ಪದ್ಯ ೩೧: ನಕುಲನ ಮನಸ್ಸಿನ ನುಡಿ ಯಾವುದು?

ಆ ವಿಮಲಫಲ ನೆಗೆಯಲಾ ಸಹ
ದೇವನಗ್ರಜ ನುಡಿದ ತಪ್ಪದೆ
ಜೀವವಿತ್ತೀ ಧರೆಯಲಭಿಮಾನವನು ರಕ್ಷಿಪುದು
ಭಾವಿಸುವೊಡಧ್ರುವವು ತಾನೀ
ಜೀವವಂಬುಜಮಿತ್ರ ಶಶಿ ತಾ
ರಾವಳಿಗಳುಳ್ಳನ್ನಬರವಭಿಮಾನವಿರುತಿಹುದು (ಅರಣ್ಯ ಪರ್ವ, ೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅರ್ಜುನನ ಮಾತನ್ನು ಕೇಳಿ ಆ ಹಣ್ಣು ಇನ್ನೊಂದು ಮೊಳ ಮೇಲಕ್ಕೆ ಹೋಯಿತು. ನಂತರ ನಕುಲನು ಎದ್ದು ಕೃಷ್ಣನಿಗೆ ಹೇಳುತ್ತಾ, ಪ್ರಾಣವನ್ನು ತ್ಯಜಿಸಿಯಾದರೂ ಆತ್ಮ ಗೌರವವನ್ನು ರಕ್ಷಿಸಿಕೊಳ್ಳಬೇಕು, ಪ್ರಾಣವು ಅಶಾಶ್ವತ, ಮಾನವು ಸೂರ್ಯ ಚಂದ್ರರಿರುವವರೆಗೂ ಉಳಿಯುತ್ತದೆ ಎಂದನು.

ಅರ್ಥ:
ವಿಮಲ: ಶುದ್ಧ; ಫಲ: ಹಣ್ಣು; ನೆಗೆ: ಹಾರು; ಅಗ್ರಜ: ಹಿರಿಯ; ನುಡಿ: ಮಾತಾಡು; ತಪ್ಪದೆ:
ಖಂಡಿತ ಇಲ್ಲ; ಜೀವ: ಪ್ರಾಣ; ಧರೆ: ಭೂಮಿ; ಅಭಿಮಾನ: ಹೆಮ್ಮೆ; ರಕ್ಷಿಸು: ಕಾಪಾಡು; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಅಂಬುಜ: ತಾವರೆ; ಮಿತ್ರ: ಸ್ನೇಹಿತ; ಅಂಬುಜಮಿತ್ರ: ಸೂರ್ಯ; ಶಶಿ: ಚಂದ್ರ; ತಾರಾವಳಿ: ನಕ್ಷತ್ರ; ಆವಳಿ: ಗುಂಪು;

ಪದವಿಂಗಡಣೆ:
ಆ +ವಿಮಲಫಲ+ ನೆಗೆಯಲ್+ಆ+ ಸಹ
ದೇವನ್+ಅಗ್ರಜ+ ನುಡಿದ +ತಪ್ಪದೆ
ಜೀವವಿತ್+ಈ+ ಧರೆಯಲ್+ಅಭಿಮಾನವನು +ರಕ್ಷಿಪುದು
ಭಾವಿಸುವೊಡಧ್ರುವವು +ತಾನೀ
ಜೀವವ್+ಅಂಬುಜಮಿತ್ರ +ಶಶಿ +ತಾ
ರಾವಳಿಗಳುಳ್ಳನ್ನಬರವ್+ಅಭಿಮಾನವ್+ಇರುತಿಹುದು

ಅಚ್ಚರಿ:
(೧) ನಕುಲನನ್ನು ಸಹದೇವನಗ್ರಜ; ಸೂರ್ಯನನ್ನು ಅಂಬುಜಮಿತ್ರ ಎಂದು ಕರೆದಿರುವುದು
(೨) ನಕುಲನ ನುಡಿ – ಜೀವವಿತ್ತೀ ಧರೆಯಲಭಿಮಾನವನು ರಕ್ಷಿಪುದು

ಪದ್ಯ ೩೦:ದುರ್ಯೋಧನನನ್ನು ಪಾಳೆಯಕ್ಕೆ ಹೇಗೆ ತಂದರು?

