ಪದ್ಯ ೧೯: ಧೌಮ್ಯರು ಯಾವ ಸಲಹೆಯನ್ನು ನೀಡಿದರು?

ಬರಿನುಡಿಗಳೇಕಕಟ ನಿಮ್ಮಯ
ಹೊರಿಗೆಕಾರನು ಕೃಷ್ಣನಾತನ
ಮರೆಯ ಹೊಕ್ಕರಿಗುಂಟೆ ದುಃಖ ದರಿದ್ರ ಕಷ್ಟಭಯ
ಅರಿಯಿರೇ ಸೆಳೆ ಸೀರೆಯಲಿ ಸತಿ
ಯೊರಲಲಕ್ಷಯವಿತ್ತು ತನ್ನನು
ಮೆರೆದ ಮಹಿಮಾರ್ಣವನ ಭಜಿಸುವುದೆಂದನಾ ಧೌಮ್ಯ (ಅರಣ್ಯ ಪರ್ವ, ೧೭ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕೇವಲ ಮಾತುಗಳಿಂದ ಏನು ಪ್ರಯೋಜನವಿಲ್ಲ, ಕೃಷ್ಣನೇ ನಿಮ್ಮ ಆಗುಹೋಗುಗಳನ್ನು ಹೊತ್ತಿದ್ದಾನೆ. ಅವನ ಆಶ್ರಯ ಹೊಕ್ಕವರಿಗೆ ದುಃಖ ದಾರಿದ್ರ್ಯ, ಕಷ್ಟ ಭಯಗಳಿಲ್ಲ. ಹಿಂದೆ ವಸ್ತ್ರಾಪಹರಣದ ಕಾಲದಲ್ಲಿ ದ್ರೌಪದಿಯು ಮೊರೆಯಿಡಲು ಅಕ್ಷಯ ವಸ್ತ್ರವನ್ನು ಕೊಟ್ಟು ಕಾಪಾಡಿದ ಮ್ಹೈಮಾಸಮುದ್ರನನ್ನು ಭಜಿಸಿರಿ ಎಂದು ಧೌಮ್ಯರು ಸಲಹೆ ನೀಡಿದರು.

ಅರ್ಥ:
ಬರಿ: ಕೇವಲ; ನುಡಿ: ಮಾತು; ಅಕಟ: ಅಯ್ಯೋ; ಹೊರೆ: ಭಾರ; ಮರೆ: ಆಸರೆ, ಆಶ್ರಯ; ಹೊಕ್ಕು: ಸೇರು; ದುಃಖ: ದುಗುಡ; ದರಿದ್ರ: ಬಡವ, ಧನಹೀನ; ಕಷ್ಟ: ಕಠಿಣ; ಭಯ: ಅಂಜಿಕೆ; ಅರಿ: ತಿಳಿ; ಒರಲು: ಅರಚು, ಕೂಗಿಕೊಳ್ಳು; ಸೆಳೆ: ಜಗ್ಗು, ಎಳೆ; ಸೀರೆ: ವಸ್ತ್ರ; ಸತಿ: ಹೆಣ್ಣು, ಹೆಂಡತಿ; ಅಕ್ಷಯ: ನಾಶವಾಗದಿರುವ; ಮೆರೆ: ಹೊಳೆ, ಪ್ರಕಾಶಿಸು; ಮಹಿಮಾರ್ಣವ: ಮಹಾಮಹಿಮ, ಶ್ರೇಷ್ಠ; ಭಜಿಸು: ಆರಾಧಿಸು;

ಪದವಿಂಗಡಣೆ:
ಬರಿನುಡಿಗಳ್+ಏಕ್+ಅಕಟ +ನಿಮ್ಮಯ
ಹೊರಿಗೆಕಾರನು+ ಕೃಷ್ಣನ್+ಆತನ
ಮರೆಯ +ಹೊಕ್ಕರಿಗುಂಟೆ +ದುಃಖ +ದರಿದ್ರ +ಕಷ್ಟ+ಭಯ
ಅರಿಯಿರೇ +ಸೆಳೆ +ಸೀರೆಯಲಿ +ಸತಿ
ಒರಲಲ್+ಅಕ್ಷಯವಿತ್ತು +ತನ್ನನು
ಮೆರೆದ+ ಮಹಿಮಾರ್ಣವನ +ಭಜಿಸುವುದ್+ಎಂದನಾ +ಧೌಮ್ಯ

ಅಚ್ಚರಿ:
(೧) ಮರೆ, ಮೆರೆ – ಪದಗಳ ಬಳಕೆ
(೨) ಕೃಷ್ಣನ ಹಿರಿಮೆ – ಆತನ ಮರೆಯ ಹೊಕ್ಕರಿಗುಂಟೆ ದುಃಖ ದರಿದ್ರ ಕಷ್ಟಭಯ

ಪದ್ಯ ೧೪೦: ಕೃಷ್ಣನು ದ್ರೌಪದಿಯನ್ನು ಹೇಗೆ ರಕ್ಷಿಸಿದ?

