ಪದ್ಯ ೧೫: ಧೃತರಾಷ್ಟ್ರನ ಪುತ್ರ ಪ್ರೇಮ ಎಂತಹುದು?

ಕಲಕಿತರಸನ ಕರಣ ಕಂಗಳ
ಕುಳಿಗಳಲಿ ನೀರೊರೆತವಕಟಕ
ಟೆಲೆಗೆ ಕರೆಯಾ ಪಾಪಿ ಮಗನನು ಕುರುಕುಲಾಂತಕನ
ಸೆಳೆದು ತಂದರು ಕರ್ಣ ಶಕುನಿಗ
ಳಳಲಿಗನ ತೆಗೆದಪ್ಪಿದನು ಕುರು
ತಿಲಕ ನಿನ್ನುಳಿದೊಡಲ ಹೊರೆವೆನೆಯೆಂದನಂಧನೃಪ (ಸಭಾ ಪರ್ವ, ೧೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ತಂದೆಗೆ ಕರುಣೆ ಬರಲು ಹೊರಹೋಗುವ ನಾಟಕ ಫಲಿಸಿತು, ಧೃತರಾಷ್ಟ್ರನು ಮಗನ ಮಾತುಗಳನ್ನು ಕೇಳಿ, ಅವನ ಮನಸ್ಸು ಕಲಕಿತು, ಕಣ್ಣಿನ ಕುಣಿಗಳಲ್ಲಿ ನೀರು ತುಂಬಿತು, ಅವನು ಗಾಂಧಾರಿಗೆ, ಕರಿಯಾ ಆ ಪಾಪಿ ಮಗನನ್ನು ಕುರುಕುಲಕ್ಕೆ ಯಮನಂತಿರುವವನನ್ನೂ ಎಂದು ಹೇಳಲು, ಕರ್ಣ ಶಕುನಿಗಳು ದುರ್ಯೋಧನನನ್ನು ಕರೆದುಕೊಂಡು ಬಂದರು, ಧೃತರಾಷ್ಟ್ರನು ಅವನನ್ನು ಅಪ್ಪಿಕೊಂಡು ದುಃಖಿಸುತ್ತಾ ಕುರುಕುಲತಿಲಕ ನಿನ್ನನ್ನು ಬಿಟ್ಟು ಈ ದೇಹವನ್ನು ಹೇಗೆ ಹಿಡಿಯಲಿ ಎಂದು ದುಃಖಿಸಿದನು.

ಅರ್ಥ:
ಕಲಕು: ಬೆರಸು; ಅರಸ: ರಾಜ; ಕರಣ: ಕಿವಿ, ಮನಸ್ಸು; ಕಂಗಳು: ನಯನ; ಕುಳಿ:ತಗ್ಗು, ಕುಸಿ; ನೀರು: ಜಲ; ಒರೆ: ಬಳಿ; ಅಕಟಕಟ: ಅಯ್ಯೋ; ಕರೆ: ಬರೆಮಾಡು; ಪಾಪಿ: ದುಷ್ಟ; ಮಗ: ಸುತ; ಕುಲ: ವಂಶ; ಅಂತಕ: ನಾಶಮಾಡುವವ; ಸೆಳೆ: ಎಳೆತ; ಅಳಲು: ಕಣ್ಣೀರಿಡಲು, ದುಃಖಿತನಾಗಿ; ಅಪ್ಪು: ಆಲಿಂಗನ; ತಿಲಕ: ಶ್ರೇಷ್ಠ; ಉಳಿದು: ಬಿಡು, ತೊರೆ; ಒಡಲು: ದೇಹ; ಹೊರೆ: ಪೋಷಿಸು, ಸಲಹು; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಕಲಕಿತ್+ಅರಸನ +ಕರಣ +ಕಂಗಳ
ಕುಳಿಗಳಲಿ +ನೀರ್+ಒರೆತವ್+ಅಕಟಕಟ
ಎಲೆಗೆ+ ಕರೆಯಾ +ಪಾಪಿ +ಮಗನನು +ಕುರುಕುಲಾಂತಕನ
ಸೆಳೆದು +ತಂದರು +ಕರ್ಣ +ಶಕುನಿಗಳ್
ಅಳಲಿಗನ+ ತೆಗೆದ್+ಅಪ್ಪಿದನು +ಕುರು
ತಿಲಕ+ ನಿನ್ನುಳಿದ್+ಒಡಲ +ಹೊರೆವೆನೆ+ಎಂದನ್+ಅಂಧನೃಪ

