ಪದ್ಯ ೩೯: ಅಶ್ವತ್ಥಾಮನು ಹೇಗೆ ಸೇನೆಯನ್ನು ಕೊಂದನು?

ಲಾಯದಲಿ ಹೊಕ್ಕಿರಿದು ಕುದುರೆಯ
ಬೀಯ ಮಾಡಿದನಂತಕಂಗೆಯ
ಡಾಯುಧದ ಧಾರೆಯಲಿ ಕೊಟ್ಟನು ಕುಂಜರವ್ರಜವ
ರಾಯದಳ ಧರೆಯಂತೆ ನವಖಂ
ಡಾಯಮಾನವಿದಾಯ್ತು ಪಾಂಡವ
ರಾಯ ಕಟಕವ ಕೊಂದನಶ್ವತ್ಥಾಮ ಬೇಸರದೆ (ಗದಾ ಪರ್ವ, ೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಲಾಯವನ್ನು ಹೊಕ್ಕು ಆನೆ ಕುದುರೆಗಳನ್ನು ಕೊಚ್ಚಿ ಕೊಂದನು. ಭೂಮಿಯು ಒಂಬತ್ತು ಖಂಡಗಳಿಂದ ಕೂಡಿದಂತೆ ಪಾಂಡವ ಸೇನೆಯು ನವ ಖಂಡಮಯವಾಯಿತು. ಬೇಸರವಿಲ್ಲದೆ ಅಶ್ವತ್ಥಾಮನು ಸೇನೆಯನ್ನು ಕೊಂದನು.

ಅರ್ಥ:
ಲಾಯ: ಅಶ್ವಶಾಲೆ; ಹೊಕ್ಕು: ಸೇರು; ಕುದುರೆ: ಅಶ್ವ; ಬೀಯ: ವ್ಯಯ, ಖರ್ಚು; ಅಂತಕ: ಯಮ; ಆಯುಧ: ಶಸ್ತ್ರ; ಧಾರೆ: ವರ್ಷ; ಕೊಡು: ನೀಡು; ಕುಂಜರ: ಆನೆ; ವ್ರಜ: ಗುಂಪು; ರಾಯ: ರಾಜ; ದಳ: ಸೈನ್ಯ; ಧರೆ: ಭೂಮಿ; ನವ: ಹೊಸ; ಖಂಡ: ಮಾಂಸ; ಕಟಕ: ಸೈನ್ಯ; ಕೊಂದು: ಕೊಲ್ಲು; ಬೇಸರ: ನೋವು;

ಪದವಿಂಗಡಣೆ:
ಲಾಯದಲಿ +ಹೊಕ್ಕಿರಿದು +ಕುದುರೆಯ
ಬೀಯ +ಮಾಡಿದನ್+ಅಂತಕಂಗೆ+
ಅಡಾಯುಧದ +ಧಾರೆಯಲಿ +ಕೊಟ್ಟನು+ ಕುಂಜರ+ವ್ರಜವ
ರಾಯದಳ +ಧರೆಯಂತೆ+ ನವ+ಖಂಡ
ಆಯಮಾನವಿದಾಯ್ತು +ಪಾಂಡವ
ರಾಯ +ಕಟಕವ +ಕೊಂದನ್+ಅಶ್ವತ್ಥಾಮ +ಬೇಸರದೆ

ಅಚ್ಚರಿ:
(೧) ಲಾಯ, ಬೀಯ, ರಾಯ – ಪ್ರಾಸ ಪದಗಳು
(೨) ಸಾಯಿಸಿದನು ಎಂದು ಹೇಳುವ ಪರಿ – ಅಂತಕಂಗೆಯಡಾಯುಧದ ಧಾರೆಯಲಿ ಕೊಟ್ಟನು ಕುಂಜರವ್ರಜವ

ಪದ್ಯ ೫೦: ದ್ರೋಣನು ಎಷ್ಟು ಜನರನ್ನು ಸದೆಬಡಿದನು?

ಮೊದಲಲೌಕಿದ ಚಾತುರಂಗವ
ಸದೆದನೊಂದೇ ಲಕ್ಷವನು ಮೀ
ರಿದರೆ ಮೋದಿದನೆಂಟುಲಕ್ಷವನೊಂದು ನಿಮಿಷದಲಿ
ಕದನದಲಿ ದಿಗ್ದೇವಿಯರಿಗಿ
ಕ್ಕಿದನು ಲಕ್ಷವನೇಳು ಲಕ್ಷವ
ನೊದಗಿಸಿದನಂತಕನ ಪುರಿಗವನೀಶ ಕೇಳೆಂದ (ದ್ರೋಣ ಪರ್ವ, ೧೮ ಸಂಧಿ, ೫೦ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ ಕೇಳು, ದ್ರೋಣನು ಮೊದಲು ಬಂದ ಒಂದು ಲಕ್ಷ ಸೈನ್ಯವನ್ನು ಸದೆದು ಕೆಡಹಿದನು. ಆ ನಂತರ ಮೇಲಿ ಮೀರಿ ಬಂದ ಎಂಟು ಲಕ್ಷ ಸೈನ್ಯವನ್ನು ನೆಲದ ಮೇಲೆ ನಾದಿದನು. ದಿಗ್ದೇವಿಯರಿಗೆ ಒಂದು ಲಕ್ಷ ಜನರನ್ನೂ ಯಮಪುರಕ್ಕೆ ಎಂಟು ಲಕ್ಷವನ್ನೂ ಆಹಾರವಾಗಿ ಕಳಿಸಿಕೊಟ್ಟನು.

