ಪದ್ಯ ೪: ಭೀಮಾರ್ಜುನರನ್ನು ಕೃಷ್ಣನು ಹೇಗೆ ಪತಿಕರಿಸಿದನು?

ತೆಗೆಸು ದಳವನು ಸಾಕು ಬರಿದೇ
ಹೊಗಳುತಿಹೆ ನೀ ನಮ್ಮನೀ ಕಾ
ಳೆಗದೊಳಳಿದುದು ಹಗೆಯೊಳೇಳಕ್ಷೋಹಿಣೀ ಸೇನೆ
ಬಗೆಯದಿರಿದರು ಭೀಮಪಾರ್ಥರು
ಜಗದೊಳದ್ಭುತ ವೀರರಿವರೆಂ
ದಗಧರನು ಪತಿಕರಿಸಿದನು ಪವನಜನ ಫಲುಗುಣನ (ದ್ರೋಣ ಪರ್ವ, ೧೫ ಸಂಧಿ, ೪ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ ನಿನ್ನ ಸೈನ್ಯವನ್ನು ಪಾಳೆಯಕ್ಕೆ ಕಳಿಸು, ನಮ್ಮನ್ನು ಸುಮ್ಮನೆ ಹೊಗಳುತ್ತಿರುವೆ, ಇಂದಿನ ಕಾಳಗದಲ್ಲಿ ಕೌರವರ ಏಳು ಅಕ್ಷೋಹಿಣಿ ಸೇನೆ ಮಡಿಯಿತು. ಭೀಮಾರ್ಜುನರು ಶತ್ರುಗಳನ್ನು ಲೆಕ್ಕಿಸದೆ ಸಂಹರಿಸಿದರು. ಲೋಕದಲ್ಲಿ ಇವರು ಅದ್ಭುತ ವೀರರು ಎಂದು ಭೀಮಾರ್ಜುನರನ್ನು ಹೊಗಳಿ ಅನುಗ್ರಹಿಸಿದನು.

ಅರ್ಥ:
ತೆಗೆ: ಹೊರತರು, ಕಳಿಸು; ದಳ: ಸೈನ್ಯ; ಸಾಕು: ನಿಲ್ಲಿಸು; ಬರಿ: ಕೇವಲ; ಹೊಗಳು: ಪ್ರಶಂಶಿಸು; ಕಾಳೆಗ: ಯುದ್ಧ; ಇಳಿ: ಕೆಳಕ್ಕೆ ಬಾ; ಹಗೆ: ವೈರಿ; ಅಳಿ: ನಾಶ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಸೇನೆ: ಸೈನ್ಯ; ಬಗೆ: ತಿಳಿ; ಇರಿ: ಚುಚ್ಚು; ಜಗ: ಪ್ರಪಂಚ; ಅದ್ಭುತ: ಆಶ್ಚರ್ಯ; ವೀರ: ಪರಾಕ್ರಮಿ; ಅಗಧರ: ಬೆಟ್ಟವನ್ನು ಹೊತ್ತವ (ಕೃಷ್ಣ); ಪತಿಕರಿಸು: ಅನುಗ್ರಹಿಸು; ಪವನಜ: ವಾಯುಪುತ್ರ (ಭೀಮ);

ಪದವಿಂಗಡಣೆ:
ತೆಗೆಸು +ದಳವನು +ಸಾಕು +ಬರಿದೇ
ಹೊಗಳುತಿಹೆ +ನೀ +ನಮ್ಮನ್+ಈ+ ಕಾ
ಳೆಗದೊಳ್+ಅಳಿದುದು +ಹಗೆಯೊಳ್+ಏಳ್+ಅಕ್ಷೋಹಿಣೀ +ಸೇನೆ
ಬಗೆಯದ್+ಇರಿದರು +ಭೀಮ+ಪಾರ್ಥರು
ಜಗದೊಳ್+ಅದ್ಭುತ +ವೀರರ್+ಇವರೆಂದ್
ಅಗಧರನು +ಪತಿಕರಿಸಿದನು +ಪವನಜನ +ಫಲುಗುಣನ

ಅಚ್ಚರಿ:
(೧) ಭೀಮಾರ್ಜುನರನ್ನು ಹೊಗಳುವ ಪರಿ – ಭೀಮಪಾರ್ಥರು ಜಗದೊಳದ್ಭುತ ವೀರರಿವರೆಂ
ದಗಧರನು ಪತಿಕರಿಸಿದನು
(೨) ಭೀಮ ಪಾರ್ಥ, ಪವನಜ ಫಲುಗುಣ – ಭೀಮಾರ್ಜುನರನ್ನು ಕರೆದ ಪರಿ

ಪದ್ಯ ೭: ಭೀಮನು ಕಾಡನ್ನು ಹೇಗೆ ಹೊಕ್ಕನು?