ಅಚ್ಚರಿ:
(೧) ಮಗನನ್ನು ಕರೆದ ಬಗೆ – ಪಾಪಿ ಮಗನನು ಕುರುಕುಲಾಂತಕನ, ಕುರುತಿಲಕ
(೨) ಪುತ್ರಪ್ರೇಮ – ನಿನ್ನುಳಿದೊಡಲ ಹೊರೆವೆನೆಯೆಂದನಂಧನೃಪ

ಪದ್ಯ ೪೫: ಧರ್ಮರಾಯನು ಯಾವ ಪೀಠಕ್ಕೆ ಬಂದನು?

ಹಲವು ಮಾತಿನಲೇನು ಭೂಪತಿ
ಕೆಲಕೆ ಸಿಲುಕಿದನವದಿರೊಡ್ಡಿದ
ಬಲೆಗೆ ಬಂದನು ನೆತ್ತಸಾರಿಯ ಗುರಿಯ ಗದ್ದುಗೆಗೆ
ಕೆಲದಲನುಜರು ವಾಮದಲಿ ಮಣಿ
ವಳಯ ಮಂಚದಲಂಧನೃಪನಿದಿ
ರಲಿ ಸುಯೋಧನ ಕರ್ಣ ಶಕುನಿ ಜಯದ್ರಥಾದಿಗಳು (ಸಭಾ ಪರ್ವ, ೧೪ ಸಂಧಿ, ೪೫ ಪದ್ಯ)

ತಾತ್ಪರ್ಯ:
ಜನಮೇಜಯ ಹೆಚ್ಚು ಮಾತೇನು, ಕೌರವರೊಡ್ಡಿದ ಬಲೆಗೆ ಧರ್ಮಜನು ಸಿಕ್ಕಿ ಹಾಕಿಕೊಂಡು ಪಗಡೆಯಾಟದ ಕಟ್ಟೆಗೆ ಬಂದನು. ಅವನ ಪಕ್ಕದಲ್ಲಿ ತಮ್ಮಂದಿರಿದ್ದರು. ಎಡಕ್ಕೆ ಮಣಿಪೀಠದ ಮೇಲೆ ಧೃತರಾಷ್ಟ್ರನು ಕುಳಿತಿದ್ದನು. ಎದುರಿನಲ್ಲಿ ದುರ್ಯೋಧನ, ಕರ್ಣ, ಶಕುನಿ, ಜಯದ್ರಥರೇ ಮೊದಲಾದವರು ಕುಳಿತಿದ್ದರು.

ಅರ್ಥ:
ಹಲವು: ಬಹಳ; ಮಾತು: ವಾಣಿ; ಭೂಪತಿ: ರಾಜ; ಕೆಲ: ಪಕ್ಕ, ಮಗ್ಗಲು; ಸಿಲುಕು: ಸಿಕ್ಕುಹಾಕಿಕೊಳ್ಳು; ಅವದಿರ: ಅವರ; ಒಡ್ಡು: ಬೀಸು, ತೋರಿದ; ಬಲೆ: ಮೋಸ, ವಂಚನೆ, ಜಾಲ; ಬಂದು: ಆಗಮಿಸು; ನೆತ್ತ: ಪಗಡೆಯ ದಾಳ ; ಸಾರಿ: ಪಗಡೆಯಾಟದಲ್ಲಿ ಉಪಯೋಗಿ ಸುವ ಕಾಯಿ; ಗುರಿ: ಉದ್ದೇಶ, ಲಕ್ಷ್ಯ; ಗದ್ದುಗೆ: ಪೀಠ; ಅನುಜ: ತಮ್ಮ; ವಾಮ: ಎಡ; ಮಣಿ: ಬೆಲೆಬಾಳುವ ರತ್ನ; ವಳಯ: ಆವರಣ; ಮಂಚ: ಪಲ್ಲಂಗ, ಪೀಠ; ಅಂಧ: ಕುರುಡ; ನೃಪ: ರಾಜ; ಇದಿರು: ಎದುರು; ಆದಿ: ಮುಂತಾದ;

