ಪದ್ಯ ೭೦: ಶಿವನು ವಾಮದೇವನ ರೂಪದಲ್ಲಿ ಹೇಗೆ ಶೋಭಿಸಿದನು?

ಹೊಳೆಪ ಕುಂಕುಮ ಕಾಂತಿಯಲಿ ಥಳ
ಥಳಿಪ ತನು ಗಜಚರ್ಮದುಡುಗೆಯ
ಲಲಿತ ದಂತ ಪ್ರಭೆಯ ದರಹಸಿತಾನನಾಂಬುಜದ
ವಿಲಸಿತಾಭಯ ವರದಕರ ಪರಿ
ಲುಳಿತ ಪರಶು ದೃಢಾಕ್ಷಮಾಲಾ
ವಳಿಗಳೊಪ್ಪಿರೆ ವಾಮದೇವಾನನದಿ ರಂಜಿಸಿದ (ಅರಣ್ಯ ಪರ್ವ, ೭ ಸಂಧಿ, ೭೦ ಪದ್ಯ)

ತಾತ್ಪರ್ಯ:
ಕುಂಕುಮ ಕಾಂತಿಯಿಂದ ಥಳಥಳಿಸಿ ಹೊಳೆಯುವ ದೇಹ ಪ್ರಭೆ ಗಜಚರ್ಮದ ಉಡಿಗೆ, ಸುಂದರವಾದ ದಂತಗಳ ಪ್ರಭೆ, ನಗುವುನಿಂದರಳಿದ ಮುಖಕಮಲ, ಅಭಯ ವರದ ಕರಗಳು, ಗಂಡುಗೊಡಲಿ ಅಕ್ಷಮಾಲೆಗಳು ಶೋಭಿಸುತ್ತಿರಲು ಶಿವನು ವಾಮದೇವ ಮುಖದಿಂದ ಶೋಭಿಸಿದನು.

ಅರ್ಥ:
ಹೊಳೆ: ಪ್ರಕಾಶಿಸು; ಕುಂಕುಮ: ಕೆಂಪು; ಕಾಂತಿ: ಪ್ರಕಾಶ; ಥಳಥಳ:ಹೊಳೆವ; ತನು: ದೇಹ; ಗಜ: ಆನೆ; ಚರ್ಮ: ದೊಗಲು; ಉಡುಗೆ: ವಸ್ತ್ರ, ಬಟ್ಟೆ; ಲಲಿತ: ಸುಂದರ, ಚೆಲುವು; ದಂತ: ಹಲ್ಲು; ಪ್ರಭೆ: ಪ್ರಕಾಶ; ದರ: ಸ್ವಲ್ಪ, ಕೊಂಚ, ನಸು; ಹಸಿತ: ನಗೆ, ಹಾಸ; ಆನನ: ಮುಖ; ಅಂಜುಜ: ಕಮಲ; ವಿಲಸಿತ: ಅರಳಿದ, ಶುದ್ಧ; ಅಭಯ: ನಿರ್ಭಯತೆ; ವರ: ಶ್ರೇಷ್ಠ, ಅನುಗ್ರಹ; ಕರ: ಹಸ್ತ; ಪರಿಲುಳಿತ: ಸೇರಿದ; ಪರಶು: ಕೊಡಲಿ, ಕುಠಾರ; ದೃಢ: ಗಟ್ಟಿಯಾದುದು; ಅಕ್ಷಮಾಲೆ: ಜಪಮಾಲೆ; ಆವಳಿ: ಸಾಲು, ಗುಂಪು; ಒಪ್ಪು: ಚೆಲವು, ಹಿರಿಮೆ; ವಾಮದೇವ: ಸುಂದರಪುರುಷ-ಶಿವ; ರಂಜಿಸು: ಹೊಳೆ, ಪ್ರಕಾಶಿಸು;

ಪದವಿಂಗಡಣೆ:
ಹೊಳೆಪ +ಕುಂಕುಮ +ಕಾಂತಿಯಲಿ +ಥಳ
ಥಳಿಪ +ತನು +ಗಜಚರ್ಮದ್+ಉಡುಗೆಯ
ಲಲಿತ +ದಂತ+ ಪ್ರಭೆಯ+ದರ+ಹಸಿತ+ಆನನ+ಅಂಬುಜದ
ವಿಲಸಿತ+ಅಭಯ +ವರದಕರ +ಪರಿ
ಲುಳಿತ +ಪರಶು +ದೃಢ+ಅಕ್ಷಮಾಲಾ
ವಳಿಗಳ್+ಒಪ್ಪಿರೆ +ವಾಮದೇವ+ಆನನದಿ +ರಂಜಿಸಿದ

ಅಚ್ಚರಿ:
(೧) ಶಿವನು ತೋರಿದ ಪರಿ – ಹೊಳೆಪ ಕುಂಕುಮ ಕಾಂತಿಯಲಿ ಥಳಥಳಿಪ ತನು ಗಜಚರ್ಮದುಡುಗೆಯ ಲಲಿತ ದಂತ ಪ್ರಭೆಯ ದರಹಸಿತಾನನಾಂಬುಜದ

ಪದ್ಯ ೬೯: ಶಿವನು ಯಾವ ರೂಪದಲ್ಲಿ ದರುಶನವನ್ನು ನೀಡಿದನು?