ಬಿಗಿದು ಬತ್ತಳಿಕೆಯನು ಹೊನ್ನಾ
ಯುಗದ ಖಡ್ಗ ಶರಾಸನವ ಕೊಂ
ಡಗಧರನ ನೆನೆದನಿಲಸುತ ಹೊರವಂಟನಾಶ್ರಮವ
ಬಿಗಿದು ಹೊಕ್ಕನರಣ್ಯವನು ಬೊ
ಬ್ಬೆಗಳ ಬಿರುದಿನ ಬಾಹು ಸತ್ವದ
ವಿಗಡ ಭೀಮನ ಕಾಲ್ದುಳಿಗೆ ಕಂಪಿಸಿತು ವನನಿವಹ (ಅರಣ್ಯ ಪರ್ವ, ೧೧ ಸಂಧಿ, ೭ ಪದ್ಯ)

ತಾತ್ಪರ್ಯ:
ಭೀಮನು ತನ್ನ ಬತ್ತಳಿಕೆಯನ್ನು ಕಟ್ಟಿಕೊಂಡು, ಚಿನ್ನದ ಹಿಡಿಕೆಯ ಖಡ್ಗವನ್ನು ತೆಗೆದು, ಬಿಲ್ಲನ್ನು ಹೆದೆಯೇರಿಸಿಕೊಂಡು ಶ್ರೀಕೃಷ್ಣನನ್ನು ಮನಸ್ಸಿನಲ್ಲಿ ನೆನೆದು ಆಶ್ರಮದಿಂದ ಹೊರಹೊಂಟನು. ಜೋರಾಗಿ ಗರ್ಜಿಸುತ್ತಾ, ಕಾಡನ್ನು ಹೊಕ್ಕನು. ಆತನ ಕಾಲ್ತುಳಿತಕ್ಕೆ ಕಾಡು ನಡುಗಿತು.

ಅರ್ಥ:
ಬಿಗಿ: ಕಟ್ಟು; ಬತ್ತಳಿಕೆ: ಬಾಣಗಳನ್ನಿಡುವ ಕೋಶ, ತೂಣೀರ; ಹೊನ್ನು: ಚಿನ್ನ; ಖಡ್ಗ: ಕತ್ತಿ; ಶರಾಸನ: ಬಿಲ್ಲು; ಕೊಂಡು: ತೆಗೆದು; ಅಗಧರ: ಕೃಷ್ಣ; ಅಗ: ಬೆಟ್ಟ; ಧರ: ಹಿಡಿದಿರುವ; ನೆನೆದು: ಜ್ಞಾಪಿಸಿಕೊಂಡು; ಅನಿಲಸುತ: ವಾಯುಪುತ್ರ; ಹೊರವಂಟ: ತೆರಳಿದ; ಆಶ್ರಮ: ಕುಟೀರ; ಹೊಕ್ಕು: ಸೇರು; ಅರಣ್ಯ: ಕಾಡು; ಬೊಬ್ಬೆ: ಜೋರಾಗಿ ಕೂಗು; ಬಿರುಸು: ಜೋರು, ರಭಸ; ಬಾಹು: ಭುಜ; ಸತ್ವ: ಶಕ್ತಿ; ವಿಗಡ: ಶೌರ್ಯ, ಪರಾಕ್ರಮ; ತುಳಿತ: ಮೆಟ್ಟು; ಕಾಲು: ಪಾದ; ಕಂಪಿಸು: ಅಲುಗಾಡು; ವನ: ಕಾಡು; ನಿವಹ: ಗುಂಪು;

