ಪದ್ಯ ೧೩: ಅರ್ಜುನನೇಕೆ ಆಶ್ಚರ್ಯಗೊಂಡನು?

ನರನ ಬಾಣಾನೀಕವನು ಕ
ತ್ತರಿಸಿದನು ನಿಜಗದೆಯಲಾತನ
ಧುರಚಮತ್ಕಾರವನು ನೋಡುತ ಪಾರ್ಥ ಬೆರಗಾಗೆ
ಕೆರಳಿ ವಾಘೆಯ ಕೊಂಡು ರಥವನು
ಧುರಕೆ ದುವ್ವಾಳಿಸಲು ಮುರಹರ
ನುರವಣೆಗೆ ಕನಲುತ ಶ್ರುತಾಯುಧ ಹೊಯ್ದನಚ್ಯುತನ (ದ್ರೋಣ ಪರ್ವ, ೧೦ ಸಂಧಿ, ೧೩ ಪದ್ಯ)

ತಾತ್ಪರ್ಯ:
ಶ್ರುತಾಯುಧನು ಅರ್ಜುನನ ಬಾಣಗಳನ್ನು ತನ್ನ ಗದೆಯಿಂದ ಕತ್ತರಿಸಿದನು. ಅವನ ಯುದ್ಧ ಚಾತುರ್ಯವನ್ನು ಕಂಡು ಅರ್ಜುನನು ಬೆರಗಾಗಿ ಬಿಟ್ಟನು. ಶ್ರೀಕೃಷ್ಣನು ಕೆರಳಿ ಕುದುರೆಗಳ ಲಗಾಮನ್ನು ಹಿಡಿದು ಯುದ್ಧಕ್ಕೆ ಮುನ್ನುಗ್ಗಲು, ಶ್ರೀಕೃಷ್ಣನ ರಭಸವನ್ನು ಕಂಡು ಕೋಪಗೊಂಡು ಶ್ರುತಾಯುಧನು ಗದೆಯಿಂದ ಶ್ರೀಕೃಷ್ಣನನ್ನು ಹೊಡೆದನು.

ಅರ್ಥ:
ನರ: ಅರ್ಜುನ; ಬಾಣ: ಸರಳು, ಅಂಬು; ಆನೀಕ: ಗುಂಪು; ಕತ್ತರಿಸು: ತುಂಡು ಮಾಡು; ನಿಜ: ತನ್ನ; ಗದೆ: ಮುದ್ಗರ; ಧುರ: ಯುದ್ಧ, ಕಾಳಗ; ಚಮತ್ಕಾರ: ಸೋಜಿಗ, ವಿಸ್ಮಯ; ನೋಡು: ವೀಕ್ಷಿಸು; ಬೆರಗು: ಆಶ್ಚರ್ಯ; ಕೆರಳು: ಕೋಪಗೊಳ್ಳು; ವಾಘೆ: ಲಗಾಮು; ಕೊಂಡು: ಹಿಡಿದು; ರಥ: ಬಂಡಿ; ಧುರ: ಯುದ್ಧ, ಕಾಳಗ; ದುವ್ವಾಳಿ: ತೀವ್ರಗತಿ; ಮುರಹರ: ಕೃಷ್ಣ; ಉರವಣೆ: ಆತುರ, ಅವಸರ; ಕನಲು: ಸಿಟ್ಟಿಗೇಳು; ಹೊಯ್ದು: ಹೊಡೆ; ಅಚ್ಯುತ: ಕೃಷ್ಣ;

ಪದವಿಂಗಡಣೆ:
ನರನ +ಬಾಣಾನೀಕವನು +ಕ
ತ್ತರಿಸಿದನು +ನಿಜ+ಗದೆಯಲ್+ಆತನ
ಧುರ+ಚಮತ್ಕಾರವನು +ನೋಡುತ +ಪಾರ್ಥ +ಬೆರಗಾಗೆ
ಕೆರಳಿ+ ವಾಘೆಯ +ಕೊಂಡು +ರಥವನು
ಧುರಕೆ +ದುವ್ವಾಳಿಸಲು +ಮುರಹರನ್
ಉರವಣೆಗೆ +ಕನಲುತ +ಶ್ರುತಾಯುಧ +ಹೊಯ್ದನ್+ಅಚ್ಯುತನ

ಅಚ್ಚರಿ:
(೧) ಮುರಹರ, ಅಚ್ಯುತ – ಕೃಷ್ಣನನ್ನು ಕರೆದ ಪರಿ

ಪದ್ಯ ೨೩: ದ್ರೌಪದಿಯು ಕೃಷ್ಣನನ್ನು ಹೇಗೆ ಭಜಿಸಿದಳು?