ಅರ್ಥ:
ಮೊದಲು: ಮುಂಚಿತವಾಗಿ; ಔಕು: ಒತ್ತು, ಹಿಚುಕು; ಸದೆ:ಹೊಡಿ, ಬಡಿ, ಕೊಲ್ಲು; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಮೀರು: ಉಲ್ಲಂಘಿಸು, ಅತಿಕ್ರಮಿಸು; ಮೋದು: ಪೆಟ್ಟು, ಹೊಡೆತ; ನಿಮಿಷ: ಕ್ಷಣ; ಕದನ: ಯುದ್ಧ; ದಿಗ್: ದಿಕ್ಕು; ದೇವಿ: ದೇವತೆ; ಒದಗು: ಲಭ್ಯ, ದೊರೆತುದು; ಅಂತಕ: ಯಮ; ಪುರಿ: ನಗರ; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮೊದಲ್+ ಔಕಿದ +ಚಾತುರಂಗವ
ಸದೆದನ್+ಒಂದೇ +ಲಕ್ಷವನು +ಮೀ
ರಿದರೆ +ಮೋದಿದನ್+ಎಂಟು+ಲಕ್ಷವನ್+ಒಂದು +ನಿಮಿಷದಲಿ
ಕದನದಲಿ +ದಿಗ್ದೇವಿಯರಿಗ್
ಇಕ್ಕಿದನು +ಲಕ್ಷವನ್+ಏಳು +ಲಕ್ಷವನ್
ಒದಗಿಸಿದನ್+ಅಂತಕನ +ಪುರಿಗ್+ಅವನೀಶ +ಕೇಳೆಂದ

ಅಚ್ಚರಿ:
(೧) ಲಕ್ಷ ಪದದ ಬಳಕೆ – ೩ ಬಾರಿ ಬಳಕೆ;
(೨) ಸತ್ತರು ಎಂದು ಹೇಳುವ ಪರಿ – ಕದನದಲಿ ದಿಗ್ದೇವಿಯರಿಗಿಕ್ಕಿದನು ಲಕ್ಷವನೇಳು ಲಕ್ಷವನೊದಗಿಸಿದನಂತಕನ ಪುರಿಗ್

ಪದ್ಯ ೩೬: ದ್ರೋಣನು ಸಂಹರಿಸಿದ ಸೈನ್ಯದ ಸಂಖ್ಯೆ ಎಷ್ಟು?

ಮತ್ತೆ ಮುರಿದನು ವೈರಿ ಬಲದಲಿ
ಹತ್ತು ಸಾವಿರ ಕರಿಘಟೆಯ ನೈ
ವತ್ತು ಸಾವಿರ ಹಯವ ನಿರ್ಛಾಸಿರ ಮಹಾರಥರ
ಹತ್ತುಕೋಟಿ ಪದಾತಿಯನು ಕೈ
ವರ್ತಿಸಿದ ನಂತಕನವರಿಗಿವ
ರತ್ತ ಬಿಟ್ಟನು ರಥವನಾ ದ್ರುಪದಾದಿ ನಾಯಕರ (ದ್ರೋಣ ಪರ್ವ, ೧೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ದ್ರೋಣನು ಮತ್ತೆ ಹತ್ತು ಸಾವಿರ ಆನೆಗಳು, ಐವತ್ತು ಸಾವಿರ ಕುದುರೆಗಳು, ಎರಡು ಸಾವಿರ ಮಹಾರಥರು, ಹತ್ತುಕೋಟಿ ಕಾಲಾಳುಗಳನ್ನು ಯಮದೂತರ ಕೈಗೊಪ್ಪಿಸಿ, ದ್ರುಪದನೇ ಮೊದಲಾದವರ ಕಡೆಗೆ ರಥವನ್ನು ತಿರುಗಿಸಿದನು.

ಅರ್ಥ:
ಮುರಿ: ಸೀಳು; ವೈರಿ: ಶತ್ರು; ಬಲ: ಸೈನ್ಯ; ಸಾವಿರ: ಸಹಸ್ರ; ಕರಿಘಟೆ: ಆನೆಗಳ ಗುಂಪು; ಹಯ: ಕುದುರೆ; ಇರ್ಛಾಸಿರ: ಎರಡು ಸಾವಿರ; ಮಹಾರಥ: ಪರಾಕ್ರಮಿ; ಕೋಟಿ: ಅಸಂಖ್ಯಾತ; ಪದಾತಿ: ಕಾಲಾಳು; ಅಂತಕ: ಯಮ; ಕೈ: ಹಸ್ತ; ವರ್ತಿಸು: ವ್ಯವಹರಿಸು, ಮಾಡು; ರಥ: ಬಂಡಿ; ನಾಯಕ: ಒಡೆಯ;

ಪದವಿಂಗಡಣೆ:
ಮತ್ತೆ +ಮುರಿದನು +ವೈರಿ +ಬಲದಲಿ
ಹತ್ತು +ಸಾವಿರ +ಕರಿಘಟೆಯನ್ +
ಐವತ್ತು +ಸಾವಿರ +ಹಯವನ್+ಇರ್ಛಾಸಿರ +ಮಹಾರಥರ
ಹತ್ತುಕೋಟಿ +ಪದಾತಿಯನು+ ಕೈ
ವರ್ತಿಸಿದನ್ + ಅಂತಕನ್+ಅವರಿಗ್+ಇವ
ರತ್ತ +ಬಿಟ್ಟನು +ರಥವನಾ+ ದ್ರುಪದಾದಿ+ ನಾಯಕರ

ಅಚ್ಚರಿ:
(೧) ಹತ್ತು, ಐವತ್ತು – ಪ್ರಾಸ ಪದಗಳು

ಪದ್ಯ ೪೦: ಅಭಿಮನ್ಯುವು ನಿಶಸ್ತ್ರವಾಗಿ ಹೇಗೆ ಹೋರಾಡಿದನು?