ಕ್ರೂರ ದುರ್ಯೋಧನನು ದ್ರುಪದ ಕು
ಮಾರಿ ಪಾಂಚಾಲೆಯನು ಸಭೆಯಲಿ
ಸೀರೆಯನು ಸುಲಿಯಲ್ಕೆ ಕಾಯೈಕೃಷ್ಣ ಎಂದೆನುತ
ನಾರಿಯೊರಲುತ್ತಿಹಳುವುಟ್ಟಾ
ಸೀರೆ ಸೆಳೆಯಲು ಬಳಿಕಲಕ್ಷಯ
ಸೀರೆಯಾಗಲಿಯೆಂದ ಗದುಗಿನ ವೀರನಾರಾಯಣ (ಸಭಾ ಪರ್ವ, ೧೫ ಸಂಧಿ, ೧೪೦ ಪದ್ಯ)

ತಾತ್ಪರ್ಯ:
ರುಕ್ಮಣಿ ದೇವಿಯೇ ಕೇಳು, ಹಸ್ತಿನಾಪುರದಲ್ಲಿ ಪಾಂಡವರು ಜೂಜಿನಲ್ಲಿ ಸೋತರು, ಅವರ ಸರ್ವಸ್ವವನ್ನು ಕಳೆದುಕೊಂಡರು. ದುಷ್ಟನಾದ ದುರ್ಯೋಧನನು ತುಂಬಿದ ಸಭೆಯಲ್ಲಿ ದ್ರೌಪದಿಯ ಸೀರೆಯನ್ನು ಸೆಳೆಯಲು ಮುಂದಾದನು, ದ್ರೌಪದಿಯು ನನ್ನಲ್ಲಿ ಮೊರೆಯಿಟ್ಟು ತನ್ನನ್ನು ರಕ್ಷಿಸಬೇಕೆಂದು ಬೇಡಿದಳು, ನಾನು ಅವಳ ಸೀರೆಯು ಅಕ್ಷಯವಾಗಲಿ ಎಂದು ಹೇಳಿದೆ ಎಂದು ಕೃಷ್ಣನು ವಿವರಿಸಿದನು.

ಅರ್ಥ:
ಕ್ರೂರ: ದುಷ್ಟ; ಕುಮಾರಿ: ಸುತೆ, ಮಗಳು; ಸಭೆ: ಓಲಗ; ಸೀರೆ: ಬಟ್ಟೆ, ಅಂಬರ; ಸುಲಿ: ಸೆಳೆ, ಎಳೆ; ಕಾಯೈ: ಕಾಪಾಡು; ನಾರಿ: ಹೆಣ್ಣು; ಒರಲು: ಕೂಗು; ಉಟ್ಟ: ತೊಟ್ಟ; ಅಕ್ಷಯ: ಕ್ಷಯವಿಲ್ಲದುದು, ಬರಿದಾ ಗದುದು;

ಪದವಿಂಗಡಣೆ:
ಕ್ರೂರ +ದುರ್ಯೋಧನನು +ದ್ರುಪದ +ಕು
ಮಾರಿ +ಪಾಂಚಾಲೆಯನು+ ಸಭೆಯಲಿ
ಸೀರೆಯನು +ಸುಲಿಯಲ್ಕೆ +ಕಾಯೈ+ಕೃಷ್ಣ+ ಎಂದೆನುತ
ನಾರಿ+ಒರಲುತ್ತಿಹಳುವ್+ಉಟ್ಟಾ
ಸೀರೆ +ಸೆಳೆಯಲು +ಬಳಿಕ್+ಅಕ್ಷಯ
ಸೀರೆಯಾಗಲಿಯೆಂದ +ಗದುಗಿನ+ ವೀರನಾರಾಯಣ

ಅಚ್ಚರಿ:
(೧) ದ್ರೌಪದಿಯನ್ನು ದ್ರುಪದ ಕುಮಾರಿ ಎಂದು ಕರೆದಿರುವುದು
(೨) ಸೀರೆ – ೨, ೫,೬ ಸಾಲಿನ ಮೊದಲನೇ ಪದ
(೩) ನಾರಿ, ಕುಮಾರಿ – ಪ್ರಾಸ ಪದ

ಪದ್ಯ ೧೩೬: ಕೃಷ್ಣನು ಸತ್ಯಭಾಮೆಯ ಪ್ರಶ್ನೆಗೆ ಹೇಗೆ ಉತ್ತರಿಸಿದನು?