ಮುಗುದೆ ಮಿಗೆ ನಿಂದಿರ್ದು ಸಮಪದ
ಯುಗಳದಲಿ ಸೂರ್ಯನ ನಿರೀಕ್ಷಿಸಿ
ಮಗುಳೆವೆಯ ನೆರೆಮುಚ್ಚಿ ನಾಸಿಕದಗ್ರದಲಿ ನಿಲಿಸಿ
ನೆಗಹಿ ಪುಳಕಾಂಬುಗಳು ಮೈಯಲಿ
ಬಿಗಿದುವೊನಲಾಗಿರಲು ಹಿಮ್ಮಡಿ
ಗೊಗುವ ಕೇಶದ ಬಾಲೆ ಭಾವಿಸಿ ನೆನೆದಳುಚ್ಯುತನ (ಅರಣ್ಯ ಪರ್ವ, ೧೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ದ್ರೌಪದಿಯು ಪಾದಗಳನ್ನು ಸಮವಾಗಿ ನಿಲ್ಲಿಸಿ, ಕಣ್ಣಿನ ರೆಪ್ಪೆಯನ್ನು ಸ್ವಲ್ಪ ಮುಚ್ಚಿ, ಸೂರ್ಯನನ್ನು ನೋಡಿ, ದೃಷ್ಟಿಯನ್ನು ಭ್ರೂಮಧ್ಯದಲ್ಲಿ ಕೇಂದ್ರೀಕರಿಸಿ, ರೋಮಾಂಚನದ ಜಲವು ಹರಿಯುತ್ತಿರಲು, ಹಿಮ್ಮಡಿಯನ್ನು ಮುಟ್ಟುವ ಕೇಷರಾಶಿಯ ಅಬಲೆಯು ಶ್ರೀಕೃಷ್ಣನನ್ನು ಸ್ಮರಿಸಿದಳು.

ಅರ್ಥ:
ಮುಗುದೆ: ಕಪಟವರಿಯದವಳು; ಮಿಗೆ: ಮತ್ತು, ಅಧಿಕವಾಗಿ; ನಿಂದಿರ್ದು: ನಿಲ್ಲು; ಸಮ: ಸಮನಾಗಿ; ಪದ: ಪಾದ, ಚರಣ; ಯುಗಳ: ಎರಡು; ಸೂರ್ಯ: ರವಿ; ನಿರೀಕ್ಷಿಸಿ: ನೋಡಿ; ಮಗುಳೆ: ಮತ್ತೆ, ಪುನಃ; ನೆರೆ: ಪಕ್ಕ, ಪಾರ್ಶ್ವ; ನಾಸಿಕ: ಮೂಗು; ನೆಗಹು: ಮೇಲೆತ್ತು; ಪುಳಕ: ರೋಮಾಂಚನ; ಅಂಬು: ನೀರು; ಮೈ: ತನು; ಬಿಗಿ: ಕಟ್ತು; ಹಿಮ್ಮಡಿ: ಹಿಂದಿನ ಪಾದ; ಒಗು: ಚೆಲ್ಲು, ಸುರಿ; ಕೇಶ: ಕೂದಲು; ಬಾಲೆ: ಅಬಲೆ, ಹೆಣ್ಣು; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಅಚ್ಯುತ: ಚ್ಯುತಿಯಿಲ್ಲದ (ಕೃಷ್ಣ);

ಪದವಿಂಗಡಣೆ:
ಮುಗುದೆ +ಮಿಗೆ +ನಿಂದಿರ್ದು +ಸಮಪದ
ಯುಗಳದಲಿ +ಸೂರ್ಯನ +ನಿರೀಕ್ಷಿಸಿ
ಮಗುಳೆವೆಯ +ನೆರೆಮುಚ್ಚಿ +ನಾಸಿಕದ್+ಅಗ್ರದಲಿ +ನಿಲಿಸಿ
ನೆಗಹಿ +ಪುಳಕಾಂಬುಗಳು+ ಮೈಯಲಿ
ಬಿಗಿದುವೊನಲಾಗಿರಲು +ಹಿಮ್ಮಡಿ
ಗೊಗುವ +ಕೇಶದ +ಬಾಲೆ +ಭಾವಿಸಿ+ ನೆನೆದಳ್+ಅಚ್ಯುತನ

ಅಚ್ಚರಿ:
(೧) ದ್ರೌಪದಿಯ ಕೇಶವನ್ನು ವಿವರಿಸುವ ಪರಿ – ಹಿಮ್ಮಡಿಗೊಗುವ ಕೇಶದ ಬಾಲೆ

ಪದ್ಯ ೧೩೧: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೨೦?