ಪದವಿಂಗಡಣೆ:
ಹಲವು +ಮಾತಿನಲ್+ಏನು +ಭೂಪತಿ
ಕೆಲಕೆ +ಸಿಲುಕಿದನ್+ಅವದಿರ್+ಒಡ್ಡಿದ
ಬಲೆಗೆ+ ಬಂದನು +ನೆತ್ತಸಾರಿಯ +ಗುರಿಯ +ಗದ್ದುಗೆಗೆ
ಕೆಲದಲ್+ಅನುಜರು +ವಾಮದಲಿ+ ಮಣಿ
ವಳಯ +ಮಂಚದಲ್+ಅಂಧನೃಪನ್+ಇದಿ
ರಲಿ +ಸುಯೋಧನ +ಕರ್ಣ +ಶಕುನಿ+ ಜಯದ್ರಥಾದಿಗಳು

ಅಚ್ಚರಿ:
(೧) ಧರ್ಮಜನು ಬಂದ ಪರಿ – ಭೂಪತಿ ಕೆಲಕೆ ಸಿಲುಕಿದನವದಿರೊಡ್ಡಿದ ಬಲೆಗೆ ಬಂದನು ನೆತ್ತಸಾರಿಯ ಗುರಿಯ ಗದ್ದುಗೆಗೆ

ಪದ್ಯ ೭೮: ಧೃತರಾಷ್ಟ್ರ ತನ್ನ ಮಾತು ಏಕೆ ಹೊಲ್ಲ ಎಂದ?

ವಿದುರ ಬೆಂಬೀಳದಿರು ಬಿಂಕದ
ಹದನ ಬಲ್ಲೆನು ಭೀಮ ಪಾರ್ಥರ
ಮುದವ ಬಯಸುವೆ ಮುನಿಯಲಾಪೆನೆ ಹೇಳು ತನಯರಿಗೆ
ಇದು ಮಹಾಸಭೆಯಲ್ಲಿ ಮೇಳಾ
ಪದಲಿ ಕುರು ಪಾಂಡವರು ಸದ್ಯೂ
ತದಲಿ ರಮಿಸುವರೇನು ಹೊಲ್ಲೆಹವಂದನಂಧನೃಪ (ಸಭಾ ಪರ್ವ, ೧೩ ಸಂಧಿ, ೭೮ ಪದ್ಯ)

ತಾತ್ಪರ್ಯ:
ವಿದುರನು ನಿನ್ನ ಮಾತು ಹೊಲ್ಲ ಎಂದು ಕೇಳಿದ ಧೃತರಾಷ್ಟ್ರ ವಿದುರ, ನನ್ನ ಮಾತನ್ನು ಅಲ್ಲಗೆಳಬೇಡ, ಭೀಮಾರ್ಜುನರ ಸಾಹಸ ಪರಾಕ್ರಮಗಳು ನನಗೆ ತಿಳಿದಿದೆ. ನನ್ನ ಮಕ್ಕಳ ಮೇಲೆ ನನಗೆ ಸಿಟ್ಟೇ? ಏನೋ ಸಂತೋಷದಿಂದಿರಲಿ ಎಂದು ಬಯಸುತ್ತೇನೆ. ಇದು ಮಹಾ ಸಭೆ, ಇಲ್ಲಿ ಕೌರವ ಪಾಂಡವರು ಒಳ್ಳೆಯ ಜೂಜಿನಿಂದ ಸಮ್ತೋಷಿಸುತ್ತಾರೆ, ಇದರಲ್ಲಿ ಕೆಡುಕೇನಿದೆ ಎಂದು ಧೃತರಾಷ್ಟ್ರ ತನ್ನ ಮಾತುಗಳನ್ನು ಸಮರ್ಥಿಸಿಕೊಂಡ.