ಕೌರವರು ಜೂಜಿನಲಿ ನಾರಿಯ
ಸೀರೆಯನು ಸುಲಿಯಲ್ಕೆ ಮೊರೆಯಿಡೆ
ನಾರಿಗಕ್ಷಯ ವಸ್ತ್ರವಾಗಲಿಯೆನ್ನ ನೆನೆದುದಕೆ
ಆರದೆನ್ನನು ನೆನೆವರವರಿಗೆ
ಧಾರಕನು ತಾನಹೆನು ಕೇಳೆಲೆ
ನಾರಿ ಬೇರೊಂದಿಲ್ಲವೆಂದನು ಶೌರಿ ನಸುನಗುತ (ಸಭಾ ಪರ್ವ, ೧೫ ಸಂಧಿ, ೧೩೬ ಪದ್ಯ)

ತಾತ್ಪರ್ಯ:
ಸತ್ಯಭಾಮೆಯ ಪ್ರಶ್ನೆಗೆ ಉತ್ತರಿಸುತ್ತಾ, ಎಲೈ ಸತ್ಯಭಾಮೆ, ಕೌರವರು ಪಾಂಡವರನ್ನು ದ್ಯೂತದಲ್ಲಿ ಸೋಲಿಸಿ ದ್ರೌಪದಿಯನ್ನು ಸೋತರು, ಕೌರವರು ದ್ರೌಪದಿಯ ಸೀರೆಯನ್ನು ಸುಲಿಯಲಾರಂಭಿಸಿದರು, ದ್ರೌಪದಿಯು ನನ್ನಲ್ಲಿ ಮೊರೆಯಿಡಲು ನಾನು ಅಕ್ಷಯವಾಗಲಿ ಎಂದೆನು. ಸತ್ಯಭಾಮೆ, ಕೇಳು ಅಸಹಾಯಕರಾಗಿ ಯಾರು ನನ್ನನ್ನು ನೆನೆಯುವರೋ ಅವರನ್ನು ನಾನು ಕಾಪಾಡುತ್ತೇನೆ, ಇನ್ನೇನೂ ಇಲ್ಲ ಎಂದು ನಗುತ ಉತ್ತರಿಸಿದನು.

ಅರ್ಥ:
ಜೂಜು: ದ್ಯೂತ; ನಾರಿ: ಹೆಣ್ಣು; ಸೀರೆ: ವಸ್ತ್ರ; ಸುಲಿ: ಕಳಚು, ತೆಗೆ; ಮೊರೆ: ಅಳಲು, ಕೂಗು; ಅಕ್ಷಯ: ಕ್ಷಯವಿಲ್ಲದುದು, ಬರಿದಾ ಗದುದು; ವಸ್ತ್ರ: ಬಟ್ಟೆ; ನೆನೆ: ಜ್ಞಾಪಿಸು; ಧಾರಕ: ಆಧಾರವಾದುದು; ಕೇಳು: ಆಲಿಸು; ಬೇರೆ: ಅನ್ಯ; ಶೌರಿ: ಕೃಷ್ಣ; ನಗು: ಸಂತಸ;

ಪದವಿಂಗಡಣೆ:
ಕೌರವರು+ ಜೂಜಿನಲಿ +ನಾರಿಯ
ಸೀರೆಯನು +ಸುಲಿಯಲ್ಕೆ +ಮೊರೆಯಿಡೆ
ನಾರಿಗ್+ಅಕ್ಷಯ +ವಸ್ತ್ರವಾಗಲಿ+ಎನ್ನ +ನೆನೆದುದಕೆ
ಆರದ್+ಎನ್ನನು +ನೆನೆವರ್+ಅವರಿಗೆ
ಧಾರಕನು +ತಾನಹೆನು +ಕೇಳೆಲೆ
ನಾರಿ+ ಬೇರೊಂದಿಲ್ಲವ್+ಎಂದನು +ಶೌರಿ +ನಸುನಗುತ

ಅಚ್ಚರಿ:
(೧) ನಾರಿ – ದ್ರೌಪದಿ ಮತ್ತು ಸತ್ಯಭಾಮೆಯನ್ನು ಕರೆದ ಪರಿ
(೨) ಕೃಷ್ಣನ ಅಭಯ ನುಡಿ – ಆರದೆನ್ನನು ನೆನೆವರವರಿಗೆ ಧಾರಕನು ತಾನಹೆನು

ಪದ್ಯ ೧೩೫: ಸತ್ಯಭಾಮೆ ಕೃಷ್ಣನನ್ನು ಏನೆಂದು ಪ್ರಶ್ನಿಸಿದಳು?

