ಪದ್ಯ ೨೯: ಭೀಮನು ಆಂಜನೇಯನನ್ನು ಹೇಗೆ ಉಪಚರಿಸಿದನು?

ಹಿರಿಯರೆನಗಿಬ್ಬರು ಯುಧಿಷ್ಠಿರ
ಧರಣಿಪತಿ ನೀನೊಬ್ಬರೈಯ್ಯಂ
ದಿರುಗಳಿಬ್ಬರು ಮಾರುತನು ನೀನೊಬ್ಬನಿಂದೆನಗೆ
ಗುರುಗಳಿಬ್ಬರು ಬಾದರಾಯಣ
ಪರಮಋಷಿ ನೀನೊಬ್ಬನೆಂದುಪ
ಚರಿಸಿದನು ಪವಮಾನನಂದನನಂಜನಾಸುತನ (ಅರಣ್ಯ ಪರ್ವ, ೧೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಮನು ಹನುಮಂತನಿಗೆ, ನನಗಿಬ್ಬರು ಅಣ್ಣಂದಿರು, ಧರ್ಮಜ ಮತ್ತು ನೀನು, ನನಗಿಬ್ಬರು ತಂದೆಯರು, ವಾಯುದೇವ ಮತ್ತು ನೀನು, ನನಗಿಬ್ಬರು ಗುರುಗಳು, ವ್ಯಾಸ ಮಹರ್ಷಿಗಳು ಮತ್ತು ನೀನು ಎಂದು ಉಪಚಾರದ ಮಾತುಗಳನ್ನು ಭೀಮನು ನುಡಿದನು.

ಅರ್ಥ:
ಹಿರಿಯ: ದೊಡ್ಡವ; ಧರಣಿಪತಿ: ರಾಜ; ಅಯ್ಯ: ತಂದೆ; ಮಾರುತ: ವಾಯು; ಗುರು: ಆಚಾರ್ಯ; ಬಾದರಾಯಣ: ವ್ಯಾಸ; ಪರಮ: ಶ್ರೇಷ್ಠ; ಋಷಿ: ಮುನಿ; ಉಪಚಾರ: ಸತ್ಕಾರ; ಪವಮಾನ: ವಾಯು; ನಂದನ: ಮಗ; ಅಂಜನಾಸುತ: ಆಂಜನೇಯ;

ಪದವಿಂಗಡಣೆ:
ಹಿರಿಯರ್+ಎನಗಿಬ್ಬರು +ಯುಧಿಷ್ಠಿರ
ಧರಣಿಪತಿ +ನೀನೊಬ್ಬರ್+ಅಯ್ಯಂ
ದಿರುಗಳ್+ಇಬ್ಬರು +ಮಾರುತನು +ನೀನೊಬ್ಬನ್+ಇಂದೆನಗೆ
ಗುರುಗಳಿಬ್ಬರು +ಬಾದರಾಯಣ
ಪರಮಋಷಿ +ನೀನೊಬ್ಬನೆಂದ್+ಉಪ
ಚರಿಸಿದನು +ಪವಮಾನನಂದನನ್+ಅಂಜನಾಸುತನ

ಅಚ್ಚರಿ:
(೧) ಭೀಮ ಮತ್ತು ಆಂಜನೇಯರನ್ನು ಒಟ್ಟಿಗೆ ಕರೆದ ಪರಿ – ಪವಮಾನನಂದನನಂಜನಾಸುತನ

ಪದ್ಯ ೭: ಭೀಮನು ತನ್ನ ಪ್ರಯಾಣದಲ್ಲಿ ಯಾರನ್ನು ಭೇಟಿಯಾದನು?