ಅರ್ಥ:
ಬೆಂಬೀಳು:ಹಿಂಬಾಲಿಸು; ಬಿಂಕ: ಗರ್ವ, ಜಂಬ, ಸೊಕ್ಕು; ಹದ: ಸರಿಯಾದ ಸ್ಥಿತಿ; ಬಲ್ಲೆ: ತಿಳಿದಿರುವೆ; ಮುದ: ಸಂತಸ; ಬಯಸು: ಇಚ್ಛಿಸು; ಮುನಿ: ಕೋಪ; ಹೇಳು: ತಿಳಿಸು; ತನಯ: ಮಕ್ಕಳು; ಮಹಾಸಭೆ: ಓಲಗ; ಮೇಳ: ಸೇರುವಿಕೆ; ದ್ಯೂತ: ಪಗಡೆ, ಜೂಜು; ರಮಿಸು: ರಂಜಿಸು, ಸಂತೋಷಪಡು; ಹೊಲ್ಲೆ: ಹೊಲಸು; ಅಂಧನೃಪ: ಕುರುಡು ರಾಜ;

ಪದವಿಂಗಡಣೆ:
ವಿದುರ+ ಬೆಂಬೀಳದಿರು+ ಬಿಂಕದ
ಹದನ +ಬಲ್ಲೆನು +ಭೀಮ +ಪಾರ್ಥರ
ಮುದವ+ ಬಯಸುವೆ +ಮುನಿಯಲಾಪೆನೆ+ ಹೇಳು+ ತನಯರಿಗೆ
ಇದು +ಮಹಾಸಭೆ+ಅಲ್ಲಿ +ಮೇಳಾ
ಪದಲಿ +ಕುರು +ಪಾಂಡವರು +ಸದ್ಯೂ
ತದಲಿ +ರಮಿಸುವರೇನು+ ಹೊಲ್ಲೆಹವ್+ಅಂದನ್+ಅಂಧನೃಪ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬೆಂಬೀಳದಿರು ಬಿಂಕದ ಹದನ ಬಲ್ಲೆನು ಭೀಮ

ಪದ್ಯ ೭೩: ಧೃತರಾಷ್ಟ್ರನು ಯಾರ ಅಭಿಮತವನ್ನು ಸಮರ್ಥಿಸಿದನು?

ಮಾಡಿತಗ್ಗದ ಸಭೆ ಸುಧರ್ಮೆಯ
ನೇಡಿಸುವ ಚೆಲುವಿನಲಿ ಪುರದಲಿ
ರೂಢಿಸಿತು ಬಳಿಕಂಧನೃಪನೇಕಾಂತಭವನದಲಿ
ಕೂಡಿಕೊಂಡು ಕುಲಪಘಾತದ
ಕೇಡಿಗರ ಕಲ್ಪನೆಯ ಕಲುಪದ
ಜೋಡಿಯನೆ ನಿಶ್ಚೈಸಿ ವಿದುರಂಗರುಹಿದನು ಕರೆಸಿ (ಸಭಾ ಪರ್ವ, ೧೩ ಸಂಧಿ, ೭೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಆಜ್ಞೆಯ ಮೇರೆಗೆ ರತ್ನಾಭರಣಗಳಿಂದ ಕಂಗೊಳಿಸುವ ಉತ್ತಮ ಸಭಾಭವನವು ನಿರ್ಮಾಣವಾಯಿತು, ಇದು ಇಂದ್ರನ ಸುಧರ್ಮವನ್ನು ಅಣುಕಿಸುವಂತಿತ್ತು. ಧೃತರಾಷ್ಟ್ರನು ಏಕಾಂತಭವನದಲ್ಲಿ ಕುಳಿತು ವಿದುರನಿಗೆ ಹೇಳಿಕಳುಹಿಸಿದನು. ಕುಲನಾಶವನ್ನೇ ಮಾಡಲು ನಿರ್ಧರಿಸಿದ ಕೇಡಿಗರಾದ ಕೌರವರ ಸಂಕಲ್ಪವನ್ನೇ ಬೆಂಬಲಿಸಿದನು.

