ಪದ್ಯ ೩೭: ಅರ್ಜುನನು ರಾಕ್ಷಸರ ಮೇಲೆ ಹೇಗೆ ದಾಳಿ ಮಾಡಿದನು?

ಕರೆದರವದಿರು ಕಲ್ಪಮೇಘದ
ಬಿರುವಳೆಯವೊಲು ಸರಳನನಿತುವ
ತರಿದು ತೆತ್ತಿಸಿದೆನು ತದಂಗೋಪಾಂಗದಲಿ ಸರಳ
ಅರಿಯರೆನ್ನನು ಶಕ್ರನೆಂದೇ
ತರುಬಿ ದಿಙ್ಮಂಡಲವ ಮುಸುಕಿದ
ರಿರಿತಕಂಜದ ದಿಟ್ಟನಾವನು ಸುರರ ಥಟ್ಟಿನಲಿ (ಅರಣ್ಯ ಪರ್ವ, ೧೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕಲ್ಪಾಂತಕಾಲದ ಮೇಘಗಲು ಸುರಿಸುವ ಬಿರುಮಳೆಯಂತೆ ಸುರಿಯುತ್ತಿದ್ದ ಅಸುರರ ಬಾಣಗಳನ್ನು ಕತ್ತರಿಸಿದೆನು. ಅವರೆಲ್ಲರ ಮೈಯಲ್ಲೂ ಬಾಣಗಳು ನಡುವಂತೆ ಮಾಡಿದೆನು. ಅವರು ನನ್ನನ್ನು ಇಂದ್ರನೆಂದೇ ತಿಳಿದು ನನ್ನನ್ನು ನಿಲ್ಲಿಸಿ ದಿಕ್ಕುಗಳೆಲ್ಲವನ್ನೂ ಬಾಣಗಳಿಂದ ತುಂಬಿದರು. ಅವರ ಏಟಿಗೆ ಹೆದರದಿರುವ ದೇವತೆಗಳೇ ಇಲ್ಲ.

ಅರ್ಥ:
ಕರೆ: ಬರೆಮಾಡು; ಅವದಿರು: ಅವರು; ಕಲ್ಪ: ಬ್ರಹ್ಮನ ಒಂದು ದಿವಸ, ಪ್ರಳಯ; ಮೇಘ: ಮೋಡ; ಬಿರುವಳೆ: ಜೋರಾದ ಮಳೆ; ಸರಳ: ಬಾಣ; ಅನಿತು: ಅಷ್ಟು; ತರಿ: ಕಡಿ, ಕತ್ತರಿಸು; ತೆತ್ತಿಸು: ಜೋಡಿಸು, ಕೂಡಿಸು; ಅಂಗೋಪಾಂಗ: ದೇಹದ ಭಾಗ; ಸರಳ: ಬಾಣ; ಅರಿ: ತಿಳಿ; ಶಕ್ರ: ಇಂದ್ರ; ತರುಬು: ತಡೆ, ನಿಲ್ಲಿಸು, ದೂಡು; ದಿಙ್ಮಂಡಲ: ಎಲ್ಲಾ ದಿಕ್ಕು; ಮುಸುಕು: ಆವರಿಸು; ಇರಿ: ತಿವಿ, ಚುಚ್ಚು; ಅಂಜು: ಹೆದರು; ದಿಟ್ಟ: ಧೀರ; ಸುರ: ದೇವತೆ; ಥಟ್ಟು: ಪಕ್ಕ, ಕಡೆ, ಗುಂಪು;

ಪದವಿಂಗಡಣೆ:
ಕರೆದರ್+ಅವದಿರು +ಕಲ್ಪ+ಮೇಘದ
ಬಿರುವಳೆಯವೊಲು +ಸರಳನ್+ಅನಿತುವ
ತರಿದು+ ತೆತ್ತಿಸಿದೆನು +ತದ್+ಅಂಗೋಪಾಂಗದಲಿ+ ಸರಳ
ಅರಿಯರ್+ಎನ್ನನು +ಶಕ್ರನೆಂದೇ
ತರುಬಿ+ ದಿಙ್ಮಂಡಲವ+ ಮುಸುಕಿದರ್
ಇರಿತಕ್+ಅಂಜದ +ದಿಟ್ಟನಾವನು+ ಸುರರ+ ಥಟ್ಟಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಲ್ಪಮೇಘದ ಬಿರುವಳೆಯವೊಲು
(೨) ಸರಳ ಪದದ ಬಳಕೆ – ಸರಳನನಿತುವ ತರಿದು ತೆತ್ತಿಸಿದೆನು ತದಂಗೋಪಾಂಗದಲಿ ಸರಳ

ಪದ್ಯ ೧೫: ಊರ್ವಶಿಯು ಯಾರನ್ನು ನೋಡಿದಳು?

