ಪದ್ಯ ೧೦೦: ಭೀಮನು ಕೀಚಕ ತಮ್ಮನನ್ನು ಎಲ್ಲಿ ಎದುರಿಸಿದನು?

ಈ ದುರಾತ್ಮರಿಗಗ್ರಜನ ಸಾ
ವೈದದೇ ತಮ್ಮಣ್ಣನಲ್ಲಿಗೆ
ಹೊಯ್ದು ಕಳುಹಲು ಬೇಕಲಾ ಕುನ್ನಿಗಳನೀಕ್ಷಣಕೆ
ಬೈಯ್ದು ಫಲವೇನೆಂದು ಮಾರುತಿ
ಹಾಯ್ದು ಝಂಕಿಸಿ ರುದ್ರಭೂಮಿಯ
ನೆಯಿದನು ಫಡಯೆನುತ ಕೊಂಡನು ಮುರಿದು ಹೆಮ್ಮರನ (ವಿರಾಟ ಪರ್ವ, ೩ ಸಂಧಿ, ೧೦೦ ಪದ್ಯ)

ತಾತ್ಪರ್ಯ:
ಈ ದುರಾತ್ಮರಿಗೆ ಕೀಚಕನಂತೆ ಸಾವೇಕೆ ಬರಬಾರದು! ಈ ಕುನ್ನಿಗಳನ್ನು ಹೊಡೆದು ಈಗಲೇ ಇವರಣ್ಣನ ಬಳಿಗೆ ಕಳಿಸಬೇಕು, ಇವರನ್ನು ಬೈದು ಏನು ಪ್ರಯೋಜನ ಎಂದು ಭೀಮನು ವೇಗವಾಗಿ ನುಗ್ಗಿ ರುದ್ರಭೂಮಿಯನ್ನು ತಲುಪಿ ಅಲ್ಲಿದ್ದ ಒಂದು ದೊಡ್ಡ ಮರವನ್ನು ಮುರಿದು ತನ್ನ ಕೈಯಲ್ಲಿ ಹಿಡಿದನು.

ಅರ್ಥ:
ದುರಾತ್ಮ: ದುಷ್ಟ; ಅಗ್ರಜ: ಅಣ್ಣ; ಸಾವು: ಮರಣ; ಹೊಯ್ದು: ಹೊಡೆ; ಕಳುಹು: ತೆರಳು; ಕುನ್ನಿ: ನಾಯಿ; ಕ್ಷಣ: ನಿಮಿಷ; ಬೈಯ್ದು: ಜರಿ; ಫಲ: ಪ್ರಯೋಜನ; ಮಾರುತಿ: ಭೀಮ; ಹಾಯ್ದು: ಹೊಡೆ; ಝಂಕಿಸು: ಗದರಿಸು; ರುದ್ರಭೂಮಿ: ಸ್ಮಶಾನ; ಎಯ್ದು: ಬರು, ಸೇರು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಪದ; ಕೊಂಡು: ಪಡೆ; ಮುರಿ: ಸೀಳು; ಹೆಮ್ಮರ: ದೊಡ್ಡ ಮರ;

ಪದವಿಂಗಡಣೆ:
ಈ +ದುರಾತ್ಮರಿಗ್+ಅಗ್ರಜನ+ ಸಾವ್
ಐದದೇ +ತಮ್ಮಣ್ಣನಲ್ಲಿಗೆ
ಹೊಯ್ದು +ಕಳುಹಲು +ಬೇಕಲಾ +ಕುನ್ನಿಗಳನ್+ಈಕ್ಷಣಕೆ
ಬೈಯ್ದು +ಫಲವೇನೆಂದು +ಮಾರುತಿ
ಹಾಯ್ದು +ಝಂಕಿಸಿ +ರುದ್ರಭೂಮಿಯನ್
ಎಯ್ದಿದನು+ ಫಡಯೆನುತ +ಕೊಂಡನು +ಮುರಿದು +ಹೆಮ್ಮರನ

ಅಚ್ಚರಿ:
(೧) ಭೀಮನ ಶಕ್ತಿ – ಮಾರುತಿ ಹಾಯ್ದು ಝಂಕಿಸಿ ರುದ್ರಭೂಮಿಯನೆಯಿದನು ಫಡಯೆನುತ ಕೊಂಡನು ಮುರಿದು ಹೆಮ್ಮರನ

ಪದ್ಯ ೨೭: ಊರ್ವಶಿಯು ತನ್ನ ಹಿರಿಮೆಯನ್ನು ಹೇಗೆ ಹೇಳಿದಳು?