ಅರ್ಥ:
ಮಾಡು: ನಿರ್ಮಿಸು; ಅಗ್ಗ: ಶ್ರೇಷ್ಠ; ಸಭೆ: ಓಲಗ; ಏಡಿಸು: ಅವಹೇಳನ ಮಾಡು, ನಿಂದಿಸು; ಚೆಲುವು: ಸುಂದರ; ಪುರ: ಊರು; ರೂಢಿಸು: ನೆಲಸು, ಇರು; ಬಳಿಕ: ನಂತರ; ಅಂಧನೃಪ: ಕುರುಡ ರಾಜ (ಧೃತರಾಷ್ಟ್ರ); ಏಕಾಂತ: ಒಬ್ಬನೆ; ಭವನ: ಆಲಯ; ಕೂಡಿ: ಸೇರು; ಕುಲ: ವಂಶ; ಕುಲಪ: ಮನೆಯ ಯಜಮಾನ; ಘಾತ: ಹೊಡೆತ, ಪೆಟ್ಟು; ತೊಂದರೆ; ಕೇಡಿಗ: ದುಷ್ಟ; ಕಲ್ಪನೆ: ಯೋಚನೆ; ನಿಶ್ಚೈಸು: ನಿರ್ಧರಿಸು; ಅರುಹು: ತಿಳಿಸು; ಕರೆಸು: ಬರಹೇಳು;

ಪದವಿಂಗಡಣೆ:
ಮಾಡಿತ್+ಅಗ್ಗದ +ಸಭೆ +ಸುಧರ್ಮೆಯನ್
ಏಡಿಸುವ +ಚೆಲುವಿನಲಿ +ಪುರದಲಿ
ರೂಢಿಸಿತು +ಬಳಿಕ್+ಅಂಧ+ನೃಪನ್+ಏಕಾಂತ+ಭವನದಲಿ
ಕೂಡಿಕೊಂಡು +ಕುಲಪ+ಘಾತದ
ಕೇಡಿಗರ+ ಕಲ್ಪನೆಯ+ ಕಲುಪದ
ಜೋಡಿಯನೆ+ ನಿಶ್ಚೈಸಿ +ವಿದುರಂಗ್+ಅರುಹಿದನು +ಕರೆಸಿ

ಅಚ್ಚರಿ:
(೧) ಕ ಕಾರದ ಸಾಲು ಪದಗಳು – ಕೂಡಿಕೊಂಡು ಕುಲಪಘಾತದ ಕೇಡಿಗರ ಕಲ್ಪನೆಯ ಕಲುಪದ

ಪದ್ಯ ೬೪: ಧೃತರಾಷ್ಟ್ರನು ವಿದುರನ ಬಗ್ಗೆ ಏನು ಹೇಳಿದ?

ಪಾರಲೌಕಿಕದುಳಿವನೈಹಿಕ
ದೋರೆ ಪೋರೆಯನಿಂದು ಬಲ್ಲವ
ರಾರು ಹೇಳಾ ವಿದುರನಲ್ಲದೆ ನಮ್ಮ ಪೈಕದಲಿ
ಸಾರವಾತನ ಮಾತು ನಯ ವಿ
ಸ್ತಾರ ಸಹಿತಿಹುದಲ್ಲಿ ನಂಬುಗೆ
ದೂರವಿಲ್ಲೆನಗರಿಯೆ ನೀ ನಿಲ್ಲೆಂದನಂಧನೃಪ (ಸಭಾ ಪರ್ವ, ೧೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತಿಗೆ ಉತ್ತರಿಸುತ್ತಾ, ವಿದುರನು ಪರಲೋಕದ ಸದ್ಗತಿಯನ್ನು ಈ ಲೋಕದ ಓರೆಕೋರೆಗಳನ್ನು ನಮ್ಮ ಪರಿವಾರದಲ್ಲಿ ವಿದುರನನ್ನು ಬಿಟ್ಟು ಇನ್ನಾರು ಬಲ್ಲರು, ನೀನೇ ಹೇಳು. ಆತನ ಮಾತು ಸಾರವತ್ತಾದುದು. ನೀತಿಯು ಅವನ ಅಭಿಪ್ರಾಯದಲ್ಲಿ ಚೆನ್ನಾಗಿ ನಿಂತಿದೆ. ನನಗೆ ಇದು ತಿಳಿದಿದೆ, ನೀನು ತಿಳಿದಿಲ್ಲ, ನಿಲ್ಲು ಎಂದು ದುರ್ಯೋಧನನಿಗೆ ಹೇಳಿದನು.

