ಪದ್ಯ ೯: ವೈಶಂಪಾಯನರು ಭಾರತ ಗ್ರಂಥವನ್ನು ಹೇಗೆ ಪೂಜಿಸಿದರು?

ವಿತತ ಪುಸ್ತಕವನು ಸುಗಂಧಾ
ಕ್ಷತೆಯೊಳರ್ಚಿಸಿ ಸೋಮ ಸೂರ್ಯ
ಕ್ಷಿತಿ ಜಲಾನಲ ವಾಯು ಗಗನಾದಿಗಳಿಗಭಿನಮಿಸಿ
ಶ್ತಮಖಾದಿ ಸಮಸ್ತ ದೇವ
ಪ್ರತಿಗೆರಗಿ ಸರೋಜಭವ ಪಶು
ಪತಿಗಳಿಗೆ ಕೈ ಮುಗಿದು ವಿಮಲಜ್ಞಾನ ಮುದ್ರೆಯಲಿ (ಆದಿ ಪರ್ವ, ೨ ಸಂಧಿ, ೯ ಪದ್ಯ)

ತಾತ್ಪರ್ಯ:
ವೈಶಂಪಾಯನ ಮಹರ್ಷಿಯು ಮಹತಾದ ಭಾರತ ಗ್ರಂಥವನ್ನು ಉತ್ತಮ ಗಂಧಾಕ್ಷತೆಗಳಿಂದ ಪೂಜಿಸಿದನು. ಬಳಿಕ ಸೂರ್ಯಚಂದ್ರರು ಭೂಮಿ, ನೀರು, ಅಗ್ನಿ, ವಾಯು, ಆಕಾಶಗಳೆಂಬ ಪಂಚಮಹಾಭೂತಗಳಿಗೆ ನಮಸ್ಕರಿಸಿದನು. ಇಂದ್ರನೇ ಮೊದಲಾದ ಸಮಸ್ತದೇವತೆಗಳಿಗೂ, ಬ್ರಹ್ಮ, ಶಿವರಿಗೂ ನಮಸ್ಕರಿಸಿ ಜ್ಞಾನಮುದ್ರೆಯನು ಧರಿಸಿದನು.

ಅರ್ಥ:
ವಿತತ: ವಿಸ್ತಾರವಾದ; ಪುಸ್ತಕ: ಗ್ರಂಥ; ಗಂಧ: ಚಂದನ; ಅಕ್ಷತೆ: ಅರಿಸಿನ ಅಥವಾ ಕುಂಕುಮ ಲೇಪಿತ ಮಂತ್ರಿತ ಅಕ್ಕಿ; ಅರ್ಚಿಸು: ಪೂಜಿಸು; ಸೋಮ: ಚಂದ್ರ; ಸೂರ್ಯ: ರವಿ; ಕ್ಷಿತಿ: ಭೂಮಿ; ಜಲ: ನೀರು; ಅನಲ: ಅಗ್ನಿ; ವಾಯು: ಗಾಳಿ; ಗಗನ: ಆಗಸ; ಆದಿ: ಮೊದಲಾದ; ಅಭಿನಮಿಸು: ನಮಸ್ಕರಿಸು; ಶತ: ನೂರು; ಮಖ: ಯಾಗ, ಯಜ್ಞ; ಆದಿ: ಮೊದಲಾದ; ಸಮಸ್ತ: ಎಲ್ಲಾ; ದೇವ: ಭಗವಂತ; ಪ್ರತತಿ: ಗುಂಪು, ಸಮೂಹ; ಎರಗು: ನಮಸ್ಕರಿಸು; ಸರೋಜಭವ: ಬ್ರಹ್ಮ; ಸರೋಜ: ಕಮಲ; ಪಶುಪತಿ: ಶಿವ; ಕೈಮುಗಿ: ನಮಸ್ಕರಿಸು; ವಿಮಲ: ನಿರ್ಮಲ; ಜ್ಞಾನ: ತಿಳಿವಳಿಕೆ, ಅರಿವು; ಮುದ್ರೆ: ಚಿಹ್ನೆ;

ಪದವಿಂಗಡಣೆ:
ವಿತತ +ಪುಸ್ತಕವನು +ಸುಗಂಧ
ಅಕ್ಷತೆಯೊಳ್+ಅರ್ಚಿಸಿ +ಸೋಮ +ಸೂರ್ಯ
ಕ್ಷಿತಿ+ ಜಲ+ಅನಲ +ವಾಯು +ಗಗನಾದಿಗಳಿಗ್+ಅಭಿನಮಿಸಿ
ಶತ+ಮಖಾದಿ +ಸಮಸ್ತ+ ದೇವ
ಪ್ರತಿಗ್+ಎರಗಿ +ಸರೋಜಭವ +ಪಶು
ಪತಿಗಳಿಗೆ +ಕೈ+ ಮುಗಿದು+ ವಿಮಲ+ಜ್ಞಾನ+ ಮುದ್ರೆಯಲಿ

ಅಚ್ಚರಿ:
(೧) ಕೈಮುಗಿ, ಎರಗ, ಅಭಿನಮಿಸು – ಸಾಮ್ಯಾರ್ಥ ಪದ

ಪದ್ಯ ೭೭: ಅಭಿಮನ್ಯುವಿನ ಮದುವೆ ಹೇಗೆ ನಡೆಯಿತು?

