆ; ದೇಹ: ಶರೀರ; ದುಗುಡ: ದುಃಖ; ಮೊಗ: ಮುಖ; ಅವನೀಪಾಲ: ರಾಜ; ಭಟ: ಸೈನಿಕ; ಹೇಳು: ತಿಳಿಸು; ಮಗ: ಪುತ್ರ; ಅಳಿ: ಸತ್ತುಹೋಗು; ಅಸ್ತ್ರ: ಶಸ್ತ್ರ; ತ್ಯಾಗ: ಬಿಡು, ತೊರೆ;

ಪದವಿಂಗಡಣೆ:
ಕೇಳಿದನು +ಕಡುನೊಂದನ್+ಅಡಿಗಡಿಗ್
ಆಲಿ +ನೀರೇರಿದವು +ಕೈಯಲಿ
ಕೋಲು +ಬಿಲು +ಸಡಲಿದವು +ಸಾಕೀ +ದೇಹವೇಕೆನುತ
ಮೇಲು +ದುಗುಡದ +ಮೊಗದಲ್+ಅವನೀ
ಪಾಲ +ಕರ್ಣ +ಕೃಪಾದಿ +ಭಟರಿಗೆ
ಹೇಳಿದನು +ಮಗನ್+ಅಳಿದನ್+ಅಸ್ತ್ರತ್ಯಾಗ +ತನಗೆಂದು

ಅಚ್ಚರಿ:
(೧) ದುಃಖದ ಚಿತ್ರಣ – ಆಲಿ ನೀರೇರಿದವು ಕೈಯಲಿ ಕೋಲು ಬಿಲು ಸಡಲಿದವು

ಪದ್ಯ ೨೦: ಭೀಷ್ಮನ ಮುಖಭಾವ ಹೇಗೆ ಬದಲಾಯಿತು?

ಮೊಗದ ಹೊಗರವಗಡಿಸೆ ಸುಯಿಲಲಿ
ಹೊಗೆಯ ಹೊದರಮ್ಕುರಿಸೆ ಬಿಡುಗ
ಣ್ಣುಗಳೊಳೊಕ್ಕುದು ಕೆಂಪು ಸೊಂಪಡಗಿತು ಮುಖಸ್ನೇಹ
ತೆಗೆವೆನರ್ಜುನನಸುವನೆನುತಾ
ಳುಗಳ ಏವನು ಭೀಷ್ಮ ನಡಿಗಡಿ
ಗೊಗುಮಿಗೆಯ ಕೋಪದಲಿ ಕೋದನು ಸರಳಿನಲಿ ನರನ (ಭೀಷ್ಮ ಪರ್ವ, ೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ಭೀಷ್ಮನ ಮುಖದಲ್ಲಿ ಕೋಪದ ಕಾಂತಿ ಹೆಚ್ಚಿತು, ಉಸಿರಾಟದಲ್ಲಿ ಹೊಗೆ ಕಾಣಿಸಿತು. ವಿಶಾಲ ನೇತ್ರಗಳು ಕೆಂಪಾದವು. ಅರ್ಜುನನ ಬಗೆಗೆ ಭೀಷ್ಮನ ಮುಖದಲ್ಲಿ ಅದುವರೆಗಿದ್ದ ಸ್ನೇಹ ಮಾಸಿತು. ಅರ್ಜುನನ ಪ್ರಾಣವನ್ನೇ ತೆಗೆಯುತ್ತೇನೆಂದುಕೊಂಡು ವೀರಾಗ್ರೇಸರನಾದ ಭೀಷ್ಮನು ಕೋಪದಿಂದ ಮತ್ತೆ ಮತ್ತೆ ಬಾಣಗಳಿಂದ ಅರ್ಜುನನನ್ನು ಹೊಡೆಯಲಾರಂಭಿಸಿದನು.