ಅರ್ಥ:
ಪಾರಲೌಕಿಕ: ಪರಲೋಕ; ಉಳಿವು: ಜೀವನ; ಐಹಿಕ: ಇಹಲೋಕ; ಓರೆ: ವಕ್ರ, ಡೊಂಕು; ಬಲ್ಲವ: ತಿಳಿದ; ಪೈಕ: ಜೊತೆ; ಸಾರ: ತಿರುಳು; ಮಾತು: ಆಣಿ; ವಿಸ್ತಾರ: ಹರಹು, ವ್ಯಾಪ್ತಿ; ಸಹಿತ: ಜೊತೆ; ನಂಬುಗೆ: ವಿಶ್ವಾಸವಿಡು; ದೂರ: ಬಹಳ ಅಂತರ; ಅರಿ: ತಿಳಿ; ನಿಲ್ಲು: ತಡಿ; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಪಾರಲೌಕಿಕದ್+ಉಳಿವನ್+ಐಹಿಕದ್
ಓರೆ ಪೋರೆಯನ್+ಇಂದು +ಬಲ್ಲವರ್
ಆರು +ಹೇಳಾ +ವಿದುರನಲ್ಲದೆ+ ನಮ್ಮ +ಪೈಕದಲಿ
ಸಾರವ್+ಆತನ +ಮಾತು +ನಯ +ವಿ
ಸ್ತಾರ +ಸಹಿತಿಹುದಲ್ಲಿ+ ನಂಬುಗೆ
ದೂರವಿಲ್+ಎನಗ್+ಅರಿಯೆ +ನೀ +ನಿಲ್ಲೆಂದನ್+ಅಂಧನೃಪ

ಅಚ್ಚರಿ:
(೧) ಓರೆಪೋರೆ – ಪದದ ಬಳಕೆ
(೨) ಪಾರಲೌಕಿಕ, ಐಹಿಕ – ವಿರುದ್ಧ ಪದಗಳು

ಪದ್ಯ ೨೫: ಧೃತರಾಷ್ಟ್ರನು ದುರ್ಯೋಧನನನ್ನು ಏನು ಕೇಳಿದ?

ದುಗುಡವೇಕೈ ಮಗನೆ ಹಿರಿಯೋ
ಲಗವನೀಯೆ ಗಡೇಕೆ ವೈಹಾ
ಳಿಗಳ ಬೇಟೆಗಳವನಿಪಾಲ ವಿನೋದ ಕೇಳಿಗಳ
ಬಗೆಯೆ ಗಡ ಬಾಂಧವರ ಸಚಿವರ
ಹೊಗಿಸೆ ಗಡ ನಿನ್ನರಮನೆಯ ನೀ
ಹಗಲು ನಿನಗೇಕಾಯ್ತು ಕತ್ತಲೆಯೆಂದನಂಧನೃಪ (ಸಭಾ ಪರ್ವ, ೧೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನ ಮಗನನ್ನು ಅಪ್ಪಿ ಮನಗೇ ನಿನಗಾವ ದುಃಖ ಬಂದೊದಗಿದೆ? ಆಸ್ಥಾನಕ್ಕೇಕೆ ಹೋಗುತ್ತಿಲ್ಲ? ಆನೆ ಕುದುರೆಗಳ ಸವಾರಿ, ಬೇಟೆ ಮತ್ತಿತರ ರಾಜಯೋಗ್ಯ ವಿನೋದಗಳನ್ನೇಕೆ ಲೆಕ್ಕಕ್ಕೆ ತಂದುಕೊಳ್ಳುತ್ತಿಲ್ಲ? ಮಂತ್ರಿಗಳನ್ನೂ ಬಾಂಧವರನ್ನೂ ನಿನ್ನ ಅರಮನೆಗೇಕೆ ಹೊಗಿಸುತ್ತಿಲ್ಲ. ಹಗಲು ನಿನಗೇಕೆ ರಾತ್ರಿಯ ಕತ್ತಲಾಯಿತು ಎಂದು ದುರ್ಯೋಧನನನ್ನು ಧೃತರಾಷ್ಟ್ರನು ಕೇಳಿದನು.