ಅಯ್ಯನಯ್ಯನು ನಿಮ್ಮವರ ಮು
ತ್ತಯ್ಯನಾತನ ಭಾವ ಮೈದುನ
ನಯ್ಯನಗ್ರಜರನುಜರೆಂಬೀ ಜ್ಞಾತಿ ಬಾಂಧವರ
ಕೈಯಲರಿಗಳಹೊಯ್ದು ಶಿರನರಿ
ದುಯ್ಯಲಾಡಿದವರ್ಗೆ ಮೇಣ್ ಮಖ
ದಯ್ಯಗಳಿಗಾನೊಬ್ಬಳೆಂದಳು ನಗುತ ನಳಿನಾಕ್ಷಿ (ಅರಣ್ಯ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ಕೇಳು, ನಿಮ್ಮ ತಂದೆ, ಅವನ ತಂದೆ, ನಿಮ್ಮ ಮುತ್ತಜ್ಜ, ಅವನ ಭಾವಮೈದುನ, ಅವನ ತಂದೆ, ಅಣ್ಣ, ತಮ್ಮ ಎಂಬ ನಿಮ್ಮ ತಂದೆಯ ಕಡೆಯ ಬಾಂಧವರಿಗೆ, ಯುದ್ಧರಂಗದಲ್ಲಿ ಶತ್ರುಗಳ ಜೊತೆಗೆ ಯುದ್ಧ ಮಾಡಿ ತಲೆಗಳನ್ನು ಚೆಂಡಾಡಿದವರಿಗೆ, ಅಷ್ಟೆ ಅಲ್ಲ, ಯಜ್ಞಗಳನ್ನು ಮಾಡಿದ ಸಂಭಾವಿತರಿಗೆ ಇರುವವಳು ನಾನೊಬ್ಬಳೇ, ಎಂದು ಊರ್ವಶಿಯು ನಗುತ ಅರ್ಜುನನಿಗೆ ತನ್ನ ಹಿರಿಮೆಯನ್ನು ಹೇಳಿಕೊಂಡಳು.

ಅರ್ಥ:
ಅಯ್ಯ: ತಂದೆ; ಮುತ್ತಯ್ಯ: ಮುತ್ತಾತ; ಭಾವಮೈದುನ: ಗಂಡನ ಯಾ ಹೆಂಡತಿಯ ಸಹೋದರ; ಅಗ್ರಜ: ಹಿರ; ಅನುಜ: ಸಹೋದರ; ಜ್ಞಾತಿ: ತಂದೆಯ ಕಡೆಯ ಬಂಧು; ಬಾಂಧವ: ಸಂಬಂಧಿಕರು; ಅರಿ: ಶತ್ರು; ಹೊಯ್ದು: ತೊರೆ; ಶಿರ: ತಲೆ; ಅರಿ: ಕತ್ತರಿಸು; ಮೇಣ್: ಮತ್ತು; ಮಖ: ಯಾಗ; ನಗುತ: ಸಂತಸ; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ಅಯ್ಯನ್+ಅಯ್ಯನು +ನಿಮ್ಮವರ+ ಮು
ತ್ತಯ್ಯನ್+ಆತನ +ಭಾವ ಮೈದುನನ್
ಅಯ್ಯನ್+ಅಗ್ರಜರ್+ಅನುಜರ್+ಎಂಬೀ +ಜ್ಞಾತಿ +ಬಾಂಧವರ
ಕೈಯಲ್+ಅರಿಗಳ+ಹೊಯ್ದು +ಶಿರನ್+ಅರಿ
ದುಯ್ಯಲ್+ಆಡಿದವರ್ಗೆ+ ಮೇಣ್+ ಮಖದ್
ಅಯ್ಯಗಳಿಗ್+ಆನೊಬ್ಬಳ್+ಎಂದಳು +ನಗುತ +ನಳಿನಾಕ್ಷಿ

