ಪದ್ಯ ೧೭: ಭೀಷ್ಮರು ದುರ್ಯೋಧನನನ್ನು ಹೇಗೆ ಬರೆಮಾಡಿಕೊಂಡರು?

ಮುಂದೆ ಹರಿದರು ಕೈಯ ಕಂಬಿಯ
ಸಂದಣಿಯ ಪಡೆವಳರು ಗಂಗಾ
ನಂದನಂಗೀ ಹದನನರುಹಲು ಬಂದನಿದಿರಾಗಿ
ಕಂದು ಮೋರೆಯ ರಾಯನನು ತೆಗೆ
ದಂದಣದೊಳಾಲಿಂಗಿಸುತ ನಲ
ವಿಂದ ಮನ್ನಿಸಿ ತಂದನರಮನೆಗುಚಿತ ವಚನದಲಿ (ಭೀಷ್ಮ ಪರ್ವ, ೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಕಂಬಿಹಿಡಿದ ದೂತರು ರಾಜನ ಆಗಮನವನ್ನು ಮೊದಲೇ ಭೀಷ್ಮನಿಗೆ ತಿಳಿಸಲು, ಭೀಷ್ಮನು ಎದುರುಬಂದು ಕಳಾಹೀನನಾಗಿದ್ದ ದುರ್ಯೋಧನನ ಮುಖವನ್ನು ನೋಡಿ, ಆತನನ್ನು ಆಲಂಗಿಸಿ ಉಚಿತವಾದ ಹಿತನುಡಿಗಳಿಂದ ಮಾತನಾಡಿಸಿ ಅರಮನೆಯೊಳಗೆ ಕರೆತಂದನು.

ಅರ್ಥ:
ಮುಂದೆ: ಅಗ್ರಭಾಗ; ಹರಿ: ಚಲಿಸು; ಕೈ: ಹಸ್ತ; ಕಂಬಿ: ಉಕ್ಕಿನ ಸಲಾಕಿ; ಸಂದಣಿ: ಗುಂಪು; ಪಡೆ: ಸೈನ್ಯ, ಬಲ, ಗುಂಪು; ನಂದನ: ಮಗ; ಹದ: ಸ್ಥಿತಿ; ಅರುಹು: ತಿಳಿಸು; ಇದಿರು: ಎದುರು; ಕಂದು: ಕಳಾಹೀನ, ಮಸಕಾಗು; ಮೋರೆ: ಮುಖ; ರಾಯ: ರಾಜ; ತೆಗೆ: ಸೆಳೆ; ಅಂದಣ:ಪಲ್ಲಕ್ಕಿ, ಮೇನೆ; ಆಲಿಂಗಿಸು: ಅಪ್ಪಿಕೋ; ನಲವು: ಸಂತೋಷ; ಮನ್ನಿಸು: ಗೌರವಿಸು; ಅರಮನೆ: ರಾಜರ ಆಲಯ; ಉಚಿತ: ಸರಿಯಾದ; ವಚನ: ಮಾತು;

ಪದವಿಂಗಡಣೆ:
ಮುಂದೆ +ಹರಿದರು +ಕೈಯ +ಕಂಬಿಯ
ಸಂದಣಿಯ +ಪಡೆವಳರು +ಗಂಗಾ
ನಂದನಂಗ್+ಈ+ ಹದನನ್+ಅರುಹಲು +ಬಂದನ್+ಇದಿರಾಗಿ
ಕಂದು +ಮೋರೆಯ +ರಾಯನನು+ ತೆಗೆದ್
ಅಂದಣದೊಳ್+ಆಲಿಂಗಿಸುತ+ ನಲ
ವಿಂದ +ಮನ್ನಿಸಿ +ತಂದನ್+ಅರಮನೆಗ್+ಉಚಿತ +ವಚನದಲಿ

ಅಚ್ಚರಿ:
(೧) ದುರ್ಯೋಧನನ ಚಿತ್ರಣ – ಕಂದು ಮೋರೆಯ ರಾಯ

ಪದ್ಯ ೯೯: ಪಯಣವು ಹೇಗೆ ಸಾಗಿತ್ತು?