ಹೊಳೆವ ಮಣಿದೀಪಾಂಶುಗಳ ಮುಮ್
ಕ್ಕುಳಿಸಿದವು ಕಡೆಗಂಗಳಿಂದೂ
ಪಳದ ಭಿತ್ತಿಯ ಬೆಳಗನಣೆದುದು ಬಹಳ ತನುಕಾಂತಿ
ಕೆಳದಿಯರ ಕಂಠದಲಿ ಕೈಗಳ
ನಿಳುಹಿನಿಂದಳು ತರುಣಿ ನೃಪಕುಲ
ತಿಲಕನಂಗೋಪಾಂಗದಲಿ ಹರಹಿದಳು ಕಣ್ಮನವ (ಅರಣ್ಯ ಪರ್ವ, ೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಊರ್ವಶಿಯ ಕಡೆಗಣ್ಣ ನೋಟಗಳು ಮಣಿದೀಪಗಳ ಬೆಳಗನ್ನು ತಿರಸ್ಕರಿಸಿದವು. ಅವಳ ದೇಹಕಾಂತಿಯು ಚಂದ್ರಕಾಂತ ಶಿಲೆಯ ಭಿತ್ತಿಯನ್ನು ಅಣಕಿಸಿತು. ತನ್ನ ಕೆಳದಿಯರ ಹೆಗಲ ಮೇಲೆ ಕೈಗಳನ್ನಿಟ್ಟು ಅರ್ಜುನನ ಅಂಗೋಪಾಂಗಗಳ ಮೇಲೆ ಮನಸಿಟ್ಟು ಕಣ್ಣುಗಳಿಂದ ನೋಡಿದಳು.

ಅರ್ಥ:
ಹೊಳೆ: ಕಾಂತಿ, ಪ್ರಕಾಶ; ಮಣಿ: ರತ್ನ; ದೀಪ: ಹಣತೆ; ಅಂಶು:ಕಿರಣ; ಮುಕ್ಕುಳಿಸು: ತಿರಸ್ಕರಿಸು; ಕಡೆ: ಕೊನೆ; ಕಣ್ಣು: ನಯನ; ಇಂದು: ಭಿತ್ತಿ: ಒಡೆಯುವುದು, ಸೀಳುವುದು; ಬೆಳಗು: ಹೊಳಪು, ಕಾಂತಿ; ಅಣೆ:ಹೊಡೆ, ತಿವಿ; ಬಹಳ: ತುಂಬ; ತನು: ದೇಹ; ಕಾಂತಿ: ಬೆಳಕು, ಹೊಳಪು; ಕೆಳದಿ: ಗೆಳತಿ, ಸ್ನೇಹಿತೆ; ಕಂಠ: ಕೊರಳು; ಕೈ: ಹಸ್ತ; ಇಳುಹು: ಇಡು; ತರುಣಿ: ಸುಂದರಿ, ಹೆಣ್ಣು; ನೃಪ: ರಾಜ; ಕುಲ: ವಂಶ; ತಿಲಕ: ಶ್ರೇಷ್ಠ; ಅಂಗೋಪಾಂಗ: ಅಂಗಗಳು; ಹರಹು: ಹರಡು; ಕಣ್ಮನ: ದೃಷ್ಟಿ ಮತ್ತು ಮನಸ್ಸು; ಅಣೆ: ಹೊಡೆ, ತಿವಿ;

ಪದವಿಂಗಡಣೆ:
ಹೊಳೆವ +ಮಣಿದೀಪಾಂಶುಗಳ+ ಮು
ಕ್ಕುಳಿಸಿದವು +ಕಡೆ+ಕಂಗಳ್+ಇಂದೂ
ಪಳದ +ಭಿತ್ತಿಯ +ಬೆಳಗನ್+ಅಣೆದುದು +ಬಹಳ+ ತನುಕಾಂತಿ
ಕೆಳದಿಯರ +ಕಂಠದಲಿ +ಕೈಗಳನ್
ಇಳುಹಿ+ನಿಂದಳು +ತರುಣಿ +ನೃಪಕುಲ
ತಿಲಕನ್+ಅಂಗೋಪಾಂಗದಲಿ+ ಹರಹಿದಳು +ಕಣ್ಮನವ