ಅಚ್ಚರಿ:
(೧) ಅಯ್ಯ, ಮುತ್ತಯ್ಯ – ಪ್ರಾಸ ಪದಗಳು
(೨) ಅಯ್ಯ, ಮುತ್ತಯ್ಯ, ಭಾವಮೈದುನ, ಅಗ್ರಜ, ಅನುಜ, ಜ್ಞಾತಿ – ಸಂಬಂಧಗಳನ್ನು ವಿವರಿಸುವ ಪದ

ಪದ್ಯ ೧೧೪: ಅರ್ಜುನನು ಏನೆಂದು ಹೇಳಿ ಸಮಾಧಾನಗೊಂಡನು?

ಎತ್ತಿದೀ ಬಲು ಚಲವು ನೆರೆ ತಾನೇ
ನುತ್ತರಿಪುದೀಕ್ಷತ್ರ ಧರ್ಮವ
ದುತ್ತರೋತ್ತರವಹುದು ಮತ್ತಾಚಲದ ಬಲುಹಿಂದ
ಮತ್ತೆ ಬಹುಮಾತೇಕೆಯಗ್ರಜ
ನಿತ್ತ ಬೆಸದಿಂ ನಡೆದೆನೆಂಬ ಸು
ವೃತ್ತವದೆ ಸತ್ಕೀರ್ತಿ ಸಾಧನವೆಂದನಾ ಪಾರ್ಥ (ಅರಣ್ಯ ಪರ್ವ, ೭ ಸಂಧಿ, ೧೧೪ ಪದ್ಯ)

ತಾತ್ಪರ್ಯ:
ನಾನು ಹಿಡಿದ ಛಲವು ಕ್ಷತ್ರಿಯ ಧರ್ಮಕ್ಕನುಸಾರವಾದುದು. ಆ ಛಲದಿಂದಲೇ ಮುಂದೆ ಉತ್ತರೋತ್ತರವಾದ ಶ್ರೇಯಸ್ಸಾಗುತ್ತದೆ. ಹೆಚ್ಚೇಕೆ ಚಿಂತಿಸಬೇಕು, ಅಣ್ಣನು ಕೊಟ್ಟ ಆಜ್ಞೆಯನ್ನು ಪರಿಪಾಲಿಸಿದನೆಂಬ ಒಳ್ಳೆಯ ನಡತೆಯೇ ನನಗೆ ಸತ್ಕೀರ್ತಿಯನ್ನು ಕೊಡುತ್ತದೆ ಎಂದು ಅರ್ಜುನನು ಸಮಾಧಾನವನ್ನು ತಂದುಕೊಂಡನು.

ಅರ್ಥ:
ಬಲು: ಬಹಳ; ಛಲ: ದೃಢ ನಿಶ್ಚಯ; ನೆರೆ: ಆಧಾರ, ಅವಲಂಬನೆ; ಉತ್ತರ: ಫಲಿತಾಂಶ; ಕ್ಷತ್ರ: ಕ್ಷತ್ರಿಯ; ಧರ್ಮ: ಧಾರಣೆ ಮಾಡಿದುದು; ಉತ್ತರೋತ್ತರ: ಏಳಿಗೆ; ಬಹು: ಬಹಳ; ಮಾತು: ನುಡಿ, ಸೊಲ್ಲು; ಅಗ್ರಜ: ಅಣ್ಣ; ಬೆಸ: ಕೆಲಸ, ಕಾರ್ಯ; ನಡೆ: ಚಲಿಸು; ಸುವೃತ್ತ: ಬಳಸಿದ, ಒಳ್ಳೆಯ ಸುದ್ದಿ; ಸತ್ಕೀರ್ತಿ: ಖ್ಯಾತಿ; ಸಾಧನ: ಗುರಿಮುಟ್ಟುವ ಪ್ರಯತ್ನ;

