ಪದ್ಯ ೨೩: ಪಾಂಡು ಯಾರ ಆಶ್ರಮಕ್ಕೆ ಬಂದನು?

ಅರಸ ಕೇಳ್ ಶತಶೃಂಗ ಶೈಲದ
ವರತಪೋಧನರಾಶ್ರಮಕೆ ನಿ
ಮ್ಮರಸ ಬಂದನು ವಂದಿಸಿದನಾ ಪರಮಮುನಿವರರ
ಹರುಷದಲಿ ಜಾಬಾಲಿ ಗಾರ್ಗ್ಯಾಂ
ಗಿರಸ ಗಾಲವ ಗೌತಮಾದ್ಯರು
ಧರಣಿಪನ ಸಂಭಾವಿಸಿದರರ್ಘ್ಯಾಸನಾದಿಯಲಿ (ಆದಿ ಪರ್ವ, ೪ ಸಂಧಿ, ೨೩ ಪದ್ಯ)

ತಾತ್ಪರ್ಯ:
ಪಾಂಡುವು ಕುಂತಿ ಮಾದ್ರಿಯರೊಂದಿಗೆ ಶತಶೃಂಗಪರ್ವತದ ಋಷಿಗಳಾಶ್ರಮಕ್ಕೆ ಹೋಗಿ ಋಷಿಗಳಿಗೆ ನಮಸ್ಕರಿಸಿದನು. ಅಲ್ಲಿದ್ದ ಜಾಬಾಲಿ, ಗಾರ್ಗ್ಯ, ಅಂಗೀರಸ, ಗಾಲವ, ಗೌತಮ ಮೊದಲಾದ ಋಷಿಗಳು ಹರ್ಷದಿಂದ ಅವನನ್ನು ಸ್ವಾಗತಿಸಿ ಆಸನ, ಅರ್ಘ್ಯ, ಮೊದಲಾದವುಗಳಿಂದ ಉಪಚರಿಸಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಶೈಲ: ಬೆಟ್ಟ; ವರ: ಶ್ರೇಷ್ಠ; ತಪಸ್ಸು: ಧ್ಯಾನ; ತಪೋಧನ: ಶ್ರೇಷ್ಠ ಋಷಿಗಳು; ಆಶ್ರಮ: ಕುಟೀರ; ಬಂದು: ಆಗಮಿಸು; ವಂದಿಸು: ನಮಸ್ಕರಿಸು; ಮುನಿ: ಋಷಿ; ಹರುಷ: ಸಂತಸ; ಧರಣಿಪ: ರಾಜ; ಸಂಭಾವಿಸು: ಗೌರವಿಸು; ಅರ್ಘ್ಯ: ನೀರು; ಆಸನ: ಕುಳಿತುಕೊಳ್ಳುವ ಜಾಗ; ಆದಿ: ಮುಂತಾದ;

ಪದವಿಂಗಡಣೆ:
ಅರಸ +ಕೇಳ್ +ಶತಶೃಂಗ +ಶೈಲದ
ವರತಪೋಧನರ+ ಆಶ್ರಮಕೆ+ ನಿಮ್ಮ್
ಅರಸ +ಬಂದನು +ವಂದಿಸಿದನಾ+ ಪರಮ+ಮುನಿವರರ
ಹರುಷದಲಿ +ಜಾಬಾಲಿ +ಗಾರ್ಗ್ಯ+ಅಂ
ಗಿರಸ +ಗಾಲವ +ಗೌತಮಾದ್ಯರು
ಧರಣಿಪನ+ ಸಂಭಾವಿಸಿದರ್+ಅರ್ಘ್ಯ+ಆಸನಾದಿಯಲಿ

ಅಚ್ಚರಿ:
(೧) ಅರಸ, ಧರಣಿಪ – ಸಮಾನಾರ್ಥಕ ಪದ
(೨) ಮುನಿಗಳ ಹೆಸರು – ಜಾಬಾಲಿ, ಗಾರ್ಗ್ಯ, ಅಂಗಿರಸ, ಗಾಲವ, ಗೌತಮ

ಪದ್ಯ ೨: ಧರ್ಮಜನನ್ನು ನೋಡಲು ಯಾವ ಋಷಿಗಳು ಬಂದರು?