ಪದವಿಂಗಡಣೆ:
ಬಿಗಿದು +ಬತ್ತಳಿಕೆಯನು +ಹೊನ್ನಾ
ಯುಗದ +ಖಡ್ಗ +ಶರಾಸನವ +ಕೊಂಡ್
ಅಗಧರನ +ನೆನೆದ್+ಅನಿಲಸುತ +ಹೊರವಂಟನ್+ಆಶ್ರಮವ
ಬಿಗಿದು +ಹೊಕ್ಕನ್+ಅರಣ್ಯವನು +ಬೊ
ಬ್ಬೆಗಳ +ಬಿರುದಿನ +ಬಾಹು +ಸತ್ವದ
ವಿಗಡ+ ಭೀಮನ +ಕಾಲ್ದುಳಿಗೆ +ಕಂಪಿಸಿತು +ವನ+ನಿವಹ

ಅಚ್ಚರಿ:
(೧) ಕೃಷ್ಣನನ್ನು ಅಗಧರ, ಭೀಮನನ್ನು ಅನಿಲಸುತ ಎಂದು ಹೇಳಿರುವುದು
(೨) ಭೀಮನ ಬಲವನ್ನು ತಿಳಿಸುವ ಪರಿ – ಬೊಬ್ಬೆಗಳ ಬಿರುದಿನ ಬಾಹು ಸತ್ವದ ವಿಗಡ ಭೀಮನ ಕಾಲ್ದುಳಿಗೆ ಕಂಪಿಸಿತು ವನನಿವಹ

ಪದ್ಯ ೪೭: ಇಂದ್ರನು ಅರ್ಜುನನಿಗೆ ಏನು ಹೇಳಿ ತೆರಳಿದನು?

ಮಗನೆ ನಿನ್ನಯ ಮನದ ನಿಷ್ಠೆಗೆ
ಸೊಗಸಿದೆನು ಪಿರಿದಾಗಿ ಹರನಿ
ಲ್ಲಿಗೆ ಬರಲಿ ಕರುಣಿಸಲಿ ನಿನ್ನ ಮನೋಭಿವಾಂಛಿತವ
ಹಗೆಗೆ ಹರಿವಹುದೆಂದು ಸುರಮೌ
ಳಿಗಳ ಮಣಿ ಸರಿದನು ವಿಮಾನದ
ಲಗಧರನ ಮೈದುನನ ಮಹಿಮೆಯನಿನ್ನು ಕೇಳೆಂದ (ಅರಣ್ಯ ಪರ್ವ, ೫ ಸಂಧಿ, ೪೭ ಪದ್ಯ)

ತಾತ್ಪರ್ಯ:
ದೇವೇಂದ್ರನು ತನ್ನ ನಿಜ ಸ್ವರೂಪವನ್ನು ತೋರುತ್ತಾ, ಮಗನೇ, ನಿನ್ನ ಮನಸ್ಸಿನ ನಿಷ್ಠೆಗೆ ನಾನು ಬಹಳ ಸಂತೋಷಿಸುತ್ತೇನೆ. ಶಿವನು ಇಲ್ಲಿಗೆ ಬರಲಿ, ನಿನ್ನ ಮನಸ್ಸಿನ ಇಷ್ಟಾರ್ಥವನ್ನು ಕರುಣಿಸಲಿ. ನಿಮ್ಮ ವೈರಿಗಳು ನಾಶವಾಗುತ್ತಾರೆ, ಎಂದು ಹೇಳಿ ದೇವತೆಗಳಲ್ಲಿ ಶ್ರೇಷ್ಠವನಾದ ಇಂದ್ರನು ವಿಮಾನದ ಮೂಲಕ ಸ್ವರ್ಗಲೋಕಕ್ಕೆ ತೆರಳಿದನು. ಜನಮೇಜಯ ಈಗ ಕೃಷ್ಣನ ಮೈದುನನಾದ ಅರ್ಜುನನ ಮಹಿಮೆಯನ್ನು ಕೇಳು ಎಂದು ವೈಶಂಪಾಯನರು ಕಥೆಯನ್ನು ಮುಂದುವರೆಸಿದರು.