ವಿಷದ ಹುಟ್ಟಿಯೊಳೆರಗಿ ನೊಣ ಜೀ
ವಿಸುವುದೇ ಶಿವ ಶಿವ ಕುಮಾರನ
ಮುಸುಡ ಮುಂದಕೆ ಬಿದ್ದು ಬದುಕುವುದುಂಟೆ ಭಟನಿಕರ
ಕುಸುರಿದರಿದನು ಕರಿಘಟೆಯನಿ
ಪ್ಪಸರದಲಿ ಕಾಲಾಳು ಕುದುರೆಗ
ಳಸುವ ಸೂರೆಯ ಬಿಟ್ಟನಂತಕ ದೂತ ಸಂತತಿಗೆ (ದ್ರೋಣ ಪರ್ವ, ೬ ಸಂಧಿ, ೪೦ ಪದ್ಯ)

ತಾತ್ಪರ್ಯ:
ವಿಷ ತುಂಬಿದ ಜೀನುಗೂಡಿಗೆ ಎರಗಿ ನೊಣವು ಬದುಕಿ ಉಳಿಯಬಲ್ಲುದೇ? ಶಿವ ಶಿವಾ, ಅಭಿಮನ್ಯುವಿನ ಮುಂದೆ ಬಂದವರು ಬದುಕಿ ಉಳಿಯುವುದುಂಟೇ? ನಿಷ್ಠುರನಾಗಿ ಆನೆ, ಕುದುರೆ ಕಾಲಾಳುಗಳನ್ನು ಕೊಚ್ಚಿ ಕೊಂದು ಯಮನಪುರಿಗೆ ಕಳುಹಿಸಿದನು.

ಅರ್ಥ:
ವಿಷ: ಗರಳು; ಹುಟ್ಟಿ: ಗೂಡು; ಎರಗು: ಬಾಗು; ನೊಣ: ಕೀಟ; ಜೀವಿಸು: ಬದುಕು; ಶಿವ: ಶಂಕರ; ಕುಮಾರ: ಪುತ್ರ; ಮುಸುಡು: ಮುಖ; ಬಿದ್ದು: ಬೀಳು; ಬದುಕು: ಜೀವಿಸು; ಭಟ: ಸೈನಿಕ; ನಿಕರ: ಗುಂಪು; ಕುಸುರಿ: ಸೂಕ್ಷ್ಮವಾದ; ಅರಿ: ಸೀಳು; ಕರಿಘಟೆ: ಆನೆಗಳ ಗುಂಪು; ನಿಪ್ಪಸರ: ಅತಿಶಯ; ಕಾಲಾಳು: ಸೈನಿಕ; ಕುದುರೆ: ಅಶ್ವ; ಅಸು: ಪ್ರಾಣ; ಸೂರೆ: ಕೊಳ್ಳೆ, ಲೂಟಿ; ಅಂತಕ: ಯಮ; ದೂತ: ಸೇವಕ; ಸಂತತಿ: ವಂಶ;

ಪದವಿಂಗಡಣೆ:
ವಿಷದ +ಹುಟ್ಟಿಯೊಳ್+ಎರಗಿ+ ನೊಣ+ ಜೀ
ವಿಸುವುದೇ +ಶಿವ+ ಶಿವ+ ಕುಮಾರನ
ಮುಸುಡ +ಮುಂದಕೆ +ಬಿದ್ದು +ಬದುಕುವುದುಂಟೆ +ಭಟನಿಕರ
ಕುಸುರಿದ್+ಅರಿದನು +ಕರಿಘಟೆಯ
ನಿಪ್ಪಸರದಲಿ +ಕಾಲಾಳು +ಕುದುರೆಗಳ್
ಅಸುವ +ಸೂರೆಯ +ಬಿಟ್ಟನ್+ಅಂತಕ +ದೂತ +ಸಂತತಿಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ವಿಷದ ಹುಟ್ಟಿಯೊಳೆರಗಿ ನೊಣ ಜೀವಿಸುವುದೇ
(೨) ಸಾಯಿಸಿದನು ಎಂದು ಹೇಳುವ ಪರಿ – ಅಸುವ ಸೂರೆಯ ಬಿಟ್ಟನಂತಕ ದೂತ ಸಂತತಿಗೆ

ಪದ್ಯ ೨೬: ಯುದ್ಧರಂಗವು ಹೇಗೆ ಕಂಡಿತು?

ಹಳಚುವಸಿಗಳ ಖಣಿಖಟಿಲು ಕಳ
ಕಳಕೆ ಮಿಗೆ ಹೊಯ್ದಾಡಿತುರುಳುವ
ತಲೆಯ ಬೀಳುವ ಹೆಣನ ಧಾರಿಡುವರುಣ ವಾರಿಗಳ
ತಳಿತ ಖಂಡದ ಹರಿದ ಕರುಳಿನ
ಕಳಚಿದೆಲುವಿನ ಕುಣಿವ ಮುಂಡದ
ಕೊಳುಗುಳದ ಹೆಬ್ಬೆಳಸು ಹೆಚ್ಚಿಸಿತಂತಕನ ಪುರವ (ದ್ರೋಣ ಪರ್ವ, ೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ಬೀಸಿದ ಕತ್ತಿಗಳ ಖಣಿಖಟಿಲು ಸದ್ದು ಹೆಚ್ಚಲು ಯುದ್ಧರಂಗೇರಿತು. ಕತ್ತರಿಸಿ ಉರುಳಿ ಬಿದ್ದ ತಲೆಗಳು, ದೊಪ್ಪನೆ ಬೀಳುವ ಹೆಣಗಳು, ಧಾರೆಯಾಗಿ ಸುರಿಯುವ ರಕ್ತ, ಮೇಲೆದ್ದ ಮಾಂಸಖಂಡಗಳು, ಹರಿದ ಕರುಳುಗಳು, ಕಿತ್ತು ಬಂದ ಎಲುಬುಗಳು, ಕುಣಿಯುವ ಮುಂಡಗಳು ರಣಭೂಮಿಯಲ್ಲಿ ಬೆಳೆದು, ಯಮಪುರದಲ್ಲಿ ವೀರರ ಸಂಖ್ಯೆ ಹೆಚ್ಚಿತು.