ಅಚ್ಚರಿ:
(೧) ಅರ್ಜುನನನ್ನು ನೋಡುವ ಪರಿ – ಕೆಳದಿಯರ ಕಂಠದಲಿ ಕೈಗಳನಿಳುಹಿನಿಂದಳು ತರುಣಿ ನೃಪಕುಲ ತಿಲಕನಂಗೋಪಾಂಗದಲಿ ಹರಹಿದಳು ಕಣ್ಮನವ
(೨) ಅರ್ಜುನನನ್ನು ಕರೆದ ಪರಿ – ನೃಪಕುಲತಿಲಕ
(೩) ಕ ಕಾರದ ತ್ರಿವಳಿ ಪದ – ಕೆಳದಿಯರ ಕಂಠದಲಿ ಕೈಗಳನಿಳುಹಿನಿಂದಳು

ಪದ್ಯ ೧೫: ವ್ಯಾಸರು ಯಾವ ಮಂತ್ರ ಬೀಜವನ್ನು ಯುಧಿಷ್ಠಿರನಿಗೆ ಬೋಧಿಸಿದರು?

ಕರೆಸಿ ದ್ರುಪದಾತ್ಮಜೆಯ ಕಂಬನಿ
ಯೊರತೆಯಾರಲು ನುಡಿದನಾಕೆಯ
ಕರುಣದಲಿ ಕವಿಗೊಂಡ ಕಳವಳವನು ವಿಭಾಡಿಸಿದ
ಧರಣಿಪತಿಗೇಕಾಂತ ಭವನದೊ
ಳೊರೆದನೀಶ್ವರ ಬೀಜ ಮಂತ್ರಾ
ಕ್ಷರವನಂಗೋಪಾಂಗ ಮುದ್ರಾಶಕ್ತಿಗಳು ಸಹಿತ (ಅರಣ್ಯ ಪರ್ವ, ೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ವ್ಯಾಸರು ದ್ರೌಪದಿಯನ್ನು ಕರೆಸಿ ಆಕೆಯ ಮನಸ್ಸನ್ನು ಕವಿದಿದ್ದ ಗೊಂದಲವನ್ನು ಹೋಗಲಾಡಿಸಿದರು. ಅವಳ ಕಣ್ಣಿರಿನ ಚಿಲುಮೆಯನ್ನು ಶಾಂತಗೊಳಿಸಿದರು. ಯುಧಿಷ್ಠಿರನನ್ನು ಏಕಾಂತದಲ್ಲಿ ಅವನ ಪರ್ಣಕುಟೀರಕ್ಕೆ ಕರೆದೊಯ್ದು ಶಿವನಮಂತ್ರದ ಬೀಜಾಕ್ಷರವನ್ನು, ಮುದ್ರೆ, ಅಂಗನ್ಯಾಸ, ಕರನ್ಯಾಸಗಳ ಸಹಿತವಾಗಿ ಬೋಧಿಸಿದರು.

ಅರ್ಥ:
ಕರೆ: ಬರೆಮಾಡು; ಆತ್ಮಜೆ: ಮಗಳು; ಕಂಬನಿ: ಕಣ್ಣಿರು; ಒರತೆ:ಚಿಲುಮೆ; ಆರಲು: ಶಾಂತಗೊಳಿಸುವುದು, ಶಮಿಸು; ನುಡಿ: ಮಾತಾಡು; ಕರುಣ: ದಯೆ; ಕವಿ: ಆವರಿಸು; ಕಳವಳ: ಗೊಂದಲ; ವಿಭಾಡಿಸು: ಹೋಗಲಾಡಿಸು; ಧರಣಿಪತಿ: ರಾಜ; ಏಕಾಂತ: ಒಂಟಿಯಾದ; ಭವನ: ಆಲಯ; ಈಶ್ವರ: ಶಿವ; ಬೀಜ: ಕಾರಣ, ಹೇತು; ಮಂತ್ರಾಕ್ಷರ: ಇಷ್ಟ ದೇವತೆಯನ್ನು ವಶೀಕರಿಸಿಕೊಳ್ಳುವುದಕ್ಕಾಗಿ ಹೇಳುವ ಆಯಾ ದೇವತೆಯ ಸಾಮರ್ಥ್ಯವುಳ್ಳ ವಾಕ್ಯ ಸಮೂಹ; ಅಂಗ: ಅವಯವ; ಮುದ್ರೆ: ಚಿಹ್ನೆ; ಸಹಿತ: ಜೊತೆ;

