ಪದ್ಯ ೪೯: ಕರ್ಣನನ್ನು ಹೇಗೆ ಹೊಗಳಿದರು?

ಬರಿಯ ಕಕ್ಕುಲಿತೆಯಲಿ ಕರ್ಣನ
ಮರೆಯ ಹೊಕ್ಕೆವು ಕರ್ಣನೀತನ
ತರುಬಿದನಲಾ ಶಕ್ತಿಯಾವೆಡೆಯೆಂದು ಕೆಲಕೆಲರು
ಕರುಬುತನವೇಕಕಟ ಪುಣ್ಯದ
ಕೊರೆತೆ ನಮ್ಮದು ಕರ್ಣನೇಗುವ
ನಿರಿತಕಂಜಿದ ನಾವೆ ಬಾಹಿರರೆಂದರುಳಿದವರು (ದ್ರೋಣ ಪರ್ವ, ೧೬ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕೌರವ ಯೋಧರು, ಬರಿಯ ಕಕುಲಾತಿಯಿಂದ ಕರ್ಣನ ಮರೆಹೊಕ್ಕೆವು, ಕರ್ಣನು ಇವನನ್ನು ತಡೆದು ನಿಲ್ಲಿಸಿದ. ಆದರೆ ಅವನ ಬಳಿಯಿರುವ ಶಕ್ತ್ಯಾಯುಧವೆಲ್ಲಿ ಎಂದು ಕೆಲವರು, ಮತ್ಸರವೇಕೆ ನಮ್ಮ ಪುಣ್ಯಹೀನವಾದರೆ ಕರ್ಣನೇನು ಮಾಡಲು ಸಾಧ್ಯ? ಘಟೋತ್ಕಚನ ಇರಿತಕ್ಕೆ ಹೆದರಿದ ನಾವೇ ಬಾರಿರರು ಎಂದು ಇನ್ನು ಕೆಲವರು ಮಾತನಾಡಿಕೊಂಡರು.

ಅರ್ಥ:
ಕಕ್ಕುಲಿತೆ: ಚಿಂತೆ; ಮರೆ: ಅಡ್ಡಿ, ತಡೆ; ಹೊಕ್ಕು: ಸೇರು; ತರುಬು: ತಡೆ, ನಿಲ್ಲಿಸು; ಶಕ್ತಿ: ಬಲ; ಕರುಬು: ಹೊಟ್ಟೆಕಿಚ್ಚು ಪಡು; ಅಕಟ: ಅಯ್ಯೋ; ಪುಣ್ಯ: ಸದಾಚಾರ; ಕೊರತೆ: ಕಡಮೆ; ಏಗು: ಸಾಗಿಸು; ಇರಿ: ಚುಚ್ಚು; ಅಂಜು: ಹೆದರು; ಬಾಹಿರ: ಹೊರಗೆ; ಉಳಿದ: ಮಿಕ್ಕ;

ಪದವಿಂಗಡಣೆ:
ಬರಿಯ +ಕಕ್ಕುಲಿತೆಯಲಿ +ಕರ್ಣನ
ಮರೆಯ +ಹೊಕ್ಕೆವು +ಕರ್ಣನ್+ಈತನ
ತರುಬಿದನಲಾ+ ಶಕ್ತಿಯಾವೆಡೆ+ಎಂದು+ ಕೆಲಕೆಲರು
ಕರುಬುತನವೇಕ್+ಅಕಟ +ಪುಣ್ಯದ
ಕೊರೆತೆ +ನಮ್ಮದು +ಕರ್ಣನೇಗುವನ್
ಇರಿತಕ್+ಅಂಜಿದ +ನಾವೆ +ಬಾಹಿರರ್+ಎಂದರ್+ಉಳಿದವರು

ಅಚ್ಚರಿ:
(೧) ಪುಣ್ಯದ ಮಹಿಮೆ – ಕರುಬುತನವೇಕಕಟ ಪುಣ್ಯದ ಕೊರೆತೆ ನಮ್ಮದು

ಪದ್ಯ ೫೧: ಕೃಷ್ಣನ ಆಗಮನವನ್ನು ಕುಮಾರವ್ಯಾಸ ಹೇಗೆ ವರ್ಣಿಸಿದ್ದಾರೆ?

