ಪದ್ಯ ೧೫: ಅಶ್ವತ್ಥಾಮನು ಆನೆಗಳ ಗುಂಪನ್ನು ಹೇಗೆ ನಾಶ ಮಾಡಿದನು?

ಏನ ಹೇಳುವೆ ಗಜಘಟಾಪ್ರತಿ
ಮಾನದಲಿ ಕೋದಂಬುಗಳು ಹಿಂ
ಡಾನೆಗಳನೇಳೆಂಟನೊದೆದೋಡಿದವು ಪಂಚಕವ
ಭಾನುರಶ್ಮಿಗಳಂಧಕಾರದ
ಮಾನಗರ್ವವ ಮುರಿವವೊಲು ಗುರು
ಸೂನುವಿನ ಶರ ಸವರಿದವು ಕರಿಘಟೆಯ ಬಲುಮೆಳೆಯ (ಶಲ್ಯ ಪರ್ವ, ೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ಒಂದು ಬಾಣವು ಏಳೆಂಟು ಆನೆಗಳನ್ನು ಸಂಹರಿಸುತ್ತಿದ್ದವು. ಸೂರ್ಯನ ಕಿರಣಗಳು ಕತ್ತಲೆಯನ್ನು ಮುರಿಯುವಂತೆ ಅಶ್ವತ್ಥಾಮನ ಬಾಣಗಳು ಆನೆಗಳ ಗುಂಪನ್ನು ನಾಶಮಾಡುತ್ತಿದ್ದವು.

ಅರ್ಥ:
ಹೇಳು: ತಿಳಿಸು; ಗಜ: ಆನೆ; ಘಟ: ಗುಮ್ಫು; ಪ್ರತಿಮಾನ: ಸದೃಶವಾದುದು, ಆನೆಯ ದಂತಗಳ ಮಧ್ಯಪ್ರದೇಶ; ಅಂಬು: ಬಾಣ; ಹಿಂಡಾನೆ: ಗುಂಪಿನಲ್ಲಿರುವ ಆನೆ; ಒದೆ: ನೂಕು; ಪಂಚಕ: ಐದು; ಭಾನು: ಸೂರ್ಯ; ರಶ್ಮಿ: ಕಿರಣ; ಅಂಧಕಾರ: ಕತ್ತಲೆ; ಮಾನ:ಅಳತೆ, ಸೇರು, ಅಭಿಮಾನ; ಗರ್ವ: ಅಹಂಕಾರ; ಮುರಿ: ಸೀಳು; ಸೂನು: ಮಗ; ಶರ: ಬಾಣ; ಸವರು: ನಾಶಮಾಡು; ಕರಿಘಟೆ: ಆನೆಯ ಗುಂಪು; ಬಲುಮಳೆ: ಜೋರಾದ ವರ್ಷ;

ಪದವಿಂಗಡಣೆ:
ಏನ +ಹೇಳುವೆ +ಗಜಘಟ+ಅಪ್ರತಿ
ಮಾನದಲಿ+ ಕೋದಂಬುಗಳು+ ಹಿಂ
ಡಾನೆಗಳನ್+ಏಳೆಂಟನ್+ಒದೆದ್+ಓಡಿದವು +ಪಂಚಕವ
ಭಾನು+ರಶ್ಮಿಗಳ್+ಅಂಧಕಾರದ
ಮಾನ+ಗರ್ವವ +ಮುರಿವವೊಲು +ಗುರು
ಸೂನುವಿನ +ಶರ +ಸವರಿದವು +ಕರಿಘಟೆಯ +ಬಲುಮೆಳೆಯ

ಅಚ್ಚರಿ:
(೧) ಗಜಘಟ, ಕರಿಘಟೆ, ಹಿಂಡಾನೆ – ಸಾಮ್ಯಾರ್ಥ ಪದ
(೨) ಉಪಮಾನದ ಪ್ರಯೋಗ – ಭಾನುರಶ್ಮಿಗಳಂಧಕಾರದಮಾನಗರ್ವವ ಮುರಿವವೊಲು
(೩) ೪ ಸಾಲು ಒಂದೇ ಪದವಾಗಿ ರಚಿತವಾದುದು – ಭಾನುರಶ್ಮಿಗಳಂಧಕಾರದ

ಪದ್ಯ ೪೮: ದ್ರೋಣನು ಪಾಂಚಾಲ ಸೈನ್ಯವನ್ನು ಹೇಗೆ ನಾಶ ಮಾಡಿದನು?