ಇತ್ತ ಪರವಶವಾದ ರಾಯನ
ತೆತ್ತಿಗರು ದಂಡಿಗೆಯೊಳೀತನ
ನೆತ್ತಿ ತಂದರು ಪಾಳೆಯಕೆ ದುಃಸ್ಥಿತಿಯ ಮೇಳೆಯಕೆ
ತೆತ್ತನೇ ಮಗನಸುವನಕಟ ಎ
ನುತ್ತ ಚಿಂತಾರಾಗದಲಿ ಕಡ
ಲತ್ತ ಹಾಯ್ದನು ಬಿಸುಟನಂಬುಜಮಿತ್ರನಂಬರವ (ಕರ್ಣ ಪರ್ವ, ೨೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕರ್ಣನ ಸಾವನ್ನು ನೋಡಿ ದುಃಖಸಾಗರದಲ್ಲಿ ಮೂರ್ಛಿತನಾಗಿದ್ದ ದುರ್ಯೋಧನನನ್ನು ಪಲ್ಲಕ್ಕಿಯಲ್ಲಿ ಅವ್ಯವಸ್ಥೆಯಲ್ಲಿ ಕೂಡಿದ್ದ ಕೌರವರ ಪಾಳೆಯಕ್ಕೆ ತಂದರು, ಸೂರ್ಯನು ತನ್ನ ಮಗನ ಸಾವನ್ನು ವೀಕ್ಷಿಸಿ ದುಃಖಭರಿತನಾಗಿ ನನ್ನ ಮಗನು ದೇಹವನ್ನು ಬಿಟ್ಟನೇ ಎಂದು ಚಿಂತಿಸುತ್ತಾ ಸಮುದ್ರದಲ್ಲಿ ಧುಮುಕಲು ಹೋದನು.

ಅರ್ಥ:
ಪರವಶ:ಬೇರೆಯವರಿಗೆ ಅಧೀನವಾಗಿರುವಿಕೆ, ಅಧೀನತೆ; ರಾಯ: ರಾಜ; ತೆತ್ತು:ಸಂಬಂಧಿಸಿರು; ದಂಡಿಗೆ: ಪಲ್ಲಕ್ಕಿ; ಎತ್ತು: ಮೇಲಕ್ಕೆತ್ತು; ತಂದರು: ಬರೆಮಾಡು; ಪಾಳೆ: ಬಿಡಾರ; ದುಃಸ್ಥಿತಿ: ಅವ್ಯವಸ್ಥೆ; ಮೇಳಯ: ಗುಂಪು; ತೆತ್ತು: ಬಿಡು; ಮಗ: ಸುತ; ಅಸು: ಪ್ರಾಣ; ಅಕಟ: ಅಯ್ಯೋ; ಚಿಂತೆ; ಯೋಚನೆ; ಕಡಲು: ಸಾಗರ; ಹಾಯ್ದು: ಜಾರು, ಲಂಘಿಸು; ಬಿಸುಟ: ಹೊರಹಾಕು; ಅಂಬುಜ: ಕಮಲ; ಅಂಬುಜಮಿತ್ರ: ಸೂರ್ಯ; ಅಂಬರ: ಗಗನ;

ಪದವಿಂಗಡಣೆ:
ಇತ್ತ +ಪರವಶವಾದ +ರಾಯನ
ತೆತ್ತಿಗರು+ ದಂಡಿಗೆಯೊಳ್+ಈತನನ್
ಎತ್ತಿ +ತಂದರು +ಪಾಳೆಯಕೆ +ದುಃಸ್ಥಿತಿಯ +ಮೇಳೆಯಕೆ
ತೆತ್ತನೇ+ ಮಗನ್+ಅಸುವನ್+ಅಕಟ+ ಎ
ನುತ್ತ +ಚಿಂತಾರಾಗದಲಿ +ಕಡ
ಲತ್ತ +ಹಾಯ್ದನು +ಬಿಸುಟನ್+ಅಂಬುಜಮಿತ್ರನ್+ಅಂಬರವ

ಅಚ್ಚರಿ:
(೧) ಸೂರ್ಯನನ್ನು ಅಂಬುಜಮಿತ್ರ ಎಂದು ಕರೆದಿರುವುದು
(೨) ಸೂರ್ಯಾಸ್ತವಾಯಿತು ಎಂದು ಹೇಳಲು – ಕಡಲತ್ತ ಹಾಯ್ದನು ಬಿಸುಟನಂಬುಜಮಿತ್ರನಂಬರವ
(೩) ಕೌರವರ ಪಾಳೆಯವನ್ನು ವಿವರಿಸುವ ಪದ – ದುಃಸ್ಥಿತಿಯ ಮೇಳೆಯಕೆ
(೪) ಚಿಂತೆಯಲ್ಲೂ ಸಂಗೀತವನ್ನು ಹುಡುಕುವ ಕವಿಯ ಪದ ಪ್ರಯೋಗ – ಚಿಂತಾರಾಗ

ಪದ್ಯ ೩೮: ದುರ್ಯೋಧನನು ಯುಧಿಷ್ಠಿರನಿಗೆ ಏನು ಹೇಳಿ ಯುದ್ಧಕ್ಕೆ ಅನುವಾದನು?

