ಪದ್ಯ ೫೪: ದುರ್ಗತಿಯು ಹೇಗೆ ಗೋಚರಿಸಿತು?

ಕ್ಷಿತಿಪ ಕೇಳ್ ದುರ್ವ್ಯಸನ ವಿಷಮ
ವ್ಯತಿಕರದ ಭಾಷೆಯನು ನೃಪ ಮಿಗೆ
ಪತಿಕರಿಸಿದನು ಹೊಸೆದು ಹಾಸಂಗಿಗಳ ಹಾಯ್ಕಿದನು
ಸತಿಯ ದಕ್ಷಿಣ ನಯನವೀ ಭೂ
ಪತಿಯ ವಾಮ ಭುಜಾಕ್ಷಿಗಳು ದು
ರ್ಗತಿಯ ಸೂಚಿಸಿ ತೋರುತಿರ್ದವು ಧರ್ಮನಂದನನ (ಸಭಾ ಪರ್ವ, ೧೭ ಸಂಧಿ, ೫೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಜೂಜೆಂಬ ಕೆಟ್ಟಚಟದ ಆಪತ್ತನ್ನು ತರುವ ರೀತಿಯನ್ನು ಧರ್ಮಜನು ಸ್ವೀಕರಿಸಿ ಹಾಸಂಗಿಗಳನ್ನು ಕಟೆದು ಹಾಕಿದನು. ದ್ರೌಪದಿಯ ಬಲಗಣ್ಣು, ಯುಧಿಷ್ಠಿರನ ಎಡಗಣ್ಣು, ಎಡಭುಜಗಳು ಅದರಿದವು, ಇವು ಮುಂದೆ ಬರುವ ಕೆಟ್ಟಸ್ಥಿತಿಯನ್ನು ಗೋಚರಿಸುತ್ತಿದ್ದವು.

ಅರ್ಥ:
ಕ್ಷಿತಿಪ: ರಾಜ; ಕೇಳು: ಆಲಿಸು; ದುರ್ವ್ಯಸನ: ಕೆಟ್ಟ ಚಟ; ವಿಷಮ: ಕಷ್ಟ ಪರಿಸ್ಥಿತಿ, ಆಪತ್ತು; ವ್ಯತಿಕರ: ಆಪತ್ತು, ಕೇಡು; ಭಾಷೆ: ನುಡಿ; ನೃಪ: ರಾಜ; ಮಿಗೆ: ಮತ್ತು, ಅಧಿಕ; ಪತಿಕರಿಸು: ಸ್ವೀಕರಿಸು; ಹೊಸೆದು: ಹುರಿಮಾಡು, ಸೇರಿಸು; ಹಾಸಂಗಿ: ಜೂಜಿನ ದಾಳ, ಲೆತ್ತ; ಹಾಯ್ಕು: ಇಡು, ಇರಿಸು; ಸತಿ: ಹೆಂಡತಿ; ದಕ್ಷಿಣ: ಬಲಭಾಗ; ನಯನ: ಕಣ್ಣು; ಭೂಪತಿ: ರಜ; ವಾಮ: ಎಡಭಾಗ; ಭುಜ: ತೋಳು; ಅಕ್ಷಿ: ಕಣ್ಣು; ದುರ್ಗತಿ: ಕೆಟ್ಟ ಸ್ಥಿತಿ; ಸೂಚಿಸು: ತೋರು; ತೋರು: ಕಾಣು; ನಂದನ: ಮಗ;

ಪದವಿಂಗಡಣೆ:
ಕ್ಷಿತಿಪ+ ಕೇಳ್ +ದುರ್ವ್ಯಸನ +ವಿಷಮ
ವ್ಯತಿಕರದ +ಭಾಷೆಯನು +ನೃಪ +ಮಿಗೆ
ಪತಿಕರಿಸಿದನು +ಹೊಸೆದು +ಹಾಸಂಗಿಗಳ+ ಹಾಯ್ಕಿದನು
ಸತಿಯ +ದಕ್ಷಿಣ +ನಯನವ್+ಈ+ ಭೂ
ಪತಿಯ +ವಾಮ +ಭುಜ+ಅಕ್ಷಿಗಳು +ದು
ರ್ಗತಿಯ +ಸೂಚಿಸಿ +ತೋರುತಿರ್ದವು +ಧರ್ಮನಂದನನ

ಅಚ್ಚರಿ:
(೧) ಕ್ಷಿತಿಪ, ನೃಪ, ಭೂಪತಿ; ನಯನ, ಅಕ್ಷಿ; – ಸಮನಾರ್ಥಕ ಪದ
(೨) ಹ ಕಾರದ ತ್ರಿವಳಿ ಪದ – ಹೊಸೆದು ಹಾಸಂಗಿಗಳ ಹಾಯ್ಕಿದನು
(೩) ಜೋಡಿ ಪದ – ಸತಿ ಪತಿ

ಪದ್ಯ ೪೨: ಯಾರ ಮುಖವು ಮಂಕಾಯಿತು?