ಚ್ಯವನ ಮುದ್ಗಲ ಕಣ್ವ ಕಠ ಭಾ
ರ್ಗವ ಭರದ್ವಾಜಾಂಗಿರಸ ಗಾ
ಲವ ಪುಲಸ್ತ್ಯ ರುಮಣ್ವ ಗೌತಮ ಯಾಜ್ಞವಲ್ಕ್ಯಮುನಿ
ಧ್ರುವ ವಿಭಾಂಡಕ ಗಾರ್ಗ್ಯ ಘಟಸಂ
ಭವ ಮೃಕಂಡುಸುತಾದಿ ಭೂಮಿ
ಪ್ರವರ ಮುನಿಗಳು ಬಂದು ಕಂಡರು ಧರ್ಮನಂದನನ (ಗದಾ ಪರ್ವ, ೧೩ ಸಂಧಿ, ೨ ಪದ್ಯ)

ತಾತ್ಪರ್ಯ:
ಚ್ಯವನ, ಮುದ್ಗಲ, ಕಣ್ವ, ಕಠ, ಭಾರ್ಗವ, ಭಾರದ್ವಾಜ, ಅಂಗಿರಸ, ಗಾಲವ, ಪುಲಸ್ತ್ಯ, ರುಮಣ್ವ, ಗೌತಮ, ಯಾಜ್ಞವಲ್ಕ್ಯ, ಧ್ರುವ, ವಿಭಾಂಡಕ, ಗಾರ್ಗ್ಯ, ಅಗಸ್ತ್ಯ, ಮಾರ್ಕಂಡೇಯನೇ ಮೊದಲಾದ ಬ್ರಹ್ಮರ್ಷಿಗಳು ಬಂದು ಧರ್ಮಪುತ್ರನನ್ನು ಕಂಡು ಆಶೀರ್ವದಿಸಿದರು.

ಅರ್ಥ:
ಆದಿ: ಮುಂತಾದ; ಭೂಮಿ: ಧರಿತ್ರೀ; ಪ್ರವರ: ಪ್ರಧಾನ ವ್ಯಕ್ತಿ; ಮುನಿ: ಋಷಿ; ಬಂದು: ಆಗಮಿಸು; ಕಂಡು: ನೋಡು; ನಂದನ: ಮಗ; ಸುತ: ಮಗ;

ಪದವಿಂಗಡಣೆ:
ಚ್ಯವನ +ಮುದ್ಗಲ+ ಕಣ್ವ +ಕಠ +ಭಾ
ರ್ಗವ +ಭರದ್ವಾಜ+ಅಂಗಿರಸ +ಗಾ
ಲವ +ಪುಲಸ್ತ್ಯ+ ರುಮಣ್ವ+ ಗೌತಮ +ಯಾಜ್ಞವಲ್ಕ್ಯ+ಮುನಿ
ಧ್ರುವ +ವಿಭಾಂಡಕ +ಗಾರ್ಗ್ಯ +ಘಟಸಂ
ಭವ +ಮೃಕಂಡುಸುತ+ಆದಿ +ಭೂಮಿ
ಪ್ರವರ +ಮುನಿಗಳು +ಬಂದು +ಕಂಡರು +ಧರ್ಮನಂದನನ

ಅಚ್ಚರಿ:
(೧) ೧೭ ಮುನಿಗಳ ಹೆಸರನ್ನು ಹೇಳುವ ಪದ್ಯ

ಪದ್ಯ ೫೩: ಯಾವ ಮುನಿವರ್ಯರು ಯುದ್ಧಭೂಮಿಗೆ ಆಗಮಿಸಿದರು?

ಅತ್ರಿ ಭಾರಧ್ವಾಜ ವಿಶ್ವಾ
ಮಿತ್ರ ಗೌತಮ ಕಣ್ವ ಕಶ್ಯಪ
ಮಿತ್ರಸೂನು ವಸಿಷ್ಠ ಗಾರ್ಗಾಂಗಿರಸ ಭಾರ್ಗವರು
ಅತ್ರಿಸುತ ವರ ವಾಲಖಿಲ್ಯರು
ಚಿತ್ರಚರಿತರು ಬಂದರಲ್ಲಿಗೆ
ಮಿತ್ರಭಾವದಲವರನಭಿವಂದಿಸಿದನಾಚಾರ್ಯ (ದ್ರೋಣ ಪರ್ವ, ೧೮ ಸಂಧಿ, ೫೩ ಪದ್ಯ)

ತಾತ್ಪರ್ಯ:
ಪ್ರಸಿದ್ಧ ಮುನಿವರ್ಯರಾದ ಅತ್ರಿ, ಭಾರಧ್ವಾಜ, ವಿಶ್ವಾಮಿತ್ರ, ಗೌತಮ, ಕಣ್ವ, ಕಶ್ಯಪ, ವಸಿಷ್ಠ, ಗಾರ್ಗ್ಯ, ಅಂಗಿರಸ, ಪರಶುರಾಮ, ದುರ್ವಾಸ, ವಾಲಖಿಲ್ಯರು ದ್ರೋಣನ ಬಳಿಗೆ ಬರಲು, ಅವರನ್ನು ಕಂಡು ಸ್ನೇಹ ಭಾವದಿಂದ ದ್ರೋಣರು ಅವರಿಗೆ ನಮಸ್ಕರಿಸಿದರು.

