ಪದ್ಯ ೬೬: ನಹುಷಂಗೆ ಯಾರು ಶಪಿಸಿದರು?

ಆಧಿ ಬಿದ್ದುದು ಶಚಿಯ ಮೇಲಣ
ವೇಧೆಯಲಿ ವಿಟಬುದ್ಧಿ ಸಿರಿಗೆ ವಿ
ರೋಧಿಯೈ ಸಲೆ ಸತಿಯುಪಾಯವ ಮಾಡಿ ಋಷಿಗಳಿಗೆ
ಬೋಧಿಸಿದರವರೆನ್ನ ವಾಹನ
ಸಾಧನವೆಯಾದರು ಮುನೀಂದ್ರ ವಿ
ರೋಧವಾಯ್ತೆನಗಲ್ಲಿ ಶಪಿಸಿದನಂದಗಸ್ತ್ಯಮುನಿ (ಅರಣ್ಯ ಪರ್ವ, ೧೪ ಸಂಧಿ, ೬೬ ಪದ್ಯ)

ತಾತ್ಪರ್ಯ:
ನಹುಷನು ಮುಂದುವರೆಸುತ್ತಾ, ಶಚಿಯ ಮೇಲೆ ನನ್ನ ಮನಸ್ಸು ಬಿತ್ತು, ಆ ದುರ್ವ್ಯಸನದಿಂದ ನಾನು ಅವಳನ್ನು ಬೇಡಿದೆ, ಹೆಂಗಸಿನ ಲಂಪಟವು ಐಶ್ವರ್ಯವನ್ನು ನಾಶಗೊಳಿಸುತ್ತದೆ. ಪತಿವ್ರತೆಯಾದ ಶಚೀದೇವಿಯು ಒಂದು ಉಪಾಯವನ್ನು ಮಾಡಿ, ಸಪ್ತಋಷಿಗಳು ಹೊತ್ತ ಪಲ್ಲಕ್ಕಿಯಲ್ಲಿ ಬಂದರೆ ನಿನ್ನನ್ನು ಒಪ್ಪುತ್ತೇನೆ ಎಂದಳು, ಅವಳ ಮಾತಿನಂತೆ ಅವರು ನನ್ನ ಪಲ್ಲಕ್ಕಿಯನ್ನು ಹೊತ್ತರು, ಆಗ ಬ್ರಾಹ್ಮಣನ ವಿರೋಧವು ಬಂದು, ಅಗಸ್ತ್ಯರು ನನ್ನನ್ನು ಶಪಿಸಿದರು.

ಅರ್ಥ:
ಆಧಿ: ಮನೋರೋಗ; ಬಿದ್ದು: ಬೀಳು; ವೇಧೆ: ನೋವು; ವಿಟ: ಸ್ತ್ರೀಲಂಪಟ; ಬುದ್ಧಿ: ಜ್ಞಾನ; ಸಿರಿ: ಐಶ್ವರ್ಯ; ವಿರೋಧಿ: ಹಗೆ; ಸಲೆ: ವಿಶೇಷವಾಗಿ; ಸತಿ: ಹೆಣ್ಣು; ಉಪಾಯ: ನಾಜೂಕು, ಸುಲಭ; ಋಷಿ: ಮುನಿ; ಬೋಧಿಸು: ಹೇಳು; ವಾಹನ: ಪಲ್ಲಕ್ಕಿ, ಗಾಡಿ; ಸಾಧನ: ಸಾಮಗ್ರಿ, ಗುರಿಮುಟ್ಟುವ; ಮುನೀಂದ್ರ: ಋಷಿ; ವಿರೋಧ: ವೈರತ್ವ; ಶಾಪ: ನಿಷ್ಠುರದ ನುಡಿ;

ಪದವಿಂಗಡಣೆ:
ಆಧಿ +ಬಿದ್ದುದು +ಶಚಿಯ +ಮೇಲಣ
ವೇಧೆಯಲಿ +ವಿಟಬುದ್ಧಿ +ಸಿರಿಗೆ +ವಿ
ರೋಧಿಯೈ +ಸಲೆ +ಸತಿ+ಉಪಾಯವ +ಮಾಡಿ +ಋಷಿಗಳಿಗೆ
ಬೋಧಿಸಿದರ್+ಅವರೆನ್ನ+ ವಾಹನ
ಸಾಧನವೆಯಾದರು+ ಮುನೀಂದ್ರ +ವಿ
ರೋಧವಾಯ್ತ+ಎನಗಲ್ಲಿ+ ಶಪಿಸಿದನಂದ್+ಅಗಸ್ತ್ಯ+ಮುನಿ