ಅರ್ಥ:
ಮಗ: ಸುತ; ಮನ: ಮನಸ್ಸು; ನಿಷ್ಠೆ: ಶ್ರದ್ಧೆ; ಸೊಗಸು: ಚೆಲುವು; ಪಿರಿದು: ಹಿರಿದು; ಹರ: ಶಿವ; ಬರಲಿ: ಆಗಮಿಸು; ಕರುಣಿಸು: ದಯೆತೋರು; ಮನ: ಮನಸ್ಸು; ವಾಂಛನ: ಆಸೆ, ಇಚ್ಛೆ; ಹಗೆ:ವೈರಿ; ಹರಿ: ನಾಶ; ಸುರಮೌಳಿ: ದೇವೇಂದ್ರ; ಮಣಿ: ಶ್ರೇಷ್ಠ; ಸರಿ: ತೆರಳು; ವಿಮಾನ: ಆಕಾಶದಲ್ಲಿ ಚಲಿಸುವ ವಾಹನ; ಅಗ: ಬೆಟ್ಟ; ಅಗಧರ: ಕೃಷ್ಣ; ಮೈದುನ: ತಂಗಿಯ ಗಂಡ; ಮಹಿಮೆ: ಶ್ರೇಷ್ಠತೆ, ಔನ್ನತ್ಯ;

ಪದವಿಂಗಡಣೆ:
ಮಗನೆ +ನಿನ್ನಯ +ಮನದ +ನಿಷ್ಠೆಗೆ
ಸೊಗಸಿದೆನು +ಪಿರಿದಾಗಿ +ಹರನ್
ಇಲ್ಲಿಗೆ +ಬರಲಿ +ಕರುಣಿಸಲಿ +ನಿನ್ನ +ಮನೋಭಿ+ವಾಂಛಿತವ
ಹಗೆಗೆ+ ಹರಿವಹುದ್+ಎಂದು +ಸುರಮೌ
ಳಿಗಳ +ಮಣಿ +ಸರಿದನು +ವಿಮಾನದಲ್
ಅಗಧರನ +ಮೈದುನನ +ಮಹಿಮೆಯನ್+ಇನ್ನು+ ಕೇಳೆಂದ

ಅಚ್ಚರಿ:
(೧) ಕೃಷ್ಣನನ್ನು ಅಗಧರ ಎಂದು ಕರೆದಿರುವುದು
(೨) ಇಂದ್ರನನ್ನು ಕರೆದ ಬಗೆ – ಸುರಮೌಳಿಗಳ ಮಣಿ
(೩) ದೇವತೆಗಳ ವಾಹನ – ವಿಮಾನದ ಪ್ರಸ್ತಾಪ
(೪) ಮ, ನ ಅಕ್ಷರದ ಬಳಕೆ – ಮಗನೆ ನಿನ್ನಯ ಮನದ ನಿಷ್ಠೆಗೆ

ಪದ್ಯ ೨೩: ಅರ್ಜುನನು ಅರಮನೆಯನ್ನು ಪ್ರವೇಶಿಸಿದಾಗ ಕೃಷ್ಣನು ಏನು ಮಾಡುತ್ತಿದ್ದನು?

ಹೊಗಳುತರ್ಜುನನಸುರರಿಪುವಿನ
ನಗರಿಗೈತಂದರಮನೆಯ ಹೊಗ
ಲಗಧರನು ಮಂಚದಲಿ ನಿದ್ರಾಂಗನೆಯ ಕೇಳಿಯಲಿ
ಸೊಗಸು ಸಮತಳಿಸಿದ ಸುಷುಪ್ತಿಯ
ಬಿಗುಹಿನಲಿ ಪರಮಾತ್ಮನೆಸೆದನು ಭ್ರಾಂತಿಯೋಗದಲಿ (ಉದ್ಯೋಗ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ದ್ವಾರಕೆಯನ್ನು ಹೊಗಳುತ್ತಾ ಅರ್ಜುನನು ಕೃಷ್ಣನ ಅರಮನೆಯನ್ನು ಪ್ರವೇಶಿಸಿದನು. ಶ್ರೀಕೃಷ್ಣನು ಆಗ ಮಂಚದ ಮೇಲೆ ನಿದ್ರಿಸುತ್ತಿದ್ದನು. ಅವನ ಕಣ್ಣುಗಳು ಅರ್ಧ ತೆರೆದಿದ್ದವು. ನಿದ್ರಾಂಗನೆಯೊಡನೆ ಅವನು ಏನು ವಿನೋದ ಕ್ರೀಡೆ ಆಡುತ್ತಿದ್ದಾಗೆ ಕಂಡು, ಇವನು ಸುಷುಪ್ತಿಯಲ್ಲಿರುವನೋ ಎಂಬಂತೆ ನೋಡುವವರಿಗೆ ಭ್ರಾಂತಿಯುಂಟು ಮಾಡುತ್ತಿದ್ದನು.