ವರಮುಹೂರ್ತದ ಗಳಿಗೆವಟ್ಟಲ
ಭರಿತದೊಳು ಪುಣ್ಯಾಹ ರವ ವಿ
ಸ್ತರದೊಳಕ್ಷತೆ ತಳಿದು ತಂದರು ವಿಮಳ ಮಂಟಪಕೆ
ಪರಮ ಋಷಿಗಳ ಹೋಮದಲಿ ಶಿಖಿ
ವರನ ಬಲಗೊಂಡರು ಕುಮಾರಿಯ
ವರಿಸೆ ವೈದಿಕದಿಂದ ಬಂದಳು ವರನ ವಾಮದಲಿ (ವಿರಾಟ ಪರ್ವ, ೧೧ ಸಂಧಿ, ೭೭ ಪದ್ಯ)

ತಾತ್ಪರ್ಯ:
ಮುಹೂರ್ತವನ್ನು ಕಂಡುಹಿಡಿಯಲು ಗಳಿಗೆ ಬಟ್ಟಲನ್ನು ತುಂಬಿದರು. ಪುಣ್ಯಾಹವಾಚನದ ಮಂಗಳ ಶಬ್ದ ಸುತ್ತಲೂ ಹರಡಿತು. ವಧೂವರರನ್ನು ಮಂಟಪಕ್ಕೆ ಕರೆತಂದು ಅಕ್ಷತಾರೋಪಣ ಮಾಡಿದರು. ಅಗ್ನಿಯನ್ನು ಪ್ರದಕ್ಷಿಣೆ ಮಾಡಿ ಅಭಿಮನ್ಯುವು ಉತ್ತರೆಯನ್ನು ವರಿಸಿದನು. ಅವಳು ಹಸೆಮಣೆಯ ಮೇಲೆ ಅಭಿಮನ್ಯುವಿನ ಎಡಭಾಗದಲ್ಲಿ ಕುಳಿತಳು.

ಅರ್ಥ:
ವರ: ಶ್ರೇಷ್ಠ; ಮುಹೂರ್ತ: ಸಮಯ; ಗಳಿಗೆ: ಸಮಯ; ಭರಿತ: ತುಂಬಿದ; ಪುಣ್ಯ: ಸದಾಚಾರ; ರವ: ಶಬ್ದ; ವಿಸ್ತರ: ವ್ಯಾಪ್ಯ, ಹಬ್ಬುಗೆ, ವಿಸ್ತಾರ; ಅಕ್ಷತೆ: ಅರಿಸಿನ ಅಥವಾ ಕುಂಕುಮ ಲೇಪಿತ ಮಂತ್ರಿತ ಅಕ್ಕಿ; ತಳಿ: ಚಿಮುಕಿಸು; ತಂದು: ಬರೆಮಾಡು; ವಿಮಳ: ನಿರ್ಮಲ; ಮಂಟಪ: ಸಭಾಸ್ಥಾನ, ಓಲಗಶಾಲೆ; ಪರಮ: ಶ್ರೇಷ್ಠ; ಋಷಿ: ಮುನಿ; ಹೋಮ: ಕ್ರತು, ಯಜ್ಞ; ಶಿಖಿ: ಅಗ್ನಿ; ಬಲ: ಬಿಗಿ, ಗಟ್ಟಿ; ಕುಮಾರಿ: ಕನ್ಯೆ; ವರಿಸು: ವಿವಾಹವಾಗು; ವೈದಿಕ: ವೇದೋಕ್ತ; ಬಂದಳು: ಆಗಮಿಸು; ವರ: ಮದುವೆಯ ಗಂಡು; ವಾಮ: ಎಡಭಾಗ; ವಟ್ಟಲು: ಬಟ್ಟಲು;