ಆರ ನೆರವಿಯೊಳಂಧಕಾರದ
ಭಾರವನು ರವಿ ಗೆಲುವನಿನ್ನೀ
ವೈರಿಬಲಭಂಜನಕೆ ಗುರು ಹಂಗಹನೆ ಕೆಲಬಲಕೆ
ಭೂರಿ ರಿಪುಚತುರಂಗಬಲಸಂ
ಹಾರದಲಿ ಒರವೆದ್ದ ರಕುತದ
ಪೂರದಲಿ ಮುಳುಗಿದರು ಪಾಂಚಾಲಾದಿ ನಾಯಕರು (ದ್ರೋಣ ಪರ್ವ, ೧೮ ಸಂಧಿ, ೪೮ ಪದ್ಯ)

ತಾತ್ಪರ್ಯ:
ಸೂರ್ಯನು ಯಾರ ಸಹಾಯದಿಂದ ಕತ್ತಲನ್ನು ಗೆಲ್ಲುತ್ತಾನೆ? ಶತ್ರುಸೈನ್ಯ ಸಂಹಾರಕ್ಕೆ ದ್ರೋಣನು ಇನ್ನೊಬ್ಬರ ಹಂಗಿಗೊಳಗಾಗುವನೇ? ಪಾಂಚಾಲ ಸೈನ್ಯವನ್ನು ದ್ರೋಣನು ಸಂಹರಿಸಲು ರಕ್ತದ ತೊರೆ ಹರಿದು ಪಾಂಚಾಲ ನಾಯಕರು ಮುಳುಗಿ ಹೋದರು.

ಅರ್ಥ:
ನೆರವು: ಸಹಾಯ; ಅಂಧಕಾರ: ಕತ್ತಲೆ; ಭಾರ: ಹೊರೆ; ರವಿ: ಸೂರ್ಯ; ಗೆಲುವು: ಜಯ; ವೈರಿ: ಶತ್ರು; ಬಲ: ಸೈನ್ಯ; ಭಂಜನ: ನಾಶಕಾರಿ, ಒಡೆಯುವುದು; ಗುರು: ಆಚಾರ್ಯ; ಹಂಗು: ದಾಕ್ಷಿಣ್ಯ, ಆಭಾರ; ಕೆಲಬಲ: ಅಕ್ಕಪಕ್ಕ, ಎಡಬಲ; ಭೂರಿ: ಹೆಚ್ಚು, ಅಧಿಕ; ರಿಪು: ವೈರಿ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ಸಂಹಾರ: ನಾಶ, ಕೊನೆ; ಎದ್ದು: ಮೇಲೇಳು; ರಕುತ: ನೆತ್ತರು; ಪೂರ: ಭರ್ತಿ; ಮುಳುಗು: ನೀರಿನಲ್ಲಿ ಮೀಯು, ಕಾಣದಾಗು; ಆದಿ: ಮುಂತಾದ; ನಾಯಕ: ಒಡೆಯ;

ಪದವಿಂಗಡಣೆ:
ಆರ +ನೆರವಿಯೊಳ್+ಅಂಧಕಾರದ
ಭಾರವನು +ರವಿ +ಗೆಲುವನ್+ಇನ್ನೀ
ವೈರಿಬಲ+ಭಂಜನಕೆ +ಗುರು +ಹಂಗಹನೆ+ ಕೆಲಬಲಕೆ
ಭೂರಿ +ರಿಪು+ಚತುರಂಗ+ಬಲ+ಸಂ
ಹಾರದಲಿ +ಒರವೆದ್ದ+ ರಕುತದ
ಪೂರದಲಿ +ಮುಳುಗಿದರು +ಪಾಂಚಾಲಾದಿ +ನಾಯಕರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಆರ ನೆರವಿಯೊಳಂಧಕಾರದ ಭಾರವನು ರವಿ ಗೆಲುವನ್
(೨) ಯುದ್ಧದ ಭೀಕರತೆ – ರಿಪುಚತುರಂಗಬಲಸಂಹಾರದಲಿ ಒರವೆದ್ದ ರಕುತದ ಪೂರದಲಿ ಮುಳುಗಿದರು

ಪದ್ಯ ೨೩: ದುಶ್ಯಾಸನ ಹೇಗೆ ಗರ್ಜಿಸಿದ?