ಸತಿ ನೆಗಹಿದಳು ನೆತ್ತವನು ಗಣಿ
ಸುತಲಿ ನೋಡಿದಳೆಣಿಕೆಯೊಳಗಿ
ಲ್ಲತಿಶಯದ ನುಡಿಯಕ್ಷಯವದೆಂದೆಂಬ ವಾಕ್ಯವಿದು
ಮತಿಗೆ ಗೋಚರವಲ್ಲ ಈ ಸಂ
ಗತಿಗೆ ಬಾರದು ದೇವವಾಕ್ಯ
ಸ್ಥಿತಿಯ ಪಲ್ಲಟವೆನುತ ಮಿಗೆ ಬೆಸಗೊಂಡಳಾ ಹರಿಯ (ಸಭಾ ಪರ್ವ, ೧೫ ಸಂಧಿ, ೧೩೫ ಪದ್ಯ)

ತಾತ್ಪರ್ಯ:
ಕೃಷ್ಣನು ಅಕ್ಷಯ ಎಂಬ ಪದವನ್ನುಚ್ಚರಿಸಲು ತಬ್ಬಿಬ್ಬಾದ ಸತ್ಯಭಾಮೆ ದಾಳಗಳನ್ನು ಎತ್ತಿ ಎಲ್ಲಾ ಕಡೆಗೂ ನೋಡಿ, ಇದೇನು, ಇವುಗಳ ಯಾವ ಪಕ್ಕದಲ್ಲೂ ಅಕ್ಷಯವೆಂಬ ಮಾತನ್ನು ಬರೆದಿಲ್ಲ. ಆದರೂ ನೀನು ಅಕ್ಷಯವೆನ್ನುತಿರುವೆ, ನಿನ್ನ ಮಾತು ಹೀಗೇಕೆ ಬಂದಿತೆಂದು ಕೇಳಿದಳು.

ಅರ್ಥ:
ಸತಿ: ಹೆಂಡತಿ; ನೆಗಹು: ಮೇಲೆತ್ತು; ನೆತ್ತ: ಪಗಡೆಯ ದಾಳ; ಗಣಿ: ಮೂಲ ಸ್ಥಾನ; ನೋಡು: ವೀಕ್ಷಿಸು; ಎಣಿಕೆ: ಲೆಕ್ಕ; ಅತಿಶಯ: ಹೆಚ್ಚು; ನುಡಿ: ಮಾತು; ಅಕ್ಷಯ: ಕ್ಷಯವಿಲ್ಲದುದು, ಬರಿದಾ ಗದುದು; ವಾಕ್ಯ: ಮಾತು; ಮತಿ: ಬುದ್ಧಿ; ಗೋಚರ: ಕಾಣುವುದು; ಸಂಗತಿ: ವಿಷಯ; ಸ್ಥಿತಿ: ರೀತಿ, ಅವಸ್ಥೆ; ಪಲ್ಲಟ: ಬದಲಾವಣೆ, ಮಾರ್ಪಾಟು; ಮಿಗೆ: ಮತ್ತು, ಅಧಿಕವಾಗಿ; ಬೆಸ: ವಿಚಾರಿಸುವುದು, ಪ್ರಶ್ನಿಸುವುದು; ಹರಿ: ವಿಷ್ಣು, ಕೃಷ್ಣ;

ಪದವಿಂಗಡಣೆ:
ಸತಿ+ ನೆಗಹಿದಳು +ನೆತ್ತವನು +ಗಣಿ
ಸುತಲಿ +ನೋಡಿದಳ್+ಎಣಿಕೆಯೊಳಗಿಲ್ಲ್
ಅತಿಶಯದ +ನುಡಿ+ಅಕ್ಷಯವ್+ಅದೆಂದ್+ಎಂಬ +ವಾಕ್ಯವಿದು
ಮತಿಗೆ +ಗೋಚರವಲ್ಲ+ ಈ +ಸಂ
ಗತಿಗೆ+ ಬಾರದು +ದೇವ+ವಾಕ್ಯ
ಸ್ಥಿತಿಯ +ಪಲ್ಲಟವೆನುತ +ಮಿಗೆ +ಬೆಸಗೊಂಡಳಾ +ಹರಿಯ

ಅಚ್ಚರಿ:
(೧) ಸತಿ, ಮತಿ, ಗತಿ, ಸ್ಥಿತಿ – ಪ್ರಾಸ ಪದಗಳು
(೨) ಸತ್ಯಭಾಮೆಯ ಪ್ರಶ್ನೆ – ಅತಿಶಯದ ನುಡಿಯಕ್ಷಯವದೆಂದೆಂಬ ವಾಕ್ಯವಿದು

ಪದ್ಯ ೧೩೪: ಶ್ರೀಕೃಷ್ಣನು ಆಟದ ಮಧ್ಯೆ ಯಾವ ಪದವನ್ನು ಪ್ರಯೋಗಿಸಿದನು?