ನಂದಗೋಪ ಕುಮಾರ ಗೋಪೀ
ವೃಂದ ವಲ್ಲಭ ದೈತ್ಯ ಮಥನ ಮು
ಕುಂದ ಮುರಹರ ಭಕ್ತವತ್ಸಲ ಘನ ಕೃಪಾಜಲಧೆ
ನೊಂದೆನೈ ನುಗ್ಗಾದೆನೈ ಗೋ
ವಿಂದ ಕೃಪೆ ಮಾಡಕಟೆನುತ ಪೂ
ರ್ಣೇಂದು ಮುಖಿ ಹಲುಬಿದಳು ಬಲುತೆರದಿಂದಲಚ್ಯುತನ (ಸಭಾ ಪರ್ವ, ೧೫ ಸಂಧಿ, ೧೩೧ ಪದ್ಯ)

ತಾತ್ಪರ್ಯ:
ನಂದಗೋಪ ಕುಮಾರನೇ, ಗೋಪೀವೃಂದ ವಲ್ಲಭನೇ, ದೈತ್ಯರನ್ನು ಸಂಹಾರಿಸುವವನೇ, ಮುಕುಂದ, ಮುರಾರಿ, ಭಕ್ತವತ್ಸಲ, ಕೃಪಾಸಾಗರ, ಶ್ರೀಕೃಷ್ಣ, ನಾನು ನೊಂದು ನಿತ್ರಾಣಳಾಗಿದ್ದೇನೆ. ಗೋವಿಂದನೇ, ನನ್ನ ಮೇಲೆ ಕೃಪೆದೋರು ಎಂದು ದ್ರೌಪದಿಯು ಹಲವು ವಿಧದಿಂದ ದುಃಖಪಟ್ಟು ಕೃಷ್ಣನನ್ನು ಬೇಡಿಕೊಂಡಳು.

ಅರ್ಥ:
ಗೋಪ: ಗೋವುಗಳನ್ನು ಕಾಯುವವನು, ದನಗಾಹಿ; ಕುಮಾರ: ಪುತ್ರ; ಗೋಪಿ: ಗೊಲ್ಲ ಜಾತಿಯ ಹೆಂಗಸು, ಗೊಲ್ಲಿತಿ; ವೃಂದ: ಗುಂಪು; ವಲ್ಲಭ: ಒಡೆಯ; ದೈತ್ಯ: ರಾಕ್ಷಸ; ಮಥನ: ಕೊಲೆ, ವಧೆ; ಘನ:ಶ್ರೇಷ್ಠ; ಕೃಪ: ದಯೆ, ಕರುಣೆ; ಜಲಧಿ: ಸಾಗರ; ನೊಂದೆ: ದುಃಖ, ತೊಂದರೆ; ಬಡವಾದುದು, ತ್ರಾಣವಿಲ್ಲದುದು; ಕೃಪೆ: ಕರುಣೆ, ದಯೆ; ಅಕಟ: ಅಯ್ಯೋ; ಪೂರ್ಣೇಂದುಮುಖಿ: ಪೂರ್ಣ ಚಂದ್ರನಂತೆ ಮುಖವುಳ್ಳ; ಹಲುಬು: ದುಃಖಪಡು, ಬೇಡಿಕೋ; ಅಚ್ಯುತ: ಕೃಷ್ಣ;

ಪದವಿಂಗಡಣೆ:
ನಂದಗೋಪ+ ಕುಮಾರ +ಗೋಪೀ
ವೃಂದ ವಲ್ಲಭ+ ದೈತ್ಯ ಮಥನ+ ಮು
ಕುಂದ +ಮುರಹರ+ ಭಕ್ತವತ್ಸಲ +ಘನ+ ಕೃಪಾಜಲಧೆ
ನೊಂದೆನೈ +ನುಗ್ಗಾದೆನೈ+ ಗೋ
ವಿಂದ+ ಕೃಪೆ+ ಮಾಡ್+ಅಕಟೆನುತ+ ಪೂ
ರ್ಣೇಂದು ಮುಖಿ+ ಹಲುಬಿದಳು +ಬಲುತೆರದಿಂದಲ್+ಅಚ್ಯುತನ

ಅಚ್ಚರಿ:
(೧) ಕೃಷ್ಣನ ಹಲವು ನಾಮಗಳ ಬಳಕೆ – ನಂದಗೋಪ ಕುಮಾರ, ಗೋಪೀ ವೃಂದ ವಲ್ಲಭ, ದೈತ್ಯ ಮಥನ, ಮುಕುಂದ, ಮುರಹರ, ಭಕ್ತವತ್ಸಲ, ಘನ ಕೃಪಾಜಲಧೆ, ಅಚ್ಯುತ

ಪದ್ಯ ೪೨: ಪ್ರಹ್ಲಾದನು ಯಾರನ್ನು ಸ್ತುತಿಮಾಡಿದನು?