ಪದವಿಂಗಡಣೆ:
ಎತ್ತಿದೀ +ಬಲು +ಚಲವು+ ನೆರೆ+ ತಾನೇನ್
ಉತ್ತರಿಪುದ್+ಈ+ಕ್ಷತ್ರ +ಧರ್ಮವದ್
ಉತ್ತರೋತ್ತರವಹುದು+ ಮತ್+ಆ+ಚಲದ+ ಬಲುಹಿಂದ
ಮತ್ತೆ+ ಬಹುಮಾತೇಕೆ+ಅಗ್ರಜನ್
ಇತ್ತ +ಬೆಸದಿಂ +ನಡೆದೆನೆಂಬ+ ಸು
ವೃತ್ತವದೆ +ಸತ್ಕೀರ್ತಿ +ಸಾಧನವೆಂದನಾ +ಪಾರ್ಥ

ಅಚ್ಚರಿ:
(೧) ಯಾವುದು ಸತ್ಕೀರ್ತಿ – ಅಗ್ರಜನಿತ್ತ ಬೆಸದಿಂ ನಡೆದೆನೆಂಬ ಸುವೃತ್ತವದೆ ಸತ್ಕೀರ್ತಿ

ಪದ್ಯ ೩೦: ದ್ರೌಪದಿಯು ಅರ್ಜುನನಿಗೆ ಏನು ಹೇಳಿದಳು?

ನೆನೆಯದಿರು ತನುಸುಖವ ಮನದಲಿ
ನೆನೆ ವಿರೋಧಿಯ ಸಿರಿಯನೆನ್ನಯ
ಘನತರದ ಪರಿಭವವ ನೆನೆ ನಿಮ್ಮಗ್ರಜರ ನುಡಿಯ
ಮುನಿವರನ ಮಂತ್ರೋಪದೇಶವ
ನೆನೆವುದಭವನ ಚರಣ ಕಮಲವ
ನೆನುತ ದುರುಪತಿಯೆರಗಿದಳು ಪಾರ್ಥನ ಪಾದಾಬ್ಜದಲಿ (ಅರಣ್ಯ ಪರ್ವ, ೫ ಸಂಧಿ, ೩೦ ಪದ್ಯ)

ತಾತ್ಪರ್ಯ:
ದ್ರೌಪದಿಯು ಅರ್ಜುನನನ್ನು ಬೀಳ್ಕೊಡುವ ಮುನ್ನ, ಹೇ ಪತಿದೇವ, ದೇಹ ಸೌಖ್ಯವನ್ನು ಕುರಿತು ಯೋಚಿಸಬೇಡ, ಶತ್ರುವಾದ ದುರ್ಯೋಧನನ ಐಶ್ವರ್ಯ ಮದವನ್ನು ಚಿಂತಿಸು. ನನಗೊದಗಿದ್ದ ಘನತರವಾದ ಅಪಮಾನ ಪ್ರಸಂಗವನ್ನು ಕುರಿತು ಚಿಂತಿಸು, ನಿನ್ನ ಅಣ್ಣನ ಮಾತುಗಳನ್ನೂ, ವ್ಯಾಸರು ನೀಡಿದ ಮಂತ್ರೋಪದೇಶವನ್ನು ನೆನೆಯುತ್ತಾ, ಶಿವನ ಚರಣಕಮಲವನ್ನು ಆರಾಧಿಸು ಎಂದು ಹೇಳುತ್ತಾ ದ್ರೌಪದಿಯು ಅರ್ಜುನನ ಪಾದಾರವಿಂದಕ್ಕೆ ನಮಸ್ಕರಿಸಿದಳು.