ಅಚ್ಚರಿ:
(೧) ನಹುಷನ ಬುದ್ಧಿಮಾತು – ವಿಟಬುದ್ಧಿ ಸಿರಿಗೆ ವಿರೋಧಿಯೈ

ಪದ್ಯ ೧೩: ಸಗರನ ಮಕ್ಕಳನ್ನು ಯಾರು ದಹಿಸಿದರು?

ಸಗರಸುತ ಚರಿತವನು ಕಪಿಲನ
ದೃಗುಶಿಖಿಯಲುರಿದುದನು ಬಳಿಕವ
ರಿಗೆ ಭಗೀರಥನಿಳುಹಿದಮರನದೀ ಕಥಾಂತರವ
ವಿಗಡಮುನಿ ಇಲ್ವಲನ ವಾತಾ
ಪಿಗಳ ಮರ್ದಿಸಿ ವಿಂಧ್ಯಗಿರಿ ಹ
ಬ್ಬುಗೆಯ ನಿಲಿಸಿದಗಸ್ತ್ಯ ಚರಿತವ ಮುನಿಪ ವರ್ಣಿಸಿದ (ಅರಣ್ಯ ಪರ್ವ, ೧೦ ಸಂಧಿ, ೧೩ ಪದ್ಯ)

ತಾತ್ಪರ್ಯ:
ಲೋಮಶನು ಯುಧಿಷ್ಠಿರನಿಗೆ ಸಗರ ಚರ್ಕ್ರವರ್ತಿಯ ಮಕ್ಕಳು ಕಪಿಲನ ನೋಟದುರಿಯಲ್ಲಿ ಸುಟ್ಟು ಹೋದುದನ್ನೂ, ಭಗೀರಥನು ಗಂಗೆಯನ್ನು ಹರಿಸಿದ ಕಥೆಯನ್ನು ಹೇಳಿದನು. ಬಳಿಕ ಅಗಸ್ತ್ಯರು ವಾತಾಪಿ ಮತ್ತು ಇಲ್ವಲರೆಂಬ ರಾಕ್ಷಸರನ್ನು ಸಂಹರಿಸಿ, ವಿಂಧ್ಯಗಿರಿಯು ಎತ್ತರಕ್ಕೆ ಬೆಳೆಯುತ್ತಿದ್ದುದನ್ನು ತಪ್ಪಿಸಿದುದನ್ನೂ ವಿವರಿಸಿದರು.

ಅರ್ಥ:
ಸುತ: ಮಗ; ಚರಿತ: ಕಥೆ; ದೃಗು: ದೃಕ್ಕು, ದೃಶ್; ಶಿಖಿ: ಅಗ್ನಿ; ಉರಿ: ದಹನ; ಬಳಿಕ: ನಂತರ; ಅಮರನದಿ: ಗಂಗೆ; ವಿಗಡ: ಉಗ್ರ, ಭೀಕರ; ಮುನಿ: ಋಷಿ; ಮರ್ದಿಸು: ಸಾಯಿಸು; ಗಿರಿ: ಬೆಟ್ಟ; ಹಬ್ಬುಗೆ: ಹರಡು, ವ್ಯಾಪಿಸು; ವರ್ಣಿಸು: ಬಣ್ಣಿಸು; ಇಳುಹು: ಕೆಳಕ್ಕೆ ತರು;

ಪದವಿಂಗಡಣೆ:
ಸಗರಸುತ +ಚರಿತವನು +ಕಪಿಲನ
ದೃಗು+ಶಿಖಿಯಲ್+ಉರಿದುದನು +ಬಳಿಕ್
ಅವರಿಗೆ +ಭಗೀರಥನ್+ಇಳುಹಿದ್+ಅಮರನದೀ+ ಕಥಾಂತರವ
ವಿಗಡಮುನಿ +ಇಲ್ವಲನ+ ವಾತಾ
ಪಿಗಳ +ಮರ್ದಿಸಿ +ವಿಂಧ್ಯಗಿರಿ+ ಹ
ಬ್ಬುಗೆಯ+ ನಿಲಿಸಿದ್+ಅಗಸ್ತ್ಯ +ಚರಿತವ +ಮುನಿಪ +ವರ್ಣಿಸಿದ

