ಪದ್ಯ ೩೦: ದ್ರೌಪದಿಯು ಧರ್ಮಜನಿಗೇನು ಹೇಳಿದಳು?

ಹರೆದುದುಬ್ಬಿದ ಮೂರ್ಛೆ ಕರಣೋ
ತ್ಕರದ ಕಳವಳವಡಗಿತರಸನ
ನರಸಿ ಸಂತೈಸಿದಳು ತಪ್ಪೇನಿದು ಪುರಾಕೃತದ
ಪರುಠವಣೆಗೇಕಳಲು ಮುಂದಣ
ಗಿರಿಯ ಗಮನೋಪಾಯವನು ಗೋ
ಚರಿಸಿರೇ ಸಾಕೆಂದಳಂಬುಜಮುಖಿ ಮಹೀಪತಿಗೆ (ಅರಣ್ಯ ಪರ್ವ, ೧೦ ಸಂಧಿ, ೩೦ ಪದ್ಯ)

ತಾತ್ಪರ್ಯ:
ದ್ರೌಪದಿಯ ಮೂರ್ಛೆ ತಿಳಿಯಿತು, ದೇಹೇಂದ್ರಿಯಗಳ ಕಳವಳವು ಅಡಗಿತು, ಆಗ ಅವಳು ಇದರಲ್ಲೇನು ತಪ್ಪು, ಇದು ಪೂರ್ವದಲ್ಲಿ ಮಾಡಿದ ಕರ್ಮಫಲದ ಪರಿಣಾಮ. ಇದಕ್ಕೆ ದುಃಖಿಸುವುದೇಕೆ? ಮುಂದಿರುವ ಬೆಟ್ಟವನ್ನು ದಾತಿ ಹೋಗಲು ಏನು ಮಾಡಬೇಕೋ ನೋಡಿರಿ ಎಂದು ಧರ್ಮರಾಜನಿಗೆ ಹೇಳಿದಳು.

ಅರ್ಥ:
ಹರೆ: ವ್ಯಾಪಿಸು, ವಿಸ್ತರಿಸು; ಉಬ್ಬು: ಹೆಚ್ಚಾಗು; ಮೂರ್ಛೆ: ಪ್ರಜ್ಞೆ ಇಲ್ಲದ ಸ್ಥಿತಿ; ಕರಣ: ಜ್ಞಾನೇಂದ್ರಿಯ; ಉತ್ಕರ: ಸಮೂಹ; ಕಳವಳ: ಗೊಂದಲ, ಭ್ರಾಂತಿ; ಅಡಗು: ಮರೆಯಾಗು; ಅರಸ: ರಾಜ; ಅರಸಿ: ರಾಣಿ; ಸಂತೈಸು: ಸಮಾಧಾನ ಪಡಿಸು; ತಪ್ಪು: ಸರಿಯಿಲ್ಲದ ಸ್ಥಿತಿ; ಪುರಾಕೃತ: ಹಿಂದ ಮಾದಿದ; ಪರುಠವ: ವಿಸ್ತಾರ, ಹರಹು; ಅಳು: ನೋವು, ರೋಧಿಸು; ಮುಂದಣ: ಮುಂದೆ ಬರುವ; ಗಿರಿ: ಬೆಟ್ಟ; ಗಮನ: ನಡೆ, ಚಲಿಸು; ಉಪಾಯ: ಮಾರ್ಗ, ಯುಕ್ತಿ; ಗೋಚರಿಸು: ಕಾಣಿಸು, ತೋರು; ಸಾಕು: ನಿಲ್ಲಿಸು, ಕೊನೆ; ಅಂಬುಜಮುಖಿ: ಕಮಲದಂತ ಮುಖವುಳ್ಳವಳು; ಮಹೀಪತಿ: ರಾಜ;

ಪದವಿಂಗಡಣೆ:
ಹರೆದುದ್+ಉಬ್ಬಿದ +ಮೂರ್ಛೆ +ಕರಣೋ
ತ್ಕರದ +ಕಳವಳವ್+ಅಡಗಿತ್+ಅರಸನನ್
ಅರಸಿ+ ಸಂತೈಸಿದಳು+ ತಪ್ಪೇನ್+ಇದು+ ಪುರಾಕೃತದ
ಪರುಠವಣೆಗೇಕ್+ಅಳಲು +ಮುಂದಣ
ಗಿರಿಯ +ಗಮನೋಪಾಯವನು+ ಗೋ
ಚರಿಸಿರೇ+ ಸಾಕೆಂದಳ್+ಅಂಬುಜಮುಖಿ +ಮಹೀಪತಿಗೆ

ಅಚ್ಚರಿ:
(೧) ಅರಸನನರಸಿ ಸಂತೈಸಿದಳು – ಅರಸ ಅರಸಿ ಪದದ ಬಳಕೆ

ಪದ್ಯ ೬೩: ಧೃತರಾಷ್ಟ್ರನು ದ್ರೌಪದಿಯನ್ನು ಹೇಗೆ ಬೀಳ್ಕೊಟ್ಟನು?