ಅರ್ಥ:
ಹೊಗಳು: ತಿ, ಕೊಂಡಾಡು; ಅಸುರ:ರಾಕ್ಷಸ; ರಿಪು: ವೈರಿ; ನಗರ: ಊರು; ಅರಮನೆ: ರಾಜರ ವಾಸಸ್ಥಾನ; ಹೋಗಲು: ಪ್ರವೇಶಿಸಲು; ಅಗ: ಬೆಟ್ಟ; ಧರ: ಹಿಡಿದಿರುವ; ಮಂಚ: ಮಲಗಲು ಉಪಯೋಗಿಸುವ ಸಾಧನ; ನಿದ್ರೆ: ಸುಷುಪ್ತಿ, ಎಚ್ಚರವಿಲ್ಲದ ಸ್ಥಿತಿ; ಆಂಗನೆ: ಲಲನೆ, ಹುಡುಗಿ; ಕೇಳಿ: ವಿನೋದ, ಕ್ರೀಡೆ; ಸೊಗಸು: ಸುಂದರ; ತೆರೆದ: ಬಿಚ್ಚು; ಮಿಗಲು: ಹೆಚ್ಚಾಗಲು; ಲೋಚನ: ಕಣ್ಣು; ಯುಗಳ: ಎರಡು; ಸಮತಳಿಸು: ಮಟ್ಟಮಾಡು; ಬಿಗು: ಹಿಡಿತ; ಭ್ರಾಂತಿ: ಭ್ರಮೆ; ಯೋಗ:ಹೊಂದಿಸುವಿಕೆ, ಏಕಾಗ್ರತೆ, ಧ್ಯಾನ;

ಪದವಿಂಗಡಣೆ:
ಹೊಗಳುತ್+ಅರ್ಜುನನ್+ಅಸುರರಿಪುವಿನ
ನಗರಿಗ್+ಐತಂದ್+ಅರಮನೆಯ +ಹೊಗಲ್
ಅಗಧರನು +ಮಂಚದಲಿ+ ನಿದ್ರಾಂಗನೆಯ+ ಕೇಳಿಯಲಿ
ಸೊಗಸು+ ಸಮತಳಿಸಿದ+ ಸುಷುಪ್ತಿಯ
ಬಿಗುಹಿನಲಿ+ ಪರಮಾತ್ಮನ್+ಎಸೆದನು+ ಭ್ರಾಂತಿ+ಯೋಗದಲಿ

ಅಚ್ಚರಿ:
(೧) ಕೃಷ್ಣನನ್ನು ಅಸುರರಿಪು, ಅಗಧರ, ಪರಮಾತ್ಮ ಎಂದು ಕರೆದಿರುವುದು
(೨) ಕೃಷ್ಣನು ಮಲಗಿರುವ ಪರಿ – ನಿದ್ರಾಂಗನೆಯ ಕೇಳಿಯಲಿ
ಸೊಗಸು ಸಮತಳಿಸಿದ ಸುಷುಪ್ತಿಯ ಬಿಗುಹಿನಲಿ ಪರಮಾತ್ಮನೆಸೆದನು ಭ್ರಾಂತಿಯೋಗದಲಿ

ಪದ್ಯ ೨೨: ಕೃಷ್ಣನು ಮಂತ್ರಾಲೋಚನ ಸಭೆಗೆ ಹೇಗೆ ಬಂದನು?