ಆ ಹಿರಣ್ಯಾಕ್ಷನ ಸಹೋದರ
ನೀ ಹರಿಯನವಗಡಿಸಿ ದೈವ
ದ್ರೋಹಿ ಬಹುವಿಧ ವ್ಯಥೆಗಳಲಿ ಬೇಸರಿಸಿದನು ಮಗನ
ಆಹವದಲಚ್ಯುತ ಮುಕುಂದ ಮ
ಹಾಹಿತಲ್ಪ ಮಹೇಂದ್ರವಂದ್ಯ
ತ್ರಾಹಿಯೆಂದನವರತ ತುತಿಸಿದನಂದು ಪ್ರಹ್ಲಾದ (ಸಭಾ ಪರ್ವ, ೧೦ ಸಂಧಿ, ೪೨ ಪದ್ಯ)

ತಾತ್ಪರ್ಯ:
ಆ ಹಿರಣ್ಯಾಕ್ಷನ ಸಹೋದರನಾದ ಹಿರಣ್ಯಕಶಿಪುವು ದೈವದ್ರೋಹಿಯಾಗಿ ಶ್ರೀಹರಿಯನ್ನು ವಿರೋಧಿಸಿದನು. ಅವನ ಮಗ ಪ್ರಹ್ಲಾದನು ಹರಿಭಕ್ತ ಇವನ ಹರಿಭಕ್ತಿಯನ್ನು ತಡೆಯಲು ಹಿರಣ್ಯಕಶಿಪುವು ತನ್ನ ಮಗನನ್ನು ಅನೇಕ ಹಿಂಸೆಗಳಿಗೊಳಪಡಿಸಿ ಬೇಸರ ತರಿಸಿದನು. ಆಗ ತಂದೆಯೊಡನೆ ವಿರೋಧದಲ್ಲಿ ಪ್ರಹ್ಲಾದನು ಅಚ್ಯುತ, ಮುಕುಂದ, ಶೇಷಶಯ್ಯ, ದೇವೇಂದ್ರವಂದ್ಯನೆ ನನ್ನನ್ನು ಕಾಪಾಡು ಎಂದು ಶ್ರೀಹರಿಯನ್ನು ಸ್ತುತಿಸಿದನು.

ಅರ್ಥ:
ಸಹೋದರ: ಅಣ್ಣ/ತಮ್ಮ; ಹರಿ: ವಿಷ್ಣು; ಅವಗಡಿಸು: ಕಡೆಗಣಿಸು, ಸೋಲಿಸು; ದ್ರೋಹ: ವಿಶ್ವಾಸಘಾತ, ವಂಚನೆ; ದೈವ: ಭಗವಂತ; ಬಹು: ಬಹಳ; ವಿಧ: ರೀತಿ; ವ್ಯಥೆ: ನೋವು; ಬೇಸರ: ದುಃಖ; ಮಗ: ಪುತ್ರ; ಆಹವ: ಯುದ್ಧ, ವಿರುದ್ಧ; ಅಚ್ಯುತ: ಚ್ಯುತಿಯಿಲ್ಲದವ (ವಿಷ್ಣು); ಅಹಿ: ಹಾವು; ತಲ್ಪ: ಹಾಸಿಗೆ; ಮಹೇಂದ್ರ: ಇಂದ್ರ; ವಂದ್ಯ: ನಮಸ್ಕರಿಸಲ್ಪಟ್ಟ; ತ್ರಾಹಿ:ರಕ್ಷಿಸು, ಕಾಪಾಡು; ಅನವರತ: ಯಾವಾಗಲು, ನಿತ್ಯ; ತುತಿ: ಹೊಗಳಿಕೆ, ಸ್ತುತಿ, ಪ್ರಶಂಸೆ;

ಪದವಿಂಗಡಣೆ:
ಆ +ಹಿರಣ್ಯಾಕ್ಷನ +ಸಹೋದರನ್
ಈ+ ಹರಿಯನ್+ಅವಗಡಿಸಿ+ ದೈವ
ದ್ರೋಹಿ +ಬಹುವಿಧ +ವ್ಯಥೆಗಳಲಿ +ಬೇಸರಿಸಿದನು +ಮಗನ
ಆಹವದಲ್+ಅಚ್ಯುತ +ಮುಕುಂದ +ಮಹ
ಅಹಿತಲ್ಪ +ಮಹೇಂದ್ರವಂದ್ಯ
ತ್ರಾಹಿ+ಎಂದ್+ಅನವರತ+ ತುತಿಸಿದನ್+ಅಂದು +ಪ್ರಹ್ಲಾದ