ಅರ್ಥ:
ನೆನೆ: ಜ್ಞಾಪಿಸಿಕೋ, ಸ್ಮರಿಸು; ತನು: ದೇಹ; ಸುಖ: ಸಂತೋಷ; ಮನ: ಮನಸ್ಸು; ವಿರೋಧಿ: ಶತ್ರು; ಸಿರಿ: ಐಶ್ವರ್ಯ; ಘನ: ದೊಡ್ಡ; ತರ: ರೀತಿಯ; ಪರಿಭವ: ಸೋಲು, ಅಪಮಾನ; ಅಗ್ರಜ: ಅಣ್ಣ; ನುಡಿ: ಮಾತು; ಮುನಿ: ಋಷಿ; ವರ: ಶ್ರೇಷ್ಠ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಉಪದೇಶ: ಬೋಧಿಸುವುದು; ಅಭವ: ಶಿವ; ಚರಣ: ಪಾದ; ಕಮಲ: ಪದ್ಮ; ದುರುಪತಿ: ದ್ರೌಪದಿ; ಎರಗು: ನಮಸ್ಕರಿಸು; ಪಾದಾಬ್ಜ: ಚರಣ ಕಮಲ;

ಪದವಿಂಗಡಣೆ:
ನೆನೆಯದಿರು +ತನು+ಸುಖವ +ಮನದಲಿ
ನೆನೆ+ ವಿರೋಧಿಯ +ಸಿರಿಯನ್+ಎನ್ನಯ
ಘನತರದ +ಪರಿಭವವ +ನೆನೆ +ನಿಮ್+ಅಗ್ರಜರ +ನುಡಿಯ
ಮುನಿವರನ+ ಮಂತ್ರೋಪದೇಶವ
ನೆನೆವುದ್+ಅಭವನ +ಚರಣ +ಕಮಲವನ್
ಎನುತ +ದುರುಪತಿ+ಎರಗಿದಳು+ ಪಾರ್ಥನ +ಪಾದಾಬ್ಜದಲಿ

ಅಚ್ಚರಿ:
(೧) ಚರಣ ಕಮಲ, ಪಾದಾಬ್ಜ – ಸಮನಾರ್ಥಕ ಪದ
(೨) ನೆನೆ – ೪ ಬಾರಿ ಪ್ರಯೋಗ

ಪದ್ಯ ೫: ಭೀಮನು ಜೈಮಿನಿ ಮಹರ್ಷಿಗಳ ಬಳಿ ಹೇಗೆ ಪರಿಚಯಿಸಿ ಕೊಂಡನು?

ಎಂದ ಮಾತನು ಕೇಳಿ ಧರ್ಮಜ
ನಂದು ಕಳುಹಿದನನಿಲಜನ ನಲ
ವಿಂದಲೈ ತಂದಂಘ್ರಿಗೆರಗಿದನೊಲಿದು ಜೈಮಿನಿಗೆ
ತಂದೆ ನೀನಾರೆನಲು ಪವನಜ
ಬಂದ ಕಾರ್ಯವದೇನೆನಲು ತಾ
ಬಂದೆನಗ್ರಜ ಬೆಸನೆ ನಿಮ್ಮಡಿಗೆಂದನಾ ಭೀಮ (ಅರಣ್ಯ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ಕೃಷ್ಣನ ಮಾತುಗಳನ್ನು ಆಲಿಸಿದ ಧರ್ಮಜನು ಕೂಡಲೆ ಭೀಮನನ್ನು ಈ ಕಾರ್ಯಕ್ಕೆ ನೇಮಿಸಿದನು. ಭೀಮನು ಜೈಮಿನಿ ಮಹರ್ಷಿಗಳನ್ನು ಶ್ರಾದ್ಧದ ಕಾರ್ಯಕ್ಕೆ ಆಮಂತ್ರಿಸಲು ಕೂಡಲೆ
ಹೊರಟು ಅವರ ಆಶ್ರಮವನ್ನು ತಲುಪಿ ಅವರ ಪಾದಗಳಿಗೆ ನಮಸ್ಕರಿಸಲು, ಜೈಮಿನಿ ಮುನಿಗಳು ಯಾರೆಂದು ಕೇಳಲು, ತಾನು ಭೀಮನೆಂದು ಪರಿಚಯಿಸಿಕೊಂಡನು. ಜೈಮಿನಿಗಳು ಮಾತನ್ನು ಮುಂದುವರಿಸುತ್ತಾ ಬರಲು ಕಾರಣವನ್ನು ಕೇಳಲು, ಭೀಮನು ತಮ್ಮ ಪಾದದರ್ಶನ ಮಾಡಲು ನಮ್ಮ ಅಣ್ಣನು ಹೇಳಿದ್ದರಿಂದ ಇಲ್ಲಿಗೆ ಬಂದೆ ಎಂದು ತಿಳಿಸಿದನು.

