ಪದ್ಯ ೧೮: ಧರ್ಮಜನು ಯಾರನ್ನು ಪಣಕ್ಕೆ ಇಟ್ಟನು?

ಭೇದ ಮಂತ್ರವ ಮಾಡಿ ನಮ್ಮನು
ಭೇದಿಸುವ ಗಡ ಸುಬಲ ಸುತನಕ
ಟೀ ದುರಾತ್ಮನ ನೋಡಿರೈ ಸಭ್ಯರು ಶಿವಾಯೆನುತ
ಆ ದುರಾಗ್ರಹಿ ಲೋಕಜನಪರಿ
ವಾದ ಪದ ನಿರ್ಭೀತನಕ್ಷ ವಿ
ನೋದ ಕರ್ದಮಮಗ್ನ ನೊಡ್ಡಿದನಾ ಧನಂಜಯನ (ಸಭಾ ಪರ್ವ, ೧೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಎಲೈ ಸಭೆಯಲ್ಲಿರುವ ಸಭ್ಯರೇ, ಈ ಸುಬಲನ ಪುತ್ರನಾದ ಶಕುನಿಯ ಭೇದ ನೀತಿಯನ್ನು ನೀವು ನೋಡಿದಿರಾ? ಭೇದೋಪಾಯದಿಂದ ನಮ್ಮನ್ನು ಛಿದ್ರಿಸಬೇಕೆಂದು ಈ ಶಕುನಿಯು ಬಗೆದಿರುವನಲ್ಲವೇ ಶಿವ ಶಿವಾ ಎಂದು ಹೇಳುತ್ತಾ, ದ್ಯೂತದ ದುರಾಗ್ರಹವಡಿಸಿದವನೂ, ಲೋಕವು ಏನೆಂದೀತೆಂಬ ವಿಷಯಕ್ಕೆ ಭಯವಿಲ್ಲದವನೂ, ದಾಳಗಳ ಆಟದ ವಿನೋದವೆಂಬ ಕಪ್ಪುಕೆಸರಿನಲ್ಲಿ ಮುಳುಗಿದವನೂ ಆದ ಧರ್ಮಜನು ಅರ್ಜುನನನ್ನು ಮುಂದಿನ ಆಟಕ್ಕೆ ಪಣವಾಗಿಟ್ಟನು.

ಅರ್ಥ:
ಭೇದ: ಬಿರುಕು, ಛಿದ್ರ, ಒಡಕು; ಮಂತ್ರ: ವಿಚಾರ; ಗಡ: ಅಲ್ಲವೆ; ಸುತ: ಮಗ; ಅಕಟ: ಅಯ್ಯೋ; ದುರಾತ್ಮ: ದುಷ್ಟ; ನೋಡಿ: ವೀಕ್ಷಿಸಿ; ಸಭ್ಯ: ಒಳ್ಳೆಯ ವ್ಯಕ್ತಿ; ದುರಾಗ್ರಹಿ: ಕೆಟ್ಟ ಹಟವುಳ್ಳವನು; ಲೋಕ: ಜಗತ್ತು; ಪರಿವಾದ: ನಿಂದೆ, ತೆಗೆಳಿಕೆ, ದೂರು; ಪದ: ಮಾತು; ನಿರ್ಭೀತ: ಭಯವಿಲ್ಲದ; ಅಕ್ಷ: ಪಗಡೆ ಆಟದ ದಾಳ; ವಿನೋದ: ಕ್ರೀಡೆ; ಕರ್ದಮ: ಕೆಸರು, ಪಂಕ; ಮಗ್ನ; ಮುಳುಗು; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಧನಂಜಯ: ಅರ್ಜುನ;

ಪದವಿಂಗಡಣೆ:
ಭೇದ +ಮಂತ್ರವ +ಮಾಡಿ +ನಮ್ಮನು
ಭೇದಿಸುವ +ಗಡ +ಸುಬಲ ಸುತನ್+ಅಕ
ಟೀ+ ದುರಾತ್ಮನ +ನೋಡಿರೈ+ ಸಭ್ಯರು +ಶಿವಾಯೆನುತ
ಆ +ದುರಾಗ್ರಹಿ +ಲೋಕಜನ+ಪರಿ
ವಾದ +ಪದ +ನಿರ್ಭೀತನ್+ಅಕ್ಷ+ ವಿ
ನೋದ +ಕರ್ದಮ+ಮಗ್ನನ್ +ಒಡ್ಡಿದನ್+ಆ+ ಧನಂಜಯನ

ಅಚ್ಚರಿ:
(೧) ದುರಾತ್ಮ, ದುರಾಗ್ರಾಹಿ – ದುಷ್ಟರನ್ನು ವಿವರಿಸುವ ಪದ
(೨) ಯುಧಿಷ್ಥರನನ್ನು ವಿವರಿಸುವ ಪರಿ – ಆ ದುರಾಗ್ರಹಿ ಲೋಕಜನಪರಿವಾದ ಪದ ನಿರ್ಭೀತನಕ್ಷ ವಿನೋದ ಕರ್ದಮಮಗ್ನ

ಪದ್ಯ ೭೪: ವಿದುರನನ್ನು ಕಪಟನೆಂದು ದುರ್ಯೋಧನನು ಕರೆದುದೇಕೆ?