ಅಚ್ಚರಿ:
(೧) ಸಗರನ ಮಕ್ಕಳನ್ನು ಕೊಂದನು ಎಂದು ಹೇಳುವ ಪರಿ – ಸಗರಸುತ ಚರಿತವನು ಕಪಿಲನ
ದೃಗುಶಿಖಿಯಲುರಿದುದನು

ಪದ್ಯ ೧೨: ಸಮುದ್ರದ ನೀರನ್ನು ಯಾರು ಕುಡಿದರು?

ಚ್ಯವನನಾಶ್ರಮದೊಳಗೆ ಮೂರನು
ತಿವಿದು ಭಾರದ್ವಾಜನಾಶ್ರಮ
ಕವರು ಮುನಿದೆಪ್ಪತ್ತನುಂಗಿದರೇನನುಸುರುವೆನು
ದಿವಿಜರಿತ್ತಲಗಸ್ತ್ಯನನು ಪರು
ಠವಿಸಿದರು ಸಾಗರವನಾ ಮುನಿ
ಹವಣಿಸಿದ ಜಠರದಲಿ ಕೊಂದರು ಸುರರು ದಾನವನ (ಅರಣ್ಯ ಪರ್ವ, ೧೦ ಸಂಧಿ, ೧೨ ಪದ್ಯ)

ತಾತ್ಪರ್ಯ:
ಚ್ಯವ ಮುನಿಗಳ ಆಶ್ರಮದಲ್ಲಿ ಮೂವರನ್ನು ಕೊಂದರು, ಭಾರದ್ವಾಜರ ಆಶ್ರಮದಲ್ಲಿ ಎಪ್ಪತ್ತು ಜನರನ್ನು ರಾಕ್ಷಸರು ಕೊಂದರು, ಇತ್ತ ದೇವತೆಗಳು ಅಗಸ್ತ್ಯರನ್ನು ಬೇಡಿ, ಒಪ್ಪಿಸಿ, ಅವರು ಸಮುದ್ರವನ್ನೆಲ್ಲಾ ಏಕಾಪೋಶನವನ್ನಾಗಿ ತನ್ನ ಜಠರದಲ್ಲಿಟ್ಟನು, ಆಗ ದೇವತೆಗಳು ರಾಕ್ಷಸರನ್ನು ಕೊಂದರು.

ಅರ್ಥ:
ಆಶ್ರಮ: ಕುಟೀರ; ತಿವಿ: ಚುಚ್ಚು; ಮುನಿ: ಋಷಿ; ನುಂಗು: ಕಬಳಿಸು; ಉಸುರು: ಹೇಳು, ಮಾತಾಡು; ದಿವಿಜ: ಬ್ರಾಹ್ಮಣ; ಪರುಠವಿಸು: ಸಿದ್ಧಗೊಳಿಸು; ಸಾಗರ: ಸಮುದ್ರ; ಹವಣಿಸು: ಪ್ರಯತ್ನಿಸು, ಹೊಂಚು, ಅಣಿಯಾಗು; ಜಠರ: ಹೊಟ್ಟೆ; ಕೊಂದು: ಸಾಯಿಸು; ಸುರ: ದೇವತೆ; ದಾನವ: ರಾಕ್ಷಸ;

ಪದವಿಂಗಡಣೆ:
ಚ್ಯವನನ+ಆಶ್ರಮದೊಳಗೆ+ ಮೂರನು
ತಿವಿದು +ಭಾರದ್ವಾಜನ+ಆಶ್ರಮಕ್
ಅವರು +ಮುನಿದ್+ಎಪ್ಪತ್ತ+ ನುಂಗಿದರ್+ಏನನ್+ಉಸುರುವೆನು
ದಿವಿಜರ್+ಇತ್ತಲ್+ಅಗಸ್ತ್ಯನನು +ಪರು
ಠವಿಸಿದರು +ಸಾಗರವನ್+ಆ+ ಮುನಿ
ಹವಣಿಸಿದ +ಜಠರದಲಿ +ಕೊಂದರು +ಸುರರು +ದಾನವನ