ಅರ್ಥ:
ದುಗುಡ: ದುಃಖ; ಮಗ: ಪುತ್ರ, ಸುತ; ಹಿರಿ: ದೊಡ್ಡ; ಓಲಗ: ದರ್ಬಾರು; ಗಡ: ಬೇಗನೆ, ಅಲ್ಲವೆ; ವೈಹಾಳಿ: ಕುದುರೆ ಸವಾರಿ, ಸಂಚಾರ; ಬೇಟೆ: ಕ್ರೂರ ಮೃಗಗಳನ್ನು ಕೊಲ್ಲುವುದು; ಅವನಿಪಾಲ: ರಾಜ; ವಿನೋದ: ಹಾಸ್ಯ, ತಮಾಷೆ; ಕೇಳಿ: ಕ್ರೀಡೆ, ವಿನೋದ; ಬಗೆ: ಜಾತಿ, ಲಕ್ಷಿಸು; ಬಾಂಧವರು: ಸಂಬಂಧಿಕರು; ಸಚಿವ: ಮಂತ್ರಿ; ಹೊಗಿಸು: ಹೊಗುವಂತೆ ಮಾಡು; ಅರಮನೆ: ಆಲಯ; ಹಗಲು: ದಿನ, ದಿವಸ; ಕತ್ತಲೆ: ಅಂಧಕಾರ; ಅಂಧನೃಪ: ಕಣ್ಣಿಲ್ಲದ ರಾಜ (ಧೃತರಾಷ್ಟ್ರ);

ಪದವಿಂಗಡಣೆ:
ದುಗುಡವ್+ಏಕೈ+ ಮಗನೆ+ ಹಿರಿ+
ಓಲಗವನೀಯೆಗಡ್+ಏಕೆ+ ವೈಹಾ
ಳಿಗಳ +ಬೇಟೆಗಳ್+ಅವನಿಪಾಲ+ ವಿನೋದ +ಕೇಳಿಗಳ
ಬಗೆಯೆ+ ಗಡ +ಬಾಂಧವರ +ಸಚಿವರ
ಹೊಗಿಸೆ +ಗಡ+ ನಿನ್ನ್+ಅರಮನೆಯ +ನೀ
ಹಗಲು+ ನಿನಗೇಕಾಯ್ತು +ಕತ್ತಲೆ+ಎಂದನ್+ಅಂಧನೃಪ

ಅಚ್ಚರಿ:
(೧) ಕತ್ತಲೆ ಅಂಧನೃಪ – ಕತ್ತಲೆ ಅಂಧ ಪದದ ಬಳಕೆ

ಪದ್ಯ ೧೪: ಧೃತರಾಷ್ಟ್ರನು ಯಾರನ್ನು ಕರೆಸಿ ಏನೆಂದು ಕೇಳಿದನು?