ಅರ್ಥ:
ಹಳಚು: ತಾಗುವಿಕೆ, ಬಡಿ; ಅಸಿ: ಕತ್ತಿ; ಖಣಿ: ಕಲ್ಲು, ಶಿಲೆ; ಕಳ: ರಣರಂಗ; ಮಿಗೆ: ಮತ್ತು, ಅಧಿಕ; ಹೊಯ್ದಾಡು: ಹೋರಾಡು; ಉರುಳು: ಕೆಳಕ್ಕೆ ಬೀಳು; ತಲೆ: ಶಿರ; ಬೀಳು: ಕೆಳಕ್ಕೆ – ಕೆಡೆ, ಕುಸಿ; ಹೆಣ: ಜೀವವಿಲ್ಲದ ಶರೀರ; ಧಾರಿಡು: ಒಂದೇ ಸಮನಾಗಿ ತೊಟ್ಟಿಡು; ಅರುಣ: ಕೆಂಪುಬಣ್ಣ; ವಾರಿ: ನೀರು, ಜಲ; ತಳಿತ: ಚಿಗುರಿದ; ಖಂಡ: ತುಂಡು, ಚೂರು; ಹರಿ: ಕಡಿ, ಕತ್ತರಿಸು; ಕರುಳು: ಪಚನಾಂಗ; ಕಳಚು: ಬೇರ್ಪಡಿಸು; ಎಲುಬು: ಮೂಳೆ; ಕುಣಿ: ನರ್ತಿಸು; ಮುಂಡ: ತಲೆಯಿಲ್ಲದ ದೇಹ, ಅಟ್ಟೆ; ಕೊಳುಗುಳ: ಯುದ್ಧ, ಕಾಳಗ; ಹೆಬ್ಬೆಳಸು: ಸಮೃದ್ಧ ಫಸಲು; ಹೆಚ್ಚಿಸು: ಅಧಿಕವಾಗು; ಅಂತಕ: ಯಮ; ಪುರ: ಊರು;

ಪದವಿಂಗಡಣೆ:
ಹಳಚುವ್+ಅಸಿಗಳ +ಖಣಿಖಟಿಲು +ಕಳ
ಕಳಕೆ +ಮಿಗೆ +ಹೊಯ್ದಾಡಿತ್+ಉರುಳುವ
ತಲೆಯ +ಬೀಳುವ +ಹೆಣನ +ಧಾರಿಡುವ್+ಅರುಣ +ವಾರಿಗಳ
ತಳಿತ+ ಖಂಡದ+ ಹರಿದ +ಕರುಳಿನ
ಕಳಚಿದ್+ಎಲುವಿನ +ಕುಣಿವ +ಮುಂಡದ
ಕೊಳುಗುಳದ +ಹೆಬ್ಬೆಳಸು +ಹೆಚ್ಚಿಸಿತ್+ಅಂತಕನ +ಪುರವ

ಅಚ್ಚರಿ:
(೧) ಖಣಿಖಟಿಲು, ಕಳಕಳ, ಕೊಳುಗುಳ – ಪದಗಳ ಬಳಕೆ
(೨) ರಕ್ತ ಎಂದು ಹೇಳುವ ಪರಿ – ಬೀಳುವ ಹೆಣನ ಧಾರಿಡುವರುಣ ವಾರಿಗಳ

ಪದ್ಯ ೧೧: ಯುದ್ಧವು ಹೇಗೆ ಅಧ್ಬುತವಾಗಿತ್ತು?

ಅಡಸಿ ತುಂಬಿತು ಗಗನ ತಲೆಗಳ
ಗಡಣದಲಿ ದೆಸೆಯೆಲ್ಲ ಬಾಣದ
ಕಡಿಯಮಯವಾಯಿತ್ತು ಹೆಣಮಯವಾಯ್ತು ರಣಭೂಮಿ
ಕಡುಗಲಿಯ ಕೈ ಚಳಕದಂಬಿಂ
ಗೊಡಲ ತೆತ್ತುದು ವೈರಿಬಲ ಬಿಡೆ
ಜಡಿದುದಂತಕ ನಗರವದ್ಭುತವಾಯ್ತು ಸಂಗ್ರಾಮ (ಭೀಷ್ಮ ಪರ್ವ, ೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಪಾಂಡವ ಸೈನಿಕರ ತಲೆಗಳು ಭೀಷ್ಮನ ಬಾಣಗಳಿಂದ ಕತ್ತರಿಸಿ ಆಕಾಶವನ್ನೆಲ್ಲಾ ತುಂಬಿದವು. ದಿಕ್ಕುಗಳೆಲ್ಲವೂ ಬಾಣಗಳ ತುಂಡಿನಿಂದ ತುಂಬಿದವು. ರಣಭೂಮಿಯು ಹೆಣಗಳಿಂದ ತುಂಬಿತು. ಭೀಷ್ಮನ ಚಾತುರ್ಯದೆಸೆಗೆಗೆ ವೈರಿ ಸೈನಿಕರು ತಮ್ಮ ದೇಹಗಳನ್ನು ಒಪ್ಪಿಸಿದರು. ಯಮನಗರ ತುಂಬಿತು. ಯುದ್ಧವು ಅದ್ಭುತವಾಯಿತು.