ಅರ್ಥ:
ಮಾತು: ನುಡಿ; ಕೇಳು: ಆಲಿಸು; ಕಳುಹಿಸು: ಬೀಳ್ಕೊಡು; ಅನಿಲಜ: ವಾಯುಪುತ್ರ (ಭೀಮ); ನಲ: ನಲಿವು, ಸಂತೋಷ; ಅಂಘ್ರಿ: ಪಾದ; ಎರಗು: ನಮಸ್ಕರಿಸು; ಒಲಿದು: ಪ್ರೀತಿಯಲಿ; ತಂದೆ: ಪಿತ; ಪವನಜ: ವಾಯುಪುತ್ರ (ಭೀಮ); ಬಂದು: ಆಗಮಿಸು; ಕಾರ್ಯ: ಕೆಲಸ; ಅಗ್ರಜ: ಅಣ್ಣ; ಬೆಸಸು: ದಯಮಾಡಿಸು; ನಿಮ್ಮಡಿ: ನಿಮ್ಮ ಚರಣ;

ಪದವಿಂಗಡಣೆ:
ಎಂದ +ಮಾತನು +ಕೇಳಿ +ಧರ್ಮಜನ್
ಅಂದು+ ಕಳುಹಿದನ್+ಅನಿಲಜನ +ನಲ
ವಿಂದಲೈ +ತಂದ್+ಅಂಘ್ರಿಗ್+ಎರಗಿದನ್+ಒಲಿದು +ಜೈಮಿನಿಗೆ
ತಂದೆ +ನೀನಾರ್+ಎನಲು +ಪವನಜ
ಬಂದ +ಕಾರ್ಯವದೇನ್+ಎನಲು+ ತಾ
ಬಂದೆನ್+ಅಗ್ರಜ+ ಬೆಸನೆ+ ನಿಮ್ಮಡಿಗ್+ಎಂದನಾ +ಭೀಮ

ಅಚ್ಚರಿ:
(೧) ಅನಿಲಜ, ಪವನಜ, ಭೀಮ – ಸಮನಾರ್ಥಕ ಪದಗಳು
(೨) ಬಂದ ಕಾರ್ಯವನ್ನು ಭೀಮನು ಹೇಳುವ ಪರಿ – ತಾ ಬಂದೆನಗ್ರಜ ಬೆಸನೆ ನಿಮ್ಮಡಿಗೆಂದನಾ ಭೀಮ

ಪದ್ಯ ೫೫: ದುಶ್ಯಾಸನನು ದುರ್ಯೋಧನನಿಗೆ ಏನು ಹೇಳಿದ?

ಹೆತ್ತವರು ಹಗೆಯಹಡೆ ನಾವಿ
ನ್ನೆತ್ತ ಸಾರುವೆವಣ್ಣ ದೇವರೆ
ಚಿತ್ತವಿಸಿದಿರೆ ರಾಜಕಾರ್ಯದ ಹದ ವಿಸಂಚಿಸಿತು
ಮುತ್ತಯನ ಕಿರಿಯಯ್ಯನಯ್ಯನ
ಚಿತ್ತಕೊಂಕಿತು ಸಾಕು ನಿಂದಿರೆ
ನುತ್ತೆಯಗ್ರಜ ಸಹಿತವೋಲಗದಿಂದೆ ಪೊರಮಟ್ಟ (ಉದ್ಯೋಗ ಪರ್ವ, ೯ ಸಂಧಿ, ೫೫ ಪದ್ಯ)