ಅರ್ಥ:
ಮೊಗ: ಮುಖ; ಹೊಗರು: ಕಾಂತಿ, ಪ್ರಕಾಶ; ಅವಗಡಿಸು: ಕಡೆಗಣಿಸು; ಸುಯಿಲು: ನಿಡಿದಾದ ಉಸಿರು, ನಿಟ್ಟುಸಿರು; ಹೊಗೆ: ಧೂಮ; ಹೊದರು: ಗುಂಪು, ಸಮೂಹ; ಅಂಕುರಿಸು: ಚಿಗುರು; ಬಿಡುಕಣ್ಣು: ತೆರೆದ ಕಣ್ಣು; ಕಣ್ಣು: ನಯನ; ಒಕ್ಕು: ಸೇರು; ಕೆಂಪು: ರಕ್ತವರ್ಣ; ಸೊಂಪು: ಸೊಗಸು, ಚೆಲುವು; ಅಡಗು: ಮುಚ್ಚು; ಮುಖ: ಆನನ; ಸ್ನೇಹ: ಮಿತ್ರ; ತೆಗೆ: ಹೊರತರು; ಅಸು: ಪ್ರಾಣ; ಆಳು: ಸೈನಿಕ; ದೇವ: ಒಡೆಯ; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ; ಒಗುಮಿಗೆ:ಆಧಿಕ್ಯ, ಹೆಚ್ಚಳ; ಕೋಪ: ಕ್ರೋಧ; ಕೋದು: ಸೇರಿಸು; ನರ: ಅರ್ಜುನ;

ಪದವಿಂಗಡಣೆ:
ಮೊಗದ +ಹೊಗರ್+ಅವಗಡಿಸೆ +ಸುಯಿಲಲಿ
ಹೊಗೆಯ +ಹೊದರ್+ಅಂಕುರಿಸೆ+ ಬಿಡುಗ
ಣ್ಣುಗಳೊಳ್+ಒಕ್ಕುದು +ಕೆಂಪು +ಸೊಂಪ್+ಅಡಗಿತು +ಮುಖ+ಸ್ನೇಹ
ತೆಗೆವೆನ್+ಅರ್ಜುನನ್+ಅಸುವನ್+ಎನುತ
ಆಳುಗಳ+ ದೇವನು +ಭೀಷ್ಮನ್ + ಅಡಿಗಡಿಗ್
ಒಗುಮಿಗೆಯ +ಕೋಪದಲಿ +ಕೋದನು +ಸರಳಿನಲಿ+ ನರನ

ಅಚ್ಚರಿ:
(೧) ಆಳುಗಳ ದೇವ – ಭೀಷ್ಮನನ್ನು ಕರೆದ ಪರಿ
(೨) ಭೀಷ್ಮನ ಕೋಪ – ಬಿಡುಗಣ್ಣುಗಳೊಳೊಕ್ಕುದು ಕೆಂಪು ಸೊಂಪಡಗಿತು ಮುಖಸ್ನೇಹ

ಪದ್ಯ ೪: ಧರ್ಮಜನು ಯಾವ ಯಾತ್ರೆಯನ್ನು ಕೈಗೊಂಡನು?

ನುಡಿನುಡಿಗೆ ಸುಕ್ಷೇಮ ಕುಶಲವ
ನಡಿಗಡಿಗೆ ಬೆಸಗೊಂಡ ಪುಳಕದ
ಗುಡಿಯಬೀಡಿನ ರೋಮ ಪುಳಕದ ಪೂರ್ಣ ಹರುಷದಲಿ
ಪೊಡವಿಯಧಿಪತಿ ಬಳಿಕ ತೊಳಲಿದ
ನಡವಿಯಡವಿಯ ತೀರ್ಥಯಾತ್ರೆಗೆ
ಮಡದಿ ನಿಜಪರಿವಾರವವನೀದೇವಕುಲ ಸಹಿತ (ಅರಣ್ಯ ಪರ್ವ, ೧೦ ಸಂಧಿ, ೪ ಪದ್ಯ)

ತಾತ್ಪರ್ಯ:
ಧರ್ಮರಾಯನು ಮತ್ತೆ ಮತ್ತೆ ಅರ್ಜುನನ ಕ್ಷೇಮ ಕುಶಲಗಳನ್ನು ವಿಚಾರಿಸಿ ರೋಮಾಂಚನಗೊಂಡನು. ಅತೀವ ಸಂತೋಷ ಭರಿತನಾದನು, ಪುಳಕಜಲವು ಹರಿಯಲಾರಂಭಿಸಿತು, ತನ್ನ ಪರಿವಾರದವರು ಮತ್ತು ಬ್ರಾಹ್ಮಣರೊಡನೆ ಧರ್ಮಜನು ವನವನಗಳಲ್ಲಿ ತೊಳಲುತ್ತಾ ತೀರ್ಥಯಾತ್ರೆಯನ್ನು ಮಾಡಿದನು.