ಅರ್ಥ:
ಸೂನು: ಮಗ; ಸುತ: ಮಗ; ವರ: ಶ್ರೇಷ್ಠ; ಚರಿತ: ಇತಿಹಾಸ; ಬಂದರು: ಆಗಮಿಸು; ಮಿತ್ರ: ಸ್ನೇಹ; ಭಾವ: ಭಾವನೆ; ಅಭಿವಂದಿಸು: ನಮಸ್ಕರಿಸು; ಆಚಾರ್ಯ: ಗುರು;

ಪದವಿಂಗಡಣೆ:
ಅತ್ರಿ +ಭಾರಧ್ವಾಜ +ವಿಶ್ವಾ
ಮಿತ್ರ +ಗೌತಮ +ಕಣ್ವ +ಕಶ್ಯಪ
ಮಿತ್ರಸೂನು +ವಸಿಷ್ಠ+ ಗಾರ್ಗ್ಯ+ಅಂಗಿರಸ +ಭಾರ್ಗವರು
ಅತ್ರಿಸುತ +ವರ+ ವಾಲಖಿಲ್ಯರು
ಚಿತ್ರ+ಚರಿತರು+ ಬಂದರಲ್ಲಿಗೆ
ಮಿತ್ರಭಾವದಲ್+ಅವರನ್+ಅಭಿವಂದಿಸಿದನ್+ಆಚಾರ್ಯ

ಅಚ್ಚರಿ:
(೧) ಸುತ, ಸೂನು – ಸಮಾನಾರ್ಥಕ ಪದ
(೨) ಕೊನೆಯ ಸಾಲು ಒಂದೇ ಪದವಾಗಿ ರಚಿತವಾದುದು

ಪದ್ಯ ೧೧: ಯಾವ ಮಹರ್ಷಿಗಳು ಕರ್ಣನ ಪರ ನಿಂತರು?

ಭೃಗು ವಸಿಷ್ಠಾಂಗಿರಸ ದಕ್ಷಾ
ದಿಗಳು ಪಾರ್ಥನ ಪಕ್ಷವಾಯ್ತೀ
ಚೆಗೆ ಪುಲಸ್ತ ಮರೀಚಿ ವಿಶ್ವಾಮಿತ್ರ ಗೌತಮರು
ಜಗದ ಜೀವರು ಧಾತುಮೂಲಾ
ದಿಗಳೊಳಿಕ್ಕಟ್ಟಾದುದೀ ಕಾ
ಳೆಗ ಚತುರ್ದಶಭುವನಜನ ಸಂಕ್ಷೋಭವಾಯ್ತೆಂದ (ಕರ್ಣ ಪರ್ವ, ೨೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ಮಹರ್ಷಿಗಳ ಪೈಕಿ ಭೃಗು, ವಸಿಷ್ಠ, ಅಂಗಿರಸ, ದಕ್ಷನೇ ಮೊದಲಾದವರು ಅರ್ಜುನನ ಪಕ್ಷ ಸೇರಿದರು. ಪುಲಸ್ತ, ಮರೀಚಿ, ವಿಶ್ವಾಮಿತ್ರ, ಗೌತಮರು ಕರ್ಣನ ಕಡೆ ಸೇರಿದರು. ಜಗತ್ತಿನ ಜೀವರು, ಧಾತುಮೂಲಗಳು ಎರಡು ಪಕ್ಷವಾಯಿತು. ಕರ್ಣಾರ್ಜುನರ ಕಾಳಗವು ಲೋಕದ ಜನರ ತಳಮಳಕ್ಕೆ ಕಾರಣವಾಯಿತು.