ಅರ್ಥ:
ಅಡಸು: ಬಿಗಿಯಾಗಿ ಒತ್ತು; ತುಂಬು: ಭರ್ತಿಯಾಗು, ಪೂರ್ಣವಾಗು; ಗಗನ: ಆಗಸ; ತಲೆ: ಶಿರ; ಗಡಣ: ಕೂಡಿಸುವಿಕೆ; ದೆಸೆ: ದಿಕ್ಕು; ಬಾಣ: ಅಂಬು; ಕಡಿ: ಸೀಳು; ಹೆಣ: ಜೀವವಿಲ್ಲದ ಶರೀರ; ರಣಭೂಮಿ: ರಣರಂಗ; ಕಡುಗಲಿ: ಶೂರ; ಚಳಕ: ಚಾತುರ್ಯ; ಅಂಬು: ಬಾಣ; ತೆತ್ತು: ತಿರಿಚು, ಸುತ್ತು; ವೈರಿ: ಶತ್ರು; ಬಲ: ಸೇನೆ; ಬಿಡು: ತೊರೆ, ತ್ಯಜಿಸು; ಜಡಿ: ಕೊಲ್ಲು; ಅಂತಕ: ಯಮ; ನಗರ: ಊರು; ಅದ್ಭುತ: ಆಶ್ಚರ್ಯ; ಸಂಗ್ರಾಮ: ಯುದ್ಧ, ಕಾಳಗ; ಒಡಲು: ದೇಹ;

ಪದವಿಂಗಡಣೆ:
ಅಡಸಿ +ತುಂಬಿತು +ಗಗನ +ತಲೆಗಳ
ಗಡಣದಲಿ +ದೆಸೆಯೆಲ್ಲ +ಬಾಣದ
ಕಡಿಯಮಯವಾಯಿತ್ತು +ಹೆಣಮಯವಾಯ್ತು +ರಣಭೂಮಿ
ಕಡುಗಲಿಯ +ಕೈಚಳಕದ್+ಅಂಬಿಂಗ್
ಒಡಲ+ ತೆತ್ತುದು +ವೈರಿಬಲ +ಬಿಡೆ
ಜಡಿದುದ್+ಅಂತಕ +ನಗರವ್+ಅದ್ಭುತವಾಯ್ತು +ಸಂಗ್ರಾಮ

ಅಚ್ಚರಿ:
(೧) ರಣರಂಗದ ರೌದ್ರ ರೂಪ – ಹೆಣಮಯವಾಯ್ತು ರಣಭೂಮಿ; ವೈರಿಬಲ ಬಿಡೆ ಜಡಿದುದಂತಕ ನಗರವದ್ಭುತವಾಯ್ತು ಸಂಗ್ರಾಮ

ಪದ್ಯ ೧೧: ಯಮನು ಯಾವ ಪರಿಗ್ರಹವನ್ನು ಸ್ವೀಕರಿಸಿದನು?

ತೆಗೆದುದುಬ್ಬಿದ ಧೂಳಿ ಹೆಣಸಾ
ಲುಗಳು ಹರೆದವು ರಕುತದರೆವೊನ
ಲುಗಳು ಹರಿದವು ಹೊರೆದನಂತಕನುರುಪರಿಗ್ರಹವ
ಅಗಿದು ಮಗ್ಗಿತು ಚೂಣಿ ಬಲುಕಾ
ಳೆಗವನೊಯ್ಯಾರಿಸುತ ರಾಯರು
ತೆಗೆಸಿದರು ಸೇನೆಯನು ನೂಕಿದರಂದು ಬಿಲ್ಲವರ (ಭೀಷ್ಮ ಪರ್ವ, ೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕಾಲಾಳುಗಳ ಪಾದ ಧೂಳಿ ಅಡಗಿತು. ಹೆಣಗಳು ಸಾಲುಸಾಲಾಗಿ ಬಿದ್ದವು. ರಕ್ತಾ ತೊರೆಗಳು ಹರಿದವು. ಯಮನು ಪರಿಗ್ರಹವನ್ನು ಅತಿಶಯವಗಿ ಮಾಡಿದನು. ಕಾಲಾಳುಗಳ ಚೂಣಿ ಮುರಿಯಿತು. ಕಾಲಾಳುಗಳ ಸೈನ್ಯವನ್ನು ತೆಗೆಸಿ ರಾಜರು ಬಿಲ್ಲಾಳುಗಳನ್ನು ಯುದ್ಧಕ್ಕೆ ಕಳಿಸಿದರು.