ಅರ್ಥ:
ನುಡಿ: ಮಾತು; ಕ್ಷೇಮ: ನೆಮ್ಮದಿ, ಸುಖ; ಕುಶಲ: ಕ್ಷೇಮ; ಅಡಿಗಡಿಗೆ: ಮತ್ತೆ ಮತ್ತೆ; ಬೆಸಗೊಳ್: ಕೇಳು; ಪುಳಕ: ರೋಮಾಂಚನ; ಗುಡಿಕಟ್ಟು: ಸಂತೋಷಗೊಳ್ಳು; ರೋಮ: ಕೂದಲು; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಪೂರ್ಣ: ತುಂಬ; ಹರುಷ: ಸಂತೋಷ; ಪೊಡವಿ: ಪೃಥ್ವಿ, ಭೂಮಿ; ಅಧಿಪತಿ: ಒಡೆಯ; ಬಳಿಕ: ನಂತರ; ತೊಳಲು: ಅಲೆದಾಡು, ತಿರುಗಾಡು; ಅಡವಿ: ಕಾಡು; ತೀರ್ಥಯಾತ್ರೆ: ಪವಿತ್ರ ಸ್ಥಳಗಳ ದರ್ಶನಕ್ಕಾಗಿ ಮಾಡುವ ಯಾತ್ರೆ; ಮಡದಿ: ಹೆಂಡತಿ; ಪರಿವಾರ: ಸುತ್ತಲಿನವರು, ಪರಿಜನ; ಅವನೀದೇವ: ಬ್ರಾಹ್ಮಣ; ಕುಲ: ವಂಶ; ಸಹಿತ: ಜೊತೆ;

ಪದವಿಂಗಡಣೆ:
ನುಡಿನುಡಿಗೆ +ಸುಕ್ಷೇಮ +ಕುಶಲವನ್
ಅಡಿಗಡಿಗೆ +ಬೆಸಗೊಂಡ +ಪುಳಕದ
ಗುಡಿಯಬೀಡಿನ+ ರೋಮ +ಪುಳಕದ+ ಪೂರ್ಣ +ಹರುಷದಲಿ
ಪೊಡವಿ+ಅಧಿಪತಿ+ ಬಳಿಕ+ ತೊಳಲಿದನ್
ಅಡವಿ+ಅಡವಿಯ +ತೀರ್ಥಯಾತ್ರೆಗೆ
ಮಡದಿ +ನಿಜಪರಿವಾರವ್+ಅವನೀದೇವ+ಕುಲ ಸಹಿತ

ಅಚ್ಚರಿ:
(೧) ಬ್ರಾಹ್ಮಣ ಎಂದು ಹೇಳಲು ಅವನೀದೇವ ಪದದ ಬಳಕೆ
(೨) ಸಂತೋಷಗೊಂಡ ಎಂದು ತಿಳಿಸಲು – ಪುಳಕದ ಗುಡಿಯಬೀಡಿನ ರೋಮ ಪುಳಕದ ಪೂರ್ಣ ಹರುಷದಲಿ
(೩) ರಾಜನೆಂದು ಹೇಳಲು – ಪೊಡವಿಯಧಿಪತಿ
(೪) ಜೋಡಿ ಪದಗಳು: ಅಡಿಗಡಿ, ಅಡವಿಯಡವಿ, ನುಡಿನುಡಿ

ಪದ್ಯ ೫೮: ಭೀಮನು ದುಶ್ಯಾಸನ ರಕ್ತದಿಂದ ಹೇಗೆ ಆಟವಾಡಿದನು?

