ಪದ್ಯ ೪೦: ಭೀಮನು ಅಣ್ಣನಿಗೆ ಹೇಗೆ ಉತ್ತರಿಸಿದನು?

ನೋಡಿದನು ಕಂದೆರೆದು ಕಂಠಕೆ
ಹೂಡಿದುರಗನ ಘೋರ ಬಂಧದ
ಗಾಢದಲಿ ನುಡಿ ನೆಗ್ಗಿ ನುಡಿದನು ಬೆರಳ ಸನ್ನೆಯಲಿ
ಖೇಡನಾದನಜಾತರಿಪು ಮಾ
ತಾಡಿಸಿದನಹಿಪತಿಯ ನೆಲೆ ನಾ
ಡಾಡಿಗಳ ನಾಟಕದ ಫಣಿಯಲ್ಲಾರು ಹೇಳೆಂದ (ಅರಣ್ಯ ಪರ್ವ, ೧೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕಣ್ಣು ತೆರೆದು ಭೀಮನು ಅಣ್ಣನನ್ನು ನೋಡಿದನು, ಹಾವು ಅವನ ಕಂಠವನ್ನು ಭದ್ರವಾಗಿ ಬಂಧಿಸಿದ್ದುದರಿಂದ ಅವನು ಮಾತನಾಡಲಾರದೆ ಕೇವಲ ಬೆರಳ ಸನ್ನೆಯನ್ನು ಮಾಡಿದನು. ಅಜಾತಶತ್ರುವಾದ ಧರ್ಮಜನು ಹೆದರಿ ಹಾವನ್ನುದೇಶಿಸಿ, ನೀನು ಸಾಮಾನ್ಯ ಹಾವಲ್ಲ, ನೀನಾರು ಎಂದು ಕೇಳಿದನು.

ಅರ್ಥ:
ನೋಡು: ವೀಕ್ಷಿಸು; ಕಂದೆರೆದು: ಕಣ್ಣು ಬಿಟ್ಟು; ಕಂಠ: ಕೊರಳು
ಹೂಡು: ಅಣಿಗೊಳಿಸು, ಕಟ್ಟು; ಉರಗ: ಹಾವು; ಘೋರ: ಉಗ್ರ, ಭಯಂಕರ; ಬಂಧ: ಕಟ್ಟು, ಬಂಧನ; ಗಾಢ: ಹೆಚ್ಚಳ, ಅತಿಶಯ; ನುಡಿ: ಮಾತಾಡು; ನೆಗ್ಗು: ಕುಗ್ಗು, ಕುಸಿ; ಬೆರಳು: ಅಂಗುಲಿ; ಸನ್ನೆ: ಗುರುತು; ಖೇಡ: ಹೆದರಿದವನು; ಅಜಾತಶತ್ರು: ಧರ್ಮರಾಯ, ಶತ್ರುವೇ ಇಲ್ಲದವ; ಮಾತಾಡಿಸು: ನುಡಿ; ಅಹಿಪತಿ: ಸರ್ಪರಾಜ; ನೆಲೆ: ಸ್ಥಾನ; ನಾಡಾಡಿ: ಸಾಮಾನ್ಯವಾದುದು; ನಾಟಕ: ಲೀಲೆ, ತೋರಿಕೆ; ಫಣಿ: ಹಾವು; ಹೇಳು: ತಿಳಿಸು; ರಿಪು: ಶತ್ರು, ವೈರಿ;

ಪದವಿಂಗಡಣೆ:
ನೋಡಿದನು +ಕಂದೆರೆದು +ಕಂಠಕೆ
ಹೂಡಿದ್+ಉರಗನ +ಘೋರ +ಬಂಧದ
ಗಾಢದಲಿ +ನುಡಿ +ನೆಗ್ಗಿ+ ನುಡಿದನು +ಬೆರಳ +ಸನ್ನೆಯಲಿ
ಖೇಡನಾದನ್+ಅಜಾತರಿಪು+ ಮಾ
ತಾಡಿಸಿದನ್+ಅಹಿಪತಿಯ +ನೆಲೆ +ನಾ
ಡಾಡಿಗಳ +ನಾಟಕದ +ಫಣಿಯಲ್ಲ್+ಆರು +ಹೇಳೆಂದ

ಅಚ್ಚರಿ:
(೧) ಭೀಮನ ಸ್ಥಿತಿ – ಉರಗನ ಘೋರ ಬಂಧದ ಗಾಢದಲಿ ನುಡಿ ನೆಗ್ಗಿ ನುಡಿದನು ಬೆರಳ ಸನ್ನೆಯಲಿ
(೨) ನೆಗ್ಗಿ ನುಡಿದನು; ನೆಲೆ ನಾಡಾಡಿಗಳ ನಾಟಕದ – ನ ಕಾರದ ಪದಗಳು

ಪದ್ಯ ೫೨: ದ್ರೌಪದಿಯು ಪ್ರಾತಿಕಾಮಿಕನನ್ನು ಏನು ಕೇಳಿದಳು?