ನಗುತ ಸಾಕೇಳೆಂದು ರಾಯನ
ತೆಗೆದು ತಳ್ಕಿಸಿ ಕೈಯ್ಯ ತುಳುಕಿನೊ
ಳಗಧರನು ನೃಪಸಭೆಗೆ ಬಿಜಯಂಗೈದನೊಲವಿನಲಿ
ಮುಗಿದ ಕರದಲಿ ವ್ಯಾಸ ಧೌಮ್ಯಾ
ದಿಗಳು ಮೈಯಿಕ್ಕಿದರಖಿಳ ಮಂ
ತ್ರಿಗಳು ಸಚಿವರು ನೆರೆದುದಾಳೋಚನೆಯ ಭವನದಲಿ (ಸಭಾ ಪರ್ವ, ೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ನಗುತ್ತಾ, “ಸಾಕು ಧರ್ಮರಾಯ, ಮೇಲೇಳು, ಎಂದು ಹೇಳಿ, ಅಪ್ಪಿಕೊಂಡು ಕೈಗೆ ಕೈ ಸೇರಿಸಿ ಪ್ರೀತಿಯಿಂದ ಮಂತ್ರಾಲೋಚನಸಭೆಗೆ ಬಂದನು. ವ್ಯಾಸ ಧೌಮ್ಯ ಮೊದಲಾದವರು ಕೈ ಮುಗಿದು ದೀರ್ಘದಂಡ ನಮಸ್ಕಾರಗಳನ್ನು ಸಮರ್ಪಿಸಿದರು. ಅಲ್ಲಿ ನೆರೆದಿದ್ದ ಸಚಿವರು, ಮಂತ್ರಿಮಂಡಲದ ಸದಸ್ಯರು ಸಭೆಗೆ ಬಂದರು.

ಅರ್ಥ:
ನಗುತ: ಸಂತೋಷದಿಂದ; ಸಾಕು: ಇನ್ನು ಬೇಡ, ನಿಲ್ಲಿಸು; ಏಳು: ನಿಲ್ಲು; ರಾಯ: ರಾಜ; ತಳ್ಕಿಸಿ: ಸವರು; ಕೈ:ಕರ; ತುಳುಕು: ಶ್ಲಾಘಿಸು; ಅಗ: ಬೆಟ್ಟ; ಅಗಧರ: ಕೃಷ್ಣ; ನೃಪ: ರಾಜ; ಸಭೆ: ದರ್ಬಾರು; ಬಿಜಯಂಗೈ: ದಯಮಾಡಿಸು; ಒಲವು: ಪ್ರೀತಿ; ಮುಗಿದ ಕರ: ನಮಸ್ಕರಿಸು; ಆದಿ: ಮೊದಲಾದ; ಮೈಯಿಕ್ಕಿದರ್: ನಮಸ್ಕರಿಸಿದರು; ಮಂತ್ರಿ: ಸಚಿವರು; ಸಚಿವ: ಅಮಾತ್ಯ; ನೆರೆದು: ಗುಂಪು; ಭವನ: ಆಲಯ;

ಪದವಿಂಗಡಣೆ:
ನಗುತ +ಸಾಕ್+ಏಳೆಂದು +ರಾಯನ
ತೆಗೆದು +ತಳ್ಕಿಸಿ+ ಕೈಯ್ಯ +ತುಳುಕಿನೊಳ್
ಅಗಧರನು +ನೃಪ+ಸಭೆಗೆ +ಬಿಜಯಂಗೈದನ್+ಒಲವಿನಲಿ
ಮುಗಿದ+ ಕರದಲಿ+ ವ್ಯಾಸ +ಧೌಮ್ಯಾ
ದಿಗಳು +ಮೈಯಿಕ್ಕಿದರ್+ಅಖಿಳ+ ಮಂ
ತ್ರಿಗಳು +ಸಚಿವರು +ನೆರೆದುದ್+ಆಳೋಚನೆಯ +ಭವನದಲಿ

ಅಚ್ಚರಿ:
(೧) ರಾಯ, ನೃಪ – ಸಮನಾರ್ಥಕ ಪದ
(೨) ಕೃಷ್ಣನನ್ನು ಅಗಧರ ಎಂದು ಕರೆದಿರುವುದು
(೩) ನಮಸ್ಕರಿಸು ಎಂದು ಹೇಳಲು ಮೈಯಿಕ್ಕಿದರ್, ಮುಗಿದ ಕರ ಎಂಬ ಪದದ ಬಳಕೆ

ಪದ್ಯ ೧೨೯: ಮಂತ್ರಿಗಳು ಜರಾಸಂಧನ ಮಗನನ್ನು ಏನು ಕೇಳಿದರು?

