ಪದ್ಯ ೧: ಯಜ್ಞವು ಮತ್ತೆ ಹೇಗೆ ಪ್ರಾರಂಭವಾಯಿತು?

ಕೇಳು ಜನಮೇಜಯ ಧರಿತ್ರೀ
ಪಾಲ ರಣ ಗಜಬಜದ ಗೋಳಾ
ಗೋಳಿ ತಣಿತುದು ಹಂತಿಗಟ್ಟಿತು ಮತ್ತೆ ನೃಪನಿಕರ
ಮೇಲಣಂತರ್ವೇದಿಗಳ ಮುನಿ
ಪಾಳಿ ಮಂತ್ರಾಹುತಿಗೆ ಕವಿವುರಿ
ನಾಲಗೆಯ ಲಾವಣಿಗೆ ತಳಿತುದು ಯಜ್ಞಕುಂಡದಲಿ (ಸಭಾ ಪರ್ವ, ೧೨ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುದ್ಧದ ಆರ್ಭಟವು ಶಿಶುಪಾಲನ ವಧೆಯಿಂದ ತಣ್ಣಗಾಯಿತು. ರಾಜರೆಲ್ಲರೂ ಮತ್ತೆ ಸಾಲಾಗಿ ಯಜ್ಞಭವನದಲ್ಲಿ ಕುಳಿತರು. ಅಂತರ್ವೇದಿಗಳಲ್ಲಿದ್ದ ಋಷಿಗಳು ಮಂತ್ರಪೂರ್ವಕವಾಗಿ ಕೊಟ್ಟ ಆಹುತಿಗಳಿಂದ ಯಜ್ಞಕುಂಡದಲ್ಲಿ ಅಗ್ನಿಜ್ವಾಲೆಗಳು ಮೇಲೆದ್ದವು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ, ಒಡೆಯ; ಧರಿತ್ರಿ: ಭೂಮಿ; ರಣ: ಯುದ್ಧ; ಗಜಬಜ: ಗೊಂದಲ; ಗೋಳು: ದುಃಖ; ಗೋಳಾಗೋಳಿ: ಆರ್ಭಟ; ತಣಿ: ತಣ್ಣಗಾಗು; ಹಂತಿ: ಸಾಲು; ಕಟ್ಟು: ನಿರ್ಮಿಸು; ನೃಪ: ರಾಜ; ನಿಕರ: ಗುಂಪು; ಅಂತರ್ವೇದಿ: ಯಜ್ಞಶಾಲೆಯ ಒಳಜಗುಲಿ; ಮುನಿ: ಋಷಿ; ಪಾಳಿ: ಗುಂಪು, ಸಾಲು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ಕವಿ: ಆವರಿಸು; ಉರಿ: ಬೆಂಕಿ; ನಾಲಗೆ: ಜಿಹ್ವೆ; ಲಾವಣಿಗೆ: ಮುತ್ತಿಗೆ; ತಳಿತ: ಚಿಗುರಿದ; ಯಜ್ಞ: ಕ್ರತು; ಕುಂಡ: ಹೋಮಕಾರ್ಯಕ್ಕಾಗಿ ನೆಲದಲ್ಲಿ ಮಾಡಿದ ಕುಣಿ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ+ ರಣ+ ಗಜಬಜದ +ಗೋಳಾ
ಗೋಳಿ +ತಣಿತುದು +ಹಂತಿ+ಕಟ್ಟಿತು +ಮತ್ತೆ +ನೃಪನಿಕರ
ಮೇಲಣ್+ಅಂತರ್ವೇದಿಗಳ+ ಮುನಿ
ಪಾಳಿ+ ಮಂತ್ರಾಹುತಿಗೆ+ ಕವಿ+ಉರಿ
ನಾಲಗೆಯ+ ಲಾವಣಿಗೆ+ ತಳಿತುದು +ಯಜ್ಞಕುಂಡದಲಿ

ಅಚ್ಚರಿ:
(೧) ಗೋಳಾಗೋಳಿ, ಮುನಿಪಾಳಿ – ಪ್ರಾಸ ಪದ