ಬಂಧು ಕೃತ್ಯದ ಮಾತು ಸೂರ್ಯಂ
ಗಂಧಕಾರವು ಸೇರುವುದೆ ನಿ
ರ್ಬಂಧದಲಿ ನೀವೇಕೆ ನುಡಿವಿರಿ ರಾಜಕಾರಿಯವ
ಸಂಧಿಯಾಗದು ಪಾಂಡವರ ಸಂ
ಬಂಧ ನಮಗೇಕೆನುತ ಕರುಣಾ
ಸಿಂಧುವಿನ ಮೊಗ ನೋಡಿ ದುಶ್ಯಾಸನನು ಗರ್ಜಿಸಿದ (ಉದ್ಯೋಗ ಪರ್ವ, ೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಈ ವಿಷಯ ಬಂಧುಗಳ ನಡುವೆ ನಡೆಯುವ ಮಾತಿಗೆ ಸಂಬಂಧಿಸಿದ್ದು. ಸೂರ್ಯನಿಗೆ ಅಂಧಕಾರವು ಸರಿಹೊಂದುತ್ತದೆಯೇ? ಹಾಗೆಯೆ ನೀವೇಕೆ ನಿರ್ಬಂಧದಿಂದ ರಾಜಕಾರ್ಯವನ್ನು ನಮ್ಮ ಮೇಲೆ ಹೇರುತ್ತೀರಿ? ಸಂಧಿಯನ್ನು ನಾವು ಮಾಡಿಕೊಳ್ಳುವುದಿಲ್ಲ, ಪಾಂಡವರ ಜೊತೆ ಸಂಬಂಧವಾದರೂ ನಮಗೇಕೆ ಎಂದು ಶ್ರೀಕೃಷ್ಣನ ಮುಖವನ್ನು ನೋಡುತ್ತಾ ಆರ್ಭಟಿಸಿದನು.

ಅರ್ಥ:
ಬಂಧು: ಸಂಬಂಧಿಕ; ಕೃತ್ಯ: ಕೆಲಸ; ಮಾತು: ವಾಣಿ; ಸೂರ್ಯ: ಭಾನು; ಅಂಧಕಾರ: ಕತ್ತಲು; ಸೇರು: ಜೊತೆಗೂಡು; ನಿರ್ಬಂಧ: ಬಂಧುತ್ವವಿಲ್ಲದ; ರಾಜಕಾರಿಯ: ರಾಜಕಾರಣ; ಸಂಧಿ: ಸಂಯೋಗ; ಸಂಬಂಧ: ಸಹವಾಸ, ಜೋಡಣೆ; ಕರುಣೆ: ದಯೆ; ಸಿಂಧು: ಸಾಗರ; ಮೊಗ: ಮುಖ; ಗರ್ಜಿಸು: ಆರ್ಭಟಿಸು;

ಪದವಿಂಗಡಣೆ:
ಬಂಧು +ಕೃತ್ಯದ +ಮಾತು +ಸೂರ್ಯಂಗ್
ಅಂಧಕಾರವು +ಸೇರುವುದೆ+ ನಿ
ರ್ಬಂಧದಲಿ +ನೀವೇಕೆ +ನುಡಿವಿರಿ +ರಾಜಕಾರಿಯವ
ಸಂಧಿಯಾಗದು +ಪಾಂಡವರ+ ಸಂ
ಬಂಧ +ನಮಗೇಕ್+ಎನುತ +ಕರುಣಾ
ಸಿಂಧುವಿನ +ಮೊಗ +ನೋಡಿ +ದುಶ್ಯಾಸನನು +ಗರ್ಜಿಸಿದ

ಅಚ್ಚರಿ:
(೧) ಕೃಷ್ಣನನ್ನು ಕರುಣಾಸಿಂಧು ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ಸೂರ್ಯಂಗಂಧಕಾರವು ಸೇರುವುದೆ

ಪದ್ಯ ೧೫: ಅಂಧಕಾರವನ್ನು ಕುಮಾರವ್ಯಾಸ ಹೇಗೆ ವರ್ಣಿಸುತ್ತಾರೆ?