ಅಚ್ಚರಿ:
(೧) ಪ್ರಹ್ಲಾದ ಸ್ತುತಿಸಿದ ಬಗೆ – ಅಚ್ಯುತ, ಮುಕುಂದ, ಮಹಾಹಿತಲ್ಪ , ಮಹೇಂದ್ರವಂದ್ಯ
(೨) ದ್ರೋಹಿ, ಅಹಿ, ತ್ರಾಹಿ – ಪ್ರಾಸ ಪದಗಳು

ಪದ್ಯ ೧೦: ಭೀಷ್ಮರು ಶಿಶುಪಾಲನಿಗೆ ಯಾವ ಪ್ರಶ್ನೆಯನ್ನು ಕೇಳಿದರು?

ಈತನಚ್ಯುತನಲ್ಲೆನಿಸಿ ವಿಪ
ರೀತ ಮಿಥ್ಯಾ ಜ್ಞಾನ ತೋರಿದ
ಡೀತನಲಿ ತಪ್ಪೇನು ನಿಜಪರಮಾತ್ಮನೆನಿಸಿದರೆ
ಭೀತನೊಬ್ಬನು ಕನಸಿನಲಿ ತ
ನ್ನಾತಲೆಯ ತಾನರಿದು ಪಿಡಿದುದ
ನೇತರಿಂದಲಿ ಕಂಡನೈ ಶಿಶುಪಾಲ ಕೇಳೆಂದ (ಸಭಾ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಚ್ಯುತಿಯಿಲ್ಲದವ, ನಾಶವಿಲ್ಲದವ ಎಂದು ತಿಳಿಯದೆ ಇವನು ಶಾಶ್ವತನಲ್ಲ ಎಂಬ ವಿಪರೀತ ಸುಳ್ಳುಜ್ಞಾನವು ತೋರಿದರೆ ಇವನದೇನೂ ತಪ್ಪಿಲ್ಲ, ಕನಸಿನಲ್ಲಿ ತನ್ನ ತಲೆಯನ್ನು ತಾನೇ ಕತ್ತರಿಸಿಕೊಂಡು ಕೈಯಲ್ಲಿ ಹಿಡಿದು ಭಯಪಟ್ಟುದನ್ನು ಏತರಿಂದ ತಿಳಿಯುತ್ತಾನೆ, ಎಲೈ ಶಿಶುಪಾಲನೇ ಹೇಳು ಎಂದು ಭೀಷ್ಮರು ಪ್ರಶ್ನಿಸಿದರು.

ಅರ್ಥ:
ಅಚ್ಯುತ: ಚ್ಯುತಿಯಿಲ್ಲದ, ನಾಶವಿಲ್ಲದ; ವಿಪರೀತ: ವಿರುದ್ಧವಾದುದು, ವ್ಯತಿರಿಕ್ತವಾದುದು; ಮಿಥ್ಯ: ಸುಳ್ಳು; ಜ್ಞಾನ: ತಿಳುವಳಿಕೆ; ತೋರು: ಗೋಚರಿಸು; ತಪ್ಪು: ಸರಿಯಲ್ಲದ; ನಿಜ: ದಿಟ; ಪರಮಾತ್ಮ: ಭಗವಂತ; ಭೀತ: ಅಂಜಿದ; ಕನಸು: ಸ್ವಪ್ನ; ತಲೆ: ಶಿರ; ಅರಿ: ಸೀಳು; ಪಿಡಿದು: ಹಿಡಿದು; ಕಂಡು: ನೋಡು; ಕೇಳು: ಆಲಿಸು;

ಪದವಿಂಗಡಣೆ:
ಈತನ್+ಅಚ್ಯುತನಲ್+ಎನಿಸಿ+ ವಿಪ
ರೀತ +ಮಿಥ್ಯಾ +ಜ್ಞಾನ +ತೋರಿದಡ್
ಈತನಲಿ +ತಪ್ಪೇನು +ನಿಜ+ಪರಮಾತ್ಮನ್+ಎನಿಸಿದರೆ
ಭೀತನೊಬ್ಬನು +ಕನಸಿನಲಿ+ ತನ್
ಆ+ತಲೆಯ+ ತಾನ್+ಅರಿದು+ ಪಿಡಿದುದನ್
ಏತರಿಂದಲಿ +ಕಂಡನೈ +ಶಿಶುಪಾಲ +ಕೇಳೆಂದ

ಅಚ್ಚರಿ:
(೧) ಉದಾಹರಣೆಯನ್ನು ನೀಡಿರುವ ಬಗೆ – ಭೀತನೊಬ್ಬನು ಕನಸಿನಲಿ ತನ್ನಾತಲೆಯ ತಾನರಿದು ಪಿಡಿದುದನೇತರಿಂದಲಿ ಕಂಡನೈ

ಪದ್ಯ ೭: ಯಾರನ್ನು ಮರೆತು ಜನರು ಮಾಯೆಯಲ್ಲಿ ಮುಳುಗುತ್ತಾರೆ?