ಕರೆಸಿದನು ಗಾಂಗೇಯ ಗೌತಮ
ಗುರು ಸುಯೋಧನ ಶಲ್ಯ ಸೈಂಧವ
ಗುರುತನುಜ ರಾಧೇಯ ವಿದುರ ಕಳಿಂಗ ಸೌಬಲರ
ಚರಮುಖಪ್ರತಿಪನ್ನ ಬಂಧುರ
ತರ ವಚೋವಿನ್ಯಾಸ ಕರ್ಣ
ಜ್ವರವೊ ಕರ್ಣಾಮೃತವೊ ಹೇಳಿರೆ ಎಂದನಂಧನೃಪ (ಆದಿ ಪರ್ವ, ೧೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಬೇಹುಗಾರರು ತಂದ ಸುದ್ದಿಯನ್ನು ಕೇಳಿದ ಧೃತರಾಷ್ಟ್ರ ಎಚ್ಚೆತ್ತು ತನ್ನ ಆಸ್ಥಾನದಲ್ಲಿದ್ದ, ಭೀಷ್ಮ, ಕೃಪ, ದ್ರೋಣ, ದುರ್ಯೋಧನ, ಶಲ್ಯ, ಸೈಂದವ, ಅಶ್ವತ್ಥಾಮ, ಕರ್ಣ, ವಿದುರ,ಶಕುನಿ ಮೊದಲಾದ ಪ್ರಮುಖರನ್ನು ಕರೆಸಿ, ಗೂಢಾಚಾರರ ಮುಖದಿಂದ ಹೊರಬಂದಿರುವ ಮಾತಿನ ವೈಖರಿಯು ನಿಮ್ಮ ಕಿವಿಗಳಿಗೆ ಅಮೃತವೋ ಅಥವ ಜ್ವರವಾಗಿದೆಯೋ ಎಂದು ಕೇಳಿದನು.

ಅರ್ಥ:
ಕರೆಸು: ಬರೆಮಾಡು; ಗಾಂಗೇಯ: ಭೀಷ್ಮ; ಗುರು: ಆಚಾರ್ಯ; ತನುಜ: ಮಗ; ರಾಧೇಯ: ಕರ್ಣ; ಕರ್ಣ: ಕಿವಿ; ಕರ್ಣಜ್ವರ: ಕಿವಿಗೆ ಭಾರವಾದ, ಘೋರವಾದ; ಕರ್ಣಾಮೃತ: ಕಿವಿಗೆ ಹಿತವಾದ; ಚರ:ಗೂಢಚಾರ, ಬೇಹುಗಾರ; ಮುಖ: ಆನನ; ಪ್ರತಿಪನ್ನ: ಸ್ವೀಕೃತವಾದುದು, ಒಪ್ಪಿಗೆಯಾದುದು; ಬಂಧುರ: ಬಾಗಿರುವುದು, ಕೊಂಕಿದ, ಏರುಪೇರಾದ; ವಚೋವಿನ್ಯಾಸ: ಮಾತಿನ ವೈಖರಿ; ಹೇಳಿರಿ: ತಿಳಿಸಿ; ಅಂಧ: ಕುರುಡ; ನೃಪ: ರಾಜ

ಪದವಿಂಗಡಣೆ:
ಕರೆಸಿದನು +ಗಾಂಗೇಯ +ಗೌತಮ
ಗುರು +ಸುಯೋಧನ+ ಶಲ್ಯ +ಸೈಂಧವ
ಗುರುತನುಜ +ರಾಧೇಯ +ವಿದುರ +ಕಳಿಂಗ +ಸೌಬಲರ
ಚರ+ಮುಖ+ಪ್ರತಿಪನ್ನ+ ಬಂಧುರ
ತರ+ ವಚೋ+ವಿನ್ಯಾಸ+ ಕರ್ಣ
ಜ್ವರವೊ+ ಕರ್ಣಾಮೃತವೊ+ ಹೇಳಿರೆ+ ಎಂದನ್+ಅಂಧ+ನೃಪ

ಅಚ್ಚರಿ:
(೧) ಹೆಸರುಗಳನ್ನು ಬಳಸಿರುವ ಬಗೆ: ಗಾಂಗೇಯ – ಭೀಷ್ಮ, ಅಂಧನೃಪ- ಧೃತರಾಷ್ಟ್ರ, ಗುರುತನುಜ – ಅಶ್ವತ್ಥಾಮ,
(೨) ಕರ್ಣಜ್ವರ, ಕರ್ಣಾಮೃತ – ಕಿವಿಗೆ ಹಿತವೊ ಅಹಿತವೊ ಎಂದು ವರ್ಣಿಸಲು
(೩) ಗುರು – ೨, ೩ ಸಾಲಿನ ಮೊದಲ ಪದ