ಸಿಲುಕಿದುದು ಜನದೃಷ್ಟಿ ಬಲುಗ
ತ್ತಲೆಯ ಬಂಧದೊಳಂಧಕಾರದ
ಜಲಧಿಯಲಿ ಜಗವದ್ದುದೇನೆಂಬೆನು ಮಹಾದ್ಭುತವ
ನಳಿನಮಿತ್ರನ ಬೇಹುಕಾರರ
ಸುಳಿವೊ ತಿಮಿರದ ಪಾಳೆಯದೊಳೆನೆ
ನಿಳಯನಿಳಯದ ಸೊಡರು ತಳಿದುದು ಕೂಡೆ ನಗರಿಯಲಿ (ಆದಿ ಪರ್ವ, ೧೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸೂರ್ಯನು ಮುಳುಗಿದ ಮೇಲೆ ಇಡೀ ಜಗತ್ತು ಕತ್ತಲಲ್ಲಿ ಮುಳುಗಿತು. ಜನರ ದೃಷ್ಟಿಯನ್ನು ಕತ್ತಲೆಯು ಬಂಧಿಸಿದಂತಾಯಿತು. ಆ ಬಂಧನದೊಳಗಿನ ಅಂಧಕಾರದ ಸಮುದ್ರದಲ್ಲಿ ಜಗತ್ತು ಮುಳುಗಿದಂತಾಯಿತು. ಆ ಗಾಢ ಅಂಧಕಾರದಲ್ಲಿ ಸೂರ್ಯನ ಗೂಢಾಚಾರರು ಜಗತ್ತಿನಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಪ್ರತಿ ಮನೆಯಲ್ಲೂ ದೀಪಗಳು ಉರಿಯುತ್ತಿದ್ದವು ಎಂದು ಕವಿಯ ಕಣ್ಣಿಗೆ ಕಂಡಿತು.

ಅರ್ಥ:
ಸಿಲುಕು: ಸೆರೆಯಾಗು, ಬಂಧನಕ್ಕೊಳಗಾಗು; ಜನ: ಮನುಷ್ಯ; ದೃಷ್ಟಿ: ನೋಟ; ಬಲು: ತುಂಬ; ಕತ್ತಲೆ: ಅಂಧಕಾರ, ತಿಮಿರ; ಬಂಧ: ಕಟ್ಟು, ಪಾಶ; ಜಲಧಿ: ಸಮುದ್ರ; ಜಗ: ಜಗತ್ತು, ವಿಶ್ವ; ಅದ್ಭುತ: ಆಶ್ವರ್ಯ; ನಳಿನ: ಕಮಲ; ಮಿತ್ರ: ಸ್ನೇಹಿತ; ನಳಿನಮಿತ್ರ್ರ: ಸೂರ್ಯ; ಬೇಹುಕಾರ: ಗೂಢಾಚಾರ; ಸುಳಿವು: ಕುರುಹು, ಗುರುತು; ಪಾಳೆ: ಭಾಗ; ನಿಳಯ: ಮನೆ; ಸೊಡರು: ದೀಪ; ತಳಿ:ಹರಡು; ನಗರ: ಊರು;

ಪದವಿಂಗಡಣೆ:
ಸಿಲುಕಿದುದು +ಜನದೃಷ್ಟಿ +ಬಲು+ಗ
ತ್ತಲೆಯ +ಬಂಧದೊಳ್+ಅಂಧಕಾರದ
ಜಲಧಿಯಲಿ +ಜಗವದ್ದುದ್+ಏನೆಂಬೆನು+ ಮಹಾದ್ಭುತವ
ನಳಿನಮಿತ್ರನ +ಬೇಹುಕಾರರ
ಸುಳಿವೊ +ತಿಮಿರದ+ ಪಾಳೆಯದೊಳೆನೆ
ನಿಳಯನಿಳಯದ+ ಸೊಡರು+ ತಳಿದುದು +ಕೂಡೆ +ನಗರಿಯಲಿ

ಅಚ್ಚರಿ:
(೧) ಕತ್ತಲೆ, ಅಂಧಕಾರ, ತಿಮಿರ – ಸಮನಾರ್ಥಕ ಪದಗಳು
(೨) ರೂಪಕದ ಪ್ರಯೋಗ: ನಳಿನಮಿತ್ರನ ಬೇಹುಕಾರರ ಸುಳಿವೊ ತಿಮಿರದ ಪಾಳೆಯದೊಳೆನೆ ನಿಳಯನಿಳಯದ ಸೊಡರು ತಳಿದುದು; ಬಲುಗತ್ತಲೆಯ ಬಂಧದೊಳಂಧಕಾರದ ಜಲಧಿಯಲಿ ಜಗವದ್ದು
(೩) ಸೂರ್ಯನನ್ನು ನಳಿನಮಿತ್ರ ಎಂದು ವರ್ಣಿಸುವುದು