ಭ್ರಾಮಕದೊಳೀ ವಿಷಯ ಸೌಖ್ಯದ
ರಾಮಣೀಯಕದೊಳಗೆ ಮುಳುಗಿ ನಿ
ರಾಮಯನು ಪರತತ್ವಮಯನಚ್ಯುತನು ತಾನಾದ
ಈ ಮುಕುಂದನ ಮರೆದು ಕರ್ಮವಿ
ರಾಮದಲಿ ಕುದಿದವರು ಮಾಯಾ
ಕಾಮಿನಿಯ ಕೈಮಸಕದಲಿ ಮರುಳಾಗದಿರರೆಂದ (ಸಭಾ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ವಿಷಯಸೌಖ್ಯದ ರಮಣೀಯ ಭ್ರಮೆಯಲ್ಲಿ ಮುಳುಗಿ ನಿರಾಮಯನೂ ದೋಷ ಹಾಗೂ ರೋಗಗಳಿಲ್ಲದವನೂ ಪರತತ್ತ್ವಮಯನೂ, ಅಚ್ಯುತನೂ ಆದ ಶ್ರೀಕೃಷ್ಣನನ್ನು ಮರೆತು ಕರ್ಮದಲ್ಲಿ ಕುದಿಯುವವರು, ಮಾಯಾದೇವಿಯ ಕೈಮದ್ದಿನಿಂದ ಹುಚ್ಚು ಹಿಡಿಯದೆ ಇರುವವರಲ್ಲ.

ಅರ್ಥ:
ಭಾಮಕ: ಭ್ರಮೆ, ಭ್ರಾಂತಿ, ಉನ್ಮಾದ; ವಿಷಯ:ಇಂದ್ರಿಯ ಗೋಚರವಾಗುವ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳೆಂಬ ಜ್ಞಾನೇಂದ್ರಿಯಗಳು; ಸೌಖ್ಯ: ಸಂತೋಷ; ರಾಮಣೀಯ: ಸುಂದರ; ಮುಳುಗು: ತೋಯು, ಮುಚ್ಚಿಹೋಗು; ನಿರಾಮಯ: ರೋಗವಿಲ್ಲದ, ಕ್ಷೇಮಕರವಾದ; ತತ್ವ: ಸಿದ್ಧಾಂತ, ನಿಯಮ; ಅಚ್ಯುತ: ಚ್ಯುತಿಯಿಲ್ಲದ, ನಾಶವಿಲ್ಲದ; ಮುಕುಂದ: ಕೃಷ್ಣ; ಮರೆ: ನೆನಪಿನಿಂದ ದೂರ ಮಾಡು; ಕರ್ಮ: ಕಾರ್ಯದ ಫಲ; ಧರ್ಮ; ವಿರಾಮ: ಬಿಡುವು, ವಿಶ್ರಾಂತಿ; ಕುದಿ: ಕೋಪಗೊಳ್ಳು; ಮಾಯಾ: ಗಾರುಡಿ, ಇಂದ್ರಜಾಲ, ಭ್ರಾಂತಿ; ಕಾಮಿನಿ: ಹೆಣ್ಣು; ಮಸಕ: ಆಹಾರದೊಡನೆ ಬೆರೆಸಿಕೊಡುವ ಒಂದು ಬಗೆಯ ಮಂದವಿಷ; ಮರುಳು: ಬುದ್ಧಿಭ್ರಮೆ, ಹುಚ್ಚು;

ಪದವಿಂಗಡಣೆ:
ಭ್ರಾಮಕದೊಳ್+ಈ+ ವಿಷಯ +ಸೌಖ್ಯದ
ರಾಮಣೀಯಕದೊಳಗೆ +ಮುಳುಗಿ +ನಿ
ರಾಮಯನು +ಪರತತ್ವಮಯನ್+ಅಚ್ಯುತನು +ತಾನಾದ
ಈ +ಮುಕುಂದನ+ ಮರೆದು+ ಕರ್ಮ+ವಿ
ರಾಮದಲಿ +ಕುದಿದವರು +ಮಾಯಾ
ಕಾಮಿನಿಯ +ಕೈಮಸಕದಲಿ +ಮರುಳಾಗದಿರರೆಂದ

ಅಚ್ಚರಿ:
(೧) ಕೃಷ್ಣನ ಗುಣಗಾನ – ನಿರಾಮಯ, ಪರತತ್ವಮಯ, ಅಚ್ಯುತ
(೨) ಮಾಯೆಯಲ್ಲಿ ಮುಳುಗುವರು ಎಂದು ಹೇಳಲು – ಮಾಯಾಕಾಮಿನಿಯ ಕೈಮಸಕದಲಿ

ಪದ್ಯ ೨೫: ದಾನದ ಮಹತ್ವವೇನು?