ಪದವಿಂಗಡಣೆ:
ವರ+ಮುಹೂರ್ತದ +ಗಳಿಗೆ+ವಟ್ಟಲ
ಭರಿತದೊಳು+ ಪುಣ್ಯಾಹ +ರವ +ವಿ
ಸ್ತರದೊಳ್+ಅಕ್ಷತೆ +ತಳಿದು +ತಂದರು +ವಿಮಳ+ ಮಂಟಪಕೆ
ಪರಮ +ಋಷಿಗಳ+ ಹೋಮದಲಿ+ ಶಿಖಿ
ವರನ+ ಬಲಗೊಂಡರು+ ಕುಮಾರಿಯ
ವರಿಸೆ+ ವೈದಿಕದಿಂದ +ಬಂದಳು +ವರನ+ ವಾಮದಲಿ

ಅಚ್ಚರಿ:
(೧) ವರ, ಶಿಖಿವರ – ಪದಗಳ ಬಳಕೆ
(೨) ವರ, ಪರಮ – ಸಮನಾರ್ಥಕ ಪದ

ಪದ್ಯ ೬೬: ಅರ್ಜುನನನ್ನು ಯಾರು ಹರಸಿದರು?

ಅರಸ ಕಳುಹಿದನಿಂದ್ರಸೂತನ
ನರಮನೆಗೆ ಬಂದನು ಧನಂಜಯ
ವೆರಸಿ ಪರ್ಣದ ಔಕಿಗೆಯಲಿ ಮುನೀಂದ್ರ ಮೇಳದಲಿ
ಅರಸಿ ಬಣ್ಣದ ಸೊಡರ ಬಲಿದಳು
ಹರಸಿದರು ಮುನಿವಧುಗಳಕ್ಷತೆ
ವೆರಸಿ ಗದುಗಿನ ವೀರನಾರಾಯಣನ ಮೈದುನನ (ಅರಣ್ಯ ಪರ್ವ, ೧೩ ಸಂಧಿ, ೬೬ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಮಾತಲಿಯನ್ನು ಇಂದ್ರನ ಅರಮನೆಗೆ ಕಳುಹಿಸಿ, ಅರ್ಜುನನೊಡನೆ ಮುನಿಗಳ ಸಮೇತವಾಗಿ ತನ್ನ ಪರ್ಣಶಾಲೆಯ ಅಂಗಳಕ್ಕೆ ಬಂದನು. ದ್ರೌಪದಿಯು ಬಣ್ಣದ ದೀಪಗಳನ್ನು ಹಚ್ಚಿದಳು. ಮುನಿ ಪತ್ನಿಯರು ಅರ್ಜುನನನ್ನು ಹರಸಿದರು.

ಅರ್ಥ:
ಅರಸ: ರಾಜ; ಕಳುಹಿದ: ಬೀಳ್ಕೊಡು; ಸೂತ: ರಥವನ್ನು ಓಡಿಸುವವ; ಅರಮನೆ: ರಾಜರ ಆಲಯ; ಬಂದು: ಆಗಮಿಸು; ಪರ್ಣ: ಎಲೆ; ಚೌಕಿಗೆ:ಮನೆಯ ಒಳ ಅಂಗಳ, ಹಜಾರ; ಮುನಿ: ಋಷಿ; ಮೇಳ: ಗುಂಪು; ಅರಸಿ: ರಾಣಿ; ಬಣ್ಣ: ವರ್ಣ; ಸೊಡರು: ದೀಪ; ಬಲಿ: ಹೆಚ್ಚಾಗು; ಹರಸು: ಆಶೀರ್ವದಿಸು; ಮುನಿವಧು: ಋಷಿ ಪತ್ನಿ; ಅಕ್ಷತೆ: ಮಂತ್ರಿಸಿದ ಅಕ್ಕಿ; ಮೈದುನ: ತಂಗಿಯ ಗಂಡ;

ಪದವಿಂಗಡಣೆ:
ಅರಸ +ಕಳುಹಿದನ್+ಇಂದ್ರ+ಸೂತನನ್
ಅರಮನೆಗೆ +ಬಂದನು +ಧನಂಜಯವ್
ಎರಸಿ+ ಪರ್ಣದ+ ಔಕಿಗೆಯಲಿ +ಮುನೀಂದ್ರ +ಮೇಳದಲಿ
ಅರಸಿ+ ಬಣ್ಣದ +ಸೊಡರ +ಬಲಿದಳು
ಹರಸಿದರು +ಮುನಿವಧುಗಳ್+ಅಕ್ಷತೆವ್
ಎರಸಿ+ ಗದುಗಿನ+ ವೀರನಾರಾಯಣನ +ಮೈದುನನ

ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ವೀರನಾರಾಯಣನ ಮೈದುನನ
(೨) ಅರಸಿ, ಹರಸಿ, ಎರಸಿ – ಪ್ರಾಸ ಪದಗಳು

ಪದ್ಯ ೯೫: ಕುಂತಿ ಐರಾವತವನ್ನು ಹೇಗೆ ಪೂಜಿಸಿದಳು?