ಪದವಿಂಗಡಣೆ:
ಕರೆಸಿ +ದ್ರುಪದ್+ಆತ್ಮಜೆಯ +ಕಂಬನಿ
ಒರತೆ+ಆರಲು+ ನುಡಿದನ್+ಆಕೆಯ
ಕರುಣದಲಿ+ ಕವಿಗೊಂಡ +ಕಳವಳವನು +ವಿಭಾಡಿಸಿದ
ಧರಣಿಪತಿಗ್+ಏಕಾಂತ +ಭವನದೊಳ್
ಒರೆದನ್+ಈಶ್ವರ +ಬೀಜ +ಮಂತ್ರಾ
ಕ್ಷರವನ್+ಅಂಗೋಪಾಂಗ +ಮುದ್ರಾ+ಶಕ್ತಿಗಳು +ಸಹಿತ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕರುಣದಲಿ ಕವಿಗೊಂಡ ಕಳವಳವನು
(೨) ದ್ರೌಪದಿಯನ್ನು ದ್ರುಪದಾತ್ಮಜೆ ಎಂದು ಕರೆದಿರುವುದು

ಪದ್ಯ ೧೦: ವೃಷಸೇನನ ಬಾಣಗಳು ಹೇಗೆ ಮುತ್ತಿದವು?

ಫಲಿತ ಶಾಳೀವನದ ಮುತ್ತಿದ
ಗಿಳಿಗಳೋ ತಾವರೆಯ ತೆಕ್ಕೆಯೊ
ಳಿಳಿದ ಮರಿದುಂಬಿಗಳೊ ವೃಷಸೇನನ ಶರಾವಳಿಯೊ
ಹಿಳುಕು ಹೇರಿದವಾತನಶ್ವಾ
ವಳಿಯಲಾತನ ಸೂತನೊಡಲಲಿ
ಹಲವು ಮಾತೇನಾತನಂಗೋಪಾಂಗ ನಿಕರದಲಿ (ಕರ್ಣ ಪರ್ವ, ೨೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ತೆನೆಬಿಟ್ಟ ಬತ್ತದ ಗದ್ದೆಯನ್ನು ಮುತ್ತುವ ಗಿಳಗಳ ತೆರದಿ, ತಾವರೆಯ ವನದಲ್ಲಿ ಮುತ್ತಿದ ಮರಿದುಂಬಿಗಳ ತೆರದಿ ವೃಷಸೇನನ ಬಾಣಗಳು ಭೀಮನ ರಥದ ಕುದುರೆಗಳು, ಅವನ ಸಾರಥಿ, ಭೀಮನ ದೇಹ ಇವುಗಳ ಮೇಲೆ ಮುತ್ತಿದವು.

ಅರ್ಥ:
ಫಲಿತ: ಹಣ್ಣಾದ; ಶಾಳಿ: ಬತ್ತ; ವನ: ಕಾಡು; ಮುತ್ತು: ಆವರಿಸು; ಗಿಳಿ: ಶುಕ; ತಾವರೆ: ಕಮಲ; ತೆಕ್ಕೆ: ಗುಂಪು; ಇಳಿ: ಕೆಳಕ್ಕೆ ಬರು; ಮರಿ: ಚಿಕ್ಕ; ದುಂಬಿ: ಜೇನುನೊಣ; ಶರಾವಳಿ: ಬಾಣದ ಗುಂಪು; ಹಿಳುಕು: ಬಾಣದ ಗರಿ; ಹೇರು: ಬಡಿ, ಹೊಡೆ; ಅಶ್ವ:ಕುದುರೆ; ಆವಳಿ: ಗುಂಪು; ಸೂತ: ರಥವನ್ನು ಓಡಿಸುವವ; ಒಡಲು:ಶರೀರ; ಹಲವು: ಬಹಳ; ಅಂಗೋಪಾಂಗ: ಶರೀರದ ಅತ್ಯಂತವಾದ ನಾಡಿ; ನಿಕರ: ಗುಂಪು;

ಪದವಿಂಗಡಣೆ:
ಫಲಿತ +ಶಾಳೀವನದ +ಮುತ್ತಿದ
ಗಿಳಿಗಳೋ +ತಾವರೆಯ +ತೆಕ್ಕೆಯೊಳ್
ಇಳಿದ +ಮರಿದುಂಬಿಗಳೊ +ವೃಷಸೇನನ +ಶರಾವಳಿಯೊ
ಹಿಳುಕು +ಹೇರಿದವ್+ಆತನ್+ಅಶ್ವಾ
ವಳಿಯಲ್+ಆತನ+ ಸೂತನ್+ಒಡಲಲಿ
ಹಲವು+ ಮಾತೇನ್+ಆತನ್+ಅಂಗೋಪಾಂಗ +ನಿಕರದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಫಲಿತ ಶಾಳೀವನದ ಮುತ್ತಿದಗಿಳಿಗಳೋ ತಾವರೆಯ ತೆಕ್ಕೆಯೊ
ಳಿಳಿದ ಮರಿದುಂಬಿಗಳೊ ವೃಷಸೇನನ ಶರಾವಳಿಯೊ