ಬಲಿದ ಚಂದ್ರಿಕೆಯೆರಕವೆನೆ ತೊಳ
ತೊಳಗಿ ಬೆಳಗುವ ಕಾಯಕಾಂತಿಯ
ಪುಲಿದೊಗಲ ಕೆಂಜಡೆಯ ಕೇವಣರಿಂದು ಫಣಿಪತಿಯ
ಹೊಳೆವ ಹರಿಣನಕ್ಷಮಾಲಾ
ವಲಯಾಭಯ ವರದಕರ ಪರಿ
ಕಲಿತನೆಸೆದನು ಶಂಭುಸದ್ಯೋಜಾತ ರೂಪಿನಲಿ (ಅರಣ್ಯ ಪರ್ವ, ೭ ಸಂಧಿ, ೬೯ ಪದ್ಯ)

ತಾತ್ಪರ್ಯ:
ಚೆನ್ನಾಗಿ ಬೆಳೆದ ಚಂದ್ರನ ಬೆಳುದಿಂಗಳಿನಂತೆ ಹೊಳೆಹೊಳೆಯುವ ಕಾಂತಿ, ವ್ಯಾಘ್ರಾಜಿನ, ಕೆಂಜೆಡೆಯಲ್ಲಿ ಸೇರಿಸಿದ ಚಂದ್ರ, ನಾಗರಾಜನನ್ನು ಭೂಷಣವಾಗಿ ತೋರುವ, ಕೈಯಲ್ಲಿ ಹಿಡಿದ ಜಿಂಕೆ, ಕೊರಳಲ್ಲಿ ಧರಿಸಿದ ಮಣಿಮಾಲೆ, ವರದ ಅಭಯ ಮುದ್ರೆಯನ್ನು ತೋರಿಸುವ ಕೈಗಳು, ಇವುಗಳಿಂದ ಶಿವನು ಸದ್ಯೋಜಾತ ರೂಪಿನಿಂದ ದರುಶನವನ್ನಿತ್ತನು.

ಅರ್ಥ:
ಬಲಿದ: ಚೆನ್ನಾಗಿ ಬೆಳೆದ; ಚಂದ್ರಿಕೆ: ಬೆಳದಿಂಗಳು; ಎರಕ: ಸುರಿ, ತುಂಬು; ತೊಳತೊಳಗು: ಹೊಳೆವ; ಬೆಳಗು: ಹೊಳಪು, ಕಾಂತಿ; ಕಾಯ: ದೇಹ; ಕಾಂತಿ: ಹೊಳಪು; ಪುಲಿ: ಹುಲಿ; ದೊಗಲು: ಚರ್ಮ; ಕೆಂಜಡೆ: ಕೆಂಪಾದ ಜಟೆ; ಕೇವಣ: ಕುಂದಣ, ಕೂಡಿಸುವುದು; ಫಣಿಪತಿ: ನಾಗರಾಜ; ಹೊಳೆ: ಪ್ರಕಾಶಿಸು; ಹರಿಣ: ಜಿಂಕೆ; ಅಕ್ಷಮಾಲ: ಜಪಮಾಲೆ; ವಲಯ: ಕಡಗ, ಬಳೆ; ಅಭಯ: ನಿರ್ಭಯತೆ; ವರ: ಶ್ರೇಷ್ಠ; ಕರ: ಹಸ್ತ; ಪರಿಕಲಿತ: ಕೂಡಿದುದು, ಸೇರಿದುದು; ಎಸೆ: ತೋರು; ಶಂಭು: ಶಂಕರ; ಸದ್ಯೋಜಾತ: ಶಿವನ ಪಂಚಮುಖಗಳಲ್ಲಿ ಒಂದು; ರೂಪ: ಆಕಾರ;

ಪದವಿಂಗಡಣೆ:
ಬಲಿದ +ಚಂದ್ರಿಕೆ+ಎರಕವೆನೆ +ತೊಳ
ತೊಳಗಿ +ಬೆಳಗುವ +ಕಾಯ+ಕಾಂತಿಯ
ಪುಲಿದೊಗಲ+ ಕೆಂಜಡೆಯ +ಕೇವಣರಿಂದು +ಫಣಿಪತಿಯ
ಹೊಳೆವ +ಹರಿಣನ್+ಅಕ್ಷಮಾಲಾ
ವಲಯ+ಅಭಯ +ವರದ+ಕರ +ಪರಿ
ಕಲಿತನ್+ಎಸೆದನು +ಶಂಭು+ಸದ್ಯೋಜಾತ +ರೂಪಿನಲಿ

ಅಚ್ಚರಿ:
(೧) ಶಿವನ ರೂಪವನ್ನು ವರ್ಣಿಸುವ ಪರಿ – ಬಲಿದ ಚಂದ್ರಿಕೆಯೆರಕವೆನೆ ತೊಳ
ತೊಳಗಿ ಬೆಳಗುವ ಕಾಯಕಾಂತಿಯಪುಲಿದೊಗಲ ಕೆಂಜಡೆಯ ಕೇವಣರಿಂದು ಫಣಿಪತಿಯ