ಅಡಿಗಡಿಗೆ ಕದುಕಿರಿದು ರಕುತವ
ಕುಡಿತೆಯಲಿ ಕುಡಿಕುಡಿದು ಬೆರಳಲಿ
ಮಿಡಿದು ಕದನಸ್ಥಾನದೇವತೆಯರಿಗೆ ಕೈಕೊಳಿಸಿ
ಕುಡಿದು ಮಿಕ್ಕುದನಖಿಳಭೂತಕೆ
ಬಡಿಸಿ ಚಪ್ಪಿರಿದಾರಿ ಬೊಬ್ಬಿರಿ
ದೊಡನೊಡನೆ ನೊರೆನೆತ್ತರೋಕುಳಿಯಾಡಿದನು ಭೀಮ (ಕರ್ಣ ಪರ್ವ, ೧೯ ಸಂಧಿ, ೫೮ ಪದ್ಯ)

ತಾತ್ಪರ್ಯ:
ಮತ್ತೆ ಮತ್ತೆ ಭೀಮನು ತನ್ನ ಬೆರಳಿನಿಂದ ದುಶ್ಯಾಸನ ಎದೆಯಿಂದ ರಕ್ತವನ್ನು ಒತ್ತಿ ಒತ್ತಿ ಹಿಡಿದು, ಕುಡಿಕುಡಿದು, ರಣದೇವತೆಗಳಿಗೆ ಕೊಟ್ಟು, ಉಳಿದುದನ್ನು ಭೂತಗಣಗಳಿಗೆ ಬಡಿಸಿ,
ಕುಡಿದು ಚಪ್ಪರಿಸಿ ಕೂಗಿ ಬೊಬ್ಬಿರಿದು ರಕ್ತದೋಕುಳಿಯನ್ನಾಡಿದನು.

ಅರ್ಥ:
ಅಡಿಗಡಿಗೆ: ಹೆಜ್ಜೆಹೆಜ್ಜೆಗೆ; ಕದುಕು: ಕುಕ್ಕು, ಕಡಿ; ಇರಿ: ತಿವಿ, ಚುಚ್ಚು; ರಕುತ: ನೆತ್ತರು; ಕುಡಿ: ಪಾನಮಾದು; ಬೆರಳು: ಅಂಗುಲಿ; ಮಿಡಿ:ಹೀಚು, ತವಕಿಸು; ಕದನಸ್ಥಾನ: ಯುದ್ಧಭೂಮಿ; ದೇವತೆ: ದೇವಿ, ಸುರರು; ಕೈಕೊಳಿಸು: ನೀಡು, ಬಡಿಸು; ಮಿಕ್ಕು: ಉಳಿದ; ಅಖಿಳ: ಎಲ್ಲಾ; ಭೂತ: ದೆವ್ವ; ಬಡಿಸು: ಉಣಬಡಿಸು; ಚಪ್ಪರಿಸು: ಅಸ್ವಾದಿಸು; ಬೊಬ್ಬಿರಿದು: ಕೂಗಿ; ನೊರೆ: ಬುರುಗು ಏಳು; ನೆತ್ತರ: ರಕ್ತ; ಓಕುಳಿ: ಎರಚುವ ಬಣ್ಣದ ನೀರು; ಆಡು: ನಲಿ, ಕ್ರೀಡೆ; ಆರು: ಗರ್ಜಿಸು;

ಪದವಿಂಗಡಣೆ:
ಅಡಿಗಡಿಗೆ +ಕದುಕ್+ಇರಿದು +ರಕುತವ
ಕುಡಿತೆಯಲಿ +ಕುಡಿಕುಡಿದು +ಬೆರಳಲಿ
ಮಿಡಿದು +ಕದನಸ್ಥಾನ+ದೇವತೆಯರಿಗೆ +ಕೈಕೊಳಿಸಿ
ಕುಡಿದು+ ಮಿಕ್ಕುದನ್+ಅಖಿಳ+ಭೂತಕೆ
ಬಡಿಸಿ +ಚಪ್ಪಿರಿದ್+ಆರಿ +ಬೊಬ್ಬಿರಿದ್
ಒಡನೊಡನೆ+ ನೊರೆ+ನೆತ್ತರ್+ಓಕುಳಿ+ಯಾಡಿದನು+ ಭೀಮ

ಅಚ್ಚರಿ:
(೧) ಅಡಿಗಡಿ, ಕುಡಿಕುಡಿ, ಚಪ್ಪಿರಿದ್, ಬೊಬ್ಬಿರಿದ್ – ಪದಗಳ ಬಳಕೆ

ಪದ್ಯ ೮೧: ಗಂಡನು ಯಾರನ್ನು ತೊರೆಯುವುದುತ್ತಮ?