ತರಿಸಿದನು ಮಡಿವರ್ಗದಮಲಾಂ
ಬರವ ನಂಬುಜಮುಖಿಗೆ ರತ್ನಾ
ಭರಣವನು ವಿವಿಧಾನುಲೇಪನ ಚಿತ್ರ ಸಂಪುಟದ
ಅರಸನಿತ್ತನು ವೀಳೆಯವ ಕ
ರ್ಪುರದ ತವಲಾಯಿಗಳನಭ್ಯಂ
ತರಕಿವರ ಕಳುಹಿದನು ಗಾಂಧರಿಯನು ಕಾಣಿಸಿದ (ಸಭಾ ಪರ್ವ, ೧೬ ಸಂಧಿ, ೬೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಉತ್ತಮ ವಸ್ತ್ರಗಳನ್ನು ರತ್ನಾಭರಣಗಳನ್ನೂ ದ್ರೌಪದಿಗೆ ತರಿಸಿಕೊಟ್ಟನು. ಅನುಲೇಪನಗಳ ಚಿತ್ರವಿಚಿತ್ರ ಸಂಪುಟವನ್ನು ಕೊಟ್ಟನು. ಕರ್ಪೂರದ ಭರಣಿಗಳನ್ನು ಉಡುಗೊರೆಯಾಗಿತ್ತನು. ಬಳಿಕ ರಾಣಿವಾಸದೊಳಕ್ಕೆ ಕಳಿಸಿ ಗಾಂಧಾರಿಯನ್ನು ಕಾಣಲು ತಿಳಿಸಿದನು.

ಅರ್ಥ:
ತರಿಸು: ಬರೆಮಾಡು; ಮಡಿ: ಶುಭ್ರ; ಅಮಲ: ನಿರ್ಮಲ; ಅಂಬರ: ಬಟ್ಟೆ, ವಸ್ತ್ರ; ಅಂಬುಜ: ಕಮಲ; ಅಂಬುಜಮುಖಿ: ಕಮಲದಂತ ಮುಖವುಳ್ಳವಳು; ರತ್ನ: ಬೆಲೆಬಾಳುವ ಮಣಿ; ಆಭರಣ: ಒಡವೆ; ವಿವಿಧ: ಹಲವಾರು; ಅನುಲೇಪ: ತೊಡೆತ, ಬಳಿಯುವಿಕೆ; ಚಿತ್ರ: ಆಶ್ಚರ್ಯ; ಸಂಪುಟ: ಕೈಪೆಟ್ಟಿಗೆ; ಅರಸ: ರಾಜ; ವೀಳೆ: ತಾಂಬೂಲ; ಕರ್ಪುರ: ಸುಗಂಧ ದ್ರವ್ಯ; ತವಲಾಯಿ: ಕರ್ಪೂರವನ್ನು ಹಾಕಿ ಇರಿಸುವ – ಕರಂಡ, ಭರಣಿ; ಅಭ್ಯಂತರ: ಅಂತರಾಳ, ಒಳಗೆ; ಕಳುಹು: ಬೀಳ್ಕೊಡು; ಕಾಣಿಸು: ತೋರಿಸು;

ಪದವಿಂಗಡಣೆ:
ತರಿಸಿದನು+ ಮಡಿವರ್ಗದ್+ಅಮಲ
ಅಂಬರವನ್ + ಅಂಬುಜಮುಖಿಗೆ+ ರತ್ನಾ
ಭರಣವನು+ ವಿವಿಧ+ಅನುಲೇಪನ +ಚಿತ್ರ +ಸಂಪುಟದ
ಅರಸನಿತ್ತನು +ವೀಳೆಯವ +ಕ
ರ್ಪುರದ +ತವಲಾಯಿಗಳನ್+ಅಭ್ಯಂ
ತರಕ್+ಇವರ+ ಕಳುಹಿದನು+ ಗಾಂಧರಿಯನು +ಕಾಣಿಸಿದ

ಅಚ್ಚರಿ:
(೧) ಮಡಿವರ್ಗದಮಲಾಂಬರವನಂಬುಜಮುಖಿಗೆ – ಒಂದೇ ಪದವಾಗಿ ರಚಿಸಿರುವುದು