ಪದ್ಯ ೩೭: ಕೃಷ್ಣನು ಯಾವ ಉಪಾಯವನ್ನು ಹೇಳಿದನು?

ವಾಯಕಂಜದಿರಂಜದಿರಿ ಫಡ
ಬಾಯ ಬಿಟ್ಟರೆ ಹೋಹುದೇ ನಿ
ಮ್ಮಾಯುಷಕೆ ಹೊಣೆ ತಾನು ಹೇಳಿತ ಮಾಡಿ ಬೇಗದಲಿ
ಆಯುಧಂಗಳ ಬಿಸುಟು ಕರಿ ರಥ
ಜಾಯಿಲಂಗಳನಿಳಿದು ಬದುಕುವು
ಪಾಯವೆಂದಸುರಾರಿ ಸಾರಿದನಂದು ಕೈ ನೆಗಹಿ (ದ್ರೋಣ ಪರ್ವ, ೧೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಕೈಯೆತ್ತಿ, ಈ ಉರಿ ಹೊಗೆಗಳಿಗೆ ಮೋಸ ಹೋಗಬೇಡಿರಿ, ಬಾಯಿಬಿಟ್ಟು ಹಲುಬಿದರೆ ಇದು ಹೋಗುವುದಿಲ್ಲ. ನಿಮ್ಮ ಆಯುಷ್ಯಕ್ಕೆ ನಾನು ಜವಾಬ್ದಾರಿ ಹೊತ್ತಿದ್ದೇನೆ. ಹೇಳುವುದನ್ನು ಕೂಡಲೇ ಮಾಡಿರಿ, ಆಯುಧಗಳನ್ನು ಬಿಸುಡಿರಿ. ಆನೆ, ಕುದುರೆ ರಥಗಳಿಂದ ಇಳಿದುಬಿಡಿ. ಬದುಕಲು ಇರುವುದಿದೊಂದೇ ಉಪಾಯ ಎಂದು ಘೋಷಿಸಿದನು.

ಅರ್ಥ:
ವಾಯ: ಮೋಸ, ಕಪಟ, ಕಾರಣ; ಅಂಜು: ಹೆದರು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಬಿಡು: ಅಗಲಿಸು; ಹೋಹು: ತೆರಳು; ಆಯುಷ: ಜೀವಿತಾವಧಿ; ಹೊಣೆ: ಜವಾಬ್ದಾರಿ; ಹೇಳು: ತಿಳಿಸು; ಬೇಗ: ಶೀಘ್ರ; ಆಯುಧ: ಶಸ್ತ್ರ; ಬಿಸುಟು: ಹೊರಹಾಕು; ಕರಿ: ಆನೆ; ರಥ: ಬಂಡಿ; ಇಳಿ: ಕೆಳಕ್ಕೆ ನಡೆ; ಬದುಕು: ಜೀವಿಸು; ಉಪಾಯ: ಯುಕ್ತಿ, ಹಂಚಿಕೆ; ಅಸುರಾರಿ: ಕೃಷ್ಣ; ಸಾರು: ತಿಳಿಸು; ಕೈ: ಹಸ್ತ; ನೆಗಹು: ಮೇಲೆತ್ತು;

ಪದವಿಂಗಡಣೆ:
ವಾಯಕ್+ಅಂಜದಿರ್+ಅಂಜದಿರಿ+ ಫಡ
ಬಾಯ +ಬಿಟ್ಟರೆ +ಹೋಹುದೇ +ನಿಮ್ಮ್
ಆಯುಷಕೆ+ ಹೊಣೆ+ ತಾನು +ಹೇಳಿತ +ಮಾಡಿ +ಬೇಗದಲಿ
ಆಯುಧಂಗಳ +ಬಿಸುಟು +ಕರಿ+ ರಥ
ಜಾಯಿಲಂಗಳನ್+ಇಳಿದು +ಬದುಕು
ಉಪಾಯವೆಂದ್+ಅಸುರಾರಿ +ಸಾರಿದನ್+ಅಂದು +ಕೈ +ನೆಗಹಿ

ಅಚ್ಚರಿ:
(೧) ಕೃಷ್ಣನ ಅಭಯ ವಾಣಿ – ನಿಮ್ಮಾಯುಷಕೆ ಹೊಣೆ ತಾನು
(೨) ವಾಯ, ಬಾಯ, ಉಪಾಯ – ಪ್ರಾಸ ಪದಗಳು

ಪದ್ಯ ೧೨೫: ಕೃಷ್ಣನು ಜನರಿಗೆ ಹೇಗೆ ಅಭಯವನ್ನು ನೀಡಿದನು?