ಹರಿಯ ಚಿತ್ತದ ದುಗುಡವನು ತಾ
ನರಿದು ಸತ್ರಾಜಿತನ ಸುತೆಯಂ
ದುರುತರದ ದುಗುಡವನು ಪರಿಹರಿಪನುವ ನೆನೆದಾಗ
ವಿರಚಿಸಿದಳೊಲವಿನಲಿ ಸಾರಿಯ
ನಿರದೆ ಹಾಸಂಗಿಗಳ ಢಾಳಿಸಿ
ಸರಿಬೆಸನೊ ಹೇಳೆಂದುದಕ್ಷಯವೆಂದನಾ ಸತಿಗೆ (ಸಭಾ ಪರ್ವ, ೧೫ ಸಂಧಿ, ೧೩೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಮುಖಭಾವದಲ್ಲಿ ದುಃಖವನ್ನು ಕಂಡ ಸತ್ಯಭಾಮೆಯು ಅವನ ದುಃಖವನ್ನು ಹೋಗಲಾಡಿಸಲು ಪಗಡೆಯ ಹಾಸನ್ನು ಹಾಕಿ ಕಾಯಿಗಳನ್ನು ಹೂಡಿ, ದಾಳಗಳನ್ನಿಟ್ಟು ಈಗ ಸರಿ ಸಂಖ್ಯೆಯೋ ಬೆಸ ಸಂಖ್ಯೆಯೋ ಎಂದು ಕೃಷ್ಣನನ್ನು ಕೇಳಲು ಅವನು ಅಕ್ಷಯ ಎಂದು ಹೆಂಡತಿಗೆ ಉತ್ತರಿಸಿದನು.

ಅರ್ಥ:
ಹರಿ: ಕೃಷ್ಣ; ಚಿತ್ತ: ಮನಸ್ಸು; ದುಗುಡ: ದುಃಖ; ಅರಿ: ತಿಳಿ; ಸುತೆ: ಮಗಳು; ದುರುತರ: ಹೆಚ್ಚಿನ; ಪರಿಹರಿಸು: ನಿವಾರಣೆ, ಹೋಗಲಾಡಿಸು; ನೆನೆ: ಸ್ಮರಿಸು, ವಿಚಾರಿಸು; ವಿರಚಿಸು: ರಚಿಸು, ನಿರ್ಮಿಸು; ಒಲವು: ಪ್ರೀತಿ; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಹಾಸಂಗಿ: ಪಗಡೆಯ ಹಾಸು; ಢಾಳಿಸು: ಕಾಂತಿಗೊಳ್ಳು; ಸರಿ: ಸಮಸಂಖ್ಯೆ; ಬೆಸ: ವಿಷಮ ಸಂಖ್ಯೆ; ಹೇಳು: ತಿಳಿಸು; ಅಕ್ಷಯ: ಕ್ಷಯವಿಲ್ಲದುದು, ಬರಿದಾ ಗದುದು; ಸತಿ: ಹೆಂಡತಿ;

ಪದವಿಂಗಡಣೆ:
ಹರಿಯ+ ಚಿತ್ತದ +ದುಗುಡವನು +ತಾನ್
ಅರಿದು +ಸತ್ರಾಜಿತನ +ಸುತೆಯಂ
ದುರುತರದ +ದುಗುಡವನು +ಪರಿಹರಿಪನುವ +ನೆನೆದಾಗ
ವಿರಚಿಸಿದಳ್+ಒಲವಿನಲಿ +ಸಾರಿಯ
ನಿರದೆ+ ಹಾಸಂಗಿಗಳ +ಢಾಳಿಸಿ
ಸರಿ+ಬೆಸನೊ +ಹೇಳೆಂದುದ್+ಅಕ್ಷಯವೆಂದನಾ+ ಸತಿಗೆ

ಅಚ್ಚರಿ:
(೧) ಹರಿ, ಅರಿ, ಸರಿ – ಪ್ರಾಸ ಪದಗಳು
(೨) ಸತ್ಯಭಾಮೆಯನ್ನು ಸತ್ರಾಜಿತನ ಸುತೆೆ ಎಂದು ಕರೆದಿರುವುದು