ಬಳಿಕ ಸಂಕುಳ ಸಮರವತಿ ವೆ
ಗ್ಗಳಿಸಿತದನೇನೆಂಬೆನಂಬುಧಿ
ಗಿಳಿದನಂಬುಜಮಿತ್ರ ಬೆನ್ನಲಿ ತಿಮಿರ ಬಳಿಸಲಿಸೆ
ಗೆಲಿದು ಹೋಗದಿರೆಂದು ಕೌರವ
ನಳವಿಗೊಟ್ಟನು ಮತ್ತೆ ಧರ್ಮಜ
ಬಿಲುದಿರುವ ನೇವರಿಸಿ ನಿಂದನು ಸಮರಕನುವಾಗಿ (ಕರ್ಣ ಪರ್ವ, ೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ನಂತರ ಎಲ್ಲರೂ ಗುಂಪಾಗಿ ಸೇರಲು, ಯುದ್ಧವು ಭರದಿಂದ ನಡೆಯಿತು. ಸೂರ್ಯನು ಸಮುದ್ರಕ್ಕಿಳಿದನು, ಕತ್ತಲು ಅವನ ಬೆನ್ನ ಹಿಂದೆಯೆ ಕವಿಯಲಾರಂಭಿಸಿಸ್ತು, ಹೆದ್ದು ಹೋಗಬೇಡ ಎಂದು ಕೌರವನು ಕಾಳಗಕ್ಕೆ ಬರಲು, ಯುಧಿಷ್ಠಿರನು ಹೆದೆಯನ್ನು ಮಿಡಿದು ಯುದ್ಧಕ್ಕೆ ಸಿದ್ಧನಾದನು.

ಅರ್ಥ:
ಬಳಿಕ: ನಂತರ; ಸಂಕುಲ: ಗುಂಪು; ಸಮರ: ಯುದ್ಧ; ಅತಿ: ಬಹಳ; ವೆಗ್ಗಳ: ಹೆಚ್ಚಿನ, ಅಧಿಕವಾದ; ಅಂಬುಧಿ: ಸಾಗರ; ಅಂಬುಜ: ತಾವರೆ; ಅಂಬುಜಮಿತ್ರ: ರವಿ, ಭಾನು; ಬೆನ್ನಲಿ:ಹಿಂಬಾಗ; ತಿಮಿರ: ಹತ್ತಲು; ಬಳಿ: ಹತ್ತಿರ; ಸಲಿಸೆ: ಸೇರಲು; ಗೆಲಿ: ಜಯ; ಅಳವಿ: ಯುದ್ಧ; ಮತ್ತೆ: ಪುನಃ; ಬಿಲು: ಬಿಲ್ಲು; ನೇವರಿಸು: ಅಣಿಗೊಳಿಸು; ನಿಂದನು: ನಿಲ್ಲು; ಸಮರ: ಯುದ್ಧ; ಅನುವು: ರೀತಿ, ಅನುಕೂಲ;

ಪದವಿಂಗಡಣೆ:
ಬಳಿಕ +ಸಂಕುಳ +ಸಮರವ್+ಅತಿ +ವೆ
ಗ್ಗಳಿಸಿತ್+ಅದನೇನೆಂಬೆನ್+ಅಂಬುಧಿಗ್
ಇಳಿದನ್+ಅಂಬುಜಮಿತ್ರ +ಬೆನ್ನಲಿ +ತಿಮಿರ+ ಬಳಿಸಲಿಸೆ
ಗೆಲಿದು +ಹೋಗದಿರೆಂದು +ಕೌರವನ್
ಅಳವಿಗೊಟ್ಟನು +ಮತ್ತೆ+ ಧರ್ಮಜ
ಬಿಲುದಿರುವ+ ನೇವರಿಸಿ+ ನಿಂದನು +ಸಮರಕನುವಾಗಿ

ಅಚ್ಚರಿ:
(೧) ಸೂರ್ಯಾಸ್ತವನ್ನು ಹೇಳುವ ಪರಿ – ಅಂಬುಧಿಗಿಳಿದನಂಬುಜಮಿತ್ರ ಬೆನ್ನಲಿ ತಿಮಿರ ಬಳಿಸಲಿಸೆ
(೨) ನನ್ನೊಡನೆ ಯುದ್ಧವನ್ನು ಮಾಡು ಎಂದು ಹೇಳಲು – ಗೆಲಿದು ಹೋಗದಿರು ಎಂದು ದುರ್ಯೋಧನನು ಹೇಳಿದ