ದಾನವೊಂದಾ ಪಾಲನೆಯ ಸಂ
ಧಾನವೊಂದೇ ಉಭಯವಿದರೊಳು
ದಾನದಿಂದಹುದಿಹಪರಂಗಳ ಸೌಖ್ಯ ಸಂಪದವು
ದಾನವೇ ಸಂಸಾರ ಸಾಧನ
ದಾನದಿಂ ಪಾಲನೆಯ ಫಲವಿ
ನ್ನೇನ ಹೇಳುವೆ ಕಡೆಯೊಳಚ್ಯುತನಪದವೆ ಫಲವೆಂದ (ಉದ್ಯೋಗ ಪರ್ವ, ೪ ಸಂಧಿ, ೨೫ ಪದ್ಯ)

ತಾತ್ಪರ್ಯ:
ದಾನದ ಮಹತ್ವವನ್ನು ತಿಳಿಸುವ ಪದ್ಯ. ದಾನ ಮತ್ತು ಸಂಧಾನ (ರಕ್ಷಣೆ) ಇವೆರಡರಲ್ಲಿ ದಾನದಿಂದ ಈ ಲೋಕ ಮತ್ತು ಪರಲೋಕಗಳಲ್ಲಿ ಸೌಖ್ಯ ಸಂಪತ್ತುಗಳುಂಟಾಗುತ್ತದೆ. ದಾನದಿಂದ ಸಂಸಾರವು ಅಭ್ಯುದಯವನ್ನು ಹೊಂದುತ್ತದೆ ಮತ್ತು ಕಡೆಯಲ್ಲಿ ಧರ್ಮರಕ್ಷಣೆಯಿಂದ ವಿಷ್ಣುವಿನ ಪಾದಾರವಿಂದದಲ್ಲಿ ಸ್ಥಾನದೊರಕುತ್ತದೆ ಎಂದು ಸನತ್ಸುಜಾತರು ಹೇಳಿದರು.

ಅರ್ಥ:
ದಾನ: ಚತುರೋಪಾಯಗಳಲ್ಲಿ ಒಂದು, ಕೊಡುಗೆ, ಕಾಣಿಕೆ; ಪಾಲನೆ: ಕಾಪಾಡುವುದು, ರಕ್ಷಣೆ; ಸಂಧಾನ: ಸೇರಿಸುವುದು, ಹೊಂದಿಸುವುದು; ಉಭಯ: ಎರಡು; ಅಹುದು: ಸಮ್ಮತಿಸು, ಹೌದು; ಇಹಪರ: ಇಲ್ಲಿ ಮತ್ತು ಪರಲೋಕ; ಸೌಖ್ಯ: ಸಂತೋಷ, ಸುಖ, ನೆಮ್ಮದಿ; ಸಂಪದ:ಐಶ್ವರ್ಯ, ಸಂಪತ್ತು; ಸಂಸಾರ: ಪರಿವಾರ, ಕುಟುಂಬ, ಲೌಕಿಕ ಜೀವನ; ಸಾಧನ: ಗುರಿಮುಟ್ಟುವ ಪ್ರಯತ್ನ; ಪಾಲನೆ: ಕಾಪಾಡುವುದು, ರಕ್ಷಣೆ; ಫಲ: ಫಲಿತಾಂಶ, ಪ್ರಯೋಜನ; ಕಡೆ: ಅಂತ್ಯ; ಅಚ್ಯುತ: ವಿಷ್ಣು; ಪದ: ಚರಣ;

ಪದವಿಂಗಡಣೆ:
ದಾನವೊಂದಾ+ ಪಾಲನೆಯ +ಸಂ
ಧಾನವೊಂದೇ +ಉಭಯವ್+ಇದರೊಳು
ದಾನದಿಂದ್+ಅಹುದ್+ಇಹಪರಂಗಳ +ಸೌಖ್ಯ +ಸಂಪದವು
ದಾನವೇ +ಸಂಸಾರ +ಸಾಧನ
ದಾನದಿಂ+ ಪಾಲನೆಯ +ಫಲವ್
ಇನ್ನೇನ +ಹೇಳುವೆ +ಕಡೆಯೊಳ್+ಅಚ್ಯುತನ+ಪದವೆ +ಫಲವೆಂದ