ಮುಂದೆ ಮೋಹರ ತೆಗೆದು ನಡೆದುದು
ಸಂದಣಿಸಿ ನಕುಲಾದಿ ಭೂಪರು
ಹಿಂದೆ ಮಣಿಕೇವಣದ ದಡ್ಡಿಯ ಬಿಗಿದ ಬೀಯಗದ
ಗೊಂದಣದ ಹೆಮ್ಮಕ್ಕಳಿದ್ದೆಸೆ
ಯಂದಣದ ಸಂದಣಿಗಳಲಿ ನಡೆ
ತಂದವನಿಬರ ರಾಣಿವಾಸದ ದಂಡಿಗೆಗಳಂದು (ಸಭಾ ಪರ್ವ, ೧೩ ಸಂಧಿ, ೯೯ ಪದ್ಯ)

ತಾತ್ಪರ್ಯ:
ಪಯಣದ ಮುಂದಿನ ಸಾಲಿನಲ್ಲಿ ನಕುಲನೇ ಮೊದಲಾದವರ ಸೈನ್ಯಗಳು ನಡೆದವು. ಪಾಂಡವರ ಮಕ್ಕಳು ಮುಂದೆ ಹೋಗುತ್ತಿದ್ದರು. ಹಿಂಭಾಗದಲ್ಲಿ ರಾಣಿವಾಸದವರ ಪಲ್ಲಕ್ಕಿಗಳು ಎರಡು ಸಾಲಿನಲ್ಲಿ ಬರುತ್ತಿದ್ದವು. ರಾಣಿವಾಸದವರ ಪಲ್ಲಕ್ಕಿಗಳು ಮಣಿ ಖಚಿತವಾಗಿದ್ದು ಅವುಗಳ ಬಾಗಿಲುಗಳನ್ನು ಬೀಗದಿಂದ ಭದ್ರಪಡಿಸಿದ್ದರು.

ಅರ್ಥ:
ಮುಂದೆ: ಮೊದಲು; ಮೋಹರ: ಸೈನ್ಯ, ದಂಡು; ತೆಗೆದು: ಹೊರತಂದು; ನಡೆ: ಚಲಿಸು; ಸಂದಣಿ: ಗುಂಪು, ಸಮೂಹ; ಭೂಪ: ರಾಜ; ಹಿಂದೆ: ಹಿಂಭಾಗದಲ್ಲಿ; ಮಣಿ: ಬೆಲಬಾಳುವ ರತ್ನ; ಕೇವಣ: ತಳ್ಳುವುದು, ನೂಕುವುದು; ಗೊಂದಣ: ಗುಂಪು, ಹಿಂಡು; ಹೆಮ್ಮಕ್ಕಳು: ಹಿರಿಯ ಮಕ್ಕಳು; ಅಂದಣ: ಸುಂದರ; ಸಂದಣಿ: ಗುಂಪು, ಸಮೂಹ; ಅನಿಬರು: ಅಷ್ಟುಜನ; ರಾಣಿ: ಅರಸಿ; ದಂಡಿಗೆ: ಪಲ್ಲಕ್ಕಿ;

ಪದವಿಂಗಡಣೆ:
ಮುಂದೆ +ಮೋಹರ +ತೆಗೆದು +ನಡೆದುದು
ಸಂದಣಿಸಿ +ನಕುಲಾದಿ +ಭೂಪರು
ಹಿಂದೆ +ಮಣಿಕೇವಣದ+ ದಡ್ಡಿಯ +ಬಿಗಿದ +ಬೀಯಗದ
ಗೊಂದಣದ +ಹೆಮ್ಮಕ್ಕಳ್+ಇದ್ದೆಸೆ
ಅಂದಣದ +ಸಂದಣಿಗಳಲಿ+ ನಡೆ
ತಂದವ್+ಅನಿಬರ+ ರಾಣಿವಾಸದ+ ದಂಡಿಗೆಗಳ್+ಅಂದು

ಅಚ್ಚರಿ:
(೧) ಣ ಕಾರದಿಂದ ಕೊನೆಗೊಳ್ಳುವ ಪದಗಳ ಬಳಕೆ – ಗೊಂದಣ, ಅಂದಣ, ಸಂದಣಿ, ಕೇವಣ, ಮಣಿ, ರಾಣಿ

ಪದ್ಯ ೧೩: ಶಲ್ಯನು ದುರ್ಯೋಧನನನ್ನು ಹೇಗೆ ಆಹ್ವಾನಿಸಿದನು?