ಹಿತವ ನೀನವರಿಗೆ ಕುಟುಂಬ
ಸ್ಥಿತಿ ವಿಡಂಬಕೆ ನಾವು ಕುಂತೀ
ಸುತರೊಡನೆ ಸಮ್ಮೇಳವೆಮ್ಮೊಳು ವೈಮನಸ್ಯಗತಿ
ಕೃತಕ ಮಾರ್ಗದ ಮೋಡಿಯಲಿ ಪರಿ
ಚಿತನು ನೀನಲ್ಲಕ್ಷ ವಿಮಲ
ಕ್ರತು ವಿಧಾನವನಕ್ಷ ದೀಕ್ಷಿತರರಿವರಿದನೆಂದ (ಸಭಾ ಪರ್ವ, ೧೪ ಸಂಧಿ, ೭೪ ಪದ್ಯ)

ತಾತ್ಪರ್ಯ:
ದುರ್ಯೋಧನನು ವಿದುರನನ್ನು ಬಯ್ಯುತ್ತಾ, ನೀನು ಪಾಂಡವರ ಹಿತವನ್ನು ಕಾಯುವವ, ಕುಟುಂಬದೊಡನೆ ಇದ್ದೇನೆಂದು ತೋರಿಸಲು, ನಮ್ಮೊಡನೆ ಇರುವೆ. ಪಾಂಡವರೊಂದಿಗೆ ಸ್ನೇಹ ನಮ್ಮೊಡನೆ ಹಗೆತನವನ್ನು ತೋರುವೆ, ನಿನಗೆ ಕಪಟವು ಪರಿಚಿತವಲ್ಲ. ಪಗಡೆಯಾಟದ ರೀತಿಯು ನಿನಗೆ ತಿಳಿಯದು. ಪಗಡೆಯ ದಾಅದ ದೀಕ್ಷೆಯನ್ನರಿತವರು ಬಲ್ಲರು, ಎಂದು ದುರ್ಯೋಧನನು ವಿದುರನಿಗೆ ಹೇಳಿದನು.

ಅರ್ಥ:
ಹಿತ: ಒಳಿತು; ಕುಟುಂಬ: ಪರಿವಾರ; ಸ್ಥಿತಿ: ಇರವು, ಅಸ್ತಿತ್ವ; ವಿಡಂಬ: ಸೋಗು, ವೇಷ; ಸಮ್ಮೇಳ: ಸಖ್ಯ, ಸಹವಾಸ; ಸುತ: ಮಕ್ಕಳು; ವೈಮನಸ್ಯ: ಹಗೆತನ, ದ್ವೇಷ, ವೈರ; ಗತಿ: ಇರುವ ಸ್ಥಿತಿ, ಅವಸ್ಥೆ; ಕೃತಕ: ಕಪಟ, ಸ್ವಾಭಾವಿಕವಲ್ಲದ; ಮಾರ್ಗ: ದಾರಿ; ಮೋಡಿ: ರೀತಿ, ಶೈಲಿ; ಪರಿಚಿತ: ಗೊತ್ತಿರುವುದು, ಗುರುತುಳ್ಳ; ಅಕ್ಷ: ಪಗಡೆ ಆಟದ ದಾಳ; ವಿಮಲ: ನಿರ್ಮಲ; ಕ್ರತು: ಸಂಕಲ್ಪ; ವಿಧಾನ; ರೀತಿ; ದೀಕ್ಷೆ: ವ್ರತ, ನಿಯಮ; ಅರಿ: ತಿಳಿ;

ಪದವಿಂಗಡಣೆ:
ಹಿತವ +ನೀನ್+ಅವರಿಗೆ +ಕುಟುಂಬ
ಸ್ಥಿತಿ +ವಿಡಂಬಕೆ +ನಾವು +ಕುಂತೀ
ಸುತರೊಡನೆ +ಸಮ್ಮೇಳವ್+ಎಮ್ಮೊಳು+ ವೈಮನಸ್ಯಗತಿ
ಕೃತಕ +ಮಾರ್ಗದ +ಮೋಡಿಯಲಿ+ ಪರಿ
ಚಿತನು +ನೀನಲ್ಲ್+ಅಕ್ಷ +ವಿಮಲ
ಕ್ರತು +ವಿಧಾನವನ್+ಅಕ್ಷ+ ದೀಕ್ಷಿತರ್+ಅರಿವರ್+ಇದನೆಂದ

ಅಚ್ಚರಿ:
(೧) ವಿದುರನನ್ನು ತೆಗಳುವ ಪರಿ – ಹಿತವ ನೀನವರಿಗೆ ಕುಟುಂಬಸ್ಥಿತಿ ವಿಡಂಬಕೆ ನಾವು; ಕುಂತೀ
ಸುತರೊಡನೆ ಸಮ್ಮೇಳವೆಮ್ಮೊಳು ವೈಮನಸ್ಯಗತಿ
(೨) ವಿದುರನಿಗೆ ಕಪಟ ತಿಳಿದಿಲ್ಲ ಎಂದು ಹೇಳುವ ಪರಿ – ಕೃತಕ ಮಾರ್ಗದ ಮೋಡಿಯಲಿ ಪರಿ
ಚಿತನು ನೀನಲ್ಲ