ತಾತ್ಪರ್ಯ:
ಅಣ್ಣ ದುರ್ಯೋಧನ, ಹೆತ್ತವರೇ ನಮಗೆ ಶತ್ರುಗಳಾದರೆ ನಾವಿನ್ನೆಲ್ಲಿ ಹೋಗುವೆವು? ದೇವರೆ ಈ ರೀತಿ ಮನಸ್ಸು ಮಾಡಿದರೆ ರಾಜ್ಯಕಾರ್ಯದ ಹದ ಪುಡಿ ಪುಡಿಯಾಯಿತು. ಅಪ್ಪ, ಮುತ್ತಜ್ಜ, ವಿದುರ ಇವರ ಮನಸ್ಸು ನಮಗೆ ವಿರುದ್ಧವಾಯಿತು, ಇನ್ನು ಸಾಕು ಎಂದು ಹೇಳಿ ಅಣ್ಣನೊಡನೆ ಆಸ್ಥಾನವನ್ನು ಬಿಟ್ಟು ಹೊರಟನು.

ಅರ್ಥ:
ಹೆತ್ತವರು: ಹಡೆದವರು; ಹಗೆ: ವೈರಿ; ಸಾರು: ಹೋಗು; ದೇವ: ಭಗವಂತ; ಚಿತ್ತ: ಮನಸ್ಸು; ರಾಜಕಾರ್ಯ: ರಾಜಕಾರಣ; ಹದ: ರೀತಿ; ವಿಸಂಚಿಸು: ಚೂರುಮಾಡು; ಮುತ್ತಯ್ಯ: ಮುತ್ತಜ್ಜ; ಕಿರಿಯಯ್ಯನಯ್ಯ: ಚಿಕ್ಕಪ್ಪನ ತಂದೆ; ಚಿತ್ತ: ಮನಸ್ಸು, ಬುದ್ಧಿ; ಕೊಂಕು: ವಕ್ರ; ನಿಂದು: ನಿಲ್ಲು; ಅಗ್ರಜ: ಹಿರಿಯ, ಅಣ್ಣ; ಸಹಿತ: ಜೊತೆ; ಓಲಗ: ದರ್ಬಾರು; ಪೊರ: ಹೊರ; ಅಣ್ಣ: ಹಿರಿಯ ಸಹೋದರ;

ಪದವಿಂಗಡಣೆ:
ಹೆತ್ತವರು +ಹಗೆಯಹಡೆ+ ನಾವಿ
ನ್ನೆತ್ತ +ಸಾರುವೆವ್+ಅಣ್ಣ +ದೇವರೆ
ಚಿತ್ತವಿಸಿದಿರೆ+ ರಾಜಕಾರ್ಯದ +ಹದ +ವಿಸಂಚಿಸಿತು
ಮುತ್ತಯನ+ ಕಿರಿಯಯ್ಯನ್+ಅಯ್ಯನ
ಚಿತ್ತಕೊಂಕಿತು +ಸಾಕು +ನಿಂದಿರೆ
ನುತ್ತೆ+ಅಗ್ರಜ +ಸಹಿತ+ವೋಲಗದಿಂದೆ +ಪೊರಮಟ್ಟ

ಅಚ್ಚರಿ:
(೧) ಮುತ್ತಯನ, ಕಿರಿಯಯ್ಯನಯ್ಯ – ಮುತ್ತಜ್ಜ, ಅಪ್ಪ, ವಿದುರನನ್ನು ಹೇಳಲು ಬಳಸಿದ ಪದ
(೨) ಅಗ್ರಜ, ಅಣ್ಣ – ಸಮನಾರ್ಥಕ ಪದ
(೩) ಹೆತ್ತವರು ಹಗೆಯಹಡೆ – ‘ಹ’ ಕಾರದ ಜೋಡಿ ಪದ

ಪದ್ಯ ೫೦: ಅರ್ಜುನನು ತನ್ನ ದೇಶಾಂತರದ ವೃತ್ತಾಂತವನ್ನು ಯಾರಿಗೆ ವಿವರಿಸಿದನು?