ದೂತ ಹೇಳೈ ತಂದೆ ಜೂಜನ
ಜಾತರಿಪುವಾಡಿದನೆ ಸೋತನೆ
ಕೈತವದ ಬಲೆಗಾರರವದಿರು ಶಕುನಿ ಕೌರವರು
ದ್ಯೂತದಲಿ ಮುನ್ನೇನನೊಡ್ಡಿದ
ಸೋತನೇನನು ಶಿವ ಶಿವಾ ನಿ
ರ್ಧೂತ ಕಿಲ್ಬಿಷನರಸನೆಂದಳು ದ್ರೌಪದಾದೇವಿ (ಸಭಾ ಪರ್ವ, ೧೫ ಸಂಧಿ, ೫೨ ಪದ್ಯ)

ತಾತ್ಪರ್ಯ:
ಅಪ್ಪ ಪ್ರಾತಿಕಾಮಿಕ, ಜೂಜನ್ನು ಶತ್ರುವೇ ಇಲ್ಲದವನಾದ ಧರ್ಮರಾಯನು ಆಡಿದನೇ, ಆಡಿ ಸೋತನೇ? ಮೋಸದ ಬಲೆಬೀಸುವಲ್ಲಿ ಶಕುನಿ, ದುರ್ಯೋಧನರು ನಿಪುಣರು. ದೊರೆಯು ಜೂಜಿನಲ್ಲಿ ಮೊದಲು ಏನನೊಡ್ಡಿ ಸೋತನು, ಶಿವ ಶಿವಾ ಕಲ್ಮಷ ರಹಿತನಾದ ಧರ್ಮರಾಯನಿಗೆ ಈ ಸ್ಥಿತಿಯೇ ಎಂದು ನೊಂದಳು ದ್ರೌಪದಿ.

ಅರ್ಥ:
ದೂತ: ಚರ, ಸೇವಕ; ಹೇಳು: ತಿಳಿಸು; ತಂದೆ: ಅಪ್ಪ, ಪಿತ; ಜೂಜು: ದ್ಯೂತ; ಅಜಾತರಿಪು: ವೈರಿಯಿಲ್ಲದವ; ರಿಪು: ವೈರಿ; ಅಜಾತ: ಹುಟ್ಟು ಇಲ್ಲದ; ಆಡು: ಕ್ರೀಡಿಸು; ಸೋಲು: ಪರಾಭವ; ಕೈತ: ಮೋಸ, ಕೆಲಸ; ಬಲೆ: ಮೋಸ, ಜಾಲ; ಮುನ್ನ: ಮೊದಲು; ಒಡ್ಡು: ಪಣವಾಗಿಡು; ನಿರ್ಧೂತ: ತೊಡೆದು ಹಾಕುವುದು; ಕಿಲ್ಭಿಷ: ಕಲ್ಮಷ ರಹಿತನಾದ; ಅರಸ: ರಾಜ;

ಪದವಿಂಗಡಣೆ:
ದೂತ +ಹೇಳೈ +ತಂದೆ +ಜೂಜನ್
ಅಜಾತರಿಪುವ್+ಆಡಿದನೆ +ಸೋತನೆ
ಕೈತವದ +ಬಲೆಗಾರರ್+ಅವದಿರು +ಶಕುನಿ +ಕೌರವರು
ದ್ಯೂತದಲಿ +ಮುನ್+ಏನನ್+ಒಡ್ಡಿದ
ಸೋತನ್+ಏನನು +ಶಿವ +ಶಿವಾ+ ನಿ
ರ್ಧೂತ +ಕಿಲ್ಬಿಷನ್+ಅರಸನ್+ಎಂದಳು +ದ್ರೌಪದಾದೇವಿ

ಅಚ್ಚರಿ:
(೧) ಧರ್ಮರಾಯನನ್ನು ದ್ರೌಪದಿ ಕರೆಯುವ ಪರಿ – ಅಜಾತರಿಪು, ನಿರ್ಧೂತ ಕಿಲ್ಬಿಷನರಸ
(೨) ಕೌರವರ ಬಗ್ಗೆ ದ್ರೌಪದಿಗಿದ್ದ ಅಭಿಪ್ರಾಯ – ಕೈತವದ ಬಲೆಗಾರರವದಿರು ಶಕುನಿ ಕೌರವರು