ಏನಿದದ್ಭುತ ರಭಸವಿದು ಪವ
ಮಾನಜನ ನಿಷ್ಠುರದ ಸಿಂಹ
ಧ್ವಾನವಹುದೆನುತಂಜನಾಸುತ ಕೇಳಿ ಕಣ್ದೆರೆದು
ಧ್ಯಾನಿಸುತ್ತಿರೆ ಬಂದು ಪವನನ
ಸೂನು ಕಂಡಡಿಗೆರಗಲಂದಾ
ವಾನರನು ತೆಗೆದಪ್ಪಿ ಮುಂಡಾದಿದನು ಪ್ರೇಮದಲಿ (ಸಭಾ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ಭೀಮನು ಹಿಮಾಲಯಕ್ಕೆ ಪ್ರಯಾಣ ಬರುತ್ತಿರಲು, ದಾರಿಯಲ್ಲಿ ಹಿಮಾಲಯದ ತಪ್ಪಲಲ್ಲಿದ್ದ ಹನುಮಂತನು ಭೀಮನ ಗರ್ಜನೆಯನ್ನು ಕೇಳೆ ಕಣ್ತೆರೆದು, ಇದು ಭೀಮನದೇ ಗರ್ಜನೆಯಿರಬೇಕೆಂದು ಚಿಂತಿಸುವಷ್ಟರಲ್ಲಿ ಭೀಮನು ಬಂದು ನಮಸ್ಕರಿಸಲು, ಹನುಮಂತನು ಪ್ರೀತಿಯಿಂದ ಆತನನ್ನು ಆಲಂಗಿಸಿಕೊಂಡು ತಲೆಯನ್ನು ಸವರಿದನು.

ಅರ್ಥ:
ಅದ್ಭುತ: ಆಶ್ಚರ್ಯ; ಪವಮಾನಜ: ಪವನಸುತ; ನಿಷ್ಠುರ: ಕಠಿಣವಾದುದು, ಒರಟಾದುದು; ಸಿಂಹ: ಕೇಸರಿ; ಧ್ವಾನ: ಧ್ವನಿ, ಶಬ್ದ; ಅಂಜನಾಸುತ: ಹನುಮಂತ; ಸುತ: ಪುತ್ರ; ಕೇಳಿ: ಆಲಿಸು; ಕಣ್: ನಯನ; ತೆರೆದು: ಬಿಚ್ಚು; ಧ್ಯಾನ: ತಪಸ್ಸು; ಪವನ: ವಾಯು; ಸೂನು: ಪುತ್ರ; ಕಂಡು: ನೋಡಿ; ಅಡಿಗೆ: ಪಾದಕ್ಕೆ; ಎರಗಲು: ನಮಸ್ಕರಿಸಲು; ವಾನರ: ಹನುಮ, ಕಪಿ; ಅಪ್ಪಿ: ಆಲಂಗಿಸು; ಮುಂಡಾಡು: ಮುದ್ದಾಡು; ಪ್ರೇಮ: ಪ್ರೀತಿ, ಒಲವು;

ಪದವಿಂಗಡಣೆ:
ಏನಿದ್+ಅದ್ಭುತ+ ರಭಸವಿದು+ ಪವ
ಮಾನಜನ +ನಿಷ್ಠುರದ+ ಸಿಂಹ
ಧ್ವಾನವಹುದ್+ಎನುತ್+ಅಂಜನಾಸುತ+ ಕೇಳಿ +ಕಣ್ದೆರೆದು
ಧ್ಯಾನಿಸುತ್ತಿರೆ+ ಬಂದು +ಪವನನ
ಸೂನು +ಕಂಡ್+ಅಡಿಗ್+ಎರಗಲ್+ಅಂದಾ
ವಾನರನು +ತೆಗೆದಪ್ಪಿ+ ಮುಂಡಾದಿದನು+ ಪ್ರೇಮದಲಿ

ಅಚ್ಚರಿ:
(೧) ಪವಮಾನಜ, ಪವನನಸೂನು -ಭೀಮನನ್ನು ಕರೆದಿರುವ ಬಗೆ
(೨) ಅಂಜನಾಸುತ – ಹನುಮಂತನನ್ನು ಕರೆದಿರುವ ಬಗೆ