ಅರಸ ಭೀಮರಿಗೆರಗಿ ನಕುಲಾ
ದ್ಯರನು ಕಾಣಿಸಿಕೊಂಡು ದೇಶಾಂ
ತರದ ತೀರ್ಥೋನ್ನತಿಯನಾ ವೃತ್ತಾಂತ ಸಂಗತಿಯ
ಮುರಹರನ ಸೌಹೃದವನಾತನ
ಕರುಣ ಕನ್ಯಾಲಾಭವನು ವಿ
ಸ್ತರಿಸಿ ಹರುಷಾಂಬುಧಿಯೊಳದ್ದಿದನಗ್ರಜಾನುಜರ (ಆದಿ ಪರ್ವ, ೧೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅರ್ಜುನನು ಅರಮನೆಗೆ ಬಂದು, ಯುಧಿಷ್ಠಿರ, ಭೀಮರಿಗೆ ನಮಸ್ಕರಿಸಿ, ನಕುಲ ಸಹದೇವರಿಂದ ಪ್ರಣಾಮವನ್ನು ಸ್ವೀಕರಿಸಿ, ಅವರೆಲ್ಲರಿಗೂ ಭಾರತ ದೇಶದ ತೀರ್ಥಕ್ಷೇತ್ರಗಳ ಹಿರಿಮೆ, ಅಲ್ಲಿನ ವಿಶೇಷಗಳು, ದ್ವಾರಕೆಯಲ್ಲಿ ಕೃಷ್ಣನು ತೋರಿದ ಸ್ನೇಹ, ಕರುಣೆಯಿಂದ ಸುಭದ್ರೆಗೂ ತನಗೂ ವಿವಾಹಮಾಡಿಸಿದ ವೃತ್ತಾಂತಗಳನ್ನು ತಿಳಿಸಿದನು. ಸಹೋದರರೆಲ್ಲರೂ ಸಂತೋಷದ ಕಡಲಿನಲ್ಲಿ ತೇಲಿದರು.

ಅರ್ಥ:
ಅರಸ: ರಾಜ; ಎರಗು: ನಮಸ್ಕರಿಸು; ಕಾಣ್: ನೋಡು; ದೇಶಾಂತರ: ಬೇರೆ ದೇಶದ; ತೀರ್ಥ: ಪುಣ್ಯಕ್ಷೇತ್ರ; ಉನ್ನತಿ: ಮೇಲ್ಮೆ, ಹಿರಿಮೆ; ವೃತ್ತಾಂತ: ಕಥೆ; ಸಂಗತಿ: ವಿಚಾರ;ಮುರಹರ: ಕೃಷ್ಣ; ಸೌಹೃದ: ಸ್ನೇಹ, ಒಳ್ಳೆಯ ಹೃದಯ; ಕರುಣ: ದಯೆ, ಕರುಣೆ; ಕನ್ಯ: ಹೆಣ್ಣು; ಲಾಭ: ಪ್ರಾಪ್ತಿ; ಹರುಷ: ಸಂತೋಷ; ಅಂಬುಧಿ: ಸಾಗರ; ಅದ್ದು: ಮುಳುಗು; ಅಗ್ರಜ: ಹಿರಿಯ; ಅನುಜ: ತಮ್ಮ;

ಪದವಿಂಗಡಣೆ:
ಅರಸ +ಭೀಮರಿಗ್+ಎರಗಿ+ ನಕುಲಾ
ದ್ಯರನು+ ಕಾಣಿಸಿಕೊಂಡು+ ದೇಶಾಂ
ತರದ+ ತೀರ್ಥೋನ್ನತಿಯನಾ+ ವೃತ್ತಾಂತ +ಸಂಗತಿಯ
ಮುರಹರನ+ ಸೌಹೃದವನ್+ಆತನ
ಕರುಣ+ ಕನ್ಯಾಲಾಭವನು+ ವಿ
ಸ್ತರಿಸಿ +ಹರುಷ+ಅಂಬುಧಿಯೊಳ್+ಅದ್ದಿದನ್+ಅಗ್ರಜ+ಅನುಜರ

ಅಚ್ಚರಿ:
(೧) ಅಗ್ರಜ ಅನುಜರ ಕೊನೆ ಪದವಾದರೆ, ಮೊದಲ ಸಾಲಲ್ಲಿ ಅಗ್ರಜ ಅನುಜರ ಹೆಸರಿರುವುದು
(೨) ವಿಸ್ತರ, ವೃತ್ತಾಂತ, ಸಂಗತಿ – ಸಾಮ್ಯ ಪದಗಳು