ಅರ್ಥ:
ತೆಗೆ: ಈಚೆಗೆ ತರು, ಹೊರತರು; ಉಬ್ಬು: ಹೆಚ್ಚಾಗು; ಧೂಳು: ಮಣ್ಣಿನ ಕಣ; ಹೆಣ: ಜೀವವಿಲ್ಲದ ಶರೀರ; ಸಾಲು: ಪಂಕ್ತಿ; ಹರೆ: ಹರಡು; ರಕುತ: ನೆತ್ತರು; ಒನಲು: ಕೋಪಿಸಿಕೊಳ್ಳು; ಹರಿ: ಹರಡು; ಹೊರೆ: ಭಾರ
ಅಂತಕ: ಯಮ; ಪರಿಗ್ರಹ: ಸ್ವೀಕರಿಸು; ಅಗಿ: ಜಗಿ, ಹೆದರು; ಮಗ್ಗು: ಕುಂದು, ಕುಗ್ಗು; ಚೂಣಿ: ಮುಂದಿನ ಸಾಲು; ಕಾಳೆಗ: ಯುದ್ಧ; ಒಯ್ಯಾರ: ಬೆಡಗು, ಅಂದ; ರಾಯ: ರಾಜ; ತೆಗೆಸು: ಹೊರತರು; ಸೇನೆ: ಸೈನ್ಯ, ಬಲ; ನೂಕು: ತಳ್ಳು; ಬಿಲ್ಲವ: ಬಿಲ್ಲುಗಾರ, ಬಿಲ್ಲಾಳು; ಉರು: ವಿಶೇಷವಾದ;

ಪದವಿಂಗಡಣೆ:
ತೆಗೆದುದ್+ಉಬ್ಬಿದ +ಧೂಳಿ +ಹೆಣ+ಸಾ
ಲುಗಳು+ ಹರೆದವು+ ರಕುತದರೆ+ಒನ
ಲುಗಳು+ ಹರಿದವು+ ಹೊರೆದನ್+ಅಂತಕನ್+ಉರು+ಪರಿಗ್ರಹವ
ಅಗಿದು+ ಮಗ್ಗಿತು +ಚೂಣಿ +ಬಲು+ಕಾ
ಳೆಗವನ್+ಒಯ್ಯಾರಿಸುತ +ರಾಯರು
ತೆಗೆಸಿದರು +ಸೇನೆಯನು +ನೂಕಿದರ್+ಅಂದು +ಬಿಲ್ಲವರ

ಅಚ್ಚರಿ:
(೧) ಯಮನ ಪರಿಗ್ರಹ – ರಕುತದರೆವೊನಲುಗಳು ಹರಿದವು ಹೊರೆದನಂತಕನುರುಪರಿಗ್ರಹವ

ಪದ್ಯ ೮: ಸೈನಿಕರು ಯಾವ ಊರನ್ನು ಸೇರಿದರು?

ಝಡಿವ ಕೈದುಗಳುರಿಯ ಕೆಚ್ಚುವ
ನಡಸಿ ಕಾರಿದವಲಗು ಖಣಿಖಟಿ
ಲಿಡುವ ದನಿ ಮಿಗೆ ತುಂಬಿತಂಬುಜಬಂಧುವಾಲಯದ
ಕಡುಗಿ ಹೊಯಿದಾಡಿದರು ಡಾವಣೆ
ವಿಡಿದು ಜೋಲುವ ಕರುಳ ಹಿಣಿನೊಳು
ತೊಡಕಿ ತೋಟಿಯ ಭಟರು ತರುಬಿದರಂತಕನ ಪುರಿಗೆ (ಭೀಷ್ಮ ಪರ್ವ, ೪ ಸಂಧಿ, ೮ ಪದ್ಯ)

ತಾತ್ಪರ್ಯ:
ಆಯುಧಗಳನ್ನು ಜಡಿದು ಹೋರಾಡುವಾಗ ಖಣಿ ಖಟಲೆಂಬ ಸದ್ದು ಸೂರ್ಯಮಂಡಲವನ್ನು ಆವರಿಸಿತು. ಮುನ್ನುಗ್ಗಿ ಖತಿಯಿಂದ ಹೋರಾಡಲು, ಉದ್ದನೆಯ ಹಗ್ಗದಂತೆ ಕರುಳುಗಳು ಹೊರ ಚೆಲ್ಲಿದವು. ಅಲ್ಲಿಗೂ ಬಿಡದೆ ಹೋಡೆದಾಡಿ ಯಮನಗರವನ್ನು ಗುಂಪಾಗಿ ಸೇರಿದರು.

ಅರ್ಥ:
ಝಡಿ: ಹೊಡೆತ; ಝಡಿಕೆ: ವೇಗ; ಕೈದು: ಆಯುಧ; ಉರಿ: ಬೆಂಕಿ; ಕೆಚ್ಚು: ಧೈರ್ಯ, ಸಾಹಸ; ಅಡಸು: ಮುತ್ತು, ಆಕ್ರಮಿಸು; ಕಾರು: ಹೊರಹಾಕು; ಅಲಗು: ಆಯುಧಗಳ ಹರಿತವಾದ ಅಂಚು; ಖಣಿಖಟಿಲ: ಶಬ್ದವನ್ನು ವಿವರಿಸುವ ಪದ; ದನಿ: ಶಬ್ದ; ಮಿಗೆ: ಅಧಿಕ; ತುಂಬು: ಆವರಿಸು; ಅಂಬುಜಬಂಧು: ಸೂರ್ಯ; ಅಂಬುಜ: ಕಮಲ; ಆಲಯ: ಮನೆ; ಕಡುಗು: ಶಕ್ತಿಗುಂದು; ಹೊಯಿದಾಡು: ಹೋರಾದು; ಡಾವಣೆ: ಸಮೂಹ; ಜೋಲು: ತೇಲಾಡು; ಕರುಳು: ಪಚನಾಂಗ; ಹಿಣಿಲು: ಹೆರಳು; ತೊಡಕು: ಸಿಕ್ಕು, ಗೋಜು, ಗೊಂದಲ; ತೋಟಿ: ಕಲಹ, ಜಗಳ; ಭಟ: ಸೈನಿಕ; ತರುಬು: ಎದುರಿಸು, ಪ್ರತಿಭಟಿಸು; ಅಂತಕ: ಯಮ; ಪುರಿ: ಊರು;