ಅರ್ಥ:
ಆದಿ: ಮುಂತಾದ; ಜಗ: ಜಗತ್ತು, ಪ್ರಪಂಚ; ಜೀವರು: ಜೀವಿಸಿರುವ, ಉಸಿರಾಡುವ; ಧಾತು: ಮೂಲವಸ್ತು; ಮೂಲ: ಕಾರಣ; ಪ್ರಾರಂಭ; ಕಾಳೆಗ: ಯುದ್ಧ; ಚತುರ್ದಶ: ಹದಿನಾಲ್ಕು; ಭುವನ: ಪ್ರಪಂಚ, ಜಗತ್ತು; ಜನ: ಜೀವರು, ಮನುಷ್ಯ; ಸಂಕ್ಷೋಭ: ತಳಮಳ;

ಪದವಿಂಗಡಣೆ:
ಭೃಗು +ವಸಿಷ್ಠ+ಅಂಗಿರಸ+ ದಕ್ಷ
ಆದಿಗಳು +ಪಾರ್ಥನ +ಪಕ್ಷವಾಯ್ತ್
ಈಚೆಗೆ +ಪುಲಸ್ತ +ಮರೀಚಿ+ ವಿಶ್ವಾಮಿತ್ರ+ ಗೌತಮರು
ಜಗದ +ಜೀವರು +ಧಾತುಮೂಲಾ
ದಿಗಳೊಳ್+ಇಕ್ಕಟ್ಟಾದುದ್+ಈ+ ಕಾ
ಳೆಗ +ಚತುರ್ದಶ+ಭುವನಜನ +ಸಂಕ್ಷೋಭವಾಯ್ತೆಂದ

ಅಚ್ಚರಿ:
(೧) ಹದಿನಾಲ್ಕು ಲೋಕದ ಜನರಿಗೆ ಪರಿಣಾಮ ಬೀರಿತು ಎಂದು ಹೇಳಲು – ಚತುರ್ದಶಭುವನಜನ ಸಂಕ್ಷೋಭವಾಯ್ತೆಂದ
(೨) ಮಹರ್ಷಿಗಳ ಹೆಸರು – ಭೃಗು, ವಸಿಷ್ಠ, ಅಂಗಿರಸ, ದಕ್ಷ, ಪುಲಸ್ತ, ಮರೀಚಿ, ವಿಶ್ವಾಮಿತ್ರ, ಗೌತಮ;

ಪದ್ಯ ೧೪: ಕೃಷ್ಣನು ಯಾವ ಮುನಿಗಳನ್ನು ಕಂಡನು?

ಮರಳಿದಳು ತರಳಾಕ್ಷಿ ಮುರರಿಪು
ಬರುತಲಾ ಬಟ್ಟೆಯಲಿ ಕಂಡನು
ವರ ಭರದ್ವಾಜಾಖ್ಯ ಗೌತಮ ಕಣ್ವಮುನಿವರರ
ಉರಗಮಾಲಿ ಮತಂಗ ಗಾರ್ಗ್ಯಾಂ
ಗಿರಸ ನಾರದ ಶುಕ ಪರಾಶರ
ಪರಶುರಾಮ ಶ್ವೇತಕೇತು ಪ್ರಮುಖ ಮುನಿವರರ (ಉದ್ಯೋಗ ಪರ್ವ, ೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಚಂಚಲಕಣ್ಣುಳ್ಳವಳಾದ ದ್ರೌಪದಿಯು ಕೃಷ್ಣನ ಅಭಯವನ್ನು ಪಡೆದು ಮರಳಿದಳು. ಕೃಷ್ಣನು ತನ್ನ ಮಾರ್ಗದಲ್ಲಿ ಬರುತ್ತಾ ಶ್ರೇಷ್ಠರಾದ ಭರದ್ವಾಜ, ಗೌತಮ, ಕಣ್ವ, ಉರಗಮಾಲಿ, ಮತಂಗ, ಗಾರ್ಗ್ಯ, ಅಂಗಿರಸ, ನಾರದ, ಶುಕ, ಪರಾಶರ, ಪರಶುರಾಮ, ಶ್ವೇತಕೇತು ಮುನಿಗಳನ್ನು ಕಂಡನು.

ಅರ್ಥ:
ಮರಳು: ಹಿಂದಿರುಗು; ತರಳ:ಚಂಚಲವಾದ; ಅಕ್ಷಿ: ಕಣ್ಣು; ರಿಪು: ವೈರಿ; ಬಟ್ಟೆ: ಹಾದಿ, ಮಾರ್ಗ; ಬರುತ: ಆಗಮಿಸು; ಕಂಡನು: ನೋಡಿದನು; ಪ್ರಮುಖ: ಮುಖ್ಯ; ಮುನಿ: ಋಷಿ; ವರ: ಶ್ರೇಷ್ಠ; ಆಖ್ಯ: ಹೆಸರು

ಪದವಿಂಗಡಣೆ:
ಮರಳಿದಳು +ತರಳಾಕ್ಷಿ +ಮುರರಿಪು
ಬರುತಲಾ +ಬಟ್ಟೆಯಲಿ+ ಕಂಡನು
ವರ +ಭರದ್ವಾಜ+ಆಖ್ಯ+ ಗೌತಮ+ ಕಣ್ವಮುನಿವರರ
ಉರಗಮಾಲಿ +ಮತಂಗ +ಗಾರ್ಗ್ಯ+ಅಂ
ಗಿರಸ+ ನಾರದ +ಶುಕ +ಪರಾಶರ
ಪರಶುರಾಮ +ಶ್ವೇತಕೇತು+ ಪ್ರಮುಖ +ಮುನಿವರರ