ಇಂದುವದನೆಗೆ ದಕ್ಷಿಣಾಕ್ಷಿ
ಸ್ಪಂದವಾಯಿತು ಭೀಮ ಪಾರ್ಥರಿ
ಗಂದು ಕೆತ್ತಿತು ಹೃದಯ ವಾಮಭುಜಾಕ್ಷಿಗಳು ಸಹಿತ
ಕಂದಿದವು ಮೋರೆಗಳು ಗಂಗಾ
ನಂದನ ದ್ರೋಣಾದಿ ಸುಜನರಿ
ಗಂದವೇರಿತು ಮುಸುಡು ಶಕುನಿ ಸುಯೋಧನಾದಿಗಳ (ಸಭಾ ಪರ್ವ, ೧೪ ಸಂಧಿ, ೪೨ ಪದ್ಯ)

ತಾತ್ಪರ್ಯ:
ಧರ್ಮರಾಯನು ದ್ಯೂತವಾಡಲು ನಿಶ್ಚಯವನ್ನು ತಿಳಿದ ದ್ರೌಪದಿಯ ಬಲಗಣ್ಣು ಮಿಡಿಯಿತು, ಭೀಮಾರ್ಜುನರ ಎದೆ ನಡುಗಿತ್ತು, ಎಡಭುಜ ಎಡಕಣ್ಣುಗಳು ಹಾರಿದವು. ಭೀಷ್ಮ ದ್ರೋಣಾದಿ ಸಜ್ಜನರ ಮುಖಗಳೂ ಬಾಡಿದವು. ಶಕುನಿ ದುರ್ಯೋಧನಾದಿಗಳ ಮುಖವು ಅರಳಿದವು.

ಅರ್ಥ:
ಇಂದು: ಚಂದ್ರ; ವದನ: ಮುಖ; ದಕ್ಷಿಣ: ಬಲಭಾಗ; ಅಕ್ಷಿ: ಕಣ್ಣು; ಸ್ಪಂದ: ಮಿಡಿಯುವಿಕೆ; ಕೆತ್ತು: ನಡುಕ, ಸ್ಪಂದನ; ವಾಮ: ಎಡ; ಭುಜ: ತೋಳು, ಬಾಹು; ಸಹಿತ: ಜೊತೆ; ಕಂದು: ಕಳಾಹೀನ, ಮಸಕಾಗು; ಮೋರೆ: ಮುಖ; ಆದಿ: ಮುಂತಾದ; ಸುಜನರು: ಸತ್ಪುರುಷ; ಅಂದ: ಚೆಲುವು; ಏರು: ಹೆಚ್ಚಾಗು; ಮುಸುಡು: ಮುಖ;

ಪದವಿಂಗಡಣೆ:
ಇಂದುವದನೆಗೆ +ದಕ್ಷಿಣ+ಅಕ್ಷಿ
ಸ್ಪಂದವಾಯಿತು+ ಭೀಮ+ ಪಾರ್ಥರಿಗ್
ಅಂದು +ಕೆತ್ತಿತು +ಹೃದಯ +ವಾಮ+ಭುಜ+ಅಕ್ಷಿಗಳು +ಸಹಿತ
ಕಂದಿದವು +ಮೋರೆಗಳು +ಗಂಗಾ
ನಂದನ +ದ್ರೋಣ+ಆದಿ+ ಸುಜನರಿಗ್
ಅಂದವೇರಿತು+ ಮುಸುಡು+ ಶಕುನಿ +ಸುಯೋಧನ+ಆದಿಗಳ

ಅಚ್ಚರಿ:
(೧) ಇಂದು ಅಂದು; ಸ್ಪಂದ, ಅಂದ – ಪ್ರಾಸ ಪದಗಳು
(೨) ಮೋರೆ, ಮುಸುಡು – ಸಮನಾರ್ಥಕ ಪದ

ಪದ್ಯ ೧೫: ಭೀಮನ ಆಗಮನವು ಹೇಗಿತ್ತು?