ಪದವಿಂಗಡಣೆ:
ಝಡಿವ +ಕೈದುಗಳ್+ಉರಿಯ +ಕೆಚ್ಚುವನ್
ಅಡಸಿ+ ಕಾರಿದವ್+ಅಲಗು +ಖಣಿಖಟಿಲ್
ಇಡುವ +ದನಿ +ಮಿಗೆ +ತುಂಬಿತ್+ಅಂಬುಜಬಂಧುವ್+ಆಲಯದ
ಕಡುಗಿ +ಹೊಯಿದಾಡಿದರು +ಡಾವಣೆ
ವಿಡಿದು +ಜೋಲುವ +ಕರುಳ +ಹಿಣಿನೊಳು
ತೊಡಕಿ +ತೋಟಿಯ +ಭಟರು +ತರುಬಿದರ್+ಅಂತಕನ +ಪುರಿಗೆ

ಅಚ್ಚರಿ:
(೧) ಸೂರ್ಯನನ್ನು ಅಂಬುಜಬಂಧು ಎಂದು ಕರೆದಿರುವುದು
(೨) ಸತ್ತವರ ಚಿತ್ರಣ – ಕಡುಗಿ ಹೊಯಿದಾಡಿದರು ಡಾವಣೆವಿಡಿದು ಜೋಲುವ ಕರುಳ ಹಿಣಿನೊಳು
ತೊಡಕಿ ತೋಟಿಯ ಭಟರು ತರುಬಿದರಂತಕನ ಪುರಿಗೆ

ಪದ್ಯ ೩೩: ಅರ್ಜುನನು ಯಾವ ಮರದ ಬಳಿಗೆ ಹೋದನು?

ಖೇಡತನ ಬೇಡೆಲವೊ ರಣದೊಳ
ಗೋಡಿಸುವೆನಹಿತರನು ಹರಣವ
ಹೂಡಿಸುವೆನಂತಕನ ನಗರಿಗೆ ಥಟ್ಟನಡೆಹೊಯ್ದು
ಕೋಡದಿರು ಕೊಂಕದಿರು ಧೈರ್ಯವ
ಮಾಡಿ ಸಾರಥಿಯಾಗೆನುತ ಕಲಿ
ಮಾಡಿಕೊಂಡೊಯ್ದನು ಸಮೀಪದ ಶಮಿಯ ಹೊರೆಗಾಗಿ (ವಿರಾಟ ಪರ್ವ, ೭ ಸಂಧಿ, ೩೩ ಪದ್ಯ)

ತಾತ್ಪರ್ಯ:
ಅರ್ಜುನನು ಉತ್ತರನ ಭಯವನ್ನು ಶಮನಗೊಳಿಸುತ್ತಾ, ಎಲೈ ಉತ್ತರ ಹೆದರಬೇಡ, ಯುದ್ಧದಲ್ಲಿ ಶತ್ರುಗಳನ್ನು ಓಡಿಸುತ್ತೇನೆ, ಸೈನ್ಯವನ್ನು ಹೊಯ್ದು ಶತ್ರುಗಳನ್ನು ಸಂಹರಿಸಿ ಅವರ ಪ್ರಾಣಗಳನ್ನು ಗಾಡಿಯಲ್ಲಿ ತುಂಬಿ ಯಮಪುರಕ್ಕೆ ಕಳಿಸುತ್ತೇನೆ, ಹಿಂಜರಿಯಬೇಡ, ಧೈರ್ಯದಿಂದ ರಥವನ್ನು ಓಡಿಸು ಎಂದು ಹೇಳಿ ಉತ್ತರನಿಗೆ ಧೈರ್ಯತುಂಬಿ ಹತ್ತಿರದಲ್ಲಿದ್ದ ಬನ್ನಿಯ ಮರದ ಬಳಿಗೆ ರಥವನ್ನು ಹೊಡೆಸಿದನು.

ಅರ್ಥ:
ಖೇಡ: ಹೆದರಿದವನು, ಭಯಗ್ರಸ್ತ; ಬೇಡ: ಸಲ್ಲದು; ರಣ: ಯುದ್ಧ; ಓಡಿಸು: ಪಲಾಯನ; ಅಹಿತ: ವೈರಿ; ಹರಣ: ಜೀವ, ಪ್ರಾಣ; ಹೂಡಿಸು: ಸಾಗಿಸು, ರವಾನಿಸು; ಅಂತಕ: ಯಮ; ನಗರಿ: ಊರು; ಥಟ್ಟು: ಸೈನ್ಯ, ಪಡೆ; ಅಡೆ: ಭರ್ತಿ ಮಾಡು; ಕೋಡು: ಭಯ ಅಂಜಿಕೆ; ಕೊಂಕು: ವಕ್ರೋಕ್ತಿ, ವ್ಯಂಗ್ಯ; ಧೈರ್ಯ: ಎದೆಗಾರಿಕೆ; ಸಾರಥಿ: ಸೂತ; ಕಲಿ: ಶೂರ; ಒಯ್ದನು: ತೆರಳು; ಸಮೀಪ: ಹತ್ತಿರ; ಹೊರೆ: ಆಶ್ರಯ;