ನಗರ ಜನ ಮಂತ್ರಿ ಪ್ರಧಾನಾ
ದಿಗಳು ಸಹಿತ ಕುಮಾರನೈತಂ
ದಗಧರನ ಪದಕೆರಗಿದನು ಭೀಮಾರ್ಜುನಾಂಘ್ರಿಯಲಿ
ಮಗನೆ ತಂದೆಯ ಮಾರ್ಗದಲಿ ನಂ
ಬುಗೆಯೊ ಕರುಣಾರಕ್ಷಣದ ನಂ
ಬುಗೆಯೊ ಚಿತ್ತವಿಸೆಂದರಾ ಮಂತ್ರಿಗಳು ಕೈಮುಗಿದು (ಸಭಾ ಪರ್ವ, ೨ ಸಂಧಿ, ೧೨೯ ಪದ್ಯ)

ತಾತ್ಪರ್ಯ:
ಊರಿನ ಹಿರಿಯರು, ಮಂತ್ರಿವರ್ಗದವರು, ಜರಾಸಂಧನ ಮಗನೊಡನೆ ಬಂದು ಕೃಷ್ಣ ಮತ್ತು ಭೀಮಾರ್ಜುನರ ಪಾದಗಳಿಗೆ ನಮಸ್ಕರಿಸಿದರು. ಮಂತ್ರಿಗಳು ಜರಾಸಂಧನ ಮಗನನ್ನುದ್ದೇಶಿಸಿ (ಸಹದೇವ), “ರಾಜಕುಮಾರ, ನೀನು ನಿನ್ನ ತಂದೆಯ ಮಾರ್ಗದಲ್ಲಿ ನಡೆಯುವೆಯೋ ಅಥವ ಇವರ ಕರುಣಾ ರಕ್ಷಣೆಯಲ್ಲಿ ಬಾಳುವೆಯೋ” ಎಂದು ಕೇಳಿದರು.

ಅರ್ಥ:
ನಗರ: ಊರು; ಜನ: ಪ್ರಜೆ; ಮಂತ್ರಿ: ಸಚಿವ; ಪ್ರಧಾನ: ಮುಖ್ಯ; ಸಹಿತ: ಜೊಗೆ; ಕುಮಾರ: ಮಗ; ಅಗ: ಬೆಟ್ಟ; ಅಗಧರ: ಕೃಷ್ಣ; ಪದ: ಪಾದ; ಎರಗು: ನಮಸ್ಕರಿಸು; ಅಂಘ್ರಿ: ಪಾದ; ತಂದೆ: ಪಿತ; ಮಾರ್ಗ: ದಾರಿ; ನಂಬು: ವಿಶ್ವಾಸವಿಡು; ಕರುಣ: ದಯೆ; ರಕ್ಷಣ: ಸಂರಕ್ಷಿಸುವಿಕೆ; ಚಿತ್ತ: ಮನಸ್ಸು; ಕೈ: ಕರ, ಹಸ್ತ; ಕೈಮುಗಿದು: ನಮಸ್ಕರಿಸಿ;

ಪದವಿಂಗಡಣೆ:
ನಗರ +ಜನ +ಮಂತ್ರಿ +ಪ್ರಧಾನಾ
ದಿಗಳು +ಸಹಿತ +ಕುಮಾರನೈತಂದ್
ಅಗಧರನ+ ಪದಕೆರಗಿದನು+ ಭೀಮಾರ್ಜುನ+ಅಂಘ್ರಿಯಲಿ
ಮಗನೆ +ತಂದೆಯ +ಮಾರ್ಗದಲಿ +ನಂ
ಬುಗೆಯೊ +ಕರುಣಾರಕ್ಷಣದ+ ನಂ
ಬುಗೆಯೊ +ಚಿತ್ತವಿಸೆಂದರಾ +ಮಂತ್ರಿಗಳು +ಕೈಮುಗಿದು

ಅಚ್ಚರಿ:
(೧) ನಂಬುಗೆಯೊ – ಪದದ ಬಳಕೆ , ೪, ೫ ಸಾಲಿನ ಕೊನೆಯ ಪದ
(೨) ಮಂತ್ರಿ – ೧, ೫ ಸಾಲಿನ ಎರಡನೇ ಕೊನೆಯ ಪದ
(೩) ಪದ, ಅಂಘ್ರಿ – ಸಮನಾರ್ಥಕ ಪದ