ಅಚ್ಚರಿ:
(೧) ದಾನ, ಸಂಧಾನ – ಪ್ರಾಸ ಪದಗಳ ಬಳಕೆ
(೨) ದಾನ -೧, ೩, ೪, ೫ ಸಾಲಿನ ಮೊದಲ ಪದ
(೩) ದಾನವೇ ಸಂಸಾರ ಸಾಧನ – ಧ್ಯೇಯ ವಾಕ್ಯವನ್ನು ಹೇಳುವ ಪರಿ

ಪದ್ಯ ೧೮: ಪಾರ್ಥನು ಯಾರನ್ನು ಕಂಡನು?

ಹೋಗು ಫಲುಗುಣ ಕಂಸಮಥನನ
ಬೇಗ ಬಿಜಯಂಗೈಸಿ ತಾ ನೃಪ
ಯಾಗವಾತನ ಹೊರೆ ಮದೀಯ ಜಯಾಭಿವೃದ್ಧಿಗಳು
ಆಗು ಹೋಗುಗಳಾತನದು ತಡ
ವಾಗದೀಕ್ಷಣವೆನಲು ಮನದನು
ರಾಗದಲಿ ಕಲಿಪಾರ್ಥ ಬಂದನು ಕಂಡನಚ್ಯುತನ (ಸಭಾ ಪರ್ವ, ೬ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧರ್ಮರಾಯನು ಅರ್ಜುನನನ್ನು ಕರೆದು, “ಅರ್ಜುನ, ಶ್ರೀ ಕೃಷ್ಣನನ್ನು ಕರೆದುಕೊಂಡು ಬಾ. ರಾಜಸೂಯಯಾಗದ ಹೊಣೆ ಅವನದು. ನಮ್ಮ ಜಯ, ಅಭ್ಯುದಯ ಆಗುಹೋಗುಗಳು ಅವನಿಗೆ ಸೇರಿದ್ದು, ತಡಮಾಡದೆ ಕರೆದುಕೊಂಡು ಬಾ” ಎನಲು, ಅರ್ಜುನನು ಸರಾಗ ಪ್ರೀತಿಯಿಂದ ದ್ವಾರಕೆಗೆ ಹೋಗಿ ಶ್ರೀಕೃಷ್ಣನನ್ನು ಕಂಡನು.

ಅರ್ಥ:
ಹೋಗು: ನಡೆ; ಫಲುಗುಣ: ಅರ್ಜುನ; ಮಥನ: ವದೆ; ಬೇಗ: ಶೀಗ್ರ; ಬಿಜಯಂಗೈಸು: ದಯಮಾಡಿಸು; ನೃಪ: ರಾಜ; ಯಾಗ: ಕ್ರತು; ಹೊರೆ: ಭಾರ; ಮದೀಯ: ನಮ್ಮ; ಜಯ: ವಿಜಯ, ಗೆಲುವು; ಅಭಿವೃದ್ಧಿ: ಏಳಿಗೆ, ಶ್ರೇಯಸ್ಸು; ತಡ: ನಿಧಾನ; ಕ್ಷಣ: ಸಮಯದ ಪ್ರಮಾಣ; ಅನುರಾಗ: ಪ್ರೀತಿ; ಕಲಿ: ಶೂರ; ಬಂದನು: ಆಗಮಿಸಿದನು; ಕಂಡನು: ನೋಡಿದನು;

ಪದವಿಂಗಡಣೆ:
ಹೋಗು +ಫಲುಗುಣ +ಕಂಸ+ಮಥನನ
ಬೇಗ +ಬಿಜಯಂಗೈಸಿ +ತಾ +ನೃಪ
ಯಾಗವ್+ಆತನ+ ಹೊರೆ+ ಮದೀಯ +ಜಯ+ ಅಭಿವೃದ್ಧಿಗಳು
ಆಗು +ಹೋಗುಗಳ್+ಆತನದು +ತಡ
ವಾಗದ್+ಈ+ಕ್ಷಣವೆನಲು +ಮನದ್+ಅನು
ರಾಗದಲಿ +ಕಲಿಪಾರ್ಥ +ಬಂದನು +ಕಂಡನ್+ಅಚ್ಯುತನ

ಅಚ್ಚರಿ:
(೧) ಕಂಸಮಥನನ, ಅಚ್ಯುತ – ಕೃಷ್ಣನ ಹೆಸರುಗಳು