ಪದವಿಂಗಡಣೆ:
ಖೇಡತನ +ಬೇಡ್+ಎಲವೊ +ರಣದೊಳಗ್
ಓಡಿಸುವೆನ್+ಅಹಿತರನು+ ಹರಣವ
ಹೂಡಿಸುವೆನ್+ಅಂತಕನ+ ನಗರಿಗೆ+ ಥಟ್ಟನ್+ಅಡೆಹೊಯ್ದು
ಕೋಡದಿರು +ಕೊಂಕದಿರು+ ಧೈರ್ಯವ
ಮಾಡಿ +ಸಾರಥಿಯಾಗೆನುತ +ಕಲಿ
ಮಾಡಿಕೊಂಡ್+ಒಯ್ದನು +ಸಮೀಪದ +ಶಮಿಯ +ಹೊರೆಗಾಗಿ

ಅಚ್ಚರಿ:
(೧) ಉತ್ತರನಿಗೆ ಧೈರ್ಯವನ್ನು ತುಂಬುವ ಪರಿ – ಕೋಡದಿರು ಕೊಂಕದಿರು ಧೈರ್ಯವಮಾಡಿ ಸಾರಥಿಯಾಗು

ಪದ್ಯ ೪: ಇಂದ್ರಕೀಲ ಪರ್ವತಕ್ಕೆ ಅರ್ಜುನನನ್ನು ನೋಡಲು ಯಾರು ಬಂದರು?

ವಿಕಟ ರಾಕ್ಷಸ ಯಕ್ಷ ಜನ ಗು
ಹ್ಯಕರು ಕಿನ್ನರಗಣಸಹಿತ ಪು
ಷ್ಪಕದಲೈತಂದನು ಧನೇಶ್ವರನಾ ತಪೋವನಕೆ
ಸಕಲ ಪಿತೃಗಣಸಹಿತ ದೂತ
ಪ್ರಕರ ಧರ್ಮಾಧ್ಯಕ್ಷರೊಡನಂ
ತಕನು ಬೆರಸಿದನಿಂದ್ರಕೀಳ ಮಹಾವನಾಂತರವ (ಅರಣ್ಯ ಪರ್ವ, ೮ ಸಂಧಿ, ೪ ಪದ್ಯ)

ತಾತ್ಪರ್ಯ:
ವಿಕಾರ ರೂಪದ ರಾಕ್ಷಸರು, ಯಕ್ಷರು, ಗುಹ್ಯಕರು, ಕಿನ್ನರರು, ಗಣಗಳೊಡನೆ ಕುಬೇರನು ಪುಷ್ಪಕ ವಿಮಾನದಲ್ಲಿ ಇಂದ್ರಕೀಲ ವನಕ್ಕೆ ಬಂದನು. ಯಮನು ಪಿತೃಗಣ ಧರ್ಮಾಧ್ಯಕ್ಷರ ಪರಿವಾರದೊಡನೆ ಇಂದ್ರಕೀಲ ಪರ್ವತಕ್ಕೆ ಅರ್ಜುನನನ್ನು ಕಾಣಲು ಬಂದನು.

ಅರ್ಥ:
ವಿಕಟ: ವಿಕಾರವಾದ, ಕುರೂಪಗೊಂಡ; ರಾಕ್ಷಸ: ದಾನವ; ಯಕ್ಷ: ದೇವತೆಗಳ ಒಂದು ವರ್ಗ; ಗುಹ್ಯಕ: ಯಕ್ಷ; ಕಿನ್ನರ: ಕಿಂಪುರುಷ, ಕುಬೇರನ ಪ್ರಜೆ; ಗಣ: ಗುಂಪು; ಸಹಿತ: ಜೊತೆ; ಪುಷ್ಪಕ: ವಿಮಾನದ ಹೆಸರು; ಧನೇಶ್ವರ: ಕುಬೇರ; ತಪೋವನ: ತಪಸ್ಸು ಮಾಡುವ ಕಾಡು; ಸಕಲ: ಎಲ್ಲಾ; ಪಿತೃ: ಪೂರ್ವಜ; ದೂತ: ರಾಯಭಾರಿ, ಸೇವಕ; ಪ್ರಕರ: ಗುಂಪು, ಸಮೂಹ; ಅಧ್ಯಕ್ಷ: ಒಡೆಯ; ಧರ್ಮ: ಧಾರಣೆ ಮಾಡಿದುದು; ಅಂತಕ: ಯಮ; ಬೆರಸು: ಸೇರು, ಕೂಡು; ಅಂತರ: ಸಮೀಪ; ವನ: ಕಾಡು; ಐತರು: ಬಂದು ಸೇರು;

ಪದವಿಂಗಡಣೆ:
ವಿಕಟ+ ರಾಕ್ಷಸ+ ಯಕ್ಷ +ಜನ +ಗು
ಹ್ಯಕರು +ಕಿನ್ನರ+ಗಣ+ಸಹಿತ+ ಪು
ಷ್ಪಕದಲ್+ಐತಂದನು +ಧನೇಶ್ವರನ್+ಆ+ ತಪೋವನಕೆ
ಸಕಲ+ ಪಿತೃ+ಗಣ+ಸಹಿತ +ದೂತ
ಪ್ರಕರ+ ಧರ್ಮಾಧ್ಯಕ್ಷರೊಡನ್+
ಅಂತಕನು +ಬೆರಸಿದನ್+ಇಂದ್ರಕೀಳ +ಮಹಾವನಾಂತರವ

ಅಚ್ಚರಿ:
(೧) ತಪೋವನ, ಮಹಾವನ – ಇಂದ್ರಕೀಲವನವನ್ನು ಕರೆದ ಪರಿ
(೨) ಧನೇಶ್ವರ, ಅಂತಕ – ಕುಬೇರ, ಯಮನನ್ನು ಕರೆದ ಪರಿ