ಮಡದಿ ನಿಜನಿಳಯವನು ಬಿಟ್ಟಡಿ
ಗಡಿಗೆ ಪರಗೃಹದೊಳಗೆ ಬಾಯನು
ಬಡಿದು ಮನೆಮನೆವಾರ್ತೆಯೆನ್ನದೆ ಬೀದಿಗಲಹವನು
ಒಡರಿಸ್ಚುವ ಪತಿಯೊಬ್ಬನುಂಟೆಂ
ದೆಡಹಿ ಕಾಣ್ದ ದಿಟ್ಟೆ ಹತ್ತನು
ಹಡೆದಡೆಯು ವರ್ಜಿಸುವುದುತ್ತಮ ಪುರುಷರುಗಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೧ ಪದ್ಯ)

ತಾತ್ಪರ್ಯ:
ಹೆಂಡತಿಯಾದವಳು ತನ್ನ ಮನೆ ಅವಳ ಮನೆಯಕೆಲಸಗಳನ್ನು ಬಿಟ್ಟು, ಹೆಜ್ಜೆ ಹೆಜ್ಜೆಗೂ ಬೇರೆಯವರ ಮನೆಯಲ್ಲಿ ಬಾಯ್ಬಡಿದು ಮಾತನಾಡುತ್ತಾ, ತನಗೆ ಒಬ್ಬ ಗಂಡನಿರುವನೆಂಬುದನ್ನು ಮರೆತು, ಅವನನ್ನು ಎಡವಿದರೂ ಗಮನಿಸದಿರುವ ದಿಟ್ಟ ಹೆಂಗಸು ತನ್ನಿಂದ ಹತ್ತು ಮಕ್ಕಳನ್ನು ಪಡೆದಿದ್ದರೂ ಶ್ರೇಷ್ಠ ಪುರುಷನು ಆಕೆಯನ್ನು ತೊರೆಯುವುದು ಉತ್ತಮ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಮಡದಿ: ಹೆಂಡತಿ; ನಿಜ: ಸ್ವಂತ; ನಿಳಯ: ಆಲಯ,ಮನೆ; ಬಿಟ್ಟು: ತೊರೆದು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ, ಯಾವಾಗಲೂ; ಪರ: ಬೇರೆ; ಗೃಹ: ಮನೆ; ಬಾಯನುಬಡಿದು: ಹರಟು, ಬೊಬ್ಬೆಹಾಕು; ಮನೆ: ಆಲಯ; ವಾರ್ತೆ: ವಿಷಯ; ಬೀದಿ: ರಸ್ತೆ; ಕಲಹ: ಜಗಳ; ಒಡರು: ಮಾಡು, ರಚಿಸು; ಪತಿ: ಗಂಡ; ಎಡಹು: ತಪ್ಪುಮಾಡು, ಮುಗ್ಗರಿಸು; ಕಾಣದ: ಗೋಚರಿಸದ; ಹತ್ತು: ದಶ; ಹಡೆದು: ಪಡೆದು, ಜನ್ಮನೀಡು; ವರ್ಜಿಸು: ತೊರೆ; ಉತ್ತಮ: ಒಳ್ಳೆಯ, ಶ್ರೇಷ್ಠ; ಪುರುಷ: ಗಂಡ;

ಪದವಿಂಗಡಣೆ:
ಮಡದಿ +ನಿಜ+ನಿಳಯವನು +ಬಿಟ್ಟ್+ಅಡಿ
ಗಡಿಗೆ +ಪರ+ಗೃಹದೊಳಗೆ +ಬಾಯನು
ಬಡಿದು +ಮನೆಮನೆ+ವಾರ್ತೆಯೆನ್ನದೆ +ಬೀದಿ+ಕಲಹವನು
ಒಡರಿಚುವ +ಪತಿಯೊಬ್ಬನ್+ಉಂಟೆಂದ್
ಎಡಹಿ +ಕಾಣ್ದ +ದಿಟ್ಟೆ +ಹತ್ತನು
ಹಡೆದಡೆಯು+ ವರ್ಜಿಸುವುದ್+ಉತ್ತಮ +ಪುರುಷರುಗಳೆಂದ

ಅಚ್ಚರಿ:
(೧) ಅಡಿಗಡಿ, ಮನೆಮನೆ – ಜೋಡಿ ಪದಗಳ ಬಳಕೆ
(೨) ಪತಿ, ಮಡದಿ – ಗಂಡ ಹೆಂಡತಿಗೆ ಉಪಯೋಗಿಸಿದ ಪದ