ಇಂದುಮುಖಿ ಹರುಷದಲಿ ತಾ ಹೊ
ನ್ನಂದಣದೆ ಬಳಿಕಿಳಿದು ನಲವಿನೊ
ಳಂದು ಮೈಯಿಕ್ಕಿದಳು ಕಾಣಿಕೆಯಿಕ್ಕಿ ಚರಣದಲಿ
ಚಂದನಸುಗಂಧಾಕ್ಷತೆಗಳರ
ವಿಂದಪುಷ್ಪದಿ ಧೂಪದೀಪಗ
ಳಿಂದ ನೈವೇದ್ಯಂಗಳಿಂ ಪೂಜಿಸಿದಳಾ ಕುಂತಿ (ಆದಿ ಪರ್ವ, ೨೧ ಸಂಧಿ, ೯೫ ಪದ್ಯ)

ತಾತ್ಪರ್ಯ:
ಕುಂತಿಯು ಅತ್ಯಂತ ಸಂತೋಷದಿಂದ ಐರಾವತವಿದ್ದೆಡೆಗೆ ಬಂದು ತನ್ನ ಚಿನ್ನದ ಪಲ್ಲಕ್ಕಿಯಿಂದ ಕೆಳಗಿಳಿದು, ಆನಂದದಿಂದ ಐರಾವತಕ್ಕೆ ನಮಸ್ಕರಿಸಿದಳು, ತಾನು ತಂದ ಕಾಣಿಕೆಯನ್ನು ಅದರ ಚರಣಗಳಲ್ಲಿ ಅರ್ಪಿಸಿ, ಗಂಧ, ಅಕ್ಷತೆ, ಧೂಪ, ದೀಪ, ಪುಷ್ಪಗಳಿಂದ ಪೂಜಿಸಿ, ನೈವೇದ್ಯವನ್ನು ಅರ್ಪಿಸಿದಳು.

ಅರ್ಥ:
ಇಂದುಮುಖಿ: ಸುಂದರಿ, ಚಂದ್ರನಂತ ಮುಖವುಳ್ಳವಳು; ಹರುಷ: ಸಂತೋಷ; ಹೊನ್ನಂದಣ: ಚಿನ್ನದ ಪಲ್ಲಕ್ಕಿ; ಇಳಿ: ಕೆಳಕ್ಕಿ ಬರು; ನಲಿವು:ಸಂತೋಷ, ಆನಂದ; ಮೈಯಿಕ್ಕು: ನಮಸ್ಕರಿಸು; ಕಾಣಿಕೆ: ಉಡುಗೊರೆ; ಚರಣ: ಪಾದ; ಚಂದನ: ಗಂಧ; ಅಕ್ಷತೆ: ಅರಿಸಿನ ಅಥವಾ ಕುಂಕುಮ ಲೇಪಿತ ಮಂತ್ರಿತ ಅಕ್ಕಿ; ಅರವಿಂದ: ಕಮಲ; ಪುಷ್ಪ: ಹೂವು; ಧೂಪ:ಸುವಾಸನೆಯ ಪುಡಿ; ದೀಪ: ದೀವಿಗೆ; ನೈವೇದ್ಯ: ದೇವರಿಗೆ ಸಮರ್ಪಿಸುವ ಆಹಾರ; ಪೂಜಿಸು: ಆರಾಧಿಸು;

ಪದವಿಂಗಡಣೆ:
ಇಂದುಮುಖಿ +ಹರುಷದಲಿ+ ತಾ +ಹೊನ್ನ
ಅಂದಣದೆ+ ಬಳಿಕಿಳಿದು+ ನಲವಿನೊಳ್
ಅಂದು +ಮೈಯಿಕ್ಕಿದಳು +ಕಾಣಿಕೆಯಿಕ್ಕಿ +ಚರಣದಲಿ
ಚಂದನ+ಸುಗಂಧ+ಅಕ್ಷತೆಗಳ್+ಅರ
ವಿಂದ+ಪುಷ್ಪದಿ +ಧೂಪ+ದೀಪಗ
ಳಿಂದ +ನೈವೇದ್ಯಂಗಳಿಂ+ ಪೂಜಿಸಿದಳಾ+ ಕುಂತಿ

ಅಚ್ಚರಿ:
(೧) ಪೂಜಾಸಾಮಗ್ರಿಗಳ ಪದಗಳು – ಚಂದನಸುಗಂಧಾಕ್ಷತೆಗಳರವಿಂದಪುಷ್ಪದಿ ಧೂಪದೀಪ, ನೈವೇದ್ಯ
(೨) ಹರುಷ, ನಲಿವು – ಸಮನಾರ್ಥಕ ಪದ