ಉರಿಯ ಚೂಣಿಯಲುಸುರ ಹೊಗೆಯು
ಬ್ಬರಿಸುತದೆ ಕೆಂಪೇರಿದಕ್ಷಿಯ
ಲೆರಡು ಕೋಡಿಯಲೊಗುತಲದೆ ಕಿಡಿಗಳ ತುಷಾರಚಯ
ಸ್ಫುರದಹಂಕಾರಪ್ರತಾಪ
ಜ್ವರದಿ ಮೈ ಕಾಹೇರುತದೆ ನಿ
ಬ್ಬರದ ಬರವಿಂದೀತನದು ಕಲಿಕರ್ಣ ನೋಡೆಂದ (ಕರ್ಣ ಪರ್ವ, ೧೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಮನು ಹೊರಹೊಮ್ಮುತ್ತಿರುವ ಉಸಿರಿನಲ್ಲಿ ಹೊಗೆಯು ಗೋಚರವಾಗುತ್ತಿದೆ. ಕೆಂಪೇರಿದ ಕಣ್ಣುಗಳ ಎರಡು ಕೊನೆಗಳಲ್ಲೂ ಕಿಡಿಗಳು ಕಾಣುತ್ತಿವೆ. ಪರಾಕ್ರಮದ ಅಹಂಕಾರ ಜ್ವರವೇರಿ ಮೈಬಿಸಿಯಾಗಿದೆ. ಇವನ ಬರುವಿಕೆಯಲ್ಲಿ ಕಠೋರತೆಯು ಎದ್ದುಕಾಣುತ್ತಿದೆ ಎಂದು ಶಲ್ಯನು ಕರ್ಣನಿಗೆ ಹೇಳಿದನು.

ಅರ್ಥ:
ಉರಿ: ಬೆಂಕಿ; ಚೂಣಿ:ಮುಂಭಾಗ; ಉಸುರು: ಶ್ವಾಸ; ಹೊಗೆ: ಧೂಮ; ಉಬ್ಬರ: ಅತಿಶಯ, ಹೆಚ್ಚಳ; ಕಂಪು: ರಕ್ತವರ್ಣ; ಅಕ್ಷಿ: ಕಣ್ಣು; ಕೋಡಿ: ಪ್ರವಾಹ; ಒಗು: ಹೊರಹೊಮ್ಮುವಿಕೆ ; ಕಿಡಿ: ಬೆಂಕಿಯ ಜ್ವಾಲೆ; ತುಷಾರ: ತಂಪಾದ, ಶೀತಲವಾದ, ಹಿಮ; ಚಯ: ಸಮೂಹ, ರಾಶಿ, ಗುಂಪು; ಸ್ಫುರಿತ: ಹೊಳೆದ; ಅಹಂಕಾರ: ದರ್ಪ, ಗರ್ವ; ಪ್ರತಾಪ: ಪರಾಕ್ರಮ; ಜ್ವರ: ಕಾವು; ಮೈ: ತನು; ಕಾವು: ತಾಪ, ಬಿಸಿ; ಏರು: ಹೆಚ್ಚಾಗು; ನಿಬ್ಬರ: ಅತಿಶಯ, ಹೆಚ್ಚಳ, ತುಂಬಿದ; ಬರವು: ಆಗಮನ; ಕಲಿ: ಶೂರ; ನೋಡು: ವೀಕ್ಷಿಸು;

ಪದವಿಂಗಡಣೆ:
ಉರಿಯ +ಚೂಣಿಯಲ್+ಉಸುರ +ಹೊಗೆ
ಉಬ್ಬರಿಸುತದೆ +ಕೆಂಪೇರಿದ್+ಅಕ್ಷಿಯಲ್
ಎರಡು +ಕೋಡಿಯಲ್+ಒಗುತಲ್+ಅದೆ+ ಕಿಡಿಗಳ+ ತುಷಾರಚಯ
ಸ್ಫುರದ್+ಅಹಂಕಾರ+ಪ್ರತಾಪ
ಜ್ವರದಿ+ ಮೈ +ಕಾಹೇರುತದೆ+ ನಿ
ಬ್ಬರದ +ಬರವಿಂದ್+ಈತನದು +ಕಲಿಕರ್ಣ+ ನೋಡೆಂದ

ಅಚ್ಚರಿ:
(೧) ಉಸಿರು, ಕಣ್ಣು, ತನುವಿನ ತಾಪ – ಕೋಪವನ್ನು ವರ್ಣಿಸಲು ಬಳಸಿದ ಸಾಧನಗಳು