ಅಂದಣವನಿಳಿದರಸನಾತಗೆ
ವಂದಿಸಿದನಾ ಮಾದ್ರಪತಿ ಸಾ
ನಂದದಲಿ ತೆಗೆದಪ್ಪಿ ತಂದನು ರಾಜಮಂದಿರಕೆ
ಇಂದಿದೇನಿದ್ದಿದ್ದು ನೀನೇ
ಬಂದ ಕಾರ್ಯ ವಿಶೇಷವೇನುಂ
ಟೆಂದು ಕೌರವರಾಯನನು ಬೆಸಗೊಂಡನಾ ಶಲ್ಯ (ಕರ್ಣ ಪರ್ವ, ೫ ಸಂಧಿ, ೧೩ ಪದ್ಯ)

ತಾತ್ಪರ್ಯ:
ದುರ್ಯೋಧನನ ಆಗಮನವನ್ನು ತಿಳಿದು ತನ್ನ ಅರಮನೆಯಿಂದ ಹೊರಬಂದನು. ಕೌರವನು ಪಲ್ಲಕ್ಕಿಯಿಂದಿಳಿದು ಶಲ್ಯನಿಗೆ ನಮಸ್ಕರಿಸಿದನು. ಶಲ್ಯನು ಸಂತೋಷ ಭರಿತನಾಗಿ ಅವನನ್ನು ಆಲಂಗಿಸಿಕೊಂಡು ಅರಮನೆಗೆ ಕರೆತಂದನು. “ಇದೇನು ಈ ದಿನ ನೀನೇ ನನ್ನ ಬಳಿಗೆ ಬರುವಂತಹ ವಿಶೇಷವಾದ ಕೆಲಸವೇನು ಎಂದು ಶಲ್ಯನು ಕೇಳಿದನು.

ಅರ್ಥ:
ಅಂದಣ: ಪಲ್ಲಕ್ಕಿ, ಮೇನೆ; ಇಳಿ: ಕೆಳಕ್ಕೆ ಬಾ; ಅರಸ: ರಾಜ; ವಂದಿಸು: ನಮಸ್ಕರಿಸು; ಮಾದ್ರಪತಿ: ಮಾದ್ರ ದೇಶದ ಒಡೆಯ (ಶಲ್ಯ); ಸಾನಂದ: ಸಂತೋಷ; ಅಪ್ಪಿ; ಅಪ್ಪುಗೆ; ರಾಜಮಂದಿರ: ಅರಮನೆ; ಕಾರ್ಯ: ಕೆಲಸ; ವಿಶೇಷ:ವಿಶಿಷ್ಟವಾದ, ಹೆಚ್ಚಾದ; ರಾಯ: ರಾಜ; ಬೆಸಗೊಂಡು:ಅಪ್ಪಣೆ, ಆದೇಶ;

ಪದವಿಂಗಡಣೆ:
ಅಂದಣವನ್+ಇಳಿದ್+ಅರಸನ್+ಆತಗೆ
ವಂದಿಸಿದನಾ+ ಮಾದ್ರಪತಿ+ ಸಾ
ನಂದದಲಿ+ ತೆಗೆದಪ್ಪಿ+ ತಂದನು +ರಾಜಮಂದಿರಕೆ
ಇಂದಿದೇನ್+ಇದ್ದಿದ್ದು+ ನೀನೇ
ಬಂದ +ಕಾರ್ಯ +ವಿಶೇಷವೇನ್
ಉಂಟೆಂದು +ಕೌರವರಾಯನನು+ ಬೆಸಗೊಂಡನಾ +ಶಲ್ಯ

ಅಚ್ಚರಿ:
(೧) ಅರಸ, ರಾಯ – ಸಮನಾರ್ಥಕ ಪದ
(೨) ಮಾದ್ರಪತಿ, ಶಲ್ಯ – ಕರೆದಿರುವ ಬಗೆ