ಅಚ್ಚರಿ:
(೧) ಸಾಗರವನ್ನು ಕುಡಿದ ಪರಿ – ಅಗಸ್ತ್ಯನನು ಪರುಠವಿಸಿದರು ಸಾಗರವನಾ ಮುನಿ
ಹವಣಿಸಿದ ಜಠರದಲಿ

ಪದ್ಯ ೧೦: ಲೋಮಶ ಮುನಿಯು ಯಾವ ಕಥೆಯನ್ನು ಧರ್ಮಜನಿಗೆ ಹೇಳಿದರು?

ಬಳಿಕ ಲೋಮಶ ಸಹಿತ ನೃಪಕುಲ
ತಿಲಕ ಬಂದನಗಸ್ತ್ಯನಾಶ್ರಮ
ದೊಳಗೆ ಬಿಟ್ಟನು ಪಾಳೆಯವನಾ ಮುನಿಯಚರಿತವನು
ತಿಳುಹಿದನು ಲೋಮಶನು ವೃತ್ರನ
ಕಲಹಕೆಂದು ದಧೀಚಿ ಮುನಿಪತಿ
ಯೆಲುವನಮರರು ಬೇಡಿದುದನರುಹಿದನು ಜನಪತಿಗೆ (ಅರಣ್ಯ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ನಂತರ ಲೋಮಶ ಮುನಿಯ ಜೊತೆ ಧರ್ಮರಾಯನು ಅಗಸ್ತ್ಯರ ಆಶ್ರಮಕ್ಕೆ ಬಂದು ಅಲ್ಲಿ ಬೀಡು ಬಿಟ್ಟನು. ಲೋಮಶನು ಅಗಸ್ತ್ಯನ ಚರಿತ್ರೆಯನ್ನು ಹೇಳಿದ ಬಳಿಕ ದಧೀಚಿಯ ಎಲುಬನ್ನು ದೇವತೆಗಳು ಬೇಡಿದ ಕಥೆಯನ್ನು ಹೇಳಿದನು.

ಅರ್ಥ:
ಬಳಿಕ: ನಂತರ; ಸಹಿತ: ಜೊತೆ; ನೃಪ: ರಾಜ; ಕುಲ: ವಂಶ; ತಿಲಕ: ಶ್ರೇಷ್ಠ; ನೃಪಕುಲತಿಲಕ: ಶ್ರೇಷ್ಠನಾದ ರಾಜ; ಆಶ್ರಮ: ಕುಟೀರ; ಪಾಳೆಯ: ಬೀಡು, ಶಿಬಿರ; ಮುನಿ: ಋಷಿ; ಚರಿತ: ವಿಚಾರ, ಕಥೆ; ತಿಳುಹು: ತಿಳಿಸು; ಕಲಹ: ಜಗಳ; ಮುನಿಪತಿ: ಋಷಿ; ಯೆಲುಬು: ಮೂಳೆ; ಅಮರ: ದೇವತೆ; ಬೇಡು: ಕೇಳು; ಅಉಹು: ತಿಳಿಸು; ಜನಪತಿ: ರಾಜ;

ಪದವಿಂಗಡಣೆ:
ಬಳಿಕ +ಲೋಮಶ +ಸಹಿತ +ನೃಪಕುಲ
ತಿಲಕ +ಬಂದನ್+ಅಗಸ್ತ್ಯನ್+ಆಶ್ರಮ
ದೊಳಗೆ +ಬಿಟ್ಟನು +ಪಾಳೆಯವನಾ+ ಮುನಿಯ+ಚರಿತವನು
ತಿಳುಹಿದನು +ಲೋಮಶನು +ವೃತ್ರನ
ಕಲಹಕೆಂದು +ದಧೀಚಿ +ಮುನಿಪತಿ
ಯೆಲುವನ್+ಅಮರರು +ಬೇಡಿದುದನ್+ಅರುಹಿದನು +ಜನಪತಿಗೆ

ಅಚ್ಚರಿ:
(೧) ಯುಧಿಷ್ಠಿರನನ್ನು ನೃಪಕುಲತಿಲಕ ಎಂದು ಕರೆದಿರುವುದು