ಅಚ್ಚರಿ:
(೧) ಮುನಿಗಳ ಹೆಸರುಳ್ಳ ಪದ್ಯ: ಭರದ್ವಾಜ, ಗೌತಮ, ಕಣ್ವ, ಉರಗಮಾಲಿ, ಮತಂಗ, ಗಾರ್ಗ್ಯ, ಅಂಗಿರಸ, ನಾರದ, ಶುಕ, ಪರಾಶರ, ಪರಶುರಾಮ, ಶ್ವೇತಕೇತು
(೨) ದ್ರೌಪದಿಯನ್ನು ತರಳಾಕ್ಷಿ ಎಂದು ಕರೆದಿರುವುದು

ಪದ್ಯ ೮: ಯಾವ ಮುನಿಗಳು ಯಾಗಕ್ಕೆ ಆಗಮಿಸಿದರು?

ಜನಪ ಕೇಳೀಚೆಯಲಿ ಬಂದುದು
ಮುನಿಗಳಾಂಗಿರ ಕಣ್ವ ಭೃಗು ಜೈ
ಮಿನಿ ಸುಮಂತ ವಸಿಷ್ಠ ಶೌನಕ ಗಾರ್ಗ್ಯ ಬೃಹದಶ್ವ
ಸನಕ ಶುಕ ಜಾಬಾಲಿ ತಿತ್ತಿರಿ
ವಿನುತ ಮಾರ್ಕಂಡೇಯ ಮುದ್ಗಲ
ತನಯ ರೋಮಶರೈಭ್ಯವತ್ಸನು ಶೈಬ್ಯ ನಾರದರು (ಸಭಾ ಪರ್ವ, ೮ ಸಂಧಿ, ೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ರಾಜಸೂಯ ಯಾಗಕ್ಕೆ ರಾಜರಲ್ಲದೆ ಶ್ರೇಷ್ಠ ಮುನಿವರ್ಗವು ಆಗಮಿಸಿದರು. ಅಂಗಿರಸ, ಕಣ್ವ, ಭೃಗು, ಜೈಮಿನಿ, ಸುಮಂತ, ವಸಿಷ್ಠ, ಶೌನಕ, ಗಾರ್ಗ್ಯ, ಬೃಹದಶ್ವ, ಸನಕ, ಶುಕ, ಜಾಬಾಲಿ, ತಿತ್ತಿರಿ, ಮಾರ್ಕಂಡೇಯ, ಮೌದ್ಗಲ್ಯ, ರೋಮಶ, ರೈಭ್ಯ, ಶ್ರೀವತ್ಸ, ಶೈಬ್ಯ, ನಾರದರೇ ಮೊದಲಾದ ಋಷಿಗ್ತಳು ಆಗಮಿಸಿದರು.

ಅರ್ಥ:
ಜನಪ: ರಾಜ (ಇಲ್ಲಿ ಜನಮೇಜಯ); ಕೇಳು: ಆಲಿಸು; ಈಚೆಯಲಿ: ಇತ್ತಕಡೆ; ಬಂದುದು: ಆಗಮಿಸಿದರು; ಮುನಿ: ಋಷಿ; ತನಯ: ಮಗ;

ಪದವಿಂಗಡಣೆ:
ಜನಪ +ಕೇಳ್+ಈಚೆಯಲಿ +ಬಂದುದು
ಮುನಿಗಳ್+ಆಂಗಿರ+ ಕಣ್ವ+ ಭೃಗು +ಜೈ
ಮಿನಿ +ಸುಮಂತ +ವಸಿಷ್ಠ +ಶೌನಕ+ ಗಾರ್ಗ್ಯ +ಬೃಹದಶ್ವ
ಸನಕ+ ಶುಕ +ಜಾಬಾಲಿ +ತಿತ್ತಿರಿ
ವಿನುತ +ಮಾರ್ಕಂಡೇಯ +ಮುದ್ಗಲ
ತನಯ +ರೋಮಶ+ರೈಭ್ಯ+ವತ್ಸನು+ ಶೈಬ್ಯ+ ನಾರದರು

ಅಚ್ಚರಿ:
(೧) ೨೦ ಋಷಿಗಳ ಹೆಸರನ್ನು ಹೊಂದಿರುವ ಪದ್ಯ