ಅಂಜದಿರಿ ಪುರದವರು ವನಿತೆಯ
ರಂಜದಿರಿ ಮಾಗಧನ ಪರಿಜನ
ವಂಜದಿರಿ ಮಂತ್ರಿ ಪ್ರಧಾನ ಪಸಾಯ್ತರಾದವರು
ಅಂಜದಿರಿ ಕರೆಯಿವನ ಮಗನನು
ಭಂಜಿಸುವುದಿಲ್ಲಕಟ ಭೀಮ ಧ
ನಂಜಯರು ಕೊಟ್ಟಭಯವೆಂದನು ನಗುತ ಮುರವೈರಿ (ಸಭಾ ಪರ್ವ, ೨ ಸಂಧಿ, ೧೨೫ ಪದ್ಯ)

ತಾತ್ಪರ್ಯ:
ಜರಾಸಂಧನ ಮರಣದ ನಂತರ ಭಯಪಟ್ಟು ಎಲ್ಲರೂ ಓಡಲಾರಂಭಿಸಿದನ್ನು ಕಂಡ ಶ್ರೀಕೃಷ್ಣನು, ಅವರಿಗೆ “ಪುರಜನರು, ರಾಣಿಯರು, ಮಂತ್ರಿಗಳು, ಪ್ರಧಾನಿ, ಪರಿಜನರು, ವಂದಿಮಾಗಧರು, ಯಾರೂ ಹೆದರಬೇಡಿರಿ, ಜರಾಸಂಧನ ಮಗನನ್ನು ಇಲ್ಲಿಗೆ ಕರೆತನ್ನಿ, ಅವನಿಗೆ ಏನನ್ನೂ ಮಾಡುವುದಿಲ್ಲ, ಇದು ಭೀಮಾರ್ಜುನರು ಕೊಟ್ಟ ಅಭಯ” ಎಂದು ಕೃಷ್ಣನು ಅಭಯಪ್ರಧಾನ ಮಾಡಿದನು.

ಅರ್ಥ:
ಅಂಜು: ಹೆದರು; ಪುರ: ಊರು; ಪುರದವರು: ಪ್ರಜೆಗಳು; ವನಿತೆ: ಹೆಂಗಸರು; ಪರಿಜನ: ಪರಿವಾರದವರು; ಮಂತ್ರಿ: ಸಚಿವ; ಪ್ರಧಾನ: ಮುಖ್ಯ; ಪಸಾಯ್ತ: ಸಾಮಂತರಾಜ; ಕರೆ: ಬರೆಮಾಡು; ಮಗ: ಸುತ; ಭಂಜಿಸು: ಸಂಹರಿಸು; ಅಕಟ: ಆಶ್ಚರ್ಯ; ಧನಂಜಯ: ಅರ್ಜುನ; ಅಭಯ: ಧೈರ್ಯ; ಮುರವೈರಿ: ಕೃಷ್ಣ;

ಪದವಿಂಗಡಣೆ:
ಅಂಜದಿರಿ+ ಪುರದವರು+ ವನಿತೆಯರ್
ಅಂಜದಿರಿ+ ಮಾಗಧನ+ ಪರಿಜನವ್
ಅಂಜದಿರಿ +ಮಂತ್ರಿ +ಪ್ರಧಾನ +ಪಸಾಯ್ತರಾದವರು
ಅಂಜದಿರಿ +ಕರೆಯಿವನ+ ಮಗನನು
ಭಂಜಿಸುವುದಿಲ್ಲ್+ಅಕಟ +ಭೀಮ +ಧ
ನಂಜಯರು +ಕೊಟ್ಟ್+ಅಭಯವೆಂದನು +ನಗುತ +ಮುರವೈರಿ

ಅಚ್ಚರಿ:
(೧) ಜರಾಸಂಧನು ಸೋತರು, ಅವನ ಮಗನನ್ನು ಪಟ್ಟಕ್ಕೆ ತರುವುದು – ಅಂದಿನ ಯುದ್ಧ ನೀತಿಯ ಪರಿಚಯ
(೨) ಅಂಜದಿರಿ – ೧-೪ ಸಾಲಿನ ಮೊದಲ ಪದ