ಕಂಜಸಂಭವ ಪಿತನು ಬಂದನು
ನಂಜಿನಲಿ ಪವಡಿಸುವ ಬಂದನು
ಕುಂಜರನ ಮೊರೆಗೇಳಿ ಸಲಹಿದ ದೇವನಿದೆ ಬಂದ
ಅಂಜನಾಸುತನೊಡೆಯ ಬಂದನು
ಅಂಜಿದಸುರನಿಗಭಯವಿತ್ತವ
ಭಂಜನೆಗೆ ಬಲುದೈವ ಬಂದನು ನೃಪತಿಯರಮನೆಗೆ (ಉದ್ಯೋಗ ಪರ್ವ, ೮ ಸಂಧಿ, ೫೧ ಪದ್ಯ)

ತಾತ್ಪರ್ಯ:
ಬ್ರಹ್ಮನ ಪಿತನಾದ ವಿಷ್ಣುವಿನ ಅವತಾರದಲ್ಲಿ ಕೃಷ್ಣ ಬಂದನು, ಸರ್ಪದ ಮೇಲೆ ಮಲಗುವ ದೇವ ಬಂದನು, ಆನೆಯ ಮೊರೆಕೇಳಿ ಅದನ್ನು ಸಲಹುವ ದೇವನಿಂದು ಬಂದನು, ಹನುಮಂತನ ಒಡೆಯನಾದ ರಾಮಾವತಾರದ ವಿಷ್ಣು ಇಂದು ಕೃಷ್ಣನ ರೂಪದಲ್ಲಿ ಬಂದನು, ಭಯಭೀತರಾದ ಸುರರಿಗೆ ಅಭಯವನ್ನು ನೀಡಿ ಅಸುರರನ್ನು ಸಂಹಾರಮಾಡಿದ ದೈವನಿಂದು ರಾಜನ ಅರಮನೆಗೆ ಬಂದನು.

ಅರ್ಥ:
ಕಂಜ: ತಾವರೆ; ಸಂಭವ: ಹುಟ್ಟು; ಪಿತ: ತಂದೆ; ಕಂಜಸಂಭವ: ಬ್ರಹ್ಮ; ಬಂದನು: ಆಗಮಿಸು; ನಂಜು: ವಿಷ, ಹಾವು; ಪವಡಿಸು: ಮಲಗು; ಕುಂಜರ: ಆನೆ, ಕರಿ; ಮೊರೆ: ಕೂಗು; ಕೇಳಿ:ಆಲಿಸಿ; ಸಲಹು: ಕಾಪಾಡು; ದೇವ: ಭಗವಂತ; ಅಂಜನಾಸುತ: ಹನುಮಂತ; ಒಡೆಯ: ನಾಯಕ, ಜೀಯ; ಅಂಜಿದ: ಭಯಭೀತರಾದ; ಸುರ: ದೇವತೆ; ಅಭಯ: ರಕ್ಷಣೆ; ಭಂಜನ: ನಾಶಮಾಡು; ಬಲು: ಘನ, ಹೆಚ್ಚು; ನೃಪತಿ: ರಾಜ; ಅರಮನೆ: ರಾಜರ ಆಲಯ;

ಪದವಿಂಗಡಣೆ:
ಕಂಜಸಂಭವ+ ಪಿತನು +ಬಂದನು
ನಂಜಿನಲಿ +ಪವಡಿಸುವ +ಬಂದನು
ಕುಂಜರನ+ ಮೊರೆಗೇಳಿ+ ಸಲಹಿದ +ದೇವನಿದೆ+ ಬಂದ
ಅಂಜನಾಸುತನೊಡೆಯ +ಬಂದನು
ಅಂಜಿದಸುರನಿಗ್+ಅಭಯವಿತ್ತವ
ಭಂಜನೆಗೆ+ ಬಲುದೈವ+ ಬಂದನು +ನೃಪತಿ+ಯರಮನೆಗೆ

ಅಚ್ಚರಿ:
(೧) ಕಂಜ, ಕುಂಜ, ಅಂಜ, ಭಂಜ; ನಂಜಿ, ಅಂಜಿ – ಪ್ರಾಸ ಪದಗಳ ಬಳಕೆ
(೨) ಕೃಷ್ಣನಿಗೆ ಹಲವಾರು ಹೆಸರುಗಳ ಬಳಕೆ – ಕಂಜಸಂಭವಪಿತ, ನಂಜಿನಲಿ ಪವಡಿಸುವ, ಕುಂಜರನ ಸಲಹಿದ, ಅಂಜನಾಸುತನೊಡೆಯ,
(೩) ಬಂದನು/ಬಂದ – ೧.೪ ಸಾಲಿನ ಕೊನೆಯ ಪದ, ೫ ಬಾರಿ ಪ್ರಯೋಗ